ನೋಡಿ ಬಂದೆ ಹೆಂಗರುಳ ಶ್ರೀಕೃಷ್ಣ ಪರಿಚಾರಕನ
Team Udayavani, Jul 2, 2017, 3:45 AM IST
ವಯೋವೃದ್ಧ ಪೂಜ್ಯ ಪೇಜಾವರ ಶ್ರೀಗಳು ಕಾಲು ಜಾರಿ ಬಿದ್ದು, ಭುಜಕ್ಕೆ ಪೆಟ್ಟಾದ ಸುದ್ದಿ ವಿಧಾನ ಸೌಧದಲ್ಲಿದ್ದಾಗಲೇ ಸಹಾಯಕರು ತಿಳಿಸಿದ್ದರು. ನನ್ನಂತಹವರು ಹುಟ್ಟುವ ಮುನ್ನವೇ ಸನ್ಯಾಸ ಪಡೆದು, ಮುಕ್ಕಾಲು ಶತಮಾನ ದಾಟಿದ ಯತಿಶ್ರೇಷ್ಠರು ಪೇಜಾವರ ಶ್ರೀಗಳು. ಎಂಟು ವರ್ಷದ ಎಳೆಯ ಬಾಲಕನಿರುವಾಗಲೇ ಅವರಿಗೆ ಸನ್ಯಾಸ ದೀಕ್ಷೆ ಕೊಟ್ಟು, ಬರೋಬ್ಬರಿ 78 ವರ್ಷಕ್ಕೂ ಮಿಕ್ಕಿ ಧಾರ್ಮಿಕ, ಶೈಕ್ಷಣಿಕ ಹಾಗೂ ಸಮಾಜ ಸುಧಾರಣೆಯಲ್ಲಿ ಗಟ್ಟಿ ಹೆಜ್ಜೆಗಳನ್ನಿಡಲು ಸಮಾಜ ಅವರನ್ನು ಉಪಯೋಗಿಸಿಕೊಂಡಿದೆ. ಬದುಕಿನುದ್ದಕ್ಕೂ ಹಿಂದುತ್ವದ ಪ್ರತಿಪಾದನೆ, ಗೋಹತ್ಯೆ ನಿಷೇಧ, ಮತಾಂತರ ವಿರೋಧಿ ನಿಲುವು ತಳೆಯುತ್ತಲೇ ಒಂದರ್ಥದಲ್ಲಿ ಅಖಂಡ ಹಿಂದು ಧರ್ಮದ ಜಗದ್ಗುರುಗಳಂತೆ ಧರ್ಮದ ಉಳಿವಿಗಾಗಿ ಬದುಕನ್ನು ಸಮರ್ಪಣೆ ಮಾಡಿದ ಕೆಲವೇ ವ್ಯಕ್ತಿಗಳಲ್ಲಿ ಪೇಜಾವರ ವಿಶ್ವೇಶತೀರ್ಥ ಶ್ರೀಗಳೂ ಒಬ್ಬರು.
ಅಷ್ಟಮಠದ ಪ್ರಾಂಗಣದೊಳಗೆ ಚಿಪ್ಪಿನೊಳಗೆ ಮುತ್ತಿನಂತೆ ಅಪರೂಪಕ್ಕೆ ಹೊರಪ್ರಪಂಚಕ್ಕೆ ಪ್ರಭೆ ಬೀರುತ್ತಿದ್ದ ಯತಿವರ್ಯರ ನಡುವಿನಿಂದ ಅವರು ಮೇಲೆದ್ದು, ಹೊರಜಗತ್ತಿನ ಶ್ರೀಸಾಮಾನ್ಯ, ಅದರಲ್ಲೂ ದಲಿತ ಕಾಲನಿಗಳಿಗೆ ಪ್ರವಾಸ ಹಮ್ಮಿಕೊಂಡಾಗ ಶ್ರೀಗಳನ್ನು ದೂರಿದವರಲ್ಲಿ ಎಲ್ಲ ಜಾತಿ- ವರ್ಗದವರೂ ಇದ್ದರು. ಅಸ್ಪೃಶ್ಯರ ಸ್ಪರ್ಶದಿಂದ ಕೃಷ್ಣಮಠಕ್ಕೆ ಅಪಚಾರವೆಂದು ಕೆಲವರು ಹೇಳಿ ಭುಸುಗುಟ್ಟಿದರೆ ಶ್ರೀಗಳ ಕೈಯಿಂದ ಮಂತ್ರಾಕ್ಷತೆ ಪಡೆದ ದಲಿತ ಕಾಲನಿಯಲ್ಲಿ ಹೊಸ ಸಂಭ್ರಮಾಚರಣೆ ಮಾತ್ರವಲ್ಲ, ನೂರಾರು ವರ್ಷಗಳ ಇತಿಹಾಸದಲ್ಲಿ ಶ್ರೇಷ್ಠ ಸ್ವಾಮೀಜಿ ಒಬ್ಬರ ಸಾಂತ್ವನದ ನುಡಿ ದಲಿತರ ಬದುಕಿನಲ್ಲಿ ಹೊಸ ಕನಸು ಬಿತ್ತಿತು. ಟೀಕಿಸುತ್ತಿದ್ದವರು ಸ್ವಾಮೀಜಿಗೆ ಬುದ್ಧಿ ಇಲ್ಲ ಎಂದರು.
