ತಳವಿಲ್ಲದ ಪಾತ್ರೆಗಳಂತಾದ ಪ್ರಣಾಳಿಕೆಗಳು
Team Udayavani, May 24, 2018, 6:00 AM IST
ಒಂದು ಹಂತದವರೆಗೆ ಜನ ಕಾಯುತ್ತಾರೆ. ಅನಂತರ ಕಾಯುವಿಕೆಯೇ ನಿಜವಾಗಿಬಿಡುತ್ತದೆ. ಪ್ರತೀ ಪ್ರಜೆಯೂ ತಮ್ಮ ಅಭಿವೃದ್ಧಿಯನ್ನು ತಾವೇ ರೂಪಿಸಿಕೊಳ್ಳುವಂತೆ ಬೌದ್ಧಿಕ ಆಸ್ತಿಯ ಸಂಪದೀಕರಣವೊ ನವೀಕರಣವೊ ಮಾಡಿಕೊಳ್ಳುವಂತೆ ದೂರಗಾಮೀ ಯೋಜನೆಗಳನ್ನು ಆಡಳಿತಗಾರರಿಂದ ನಿರೀಕ್ಷಿಸುವಂತಾಗಬೇಕು. ಅದರ ಬಿಸಿ ಅವರಿಗೆ ತಟ್ಟಬೇಕು. ಅಭಿವೃದ್ಧಿಯೆಂದರೆ ಒಮ್ಮೆಗೇ ಹೊಟ್ಟೆ ಬಿರಿಯುವಷ್ಟು ತಿಂದು ತೇಗುವಲ್ಲಿಗೆ ಮುಗಿಯುವಂಥದ್ದಲ್ಲ. ಅನಂತರ ಏನು ಎಂಬ ಪ್ರಶ್ನೆಗೆ ಉತ್ತರವಿದೆಯೇ?
ಜನಪ್ರಿಯತೆಯ ಬೆನ್ನು ಬಿದ್ದಾಗ ಹೀಗೆಲ್ಲ ಆಗುವುದು ಸಹಜ. ಅದರ ಗೀಳಿನಲ್ಲಿ ನಮಗೆ ಕಠಿಣ ನಿರ್ಧಾರ ತೆಗೆದುಕೊಳ್ಳುವುದಾಗಲಿ ದೂರದರ್ಶಿತ್ವದ ಯೋಜನೆಗಳ ಬಗ್ಗೆ ಮಾತಾಡುವುದಾಗಲಿ ಸಾಧ್ಯವಾಗುವುದಿಲ್ಲ. ಹೇಗಿದ್ದರೂ ಇಂದು ಕಳೆಯಲಿ ಎಂಬ ದಿನ ಸವೆಸುವ ಜಾಯಮಾನದವರಾಗುತ್ತೇವೆ. ಜನಪ್ರಿಯತೆಯ ತೆವಲಿಗೆ ಬಿದ್ದರೆ ಘೋಷಣೆಗಳನ್ನೇ ಯೋಜನೆಗಳೆಂದು ಬಿಂಬಿಸು ತ್ತೇವೆ. ಉಚಿತ ವಿತರಣೆಗಳು, ರಿಯಾಯಿತಿಗಳು, ಮನ್ನಾದಂತಹ ಕಾರ್ಯಕ್ರಮಗಳೆಲ್ಲ (ಅಭಿವೃದ್ಧಿ ಯೋಜನೆಗಳಲ್ಲ) ಅದರ ಮುಂದು ವರಿದ ಭಾಗವಾಗಿಬಿಡುತ್ತದೆ. ಅದನ್ನೆಲ್ಲ ಘೋಷಿಸುವವ ಭಾರೀ ಜನಪ್ರಿಯ ವ್ಯಕ್ತಿಯಾಗಿ ನೇತಾರನೆಂದೆನಿಸಿಕೊಳ್ಳುತ್ತಾನೆ. ಅನಂತರ ಜನಪ್ರತಿನಿಧಿಯಾಗಿ ಕೊನೆಗೆ ಆಡಳಿತಗಾರನಾಗುವಲ್ಲಿಯವರೆಗೆ ಆತನನ್ನು ಅದು ಕೊಂಡೊಯ್ಯುತ್ತದೆ. ಏಕೆಂದರೆ ಜನ ಅದಕ್ಕೆ ತಲೆದೂಗುವುದೊ, ಬಾಗುವುದೊ ಮಾಡಿ ತಮ್ಮ ತಮ್ಮ ದೂರ ದರ್ಶಿತ್ವದ ಕಲ್ಪನೆಗಳನ್ನು ಕಳೆದುಕೊಂಡು ಬಿಟ್ಟಿರುತ್ತಾರೆ. ಸದಾ ಮಾಧ್ಯಮಗಳಲ್ಲಿ, ವೇದಿಕೆಗಳಲ್ಲಿ ಪುಂಖಾನುಪುಂಖವಾಗಿ ಜನ ಪ್ರಿಯ ಕಾರ್ಯಕ್ರಮಗಳನ್ನೇ ಅಭಿವೃದ್ಧಿ ಯೋಜನೆಗಳೆಂದು ಬಿಂಬಿ ಸುತ್ತಾ ಸಮೂಹವನ್ನು ಭ್ರಮೆಗೊಳಪಡಿಸುವುದು, ಆಮೇಲೆ ಅದೇ ಸತ್ಯವೆಂದು ಜನ ನಂಬಿ ಅಂಥವರನ್ನೇ ಬೆಂಬಲಿಸುವುದು ಎಲ್ಲವೂ ಸರಾಗವಾಗಿಬಿಡುತ್ತದೆ. ಇಲ್ಲಿ ಧರ್ಮ, ಜಾತಿ, ಪಂಗಡ, ವರ್ಗ, ಪಕ್ಷ ಇತ್ಯಾದಿಗಳ ವರ್ಗೀಕರಣ ನೀತಿ ಕೂಡಾ ತಮ್ಮ ಬೆಂಬಲಿಗರನ್ನು ಹೆಚ್ಚಿಸಿಕೊಳ್ಳಲು ಮತ್ತು ಹಿಡಿದಿಟ್ಟುಕೊಳ್ಳಲು ಬೇಕಾಗುವ ಸಲಕರಣೆಗಳಾಗುತ್ತವೆಯೇ ಹೊರತು ಜನಪರವಾದ ದೂರದೃಷ್ಟಿಯನ್ನು ಹೊಂದಿರುವ ಯೋಜನೆಗಳಾಗುವುದಿಲ್ಲ. ಜನಪರತೆಯಿಲ್ಲದ ಜನಪ್ರಿಯತೆಯೇಕೆ? ಜನಪರತೆಯಲ್ಲಿ ತಕ್ಷಣದ ಲಾಭವಿಲ್ಲ. ಆದರೆ ನಿಧಾನವಾಗಿ, ದೂರಗಾಮಿಯಾಗಿ ಜನಪ್ರೀತಿ ಲಭಿಸುತ್ತದೆ.
ಒಂದಂತೂ ಸತ್ಯ, ಚುನಾವಣೆಯಿಂದ ಚುನಾವಣೆಗೆ ದಾಟುವಾಗ ಜನಪ್ರಿಯತೆಯ ಹಿನ್ನೆಲೆಯಲ್ಲಿ ನಾವು (ಮತದಾರರು) ಸಾಮಾಜಿಕವಾಗಿ ಎತ್ತ ಸಾಗುತ್ತಿದ್ದೇವೆ, ಅಲ್ಲಿ ಜನಪ್ರತಿನಿಧಿಗಳ ಉತ್ತರದಾಯಿತ್ವಗಳಾಗುವುವು ಎಂದೂ ಗುರುತಿಸಲಾರದವರಾಗಿ ಗೆಲುವಿನ ಸಂಭ್ರಮದಲ್ಲಿ ಬೌದ್ಧಿಕತೆಯ ಟೊಳ್ಳುಗಳಾಗಿಬಿಟ್ಟಿರುತ್ತೇವೆ. ಇಲ್ಲವಾದರೆ ನೋಡಿ, ದೇಶದ ವಿಚಾರ ಆಮೇಲೆ ನೋಡೋಣ. ನಮ್ಮ ನಮ್ಮ ಹಳ್ಳಿಗಳ, ಸುತ್ತಮುತ್ತಲಿನ ಸಂಗತಿಗಳನ್ನೇ ಗಮನಿಸೋಣ. ಈ ಗಮನಿಸುವಿಕೆಗೆ 1947ನ್ನು ಆರಂಭಿಕ ಬಿಂದುವಾಗಿಸಿಕೊಂಡು 2018ರ ವರೆಗೆ ಸಾಗೋಣ. ಸದ್ಯ ಚಾರಿತ್ರ್ಯ, ಪಾವಿತ್ರ್ಯ, ಶುದ್ಧ ಹಸ್ತ ಇತ್ಯಾದಿ ವ್ಯಕ್ತಿಗತ ಜೀವನಮೌಲ್ಯಗಳ ಸಂಗತಿಗಳನ್ನೂ ಲೆಕ್ಕಹಾಕುವುದು ಬೇಡ.
ಆದರೆ ಸಾರ್ವಜನಿಕವಾಗಿ ಇರಲೇ ಬೇಕಾದ ಉತ್ತರದಾಯಿತ್ವ, ಬದ್ಧತೆ, ತತ್ವ ಬದ್ಧತೆ- ಸಿದ್ಧಾಂತ ಇವುಗಳಿಗೂ ಬರಬಂದಿದೆಯಲ್ಲ ಅದಕ್ಕೇನೆನ್ನೋಣ? ರಾಜಕಾರಣಿಗಳಲ್ಲಿ, ಆಡಳಿತಗಾರರಲ್ಲಿ ಇವೆಲ್ಲ ಇರಬೇಕೆಂದು ತಾಕೀತು ಮಾಡುವ ಹಾಗೆ ನಾವೂ ಇಲ್ಲವಲ್ಲ ಅದ್ಯಾಕೆ? ಇಲ್ಲಿ ಯಾವುದೋ ಪಕ್ಷದ ಪರವಾಗಿಯೋ ವಿರುದ್ಧವಾಗಿಯೋ ಬರೆಯುತ್ತಿಲ್ಲ. ತರಗತಿ ಕೋಣೆಗಳಲ್ಲಿ ಪಾಠ ಮಾಡುವಾಗ ಪೌರ, ಪೌರತ್ವ, ನಾಗರಿಕತೆ, ಮಾದರಿ ಸಂಸತ್ತು / ವಿಧಾನ ಸಭೆ (ಜನ ಪ್ರತಿನಿಧಿಗಳ ಮನೆ), ಸಾರ್ವಜನಿಕ ಮತ್ತು ಜೀವನ ಮೌಲ್ಯಗಳು ಎಂದೆಲ್ಲ ಉರು ಹೊಡೆಸುತ್ತೇವೆ. ಸಾಂಸ್ಕೃತಿಕ
ಮೌಲ್ಯ, ಜನಪದ ಸಂಪತ್ತು, ಸಾಹಿತ್ಯಿಕ ಕೊಡುಗೆ, ಪರಿಸರದ ಮಹತ್ವದ ಬಗ್ಗೆ ಪುನರಾವರ್ತಿಸಿ, ಬಾಯಿಪಾಠ ಮಾಡಿಸಿ ಪರೀಕ್ಷೆಯಲ್ಲೂ ಡಿಸ್ಟಿಂಕ್ಷನ್ ತೆಗೆಸಿ, ವಿದ್ಯಾರ್ಥಿಗಳೆಲ್ಲರನ್ನು ನಾವು ಮುಂತಳ್ಳುತ್ತೇವೆ. ಹಾಗೆ ಹಾಯ್ದುಹೋದ ವಿದ್ಯಾರ್ಥಿಗಳಿಗೆ ತಕ್ಷಣವೆ ಗೋಚರಿಸುವುದು ಏನು? ಪಾಠ ಪರೀಕ್ಷೆಗಾಗಿ ಮತ್ತು ಅಂಕಕ್ಕಾಗಿ ಮಾತ್ರ. ಸಾರ್ವ ಜನಿಕವಾಗಿ ಅಂತಹ ಮಾದರಿಗಳು ಕಾಣುತ್ತಿಲ್ಲವಲ್ಲವೆಂದು ಹುಡುಕುವವನಿಗೆ ಏನು ಕಾಣುತ್ತದೋ ಅದೇ ಸರಿಯೆನ್ನುತ್ತಾ ತಾನೂ ಆ ಗುಂಪಿನವನೊಬ್ಬನಾಗುತ್ತಾನೆ. ಆತನಿಗೆ ಉಪಾಯವಿಲ್ಲ. ಕಿವಿಗೆ ಕೇಳಿದ್ದಕ್ಕಿಂತಲೂ ಕಣ್ಣಿಗೆ ಕಾಣುವ ಜಗತ್ತೇ ಸರಿ ಯೆಂಬುದು ನಿರ್ಣಯವಾಗಿಬಿಡುತ್ತದೆ.
