ಮಂಜೇಶ್ವರ ಗೋವಿಂದ ಪೈಗಳಿಗಿದೋ ಗಿಳಿವಿಂಡು ಸದನ
Team Udayavani, Jan 19, 2017, 3:50 AM IST
ಕಾಸರಗೋಡಿನ ಮಂಜೇಶ್ವರದಲ್ಲಿರುವ, ಕನ್ನಡದ ಪ್ರಥಮ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ ನಿವಾಸವನ್ನು ‘ಗಿಳಿವಿಂಡು’ ಎಂಬ ಸಾಂಸ್ಕೃತಿಕ ಸಮುಚ್ಚಯವಾಗಿ ರೂಪಿಸಲಾಗಿದೆ. ಈ ಸಾಂಸ್ಕೃತಿಕ ಕೇಂದ್ರವು ಇಂದು ಕೇರಳ- ಕರ್ನಾಟಕ ರಾಜ್ಯಗಳ ಮುಖ್ಯಮಂತ್ರಿಗಳು, ಗೋವಿಂದ ಪೈ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ| ವೀರಪ್ಪ ಮೊಯಿಲಿ, ಎರಡೂ ರಾಜ್ಯಗಳ ಸಚಿವರು ಹಾಗೂ ಗಣ್ಯರ ಸಮ್ಮುಖದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಗೋವಿಂದ ಪೈ ಪ್ರತಿಮೆಯೂ ಅನಾವರಣಗೊಳ್ಳಲಿದೆ.
ಮನುಷ್ಯರೂ ಸೇರಿದಂತೆ ಜೀವಜಂತುಗಳಿಗೆಲ್ಲ ಪುನರ್ಜನ್ಮ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಮಹಾತ್ಮರಾದವರು ಒಂದು ದೃಷ್ಟಿಯಿಂದ ಚಿರಂಜೀವಿಗಳೇ ಆಗಿರುತ್ತಾರೆ. ಭೌತಿಕವಾಗಿ ಅವರು ಪ್ರಪಂಚವನ್ನು ಅಗಲಿ ಹೋದರೂ ಅವರಲ್ಲಿ ಕೆಲವರಾದರೂ ಮತ್ತೆ ಮತ್ತೆ ಹುಟ್ಟುತ್ತಲೇ ಇರುತ್ತಾರೆ; ಸಂಭವಾಮಿ ಯುಗೇ ಯುಗೇ ಎಂಬ ಹಾಗೆ. ಜಾಗತಿಕ ಪ್ರಸಿದ್ಧಿಯನ್ನು ಪಡೆದ ರಾಷ್ಟ್ರಕವಿ ಗೋವಿಂದ ಪೈ ಅಂತಹ ಮಹಾತ್ಮರಲ್ಲೊಬ್ಬರು. ಅವರ ತವರುಮನೆಯಾಗಿರುವ ಮಂಜೇಶ್ವರದಲ್ಲಿ ಅವರ ಸ್ವಗೃಹ ‘ಗಿಳಿವಿಂಡು’ ಎನ್ನುವ ಸಾಂಸ್ಕೃತಿಕ ಸಮುಚ್ಚಯದ ಮೂಲಕ ಗೋವಿಂದ ಪೈಯವರ ಮರುಹುಟ್ಟಿನ ಶುಭಗಳಿಗೆಯ ಶುಭೋದಯಕ್ಕಾಗಿ ಎಲ್ಲ ಸಿದ್ಧತೆಗಳು ನಡೆದಿವೆ. ಲೋಕಸಾಧಕರ ಬದುಕಿನ ಹೆಜ್ಜೆ ಗುರುತನ್ನು ಛಾಪಿಸಿದ ಗೋಲ್ಗೊಥಾ, ವೈಶಾಖೀ, ಹೆಬ್ಬೆರಳು, ಚಿತ್ರಭಾನು, ಪ್ರಭಾಸ ಹಾಗೂ ಅಸಂಖ್ಯ ಸಂಶೋಧನ ಬರಹಗಳು ಸಾರಸ್ವತ ಲೋಕದ ಅದ್ವಿತೀಯ ಸಂಶೋಧಕ, ಮಂಜೇಶ್ವರ ಮಹಾಕವಿ ಗೋವಿಂದ ಪೈ ನಿವಾಸದ ನವನಿರ್ಮಾಣದೊಳಗೆ ಶಿಸ್ತುಬದ್ಧವಾಗಿ ವಿಜೃಂಭಿಸುವ ಕಾಲ ಬಂದೊದಗಿದೆ.