ಶ್ರೀಗಳ ಪಾದ ಮುಟ್ಟಿ ಆರ್ಶೀವಾದ ಪಡೆಯಲು ಅವಕಾಶ ಪಡೆದುಕೊಂಡ ಅಸ್ಪೃಶ್ಯ ಜಾತಿಯ ಜನ ಮರೆಯಬೇಕೆಂದುಕೊಂಡ ಮೂಲ ಧರ್ಮದಲ್ಲೇ ಉಳಿದು, ಹಿಂದೂ ಧರ್ಮದ ಬೇರಿಗೆ ಮತ್ತೆ ನೀರೆರೆಯಲಾರಂಭಿಸಿದರು. ಸ್ವಾಮಿಗಳೆಂದರೆ ಪಲ್ಲಕ್ಕಿಯಲ್ಲಿ ಹೊತ್ತು ತಿರುಗಬೇಕಂತೆ, ಹಿಂದುಳಿದವರು, ದಲಿತರು ಆ ಪಲ್ಲಕ್ಕಿ ಹೊರುವುದಿರಲಿ ದೂರ ನಿಂತು ಮುಟ್ಟಲು ಸಾಧ್ಯವಿಲ್ಲವೆಂಬ ವಾಡಿಕೆಯ ಮಾತುಗನ್ನು ನನ್ನ ಎಳೆಯ ದಿನಗಳಲ್ಲಿ ಕೇಳಿದ್ದೆ. ಪೇಜಾವರ ಶ್ರೀಗಳು ತನ್ನ ಗುಬ್ಬಚ್ಚಿ ದೇಹ ಹೊತ್ತು ಮರದ ಪಾದರಕ್ಷೆ ಮೆಟ್ಟಿ ಚಟಪಟನೆ, ಗುಂಪು ಗುಂಪು ಸೋಗೆಗರಿಯ ಬಡವರ ಮನೆಗಳ ಅಂಗಳ ಮೆಟ್ಟಿ ಹೋಗುತ್ತಿದ್ದರೆ ಶ್ರೀಗಳನ್ನು ಜನ ಭೂಮಿಗಿಳಿದ ದೇವರಂತೆ ಗೌರವಿಸಿದ್ದರು.
