ಕಾಶ್ಮೀರ ಕಣಿವೆಯ ಓಂಕಾರದ ಕರೆಯಿದು ಕೇಳಿ
Team Udayavani, Aug 7, 2019, 3:02 AM IST
ಇಡೀ ರಾಜ್ಯವನ್ನು ಸಾಕುತ್ತಿರುವುದು ಪ್ರಕೃತಿ ಸೌಂದರ್ಯ ಮತ್ತು ಪುಣ್ಯಕ್ಷೇತ್ರಗಳು. ಅಲ್ಲಿ ಹೇಳಿಕೊಳ್ಳುವಂಥ ಯಾವುದೇ ಕೈಗಾರಿಕೆಗಳಿಲ್ಲ. ಸಾವಿರಾರು ಉದ್ಯೋಗ ಸೃಷ್ಟಿಯನ್ನು ಏಕಕಾಲದಲ್ಲಿ ಮಾಡಬಲ್ಲ ಆಸರೆಗಳಿಲ್ಲ. ಆದರೆ ಜಮ್ಮು ಜಿಲ್ಲೆಯಲ್ಲಿರುವ ವೈಷ್ಣೋ ದೇವಿ, ಅನಂತನಾಗ್ ಜಿಲ್ಲೆಯಲ್ಲಿರುವ ಅಮರನಾಥ, ಸೂರ್ಯ ಮಾರ್ತಾಂಡ ದೇವಸ್ಥಾನ ಇವೆಲ್ಲ ಪ್ರತೀವರ್ಷ ಲಕ್ಷಾಂತರ ಪ್ರವಾಸಿಗಳನ್ನು ಸೆಳೆಯುತ್ತವೆ.
ಪಾಕಿಸ್ತಾನದ ಯುದ್ಧೋನ್ಮಾದ, ಭಯೋತ್ಪಾದಕರ ಮತೋ ನ್ಮಾದಕ್ಕೆ ಸಿಲುಕಿ ಕಳೆದ 72 ವರ್ಷಗಳಿಂದ ನರಳುತ್ತಿದ್ದ ಕಶ್ಯಪ ಮುನಿ ನಿರ್ಮಿತ ಕಾಶ್ಮೀರಕ್ಕೆ ಸೋಮವಾರ ಸ್ವಾತಂತ್ರ್ಯ ಸಿಕ್ಕಿದೆ. ಇನ್ನು ಅಲ್ಲಿನ ಜನ ಆ.15ರ ಜೊತೆ ಜೊತೆಗೇ ಆ.5ನ್ನೂ ಸ್ವಾತಂತ್ರ್ಯ ದಿನಾಚರಣೆಯ ಪಟ್ಟಿಗೇ ಸೇರಿಸಿಕೊಳ್ಳಬಹುದು ಅಥವಾ ಇಡೀ ಆಗಸ್ಟನ್ನು ಸ್ವಾತಂತ್ರ್ಯ ದಿನಾಚರಣೆಯೆಂದು ಸಂಭ್ರಮಿಸಬಹುದು. ವಿಡಂಬನೆಯೆಂದರೆ ಇಂತಹ ಸಂಭ್ರಮವನ್ನು; ಇಡೀ ದೇಶಕ್ಕೆ ದೇಶವೇ ಮಾಡುತ್ತಿದ್ದರೂ, ಕಾಶ್ಮೀರದಲ್ಲಿ ಮಾತ್ರ ಅದರ ಸುಳಿವಿಲ್ಲ! ಆ ರಾಜ್ಯದ ಜನರನ್ನು ಅಂತಹ ಅಂಧಕಾರದಲ್ಲಿಟ್ಟಿದ್ದಾರೆ ಅಲ್ಲಿನ ರಾಜಕಾರಣಿಗಳು. ಹಿಮಾಚ್ಛಾದಿತ ಬೆಟ್ಟಗಳು, ಬೃಹತ್ ಕಾಡು, ಸರೋವರಗಳ ನಾಡಾದ ಕಾಶ್ಮೀರ ಅಲ್ಲಿನ ವಿವೇಚನೆಯಿಲ್ಲದ ಜನನಾಯಕರು, ಮತೀಯತೆಯನ್ನು ಕಾರುವ ಭಯೋತ್ಪಾದಕರ ಕೈಗೆ ಸಿಲುಕಿ ವಿಷವಲಯವಾಗಿ ಬದಲಾಗಿದೆ.
ಪರಮಪವಿತ್ರವಾದ ದೇವಾಲಯಗಳ ತಾಣ, ಕೋಟ್ಯಂತರ ಹಿಂದುಗಳ ಶ್ರದ್ಧಾಕೇಂದ್ರ, ಸಾವಿರಾರು ವರ್ಷಗಳ ಪರಂಪರೆಯನ್ನು ತನ್ನ ಬಸಿರೊಳಗೆ ಹೊತ್ತುಕೊಂಡು ಜಗತ್ತಿಗೆ ಜ್ಞಾನದ ಅಸೀಮತೆಯನ್ನು ದರ್ಶನ ಮಾಡಿಸುತ್ತಿದ್ದ ಕಾಶ್ಮೀರ, ಇಂದು ವಿಲವಿಲ ಒದ್ದಾಡುತ್ತಿದೆ. ಕೇವಲ 9 ಶತಮಾನಗಳ ಹಿಂದೆ ಕಾಶ್ಮೀರ ಹೀಗಿರಲಿಲ್ಲ! ಅಂದರೆ 11ನೇ ಶತಮಾನದಲ್ಲಿ ಘಜ್ನಿ ಮುಹಮ್ಮದ್, ಭಾರತದ ಮೇಲೆ ದಾಳಿ ಮಾಡಿ ಇಲ್ಲಿನ ದೇವಸ್ಥಾನಗಳನ್ನು ಲೂಟಿ ಮಾಡುವವರೆಗೆ ಕಾಶ್ಮೀರ ಜ್ಞಾನಕೇಂದ್ರವಾಗಿಯೇ ಇತ್ತು. ಆದರೆ ಆತನ ದಾಳಿ 17 ಬಾರಿ ಪುನರಾವರ್ತನೆಯಾದಾಗ ತನ್ನ ಅಮೂಲ್ಯ ನಿಧಿಯನ್ನು ಉಳಿಸಿಕೊಳ್ಳುವ ಭಾರತೀಯರ ಶಕ್ತಿ ಉಡುಗಿತು. ಹಾಗೆ ಬಲಿಯಾದ ಭಾರತದ ಕೆಲವು ಸ್ಥಳಗಳಲ್ಲಿ ಕಾಶ್ಮೀರವೂ ಒಂದು.
ಅದೃಷ್ಟವಶಾತ್ ಆತ ಭಾರತದ ಧರ್ಮಗ್ರಂಥಗಳ ನಾಶಕ್ಕೆ ಕೈಹಾಕಲಿಲ್ಲವಂತೆ. ಇದಕ್ಕೆ ಕಾರಣ ಆತನೊಂದಿಗೆ ಭಾರತಕ್ಕೆ ಬಂದ ಅಸಾಮಾನ್ಯ ಮೇಧಾವಿ ಅಲ್ಬರೂನಿ. ಭಾರತದ ಜ್ಞಾನವನ್ನು ತಾನು ಪಡೆಯುವ ಸಾಹಸಕ್ಕೆ ಕೈಹಾಕಿದ ಇವರು, ಸಂಸ್ಕೃತ ಕಲಿಯುವವರೆಗೆ ಅದು ಸಾಧ್ಯವಿಲ್ಲ ಎಂದು ಅರಿತು, ಪಂಡಿತರ ಸಹಾಯದಿಂದ ಸಂಸ್ಕೃತ ಕಲಿತು, ಸಂಸ್ಕೃತದಲ್ಲಿಯೇ ಗ್ರಂಥರಚನೆ ಮಾಡುತ್ತಾರೆ. ಅವರ ಕಾರಣದಿಂದಲೇ ಪತಂಜಲಿಯ ಅಷ್ಟಾಂಗಯೋಗ, ಅರಬ್ಬಿ ಮತ್ತು ಪರ್ಷಿಯಾ ಭಾಷೆಗೆ ಭಾಷಾಂತರವಾಗುತ್ತದೆ. ಅದರ ಹೆಸರು ಕಿತಾಬ್ ಎಲ್ ಬತಂಜಲ್. ಈ ಯೋಗಸೂತ್ರದ ಹಲವು ತಂತ್ರಗಳು ಇಸ್ಲಾಮಿನಲ್ಲಿವೆ ಎಂದೂ ಹೇಳಲಾಗುತ್ತದೆ. ಯೋಗಸೂತ್ರ 9 ಶತಮಾನದ ಹಿಂದೆ ವಿಶ್ವವನ್ನು ತಲುಪಿದ್ದು ಕಾಶ್ಮೀರದ ಮೂಲಕ ಎನ್ನುವುದನ್ನು ನೆನೆದರೆ ರೋಮಾಂಚನವಾಗುವುದಿಲ್ಲವೇ?
