ಮಲಯಾಳ ಕಡ್ಡಾಯ, ಎದುರೊಡ್ಡಿದೆ ಅಪಾಯ


Team Udayavani, May 22, 2017, 10:36 PM IST

22-ANKANA-2.jpg

ಕೇರಳದ ಸರಕಾರಿ ಅಧಿಕಾರಿಗಳು ಭಾಷಾ ಅಲ್ಪಸಂಖ್ಯಾತರನ್ನು ದಮನಿಸಲೋಸುಗ ಶ್ರೇಷ್ಠವಾದ ಮಲಯಾಳ ಭಾಷೆಯನ್ನು ಆಯುಧವಾಗಿ ಬಳಸುತ್ತಿರುವುದು ಬೇಸರದ ಸಂಗತಿ. ಆಡಳಿತದಂತೆ ಇನ್ನು ಮುಂದೆ ಶಿಕ್ಷಣದಲ್ಲೂ ಮಲಯಾಳ ಕಡ್ಡಾಯವಾದರೆ, ಅಲ್ಲಿನ ಭಾಷಾ ಅಲ್ಪಸಂಖ್ಯಾತ‌ರ ಸವಲತ್ತುಗಳೂ ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತವೆ.

ಕೇರಳ ಸರಕಾರ ಕಾಸರಗೋಡಿನ ಕನ್ನಡ ಶಾಲೆಗಳಲ್ಲಿ ಮಲಯಾಳ ಕಲಿಕೆಯನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿರುವುದು ಕನ್ನಡಿಗರನ್ನು ಆತಂಕಕ್ಕೀಡಾಗಿಸಿದೆ. ಇದು ಕನ್ನಡ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಮಾತ್ರ ಸಂಬಂಧಿಸಿದ ಸಮಸ್ಯೆಯಲ್ಲ. ಕೇವಲ ಕನ್ನಡ ಭಾಷೆ ಸಂಸ್ಕೃತಿಯ ಉಳಿವಿನ ಪ್ರಶ್ನೆಯೂ ಅಲ್ಲ. ದಕ್ಷಿಣದ ತುಳುನಾಡು ಎಂದು ಕರೆಯಲಾಗುವ ಕಾಸರಗೋಡಿನ ಹಲವು ಕಿರುಭಾಷೆಗಳು, ಮಾತೃಭಾಷೆಗಳು, ಸಾಂಸ್ಕೃತಿಕ ವೈವಿಧ್ಯ ಮೇಲಾಗಿ ಮಣ್ಣಿನ ನುಡಿಯಾದ ತುಳು ಸಂಸ್ಕೃತಿಗೂ ಹೊಡೆತ ನೀಡಲಿದೆ.