ಪೇಜಾವರರಿಗೆೆ ದೇಶವೇ ಕೈ ಬೀಸಿ ಕರೆಯಿತೇನೋ! ತನ್ನ ವಾಮನ ಹೆಜ್ಜೆಗೆ ಚಕ್ರ ಕಟ್ಟಿಕೊಂಡು ಹಿಂದೂ ಧರ್ಮಕ್ಕೆ ಆವರಿಸಿಕೊಂಡ ಹಲವು ಅನಿಷ್ಟಗಳನ್ನು ತುಳಿದಿದ್ದರು. ಒಂದೇ ಧರ್ಮದಲ್ಲಿ ಹುಗಿದುಕೊಂಡು ಹೊಗೆಯುಗುಳುತ್ತಿದ್ದ ಅಸ್ಪೃಶ್ಯತೆಯನ್ನು ಮೆಟ್ಟಿ ನಿಲ್ಲಲು ಹೋಗಿ ಮಿಡಿನಾಗರದಂತೆ ಫೂತ್ಕರಿಸುವ ವಿರೋಧಿಗಳನ್ನು ಸೃಷ್ಟಿ ಮಾಡಿಕೊಂಡರು. ತಮಿಳುನಾಡಿನಲ್ಲಿ ದಲಿತರು ಸಾಮೂಹಿಕವಾಗಿ ಹಿಂದುತ್ವವನ್ನು ತೊರೆಯುತ್ತಾರೆ ಎಂಬ ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಧಾವಿಸಿ ಶತಮಾನದಿಂದ ಸಾಮಾಜಿಕ ತುಳಿತಕ್ಕೊಳಗಾಗಿ ರೋಸಿಹೋದ ಜನರ ಗಾಯಕ್ಕೆ ಸಾಂತ್ವನದ ಮುಲಾಮು ಸವರಿ, ಹಿಂದು ಧರ್ಮದಲ್ಲೇ ಉಳಿಸಿಕೊಂಡೇ ಬಿಟ್ಟರು. ರಾಮ ಜನ್ಮಭೂಮಿ ವಿವಾದದ ಸಂದರ್ಭ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಬೀಡುಬಿಟ್ಟ ಪೇಜಾವರ ಶ್ರೀಪಾದರು ರಾಮನ ನೆಲ ಮುಕ್ತಿ ಪಡೆಯುತ್ತಲೇ ಭಾವೋದ್ವೇಗಕ್ಕೆ ಒಳಗಾಗಿದ್ದು ಇತಿಹಾಸ. ಗೋಹತ್ಯೆ ನಿಷೇಧದ ವಾದ ತಾರಕಕ್ಕೇರಿದಾಗ ಪ್ರಪಂಚದ ಯಾವುದೇ ಸನ್ಯಾಸಿ ಪೇಜಾವರ ಶ್ರೀಗಳಷ್ಟು ಟೀಕೆ, ಟಿಪ್ಪಣಿ, ಅಪಹಾಸ್ಯಕ್ಕೀಡಾದ ನಿದರ್ಶನವಿಲ್ಲ. ಆದರೆ ಶ್ರೀಗಳು ಮಾತ್ರ ಯಾವುದಕ್ಕೂ ಜಗ್ಗದೇ, ಕುಗ್ಗದೇ ವಿಚಾರವಾದಿಗಳ ಜತೆ ಬಹಿರಂಗ ಸಂವಾದಕ್ಕಿಳಿದರು. ಸಣ್ಣ ಗಡ್ಡ ಬಿಟ್ಟು ಬಗಲಚೀಲ ಹೆಗಲೇರಿಸಿದ ಪ್ರಗತಿಪರರೊಂದಿಗೆ; ಗಿರೀಶ್ ಕಾರ್ನಾಡ್, ಅನಂತಮೂರ್ತಿ, ಭಗವಾನ್, ಕಲಬುರ್ಗಿಯಂತಹ ವಿಚಾರಶೀಲರೊಂದಿಗೆ ಮುಖಾಮುಖೀಯಾದಾಗ ಯಾವ ಸವಾಲಿಗೂ – ಪ್ರತಿ ಸವಾಲಿಗೂ ಮಣಿಯದೇ ಹಿಂದುತ್ವದ ಪ್ರತಿಪಾದನೆ, ಗೋಹತ್ಯೆಯ ನಿಷೇಧದ ಅಗತ್ಯಗಳನ್ನು ಸಮರ್ಥವಾಗಿ ಮಂಡನೆ ಮಾಡಿದ್ದು, ವಾದದಲ್ಲಿ ಗೆದ್ದದ್ದು ನಾವೆಲ್ಲ ಮರೆತಿದ್ದೇವೆಯೇ? ಅಥವಾ ಮರೆತೇ ಬಿಟ್ಟಂತೆ ವರ್ತಿಸುತ್ತಿದ್ದೇವೆಯೇ- ಅರಿವಾಗುತ್ತಿಲ್ಲ.