ವರಕವಿಗಳ ಸಾಲಿನ ಹಿರಿಯ ಚೇತನ ಮಂಜೇಶ್ವರ ಗೋವಿಂದ ಪೈ 23 ಭಾಷೆಗಳನ್ನು ಬಲ್ಲ ಮೇಧಾವಿ ಎಂದಾಗ ‘ಕನ್ನಡಕ್ಕೋರ್ವನೇ ಸತ್ಕವಿ ಗೋವಿಂದ ಪೈ’ ಎಂಬ ಹೆಮ್ಮೆ ನಮ್ಮದಾಗುತ್ತದೆ. ‘ಬೆಳ್ಳಿ ಮೀಸೆಯ ಕವಿಯೇ ಎಲ್ಲರಂತಲ್ಲ ನೀನು’ ಎಂಬ ಅಭಿಮಾನ ಉಕ್ಕುತ್ತದೆ. ಕಾವ್ಯ ರಚನೆ ಮತ್ತು ಸಂಶೋಧನೆಯನ್ನು ಒಳಗೊಂಡಂತೆ ಬಹುಮುಖ ಪ್ರತಿಭೆ ಅಂತರ್ಗತವಾಗಿದ್ದ ಗೋವಿಂದ ಪೈಗಳಲ್ಲಿ ಸಂವೇದನಾಶೀಲತೆ ಹಾಗೂ ವೈವಿಧ್ಯತೆಯಲ್ಲಿ ಏಕತಾಭಾವ ಮನೆ ಮಾಡಿತ್ತು. ಮಂಜೇಶ್ವರವನ್ನು ಕವಿ- ಸಾಹಿತಿಗಳ ಯಾತ್ರಾ ಸ್ಥಳವನ್ನಾಗಿ ಮಾಡಿದ್ದರು. ಅವರ ‘ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೇ’ ಎನ್ನುವ ಕವನ ನಾಡಗೀತೆಯಂತೆ ಜನಮನದಲ್ಲಿ ನೆಲೆಸಿದೆ. ಸಾಹಿತ್ಯ ರಚನೆಯೊಂದಿಗೆ ಸಂಶೋಧನೆ ಅವರ ಇನ್ನೊಂದು ಕಾರ್ಯಕ್ಷೇತ್ರವಾಗಿತ್ತು. 80 ವರ್ಷಗಳ ತುಂಬು ಜೀವನವನ್ನು ನಡೆಸಿದ ಅವರು ಪ್ರಾಚೀನ ಕವಿಗಳು, ತುಳುನಾಡ ಇತಿಹಾಸ, ಶಾಸನಗಳ ವ್ಯಾಖ್ಯಾನ, ಇತಿಹಾಸ ವಿಚಾರಗಳಲ್ಲಿ ತನ್ನ ವಿದ್ವತ್ತನ್ನು ಮೆರೆದರು. ಮೊತ್ತಮೊದಲ ರಾಷ್ಟ್ರಕವಿಯಾಗಿ ಹೊರಹೊಮ್ಮಿದ ಪೈಯವರ ಬದುಕು ಕರ್ನಾಟಕದ ಕೈತಪ್ಪಿದ ಮಂಜೇಶ್ವರಕ್ಕೆ ಸಾರಸ್ವತ ಭೂಪಟದಲ್ಲಿ ಚಿರಸ್ಥಾಯಿಯಾದ ಸ್ಥಾನವನ್ನು ಕಲ್ಪಿಸಿತು ಎನ್ನುವುದು ನಮ್ಮ ಮುಂದಿರುವ ಸಾರ್ವಕಾಲಿಕ ಸತ್ಯ. ಈ ಮಹಾಕವಿ ಕರ್ನಾಟಕದ ಕೈತಪ್ಪಿ ಕೇರಳದೊಳಕ್ಕೆ ಸೇರಿಹೋದ ಮಂಜೇಶ್ವರವೆಂಬ ಪುಟ್ಟ ಊರಿನಲ್ಲಿ ವಾಸವಿದ್ದರು ಎಂಬುದು ಅಚ್ಚರಿಯ ವಿಚಾರ. ಮಂಜೇಶ್ವರ ಗೋವಿಂದ ಪೈಗಳು ಐಹಿಕ ಯಾತ್ರೆ ಪೂರೈಸಿದ ಬಳಿಕ ನಿರ್ಲಕ್ಷ್ಯಕ್ಕೆ ಈಡಾಗಿ ಜೀರ್ಣಾವಸ್ಥೆ ತಲುಪಿದ್ದ ಅವರು ಬದುಕಿದ ಮನೆ ಈಗ ಪುನರ್‌ನಿರ್ಮಾಣಗೊಂಡಿದೆ, ತನ್ನ ಪಾರಂಪರಿಕ ಸೊಗಸನ್ನು ಉಳಿಸಿಕೊಂಡು ಹೊಸತನ ಪಡೆದುಕೊಂಡಿದೆ.
ಜೀರ್ಣ ಸ್ಥಿತಿಯಲ್ಲಿದ್ದ ನಿವಾಸ
ಭಾಷೆ, ಸಾಹಿತ್ಯ, ಸಂಸ್ಕೃತಿ, ಧರ್ಮಗಳ ಸೌಹಾರ್ದತೆಗೆ ಹೆಸರಾಗಿದ್ದ ಪೈಯವರ ಮನೆಯನ್ನು ಸ್ಮಾರಕವಾಗಿ ಪರಿವರ್ತಿಸಿ ಸಾಂಸ್ಕೃತಿಕ ಶ್ರದ್ಧಾಕೇಂದ್ರವನ್ನಾಗಿ ರೂಪಿಸುವ ಯೋಜನೆಯನ್ನು ಕರ್ನಾಟಕ- ಕೇರಳ ಸರಕಾರಗಳು ರೂಪಿಸಿದ್ದವು. ಆದರೆ ಸರಕಾರಿ ಯೋಜನೆ, ಅದರಲ್ಲೂ ಸಾಂಸ್ಕೃತಿಕ -ಭಾಷಿಕ ಯೋಜನೆಗಳು ಮುಂಚೂಣಿಯಲ್ಲಿ ನಿಂತು ಮುನ್ನಡೆಸುವ ನಾಯಕನಿಲ್ಲದೆ ಹೋದರೆ ನೆನೆಗುದಿಗೆ ಬೀಳುವ ಎಲ್ಲ ಸಾಧ್ಯತೆಗಳಿರುತ್ತವೆ. ಈ ಯೋಜನೆಯೂ ಹಾಗೆಯೇ; 2-3 ದಶಕಗಳಲ್ಲಿ ಕುಂಟುತ್ತಾ, ಏಳು ಬೀಳುಗಳೊಂದಿಗೆ ಟೀಕೆಗಳಿಗೆ ಆಹಾರವಾಗಿ ಹಿನ್ನಡೆಯಲ್ಲಿತ್ತು.