ಮುಹಮ್ಮದ್ ಘಜ್ನಿ ದಾಳಿ ಮಾಡಿದಾಗ ಕಾಶ್ಮೀರದ ಸಂಪತ್ತು ಲೂಟಿಯಾಗಿತ್ತು. ಆದರೆ ಅಲ್ಲಿನ ಜನಜೀವನ ಹಾಳಾಗಿರಲಿಲ್ಲ. 13ನೇ ಶತಮಾನದಲ್ಲಿ ರಿನೆcನ್ ಎಂಬ ಬೌದ್ಧರಾಜ ತಾನೂ ಮುಸ್ಲಿಮನಾಗಿ ಬದಲಾಗಿ, ಸಾಮೂಹಿಕವಾಗಿ 10 ಸಾವಿರ ಮಂದಿ ಪಂಡಿತರನ್ನು ಮುಸ್ಲಿಮರನ್ನಾಗಿ ಬಲಾತ್ಕಾರವಾಗಿ ಮತಾಂತರಿಸುತ್ತಾನೆ. ಅಲ್ಲಿಂದ ಕಾಶ್ಮೀರದಲ್ಲಿ ಬೆಂಕಿ ಹತ್ತಿಕೊಳ್ಳುತ್ತದೆ. ಈ ಹೊಡೆತಕ್ಕೆ ಕಾಶ್ಮೀರದ ತುಂಬಾ ಹಬ್ಬಿಕೊಂಡಿದ್ದ, ಹಿಂದು-ಬೌದ್ಧ ಸಂತತಿ ನಶಿಸುತ್ತ ಸಾಗಿ ಈಗ ಅವಸಾನದ ಅಂಚಿಗೆ ತಲುಪಿದೆ. 5 ಲಕ್ಷ ಮಂದಿ ಕಾಶ್ಮೀರಿ ಪಂಡಿತರು ಕಣಿವೆಯನ್ನು ತೊರೆದು ದೆಹಲಿ ಸೇರಿಕೊಂಡು, ನಿರ್ಗತಿಕರಂತೆ ಬದುಕುತ್ತಿರುವುದು ಈಗ ಹಳೆಯ ಕಥೆ. ಆ ಪಂಡಿತರೆಲ್ಲ 370ನೇ ವಿಧಿ ರದ್ದಾದೊಡನೆ ನಿಟ್ಟುಸಿರುಬಿಟ್ಟಿದ್ದಾರೆ.
ಆತ್ಮದ ಕರೆಯಿದು ಕೇಳಿ: ಜಮ್ಮುಕಾಶ್ಮೀರ ದೇವಾಲಯಗಳ ನಾಡು. ಸಾವಿರಾರು ಭಯೋತ್ಪಾದಕ ದಾಳಿಗಳ ನಂತರವೂ ಇಡೀ ರಾಜ್ಯವನ್ನು ಸಾಕುತ್ತಿರುವುದು ಇಲ್ಲಿನ ಪ್ರಕೃತಿ ಸೌಂದರ್ಯ ಮತ್ತು ಪುಣ್ಯಕ್ಷೇತ್ರ ಗಳು. ಅಲ್ಲಿ ಹೇಳಿಕೊಳ್ಳುವಂತ ಯಾವುದೇ ಕೈಗಾರಿಕೆಗಳಿಲ್ಲ. ಸಾವಿರಾರು ಉದ್ಯೋಗ ಸೃಷ್ಟಿಯನ್ನು ಏಕಕಾಲದಲ್ಲಿ ಮಾಡಬಲ್ಲ ಆಸರೆಗಳಿಲ್ಲ. ಆದರೆ ಜಮ್ಮು ಜಿಲ್ಲೆಯಲ್ಲಿರುವ ವೈಷ್ಣೋ ದೇವಿ, ಅನಂತನಾಗ್ ಜಿಲ್ಲೆಯಲ್ಲಿರುವ ಅಮರನಾಥ, ಸೂರ್ಯ ಮಾರ್ತಾಂಡ ದೇವಸ್ಥಾನ ಇವೆಲ್ಲ ಪ್ರತೀವರ್ಷ ಲಕ್ಷಾಂತರ ಪ್ರವಾಸಿಗಳನ್ನು ಸೆಳೆಯುತ್ತವೆ. ಬರೀ ಅಮರನಾಥ ಕ್ಷೇತ್ರವೊಂದಕ್ಕೆ ಪ್ರತೀ ವರ್ಷ 6 ಲಕ್ಷ ಯಾತ್ರಾರ್ಥಿಗಳು ತೆರಳುತ್ತಾರೆ. ಅದೂ ಕೇವಲ ಒಂದೆರಡು ತಿಂಗಳ ಅಂತರದಲ್ಲಿ.