ನನಗಿನ್ನೂ ನೆನಪಿದೆ, ಡಾ| ವಿ.ಎಸ್. ಆಚಾರ್ಯ ಧಾರ್ಮಿಕ ದತ್ತಿ ಮಂತ್ರಿಯಾಗಿದ್ದಾಗ ಉಡುಪಿಯ ಅಷ್ಟಮಠಗಳನ್ನು ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಿಂದ ಹೊರಗಿಡುವ ತಿದ್ದುಪಡಿ ಮಸೂದೆಯನ್ನು ಸದನದಲ್ಲಿ ಮಂಡಿಸಿದ್ದರು. ಪೇಜಾವರ ಶ್ರೀಗಳು ಬರೆದ ಪತ್ರವೊಂದನ್ನು ಹಿಡಿದು ವಿಪಕ್ಷಗಳು ಡಾ| ಆಚಾರ್ಯ ಅವರನ್ನು ಧರ್ಮದ ಪರವಾದಿ ಎಂಬುದಾಗಿ ಹಿಗ್ಗಾಮುಗ್ಗಾ ಜಗ್ಗಿದ್ದವು. ಅಂತೂ ಡಾ| ಆಚಾರ್ಯರು ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಿಂದ ಶ್ರೀಕೃಷ್ಣ ಮಠವನ್ನು ವಿರಹಿತಪಡಿಸುವ ತಿದ್ದುಪಡಿಗೆ ಅನುಮೋದನೆ ಪಡೆದೇ ಬಿಟ್ಟರು. ಮತ್ತೂಮ್ಮೆ ಕರ್ನಾಟಕ ರಾಜ್ಯ ರಾಜಕಾರಣದ ಮಗ್ಗುಲು ಮಗುಚಿ ಸಿದ್ದರಾಮಯ್ಯನವರ ಸರಕಾರ ಅಧಿಕಾರಕ್ಕೆ ಬಂತು. ಮತ್ತೆ ಶ್ರೀಕೃಷ್ಣ ಮಠವನ್ನು ಮುಜರಾಯಿ ಇಲಾಖೆಗೆ ಪಡೆಯಲು ಹೊಸ ಸರಕಾರ ಚಿಂತನೆ ಮಾಡುವ ಪ್ರಸ್ತಾವವಾಯಿತು. ಅಂದಿನ ವಿಪಕ್ಷ ಮುಖಂಡ ಸದಾನಂದ ಗೌಡರ ಸೂಚನೆಯ ಮೇರೆಗೆ ನಾನೇ ಮಂಡಿಸಿದ ನಿಯಮಗಳ ಅಡಿಯಲ್ಲಿ ನಡೆದ ಸುದೀರ್ಘ ಚರ್ಚೆಗೆ ಸರಕಾರ ಮಣಿದು ಶ್ರೀಕೃಷ್ಣ ಮಠ ವಶಕ್ಕೆ ಪಡೆಯಲಾರನೆಂದು ವಾಗ್ಧಾನ ಕೊಟ್ಟಿತು. ಒಟ್ಟಾರೆ ಉಡುಪಿಯ ಅಷ್ಟಮಠಗಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾ ಬಂದರೆ ಪೇಜಾವರ ಶ್ರೀಗಳು ಮತಾಂತರ, ಗೋಹತ್ಯೆ ಮುಂತಾದ ವಿಚಾರಗಳನ್ನು ವಿರೋಧಿಸಿದ ಕಾರಣಕ್ಕೆ ಸಾಕಷ್ಟು ಶತ್ರುಗಳನ್ನೂ ಮಿತ್ರರನ್ನೂ ಒಟ್ಟಾಗಿಯೇ ಸೃಷ್ಟಿ
ಮಾಡಿಕೊಂಡರು. ಒಮ್ಮೊಮ್ಮೆ ಅವರಿಗೆ ಅರಿವಿಧ್ದೋ ಇಲ್ಲದೆಯೋ ಸೃಷ್ಟಿಯಾದ ಗೊಂದಲಕ್ಕೆ ಪೇಜಾವರ ಶ್ರೀ ಎಂಬ ಗೋವನ್ನು ಬಲಿ ಕೊಡುವ ಯತ್ನ ಅನೇಕರಿಂದ ನಡೆಯಿತು. ದುರಂತವೆಂದರೆ ಕೃಷ್ಣ ಮಠದ ಪುಣ್ಯಕೋಟಿಯಾದ ಈ ಗೋವು ಕೂಡ ಒಮ್ಮೊಮ್ಮೆ ಹೆಬ್ಬುಲಿಯ ಬಾಯಿಯ ಬಳಿ ತಾನಾಗಿಯೇ ಹೋಗಿ ಸಂಕಟಪಟ್ಟದ್ದು ಸುಳ್ಳಲ್ಲ.
