ವಿಲೀನದಿಂದ ಬ್ಯಾಂಕಿಂಗ್ ವ್ಯವಸ್ಥೆ ಬಲಿಷ್ಠ
Team Udayavani, Jan 11, 2019, 4:55 AM IST
ಕೇಂದ್ರ ಸರಕಾರದ ಬ್ಯಾಂಕ್ ವಿಲೀನದ ವಿರುದ್ಧ ಪ್ರತಿಭಟನೆಗಳು ಕೇಳಿ ಬರುತ್ತಿರುವುದು ಸ್ವಾಭಾವಿಕ ಪ್ರತಿಕ್ರಿಯೆಯೆನ್ನಬಹುದು. ದಶಕಗಳ ಕಾಲ ಒಂದಿಲ್ಲೊಂದು ರೂಪದಲ್ಲಿ ಬ್ಯಾಂಕಿನೊಂದಿಗಿನ ಒಡನಾಟ ಅಥವಾ ಬೆಳೆದು ಬಂದಿದ್ದ ಸಾಮಿಪ್ಯತೆ / ಸಖ್ಯ ವಿಲೀನದೊಂದಿಗೆ ಮುರಿದು ಬೀಳುವಾಗ ಬೇಸರವಾಗುವುದು ಸಹಜವೇ ಆಗಿದೆ. ಇದಕ್ಕೊಂದು ನಿದರ್ಶನ : ಮರುಭೂಮಿಗಳುಳ್ಳ ರಾಜ್ಯದ ಹೆಸರುಳ್ಳ ಖಾಸಗಿ ಬ್ಯಾಂಕೊಂದು ತೊಂಬತ್ತರ ದಶಕದಲ್ಲಿ ಮಂಗಳೂರು ಕರಂಗಲಪಾಡಿಯಲ್ಲಿ ‚ಶಾಖೆ ತೆರೆದಿತ್ತು. ಬಳಿಯಲ್ಲೇ ಶಾಖೆ ಇದ್ದ ಕಾರಣ ಅಲ್ಲೊಂದು ಉಳಿತಾಯ ಖಾತೆ ಆರಂಭಿಸಿದ್ದೆ. ಆ ಕಾರಣ ಹೊರತುಪಡಿಸಿ ಆ ಬ್ಯಾಂಕಿನೊಂದಿಗೆ ಯಾವ ಮಮತೆಯೂ ನನ್ನಲ್ಲಿರಲಿಲ್ಲ. 2010ರಲ್ಲಿ ಆ ಬ್ಯಾಂಕ್ ಖಾಸಗಿ ಬಲಿಷ್ಠ ಬ್ಯಾಂಕಿನೊಂದಿಗೆ ವಿಲೀನವಾದಾಗ ಅಷ್ಟು ದಿನ ವ್ಯವಹರಿಸಿದ ಬ್ಯಾಂಕ್ ಇನ್ನಿಲ್ಲವಲ್ಲಾ ಎಂದು ನನಗರಿವಿಲ್ಲದೆಯೇ ಬೇಸರಪಟ್ಟುಕೊಂಡಿದ್ದೆ. ಆದರೆ ಬೃಹತ್ ಬ್ಯಾಂಕುಗಳ ಸಾಮರ್ಥ್ಯ ವಿಲೀನವಾದ ಹೊಸ ಬ್ಯಾಂಕಿನ ಗ್ರಾಹಕನಾದಾಗಲೇ ತಿಳಿದದ್ದು. ವಿಷಯ ಹಾಗಿರುವಾಗ ನಮ್ಮ ನೆಲದಲ್ಲೇ ಹುಟ್ಟಿ, ಬೆಳೆದು, ನಮ್ಮ ನಡುವೆಯೇ ಎತ್ತರಕ್ಕೆ ಏರಿ, ಬ್ಯಾಂಕಿಂಗ್ ವ್ಯವಹಾರ, ಉದ್ಯೋಗ, ಚಟುವಟಿಕೆಗಳಿಗೆ ನೆರವು ಅಥವಾ ಇನ್ನಾವುದೇ ರೂಪದಲ್ಲಿ ಆಸರೆಯಾಗಿದ್ದ ಬ್ಯಾಂಕ್ ಬೇರೊಂದು ಬ್ಯಾಂಕಿನೊಂದಿಗೆ ವಿಲೀನವಾಗಿ, ಅದರ ಹೆಸರೇ ಅಳಿಸಿ ಹೋಗುವ ಸಂದರ್ಭ ವ್ಯಥೆಯಾಗುವುದು ಸಹಜವೇ ಆಗಿದೆ.
ಬ್ಯಾಂಕ್ ವಿಲೀನದ ಈ ಸಂದರ್ಭ ಈಗಾಗಲೇ ಘಟಿಸಿರುವ ಬ್ಯಾಂಕಿಂಗ್ ವಿಷಯಕ್ಕೆ ಸಂಬಂಧವಿಲ್ಲದಿದರೂ ಅದೇ ತೆರನಾದ ಬೇರೊಂದು ಸಂಗತಿಯನ್ನು ಗಮನಿಸೋಣ. ನಮ್ಮದೇ ಊರಿನಲ್ಲಿ ನಮ್ಮದೇ ಜನ ತಲೆತಲಾಂತರದಿಂದ ಜೀನಸು, ರೆಡಿಮೇಡ್ ಬಟ್ಟೆಬರೆ, ಚಪ್ಪಲಿ ಮತ್ತಿತರ ಹೆಚ್ಚಿನೆಲ್ಲಾ ನಮೂನೆಯ ವ್ಯಾಪಾರ ವಹಿವಾಟು ಮಾಡಿಕೊಂಡು ಬಂದಿದ್ದ ಕಾಲವೊಂದಿತ್ತು. ಈ ವ್ಯಾಪಾರಿಗಳು ತಮ್ಮ ಗಿರಾಕಿಗಳಿಗೆ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಅತ್ಯುತ್ತಮ ಎನ್ನಬಹುದಾದ ಸೇವೆ ಒದಗಿಸುತ್ತಿದ್ದರು. ಊರಿನ ಆಗುಹೋಗುಗಳಲ್ಲಿ ಮಿಳಿತವಾಗಿ ಸಹಾಯ ಸಹಕಾರ ನೀಡುತ್ತಿದ್ದರು. ಆದರೇನಾಯಿತು? ತೊಂಬತ್ತರ ದಶಕದಲ್ಲಿ ಜಾಗತೀಕರಣದ ಪ್ರಭಾವದಿಂದಾಗಿ, ಭಾರತದಲ್ಲಿ ವ್ಯಾಪಾರ ವಹಿವಾಟುಗಳಲ್ಲಿ ಬದಲಾವಣೆಯ ಗಾಳಿ ಬಲವಾಗಿ ಬೀಸತೊಡಗಿತು. ಬೇರೆ ರಾಜ್ಯಗಳಿಂದ ಮಾತ್ರವಲ್ಲದೆ ವಿದೇಶಗಳಿಂದಲೂ ವ್ಯಾಪಾರಗಳು ನಮ್ಮ ನಗರಗಳಿಗೆ ಲಗ್ಗೆ ಇಟ್ಟವು. ಮಾಲ್‌ಗಳು ಎದ್ದವು. ಜೀನಸು, ಬಟ್ಟೆಬರೆ, ಚಪ್ಪಲಿ ಮಾತ್ರವಲ್ಲದೆ ಮೀನು, ಮಾಂಸ, ಮದ್ಯ, ಎಲೆಕ್ಟ್ರಾನಿಕ್ಸ್, ಫನೀìಚರ್, ಮತ್ತಿತರ ಹೆಚ್ಚಿನೆಲ್ಲಾ ನಮೂನೆಯ ಆಧುನಿಕ ಜೀವನಕ್ಕೆ ಏನೆಲ್ಲಾ ಅಗತ್ಯ ಅವೆೆಲ್ಲಾ ಒಂದೇ ಸೂರಿನಡಿ ದೊರಕತೊಡಗಿದವು. ಇದು ಎಲ್ಲಿಯವರೆಗೆ ಸಾಗಿತು ಎಂದರೆ ಒಂದೊಂದು ಥರದ ಸಣ್ಣ ವ್ಯಾಪಾರ ಮಾಡಿಕೊಂಡು, ತಮ್ಮ ಮತ್ತು ಕುಟುಂಬದ ಹೊಟ್ಟೆ ತುಂಬಿಸುತ್ತಾ, ಉತ್ತಮ ಸಾಮಾಗ್ರಿಗಳನ್ನು ಪ್ರಾಮಾಣಿಕವಾಗಿ ಒದಗಿಸಿಕೊಡುತ್ತಾ, ಊರಿನ ಆಗುಹೋಗುಗಳಲ್ಲಿ ಸ್ಪಂದಿಸುತ್ತಿದ್ದ ಅನೇಕ ವ್ಯಾಪಾರಿಗಳಿಗೆ ತಮ್ಮ ವ್ಯಾಪಾರ – ವಹಿವಾಟುಗಳನ್ನು ಮುಚ್ಚದೆ ಅನ್ಯ ದಾರಿ ಕಾಣದಾಯಿತು. ನಮ್ಮದೇ ಊರಿನಲ್ಲಿ ವ್ಯಾಪಾರ ಮಾಡಿಕೊಂಡಿದ್ದ ನಮ್ಮದೇ ಸ್ಥಳೀಯ ವ್ಯಾಪಾರಸ್ಥರು ಮಾಯವಾಗತೊಡಗಿದರು.
