ಅಭಿಮತ: ಹಿಟ್ಲರ್‌ನಂತೆ ಕ್ಸಿಟ್ಲರ್‌ನ್ನು ಸೋಲಿಸಲು ಸಾಧ್ಯವಿಲ್ಲ
Team Udayavani, Oct 14, 2020, 6:06 AM IST
ಸಾಂದರ್ಭಿಕ ಚಿತ್ರ
ಅಮೆರಿಕ, ಭಾರತ, ಜಪಾನ್ ಹಾಗೂ ಆಸ್ಟ್ರೇಲಿಯಾವನ್ನು ಒಳಗೊಂಡ ಕ್ವಾಡ್ ರಾಷ್ಟ್ರಗಳ ವಿದೇಶಾಂಗ ಸಚಿವರು ಅಕ್ಟೋಬರ್ 6ರಂದು ಧೂರ್ತ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಕ್ಕೆ ಪ್ರಬಲ ಸಂದೇಶವನ್ನು ಕಳುಹಿಸಿದ್ದಾರೆ. ಆದರೆ ಇದೇ ವೇಳೆಯಲ್ಲೇ, ಚೀನದ ಸವಾಲನ್ನು ಎದುರಿಸುವ ವಿಚಾರದಲ್ಲಿ ಅಮೆರಿಕ ಹಾಗೂ ಉಳಿದ ಮೂರು ರಾಷ್ಟ್ರಗಳ ನಡುವಿನ ವೈಖರಿ ಭಿನ್ನವಾಗಿದೆ ಎನ್ನುವ ಸಂದೇಶವನ್ನೂ ಕ್ವಾಡ್ ಸಮೂಹ ಪರೋಕ್ಷವಾಗಿ ಸಾರಿದೆ.
ಅಮೆರಿಕದ ಸೆಕ್ರೆಟರಿ ಆಫ್ ಸ್ಟೇಟ್, ಮೈಕ್ ಪೊಂಪಿಯೊ ನೇರವಾಗಿಯೇ ಚೀನ ವಿರುದ್ಧ ಮಾತನಾಡಿದರು. ಆದರೆ, ಉಳಿದ ಮೂರು ರಾಷ್ಟ್ರಗಳು ನೇರವಾಗಿ ಚೀನದ ಹೆಸರು ಎತ್ತುವಲ್ಲಿ ವಿಫಲವಾಗಿದ್ದಷ್ಟೇ ಅಲ್ಲದೇ, ಅಸ್ಪಷ್ಟವಾಗಿ ಮಾತನಾಡಿದವು. ಪೊಂಪಿಯೋ ಅವರು “”ಚೀನದ ದಬ್ಟಾಳಿಕೆ ಮತ್ತು ಭ್ರಷ್ಟಾಚಾರವನ್ನು ದಕ್ಷಿಣ ಚೀನ ಸಮುದ್ರದಲ್ಲಿ ಹಾಗೂ ತೈವಾನ್‌ನ ಕೊಲ್ಲಿಗಳಲ್ಲಿ ನಾವು ನೋಡಿದ್ದೇವೆ. ಚೀನದ ಇಂಥ ಗುಣಗಳಿಂದ ನಮ್ಮ ಜನರನ್ನು ಹಾಗೂ ಸಹಭಾಗಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಸಹಭಾಗಿತ್ವ ಹೆಚ್ಚಿಸಿಕೊಳ್ಳುವ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಾಗಿದೆ” ಎಂದಿದ್ದಾರೆ.
ಇನ್ನೊಂದೆಡೆ ಜಪಾನ್, ಆಸ್ಟ್ರೇಲಿಯಾ ಮತ್ತು ಭಾರತದ ಧ್ವನಿ ಭಿನ್ನವಾಗಿತ್ತು. “”ಸ್ವತಂತ್ರ ಮತ್ತು ಮುಕ್ತ ಇಂಡೋ-ಪೆಸಿಫಿಕ್‌ಗಾಗಿ ಸಮಾನ ದೃಷ್ಟಿಕೋನ ಹೊಂದುವ ಅಗತ್ಯವಿದೆ” ಎಂದು ಜಪಾನ್ ಹೇಳಿದೆ. “”ನಿಯಮ ಆಧರಿತ ಅಂತಾರಾಷ್ಟ್ರೀಯ ಕ್ರಮವನ್ನು ಎತ್ತಿಹಿಡಿಯುವ ಅಗತ್ಯ”ದ ಬಗ್ಗೆ ಭಾರತ ಮಾತನಾಡಿತು. ಆಸ್ಟ್ರೇಲಿಯಾದ ವಿದೇಶಾಂಗ ಸಚಿವರು, ಕ್ವಾಡ್‌ಗೆ ಗುಣಾತ್ಮಕ ಅಜೆಂಡಾ ಇರಬೇಕೆಂದಿದ್ದಾರೆ.