ನಮ್ಮ ಸರಕಾರವಿದ್ದ ದಿನಗಳವು. ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಮಡೆಸ್ನಾನ ವಿವಾದ ಪರಾಕಾಷ್ಠೆಗೇರಿತ್ತು. ಇವತ್ತಿನ ದಿನಗಳಲ್ಲಿ ಯಾರೋ ಉಂಡ ಎಂಜಲೆಲೆಯ ಮೇಲೆ ಹರಕೆಯ ಹೆಸರಲ್ಲಿ ಮನುಷ್ಯರು ಹೊರಳಾಡುವುದು ಎಷ್ಟು ಸರಿ ಎಂಬ ವಿಪಕ್ಷದ ವಾದಕ್ಕೆ ನಾವೂ ದನಿಗೂಡಿಸಿದ್ದೆವು. ಪರ-ವಿರುದ್ಧ ಪ್ರತಿಭಟನೆಗಳು ನಡೆದು ಮಡೆಸ್ನಾನ ನಿಷೇಧಿಸಬೇಕೆಂಬ ವಾದಕ್ಕೆ ಬಲ ಬಂತು. ಇನ್ನೇನು ಎಂಜೆಲೆಲೆಯ ಮೇಲುರುಳುವ ಸಂಪ್ರದಾಯ ಕೈಬಿಡಬೇಕೆಂಬ ನಿರ್ಧಾರ ತೆಗೆದುಕೊಳ್ಳುತ್ತಲೇ ಒಂದಷ್ಟು ಜನ ಭಾವುಕ ಭಕ್ತರು ತಮ್ಮ ಮಗುವಿಗೆ ಬಾಯಿ ಬರಲಿಲ್ಲವೆಂದೋ, ದೃಷ್ಟಿಮಾಂದ್ಯವೆಂದೋ, ಅದು ಸರಿಯಾದರೆ ಕುಕ್ಕೆಗೆ ಮಡೆಸ್ನಾನ ಮಾಡಿಸುವುದಾಗಿ ಹರಕೆ ಹೊತ್ತಿದ್ದೇವೆ, ಹರಕೆ ತೀರಿಸದಿದ್ದರೆ ಮುಂದಾಗುವ ಅನಾಹುತಕ್ಕೆ ಯಾರು ಹೊಣೆ ಎಂದು ಬೀದಿಗಿಳಿದು ಸರಕಾರವನ್ನೇ ತರಾಟೆಗೆ ತೆಗೆದುಕೊಂಡಿದ್ದರು. ಒಂದೆಡೆ ಭಾವುಕ ಭಕ್ತರ ಧಾರ್ಮಿಕ ನಂಬಿಕೆ, ಮತ್ತೂಂದೆಡೆ ಆಧುನಿಕ ಯುಗದಲ್ಲಿ ನಂಬಿಕೆಗಳನ್ನು ವೈಭವೀಕರಿಸುವ ಆಳುವ ಸರಕಾರ ಮೂಢನಂಬಿಕೆಗಳಿಗೆ ಪ್ರೋತ್ಸಾಹ ಕೊಡುತ್ತಿದೆ ಎಂಬ ಅಪವಾದ. ಆ ಹೊತ್ತಿನಲ್ಲಿ ಕಾಲಚಕ್ರ ಉರುಳಿ ನಾನು ಮಂತ್ರಿಯಾದೆ. ಸಮಸ್ಯೆ ಅತಿರೇಕಕ್ಕೇರುತ್ತಲೇ ಪೇಜಾವರ ಶ್ರೀಗಳು ಕೊಟ್ಟ ಸಲಹೆ “ಮಡೆಸ್ನಾನ ಬೇಡ. ಆದರೆ ನಂಬಿಕೆಗಳಿಗೆ ತೊಂದರೆಯಾಗದಂತೆ ದೇವರಿಗೆ ಎಡೆ ಬಡಿಸಿ ಎಡೆಸ್ನಾನವಾಗಿ ಆಚರಿಸೋಣ’ ಎಂಬುದಾಗಿತ್ತು.