ಆಡಳಿತ ಭಾಷೆಯ ಪ್ರಭಾವ:
ಕೇರಳದಲ್ಲಿ ಬಹುಸಂಖಾತರ ಮಾತೃಭಾಷೆಯಾದ ಮಲಯಾಳವನ್ನು ಆಡಳಿತ ಭಾಷೆಯನ್ನಾಗಿ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಮಲಯಾಳಿಗಳಲ್ಲದವರೂ ಇದ್ದಾರೆಂದೂ ಅವರಿಗೆ ತಮ್ಮ ಭಾಷೆ, ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಸಂವಿಧಾನದತ್ತ ಹಕ್ಕಿದೆಯೆಂಬುದನ್ನೂ ಆಳುವವರು ಮರೆತಿದ್ದಾರೆ. ಭಾಷಾ ಅಲ್ಪಸಂಖ್ಯಾಕರ ಹಕ್ಕುಗಳನ್ನು ಕಾಪಾಡಲೋಸುಗ ಅವರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶಗಳಲ್ಲಿ ಅವರ ಮಾತೃಭಾಷೆಯನ್ನೂ ಉಳಿಸಲು ಸರಕಾರ ಕ್ರಮಗಳನ್ನು ಕೈಗೊಳ್ಳಬೇಕು. ಭಾಷೆಗಳನ್ನು ಉಳಿಸುವುದೆಂದರೆ ಭಾಷೆಗೊಂದು ಅಕಾಡೆಮಿಯನ್ನು ಅಥವಾ ಸಂಸ್ಕೃತಿಗೊಂದು ಮ್ಯೂಸಿಯಮ್ಮನ್ನು ಸ್ಥಾಪಿಸಿ ಅದರೊಳಗೆ ಭಾಷೆ ಸಂಸ್ಕೃತಿಗಳನ್ನು ಕೂಡಿಡುವುದೆಂದು ಅರ್ಥವಲ್ಲ. ಜನರು ನಿರ್ಭಯವಾಗಿ, ನಿಸ್ಸಂಕೋಚವಾಗಿ ಕೀಳರಿಮೆಯಿಲ್ಲದೆ ತಮ್ಮ ಮಾತೃಭಾಷೆಯಲ್ಲಿ ವ್ಯವಹರಿಸುವ ವಾತಾವರಣವನ್ನು ಉಳಿಸ ಬೇಕು. ಯಾಕೆಂದರೆ ಭಾಷೆ ಕೇವಲ ಅಕಾಡೆಮಿಕ್‌ ಪಂಡಿತರ ಅಥವಾ ಸಾಹಿತಿಗಳ ಸೊತ್ತಲ್ಲ. ಜನಸಾಮಾನ್ಯರ ಮಧ್ಯೆ ಚಲಾವಣೆಯಲ್ಲಿದ್ದರೆ ಮಾತ್ರ ಭಾಷೆ -ಸಂಸ್ಕೃತಿಗಳು ಉಳಿಯುತ್ತವೆ, ಬೆಳೆಯುತ್ತವೆ.  