ಗುತ್ತಿಗೆ ಕಾರ್ಮಿಕರು ಎಂಬ ಆಧುನಿಕ ಜೀತ

ಗುತ್ತಿಗೆ ಕಾರ್ಮಿಕರು ಎಂಬ ಆಧುನಿಕ ಜೀತ

Team Udayavani, Aug 26, 2019, 5:33 AM IST

48

ಗುತ್ತಿಗೆ ಕಾರ್ಮಿಕ ವ್ಯವಸ್ಥೆಯಲ್ಲಿ ಕಾರ್ಮಿಕರ ಶೋಷಣೆ ಅವ್ಯಾಹತ ಎನ್ನುವುದು ಸಾರ್ವಕಾಲಿಕ ಆಪಾದನೆ. ಕಳೆದ ಹಲವು ದಶಕಗಳಿಂದಲೂ ಬೇರೆ ಬೇರೆ ಅವತಾರಗಳಲ್ಲಿ, ವಿಭಿನ್ನ ಹೆಸರುಗಳಲ್ಲಿ ಜಾರಿಯಲ್ಲಿರುವ ಈ ಗುತ್ತಿಗೆ, ದಿನಗೂಲಿ, ಹೊರಗುತ್ತಿಗೆ ನೌಕರ ಕಾರ್ಮಿಕ ಪದ್ಧತಿಯ ಒಳಿತು ಕೆಡುಕುಗಳ ವಿಶ್ಲೇಷಣೆಯ ಸಣ್ಣ ಪ್ರಯತ್ನ ಇಲ್ಲಿದೆ.

ಇಂತಹದೊಂದು ನುಣುಚಿಕೊಳ್ಳುವ ಧೋರಣೆ ಪ್ರಾರಂಭದಲ್ಲಿ ಆಕರ್ಷಕವಾಗಿ ಕಂಡರೂ ಕೊನೆಗೆ ವಿಫ‌ಲವಾಗಿ, ಅಂತಹ ನೌಕರರನ್ನು ಖಾಯಂಗೊಳಿಸುವ ಅನಿವಾರ್ಯತೆಗೆ ತಲುಪಿಸುತ್ತದೆ ಎಂದು ಗೊತ್ತಿದ್ದರೂ ಸರಕಾರ ಅದೇ ತಪ್ಪನ್ನು ಪದೇ ಪದೇ ಮಾಡುತ್ತಿದೆ. ಯೋಜನೆಯ ಹೆಸರು ಮಾತ್ರ ಬೇರೆ, ಬೇರೆ. ಖಾಯಂ ನೆಲೆಯಲ್ಲಿ ಉದ್ಯೋಗಿಗಳ ನೇಮಕಾತಿ ಮಾಡಿದರೆ ಅವರಿಗೆ ಕಾಲಕಾಲಕ್ಕೆ ವೇತನ ಭಡ್ತಿ, ಭತ್ಯೆ, ರಜೆ ಹಾಗೂ ಪಿಂಚಣಿ ಇನ್ನೂ ಏನೇನೋ ಸೌಲಭ್ಯಗಳನ್ನು ಕೊಡಬೇಕಾಗುತ್ತದೆ ಎಂಬ ಕಾರಣಕ್ಕೆ ಅಥವಾ ಕೆಲವೊಮ್ಮೆ ರಾಜಕೀಯ ಉದ್ದೇಶದಿಂದ ನಿರುದ್ಯೋಗಿಗಳನ್ನು ಓಲೈಸಲು ಸರ್ಕಾರ ಇಂತಹದೊಂದು ಪರ್ಯಾಯ ವ್ಯವಸ್ಥೆಯನ್ನು ರೂಪಿಸುತ್ತದೆ. ಮೇಲ್ನೋಟಕ್ಕೆ ಇದು ಸರ್ಕಾರಕ್ಕೆ ಕಡಿಮೆ ವೆಚ್ಚದ ಯೋಜನೆ ಎಂದು ಕಂಡರೂ ವಾಸ್ತವ ಸ್ಥಿತಿ ಬೇರೆಯೇ ಇದೆ. ಈ ರೀತಿಯ ವ್ಯವಸ್ಥೆಯಲ್ಲಿ ಹೊರ ಜಗತ್ತಿಗೆ ಕಾಣಿಸುವುದು ಬರೀ ಮುಖವಾಡ. ವ್ಯವಸ್ಥೆಯ ಆಳಕ್ಕಿಳಿದಾಗ ಗೋಚರಿಸುವ ವಾಸ್ತವ ಮುಖವೇ ಬೇರೆ. ಈ ವ್ಯವಸ್ಥೆಯನ್ನು ಉದ್ಯೋಗದಾತನ ದೃಷ್ಟಿಕೋನದಿಂದ ನೋಡುವುದು ಒಂದು ಆಯಾಮವಾದರೆ ಅದೇ ವ್ಯವಸ್ಥೆಯನ್ನು ಉದ್ಯೋಗಿಯ ದೃಷ್ಟಿಯಿಂದ ನೋಡುವಾಗ ಕಾಣುವ ಚಿತ್ರಣವೇ ಬೇರೆ.