ಆ ಮಟ್ಟಕ್ಕೆ ನಮ್ಮ ಮಕ್ಕಳ ಮನಃಸ್ಥಿತಿ ಬೆಳೆದಿರುತ್ತದೆ. ಹಾಗಾಗಿ ಯಾರೂ ಗಟ್ಟಿ ಕಾಳನ್ನು ಜಗಿದು ಜೀರ್ಣಿಸಿಕೊಳ್ಳುವ ಗೋಜಿಗೆ ಹೋಗುವುದೇ ಇಲ್ಲ. ಬೌದ್ಧಿ ಕತೆಯು ಒಂದು ಅಮೂಲ್ಯ ಸಂಪತ್ತು ಎಂಬುದು ಅಡಿಹಾಸಾಗಿ ಬಿಡುತ್ತದೆ. ಸುಲಭವಾಗಿ ಸಂಭ್ರಮಿ ಸುವುದು, ಸಂದರ್ಭ ಸಿಕ್ಕಾಗೆಲ್ಲ ಕೊಯ್ಯುವುದು, ನಾನು ಬೇಗ ಆರ್ಥಿಕ ಸಬಲನಾಗಬೇಕೆಂಬಲ್ಲಿಗೇ ವಿದ್ಯಾವಂತ ನಾಗರಿಕರ ಪ್ರಜ್ಞಾವಂತಿಕೆ ನಿಂತುಬಿಡುತ್ತದೆ.
ಬ್ರಿಟಿಷರು ದೇಶದ ಆಡಳಿತವನ್ನು ನಮ್ಮ ಕೈಗೀಯುವಾಗ ಸಾಮಾಜಿಕವಾಗಿ ಹಲವು ಸವಾಲುಗಳು, ಸಮಸ್ಯೆಗಳು ಬಹಳ ಗಂಭೀರವಾಗಿ ನಮ್ಮ ಮುಂದಿತ್ತು. ಹಸಿವು, ಬಡತನ, ಅನಕ್ಷರತೆ, ಗಡಿ ಸಮಸ್ಯೆ, ರಕ್ಷಣೆ, ನಿರಾಶ್ರಿತರ ಸಮಸ್ಯೆ, ಆರ್ಥಿಕ ಅಸಮಾನತೆ, ವರ್ಗಭೇದಗಳು ಹೀಗೆಲ್ಲ. ಆದರೆ ಎಲ್ಲಿಯೂ ಬೌದ್ಧಿಕತೆಯ ಸಮಸ್ಯೆ, ಸುಖ-ನೆಮ್ಮದಿಯ ಸಮಸ್ಯೆ, ಸಾಂಸ್ಕೃತಿಕ ಮೌಲ್ಯ ಕುಸಿತದ ಸಮಸ್ಯೆ, ಮಾಲಿನ್ಯ ಪರಿಸರದ ಸಮಸ್ಯೆ ಹೀಗೆಲ್ಲ ಬಿಂಬಿತವಾಗಲೇ ಇಲ್ಲ. ಅಂದರೆ ಇರಲೇ ಇಲ್ಲವೆಂದಲ್ಲ.