ಪದೇ ಪದೇ ಭಯೋತ್ಪಾದಕ ದಾಳಿಗಳು, ಭೂಕುಸಿತದಂತಹ ದುರ್ಘಟನೆಗಳು, ದುರ್ಗಮಕಣಿವೆಯಲ್ಲಿ ಜೀವವನ್ನು ಕೈಯಲ್ಲಿ ಹಿಡಿದು ಸಾಗಬೇಕಾದ ಈ ದೇವಸ್ಥಾನದ ಅಂತಹ ಆಕರ್ಷಣೆ ಏನಿದ್ದೀತು? ಅದು ಸನಾತನ ಧರ್ಮದ ವಿಶೇಷ. ಶಿವ ತನ್ನ ಪತ್ನಿ ಪಾರ್ವತಿಗೆ ಇಲ್ಲೇ ಸಮಸ್ತಜ್ಞಾನವನ್ನು ಉಪದೇಶಿಸಿದ ಎಂದು ಪುರಾಣಗಳು ತಿಳಿಸುತ್ತವೆ. ಬರೀ ಪ್ರತೀತಿಯೊಂದೇ ಪ್ರವಾಸಿಗಳನ್ನು ಸೆಳೆಯುತ್ತಿಲ್ಲ. ಅದಕ್ಕೂ ಮಿಗಿಲಾದ ಆತ್ಮಾರ್ಥವೊಂದು, ಮೌನವಾಗಿ ಈ ಶಾಂತವಾಗಿ ಕಣಿವೆಯಲ್ಲಿ ಅನುರಣಿಸುತ್ತಲೇ ಇದೆ. ಆ ಮೌನದೊಳಗಿನ ಓಂಕಾರದ ದನಿ ಭಾರತೀಯರನ್ನು ಸಾವಿರಾರು ವರ್ಷಗಳಿಂದ ಸೆಳೆಯುತ್ತಿದೆ. ಅಷ್ಟಕ್ಕೂ ನೀವಿಲ್ಲಿ ಕಡೆಗೂ ನೋಡುವುದು ಪ್ರಕೃತಿಸಹಜವಾಗಿ ಲಿಂಗದ ರೂಪು ತಳೆದ ಹಿಮದಗಡ್ಡೆಯನ್ನು ಮಾತ್ರ!
ಓ ಕಾಶ್ಮೀರಪುರವಾಸಿನಿಯೇ…: ನಮಸ್ತೇ ಶಾರದಾದೇವಿ ಕಾಶ್ಮೀರಪುರವಾಸಿನಿ, ತ್ವಾಮಹಂ ಪ್ರಾರ್ಥಯೇ ನಿತ್ಯಂ ವಿದ್ಯಾದಾನಂಚ ದೇಹಿಮೇ. ಅಕ್ಷಸೂತ್ರಾಂ ಕುಶಧರಾ ಪಾಶಪುಸ್ತಕ ಧಾರಿಣೀ, ಮುಕ್ತಾಹಾರ ಸಮಾಯುಕ್ತಾ ವಾಚಿ ತಿಷ್ಠತು ಮೇ ಸದಾ, ಕಂಬುಕಂಠೀ ಸುತಾ ನ್ರೋಷ್ಠಿ, ಸರ್ವಾಭರಣಭೂಷಿತಾ, ಮಹಾಸರಸ್ವತೀ ದೇವೀ ಜಿಹ್ವಾಗ್ರೇ ಸನ್ನಿವೇಶ್ಯತಾಮ್. ಹೀಗೆಂದು ಜಗನ್ಮಾತೆ ಶಾರದೆಯನ್ನು ಭಾರತೀಯರು ಪ್ರಾರ್ಥಿಸುತ್ತಾರೆ. ಇದನ್ನು ರಚಿಸಿದ್ದು ಆದಿಶಂಕರಾಚಾರ್ಯರು ಎಂಬ ಅಭಿಪ್ರಾಯವೂ ಇದೆ. ಸರಸ್ವತೀ ರಹಸ್ಯೋಪನಿಷತ್‌ನಲ್ಲಿದೆ ಎಂಬ ಮೂಲವನ್ನೂ ಹೇಳುತ್ತಾರೆ. ಇದಿರಲಿ, ಈಕೆಗೆ ಕಾಶ್ಮೀರಪುರವಾಸಿನಿ ಎಂದು ಕರೆಯುವುದೇಕೆ ಎಂಬ ಪ್ರಶ್ನೆಯೇ ಬಹುತೇಕರಲ್ಲಿ ಹುಟ್ಟುವುದಿಲ್ಲ.