ಅಲ್ಪಸಂಖ್ಯಾತರ ಭಾಷೆಗಳ ಉಳಿವಿಗಾಗಿ ಆ ಭಾಷೆಗಳನ್ನು ಕೂಡ ಆಯಾ ಪ್ರದೇಶಗಳಲ್ಲಿ ಆಡಳಿತ ಭಾಷೆಯನ್ನಾಗಿ ಬಳಸಬೇಕು. ಸಾರ್ವಜನಿಕ ವ್ಯವಹಾರಗಳಲ್ಲಿ ಅಲ್ಪಸಂಖ್ಯಾತರ ಭಾಷೆಗಳನ್ನೂ ಒಳಪಡಿಸಿ ಅವರಲ್ಲಿ ತಮ್ಮ ಭಾಷೆಯ ಬಗ್ಗೆ ಆತ್ಮವಿಶ್ವಾಸ ಹುಟ್ಟುವಂತೆ ಮಾಡಬೇಕು. ಇದಕ್ಕಾಗಿ ಆದೇಶಗಳನ್ನು ಹೊರಡಿಸಿದರೆ ಸಾಲದು, ಅವುಗಳನ್ನು ಚಾಚೂತಪ್ಪದೆ ಅನುಷ್ಠಾನಗೊಳಿಸುವ ವಿಶಾಲ ಹೃದಯವನ್ನು ಆಳುವವರು ತೋರಬೇಕು. ಶಿಕ್ಷಣ, ಆಡಳಿತ, ಸಾರ್ವಜನಿಕ ವ್ಯವಹಾರ ಇತ್ಯಾದಿ ಯಾವುದೇ ರಂಗಗಳಲ್ಲಿ ಯಾವುದೇ ಭಾಷೆಯನ್ನು ಜನರ ಮೇಲೆ ಬಲವಂತವಾಗಿ ಹೇರುವಂತಿಲ್ಲ. ಆದರೆ ಕೇರಳ ಸರಕಾರಿ ಅಧಿಕಾರಿಗಳು ಭಾಷಾ ಅಲ್ಪಸಂಖ್ಯಾತರನ್ನು ದಮನಿಸಲೋಸುಗ ಶ್ರೇಷ್ಠವಾದ ಮಲಯಾಳ ಭಾಷೆಯನ್ನು ಆಯುಧವಾಗಿ ಬಳಸುತ್ತಿರುವುದು ಬೇಸರದ ಸಂಗತಿ. ಆಡಳಿತದಂತೆ ಇನ್ನು ಮುಂದೆ ಶಿಕ್ಷಣದಲ್ಲೂ ಮಲಯಾಳ ಕಡ್ಡಾಯವಾದರೆ ಯಾವುದೇ ರಂಗಗಳಲ್ಲಿ ಅಲ್ಪಸಂಖ್ಯಾತ ಭಾಷೆಯನ್ನು ಬಳಸುವ ಅವಕಾಶವೇ ಇರುವುದಿಲ್ಲ ಮಾತ್ರವಲ್ಲ, ಭಾಷಾ ಅಲ್ಪಸಂಖ್ಯಾತ‌ರ ಸವಲತ್ತುಗಳೂ ಅಪ್ರಸ್ತುತವಾಗುತ್ತವೆ. ದೈನಂದಿನ ಬದುಕಿನಲ್ಲೂ ಆಡಳಿತಭಾಷೆ -ಸಂಸ್ಕೃತಿಗಳ ಪ್ರಭಾವ ಹೆಚ್ಚಾಗಿ ಅವರ ಸ್ವಂತಿಕೆಯೇ ಮರೆಯಾಗುತ್ತದೆ.