ಕ್ವಾಡ್ ರಾಷ್ಟ್ರಗಳು ಚೀನವನ್ನು ಎದುರಿಸಬೇಕಿರುವುದು ವ್ಯಾಪಾರ ವಲಯದಲ್ಲಿ. ಏಕೆಂದರೆ, ಅನ್ಯ ಆಯ್ಕೆಗಳಿಗೆ ಹೋಲಿಸಿದರೆ ಈ ನಡೆ ಅವುಗಳಿಗೆ ಹೆಚ್ಚು ಹಾನಿಮಾಡದು. ಭಾರತ ಈಗಾಗಲೇ ಚೀನಿ ಆ್ಯಪ್‌ಗ್ಳನ್ನು ನಿಷೇಧಿಸಿದೆ, ಇನ್ನು ಯೋಜನೆಗಳಲ್ಲಿ ಚೀನದ ಹೂಡಿಕೆಯ ಮೇಲೆ ಕೂಲಂಕಷ ಕಣ್ಣಿಟ್ಟಿದೆ. ವಿದೇಶಿ ಕಂಪೆನಿಗಳನ್ನು ಭಾರತಕ್ಕೆ ಕರೆತರಲು ಆತ್ಮ ನಿರ್ಭರ ಭಾರತದ ಮೂಲಕ ಉತ್ಪಾದನೆ ಸಂಬಂಧಿತ ಪ್ರೋತ್ಸಾಹ ಯೋಜನೆಗಳನ್ನು ಜಾರಿ ಮಾಡಿದೆ. ಮೇಕ್ ಇನ್ ಇಂಡಿಯಾ ಮೂಲಕ ಉತ್ಪಾದನೆಗೆ ಪ್ರೋತ್ಸಾಹ ನೀಡಿ, ಎಲೆಕ್ಟ್ರಾನಿಕ್ಸ್ ಹಾಗೂ ಔಷಧೋದ್ಯಮದ ಪ್ರಮುಖ ಶಕ್ತಿಗಳು ಭಾರತದಲ್ಲಿ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಅವಕಾಶ ಕಲ್ಪಿಸಿದೆ.
ಇನ್ನೊಂದೆಡೆ ಜಪಾನ್ ತನ್ನ ಕಂಪೆನಿಗಳು ಚೀನದಿಂದ ನೆಲೆ ಬದಲಿಸಲು ಪ್ರೋತ್ಸಾಹ ನೀಡುತ್ತಿದೆ. ಕೆಲವು ಸಮಯದಿಂದ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನ ಪ್ರಾಯೋಜಿತ ಸೈಬರ್ ದಾಳಿಗಳಿಗೆ ಗುರಿಯಾಗಿರುವ ಆಸ್ಟ್ರೇಲಿಯಾ, ಡ್ರ್ಯಾಗನ್ ರಾಷ್ಟ್ರದ ಅವಲಂಬನೆ ತಗ್ಗಿಸಿಕೊಳ್ಳಲು ಮಾರ್ಗಗಳನ್ನು ಹುಡುಕುತ್ತಿದೆ. ಅಮೆರಿಕದ ವಿಚಾರಕ್ಕೆ ಬರುವುದಾದರೆ, ಅಫ್ಕೋರ್ಸ್ ಟ್ರಂಪ್ ಅವರು ವರ್ಷಗಳಿಂದ ಚೀನದ ವಿರುದ್ಧ ವ್ಯಾಪಾರ ಸಮರವನ್ನು ಹೆಚ್ಚಿಸಿದ್ದಾರೆ. ಇತ್ತೀಚೆಗೆ ಚೀನದ ಕಂಪೆನಿಗಳ ಮೇಲೆ ನಿರ್ಬಂಧಗಳನ್ನು ಹಾಗೂ ದಂಡಗಳನ್ನು ವಿಸ್ತರಿಸಿದ್ದಾರೆ.