ಇಂತಹದೊಂದು ಅಪಕ್ವ ಚಿಂತನೆಯ ಗುತ್ತಿಗೆ ಕಾರ್ಮಿಕ ವ್ಯವಸ್ಥೆಯ ಇತಿಹಾಸ ಅರವತ್ತರ ದಶಕಕ್ಕೂ ಹಿಂದಿನದು. ಆಗ ಲೋಕೋಪಯೋಗಿ ಇಲಾಖೆಯಲ್ಲಿ ಈಗಿನಂತೆ ಪೂರ್ಣ ಪ್ರಮಾಣದಲ್ಲಿ ಕಾಮಗಾರಿಗಳನ್ನು ಗುತ್ತಿಗೆ ನೀಡುವ ಪದ್ದತಿ ಇರಲಿಲ್ಲ. ಕಾಮಗಾರಿಗಳಿಗೆ ಬೇಕಾದ ಎಲ್ಲಾ ಸಾಮಗ್ರಿಗಳನ್ನು ಇಲಾಖೆಯೇ ಖರೀದಿಸಿ ದಾಸ್ತಾನು ಇರಿಸಿ ಗುತ್ತಿಗೆದಾರರಿಗೆ ಅವಶ್ಯಕತೆಗೆ ತಕ್ಕಂತೆ ಬಿಡುಗಡೆ ಮಾಡುತ್ತಿತ್ತು. ಗುತ್ತಿಗೆದಾರರು ತಮಗೆ ವಹಿಸಿಕೊಡಲಾದ ಕಾಮಗಾರಿಯನ್ನು ಮಾಡುವುದಕ್ಕಾಗಿ ದಿನಗೂಲಿ ನೆಲೆಯಲ್ಲಿ ನೌಕರರನ್ನು ನೇಮಿಸಿಕೊಳ್ಳುತ್ತಿದ್ದರು. ಇಂತಹಾ ವ್ಯವಸ್ಥೆಯಲ್ಲಿ ಸರ್ಕಾರದ ಹಣದಿಂದ ಪಾವತಿ ಪಡೆಯುತ್ತಿದ್ದರೂ ನೇರವಾಗಿ ಈ ದಿನಗೂಲಿ ನೌಕರರಿಗೂ ಸರಕಾರಕ್ಕೂ ಯಾವುದೇ ಸಂಬಂಧವಿರಲಿಲ್ಲ. ಆದ್ದರಿಂದ ಸರಕಾರಕ್ಕೆ ಇವರಿಗೆ ಗುತ್ತಿಗೆದಾರರ ಮೂಲಕ ವೇತನ ಪಾವತಿ ಹೊರತು ಇತರ ಯಾವುದೇ ರೀತಿಯ ಸೌಲಭ್ಯ ನೀಡುವ ಬದ್ಧತೆ ಇರಲಿಲ್ಲ. ಮೊದಲಿಗೆ ಸಂಸಾರ ತೂಗಿಸಲು ಒಂದು ಉದ್ಯೋಗ ಸಿಕ್ಕಿದರೆ ಸಾಕು ಎಂಬ ಮನಸ್ಥಿತಿಯಿಂದ ಈ ವ್ಯವಸ್ಥೆಯೊಳಗೆ ಸೇರಿಕೊಂಡ ಸಹಸ್ರಾರು ದಿನಗೂಲಿ ನೌಕರರಿಗೆ ಸಂಸಾರ ಬೆಳೆಯುತ್ತಾ ಬಂದಂತೆ, ವಯಸ್ಸಾಗುತ್ತಾ ದುಡಿಯಲು ಶಕ್ತಿಯಿಲ್ಲದ ಹಂತ ತಲುಪಿ ಉದ್ಯೋಗದಿಂದ ಕೈಬಿಡುವಂತಹ ದಿನಗಳು ಬಂದಾಗ ಹೋರಾಟವೊಂದು ರೂಪುಗೊಳ್ಳುತ್ತದೆ. ಹಂತಹಂತವಾಗಿ ಮುಂದುವರಿದ ಈ ಹೋರಾಟವು ಅಂತಿಮವಾಗಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿ 1984ರಲ್ಲಿ ಕನಿಷ್ಟ 240 ದಿನಗಳಷ್ಟು ಅವಧಿಗೆ ದಿನಗೂಲಿ ಆಧಾರದಲ್ಲಿ ಗ್ಯಾಂಗ್‌ಮೆನ್‌ ಕರ್ತವ್ಯ ನಿರ್ವಹಿಸಿದ ಎಲ್ಲಾ ನೌಕರರನ್ನು ಖಾಯಂಗೊಳಿಸಬೇಕೆಂದು ತೀರ್ಪು ಬಂದಿತು. ಆದರೂ ಈ ತೀರ್ಪು ಜಾರಿಗೊಳಿಸುವಿಕೆಯನ್ನು 1990ರ ತನಕವೂ ಎಳೆದಾಡಿ ಬಂದ ಸರಕಾರ ಕೊನೆಗೆ ನ್ಯಾಯಾಲಯ ಛೀಮಾರಿ ಹಾಕುವ ಹಂತ ತಲುಪಿದಾಗ ಯಾವ್ಯಾವುದೋ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗೆ ನೇಮಕಾತಿ ಮಾಡಿ ಕೈ ತೊಳೆದುಕೊಂಡಿತು.

