ದೇಶಕ್ಕೆ ಮಾದರಿ ತೆಲಂಗಾಣ “ಜಲಯಜ್ಞ’
Team Udayavani, Oct 5, 2019, 5:37 AM IST
ಸುಮಾರು 45 ಲಕ್ಷ ಎಕರೆ, ಹೈದರಾಬಾದ್ ಮಹಾನಗರ ಸೇರಿದಂತೆ ಅನೇಕ ನಗರ, ಸಾವಿರಾರು ಹಳ್ಳಿಗಳಿಗೆ ನೀರು ನೀಡುವ ಈ ಯೋಜನೆ ನಿರ್ಮಾಣಕ್ಕೆ ಒಂದೇ ಒಂದು ಹಳ್ಳಿ ಮುಳುಗಡೆ ಆಗಿಲ್ಲ. ಕಾಲುವೆ ಹಾಗೂ ಬ್ಯಾರೇಜ್ ನಿರ್ಮಾಣಕ್ಕೆ ಅತ್ಯಂತ ಕಡಿಮೆ ಪ್ರಮಾಣದ ಭೂಮಿ ಸ್ವಾಧೀನ ಆಗಿದೆ.
ಐದು ವರ್ಷಗಳ ಹಿಂದೆಯಷ್ಟೇ ಅಸ್ತಿತ್ವಕ್ಕೆ ಬಂದ ತೆಲಂಗಾಣ ರಾಜ್ಯ, ಬೃಹತ್ ಜಲಯಜ್ಞದ ಮೂಲಕ ವಿಶ್ವದ ಗಮನ ಸೆಳೆಯುತ್ತಿದೆ. ಜಗತ್ತಿನ ಅತಿದೊಡ್ಡ ಬಹುಪಯೋಗಿ ಏತ ನೀರಾವರಿ ಯೋಜನೆ ಹೊಂದಿದ ಬಗ್ಗೆ ಹೆಮ್ಮೆಯ ನಗು ಬೀರುತ್ತಿದೆ. ಮಳೆ, ರಾಜ್ಯದ ಸಮೃದ್ಧಿ-ಕಲ್ಯಾಣಕ್ಕಾಗಿ ದೇವರ ಮೊರೆ ಹೋಗಿ ಹೋಮ, ಯಾಗ-ಯಜ್ಞ ಮಾಡುವ ಮೂಲಕ ಹಲವರ ಮೆಚ್ಚುಗೆ-ಟೀಕೆಗಳಿಗೆ ಗುರಿಯಾಗಿದ್ದ ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್, ಕೇವಲ ಮೂರು ವರ್ಷದಲ್ಲೇ ಬೃಹತ್ ನೀರಾವರಿ ಯೋಜನೆಯೊಂದರ ಸಾಕಾರದ ಸಾಧನೆಯ ದಾಖಲೆ ಮೆರೆದಿದ್ದಾರೆ. 2014, ಜೂ.2ರಂದು ಆಂಧ್ರಪ್ರದೇಶದಿಂದ ವಿಭಜನೆ ಗೊಂಡು ನೂತನ ರಾಜ್ಯವಾಗಿ ಹೊರಹೊಮ್ಮಿದ್ದ ತೆಲಂಗಾಣದ ಮುಂದೆ ಅನೇಕ ಸಮಸ್ಯೆ-ಸವಾಲುಗಳು ಇದ್ದವು. ಅವುಗಳಲ್ಲಿ ಕೃಷಿ, ನೀರಾವರಿ-ಕುಡಿಯುವ ನೀರಿನ ಸಮಸ್ಯೆಯೂ ಪ್ರಮುಖವಾಗಿತ್ತು.