ಬಾಲ್ಯದಿಂದಲೇ ದೇವಿಯನ್ನು ಹೀಗೆ ಪ್ರಾರ್ಥನೆ ಮಾಡಿಕೊಂಡು ಬಂದಾಗ ಇದರ ಮೂಲ ಏನೆಂದು ತಿಳಿದುಕೊಳ್ಳುವ ಅಗತ್ಯಬರದೇ ಇರುವುದು ಇದಕ್ಕೆ ಕಾರಣ. ಆದರೆ ನೆನಪಿರಲಿ ನಾವು ಕಾಶ್ಮೀರಪುರವಾಸಿನಿ ಎಂದು ಕರೆಯುವ ಈ ಶಾರದೆಯನ್ನು ತಲುಪುವುದಕ್ಕೇ ಸಾಧ್ಯವಿಲ್ಲ. ಯಾಕೆಂದರೆ ಹೀಗೆ ಕರೆಸಿಕೊಳ್ಳುವ ಶಾರದೆಯ ಸ್ಥಾನ ಪಾಕ್ ಆಕ್ರಮಿತ ಕಾಶ್ಮೀರದಲ್ಲಿದೆ. ಗಡಿನಿಯಂತ್ರಣ ರೇಖೆಯಿಂದ ಕೇವಲ 140 ಕಿ.ಮೀ., ಭಾರತದ ಅಧೀನದಲ್ಲಿರುವ ಕುಪ್ವಾರಾದಿಂದ ಕೇವಲ 30 ಕಿ.ಮೀ. ದೂರದಲ್ಲಿದೆ. ಭಾರತ ಸರ್ಕಾರ ಪಾಕಿಸ್ತಾನಕ್ಕೆ ಮನವಿ ಮಾಡಿದ್ದರೂ, ಪಾಕಿಸ್ತಾನ ಭಾರತೀಯರಿಗೆಂದೇ ಮಾರ್ಗವೊಂದನ್ನು ತೆರೆಯುವುದಾಗಿ ಭರವಸೆ ನೀಡಿದ್ದರೂ ಅದಿನ್ನೂ ಜಾರಿಯಾಗಿಲ್ಲ. ಹೌದು, ಕಾಶ್ಮೀರಪುರವಾಸಿನಿ ಶಾರದೆಗಾಗಿ ನಮ್ಮ ಹೃದಯ ಯಾಕೆ ತಳಮಳಿಸುತ್ತದೆ? ಭಾರತದ ಯಾವುದೋ ಮೂಲೆಯಲ್ಲಿರುವ ನಮ್ಮನ್ನೂ ಯಾಕೆ ಅವಳು ಕರೆಯುತ್ತಾಳೆ ಗೊತ್ತೇನು? ಇದಕ್ಕೊಂದು ಇತಿಹಾಸವಿದೆ.