ಈ ದಿನಗೂಲಿ-ಗ್ಯಾಂಗ್‌ಮೆನ್‌ ಖಾಯಮಾತಿ ವಿಷಯ ನ್ಯಾಯಾಲಯದಲ್ಲಿ ಇರುವಾಗಲೇ ಇಂತಹುದೇ ಇನ್ನೊಂದು ರೀತಿಯ ಯೋಜನೆ ಜಾರಿಗೆ ಬಂತು. ಅದೇ ಮಿತವೇತನ ಪದವೀಧರರು ಅಥವಾ ಸ್ಟೈಪೆಂಡರಿ ಗ್ರಾಜುವೇಟ್ ಯೋಜನೆ. ಇದು ಕೂಡಾ 1977ರಲ್ಲಿ ಜಾರಿಗೆ ಬಂದು ವಿವಿಧ ಹಂತಗಳ ಹೋರಾಟದ ನಂತರ 1994ರಲ್ಲಿ ಈ ಯೋಜನೆಯಡಿ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದವರನ್ನು ಖಾಯಂಗೊಳಿಸಲಾಯಿತು. ಆದರೆ 1977ರಿಂದ 1994ರ ವರೆಗಿನ ಸುಮಾರು 13 ವರ್ಷಗಳ ಸೇವೆಯನ್ನು ಯಾವುದೇ ಉದ್ದೇಶಕ್ಕೆ ಪರಿಗಣಿಸಲೇ ಇಲ್ಲ. ಇಂದಿಗೂ ಮೇಲಿನ ಎರಡೂ ವರ್ಗದ ಉದ್ಯೋಗಿಗಳಲ್ಲಿ ಖಾಯಮಾತಿ ಆಗದೇ ಉಳಿದವರು ಇನ್ನೂ ಬಹಳಷ್ಟು ಜನರಿದ್ದಾರೆ. ಹೋರಾಟ ಮಾಡಲು ಆರ್ಥಿಕ ಬೆಂಬಲದ ಕೊರತೆಯೇ ಇದಕ್ಕೆ ಕಾರಣ.