ಕ್ವಾಡ್ ರಾಷ್ಟ್ರಗಳು ತಮ್ಮ ನೆರೆ ರಾಷ್ಟ್ರಗಳ ಮೇಲೆ ಚೀನ ಮಾಡುತ್ತಿರುವ ದಬ್ಟಾಳಿಕೆಯನ್ನು ತಡೆಯಲು “ಪ್ರತ್ಯೇಕವಾಗಿ’ ಆರ್ಥಿಕ ಪೆಟ್ಟು ನೀಡುತ್ತಿವೆಯಾದರೂ, ಅವು ಒಂದುಗೂಡಿ ಚೀನದ ವಿರುದ್ಧ ದಿಟ್ಟ ಹೆಜ್ಜೆಯಿಡಲು ಹಿಂಜರಿಯುತ್ತಿವೆ. ಇದಕ್ಕೆ ಕಾರಣವಿದೆ.
ಪೆಸಿಫಿಕ್‌ನ ಶಕ್ತಿಯಾಗಿರುವ ಅಮೆರಿಕಕ್ಕೆ ಏಷ್ಯಾದಲ್ಲಿ ಚೀನದ ಪ್ರಾಬಲ್ಯವನ್ನು ತಡೆಯುವುದು ಅನಿವಾರ್ಯ. ಅಮೆರಿಕದ ಮಿಲಿಟರಿ(ಹೆಚ್ಚಾಗಿ ನೌಕಾಪಡೆ), ಆರ್ಥಿಕತೆ ಮತ್ತು ಸೈಬರ್ ಭದ್ರತೆಗೆ ಚೀನದಿಂದ ಸವಾಲು ಎದುರಾಗುತ್ತಿದೆ. ಆದರೆ ಅಮೆರಿಕಕ್ಕೆ ಚೀನದಿಂದ ನೇರವಾಗಿ ಮಿಲಿಟರಿ ಅಪಾಯವಿಲ್ಲ. ಜಪಾನ್ ಮತ್ತು ಆಸ್ಟ್ರೇಲಿಯಾ ಚೀನದಿಂದ ಆರ್ಥಿಕ ಮತ್ತು ಸೈಬರ್ ಅಪಾಯಗಳನ್ನು ಎದುರಿಸುತ್ತವಾದರೂ, ಆ ರಾಷ್ಟ್ರಗಳೊಂದಿಗೆ ಚೀನ ಮಿಲಿಟರಿ ವಲಯದಲ್ಲಿ ಬಿಕ್ಕಟ್ಟನ್ನು ಸೃಷ್ಟಿಸಿಕೊಳ್ಳುವ ಸಾಧ್ಯತೆ ಕಡಿಮೆಯೇ. ಹೀಗಾಗಿ, ಇವೆರಡೂ ರಾಷ್ಟ್ರಗಳಿಗೆ ಚೀನವನ್ನು ಒಂದು ಹಂತದ ಅನಂತರ ಎದುರಿಸುವ ಆಸಕ್ತಿ ಇಲ್ಲ.
ಆದರೆ, ಭಾರತದ ವಿಚಾರದಲ್ಲಿ ನಾವು ಮೂರೂ ಕಡೆಯಿಂದ ಅಪಾಯ ಎದುರಿಸುತ್ತಿದ್ದೇವೆ. 1) ನೇರ ಮಿಲಿಟರಿ ಬಿಕ್ಕಟ್ಟು 2) ವ್ಯಾಪಾರ ಬಿಕ್ಕಟ್ಟು ಮತ್ತು 3) ಸೈಬರ್ ಯುದ್ಧ. ನೇರ ಮಿಲಿಟರಿ ಬಿಕ್ಕಟ್ಟಿನಲ್ಲಿ ನಾವು ಚೀನವನ್ನು ಹೈರಾಣ ಮಾಡಲು ಸಮರ್ಥರಿದ್ದೇವಾದರೂ, ಈಗ ದೇಶವು ಆರ್ಥಿಕ ತೊಂದರೆ ಎದುರಿಸುತ್ತಿರುವುದರಿಂದ, ಸದ್ಯಕ್ಕೆ ಸಾಮರಿಕ ಬಿಕ್ಕಟ್ಟು ಎದುರುಹಾಕಿಕೊಳ್ಳಲು ನಮಗೆ ಕಾರಣಗಳು ಇಲ್ಲ.