ಗೋವಿಂದ ಪೈ ಅವರ ನಿವಾಸ ಜೀರ್ಣಾವಸ್ಥೆ ತಲುಪಿತ್ತು. ಪೈಯವರ ಜೀವಿತ ಕಾಲದಲ್ಲಿ ಸಾಹಿತ್ಯ ತಪೋವನವಾಗಿ, ಸಾಹಿತಿಗಳ ಯಾತ್ರಾಸ್ಥಳವಾಗಿದ್ದ ಮನೆ ಮರುಕಪಟ್ಟುಕೊಳ್ಳುವ ಸ್ಥಿತಿಯಲ್ಲಿತ್ತು. ಕೇರಳ-ಕರ್ನಾಟಕ ಸರಕಾರ ನೇಮಿಸಿದ್ದ ಗೋವಿಂದ ಪೈ ಸ್ಮಾರಕ ಸಮಿತಿಯು ಅಸಹಾಯಕವಾಗಿತ್ತು. ಈ ಸಂದರ್ಭದಲ್ಲಿ ಈ ಲೇಖಕರನ್ನೊಳಗೊಂಡಂತೆ ಬಿ. ವಿ. ಕಕ್ಕಿಲ್ಲಾಯ, ಡಾ| ರಮಾನಂದ ಬನಾರಿ, ಜಯಂತ ಕಿಣಿ ಮುಂತಾದವರು ಸೇರಿ ಮಾಜಿ ಮುಖ್ಯಮಂತ್ರಿ ಡಾ| ವೀರಪ್ಪ ಮೊಯಿಲಿಯವರನ್ನು ಮಧ್ಯಪ್ರವೇಶ ಮಾಡಲು ವಿನಂತಿಸಿದೆವು. ಮಂಜೇಶ್ವರಕ್ಕೆ ಆಗಮಿಸಿದ ಡಾ| ಮೊಯಿಲಿಯವರು ಮನೆಯ ದುಃಸ್ಥಿತಿಯನ್ನು ಕಂಡು ಮಮ್ಮಲ ಮರುಗಿದರು; ಅಂತೆಯೇ ಕಾರ್ಯಪ್ರವೃತ್ತರಾದರು. ತನ್ನ ಇಚ್ಛಾಶಕ್ತಿಯನ್ನು ಚಾಲಕಶಕ್ತಿಯೊಂದಿಗೆ ಮೇಳೈಸಿ, ಎರಡೂ ರಾಜ್ಯ ಸರಕಾರಗಳ ಮನವೊಲಿಸಿ ಕ್ಲಪ್ತ ಸಮಯಕ್ಕೆ ಅನುದಾನ ಸಿಗುವಂತೆ ಮಾಡಿದರು. ಕರ್ನಾಟಕ- ಕೇರಳ ರಾಜ್ಯ ಸರಕಾರಗಳು, ಭಾರತ್ ಪೆಟ್ರೋಲಿಯಂ, ಎಂಆರ್‌ಪಿಎಲ್, ಒಎನ್‌ಜಿಸಿ ಮುಂತಾದ ಕಂಪೆನಿಗಳ ಸಹಾಯ ಯಾಚಿಸಿದರು. ಉದ್ಯಮಿ ಡಾ| ದಯಾನಂದ ಪೈ ಸಹಿತ ಅನೇಕ ದಾನಿಗಳನ್ನು ಸಂಪರ್ಕಿಸಿದರು. ವಿದ್ವಾಂಸರಾದ ಡಾ| ಬಿ. ಎ. ವಿವೇಕ ರೈ, ಗೋವಿಂದ ಪೈ ಬಂಧು ವೆಂಕಟೇಶ್ ಪೈ, ಪ್ರೊ| ಎಂ.ಎಚ್. ಕೃಷ್ಣಯ್ಯ ಮುಂತಾದವರ ಸಹಾಯ ಪಡೆದರು. ಧರ್ಮರಾಜ್ ಅವರನ್ನು ಮುಖ್ಯ ಆರ್ಕಿಟೆಕ್ಟ್ ಆಗಿ ನೇಮಿಸಿಕೊಂಡು ಇಡೀ ಸಂಕೀರ್ಣದ ರೂಪುರೇಷೆಯನ್ನು ರಚಿಸಲಾಯಿತು. ತೇಜೋಮಯ ಅವರು ಸಹಕರಿಸಿದರು. ಹಣಕಾಸಿನ ಅಡೆತಡೆಗಳಿಂದ ಯೋಜನೆ ಏಳುಬೀಳುಗಳನ್ನು ಕಂಡರೂ ಡಾ| ಮೊಯಿಲಿಯವರು ಛಲ ಬಿಡದ ತ್ರಿವಿಕ್ರಮನಂತೆ ಕಾರ್ಯವನ್ನು ಸಾಧಿಸಿದರು. ಕೆಲಸಕಾರ್ಯಗಳು ಸುಸೂತ್ರವಾಗಿ ನಡೆಯಲು ಗೋವಿಂದ ಪೈ ಸ್ಮಾರಕ ಟ್ರಸ್ಟ್ ಸ್ಥಾಪಿಸಲಾಯಿತು. ವಿಶ್ರಾಂತ ಶಾಸಕ ಕುಂಞಂಬು ಅವರು ಮೊಲಿಯವರ ಜತೆಗೂಡಿ ಸಾಕಷ್ಟು ಕಾರ್ಯಗಳಲ್ಲಿ ಸಹಕರಿಸಿದರು. ಕೆಲಸದ ವೇಗಕ್ಕೆ ಮೊಯಿಲಿಯವರೊಂದಿಗೆ ಹೆಗಲೆಣೆಯಾಗಿ ನಿಂತ ಅಂದಿನ ಕಾಸರಗೋಡು ಜಿಲ್ಲಾಧಿಕಾರಿ ಸಗೀರ್ ಅಹಮ್ಮದರ ಸೇವೆಯನ್ನು ಮರೆಯುವಂತಿಲ್ಲ.
ಗಿಳಿವಿಂಡು ಸಂಕೀರ್ಣ
ಮಂಜೇಶ್ವರ ಗೋವಿಂದ ಪೈಗಳ ನಿವಾಸವೂ ಸೇರಿದಂತೆ ವಿವಿಧ ವಿಭಾಗಗಳನ್ನು ಒಳಗೊಂಡ ಒಟ್ಟು ಸ್ಮಾರಕ ಸಮುಚ್ಚಯಕ್ಕೆ ‘ಗಿಳಿವಿಂಡು’ ಎಂಬ ಹೆಸರು. ಇದು ಗೋವಿಂದ ಪೈಯವರ ಕವನ ಸಂಕಲನವೊಂದರ ಹೆಸರೂ ಹೌದು. ಬಹು ಆಯಾಮದ ಸಾಂಸ್ಕೃತಿಕ ಚಟುವಟಿಕೆಗಳು ನಡೆಯಲಿರುವ ಈ ಕೇಂದ್ರಕ್ಕೆ ಇದು ಅರ್ಥಪೂರ್ಣ ನಾಮಕರಣ. ಸಂಶೋಧನೆ ಮತ್ತು ಅಧ್ಯಯನಗಳ ಕೇಂದ್ರಕ್ಕೆ ‘ನಲಂದ’ ಎಂಬ ಹೆಸರಿಡಲಾಗಿದೆ. ಅಭ್ಯಾಸ ಮತ್ತು ಸಂಶೋಧನೆಗೆ ವಿಪುಲವಾದ ಅವಕಾಶಗಳನ್ನು ಒದಗಿಸಬಲ್ಲ ‘ನಲಂದ’ವು ಅಧ್ಯಯನಶೀಲರಿಗೆ ಕಡಲತಡಿಯ ಮಹಾನ್ ಸಾಹಿತ್ಯಿಕ ಕೇಂದ್ರ ಆಗಬೇಕೆಂಬ ಆಶಯದಿಂದ ನಮ್ಮ ಮುಂದೆ ಸಜ್ಜಾಗಿ ನಿಂತಿದೆ. ಪ್ರಾಚೀನ ಭಾರತದ ನಲಂದ, ವಿಶ್ವಕ್ಕೆ ಅಮೂಲ್ಯ ಕೊಡುಗೆಯನ್ನಿತ್ತ ಒಂದು ಅಪೂರ್ವ ವಿಶ್ವವಿದ್ಯಾಲಯ, ಅದೇ ಹೆಸರಿನ ಈ ತಾಣವೂ ಅರ್ಥಪೂರ್ಣವಾಗಬೇಕೆಂಬುದು ಆಶಯ. ಗೋವಿಂದ ಪೈಯವರು ಬಾಳಿ ಬದುಕಿದ ಮನೆ ಒಳ-ಹೊರಗೆ ಸಾಂಪ್ರದಾಯಿಕ ಸೊಬಗಿನೊಂದಿಗೆ ಯಥಾ ನಿರ್ಮಾಣಗೊಂಡಿದೆ.