ಜಗನ್ಮಾತೆ ಶಾರದೆ ವಿದ್ಯೆಯನ್ನು ನೀಡುವ ದೇವಿ (ಶಾರ ಅಂದರೆ ವಿದ್ಯೆ ದಾ ಅಂದರೆ ನೀಡುವವಳು). ಇಡೀ ದೇಶದಲ್ಲಿ ಅವಳಸ್ಥಾನಗಳಿವೆ. ಪ್ರತೀ ನವರಾತ್ರಿಯಲ್ಲಿ ಶಾರದೆ ರೂಪದಲ್ಲೂ ದುರ್ಗೆಯನ್ನು ಪೂಜಿಸಲಾಗುತ್ತದೆ. ಆ ತಾಯಿಯನ್ನು 5000 ವರ್ಷಗಳ ಹಿಂದೆಯೇ ಕಾಶ್ಮೀರದಲ್ಲಿ ಅರ್ಚಿಸಲು ಆರಂಭವಾಗಿತ್ತು. ಈಗ ಪಾಕ್ ಆಕ್ರಮಿತ ಕಾಶ್ಮೀರದ ನೀಲಂ ಜಿಲ್ಲೆಯ ನೀಲಂ ನದಿ ಬಳಿ ಶಾರದಾಪೀಠವಿದೆ. ಆ ಗ್ರಾಮಕ್ಕೆ ಈಗಲೂ ಶಾರದಾಗ್ರಾಮವೆಂದು ಕರೆಯುತ್ತಾರೆ. ಇಲ್ಲಿಗೆ ಸಮೀಪವಿರುವ ಬೆಟ್ಟಕ್ಕೆ ಶಾರದಿ ಬೆಟ್ಟ ಎನ್ನುತ್ತಾರೆ. ಅಲ್ಲಿರುವುದು ಮುಸ್ಲಿಮರೇ ಆದರೂ ಅವರಿಗೆ ಈಕೆಯ ಬಗ್ಗೆ ಇನ್ನೂ ಶ್ರದ್ಧೆ ಹೋಗಿಲ್ಲ. ಅಲ್ಲಿರುವ ಶಾರದೆಯನ್ನು ಪೂಜಿಸಿ, ಆ ನೆಲದ ಮಣ್ಣನ್ನು, ಅರ್ಪಿಸಿದ ಪುಷ್ಪವನ್ನೂ ಕಾಶ್ಮೀರ ಪಂಡಿತರಿಗೆ ಅಂಚೆಯ ಮೂಲಕ ಆ ಕಳುಹಿಸಿದ್ದಾರೆ. ಇದನ್ನು ಹೊಸನಗರ ರಾಮಚಂದ್ರಾಪುರಮಠದ ರಾಘವೇಶ್ವರ ಶ್ರೀಗಳು ದೃಢೀಕರಿಸಿದ್ದಾರೆ.
ಇಲ್ಲಿನ ಶಾರದಾಪೀಠವನ್ನು ಸ್ಥಾಪಿಸಿದ್ದು ರಾಜ ಲಲಿಲಾದಿತ್ಯ ಎನ್ನುತ್ತಾರೆ ಕೆಲವರು, ಇನ್ನು ಕೆಲವರು ಅಶೋಕ ಚಕ್ರವರ್ತಿ ಎನ್ನುತ್ತಾರೆ. ಇನ್ನು ಕೆಲವು ಐತಿಹ್ಯಗಳು ಕುಶಾನರು ಎನ್ನುತ್ತವೆ. ಇದಿನ್ನೂ ತೀರ್ಮಾನವಾಗಬೇಕಾದ ವಿಷಯ. ಆದರೆ ತೀರ್ಮಾನವಾಗಿರುವ ಬಂಧವೊಂದಿದೆ. ಅದು ಆದಿಶಂಕರಾಚಾರ್ಯರು! ಕೇರಳದ ಕಾಲಟಿಯಲ್ಲಿ 788ನೇ ವರ್ಷದಲ್ಲಿ ಹುಟ್ಟಿದ ಈ ಧೀರ ಸನ್ಯಾಸಿ, ಇಡೀ ಭರತಖಂಡವನ್ನು ಸುತ್ತಿ ಈಗಲೂ, ಮರೆಯಲು ಸಾಧ್ಯವಾಗದ ಪ್ರಭಾವವೊಂದನ್ನು ಉಳಿಸಿಹೋಗಿದ್ದಾರೆ. ಉತ್ತರಭಾರತದಲ್ಲಿರುವ ದಶನಾಮಿ ಸನ್ಯಾಸಪರಂಪರೆ, ದೇಶದ ನಾಲ್ಕೂ ಮೂಲೆಗಳಲ್ಲಿ ಸ್ಥಾಪನೆಗೊಂಡಿರುವ ಚತುರಾಮ್ನಾಯಪೀಠಗಳು ಈ ಯತಿಯ ಕೊಡುಗೆ. ಇಂತಹ ಸನ್ಯಾಸಿ ಶಾರದಾಪೀಠದಲ್ಲಿದ್ದ ಸರ್ವಜ್ಞಪೀಠವನ್ನೇರಿದ ದಕ್ಷಿಣಭಾರತದ ಮೊದಲ ಮಹಾಜ್ಞಾನಿ. ಉಳಿದ ಮೂರೂದಿಕ್ಕುಗಳಿಂದ ಬಂದಿದ್ದ ಜ್ಞಾನಿಗಳು ಪಂಡಿತರನ್ನು ವಾದದಲ್ಲಿ ಸೋಲಿಸಿ ತಮ್ಮ ದ್ವಾರಗಳನ್ನು ತೆಗೆಸಿದ್ದರು. ಉಳಿದಿದ್ದ ದಕ್ಷಿಣದ್ವಾರವನ್ನು ತೆರೆಸಿದ್ದು ಆದಿಶಂಕರರು! ಶಂಕರರ ಕಾಶ್ಮೀರಯಾತ್ರೆಯ ಪರಿಣಾಮ ನಿಚ್ಚಳ.