ಎಲ್ಲಕ್ಕಿಂತ ಮುಖ್ಯವಾಗಿ, ಚೀನದಿಂದ ನಿಜಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಆರ್ಥಿಕ ಹಾಗೂ ಮಿಲಿಟರಿ ಬಿಕ್ಕಟ್ಟನ್ನು ಎದುರಿಸುತ್ತಿರುವ ರಾಷ್ಟ್ರವೆಂದರೆ ತೈವಾನ್. ಆದರೆ, ತೈವಾನ್‌ನನ್ನು ಕ್ವಾಡ್ ಸಮೂಹದ “ಸಂಭಾವ್ಯ ಸದಸ್ಯ’ ಎಂದೂ ಪರಿಗಣಿಸಲಾಗುತ್ತಿಲ್ಲ!
ಅಮೆರಿ ಕದ ವಿಚಾರಕ್ಕೆ ಬಂದರೆ, ಡೆಮಾಕ್ರಟಿಕ್ ಪಕ್ಷ ಅಧಿಕಾರಕ್ಕೆ ಬಂದರೆ ಅದು ಚೀನದೊಂದಿಗೆ ಸಂಬಂಧವನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸುವ ಸಾಧ್ಯತೆ ಅಧಿಕವಿದೆ. ಹೀಗೇನಾದರೂ ಆದರೆ, ಕ್ವಾಡ್ ರಾಷ್ಟ್ರಗಳಿಗೆ ಮುಂದೆ ಏನೂ ಮಾಡಲು ಆಗುವುದಿಲ್ಲ. ಪರಿಣಾಮವಾಗಿ ಚೀನದಿಂದ ಮಿಲಿಟರಿ, ಸೈಬರ್ ಅಥವಾ ಆರ್ಥಿಕ ಸವಾಲಿನ ಅಪಾಯ ಅಧಿಕವಾಗುತ್ತದೆ.
ಇಡೀ ಐರೋಪ್ಯ ಹಾಗೂ ಬಹುತೇಕ ಏಷ್ಯನ್ ರಾಷ್ಟ್ರಗಳು (ಪಾಕ್ ಮತ್ತು ಉ. ಕೊರಿಯಾ ಹೊರತುಪಡಿಸಿ) ಚೀನದ ದುರ್ಗುಣದ ಫಲಾನುಭವಿ ಗಳಾದರೂ, ಯಾವ ರಾಷ್ಟ್ರಗಳೂ ಡ್ರ್ಯಾಗನ್ ರಾಷ್ಟ್ರವನ್ನು ಎದುರು ಹಾಕಿಕೊಳ್ಳಲು ಸಿದ್ಧವಿಲ್ಲ. ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕವನ್ನು ಹೊರತುಪಡಿಸಿದರೆ, ಉಳಿದ ದೇಶಗಳೆಲ್ಲ ಚೀನದ ವಿಚಾರದಲ್ಲಿ ಅತ್ಯಂತ ವಿನಮ್ರವಾಗಿಯೇ ವರ್ತಿಸುತ್ತಾ ಬಂದಿವೆ (ಭಾರತವನ್ನೂ ಒಳಗೊಂಡು). ಆದರೆ ಇನ್ನೊಂದೆಡೆ ಚೀನ ಮಾತ್ರ ಈ ಎಲ್ಲ ರಾಷ್ಟ್ರಗಳೊಂದಿಗೆ ಕೆಟ್ಟದಾಗಿಯೇ ವರ್ತಿಸುತ್ತಾ ಬಂದಿದೆ. ಇದು ಮಾನವ ಸಹಜ ವರ್ತನೆಯೇ ಬಿಡಿ. ದೊಡ್ಡ ಧ್ವನಿಯ, ಧೂರ್ತ ಎದುರಾದರೆ, ಆತನನ್ನು ಕೆಲವೇ ಕೆಲವರು ಮಾತ್ರ ಎದುರುಹಾಕಿಕೊಳ್ಳುತ್ತಾರೆ.
