ಬ್ಯಾಂಕಿಗೆ ಕನ್ನ ಕೊರೆದ ಎಲ್‌ಯುಟಿ
Team Udayavani, Feb 22, 2018, 6:00 AM IST
ನೇರಾ ನೇರವಾಗಿ ಈ ಬ್ಯಾಂಕಿನಲ್ಲಿ ಠೇವಣಿ ಹೂಡಿದವರ ಠೇವಣಿ ನಷ್ಟವಾಗಲಾರದು. ಅವರ ದುಡ್ಡು ಅವರಿಗೆ ವಾಪಾಸು ಸಿಕ್ಕಿಯೇ ಸಿಗುತ್ತದೆ. ಒಂದು ದೊಡ್ಡ ಸೈಜಿನ ಸರಕಾರಿ ಬ್ಯಾಂಕಿನಲ್ಲಿ ಠೇವಣಿ ಹೂಡುವುದರಲ್ಲಿ ಇದೇ ಮುಖ್ಯ ಲಾಭ.
ಕಳೆದ ಕೆಲವು ದಿನಗಳಿಂದ ಟಿವಿ ಸೀರಿಯಲ್‌ನಂತೆ ಹರಿದು ಬರುತ್ತಿರುವ ಪಂಜಾಬ್ ನ್ಯಾಶನಲ್ ಬ್ಯಾಂಕ್ ಹಗರಣ ಎಂಥವರನ್ನೂ ಅಚ್ಚರಿಗೆ ಈಡು ಮಾಡಿದೆ. ದೇಶದ ಅತಿದೊಡ್ಡ ಸರಕಾರಿ ಬ್ಯಾಂಕುಗಳಲ್ಲಿ ಒಂದಾದ ಈ ಪಂಜಾಬ್ ನ್ಯಾಶನಲ್ ಬ್ಯಾಂಕ್‌ನಲ್ಲಿ ನಡೆದಿರುವ ರೂ. 11,400 ಕೋಟಿಯ ಹಗರಣ ಇಡೀ ದೇಶವನ್ನೇ ನಡುಗಿಸಿದೆ. ಜನ ಸಾಮಾನ್ಯರ ಬೆವರಿನ ದುಡ್ಡು ಯಾವ ರೀತಿಯಲ್ಲಿ ಗುಳುಂ ಆಗುತ್ತಿದೆ ಎನ್ನುವುದನ್ನು ಕಂಡು ಜನ ದಂಗಾಗಿದ್ದಾರೆ. ಹಾಗಾದರೆ ಬ್ಯಾಂಕಿನಲ್ಲಿ ಇಟ್ಟ ನಮ್ಮ ದುಡ್ಡಿಗೆ ಭದ್ರತೆಯೇ ಇಲ್ಲವೇ? ಯಃಕಶ್ಚಿತ್ ಓರ್ವ ಬಾಂಜೆ ಮತ್ತವನ ಮಾಮಾಶ್ರೀ ಸೇರಿಕೊಂಡು ಆಡುವ ಶಕುನಿಯಾಟಕ್ಕೆ ನಮ್ಮ ನಿಮ್ಮ ದುಡ್ಡು ಬಲಿಯಾಗಬೇಕೇ? ನೀರವ್ ಮೋದಿ ಮತ್ತು ಅವನ ಮಾವ ಚೋಕ್ಸಿ ಸೇರಿ ರಚಿಸಿದರು ಎನ್ನಲಾದ ಈ ಷಡ್ಯಂತ್ರದ ಮೂಲ ನಕ್ಷೆಯಾದರೂ ಏನು? ಇದು ನಡೆದ ಬಗೆ ಹೇಗೆ? ನಾವೆಲ್ಲರೂ ಭದ್ರವೆಂದು ನಂಬಿದಂತಹ ಬ್ಯಾಂಕಿಂಗ್ ವ್ಯವಸ್ಥೆಯನ್ನು ಮೀರಿ ಇಷ್ಟೊಂದು ದುಡ್ಡನ್ನು ಹೊರ ಹಾಯಿಸಿದ್ದಾದರೂ ಹೇಗೆ? ಇತ್ಯಾದಿ ಹತ್ತು ಹಲವು ಪ್ರಶ್ನೆಗಳು ಜನಸಾಮಾನ್ಯರನ್ನು ಕಾಡುತ್ತಿದೆ.