ಈ ರೀತಿಯ ಗುತ್ತಿಗೆ/ದಿನಗೂಲಿ ನೌಕರ ವರ್ಗದ ಇನ್ನಷ್ಟು ಅವತಾರಗಳು ಹೀಗಿವೆ: ಕೆಲವು ವರ್ಗದ ಹುದ್ದೆಗಳಿಗೆ ನೇಮಕಾತಿ ಮಾಡುವಾಗ ಆ ಹುದ್ದೆಯ ಕನಿಷ್ಟ ವೇತನಕ್ಕಿಂತ ಮಾಸಿಕ ರೂ.10/- ಕಡಿಮೆ ವೇತನಕ್ಕೆ ನೇಮಿಸುವುದು, ವರ್ಷಕ್ಕೊಮ್ಮೆ ನವೀಕರಿಸುವುದು. ಆದರೆ ಈ ವರ್ಗದಲ್ಲಿ ನೇಮಕಾತಿ ಹೊಂದಿದವರ ಸಂಖ್ಯೆ ತೀರಾ ಕಡಿಮೆ ಇದ್ದು ಯಾವುದೇ ರೀತಿಯ ಕಾನೂನು ಹೋರಾಟಕ್ಕೆ ಬೇಕಾದಷ್ಟು ಸಂಖ್ಯಾಬಲವಿಲ್ಲದ ಕಾರಣ ದಶಕಗಳಿಂದ ಕರ್ತವ್ಯ ನಿರ್ವಹಿಸಿ ಬರಿಗೈಯಲ್ಲಿ ಮನೆಗೆ ಹೋದವರೂ ಇದ್ದಾರೆ.

ಇದಕ್ಕಿಂತಲೂ ಶೋಚನೀಯ ಪ್ರಕರಣವೊಂದಿದೆ. ಆರೋಗ್ಯ ಇಲಾಖೆಯಲ್ಲಿರುವ ನೈರ್ಮಲ್ಯ ಕೆಲಸದ ನೌಕರರು, ಅವರು ಖಾಯಂ ಉದ್ಯೋಗಿಗಳಾದರೂ ಪದೇಪದೇ ಗೈರು ಹಾಜರಾಗುವ ಚಾಳಿ ಇದ್ದುದರಿಂದ ಹಾಗೆ ಪೂರ್ವ ಮಾಹಿತಿ ನೀಡದೆ ಗೈರು ಹಾಜರಾಗುವವರ ಬದಲಿಗೆ 29 ದಿನಗಳ ಅವಧಿಗೆ ನೇಮಕಾತಿ ಮಾಡಿ, ಗೈರು ಹಾಜರಾಗುವವರ ವೇತನದಿಂದ ಒಂದಿಷ್ಟು ಕಡಿತಗೊಳಿಸಿ ಪಾವತಿಸುವ ಪದ್ಧತಿ ಇತ್ತು. ನಿರುದ್ಯೋಗ ಸಮಸ್ಯೆ ಎಷ್ಟು ಘೋರವಾಗಿತ್ತೆಂದರೆ, ಅಂತಹ ನೇಮಕಾತಿಗೂ ಸಾಲುಗಟ್ಟಿ ನಿಲ್ಲುವವರಿದ್ದರು.

ಈ 29 ದಿನಗಳ ನೇಮಕಾತಿಗೆ ಆಗ ಹೆಚ್ಚೆಂದರೆ 100-150 ರೂಪಾಯಿ ಸಿಗುತ್ತಿತ್ತು. ಸದ್ರಿ ಕೆಲಸಕ್ಕೆ ಸೇರುವವರು ಅತಿ ಅಸಹ್ಯ ಸ್ಥಿತಿಯಲ್ಲಿರುವ ರೋಗಿಗಳ ಆರೈಕೆ ಮಾಡುವುದು, ಶವ ಸಾಗಾಟ, ಶವವನ್ನು ಪರೀಕ್ಷೆಗೆ ಸೀಳುವುದು ಹೀಗೆ ಯೋಚಿಸಲೂ ಅಸಹ್ಯವೆನಿಸುವ ಕೆಲಸಗಳನ್ನು ಮಾಡಬೇಕಾಗುತಿತ್ತು. ಆದರೂ ಹಸಿವು ಎಲ್ಲವನ್ನೂ ಸಹಿಸುವ ಕಠಿಣ ಮನಸ್ಥಿತಿಗೆ ಅವರನ್ನು ಸಜ್ಜುಗೊಳಿಸಿತ್ತು.