ಸರಕಾರದ ಅಡ್ವೋಕೇಟ್ ಜನರಲ್ ಮೂಲಕ ಹೈಕೋರ್ಟ್‌ಗೆ ಪೇಜಾವರರ ಪ್ರಸ್ತಾವನೆ ಉಲ್ಲೇಖಸಿದ ಪ್ರಕರಣವನ್ನು ಸಲ್ಲಿಸಿದೆವು. ಘನವೆತ್ತ ನ್ಯಾಯಾಲಯ ನಂಬಿಕೆಯ ಆಧಾರದಲ್ಲಿ ಬದುಕುವ ಸಮಾಜಕ್ಕೆ ಪ್ರಸ್ತುತ ಕಾಲಘಟ್ಟದಲ್ಲಿ ಸರಕಾರ ನೀಡಿದ ಬದಲಾವಣೆಯ ಸ್ವರೂಪ ಎತ್ತಿಹಿಡಿಯುವುದಾಗಿ ಹೇಳಿತು. ಸಮಸ್ಯೆಯ ಪರಿಹಾರದ ಹಿಂದೆ ಪೇಜಾವರ ಶ್ರೀಗಳ ಸುದೀರ್ಘ ಧಾರ್ಮಿಕ ಜೀವನದ ಅನುಭವವಿತ್ತು.
ಮೊನ್ನೆ, ಕೃಷ್ಣ ಮಠದಲ್ಲಿ ನಡೆದ ಇಫ್ತಾರ್ ಕೂಟ ಹಾಗೂ ನಮಾಝ್ ಒಂದರ್ಥದಲ್ಲಿ ಸರಳವೆಂದುಕೊಂಡರೂ; ಸಮರ್ಥಿಸುವವರೂ ವಿರೋಧಿಸುವವರೂ ಸಮಾನ ಸಂಖ್ಯೆಯಲ್ಲಿ ಇರುವುದರಿಂದ ಟೀಕೆ, ಟಿಪ್ಪಣಿ, ಸಮರ್ಥನೆ, ವಾಗ್ಧಂಡನೆಗಳ ಮಹಾಪೂರವೇ ಹರಿದಿದೆ. ಆಗಲೂ ಈ ಶ್ರೀಕೃಷ್ಣನ ಆರಾಧಕ ಹೆಂಗರುಳ ಯತಿಶ್ರೇಷ್ಠರು ಯಾವ ಆತಂಕವೂ ಇಲ್ಲದೆ ನಿರಮ್ಮಳವಾಗಿ ಧ್ಯಾನ ಮಾಡುವುದು ಕಂಡೆ. ಪೇಜಾವರ ಶ್ರೀಗಳ ಜನಪರ ಧ್ವನಿಗಳೆಲ್ಲ ಸಮಾಜದಲ್ಲಿ ಸಂಘರ್ಷವನ್ನು ಉಂಟು ಮಾಡಿದವು. ಅವರು ದಲಿತರ ಕೇರಿ ಪ್ರವೇಶಿಸಿದಾಗ ಸಂಪ್ರದಾಯವಾದಿಗಳು ವಿರೋಧಿಸಿದರು, ಹೊಸ ಚಿಂತಕರು ಸಮರ್ಥಿಸಿದರು; ಸಮುದ್ರೋಲ್ಲಂಘನ ಮಾಡಿದ ಸ್ವಾಮಿಗಳು ಶ್ರೀಕೃಷ್ಣ ಪೂಜೆ ತ್ಯಜಿಸಬೇಕೆಂದಾಗ ಚಿಂತಕರು ವಿರೋಧಿಸಿದರು, ಸಂಪ್ರದಾಯವಾದಿಗಳು ಸಮರ್ಥಿಸಿದರು; ಮತಾಂತರ ವಿರೋಧಿಸಿದಾಗ ಹಿಂದೂವಾದಿಗಳು ಹೊಗಳಿದರು, ಜಾತ್ಯತೀತರು ಟೀಕಿಸಿದರು; ಗೋಹತ್ಯೆ ವಿರೋಧಿಸಿ ಉಪವಾಸಕ್ಕೆ ಕುಳಿತಾಗ ಕೆಲವರು ಕೋಮುವಾದಿ ಎಂದು ಆರ್ಭಟಿಸಿದರೆ ಉಳಿದವರು ಗೋ ಸಂರಕ್ಷಕ ಸ್ವಾಮೀಜಿ ಎಂದು ಹೊಗಳಿದರು. ಮೊನ್ನೆ ಮೊನ್ನೆ ನಡೆದ ಪರ್ಯಾಯ ಪೀಠಾರೋಹಣದ ಸಮಾರಂಭದಲ್ಲಿ ಅಧಿಕಾರದಲ್ಲಿದ್ದ ಮಂತ್ರಿಗಳು ಅದ್ಯಾಕೋ ಸ್ವಾಮೀಜಿಯವರು ಹಿಂದುತ್ವದ ಹೆಸರಲ್ಲಿ ಬಿಜೆಪಿಯ ಕಡೆ ವಾಲುತ್ತಾರೆ ಎಂದು ಕುಟುಕಿದಾಗ ಸಿಡಿದೆದ್ದ ಪೇಜಾವರ ಶ್ರೀಗಳು, ಇಂದಿರಾ ಗಾಂಧಿಯವರು ತನ್ನ ಬಳಿ ಬಂದಾಗ ತಾನಾಡಿದ ಮಾತು ನೆನಪಿಸಿಕೊಂಡು, ತನ್ನ ವಿಚಾರಗಳಲ್ಲಿ ಇಂದಿರಾ ತೃಪ್ತರಾಗಿದ್ದರು, ವಿ. ಪಿ. ಸಿಂಗ್ ಕೂಡ ರಾಮಜನ್ಮಭೂಮಿ ವಿಚಾರಗಳು ಸೇರಿದಂತೆ ಅಸ್ಪೃಶ್ಯತೆಯ ನಿವಾರಣೆಯ ಬಗ್ಗೆ ತನ್ನ ನಿಲುವನ್ನು ತಾಳ್ಮೆಯಿಂದ ಕೇಳಿದ್ದರು, ಅದೇ ಮಾದರಿಯಲ್ಲಿ ಅಟಲ್, ಆಡ್ವಾಣಿಯವರು ಆತ್ಮೀಯರು; ಎಂದೆಂದೂ ಸರ್ವ ರಾಜಕೀಯ ಪಕ್ಷಗಳು ತನಗೆ ಸಮಾನ. ಆದರೆ ತಾನು ನಂಬಿದ ವಿಚಾರಗಳಿಗೆ ಮಾತ್ರ ತಾನು ಬದ್ಧ ಎಂದು ಬಿರು ನುಡಿಗಳನ್ನಾಡಿದರು.