“ದಿಲ್ಲಿಯ ಉದ್ಧಾರ ಹಳ್ಳಿಗಳ ಉದ್ಧಾರದಲ್ಲಿದೆ’ ಎಂದರು ಗಾಂಧೀಜಿ. “ದೇಶದ ಅಭಿವೃದ್ಧಿ ಎಂದರೆ ಕೇವಲ ಕಟ್ಟಡ, ಕಲ್ಲು, ಮಣ್ಣು, ಇಟ್ಟಿಗೆಗಳಿಂದ ಸಾಧ್ಯವಿಲ್ಲ’ವೆಂದು ಕುವೆಂಪು ಹೇಳಿದರು. ಆಗ ಅವರೆಂದ ಮಾತು ಸಾಮುದಾಯಿಕವಾಗಿ ಸಹಜವಾಗಿಯೇ ಅನುಷ್ಠಾನದಲ್ಲಿತ್ತು. ಬರಬರುತ್ತಾ ಏನಾಯಿತೆಂದರೆ ಅಭಿವೃದ್ಧಿ ಯೆಂದರೆ ಕಲ್ಲುಮಣ್ಣುಗಳಲ್ಲಿ, ಕಟ್ಟಡಗಳಲ್ಲಿ, ಇಟ್ಟಿಗೆಗಳಲ್ಲಿ ಮಾತ್ರ ವೆಂದು ತೊಡಗಿದಲ್ಲಿಗೆ ಸಮಸ್ಯೆಗಳು ಹಲವು ಆಯಾಮಗಳಲ್ಲಿ ಟಿಸಿಲೊಡೆಯಿತು. ಅಭಿವೃದ್ಧಿ ಅಭಿವೃದ್ಧಿ ಎಂದು ಎಷ್ಟೇ ಬಡಬಡಿ ಸಿಕೊಂಡರೂ ಸಮಸ್ಯೆಗಳ ಸರಮಾಲೆ, ಪೇಟೆ – ಹಳ್ಳಿಗಳ ಅಂತರ ದಿನೇ ದಿನೇ ಬೆಳೆಯುತ್ತಿರುವುದು ಕೆಲವೊಮ್ಮೆ ನಿಯಂತ್ರಿಸಲಾರದ ಸ್ಥಿತಿಗೆ ತಲಪುವುದೂ ಅಭಿವೃದ್ಧಿಯ ಕೊಡುಗೆಯಾಯಿತೆಂಬುದು ಇನ್ನೂ ನಮ್ಮ ಅಭಿವೃದ್ಧಿ ದಾತಾರರಿಗೆ ಹೊಳೆದಿಲ್ಲವೇ? ಈಗ ಪಕ್ಷಗಳ ಪ್ರಣಾಳಿಕೆಗಳಿಗೆ ಬರೋಣ. ಪ್ರಸ್ತುತ ಬಹುತೇಕ ಪ್ರಣಾಳಿಕೆಗಳೆಲ್ಲ ತಳವಿಲ್ಲದ ಪಾತ್ರೆಗಳಂತಾಗಿದೆ. ಇಲ್ಲವಾದರೆ ಒಂದೇ ಒಂದು ಪಕ್ಷದ ಪ್ರಣಾಳಿಕೆಯಲ್ಲೂ ಪರಿಸರದ ಸಮಸ್ಯೆಗಳು, ಸಾಂಸ್ಕೃತಿಕ ಮೌಲ್ಯಗಳ ರಕ್ಷಣೆ, ಶೈಕ್ಷಣಿಕ ಗುಣಾತ್ಮಕ ಬದಲಾವಣೆಗಳು, ಸಾಮಾಜಿಕ ನೆಮ್ಮದಿ ಮತ್ತು ಜೀವನ ಮೌಲ್ಯಗಳು ಇತ್ಯಾದಿ ಬೌದ್ಧಿಕ ಸಂಪತ್ತುಗಳ ಮಟ್ಟವನ್ನು ಹೆಚ್ಚಿಸುವ ಪ್ರಸ್ತಾಪವೇ ಏಕಿಲ್ಲ? ಬರೀ ಉಚಿತ ವಿತರಣೆಗಳ, ಕಾಮಗಾರಿಗಳ ವಿಸ್ತರಣೆಗಳು, ರಿಯಾಯಿತಿಗಳ ಘೋಷಣೆಗಳಲ್ಲೇ ತೆವಳುವ ಪಕ್ಷಗಳ ಪ್ರಣಾಳಿಕೆಗಳಲ್ಲಿ ನಿರಂತರ ಸಹ್ಯ ಅಭಿವೃದ್ಧಿಯ ಚಿಂತನೆಯ ಲೇಶ ಸ್ಪರ್ಶವಿಲ್ಲವೇಕೆ?