ಈ ಸಾಲಿಗೆ ಇತ್ತೀಚಿನ ಸೇರ್ಪಡೆ ಶಿಕ್ಷಣ ಇಲಾಖೆಯ ಗೌರವ ಉಪನ್ಯಾಸಕ ಹುದ್ದೆ. ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ, ತರಗತಿಗಳು ನಡೆಯುವ ದಿನಗಳಲ್ಲಿ ಮಾತ್ರ ವೇತನ, ರಜಾ ಅವಧಿಯಲ್ಲಿ ಏನೂ ಇಲ್ಲ. ಖಾಯಂ ನೆಲೆಯಲ್ಲಿ ಶಿಕ್ಷಕರ ನೇಮಕಾತಿ ಮಾಡುವ ಬದ್ದತೆಯನ್ನು ಮರೆತ ಸರಕಾರ ಮತ್ತೂ ಚೌಕಾಶಿ ಮಾಡಿ ಕೆಲಸಕ್ಕೆ ಮಾತ್ರ ಕೂಲಿ ಪಾವತಿಸುವ ತನ್ಮೂಲಕ ಭಾವೀ ಪ್ರಜೆಗಳನ್ನು ರೂಪಿಸುವ ಪವಿತ್ರ ಕಾಯಕಕ್ಕೂ ದಿನಗೂಲಿ (ಅದು ಕೂಡ ಗಂಟೆ ಲೆಕ್ಕದಲ್ಲಿ) ಪಾವತಿಸುವ ಮೂಲಕ ಗುಲಾಮಗಿರಿಗೆ ತಳ್ಳಿದೆ. ಇದಕ್ಕೆ ಗೌರವಧನ ಎಂಬ ಆಕರ್ಷಕ ಹೆಸರು ಬೇರೆ. ಈ ಪಾವತಿಯನ್ನಾದರೂ ಕ್ಲಪ್ತ ಕಾಲಕ್ಕೆ ಮಾಡುತ್ತಾರೆಯೇ, ಅದೂ ಇಲ್ಲ. ಈ ವರ್ಷದ ಗೌರವ ಧನ ಮುಂದಿನ ವರ್ಷ ಸಿಕ್ಕಿದರೆ ಶಿಕ್ಷಕರ ಪುಣ್ಯ.

ಈ ಗುತ್ತಿಗೆ ಕಾರ್ಮಿಕ ಪದ್ಧತಿಯ ಇತ್ತೀಚಿನ ಅವತಾರ ಹೊರಗುತ್ತಿಗೆ. ಈ ಪದ್ಧತಿಯಲ್ಲಿ ಇರುವಷ್ಟು ಗೊಂದಲ ಹಿಂದಿನ ಯಾವುದೇ ವ್ಯವಸ್ಥೆಯಲ್ಲಿ ಇರಲಿಲ್ಲ. ಹಿಂದಿನ ಎಲ್ಲಾ ಅವತಾರಗಳಿಗಿಂತಲೂ ಇದರ ಆಳ-ವಿಸ್ತಾರ ಅಗಾಧವಿದೆ. ಈ ವಿನೂತನ ವ್ಯವಸ್ಥೆಯ ರೂಪುರೇಷೆ, ಅದನ್ನು ಕಾರ್ಯಗತಗೊಳಿಸುವ ವಿಧಾನ, ಈ ವಿಧಾನದಲ್ಲಿ ಅಡಕವಾಗಿರುವ ಕೆಲವು ಒಳಸುಳಿಗಳು ಊಹೆಗೂ ನಿಲುಕದು.

ಈ ಹೊರಗುತ್ತಿಗೆ ವ್ಯವಸ್ಥೆ ಕಾರ್ಯಾಚರಿಸುವ ವಿಧಾನ ಹೀಗಿದೆ. ಯಾವುದೇ ಒಂದು ಇಲಾಖೆಯ ವಿವಿಧ ಕಚೇರಿಗಳಿಗೆ ಅಥವಾ ಒಂದು ಕಚೇರಿಗೆ ಅಥವಾ ಒಂದು ನಿರ್ದಿಷ್ಟ ವರ್ಗದ ಹುದ್ದೆಗಳಿಗೆ, ಅಂದರೆ, ಶಿಕ್ಷಣ, ಆರೋಗ್ಯ, ಕಂದಾಯ ಹೀಗೆ ಯಾವುದಾದರೂ ಇಲಾಖೆಯ ವಿವಿಧ ಶಾಖಾ ಕಚೇರಿಗಳಿಗೆ ಒಟ್ಟಾಗಿ ಅಥವಾ ಒಂದು ಆಸ್ಪತ್ರೆಗೆ, ಶಾಲೆ, ಕಾಲೇಜಿಗೆ, ಒಂದಿಷ್ಟು ವಾಹನ ಚಾಲಕರ, ಭದ್ರತಾ ಸೇವೆ, ಶುಶ್ರೂಷಾ ಸಿಬ್ಬಂದಿ, ಕಚೇರಿ ಕೆಲಸದ, ಕಂಪ್ಯೂಟರ್‌ ನಿರ್ವಹಣೆ, ಲೆಕ್ಕಪತ್ರ ನಿರ್ವಹಣೆ ಇತ್ಯಾದಿ ಕೆಲಸಕ್ಕೆ ಬೇಕಾದ ಸಿಬ್ಬಂದಿ ಸೇವೆಯನ್ನು ನಿರ್ದಿಷ್ಟ ಅವಧಿಗೆ ಒದಗಿಸಲು ಟೆಂಡರ್‌ ಕರೆಯಲಾಗುತ್ತದೆ. ಇಂತಹ ಟೆಂಡರಿನಲ್ಲಿ ಭಾಗವಹಿಸುವವರು ಕೆಲವು ನಿರ್ದಿಷ್ಟ ಅರ್ಹತೆ ಹೊಂದಿರ ಬೇಕಾಗುತ್ತದೆ. ಅವೆಂದರೆ ಕಾರ್ಮಿಕ ಇಲಾಖೆಯ ನಿಬಂಧನೆಗಳನುಸಾರ ನೋಂದಣಿ ಮಾಡಿ ಪರವಾನಗಿ ಪಡೆಯುವುದು, ಕಾರ್ಮಿಕರ ಭವಿಷ್ಯ ನಿಧಿ ಮತ್ತಿತರ ಇಲಾಖೆಗಳಲ್ಲಿ ನೋಂದಣಿ ಮಾಡುವುದು ಇತ್ಯಾದಿ. ಆದರೆ ಯಾವುದೇ ಟೆಂಡರ್‌ ಶರ್ತದಲ್ಲಿ, ಸದ್ರಿ ಸಂಸ್ಥೆಯವರು ಒದಗಿಸುವ ಸಿಬ್ಬಂದಿಯವರ ಅರ್ಹತೆ, ಅಂತಹ ವ್ಯಕ್ತಿಗಳ ಪೂರ್ವಾಪರ ಚರಿತ್ರೆ, ಅವರುಗಳನ್ನು ಆಯ್ಕೆ ಮಾಡಿದ ವಿಧಾನ ಇವುಗಳ ಬಗ್ಗೆ ವಿವರ ಕೇಳಿರುವುದಿಲ್ಲ. ಆದ್ದರಿಂದ ಭದ್ರತಾ ಸೇವೆ ಒದಗಿಸಲು ಟೆಂಡರ್‌ ಕರೆದರೆ, ಕುರಿಗಳನ್ನು ಕಾಯಲು ತೋಳಗಳ ಸೇವೆ ಒದಗಿಸಿದ ನಿದರ್ಶನವಿದೆ. ಎಲ್ಲೂ ಸಲ್ಲದ ವಾಹನ ಚಾಲಕರು ಇಲ್ಲಿ ಸಲ್ಲಲ್ಪಡುತ್ತಾರೆ!