ತೆಂಕಣದ ಮಲಯಾಳಿಗರ ಸ್ವಭಾವ:
ಕಾಸರಗೋಡಿನ ಸ್ಥಳೀಯರಾದ ಕನ್ನಡ, ತುಳು, ಮರಾಠಿ, ಕೊಂಕಣಿ ಮನೆಮಾತಿನವರು, ಹಿಂದೂಗಳಾದ ಮಲಯಾಳ ಮಾತೃಭಾಷಿಕರು, ಬ್ಯಾರಿಗಳು ಮಾಪಿಳ್ಳೆಗಳು ಮೊದಲಾದ ಮುಸಲ್ಮಾನರು, ಕೊಂಕಣಿ ಕ್ರಿಶ್ಚಿಯನ್ನರು ಪರಸ್ಪರ ಭಾಷೆಗಳನ್ನು ಬಳಸುವ ಗೌರವಿಸುವ ತುಳುನಾಡಿನ ಸಂಸ್ಕೃತಿಯನ್ನು ಮೈಗೂಡಿಸಿಕೊಂಡವರು. ಆದುದರಿಂದಲೇ ಈ ನೆಲದಲ್ಲಿ ಬಹುಭಾಷೆ ಗಳು, ಬಹು ಧರ್ಮ ಸಂಸ್ಕೃತಿಗಳು ಉಳಿದು ಬೆಳೆದುಬಂದಿವೆ. ಕನ್ನಡ ಶಾಲೆಗಳು ಪ್ರಭಾವಶಾಲೆಯಾಗಿರುವ ಪ್ರದೇಶಗಳಲ್ಲ ಮಲಯಾಳ ಸಹಿತ ಕಾಸರಗೋಡಿನ ಎಲ್ಲ ಮನೆಮಾತುಗಳೂ ಉಳಿದಿವೆ. ಆದರೆ ತೆಂಕಣದಿಂದ ವಲಸೆ ಬಂದ ಮಲಯಾಳಿಗಳ ವೈಖರಿಯೇ ಬೇರೆ. ಒಂದು ದೃಷ್ಟಿಯಲ್ಲಿ ಅವರ ಭಾಷಾಭಿಮಾ ನವನ್ನು ಮೆಚ್ಚಲೇಬೇಕು. ಸರಕಾರಿ-ಖಾಸಗಿ ಉದ್ಯೋಗಿಗಳಾಗಿ, ಕೃಷಿಕರಾಗಿ ತೆಂಕಣದಿಂದ ವಲಸೆ ಬಂದ, ಬರುತ್ತಿರುವ ಮಲಯಾಳಿಗಳು ಕಾಸರಗೋಡಿನ ಸ್ಥಳೀಯ ಭಾಷೆಗಳನ್ನು ಕಲಿಯುವುದೂ ಇಲ್ಲ, ಮಲಯಾಳವನ್ನು ಬಿಟ್ಟು ಬೇರೆ ಭಾಷೆಗಳಲ್ಲಿ ವ್ಯವಹರಿಸು ವುದೂ ಇಲ್ಲ. ದಾಕ್ಷಿಣ್ಯಪರರೂ ಆದ ಸ್ಥಳೀಯರು ಅವರೊಂದಿಗೆ ಅನಿವಾರ್ಯವಾಗಿ ಮಲಯಾಳದಲ್ಲೇ ವ್ಯವಹರಿ ಸಬೇಕಾಗುತ್ತದೆ. ವಲಸೆ ಬಂದವರಿಗೆ ರಾಜಕೀಯ, ಆಡಳಿತ ಮೊದಲಾದ ಎಲ್ಲ ರೀತಿಯ ಬಲವಿದ್ದು ಸ್ಥಳೀಯ ಭಾಷೆ ಸಂಸ್ಕೃತಿಗಳ ಸ್ಥಾನದಲ್ಲಿ ತಮ್ಮ ಭಾಷೆ ಸಂಸ್ಕೃತಿಗಳನ್ನು ಸ್ಥಾಪಿಸುತ್ತಾರೆ. ವಲಸೆ ಬಂದವರ ನಿಲುವು ನಿಧಾನವಾಗಿ ಸ್ಥಳೀಯ ಮಲಯಾಳಿಗಳನ್ನೂ ಪ್ರಭಾವಿಸುವುದು ಸಹಜ. ಕಾಸರಗೋಡಿನ ಸ್ಥಳೀಯರ ಭಾಷೆ, ಕಲೆ, ಸಂಸ್ಕೃತಿ, ಹಬ್ಬಗಳು, ಆಚರಣೆಗಳು, ದೃಷ್ಟಿಕೋನಗಳು, ಸ್ಥಳನಾಮಗಳು ಮೊದಲಾದವುಗಳಲ್ಲಿ ನಡೆಯುತ್ತಿರುವ ಪಲ್ಲಟವನ್ನು ಈ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳಬೇಕು. ಕಾಸರಗೋಡಿನಲ್ಲಿ ಆಡಳಿತದ ಬಲವಿಲ್ಲದ ಕನ್ನಡ ಭಾಷೆ ಕೇವಲ ಶೈಕ್ಷಣಿಕ ಭಾಷೆಯಾಗಿದ್ದು ಇತರ ಆಡುನುಡಿಗಳನ್ನು, ಕಿರುಭಾಷೆಗಳನ್ನು ಹೊಸಕಿಹಾಕುವ ಸಾಮರ್ಥ್ಯ ಪಡೆದಿಲ್ಲ. ಶೈಕ್ಷಣಿಕವಾಗಿ ಕನ್ನಡದ ಹೆಸರಲ್ಲಿ ಒಗ್ಗೂಡುವ ಸ್ಥಳೀಯರಿಗೆ ಶಿಕ್ಷಣ-ಉದ್ಯೋಗಾವಕಾಶ ವನ್ನು ಪಡೆದೂ ತಮ್ಮ ನುಡಿಗಳನ್ನು ಉಳಿಸುವ ಅವಕಾಶವನ್ನು ನೀಡಿತ್ತು. ಆದರೆ ಶೈಕ್ಷಣಿಕವಾಗಿಯೂ ಕನ್ನಡದ ಪ್ರಭಾವ ಕುಸಿದು ಮಲಯಾಳ ಎಲ್ಲ ರಂಗಗಳಲ್ಲೂ ಪ್ರಭಾವಶಾಲಿಯಾಗುತ್ತಿರುವಂತೆ ಕಾಸರಗೋಡಿನ ತುಳುನಾಡ ಸಂಸ್ಕೃತಿಯ ಪಲ್ಲಟ ಇನ್ನಷ್ಟು ತೀವ್ರವಾಗಬಹುದು.  ಇಂದಿನ ಪ್ರಜಾಪ್ರಭುತ್ವ ಯುಗದಲ್ಲಿ ನಮ್ಮ ಸಂವಿಧಾನವು ಅಲ್ಪಸಂಖ್ಯಾತ ದುರ್ಬಲ ಜನಾಂಗಗಳಿಗೆ ಸಂರಕ್ಷಣೆಯನ್ನು ಒದ ಗಿಸಿದಾಗಲೂ ಈ ಆಡಳಿತ ಭಾಷೆಯ ದೊಡ್ಡಣ್ಣನ ವರಸೆ ಮುಂದು ವರೆಯಬೇಕೋ ಎಂಬುದು ಪ್ರಶ್ನೆ. ಇಂಗ್ಲಿಷಿನ ಗುಲಾಮತನದಿಂದ ಕಳಚಿಕೊಳ್ಳುವ ಪ್ರಯತ್ನದ ನೆಪದಲ್ಲಿ ಮಲಯಾಳ ಹೇರಿಕೆಯ ಮೂಲಕ ಕೇರಳದಲ್ಲಿ ಅಲ್ಪಸಂಖ್ಯಾತ‌ ಭಾಷೆಗಳನ್ನು ಹಾಗೂ ಬುಡಕಟ್ಟು ಭಾಷೆಗಳನ್ನು ನಾಶಮಾಡುತ್ತಿರುವುದು ಕಳವಳಕಾರಿ. ವಯನಾಡು