ಇಂತಹ ಜಾಗತೀಕರಣದ ಪ್ರಭಾವದ ಮುಂಚೂಣಿಯಲ್ಲಿರುವ ಭಾರತ ಕೆಲವು ವಿಷಯಗಳಲ್ಲಿ ಅದೂ ಜಗತ್ತಿನ ಎದುರು ತಲೆ ಎತ್ತಿ ನಿಲ್ಲಬಹುದಾದ ಬ್ಯಾಂಕಿಂಗ್‌ನಂತಹ ಮುಖ್ಯವಾದ ವಿಷಯಗಳಲ್ಲಿ ಇನ್ನೂ ಸಾಧಿಸಬೇಕಾಗಿರುವುದು ಬಹಳಷ್ಟಿದೆ. ಜಗತ್ತಿನ ಹತ್ತು (ಟಾಪ್ 10) ಅತೀ ಎತ್ತರದ ಅಥವಾ ಅತ್ಯುತ್ತಮ ಬ್ಯಾಂಕುಗಳ ಪಟ್ಟಿಯಲ್ಲಿ ಭಾರತ ಇನ್ನೂ ಸ್ಥಾನ ಪಡೆದಿಲ್ಲ ಎನ್ನುವುದು ಬೇಸರದ ಸಂಗತಿ. ಯಾವ ಮಾನದಂಡದಲ್ಲಿ ನೋಡಿದರೂ ಭಾರತದ ಸ್ಥಾನ ಹಿಂದಿದೆ.
ಈ ದಿಶೆಯಲ್ಲಿ, ಭಾರತದಲ್ಲಿ ಬ್ಯಾಂಕಿಂಗ್ ಸಂಸ್ಥೆಗಳನ್ನು ಸುದೃಢಗೊಳಿಸುವ ಬಗೆಗಿನ ಹೇಳಿಕೆಗಳು ಅನೇಕ ವರ್ಷಗಳಿಂದ ಕೇಳಿಬರುತ್ತಿವೆ. ಈ ಬಗ್ಗೆ ಕೇಂದ್ರ ಸರಕಾರ ಈಗಲಾದರೂ ಮುಂದಡಿ ಇಟ್ಟಿರುವುದು ಸ್ವಾಗತಾರ್ಹ. ದೇಶದ ಪ್ರಗತಿ ಹಿತದೃಷ್ಟಿಯಿಂದ ಇದು ಅಪೇಕ್ಷಣೀಯವೂ ಆಗಿದೆ. ನಮ್ಮ ದೇಶದಲ್ಲಿ ಬ್ಯಾಂಕುಗಳ ವಿಲೀನ ನಡೆಯುವುದು ಇದೇ ಮೊದಲಲ್ಲ. ವಿಲೀನದ ಸಂದರ್ಭಗಳಲ್ಲಿ ವಿರೋಧಿಸುವುದು, ಅಪಸ್ವರಗಳು ಏಳುವುದು ಸ್ವಾಭಾವಿಕ. ಆದರೆ ಜಗತ್ತಿನ ಬ್ಯಾಂಕಿಂಗ್ ಸಂಸ್ಥೆಗಳೊಂದಿಗೆ ಪೈಪೋಟಿ ನಡೆಸಲು, ಆ ಸಂಸ್ಥೆಗಳ ಪಟ್ಟಿಯಲ್ಲಿ ಮೇಲೇರಲು ವಿಲೀನದಂತಹ ಕ್ರಮಗಳು ಅನಿವಾರ್ಯ.