ಒಟ್ಟಾರೆ ಪೇಜಾವರ ಶ್ರೀಗಳ ಮಾತು, ನಡತೆ, ರೀತಿ ರಿವಾಜುಗಳಲ್ಲಿ ದ್ರೋಣಾಚಾರ್ಯರ ಅಸಹಾಯ ಕರ್ತವ್ಯ ನಿಷ್ಠೆಯ ನಡುವೆಯೂ ಏಕಲವ್ಯನಿಗೆ ವಿದ್ಯೆ ನೀಡಿಯೇ ಸಿದ್ದ ಎಂಬ ಕಾರುಣ್ಯಪೂರ್ಣ ಹೃದಯ ಶ್ರೀಮಂತಿಕೆಯನ್ನು ಮರೆಮಾಚಲು ಸಾಧ್ಯವಿಲ್ಲ. ಆದಾಗ್ಯೂ ಇಂದಿನ ಗುಡುಗು ಸಿಡಿಲುಗಳನ್ನು ಎದುರಿಸಲು ಸ್ವಾಮೀಜಿಯವರು ಪಡೆದಿರುವ ಮಾನಸಿಕ ಶಕ್ತಿಯೇ ಅಭೇದ್ಯ. ನಿನ್ನೆ ಮೊನ್ನೆಯವರೆಗೂ ಶ್ರೀಗಳನ್ನು ನಿಂದಿಸುತ್ತಿದ್ದ ಬಂಡಾಯ- ಪ್ರಗತಿಪರರು ಶ್ರೀಕೃಷ್ಣ ಮಠದಲ್ಲಿ ಇಫ್ತಾರ್ ಕೂಟ ಏರ್ಪಡಿಸಿದ್ದಕ್ಕಾಗಿ ಸ್ವಾಮೀಜಿಯನ್ನು ಬೆಂಬಲಿಸಿ ಕೊಡುತ್ತಿರುವ ಹೇಳಿಕೆ, ಖುದ್ದು ಭೇಟಿಯಾಗಿ ಮಾಡುವ ಅಭಿನಂದನೆ; ಇದರ ಜತೆಗೇ ವಿರುದ್ಧ ನಿಲುವಿನ ಪ್ರಖರವಾದಿಗಳ ಗರ್ಜನೆ, ಅವುಗಳೊಂದಿಗೆ ನಿತ್ಯ ಸುದ್ದಿಗಾಗಿ ಸುತ್ತುವ ಮಾಧ್ಯಮಗಳು- ಎಲ್ಲರನ್ನೂ ಮತ್ತು ಎಲ್ಲವನ್ನೂ ಈ 86ರ ಯತಿವರ್ಯ ಮೃದು ಮಾತುಗಳಲ್ಲಿ ನಿಭಾಯಿಸುವ ರೀತಿ ಮಾತ್ರ ವಿವರಿಸಲಸಾಧ್ಯ.
ಪೂಜ್ಯರ ಕುಶಲ ವಿಚಾರಿಸುತ್ತಲೇ “ಆದದ್ದೆಲ್ಲ ಆಗಿ ಹೋಯಿತು, ಜಾರಿ ಬಿದ್ದು ಭುಜಕ್ಕಾದ ನೋವು ಸೇರಿದಂತೆ ತಮ್ಮ ಆರೋಗ್ಯದ ಬಗ್ಗೆ ನನ್ನ ಹಿರಿಯರು ಕೇಳಿದ್ದಾರೆ’ ಎಂದೆ. ಹಾಲುಗಲ್ಲದ ಹಸುಳೆಯಾಗಿರುವಾಗಲೇ ಸನ್ಯಾಸ ಸ್ವೀಕರಿಸಿ ಎಂಟು ದಶಕಗಳ ಕಾಲ ಹಿಂದುತ್ವವೂ ಸೇರಿ ಸಮಾಜದ ಒಳಿತಿಗಾಗಿ ತನ್ನ ಸ್ವಂತದ್ದೆಲ್ಲವನ್ನೂ ಮರೆತು ಸೇವೆಯೆಂಬ ಯಜ್ಞದಲ್ಲಿ ಸಮಿಧೆಯಂತೆ ಉರಿದೇ ಉರಿಯುತ್ತಿರುವ ವಯೋವೃದ್ಧ ಪೇಜಾವರ ಶ್ರೀಗಳು ಕಣ್ಣರಳಿಸಿ ನಗುತಾ “ಶ್ರೀಕೃಷ್ಣ ನಮ್ಮೆಲ್ಲರನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುತ್ತಾನೆ’ ಎಂದರು. ಸನ್ಯಾಸಿಯಾದರೂ ಶ್ರೀಸಾಮಾನ್ಯನ ಸಖ ಪೇಜಾವರ ಶ್ರೀಗಳ ಭುಜದ ಗಾಯ ಕೆಂಪಾಗಿತ್ತು; ಅವರ ಹೃದಯದ ನೋವಿನಂತೆ.
– ಕೋಟ ಶ್ರೀನಿವಾಸ ಪೂಜಾರಿ ವಿಧಾನ ಪರಿಷತ್ ಸದಸ್ಯರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.