ನೀರಿನ ವಿಚಾರದಲ್ಲಿ ತೆಲಂಗಾಣ ಗೋದಾವರಿ ಮತ್ತು ಕೃಷ್ಣ ನದಿಗಳನ್ನು ಅವಲಂಬಿಸಿದೆ. ಕೃಷ್ಣದಿಂದ ಹೆಚ್ಚಿನ ನೀರು ದೊರೆಕುತ್ತಿಲ್ಲ. ಗೋದಾವರಿ ನದಿ ಇದ್ದರೂ ಇಲ್ಲದ ಸ್ಥಿತಿ ಸೃಷ್ಟಿಸಿತ್ತು. ಪ್ರತಿ ವರ್ಷ ಸರಿಸುಮಾರು 1,500ರಿಂದ 3,000 ಟಿಎಂಸಿ ಅಡಿಯಷ್ಟು ನೀರು ಸಮುದ್ರ ಸೇರುತ್ತಿತ್ತಾದರೂ ಅದರ ಬಳಕೆ ಆಗಿರಲಿಲ್ಲ. ಆಂಧ್ರಪ್ರದೇಶ ದಲ್ಲಿದ್ದಾಗ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂಬ ನೋವು-ಆಕ್ರೋಶ ತೆಲಂಗಾಣ ಭಾಗದ್ದಾಗಿತ್ತು. ಇದು ಪ್ರತ್ಯೇಕ ರಾಜ್ಯದ ಹೋರಾಟ ತೀವ್ರತೆ ಪಡೆಯುವಂತೆ ಮಾಡಿತ್ತು. ಹೋರಾಟದ ಕಾರಣಕ್ಕೋ, ರಾಜಕೀಯ ಕಾರಣಕ್ಕೋ ಒಟ್ಟಿನಲ್ಲಿ 2014ರಲ್ಲಿ ತೆಲಂಗಾಣ ಪ್ರತ್ಯೇಕ ರಾಜ್ಯವಾಗಿ ಉದಯವಾಗಿತ್ತು.
ನೂತನ ರಾಜ್ಯದ ಅಧಿಕಾರ ಹಿಡಿದ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್ ತಮ್ಮ ಬಜೆಟ್‌ನಲ್ಲಿ ಕೃಷಿ, ನೀರಾವರಿ, ಗ್ರಾಮೀಣಕ್ಕೆ ಶೇ.60ರಷ್ಟು ಮೀಸಲಿರಿಸಿದ್ದರು. ಮಹತ್ವದ ನೀರಾವರಿ ಯೋಜನೆಗೆ ಮುಂದಡಿ ಇರಿಸಿದ್ದರು.
ಕಾಳೇಶ್ವರಂ ಪ್ರೊಜೆಕ್ಟ್
ಜಗತ್ತಿನ ಅತಿದೊಡ್ಡ ಬಹುಪಯೋಗಿ ಏತ ನೀರಾವರಿ ಯೋಜನೆ ಎಂಬ ಖ್ಯಾತಿ ತೆಲಂಗಾಣದ ಕಾಳೇಶ್ವರಂ ಪ್ರೊಜೆಕ್ಟ್‌ನದಾಗಿದೆ. ಅವಿ ಭ ಜಿತ ಆಂಧ್ರಪ್ರದೇಶ ಸರಕಾರ ಡಾ| ಬಿ.ಆರ್.ಅಂಬೇಡ್ಕರ್ ಪ್ರಾಣ ಹಿತ ಚೆವೆಳ್ಳ ಸುಜಲಾ ಸ್ರವಂತಿ ನೀರಾವರಿ ಯೋಜನೆಯನ್ನು ಕೈಗೆತ್ತಿಗೊಂಡಿತ್ತು.