ಈ ಕೂಡಲೇ ಅಲ್ಲವಾದರೂ ಮುಂದೊಂದು ದಿನ ದೇಶದಲ್ಲಿ ಹೆಚ್ಚೆಂದರೆ ಐದು ಬಲಿಷ್ಠವಾದ ಬ್ಯಾಂಕಿಂಗ್ ಸಂಸ್ಥೆಗಳನ್ನು ರೂಪಿಸಿದಲ್ಲಿ ಭಾರತ ಈ ವಿಷಯದಲ್ಲಿ ವಿಶ್ವದಲ್ಲಿ ತಲೆ ಎತ್ತಿ ನಿಲ್ಲಬಹುದು. ಇದರಿಂದ ಆಂತರಿಕವಾಗಿಯೂ ಅನೇಕ ಪ್ರಯೋಜನಗಳಿವೆ. ನಾವು ಈಗ ನೋಡುತ್ತಿರುವಂತೆ ಒಂದೇ ಬೀದಿಯಲ್ಲಿ ವಿವಿಧ ಬ್ಯಾಂಕುಗಳ ಮೂರು- ನಾಲ್ಕು ಅಥವಾ ಹೆಚ್ಚು ಶಾಖೆಗಳಿವೆ. ಒಂದರಲ್ಲೇ ಎರಡು ಅಥವಾ ಹೆಚ್ಚು ಬ್ಯಾಂಕುಗಳ ಶಾಖೆಗಳು ಇರುವ ಕಟ್ಟಡಗಳೂ ಇವೆ. ನೆಟ್‌ಬ್ಯಾಂಕಿಂಗ್‌ನಂತಹ ಸವಲತ್ತುಗಳಿಂದಾಗಿ ಗ್ರಾಹಕರು ಬ್ಯಾಂಕಿಂಗ್ ಶಾಖೆಗಳಿಗೆ ಭೇಟಿ ನೀಡುವುದು ಈಗಾಗಲೇ ಕಡಿಮೆಯಾಗಿದೆ. ಪ್ಲಾಸ್ಟಿಕ್‌ಮನಿ ವ್ಯವಸ್ಥೆಯಿಂದಾಗಿ ಎಟಿಎಂ ಬಳಕೆಯೂ ಕಡಿಮೆಯಾಗಿದೆ. ಬ್ಯಾಂಕುಗಳು ವಿಲೀನಗೊಂಡರೆ ಶಾಖೆಗಳ, ಎಟಿಎಂಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ನಿಯಂತ್ರಣ ಸಾಧಿಸಬಹುದು. ಬ್ಯಾಂಕುಗಳ ಅಧ್ಯಕ್ಷರು, ನಿರ್ದೇಶಕರಂತಹ ಅತ್ಯುನ್ನತ ಹುದ್ದೆಗಳಲ್ಲಿ ಕಡಿತವಾಗಲಿದೆ. ಬ್ಯಾಂಕುಗಳ ಕಡಿಮೆ ಸಂಖ್ಯೆಯ ಕಾರಣ ಆಡಳಿತದ ಬಾಬ್ತು ಖರ್ಚಾಗುವ ವೆಚ್ಚದಲ್ಲಿ ಉಳಿತಾಯ ಸಾಧ್ಯವಾಗಲಿದೆ. ಸಾಲ ನೀಡುವ ಸಲುವಾಗಿ ಬ್ಯಾಂಕುಗಳು ಸಂಭಾವ್ಯ ಸಾಲಗಾರರನ್ನು ಸೆಳೆಯುವುದು ನಿಂತು ಸಾಲ ನೀಡುವಿಕೆಯಲ್ಲಿ ಮೋಸ ವಂಚನೆಗೆ ಅವಕಾಶ ಕಡಿಮೆಯಾಗಲಿದೆ. ಚೆಕ್ ವಿಲೇವಾರಿಯಂತಹ ವ್ಯವಹಾರಗಳು ತ್ವರಿತಗೊಳ್ಳಲಿವೆ. ಕೆಳ ಸ್ತರದಲ್ಲಿ ಬ್ಯಾಂಕ್ ಉದ್ಯೋಗಗಳಲ್ಲಿ ಕಂಪ್ಯೂಟರ್ ತಿಳುವಳಿಕೆಯ ಉದ್ಯೋಗಗಳಲ್ಲಿ ಹೆಚ್ಚಳವಾಗಲಿದೆ. ಉದ್ಯೋಗಿಗಳಲ್ಲಿ ಸಮುದಾಯ, ಪ್ರಾದೇಶಿಕತೆ ಮುಂತಾದ ವಿಷಯಗಳು ನಿವಾರಣೆಯಾಗಿ ಉತ್ತಮ ಸೇವಾ ತತ್ಪರತೆ ಸಾಧ್ಯವಾಗುತ್ತದೆ. ಇಂತಹ ಇನ್ನಷ್ಟು ಮಾನದಂಡಗಳ ಮೂಲಕ ಬ್ಯಾಂಕಿಂಗ್ ವ್ಯವಸ್ಥೆ ಸುಧಾರಣೆಯಾಗಲು ಮತ್ತು ಲಾಭ ಹೆಚ್ಚಲು ಅವಕಾಶವಾಗಲಿದೆ. ಭಾವನಾತ್ಮತೆ ಮನುಷ್ಯನ ಸಹಜ ಗುಣ. ಬ್ಯಾಂಕುಗಳ ವಿಚಾರದಲ್ಲಿಯೂ ಇದು ನಿಜ. ಹಾಗೆಂದು ಭಾವನಾತ್ಮತೆಗೆ ಹೆಚ್ಚು ಒತ್ತು ನೀಡಿದರೆ ದೇಶದ ಪ್ರಗತಿಯನ್ನು ಮೇಲ್ಮಟ್ಟಕ್ಕೊಯ್ಯಲು ಸಾಧ್ಯವಾಗದು ಎಂಬುದನ್ನು ಅರಿಯುವುದೂ ಅಗತ್ಯ.
ಎಚ್. ಆರ್. ಆಳ್ವ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.