ಹಾಗೂ ಇಡುಕ್ಕಿಯ ಹಲವು ಬುಡಕಟ್ಟು ಭಾಷೆಗಳು ಮಲಯಾಳದ ಪ್ರಭಾವದಿಂದ ನಾಶದ ಹಂತದಲ್ಲಿವೆ. ಕಾಸರಗೋಡಿನಲ್ಲಿ ಸ್ಥಳೀಯರಾದ ಬಿಲ್ಲವ, ಯಾದವ, ವಿಶ್ವಕರ್ಮ, ಸಾಲಿಯ, ಮೋಯ, ಗಾಣಿಗ, ಬ್ಯಾರಿ, ಮಾಪಿಳ್ಳ ಮೊದಲಾದವರ ಆಡುನುಡಿಗಳು ಮಿಶ್ರ ಮಲಯಾಳ ಅಥವಾ ಮಲಯಾಳದ ಸೊಗಡು ಹೊಂದಿದ ಭಾಷೆಗಳಾದರೂ ತೆಂಕಣದ ಮಲಯಾಳಕ್ಕಿಂತ ಭಿನ್ನವಾದ ಸ್ವಂತಿಕೆಯನ್ನು ಉಳಿಸಿಕೊಂಡಿದ್ದವು. ಇದೇ ರೀತಿ ಸ್ಥಳೀಯ ಮಲಯಾಳ ಸಂಸ್ಕೃತಿ ಕೂಡ ವಿಶಿಷ್ಟವಾಗಿತ್ತು. ಆದರೆ ತಮ್ಮ ಭಾಷೆಯನ್ನೇ ಬಳಸದ ಸ್ಥಳೀಯರ ಕೀಳರಿಮೆಯ ಕಾರಣದಿಂದ ಈ ವ್ಯತ್ಯಾಸ ಅಳಿದುಹೋಗುತ್ತಿದ್ದು, ಶೈಕ್ಷಣಿಕವಾಗಿ ಮಲಯಾಳ ಕಡ್ಡಾಯವಾದರೆ ಸ್ಥಳೀಯ ಮಲಯಾಳ ಭಾಷೆ -ಸಂಸ್ಕೃತಿಗಳು ಮುಖ್ಯವಾಹಿನಿಯಲ್ಲಿ ಬೆರೆತು ಮರೆಯಾಗುವ ಪ್ರಕ್ರಿಯೆ ತೀವ್ರಗೊಳ್ಳಲಿದೆ. ಶತಮಾನಗಳ ಹಿಂದೆ ಉತ್ತರ ಕರ್ನಾಟಕದಿಂದ ತುಳುನಾಡಿಗೆ ವಲಸೆ ಬಂದ ಅಚ್ಚಗನ್ನಡಿಗರಾದ ಮಾದಿಗರು ಇಂದು ಕ್ರಮೇಣ ಮಲಯಾಳಿಗಳಾಗುತ್ತಿದ್ದಾರೆ. ಮರಾಠಿ ಭಾಷೆಯೂ ನಿಧಾನವಾಗಿ ಆಡಳಿತ ಭಾಷೆ ಮಲಯಾಳದೊಳಗೆ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ತುಳುವರು ತಮ್ಮ ಮನೆಗಳಲ್ಲೂ ಮಲಯಾಳ ಮಾತನಾಡುತ್ತಿದ್ದಾರೆ. ಮಲಯಾಳ ಭಾಷೆ ಶೈಕ್ಷಣಿಕವಾಗಿ ಕಡ್ಡಾಯವಾದರೆ ಹವ್ಯಕ, ಕರಾಡ ಮೊದಲಾದ ಮೇಲ್ವರ್ಗದವರ ಭಾಷೆಗಳಿಗೂ ಅದರ ಪ್ರಭಾವದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದು. 