ಆಡು ಮುಟ್ಟದ ಸೊಪ್ಪಿಲ್ಲ, ರಾಜಕಾರಣಿಗಳು ಕೈಯಾಡಿಸದ ಕ್ಷೇತ್ರವಿಲ್ಲ ಎನ್ನುವ ಹೊಸ ಗಾದೆಯೊಂದನ್ನು ಸೃಷ್ಟಿಸಿ ಇಲ್ಲಿಗೆ ಅನ್ವಯಿಸಬಹುದು. ಅದು ಹೇಗೆಂದರೆ, ಹೊರಗುತ್ತಿಗೆ ಸೇವೆ ಸಲ್ಲಿಸಲು ಟೆಂಡರು ಸಲ್ಲಿಸಿದವರ ನಡುವೆ ರಾಜಕೀಯ ಪ್ರವೇಶವಾಗುತ್ತದೆ. ರಾಜಕೀಯವಾಗಿ ಪ್ರಬಲವಾಗಿರುವವರಿಗೆ ಆಪ್ತರಾಗಿರುವವರಿಗೆ ಟೆಂಡರು ಲಭ್ಯವಾಗುವುದಕ್ಕೆ ಬೇಕಾಗುವ ಕಸರತ್ತು ನಡೆಯುತ್ತದೆ. ಸಾಮ-ದಾನ-ಬೇಧ-ಅನಿವಾರ್ಯವಾದರೆ ದಂಡ ಪ್ರಯೋಗವೂ ಆಗಿ ಟೆಂಡರ್‌ ಮಂಜೂರಾಗುತ್ತದೆ. ಇತರ ಟೆಂಡರುಗಳಂತೆ ಇಲ್ಲಿ ರಾಜಕೀಯ ಧುರೀಣರಿಗೆ ಕಪ್ಪ-ಕಾಣಿಕೆ ಸಲ್ಲುವುದರ ಜತೆಗೆ ಅವರು ಸೂಚಿಸುವವರನ್ನೇ ಗುತ್ತಿಗೆ ಪಡೆದ ಸಂಸ್ಥೆಯವರು ನೇಮಕಾತಿಗಾಗಿ ಆಯ್ಕೆ ಮಾಡಬೇಕಾಗುತ್ತದೆ. ಮೇಲ್ನೋಟಕ್ಕೆ ಇವರಿಗೂ ಸರಕಾರದ ಇಲಾಖೆಗಳಿಗೂ ಯಾವುದೇ ಸಂಬಂಧ ಇರುವುದಿಲ್ಲ. ಆದರೆ ಒಮ್ಮೆ ಇಲಾಖೆಯ ಒಳಗೆ ಸೇರಿಕೊಂಡರೋ ಅಲ್ಲಿಂದ ಇವರ ಆಟ ಶುರು. ಈ ಆಟದ ರಿಂಗ್‌ ಮಾಸ್ಟರ್‌ ಇವರನ್ನು ಆಯ್ಕೆ ಮಾಡಿದ ರಾಜಕೀಯ ಶಕ್ತಿ.

ಇಂತಹ ನೇಮಕಾತಿ ಒಂದರ್ಥದಲ್ಲಿ ಜೀತ ಪದ್ಧತಿಗಿಂತ ಭಿನ್ನವೇನಲ್ಲ. ನಿವೃತ್ತಿ ವೇತನ, ಸೇವಾ ಭದ್ರತೆ ಮಾತ್ರವಲ್ಲ ವೈದ್ಯಕೀಯ ರಜೆ ಅಥವಾ ಬಹುಮುಖ್ಯವಾಗಿ ಹೆರಿಗೆ ರಜೆ ಕೂಡಾ ಇರುವುದಿಲ್ಲ. ಅನಿವಾರ್ಯ ಕಾರಣಕ್ಕೆ ಗೈರು ಹಾಜರಾದರೆ ನೇರವಾಗಿ ಕೆಲಸದಿಂದ ವಜಾ ಮಾಡಲಾಗುತ್ತದೆ. ಕಾನೂನು ಹೋರಾಟ ಬರೀ ಅರಣ್ಯ ರೋದನ ಅಷ್ಟೇ.

ಇಂತಹ ಗುತ್ತಿಗೆ ನೇಮಕಾತಿ ಅಲ್ಪಕಾಲೀನ ವ್ಯವಸ್ಥೆಯಾಗಿದ್ದರೂ ಸರಕಾರಿ ಉದ್ಯೋಗವಿದೆ ಎಂದು ಸುಳ್ಳು ಹೇಳಿ ಮದುವೆ ಆದವರೂ ಇದ್ದಾರೆ, ಸಾಲ ಪಡೆದವರೂ ಇದ್ದಾರೆ. ಈ ವ್ಯವಸ್ಥೆಯಲ್ಲಿ ವೇತನ, ಉದ್ಯೋಗ ಅನಿಶ್ಚಿತತೆ ಸ್ವಾಭಾವಿಕ. ಆದರೂ ಆತ್ಮಹತ್ಯೆಯಂತಹ ಹತಾಶೆಯ ನಿರ್ಧಾರ ಮಾಡಿದ ಪ್ರಕರಣಗಳು ನಡೆದದ್ದೂ ಇದೆ.