ಅಡಾಲ್ಫ್ ಹಿಟ್ಲರ್ ಜರ್ಮನಿಯನ್ನು ಮಿಲಿಟರೀಕರಣಗೊಳಿಸಲು ಆರಂಭಿಸಿದಾಗ ಅಥವಾ ಆಸ್ಟ್ರಿಯಾ, ಜೆಕೋಸ್ಲೋವಾಕಿಯಾದ ಒಂದು ಭಾಗವನ್ನು ಕಬಳಿಸಿ ಹಾಕಿದಾಗ ಜಗತ್ತು ಜರ್ಮನಿಯ ವಿರುದ್ಧ ಎದ್ದು ನಿಲ್ಲಲಿಲ್ಲ. ಕೊನೆಗೆ ಜರ್ಮನಿಯು ಪೊಲ್ಯಾಂಡ್ ಅನ್ನು ಆಕ್ರಮಿಸಿದಾಗ, ಇನ್ನು ಸುಮ್ಮನಿದ್ದರೆ ಆಗುವುದಿಲ್ಲ ಎಂದು ಅರಿತ ಜಗತ್ತು ಅದರ ವಿರುದ್ಧ ಒಂದಾಯಿತು.
ಭಾರತವೂ ಭಿನ್ನವಾಗಿರಲಿಲ್ಲ. ಚೀನ ಟಿಬೆಟ್ ಅನ್ನು ಆಕ್ರಮಿಸಿದಾಗ ಜವಾಹರ್‌ಲಾಲ್ ನೆಹರೂ ಅವರು ತುಟಿಪಿಟಕ್ ಎಂದಿರಲಿಲ್ಲ. ಅವರು ಭದ್ರತಾ ಮಂಡಳಿಯಲ್ಲಿ ಕಮ್ಯುನಿಸ್ಟ್ ಚೀನಕ್ಕೆ ಬಲ ಸಿಗುವಂತೆ ಮಾಡಿದರು. ನರೇಂದ್ರ ಮೋದಿಯವರು, ಡೋಕ್ಲಾಂನಲ್ಲಿ ಚೀನದ ವಿರುದ್ಧ ಬಲಿಷ್ಠ ನಡೆ ಇಟ್ಟರಾದರೂ, ಮುಂದಿನ ದ್ವಿಪಕ್ಷೀಯ ಸಭೆಗಳಲ್ಲಿ ಕ್ಸಿ ಜಿನ್‌ಪಿಂಗ್‌ರೊಂದಿಗೆ ಮೃದುವಾಗಿಯೇ ವ್ಯವಹರಿಸಲು ಪ್ರಯತ್ನಿಸಿದರು. ಆದರೆ ಚೀನ ಮೋದಿಯವರ ಸ್ನೇಹಪರತೆಗೆ ಹಗೆತನದ ಉತ್ತರ ನೀಡಿತು.
ಸಮಸ್ಯೆಯೇನೆಂದರೆ, ಹಿಟ್ಲರ್‌ಗಿಂತಲೂ ಕ್ಸಿ ಜಿನ್‌ಪಿಂಗ್(ಕ್ಸಿಟ್ಲರ್) ಬಲವಾದ ವಿಕೆಟ್‌ನಲ್ಲಿದ್ದಾರೆ! ಹಿಟ್ಲರ್ ಬಳಿ ಅಣ್ವಸ್ತ್ರ ಇರಲಿಲ್ಲ ಅಥವಾ ಎಲ್ಲಾ ಬಲಿಷ್ಠ ರಾಷ್ಟ್ರಗಳನ್ನೂ ಒಮ್ಮೆಗೇ ಎದುರಿಸುವ ಮಿಲಿಟರಿ ಶಕ್ತಿಯೂ ಆತನ ಬಳಿ ಇರಲಿಲ್ಲ. ಆದರೆ, ಚೀನ ಬಳಿ ಅಣ್ವಸ್ತ್ರಗಳಷ್ಟೇ ಅಲ್ಲದೇ, ಸಾಂಪ್ರದಾಯಿಕ ಮಿಲಿಟರಿ ಶಕ್ತಿಯೂ ಇದೆ. ಆದರೆ ಅದು ಸಾಗರ ಪ್ರದೇಶದಲ್ಲಿ ಅಮೆರಿಕಕ್ಕಿಂತಲೂ ದುರ್ಬಲವಾಗಿದೆ ಎನ್ನುವುದು ಸತ್ಯ. ಈ ಕಾರಣಕ್ಕಾಗಿಯೇ ಅಮೆರಿಕ, ಭಾರತ,