ತುಳುವಿಗೆ ಹೆಚ್ಚಿನ ಅಪಾಯ: 
ಪಂಚದ್ರಾವಿಡ ಭಾಷೆಗಳಲೊಂದಾದ, ಈ ನೆಲದ ಭಾಷೆಯಾದ ತುಳುವಿಗೆ ಮಲಯಾಳೀಕರಣದಿಂದ ಹೆಚ್ಚಿನ ಅಪಾಯವಿದೆ. ಉದಾಹರಣೆಗೆ, ಚಂದ್ರಗಿರಿ ನದಿಯಾಚೆ ಹಿಂದಿನ ತುಳುನಾಡಿನ ಭಾಗವಾಗಿದ್ದ ಪ್ರದೇಶಗಳಲ್ಲಿ ವಾಸವಾಗಿರುವ ತುಳುವರ ಆಡು ನುಡಿಯಲ್ಲಿ ಮಲಯಾಳದ ಅತಿಯಾದ ಪ್ರಭಾವವನ್ನು ಕಾಣಬಹುದು. ಹಲವೆಡೆಗಳಲ್ಲಿ ತುಳು ಮೂಲಸ್ವರೂಪ ಕಳೆದುಕೊಂಡಂತೆ ಭಿನ್ನವಾಗಿದೆ. ಕೆಲವೆಡೆ ತುಳುವಿನ ಅಸ್ತಿತ್ವವೇ ಕಾಣಸಿಗುವುದಿಲ್ಲ. ಚಂದ್ರಗಿರಿ ನದಿಯ ಉತ್ತರದ ಮಲಯಾಳ ಶಾಲೆಗಳ ಪ್ರಭಾವವಿರುವ ಕೆಲವು ಪ್ರದೇಶಗಳಲ್ಲಿಯೂ ಮಲಯಾಳ ಮಾಧ್ಯಮದಲ್ಲಿ ಕಲಿಯುತ್ತಿರುವ ತುಳುವರ ಈಚೆಗಿನ ತಲೆಮಾರು ಮಲಯಾಳಿಗಳಾಗಿರುವುದನ್ನು ಗಮನಿಸಬಹುದು. ಮಲಯಾಳ ಶಾಲೆಗೆ ಹೋಗುವ ತುಳು ಮಕ್ಕಳ ಆಡುನುಡಿಗಳಲ್ಲೂ ಆ ಭಾಷೆಯ ಪ್ರಭಾವ ಅತಿಯಾಗಿ ಗೋಚರಿಸುತ್ತದೆ. ಆದರೆ ಕನ್ನಡ ಶಾಲೆಗಳ ಪ್ರಭಾವವಿರುವ ಭೂಭಾಗದಲ್ಲಿ ತುಳು ತನ್ನ ಪ್ರಾಚೀನ ವೈಭವವಲ್ಲವಾದರೂ ಸ್ವಂತಿಕೆ ಹಾಗೂ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಕನ್ನಡಿಗರು ತುಳುವರಲ್ಲಿ ಅವರ ಭಾಷೆಯಲ್ಲಿ ವ್ಯವಹರಿಸುತ್ತಿರುವುದನ್ನು ಹಾಗೂ ಕನ್ನಡದ ಕಲಿಕೆಯಿಂದ ತುಳುವರ ಉಚ್ಚಾರಣೆಯಲ್ಲಿ ಸಂಸ್ಕೃತಿಯಲ್ಲಿ ಗಣನೀಯ ದುಷ್ಪರಿಣಾಮವಾಗದಿರುವುದನ್ನು ಕಾಣಬಹುದು. ತುಳು ಸ್ಥಳನಾಮಗಳಲ್ಲಿ, ತುಳುವರ ಹಬ್ಬ ಆಚರಣೆಗಳಲ್ಲಿ, ಆರಾಧನಾ ವಿಧಾನಗಳಲ್ಲಿ ಮಲಯಾಳದ ಪ್ರಭಾವ ಇತ್ತೀಚಿಗೆ ಅಸ್ವಾಭಾವಿಕವಾಗಿ ಹೆಚ್ಚಾಗು ತ್ತಿದ್ದು, ಮಲಯಾಳ ಕಡ್ಡಾಯ ಶೈಕ್ಷಣಿಕ ಭಾಷೆಯಾದರೆ ತುಳು ನಾಡು ಭಾಷೆ -ಸಂಸ್ಕೃತಿಯ ಉಳಿವಿನ ಬಗ್ಗೆ ಆತಂಕವಾಗುತ್ತದೆ.  