ಎಲ್‌ಯುಟಿ ಎಂದರೇನು?
ಏನಿದು ಎಲ್‌ಯುಟಿ? ಇದು ಎಲ್ಲರೂ ಕೇಳುವ ಪ್ರಶ್ನೆ ಮತ್ತು ಹೇಗೆ ಅದು ಈ ಗುಳುಂ ಎಪಿಸೋಡಿನಲ್ಲಿ ಬಳಸಲ್ಪಟ್ಟಿದೆ ಎನ್ನುವುದು ಅದೇ ಪ್ರಶ್ನೆಯ ಎರಡನೆಯ ಭಾಗ. ಎಲ್‌ಯುಟಿ ಎಂದರೆ ಲೆಟರ್ ಆಫ್ ಅಂಡರ್‌ಟೇಕಿಂಗ್ ಮತ್ತದು ಲೂಟ್ ಎಂಬ ಹಿಂದಿ ಪದದೊಂದಿಗೆ ಪ್ರಾಸ ಹೊಂದಿರುವುದು ಕೇವಲ ಕಾಕತಾಳೀಯ. ಇದು ಯಾವುದೇ ಬ್ಯಾಂಕು ಅಡಮಾನ ಇಟ್ಟುಕೊಂಡು ತನ್ನ ಗ್ರಾಹಕನ ಪರವಾಗಿ ನೀಡುವ ಗ್ಯಾರಂಟಿ. ಇದನ್ನು ಬ್ಯಾಂಕ್ ಗ್ಯಾರಂಟಿ ಎಂದೂ ಕರೆಯಬಹುದು. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದು ಎಲ್‌ಯುಟಿ ನಾಮದಿಂದಲೇ ಬಳಸಲ್ಪಡುತ್ತದೆ ಮತ್ತು ಇವತ್ತು, ಈ ಸಂದರ್ಭದಲ್ಲಿ “ಎಲ್‌ಯುಟಿ ನಾಮ’ ಎಂಬ ಪದ ಬಳಕೆ ಕಾಕತಾಳೀಯವಲ್ಲ; ಉದ್ದೇಶಪೂರ್ವಕ!
ಒಬ್ಟಾತ ಬಿಸಿನೆಸ್‌ಮ್ಯಾನ್ ವಜ್ರವನ್ನು ಕಟಿಂಗ್ ಮತ್ತು ಪಾಲಿಶಿಂಗ್ ಮಾಡಲು ಆಫ್ರಿಕಾದಿಂದ ಆಮದು ಮಾಡುತ್ತಾನೆ ಎಂದಿಟ್ಟುಕೊಳ್ಳಿ. ಆವಾಗ ಈ ಆಮದುದಾರ ರಫ್ತುದಾರನಿಗೆ ಹೇಗೆ ದುಡ್ಡು ಪಾವತಿ ಮಾಡುತ್ತಾನೆ ಎನ್ನುವುದು ಮುಖ್ಯವಾಗುತ್ತದೆ. ಸಾಮಾನ್ಯವಾಗಿ ಯಾವುದೇ ಉದ್ಯಮ ರೆಡಿ ಕ್ಯಾಶ್ ಇಟ್ಟುಕೊಂಡು ನಡೆಯುವುದಿಲ್ಲ, ಎಲ್ಲವೂ ಬ್ಯಾಂಕ್ ಲೋನ್ ಮುಖಾಂತರವೇ ನಡೆಯುತ್ತದೆ. ಇದು ಸಾಮಾನ್ಯ ಪದ್ಧತಿ. ಇಲ್ಲಿ ಆಮದುದಾರ ರಫ್ತುದಾರನ ಸನಿಹದ ಬ್ಯಾಂಕೊಂದರಿಂದ ರಫ್ತುದಾರನಿಗೆ ದುಡ್ಡು ಪಾವತಿಯಾಗುವಂತೆ ನೋಡಿಕೊಳ್ಳುತ್ತಾನೆ. ಬ್ಯಾಂಕು ದುಡ್ಡು ಕೊಟ್ಟು ಅಂತಹ ದುಡ್ಡು ಆಮದುದಾರನ ಖಾತೆಯಲ್ಲಿ ಸಾಲ ಎಂದು ನಮೂದಿಸುತ್ತದೆ. ಆ ದುಡ್ಡನ್ನು ಬಡ್ಡಿ ಸಹಿತ ಭವಿಷ್ಯತ್ತಿನಲ್ಲಿ ಮರು ಪಾವತಿ ಮಾಡುವ ಜವಾಬ್ದಾರಿ ಆಮದುದಾರನದ್ದಾಗಿರುತ್ತದೆ. ಆದರೆ ಯಾವುದೋ ದೂರದ ಆಫ್ರಿಕಾ ದೇಶದ ಬ್ಯಾಂಕ್ ಶಾಖೆಯೊಂದು ಈ ರೀತಿ ಸಾಲದ ದುಡ್ಡು ಯಾವ ಆಧಾರದಲ್ಲಿ ಪಾವತಿ ಮಾಡಬೇಕು? ಈ ಸಾಲಕ್ಕೆ ಗ್ಯಾರಂಟಿ ಬೇಡವೇ? ಈವಾಗ ಆಮದುದಾರ ಬೇರೊಂದು ಸ್ಥಳೀಯ ಬ್ಯಾಂಕು ತನ್ನ ಪರವಾಗಿ ನೀಡಿದ ಬ್ಯಾಂಕ್ ಗ್ಯಾರಂಟಿ ಅಥವಾ ಲೆಟರ್ ಆಫ್ ಅಂಡರ್ ಟೇಕಿಂಗ್ ಅನ್ನು ಸಾದರಪಡಿಸುತ್ತದೆ. ಸ್ಥಳೀಯ ಬ್ಯಾಂಕ್ ಸ್ವಲ್ಪ ಕಮಿಶನ್ ವಿಧಿಸಿ ಈ ಕೆಲಸವನ್ನು ಒಂದು ಕಸುಬಾಗಿ ನಿರ್ವಹಿಸುತ್ತದೆ.
ಎಲ್‌ಯುಟಿ ಕಮಿಶನ್ ಕೂಡಾ ಬ್ಯಾಂಕುಗಳ ಆದಾಯ ಮೂಲಗಳಲ್ಲಿ ಒಂದು. ಅಂತಹ ಎಲ್‌ಯುಟಿಯ ಆಧಾರದ ಮೇಲೆ ವಿದೇಶೀ ಬ್ಯಾಂಕ್ ಅಥವಾ ಭಾರತದ ಬ್ಯಾಂಕೊಂದರ ವಿದೇಶೀ ಶಾಖೆ ರಫ್ತುದಾರನಿಗೆ ದುಡ್ಡು ಪಾವತಿಸಿ ಅದನ್ನು ಆಮದುದಾರನ ಖಾತೆಯಲ್ಲಿ ಸಾಲ ಎಂದು ನಮೂದಿಸುತ್ತದೆ. ಯಾವನೋ ಒಬ್ಬನಿಗೆ ಸಾಲ ಕೊಡುವುದು ಅತಿ ರಿಸ್ಕಿಯಾದ್ದರಿಂದ ಒಂದು ಪ್ರಸಿದ್ಧ ಬ್ಯಾಂಕಿನ ಗ್ಯಾರಂಟಿ ಬಲದಲ್ಲಿ ಮಾತ್ರವೇ ಆ ಬ್ಯಾಂಕಿಗೆ ಸಾಲ ನೀಡಲು ಸಾಧ್ಯವಾಗುತ್ತದೆ. ಆದರೆ ಇಲ್ಲಿ ಗಮನದಲ್ಲಿ ಇಟ್ಟುಕೊಳ್ಳಬೇಕಾದ ಅಂಶವೆಂದರೆ, ಈ ಎಲ್‌ಯುಟಿಯನ್ನು ಸ್ಥಳೀಯ ಬ್ಯಾಂಕ್ ಆಸ್ತಿಯನ್ನು ಅಡವಿರಿಕೊಂಡು ಅಥವಾ ಇನ್ನಾವುದೇ ಭದ್ರತೆಯ ಆಧಾರದ ಮೇಲೆ ಮಾತ್ರವೇ ನೀಡುತ್ತದೆ. ಯಾಕೆಂದರೆ ಆಮದುದಾರ ಸಾಲ ಪಾವತಿ ಮಾಡದಿದ್ದಲ್ಲಿ ಆತನ ಪರವಾಗಿ ಈ ಎಲ್‌ಯುಟಿ ನೀಡಿದ ಬ್ಯಾಂಕು ಮರುಪಾವತಿ ಮಾಡಬೇಕಾ ಗುತ್ತದೆ. ಎಲ್‌ಯುಟಿ ನೀಡುವಾಗ ಅದನ್ನು ಕೋರ್ ಬ್ಯಾಂಕಿಂಗ್ ತಂತ್ರಾಂಶದಲ್ಲಿ ನಮೂದಿಸಿ ಆ ಮಾಹಿತಿ ಎಲ್ಲರಿಗೂ ಲಭ್ಯ ವಾಗುವಂತೆ ಒಂದು ಪಾರದರ್ಶಕ ರೀತಿಯಲ್ಲಿ ನೀಡಲಾಗುತ್ತದೆ. ಇದು ಪದ್ಧತಿ.
ಎಲ್‌ಯುಟಿ ಲೂಟ್ ಆದ ಬಗೆ
ಆದರೆ ಈ ಪಿಎನ್‌ಬಿ ಬ್ಯಾಂಕ್ ಹಗರಣದಲ್ಲಿ ಏನಾಗಿದೆ ಎಂದರೆ ಆರೋಪಿಗಳು ಯಾವುದೇ ಸೊತ್ತು ಅಡವಿಡದೆ ಸುಖಾಸುಮ್ಮನೆ ಎಲ್‌ಯುಟಿ ಪತ್ರಗಳನ್ನು ಪಿಎನ್‌ಬಿ ಬ್ಯಾಂಕಿನ ಒಂದು ಶಾಖೆ ಯಿಂದ ಪಡಕೊಂಡಿದ್ದಾರಂತೆ. ಹಾಗೆಯೇ ಅದರ ಉಲ್ಲೇಖ ಬ್ಯಾಂಕಿನ ಯಾವುದೇ ಕೋರ್ ಬ್ಯಾಂಕಿಂಗ್ ತಂತ್ರಾಂಶದಲ್ಲಿ ಲಭ್ಯವಿಲ್ಲವಂತೆ. ಅಂತಹ ಎಲ್‌ಯುಟಿಗಳನ್ನು ಕಾನೂನು ಬಾಹಿರವಾಗಿ ಬ್ಯಾಂಕ್ ಉದ್ಯೋಗಿಗಳ ಕೈವಾಡವಿಲ್ಲದೆ ಪಡೆಯಲು ಅಸಾಧ್ಯ ಎಂದು ನಂಬಲಾಗಿದೆ.
ಈ ರೀತಿ ಬ್ಯಾಂಕ್ ಉದ್ಯೋಗಿಗಳಿಗೆ ಆಮಿಷ ಒಡ್ಡಿ ಪಡಕೊಂಡ ಎಲ್‌ಯುಟಿ ಪತ್ರಗಳನ್ನು ನೋಡಿ ಕೋಟ್ಯಂತರ ದುಡ್ಡನ್ನು ಡೈಮಂಡ್ ರಫ್ತುದಾರರಿಗೆ ವಿದೇಶಿ ಬ್ಯಾಂಕುಗಳು ನೀಡಿವೆ ಮತ್ತು ಆ ಮೊತ್ತವನ್ನು ಆಮದು ಮಾಡಿದ ಆರೋಪಿಗಳ ಖಾತೆಯಲ್ಲಿ ಸಾಲವೆಂದು ತೋರಿಸ ಲಾಗಿದೆ. ಅಷ್ಟು ಮಾತ್ರವಲ್ಲದೆ ಸಾಲದ ಮರುಪಾವತಿ ಬಂದಂತೆ ಅಷ್ಟೂ ಸಾಲದ ದುಡ್ಡು ಪಾವತಿಸದೆ ಅವೆಲ್ಲವೂ ಕಾಲ ಕ್ರಮೇಣ ಎಲ್‌ಯುಟಿ ನೀಡಿದ ಪಿಎನ್‌ಬಿ ಬ್ಯಾಂಕಿನ ತಲೆ ಮೇಲೆ ಬರುವಂತೆ ನೋಡಿ ಕೊಳ್ಳಲಾಗಿದೆ. ಈ ರೀತಿ ಒಂದು ಸಿದ್ಧ ವ್ಯವಸ್ಥೆಯನ್ನು ಸರಿಯಾಗಿ ಬಳಸದೆ ಅದೇ ವ್ಯವಸ್ಥೆಯ ಭಾಗವಾದ ಅಧಿಕಾರಿಗಳ ಸಹಭಾಗಿತ್ವ ದೊಂದಿಗೆ ತಪ್ಪಾಗಿ ಬಳಸಿಕೊಂಡು ಒಂದು ಕ್ರಿಮಿನಲ್ ಕೃತ್ಯವನ್ನು ಎಸಗಲಾಗಿದೆ. ಇದು ಎಲ್‌ಯುಟಿ “ಲೂಟ್’ ಆದ ಪರಿ.