ಅದಿಲಾಬಾದ್ ಜಿಲ್ಲೆಯ ತಮ್ಮಿಡಿಹಟ್ಟಿ ಬಳಿ ಪ್ರಾಣಹಿತ ನದಿಯಿಂದ ಸುಮಾರು 160 ಟಿಎಂಸಿ ಅಡಿ ನೀರನ್ನು ಎಲ್ಲಂಪಲ್ಲಿ ಬ್ಯಾರೇಜ್‌ಗೆ ತಂದು ಅಲ್ಲಿಂದ ವಿವಿಧ ಕಡೆ ನೀರು ಸಾಗಿಸುವುದು, ಆ ಮೂಲಕ ಸುಮಾರು 16.40 ಲಕ್ಷ ಎಕರೆಗೆ ನೀರಾವರಿ, ಹೈದರಾಬಾದ್ ಮಹಾ ನಗರಕ್ಕೆ ಕುಡಿಯುವ ನೀರು, ಕೈಗಾರಿಕೆಗಳಿಗೆ ನೀರು, ವಿವಿಧ ಗ್ರಾಮಗಳಿಗೆ ಕುಡಿಯುವ ನೀರು ನೀಡಿಕೆ ಉದ್ದೇಶ ಯೋಜನೆಯದ್ದು. ಆದರೆ ಮಹಾರಾಷ್ಟ್ರದ ಆಕ್ಷೇಪ, ಕೇಂದ್ರ ಜಲ ಆಯೋಗದಿಂದ ಮರುಪರಿಶೀಲನೆಗೆ ಸೂಚನೆ ಇತ್ಯಾದಿ ಕಾರಣಗಳಿಂದ ಯೋಜನೆ ವಿಳಂಬಕ್ಕೆ ಸಿಲುಕಿತ್ತು.
ತೆಲಂಗಾಣ ರಾಜ್ಯ ರಚನೆ ನಂತರ ಡಾ| ಬಿ.ಆರ್.ಅಂಬೇಡ್ಕರ್ ಪ್ರಾಣಹಿತ ಚೆವೆಳ್ಳ ಸುಜಲಾ ಸ್ರವಂತಿ ನೀರಾವರಿ ಯೋಜನೆಯನ್ನು ಎರಡು ಭಾಗಗಳಲ್ಲಿ ವಿಂಗಡಿಸಿ, ಕಾಳೇಶ್ವರಂ ಬಹುಪಯೋಗಿ ಕುಡಿಯುವ ನೀರು ಯೋಜನೆಯನ್ನು ಆರಂಭಿಸಿತ್ತು.
ಕಾಳೇಶ್ವರಂ ಗೋದಾವರಿ ಮತ್ತು ಪ್ರಾಣಹಿತ ನದಿಗಳ ಸಂಗಮವಾಗಿದೆ. ಗೋದಾವರಿ ಪುಷ್ಕರಣಿ ಇಲ್ಲಿನ ಖ್ಯಾತಿ ಮತ್ತು ವಿಶೇಷ. ಕಾಳೇಶ್ವರಂನಿಂದ ಸುಮಾರು 25 ಕಿ.ಮೀ.ದೂರದ ಮೆಡಿಗುಡ್ಡಾದ ಬಳಿ ಬ್ಯಾರೇಜ್ ನಿರ್ಮಿಸಲಾಗಿದೆ. ಮೆಡಿಗುಡ್ಡಾ ಬಳಿ ಗೋದಾವರಿ ನದಿಯಲ್ಲಿ ಸುಮಾರು 284.3 ಟಿಎಂಸಿ ಅಡಿಯಷ್ಟು ನೀರು ಲಭ್ಯತೆ ಇದ್ದು, ಅದರ ಬಳಕೆಗೂ ಕೇಂದ್ರ ಜಲ ಆಯೋಗ ಸಮ್ಮತಿ ಸೂಚಿಸಿದೆ.