ಒಂದು ಹಂತದವರೆಗೆ ಜನ ಕಾಯುತ್ತಾರೆ. ಅನಂತರ ಕಾಯು ವಿಕೆಯೇ ನಿಜವಾಗಿಬಿಡುತ್ತದೆ. ಪ್ರತೀ ಪ್ರಜೆಯೂ ತಮ್ಮ ಅಭಿವೃದ್ಧಿ ಯನ್ನು ತಾವೇ ರೂಪಿಸಿಕೊಳ್ಳುವಂತೆ ಬೌದ್ಧಿಕ ಆಸ್ತಿಯ ಸಂಪದೀ ಕರಣವೊ ನವೀಕರಣವೊ ಮಾಡಿಕೊಳ್ಳುವಂತೆ ದೂರಗಾಮೀ ಯೋಜನೆಗಳನ್ನು ಆಡಳಿತಗಾರರಿಂದ ನಿರೀಕ್ಷಿಸುವಂತಾಗಬೇಕು. ಅದರ ಬಿಸಿ ಅವರಿಗೆ ತಟ್ಟಬೇಕು. ಅಭಿವೃದ್ಧಿಯೆಂದರೆ ಒಮ್ಮೆಗೇ ಹೊಟ್ಟೆ ಬಿರಿಯುವಷ್ಟು ತಿಂದು ತೇಗುವಲ್ಲಿಗೆ ಮುಗಿಯುವಂಥ ದ್ದಲ್ಲ. ಅನಂತರ ಏನು ಎಂಬ ಪ್ರಶ್ನೆಗೆ ಉತ್ತರವಿದೆಯೇ?
ಒಂದು ಪ್ರಶ್ನೆ ಮುಂದಿಡುತ್ತೇನೆ; ಎಷ್ಟೆಲ್ಲ ಆರೋಗ್ಯ ಮತ್ತು ಶಿಕ್ಷಣದ ಯೋಜನೆಗಳು (ಅದೂ ಗುಣಾತ್ಮಕ) ಜಾರಿಯಾಗಿಲ್ಲ? ಅದರ ಮಟ್ಟ ಕಂಡಾಬಟ್ಟೆ ಏರಿಕೆಯಾಗಿಲ್ಲವೇ? ಆದರೂ ಆರೋಗ್ಯ ಸಂಬಂಧಿ ಸವಾಲುಗಳು (ಹೊಸ ಹೊಸ ರೂಪದಲ್ಲಿ) ದಿನೇ ದಿನೇ ಏರುಗತಿಯಲ್ಲಿವೆ. ವೈಯಕ್ತಿಕ ಮತ್ತು ಸಾಮುದಾಯಿಕ ನೆಮ್ಮ ದಿಯು ಇಳಿಕೆಯ ಹಾದಿಯಲ್ಲಿದೆ. ಹಳ್ಳಿಗಳು ದುರ್ಬಲವಾಗುತ್ತಿವೆ. ಕೃಷಿ ಮತ್ತು ಕೃಷಿ ಪೂರಕ ಕೆಲಸಗಳಲ್ಲಿ ನಿರತರಾಗಿರುವವರು ನಿರಾಶರಾಗುತ್ತಿರುವುದು, ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯೆಂಬಂತೆ ರಾಶಿಗಟ್ಟಲೆ ಹಣ ಸುರಿದರೂ ನಗರಗಳು ಮತ್ತೂ ಮತ್ತೂ ಕ್ರೌರ್ಯಗಳ, ಸಮಸ್ಯೆಗಳ ಕೊಂಪೆಯಾಗಿಯೇ ಬೆಳೆಯುತ್ತಿರುವುದು ಏಕೆ? ಎಲ್ಲೋ ತಪ್ಪಿದ್ದೇವೆಂದು ನಾವು ಎಣಿಸಬಹುದು. ಎಲ್ಲೊ ತಪ್ಪಿದಲ್ಲ ನಮ್ಮ ನಮ್ಮಲ್ಲೇ ನಾವು ತಪ್ಪುಗಳನ್ನು ಮಾಡುತ್ತಲೇ ಇದ್ದೇವೆ. ಮಾಡುವ ತಪ್ಪುಗಳನ್ನು ಸರಿಯೆಂಬಂತೆ ಮತ್ತೆ ತಪ್ಪುಗಳನ್ನು ಮಾಡುತ್ತಿದ್ದೇವೆ.
ರಾಮಕೃಷ್ಣ ಭಟ್ ಚೊಕ್ಕಾಡಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.