ಸದ್ಯದ ಪರಿಸ್ಥಿತಿ
ಸದ್ಯಕ್ಕೆ ಈ ಕ್ರಿಮಿನಲ್ ಕೃತ್ಯ ಬೆಳಕಿಗೆ ಬಂದಿದೆ. ಮುಖ್ಯ ಆರೋಪಿ ದೇಶ ಬಿಟ್ಟು ಓಡಿ ಹೋಗಿದ್ದಾನೆ. ಬ್ಯಾಂಕ್ ಸಿಬ್ಬಂದಿಗಳ ಸಹಿತ ಕೆಲ ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ, ವಿಚಾರಣೆ ನಡೆಯುತ್ತಿದೆ. ಒಟ್ಟು ಸಾಲದ ಮೊತ್ತ ರೂ. 11,400 ಕೋಟಿಯು ಬಹುತೇಕ ಬ್ಯಾಂಕುಗಳಿಗೆ ವಾಪಾಸು ಬರುವ ಲಕ್ಷಣ ಇಲ್ಲವೇ ಇಲ್ಲ ಎನ್ನಬ ಹುದು. ಬ್ಯಾಂಕಿಗೆ ಸಂದಾಯವಾಗಬೇಕಾದ ದುಡ್ಡು ಎಲ್ಲೋ ಮಂಗಮಾಯವಾಗಿದೆ. ಎಲ್‌ಯುಟಿ ಕೊಟ್ಟ ಪಿಎನ್‌ಬಿ ಬ್ಯಾಂಕ್ ಈಗ ಉತ್ತರದಾಯಿ ಸ್ಥಾನಕ್ಕೆ ಬಂದು ನಿಂತಿದೆ.
ತಾನಲ್ಲ, ತನ್ನ ಸಿಬ್ಬಂದಿಗಳು ಮಾಡಿದ ಮೋಸ ಎಂದು ಬ್ಯಾಂಕು ಕೈ ತೊಳೆದು ಕೊಳ್ಳುವಂತಿಲ್ಲ. ಬ್ಯಾಂಕ್ ಈ ಮೊತ್ತವನ್ನು ವಿದೇಶೀ ಬ್ಯಾಂಕುಗಳಿಗೆ ಭರಿಸಲೇ ಬೇಕು. ಬ್ಯಾಂಕ್ ಬ್ಯಾಲನ್ಸ್‌ಶೀಟಿನಲ್ಲಿ ಈ ಮೊತ್ತವು ಹಂತ ಹಂತವಾಗಿ ಕಾಲಕ್ರಮೇಣ ಬರಲಿದೆ. ಈ ನಷ್ಟವನ್ನು ತುಂಬು ವವರಾರು? ಪಿಎನ್‌ಬಿ ಬ್ಯಾಂಕ್ ತಲೆ ಮೇಲೆ ಬರುವ ಈ ನಷ್ಟ ವನ್ನು ಕಾನೂನಾತ್ಮಕವಾಗಿ ಅವರು ಆರೋಪಿಗಳ ಸೊತ್ತಿನಿಂದ (ಇದ್ದಲ್ಲಿ, ಸಿಕ್ಕಲ್ಲಿ) ಆ ಬಳಿಕ ವಸೂಲಿ ಮಾಡ ಬಹುದು. ಅಲ್ಪ ಸ್ವಲ್ಪ ಮೊತ್ತ ಕಡಲೆಕಾಯಿ ಪ್ರಮಾಣದಲ್ಲಿ ಇನ್ಶೂರೆನ್ಸ್ ಕಂಪೆನಿಯಿಂದ ಸಿಗಲೂಬಹುದು. ಆದರೆ ಸಂಪೂರ್ಣ ಮೊತ್ತ ಪಿಎನ್‌ಬಿ ಬ್ಯಾಂಕ್ ಮಾಲೀಕರ ತಲೆಯ ಮೇಲೇನೇ. ಅದರ ಮಾಲೀಕರು ಅಂದರೆ ಭಾರತದ ಸರಕಾರ ಮತ್ತು ಅದರ ಶೇರು ಹೊಂದಿರುವ ಭಾರತೀಯ ಜನತೆ. ಶೇರು ಹೊಂದಿರುವ ಜನರು ನೇರವಾಗಿ ಈ ದುಡ್ಡಿನ ತಮ್ಮ ಪಾಲನ್ನು ಕಳಕೊಂಡರೆ ಜನಸಾಮಾನ್ಯರು ಸರಕಾರದ ಈ ನಷ್ಟದ ಹೊರೆಯನ್ನು ಸ್ವಾಭಾವಿಕವಾಗಿ ಅನುಭವಿಸಲಿರುವರು. ಭಾರತದ ಸರಕಾರದ ಮೇಲೆ, ಭಾರತದ ಆರ್ಥಿಕತೆಯ ಮೇಲೆ ಇದೊಂದು ಹೆಚ್ಚುವರಿ ಬಂಡೆಗಲ್ಲು.
ನಂಬುವುದಾದರೂ ಹೇಗೆ?
ಹೀಗಾದ್ರೆ ಹೇಗೆ?… ಇಂಚಾಂಡ ಎಂಚ?… ಈ ರೀತಿ ನಡೆದರೆ ಇನ್ನು ಮುಂದಕ್ಕೆ ಬ್ಯಾಂಕುಗಳನ್ನು ನಂಬುವುದಾದರೂ ಹೇಗೆ ಸ್ವಾಮಿ? ಇದು ಎಲ್ಲರನ್ನೂ ಕಾಡುವ ಪ್ರಶ್ನೆ ಮತ್ತು ಇದೊಂದು ಗಂಭೀರ ಪ್ರಶ್ನೆಯೇ ಸರಿ. ಮೊತ್ತ ಮೊದಲನೆಯದಾಗಿ ಇದು ಬ್ಯಾಂಕ್ ಖಾತೆಗೆ ಒಂದು ನಷ್ಟ. ಇದೀಗ ಎನ್‌ಪಿಎ (ನಾನ್ ಪರ್ಫಾರ್ಮಿಂಗ್ ಅಸೆಟ್) ಅಥವಾ ಸುಸ್ತಿ ಸಾಲವಾಗಿ ನಿಲ್ಲುತ್ತದೆ. ಹೇಳಿ ಕೇಳಿ ಇತರ ಉದ್ಯಮಗಳಂತೆ ಬ್ಯಾಂಕಿಂಗ್ ಕೂಡಾ ಒಂದು ಬಿಸಿನೆಸ್ಸು. ಬಡ್ಡಿ ಸೇರಿ ಅಸಲಿನಿಂದ ಜಾಸ್ತಿ ಬಂದರೆ ಲಾಭ; ಸುಸ್ತಿ ಸಾಲವಾಗಿ ಕಡಿಮೆ ಬಂದರೆ ನಷ್ಟ. ನಷ್ಟವನ್ನು ಕಾನೂನು ರೀತಿಯಲ್ಲಿ ಸಾಲದಾರರ ಜಪ್ತಿ ಮಾಡಿದ ಆಸ್ತಿಯಿಂದ, ತಪ್ಪು ಮಾಡಿ ಸಿಕ್ಕಿ ಬಿದ್ದವರ ಆಸ್ತಿಯಿಂದ ಭಾಗಶಃ ತುಂಬಿಕೊಳ್ಳಬಹುದು. ಸಂಪೂರ್ಣ ರಿಕವರಿ ಸಾಧ್ಯವಾಗ ಲಾರದು. ಉಳಿದ ಮೊತ್ತ ಬ್ಯಾಂಕಿಗೆ ಖೋತಾ.