ಮೆಡಿಗುಡ್ಡಾ ಬ್ಯಾರೇಜ್‌ನಿಂದ ಸುಮಾರು 195 ಟಿಎಂಸಿ ಅಡಿಯಷ್ಟು ನೀರನ್ನು ಮೂರು ಬ್ಯಾರೇಜ್‌ಗಳ ಮೂಲಕ ಅನ್ನಾರಂ ಬ್ಯಾರೇಜ್, ಸುಂದಿಳ್ಳಾ ಬ್ಯಾರೇಜ್ ಅಲ್ಲಿಂದ ಎಲ್ಲಂಪಲ್ಲಿ ಬ್ಯಾರೇಜ್‌ಗೆ ನೀರು ಸಂಗ್ರಹಿಸಲಾಗುತ್ತದೆ. ಇದರ ಮೂಲಕ ಸುಮಾರು 18.25ಲಕ್ಷ ಎಕರೆಗೆ ಹೊಸದಾಗಿ ನೀರಾವರಿ ಸೌಲಭ್ಯ ಸೇರಿದಂತೆ ಒಟ್ಟಾರೆ 13 ಜಿಲ್ಲೆಗಳ 45 ಲಕ್ಷ ಎಕರೆಗೆ ನೀರಾವರಿ ಸೌಲಭ್ಯ ನೀಡುವುದಾಗಿದೆ.
ಕಾಳೇಶ್ವರಂ ಪ್ರೊಜೆಕ್ಟ್ ಅಂದಾಜು 80,200 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದ್ದು, ಈಗಾಗಲೇ 53,000 ಕೋಟಿ ರೂ.ನಷ್ಟು ವೆಚ್ಚ ಮಾಡಲಾಗಿದೆ. ಯೋಜನೆಯಡಿ ಒಟ್ಟಾರೆಯಾಗಿ 240 ಟಿಎಂಸಿ ಅಡಿಯಷ್ಟು ನೀರು ಲಭ್ಯತೆಯಾಗುತ್ತಿದ್ದು, ಇದರಲ್ಲಿ 169 ಟಿಎಂಸಿ ಅಡಿ ನೀರು ಕೃಷಿಗೆ, 40 ಟಿಎಂಸಿ ಅಡಿ ಕುಡಿಯುವ ನೀರಿನ ಬಳಕೆಗೆ, 16 ಟಿಎಂಸಿ ಅಡಿ ಕೈಗಾರಿಕೆಗಳಿಗೆ ನೀಡಲು ಉದ್ದೇಶಿಸಲಾಗಿದೆ.
ಯೋಜನೆ ವಿಶೇಷತೆ ಏನು?
ಕಾಳೇಶ್ವರಂ ಪ್ರೊಜೆಕ್ಟ್ ವಿಶ್ವದ ಅತಿದೊಡ್ಡ ಯೋಜನೆ ಎಂಬ ಕೀರ್ತಿಯ ಜತೆಗೆ, ಒಂದೇ ದಿನ ಸುಮಾರು 21ಸಾವಿರ ಕ್ಯುಬಿಕ್ ಮೀಟರ್ ಕಾಂಕ್ರಿಟ್ ಬಳಸಲಾಗಿದೆ. ಚೀನಾದ ತ್ರಿಗಾರ್ಜೆಸ್ ಡ್ಯಾಂಗೆ ಒಂದೇ ದಿನ 22 ಸಾವಿರ ಕ್ಯುಬಿಕ್ ಮೀಟರ್ ಕಾಂಕ್ರಿಟ್ ಬಳಸಲಾಗಿದೆ. ಆ ಮೂಲಕ ಕಾಳೇಶ್ವರಂ ಪ್ರೊಜೆಕ್ಟ್ ಒಂದೇ ದಿನ ಅತಿ ಹೆಚ್ಚು ಕಾಂಕ್ರಿಟ್ ಬಳಸಿದ ವಿಶ್ವದ 2ನೇ ಯೋಜನೆ ಎನ್ನಿಸಿಕೊಂಡಿದೆ. ಗೋದಾವರಿ ನದಿ ನೀರನ್ನು ಹಿಮ್ಮುಖವಾಗಿ ಲಿಫ್ಟ್ ಮಾಡುವುದರ ಜತೆಗೆ ನದಿಯ ನೈಸರ್ಗಿಕ ಹರಿವಿಗೆ ತೊಂದರೆ ಮಾಡಿಲ್ಲ. ಇನ್ನೊಂದು ವಿಶೇಷವೆಂದರೆ ಸುಮಾರು 45 ಲಕ್ಷ ಎಕರೆ, ಹೈದರಾಬಾದ್ ಮಹಾನಗರ ಸೇರಿದಂತೆ ಅನೇಕ ನಗರ, ಸಾವಿರಾರು ಹಳ್ಳಿಗಳಿಗೆ ನೀರು ನೀಡುವ ಈ ಯೋಜನೆ ನಿರ್ಮಾಣಕ್ಕೆ ಒಂದೇ ಒಂದು ಹಳ್ಳಿ ಮುಳುಗಡೆ ಆಗಿಲ್ಲ. ಕಾಲುವೆ ಹಾಗೂ ಬ್ಯಾರೇಜ್ ನಿರ್ಮಾಣಕ್ಕೆ ಅತ್ಯಂತ ಕಡಿಮೆ ಪ್ರಮಾಣದ ಭೂಮಿ ಸ್ವಾಧೀನ ಆಗಿದೆ. ನದಿಯಲ್ಲಿಯೇ ನೀರು ಸಂಗ್ರಹದ ತಂತ್ರ ಜ್ಞಾನ ವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿದೆ. ಯೋಜನೆಗೆ ಹಲವು ಯಂತ್ರೋಪಕರಣ, ಸಲಕರಣೆಗಳನ್ನು ಜರ್ಮನಿ, ಜಪಾನ್, ಫಿನ್‌ಲ್ಯಾಂಡ್, ಆಸ್ಟ್ರೇಲಿಯಾ ಇನ್ನಿತರ ದೇಶಗಳಿಂದ ಪಡೆಯಲಾಗಿದೆ.
ನೀರು ಪೂರೈಕೆಗೆ ಒಟ್ಟಾರೆಯಾಗಿ 1,832ಕಿ.ಮೀ. ಉದ್ದದ ಕಾಲುವೆ, ನೀರು ಹರಿಯುವ ವ್ಯವಸ್ಥೆ ರೂಪಿಸಲಾಗಿದೆ. ಇದರಲ್ಲಿ 1,531 ಕಿ.ಮೀ. ಉದ್ದ ಗ್ರ್ಯಾವಿಟಿ ಹಾಗೂ 203 ಕಿ.ಮೀ. ಉದ್ದ ಸುರಂಗ ಗ್ರ್ಯಾವಿಟಿ ಮೂಲಕ ನೀರು ಹರಿಯುತ್ತದೆ. ಕೇವಲ 98 ಕಿ.ಮೀ. ಉದ್ದ ಮಾತ್ರ ಪಂಪ್‌ಗ್ಳ ಮೂಲಕ ನೀರು ಕಳುಹಿಸಲಾಗುತ್ತದೆ. ಶೇ.60ರಷ್ಟು ಗ್ರ್ಯಾವಿಟಿ ಮೂಲಕ ಹರಿದರೆ, ಶೇ.40ರಷ್ಟು ಮಾತ್ರ ಪಂಪ್ ಮೂಲಕ ನೀರು ಹರಿಯುತ್ತದೆ. ಯೋಜನೆಯಲ್ಲಿ 7 ಲಿಂಕ್ ಹಾಗೂ 28 ಪ್ಯಾಕೇಜ್‌ಗಳ ರೂಪದಲ್ಲಿ ವಿಂಗಡಿಸಲಾಗಿದೆ. ಆನ್‌ಲೈನ್ ಬ್ಯಾಲೆನ್ಸಿಂಗ್ ಜಲಾಶಯಗಳನ್ನು ನಿರ್ಮಿಸಲಾಗಿದೆ. ಕಾಳೇಶ್ವರಂ ಯೋಜನೆ ಕೇವಲ ನೀರು ಒದಗಿಸುವುದಷ್ಟೇ ಅಲ್ಲ. ವರ್ಷದ ಬಹುತೇಕ ದಿನಗಳವರೆಗೆ ನೀರಿಲ್ಲದೆ ಒಣಗುತ್ತಿದ್ದ ಗೋದಾವರಿ ನದಿಯಲ್ಲಿ ಸದಾ ನೀರು ಇರುವಂತೆ ಮಾಡಿ ನದಿಯನ್ನು ಪುನರುಜ್ಜೀವನ ಕಾರ್ಯ ಮಾಡಿದೆ.