ಅಲ್ಲೀಗಲೂ ಶಂಕರಾಚಾರ್ಯ ಹೆಸರಿನ ಬೆಟ್ಟವಿದೆ. ಅವರೇ ಅಲ್ಲಿ ವಿಶ್ವವಿದ್ಯಾಲಯವೊಂದನ್ನು ಸ್ಥಾಪಿಸಿದ್ದರಂತೆ. ಅವೆಲ್ಲ ಈಗ ದಂತಕಥೆಗಳಾಗಿ ಉಳಿದುಹೋಗಿವೆ. ಶಂಕರರು ಕಾಲಿಟ್ಟ ಶಾರದಾಪೀಠದಲ್ಲಿ ಅವರಿಗೂ ಮುಂಚೆ ಬಹಳ ಮೇಧಾವಿಗಳು ಬದುಕಿಬಾಳಿ, ಅಲ್ಲಿನ ವಾತಾವರಣದಲ್ಲಿ ಜ್ಞಾನವನ್ನು ಹರಡಿಹೋಗಿದ್ದಾರೆ. ಆ ಕಾಲದಲ್ಲೇ ಇಡೀ ದೇಶದ ಬೃಹತ್ ಗ್ರಂಥಾಲಯ ಅಲ್ಲಿತ್ತಂತೆ, 5000ಕ್ಕೂ ಹೆಚ್ಚು ವಿದ್ವಾಂಸರು ಅಧ್ಯಯನ ಮಾಡಿದ್ದೂ ಇಲ್ಲೇ. ಪಾಣಿನಿಯ ಸಂಸ್ಕೃತ ವ್ಯಾಕರಣಗ್ರಂಥ ಅಷ್ಟಾಧ್ಯಾಯಿಯೂ ಇಲ್ಲೇ ನೆಲೆ ಕಂಡುಕೊಂಡಿತ್ತಂತೆ. ಮಹಾಮಹಾ ವಿದ್ವಾಂಸರ ತಾಯಿಬೇರು, ಸನಾತನ ಭಾರತದ ಸಂಸ್ಕೃತಿಯ ಶಕ್ತಿಕೇಂದ್ರ, ಸಾವಿರಾರು ವರ್ಷಗಳ ಪರಂಪರೆಯನ್ನು ಅಷ್ಟೇ ಸಶಕ್ತವಾಗಿ ಮುಂದಿನ ತಲೆಮಾರುಗಳಿಗೆ ತಲುಪಿಸುತ್ತಿದ್ದ, ಸರ್ವಜ್ಞರನ್ನು ಸೃಷ್ಟಿಸುತ್ತಿದ್ದ ಈ ಶಾರದಾಪೀಠ….ಇದರ ನೆಲೆ, ನೆಲ ಕಾಶ್ಮೀರ ಎಂದಾಗ, ಅದೀಗ ಹಾಳುಹಂಪೆಯಂತಾಗಿದೆ ಎಂದಾಗ ನಮ್ಮೆದೆ ಕಲಕುವುದಿಲ್ಲವೇ? ಅಂತಹ ಕಾಶ್ಮೀರವನ್ನು ಬಿಟ್ಟುಕೊಡಲು ಸಾಧ್ಯವೇ?
* ನಿರೂಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.