ಅಂದರೆ ಪಿಎನ್‌ಬಿ ಬ್ಯಾಂಕಿನ ಪಾಲುದಾರರಾದ ಸರಕಾರ ಹಾಗೂ ಶೇರುದಾರರ ಹೂಡಿಕೆಯಲ್ಲಿ ನಷ್ಟ. ಪಿಎನ್‌ಬಿ ಬ್ಯಾಂಕು ಈ ದೇಶದ ಸರಕಾರಿ ಬ್ಯಾಂಕುಗಳಲ್ಲಿ ಎರಡನೆಯ ಅತಿ ದೊಡ್ಡ ಬ್ಯಾಂಕು. ಇತರ ಯಾವುದೇ ಬ್ಯಾಂಕು ಆಗಿದ್ದರೂ ಈ ಹೊತ್ತಿಗೆ ಸಂಪೂರ್ಣ ಮುಳುಗಿಯೇ ಹೋಗುತ್ತಿತ್ತು. ಇಲ್ಲಿ ಹಾಗಾಗಲಾರದು, ಕ್ರಮೇಣ ಬ್ಯಾಂಕು ತನ್ನ ಅನ್ಯ ಲಾಭಗಳಿಂದ ಇದನ್ನು ತುಂಬಿಕೊಂಡು ಮೇಲೆ ಬರಬೇಕು ಅಥವಾ ನಗದಿನ ಅಗತ್ಯ ಬಿದ್ದರೆ ಸರಕಾರ ಹೊಸ ಬಂಡವಾಳ ಹೂಡಿ ಸಹಾಯಕ್ಕೆ ನಿಲ್ಲಬೇಕು. ಸರಕಾರದ ಮೂಲಕ ಜನಸಾಮಾನ್ಯರ ಕರ ತೆತ್ತ ಹಣ ದಿಂದ ಬರುವುದಾದ್ದರಿಂದ ಸರಕಾರದ ನಷ್ಟ ಜನ ಸಾಮಾನ್ಯರ ನಷ್ಟವಾಗುತ್ತದೆ.
ಅದು ಬಿಟ್ಟು, ನೇರಾ ನೇರವಾಗಿ ಈ ಬ್ಯಾಂಕಿನಲ್ಲಿ ಠೇವಣಿ ಹೂಡಿದವರ ಠೇವಣಿ ನಷ್ಟವಾಗಲಾರದು. ಅವರ ದುಡ್ಡು ಅವರಿಗೆ ವಾಪಾಸು ಸಿಕ್ಕಿಯೇ ಸಿಗುತ್ತದೆ. ಒಂದು ದೊಡ್ಡ ಸೈಜಿನ ಸರಕಾರಿ ಬ್ಯಾಂಕಿನಲ್ಲಿ ಠೇವಣಿ ಹೂಡುವುದರಲ್ಲಿ ಇದೇ ಮುಖ್ಯ ಲಾಭ.
ಎರಡನೆಯದಾಗಿ, ಈ ಕೂಡಲೇ ಎಲ್ಲಾ ಬ್ಯಾಂಕುಗಳ ಎಲ್‌ಯುಟಿ ಅಥವಾ ತತ್ಸಮಾನ ಸಾಲದ ಸಂಪೂರ್ಣ ತನಿಖೆ ನಡೆಸ ಬೇಕು. ಈ ರೀತಿಯ ಹಗರಣ ಇನ್ನೆಷ್ಟು ಇದೆಯೋ ಯಾರು ಬಲ್ಲರು?
ಮೂರನೆಯದಾಗಿ, ಈ ರೀತಿಯ ಘೋಟಾಲ ಇನ್ನು ಮುಂದೆ ನಡೆಯದಂತೆ ತಾಂತ್ರಿಕತೆಯನ್ನು ಸುಧಾರಣೆಗೊಳಿಸ ಬೇಕು. ಯಾವ ರೀತಿ ತೆಲಗಿ ಹಗರಣದ ಬಳಿಕ ಠಸ್ಸೆ ಪೇಪರ್ ಪದ್ಧತಿಯಲ್ಲಿ ಸುಧಾರಣೆ ತಂದಿದೆಯೋ ಅದೇ ರೀತಿ ಎಲ್‌ಯುಟಿಗಳು ಇನ್ನು ಮುಂದೆ ಲೂಟ್ ಆಗದ ಹಾಗೆ ಹೊಸ ತಾಂತ್ರಿಕ ಪದ್ಧತಿ ಜಾರಿಗೆ ಬರಬೇಕು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.