ಗ್ರಂಥಭಂಡಾರ ‘ಸಾರಸ್ವತ’ದಲ್ಲಿ ಗೋವಿಂದ ಪೈಯವರ ಕೃತಿಗಳು ಲಭ್ಯವಿವೆ. ತೆಂಕುತಿಟ್ಟು ಯಕ್ಷಗಾನದ ಆದ್ಯ ಕವಿ ಪಾರ್ತಿಸುಬ್ಬನ ಸ್ಮರಣೆಗಾಗಿ ಯಕ್ಷಗಾನ ಮ್ಯೂಸಿಯಂ ವ್ಯವಸ್ಥೆಗೊಳಿಸಲಾಗಿದೆ. ರಂಗ ಪ್ರದರ್ಶನಕ್ಕೆ ಅನುಕೂಲವಾಗಲು ‘ಭವನಿಕ’ ಎಂಬ ಅತ್ಯಾಧುನಿಕ ರಂಗ ಮಂದಿರ ನಿರ್ಮಾಣಗೊಂಡಿದೆ. ವಸತಿ ಕಟ್ಟಡ ‘ವೈಶಾಖೀ’, ‘ಸಾಕೇತ’ ಮುಂತಾದವುಗಳು ಜನಪ್ರತಿನಿಧಿಗಳಾದ ಕರುಣಾಕರನ್ ಹಾಗೂ ಮಾಜಿ ವಿಧಾನಸಭಾ ಸದಸ್ಯ ಸಿ.ಎಚ್. ಕುಞಂಬು ಅವರ ನಿಧಿಯಿಂದ ಈಗಾಗಲೇ ನಿರ್ಮಾಣಗೊಂಡಿದ್ದು, ಡಾ| ವೀರಪ್ಪ ಮೊಯಿಲಿಯವರಿಂದ ಉದ್ಘಾಟನೆಗೊಂಡಿವೆ. ಬಹುಮುಖ ಉಪಯೋಗಕ್ಕೆ ಲಭ್ಯವಿರುವ ರಂಗಮಂದಿರ ಒಂದು ಲಲಿತಾ ಕಲಾ ಸೌಧವಾಗಿದೆ. ಪೈಯವರ ಜೀವಿತ ಕಾಲದಲ್ಲಿ ಉಪಯೋಗಿಸುತ್ತಿದ್ದ ವಸ್ತು ಅಮೂಲ್ಯ ವಸ್ತುಗಳನ್ನು ಸಂಗ್ರಹಿಸಿಡಲಾಗಿದೆ. ಕನ್ನಡದ ಪ್ರಥಮ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ ಬಹು ಆಯಾಮದ ಸ್ಮಾರಕ ನಿರ್ಮಾಣದ ಕನಸನ್ನು ಸಾಕಾರಗೊಳಿಸಿದ ಕೇರಳ- ಕರ್ನಾಟಕ ಸರಕಾರಗಳು, ಭಾರತ್ ಪೆಟ್ರೋಲಿಯಂ, ಒಎನ್‌ಜಿಸಿ, ಎಲ್ಲ ದಾನಿಗಳು ಹಾಗೂ ಫಲಾಪೇಕ್ಷೆ ಇಲ್ಲದೆ ಇದಕ್ಕಾಗಿ ದುಡಿದ ಎಲ್ಲರೂ ಅಭಿನಂದನೀಯರು.
– ಸುಭಾಶ್ಚಂದ್ರ ಕಣ್ವತೀರ್ಥ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ
PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್
Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ
Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು
Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್ ಸಿಬಂದಿ ಪರಾರಿ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.