ಯೋಜನೆ ನಿರ್ಮಾಣದಲ್ಲಿ ಸುಮಾರು 27 ರಾಜ್ಯಗಳ ಕಾರ್ಮಿಕರು, ತಂತ್ರಜ್ಞರು ಕಾರ್ಯನಿರ್ವಹಿಸುತ್ತಿದ್ದು, ಸುಮಾರು 59 ಸಾವಿರ ಜನರು ಒಂದೇ ದಿನ ಕಾರ್ಯನಿರ್ವಹಿಸಿದ್ದು ವಿಶೇಷ. ಯೋಜನೆ ನಿರ್ಮಾಣಕ್ಕೆ ಈ ವರ್ಷದ ಜೂನ್‌ವರೆಗೆ ಸುಮಾರು 42.60ಮೆಟ್ರಿಕ್ ಟನ್ ಸಿಮೆಂಟ್, 4 ಲಕ್ಷ ಮೆಟ್ರಿಕ್‌ಟನ್ ಕಬ್ಬಿಣ, 161 ಲಕ್ಷ ಕ್ಯೂಬಿಕ್ ಮೀಟರ್ ಕಂಕರ್ ಬಳಕೆ ಮಾಡಲಾಗಿದೆ. ಈ ಯೋಜನೆಗೆ ಕೇಂದ್ರ ಸರಕಾರದಿಂದ ಯಾವುದೇ ಆರ್ಥಿಕ ನೆರವು ಪಡೆಯದ ತೆಲಂಗಾಣ ರಾಜ್ಯ ಸರಕಾರ, ಆಂಧ್ರಬ್ಯಾಂಕ್, ವಿಜಯಾ ಬ್ಯಾಂಕ್, ಪಂಜಾಬ್ ನ್ಯಾಶನಲ್ ಬ್ಯಾಂಕ್, ಪವರ್ ಫೈನಾನ್ಸ್ ಕಾರ್ಪೊರೇಶನ್‌ನಿಂದ ಸಾಲ ಪಡೆದಿದೆ ಮತ್ತು ರಾಜ್ಯ ಬಜೆಟ್‌ನಿಂದ ಹಣ ನಿಗದಿ ಪಡಿಸಿದೆ.
ಮಿಷನ್ ಭಗೀರಥ
ಕಾಳೇಶ್ವರಂ ಯೋಜನೆ ಜತೆ ಜತೆಯಲ್ಲಿ ತೆಲಂಗಾಣ ಸರಕಾರ ಕುಡಿಯುವ ನೀರಿನ ಉದ್ದೇಶದೊಂದಿಗೆ ಮತ್ತೂಂದು ದಾಖಲೆಯ ಯೋಜನೆ ಜಾರಿಗೊಳಿಸಿದೆ. ಅದುವೇ ಮಿಷನ್ ಭಗೀರಥ. ಪ್ರತಿ ಮನೆಗೂ ನಳಗಳ ಸಂಪರ್ಕದೊಂದಿಗೆ ಶುದ್ಧ ಕುಡಿಯುವ ನೀರು ಪೂರೈಸುವುದಾಗಿದೆ. ಹೈದರಾಬಾದ್ ಮಹಾನಗರ ಸೇರಿದಂತೆ ನಗರ ಪ್ರದೇಶದ ಸುಮಾರು 20ಲಕ್ಷ ಕುಟುಂಬಗಳ 2.32ಕೋಟಿ ಜನರಿಗೆ, ಸುಮಾರು 25 ಸಾವಿರ ಗ್ರಾಮಗಳ ಅಂದಾಜು 60ಲಕ್ಷ ಗ್ರಾಮೀಣ ಜನರಿಗೆ ಶುದ್ಧ ನೀರು ನೀಡಿಕೆ ಯೋಜನೆ ಇದಾಗಿದೆ. ಗ್ರಾಮೀಣ ಜನರಿಗೆ ಕೇವಲ 1 ರೂ. ಸಾಂಕೇತಿಕ ಶುಲ್ಕ ಪಡೆದು ನಳದ ಸಂಪರ್ಕ ನೀಡಲಾಗುತ್ತಿದ್ದು, ಶುದ್ಧ ಕುಡಿಯುವ ನೀರು ಉಚಿತವಾಗಿ ಪೂರೈಸಲು, ನಗರವಾಸಿಗಳಿಗೆ 1,000 ಲೀಟರ್‌ಗೆ 10ರೂ.