ಆಸ್ಟ್ರೇಲಿಯಾ ಹಾಗೂ ಜಪಾನ್ ಒಂದುಗೂಡಿ ಚೀನಕ್ಕೆ ಸಾಗರ ಪ್ರಾಂತ್ಯದಲ್ಲಿ ಪೆಟ್ಟು ನೀಡಬಹುದಾಗಿದೆ. ಆದರೆ, ಅದಕ್ಕಿಂತ ಹೆಚ್ಚೇನೂ ಮಾಡಲಾಗದು. ಏಕೆಂದರೆ, ಚೀನಕ್ಕೆ ಸಾಗರ ಪ್ರಾಂತ್ಯದಲ್ಲಿ ಕಷ್ಟವಾದರೂ ಸಹ, ತನ್ನ ವ್ಯಾಪಾರನ್ನು ನಿರ್ವಿಘ್ನವಾಗಿ ಸಾಗಿಸುವಂಥ ಭೂ ಮತ್ತು ಇತರ ಮಾರ್ಗಗಳು ಬತ್ತಳಿಕೆಯಲ್ಲಿವೆ. ಇದರಲ್ಲಿ ಗ್ವಾದಾರ್ ಬಂದರೂ ಸಹ ಒಂದು.
ಮಿಲಿಟರಿ ಮೂಲಕ ಹಿಟ್ಲರ್‌ನನ್ನು ಎದುರಿಸಿದಂತೆ, ಕ್ಸಿಟ್ಲರ್‌ನನ್ನು ಎದುರಿಸಲು ಸಾಧ್ಯವಾಗದು. ಜಿನ್‌ಪಿಂಗ್ ಆಡಳಿತವನ್ನು ಎದುರಿಸಲು ಇರುವ ಒಂದೇ ಮಾರ್ಗವೆಂದರೆ, ವ್ಯಾಪಾರ ರಂಗದಲ್ಲಿ ಚೀನವನ್ನು ಏಕಾಂಗಿಯಾಗಿಸುವುದು, ಆ ಮೂಲಕ ತಮ್ಮ ನಾಯಕರ ನಿರಂಕುಶ ಅಧಿಕಾರವೇ ತಾವೂ ಏಕಾಂಗಿಯಾಗುತ್ತಿರಲು ಕಾರಣ ಎಂದು ಚೀನದ ಜನರಿಗೆ ಮನವರಿಕೆಯಾಗುವಂತೆ ಮಾಡುವುದು.
ಇಂಡೋ ಪೆಸಿಫಿಕ್ ಪ್ರದೇಶದಲ್ಲಿ ನೌಕಾ ಸಮನ್ವಯದ ಹೊರತಾಗಿ, ವ್ಯಾಪಾರದ ಆಯಾ ಮದಿಂದ ಚೀನವನ್ನು ಹತ್ತಿಕ್ಕುವುದು ಕ್ವಾಡ್‌ನ ಆದ್ಯತೆಯಾ ಗಬೇಕು. ನೆನಪಿರಲಿ, ಹಿಟ್ಲರ್‌ನಂತೆ ಕ್ಸಿಟ್ಲರ್‌ನನ್ನು ಸೋಲಿಸಲು ಸಾಧ್ಯವಿಲ್ಲ. ಹಿಂದೆ ಸೋವಿಯತ್ ಒಕ್ಕೂಟವನ್ನು ಹೇಗೆ ಆರ್ಥಿಕವಾಗಿ ಮಣಿಸಲಾಯಿತೋ, ಚೀನಕ್ಕೂ ಅದೇ ರೀತಿಯೇ ಮಾಡಬೇಕು. ಒಟ್ಟಲ್ಲಿ ಜಗತ್ತು “ಬಹು ವರ್ಷಗಳ’ ಆರ್ಥಿಕ ಯುದ್ಧವನ್ನು ಅಪ್ಪಿಕೊಳ್ಳಬೇಕಾಗಿದೆ.
(ಕೃಪೆ- ಸ್ವರಾಜ್ಯ ಜಾಲತಾಣ)
ಆರ್. ಜಗನ್ನಾಥನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.