ತುಳು ಹಾಗೂ ಮಲಯಾಳಗಳ ನಡುವೆ ಭಾಷೆ, ಲಿಪಿ ಹಾಗೂ ಸಂಸ್ಕೃತಿಗಳಲ್ಲಿ ಬಹಳ ಸಾಮ್ಯತೆಯಿದೆ ಎಂದು ವರ್ಣಿಸುತ್ತ ಈ ಬಾಂಧವ್ಯವನ್ನು ಕೊಂಡಾಡಲಾಗುತ್ತಿದೆ. ಭಾಷೆಗಳ ನಡುವೆ ಬಾಂಧವ್ಯವಿರಬೇಕು, ಸಂಬಂಧ ಬೆಳೆಯಬೇಕು ಎಂಬುದರಲ್ಲಿ ತಪ್ಪಿಲ್ಲ. ಆದರೆ ಈ ಸಂಬಂಧ ಸಾಮ್ಯತೆಗಳು ಒಂದು ಕಿರು ಭಾಷೆ- ಸಂಸ್ಕೃತಿಯನ್ನು ಇನ್ನೊಂದು ಪ್ರಬಲ ಭಾಷೆ-ಸಂಸ್ಕೃತಿ ತನ್ನೊಳಗೆ ವಿಲೀನಗೊಳಿಸುವಂತಾಗಬಾರದು ಎಂಬ ಎಚ್ಚರವೂ ಅಗತ್ಯ. ತುಳುವಿನ ಉಳಿವು ಬೆಳವಣಿಗೆಗಾಗಿ ಅಕಾಡಮಿ ರಚನೆಯ ಸಹಿತ ಹಲವು ಕ್ರಮಗಳನ್ನು ಕೇರಳ ಸರಕಾರ ಕೈಗೊಂಡಿದೆ ಎಂದು ಹೇಳಿಕೊಳ್ಳುತ್ತಿದೆ. ಆದರೆ ಭಾಷೆ ಸಂಸ್ಕೃತಿಯೊಂದು ಮ್ಯೂಸಿಯಂ ನಲ್ಲಿಟ್ಟು ಕಾಪಾಡುವ ವಸ್ತುವಾಗಿರದೆ ಜನಸಾಮಾನ್ಯರ ನಡುವೆ ಉಳಿದು ಬೆಳೆಯಲು ಪೂರಕ ವಾತಾವರಣವನ್ನು ಕಲ್ಪಿಸುವುದು ಕೂಡ ಸರಕಾರದ ಕರ್ತವ್ಯ. ಕೇರಳದ ರಾಜಕಾರಣಿ ಗಳು ಕೇವಲ ಮತಗಳಿಕೆಗಾಗಿ ತುಳು, ಕನ್ನಡ ಭಾಷೆಗಳ ಉಳಿವಿನ ಬಗ್ಗೆ ಕಾಳಜಿಯಿರುವಂತೆ ತೋರ್ಪಡಿಸುತ್ತಿದ್ದಾರೆ. ಆಡಳಿತ ಭಾಷೆಯಾಗಿ, ಶೈಕ್ಷಣಿಕ ಭಾಷೆಯಾಗಿ ಮಲಯಾಳದ ಕಡ್ಡಾಯ ಹೇರಿಕೆ ಕಾಸರಗೋಡಿನಂತಹ ಸೂಕ್ಷ್ಮ ಭಾಷಾಪರಿಸರದಲ್ಲಿ ಹಲವು ಸಮಸ್ಯೆಗಳನ್ನುಂಟು ಮಾಡುತ್ತದೆ ಎಂಬುದನ್ನು ಸರಕಾರ ಅರಿಯಬೇಕು. ಕಾಸರಗೋಡಿನ ಎಲ್ಲ ಭಾಷೆಗಳ ಜನರೂ ಕೂಡ ಮಲಯಾಳ ಹೇರಿಕೆಯನ್ನು ಕೇವಲ ಕನ್ನಡದ ಅಥವಾ ಕನ್ನಡ ಶಿಕ್ಷಕರ ಸಮಸ್ಯೆಯೆಂದು ತಿಳಿಯದೆ ಇಲ್ಲಿನ ಭಾಷಾ ವೈವಿಧ್ಯವನ್ನು ಕಾಪಾಡಲು ಕೈಜೋಡಿಸಬೇಕಾಗಿದೆ.

– ನರೇಶ್‌ ಮುಳ್ಳೇರಿಯಾ

ಟಾಪ್ ನ್ಯೂಸ್

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

3-

Investigative Authorities: ಕುಸಿಯುತ್ತಿದೆ ತನಿಖಾ ಪ್ರಾಧಿಕಾರಗಳ ವಿಶ್ವಾಸಾರ್ಹತೆ !

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-max

Max; ಟ್ರೈಲರ್ ಬಿಡುಗಡೆ: ಭರ್ಜರಿ ಲುಕ್ ನಲ್ಲಿ ಕಿಚ್ಚ!

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

sand 1

Padubidri: ಮರಳು ಅಕ್ರಮ ಸಾಗಾಟ; ವಶ

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.