ನಂತೆ, ಉದ್ಯಮಗಳಿಗೆ 75 ರೂ.ನಂತೆ ಶುಲ್ಕ ವಿಧಿಸಲಾಗುತ್ತದೆ. ದೇಶದ 11ಕ್ಕೂ ಹೆಚ್ಚು ರಾಜ್ಯಗಳವರು ಆಗಮಿಸಿ ಯೋಜನೆ ವೀಕ್ಷಿಸಿದ್ದಾರೆ.
ತೆಲಂಗಾಣಕ್ಕೆ ಪ್ರಮುಖ ನೀರಿನ ಲಭ್ಯವಿರುವ ನದಿ ಎಂದರೆ ಗೋದಾವರಿ ಒಂದೇ. ಅದರಿಂದಲೇ ಎಷ್ಟು ಸಾಧ್ಯವೋ ಅಷ್ಟು ನೀರು ಬಳಕೆಗೆ ಪರಿಣಾಮಕಾರಿ ಹೆಜ್ಜೆ ಇರಿಸಿದೆ. ಕರ್ನಾಟಕದಲ್ಲಿ ಹತ್ತಾರು ಜೀವನದಿಗಳು ಸಮೃದ್ಧ ನೀರಿನ ಮೂಲಗಳಾಗಿವೆ. ಕಾಳೇಶ್ವರಂನಂತಹ ಯೋಜನೆ ಅಲ್ಲದಿದ್ದರೂ, ಅದೇ ಮಾದರಿಯಲ್ಲಿ ಒಂದಿಷ್ಟು ಯೋಜನೆಗಳನ್ನು ನಮ್ಮಲ್ಲಿ ಕೈಗೊಂಡರೆ, ಮಳೆಯಾಶ್ರಯಿತ ಲಕ್ಷಾಂತರ ಎಕರೆ ಭೂಮಿ ನೀರಾವರಿಯಿಂದ ಕಂಗೊಳಿಸಲಿದೆ. ಮಿಷನ್ ಭಗೀರಥ ಮಾದರಿಯಲ್ಲಿ ನಮ್ಮಲ್ಲಿ ಜಾರಿಗೆ ಉದ್ದೇಶಿತ ಜಲಧಾರೆ ಸಮರ್ಪಕ ಅನುಷ್ಠಾನದ ಇಚ್ಛಾಶಕ್ತಿ ತೋರಬೇಕಿದೆ.
ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?
Minister Sudhakar: ಸೀಟ್ ಬ್ಲಾಕಿಂಗ್ ದಂಧೆ ವಿರುದ್ಧ ಕ್ರಿಮಿನಲ್ ಕೇಸ್ ಅಸ್ತ್ರ
Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ
Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್: ಮಹಾಯುತೀಲಿ ಬಿರುಕು?
Canada; ನಮ್ಮಲ್ಲಿರುವ ಎಲ್ಲ ಹಿಂದೂಗಳು ಮೋದಿ ಬೆಂಬಲಿಗರಲ್ಲ: ಟ್ರಾಡೋ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.