ಈ ನಡುವೆ ಕಾರ್ಮಿಕರ ಹಿತಾಸಕ್ತಿಯ ದೃಷ್ಟಿಯಿಂದ ಕರ್ನಾಟಕ ಸರ್ಕಾರ 1996ನೇ ಇಸವಿಯಲ್ಲಿ ಕಟ್ಟಡ ಮತ್ತು ಇತರ ನಿರ್ಮಾಣ ಕಾಮಗಾರಿಗಳ ಕಾರ್ಮಿಕರ ಕಲ್ಯಾಣ ಕಾಯಿದೆ ಜಾರಿಗೆ ತಂದಿದೆ. ಸರ್ಕಾರಿ ಕಾಮಗಾರಿ ಗುತ್ತಿಗೆಗಳಲ್ಲಿ ಒಟ್ಟು ಮೊತ್ತದ ಶೇ.2ರಷ್ಟನ್ನು ಈ ನಿಧಿಗೆ ವಂತಿಗೆ ನೀಡುವ ಉದ್ದೇಶಕ್ಕಾಗಿ ಹೆಚ್ಚುವರಿಯಾಗಿ ಪಡೆಯಲು ಅವಕಾಶವಿದೆ. ಗುತ್ತಿಗೆದಾರರು ಸರ್ಕಾರದ ಅಥವಾ ಯಾವುದೇ ಕಾಮಗಾರಿಗಳ ಬಾಬ್ತು ಇಷ್ಟು ಮೊತ್ತವನ್ನು ಕಾರ್ಮಿಕ ಕಲ್ಯಾಣ ನಿಧಿಗೆ ಪಾವತಿಸ ಬೇಕಾಗುತ್ತದೆ. ಈ ನಿಧಿಯಿಂದ ಕಾರ್ಮಿಕರಿಗೆ ಸೌಲಭ್ಯ ಸಿಗಬೇಕಾದರೆ ಕೆಲವೊಂದು ನಿಯಮಗಳನ್ವಯ ಅಂತಹ ಕಾರ್ಮಿಕರ ಹೆಸರನ್ನು ನೋಂದಣಿ ಮಾಡಬೇಕಾಗುತ್ತದೆ. ಆದರೆ ಇಂತಹ ನೋಂದಣಿ ಮತ್ತಿತರ ಪ್ರಕ್ರಿಯೆ ನೋಂದಾಯಿತ ಗುತ್ತಿಗೆದಾರರ ಅಡಿಯಲ್ಲಿ ನಿರಂತರ ಕಾರ್ಯ ನಿರ್ವಹಿಸುವವರಿಗೆ ಸಾಧ್ಯ. ಒಂದೊಂದು ದಿನ ಒಬ್ಬೊಬ್ಬರಡಿ ಕೆಲಸ ಮಾಡುವವರಿಗೆ? ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲದ, ಅಸಂಘಟಿತ ಕಾರ್ಮಿಕರಿಗೆ ಇದು ಗಗನ ಕುಸುಮವೇ ಸರಿ. ಈ ಕಾಯಿದೆಯ ಉದ್ದೇಶ ಸಫ‌ಲವಾಗಬೇಕಾದರೆ ಸಂಬಂಧಿಸಿದ ಎಲ್ಲರಿಗೂ ಸೂಕ್ತ ತಿಳಿವಳಿಕೆ ನೀಡಿ ನೋಂದಣಿ ಮಾಡಿಸುವ ಕೆಲಸವನ್ನು ಕಾರ್ಮಿಕ ಇಲಾಖೆ ಮಾಡಬೇಕು, ಸ್ವಯಂ ಸೇವಾ ಸಂಸ್ದೆಗಳು ಈ ನಿಟ್ಟಿನಲ್ಲಿ ಮುತುವರ್ಜಿ ವಹಿಸಿದಲ್ಲಿ ಉಪಯೋಗವಾಗಬಹುದೇನೋ.

ಟಾಪ್ ನ್ಯೂಸ್

naksal (2)

Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು

3-naxal

Naxalites ಶರಣಾಗತಿಯಲ್ಲಿ ಟ್ವಿಸ್ಟ್‌; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌

ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್‌ ಬಗ್ಗೆ ರಮ್ಯಾ ಮಾತು

ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್‌ ಬಗ್ಗೆ ರಮ್ಯಾ ಮಾತು

sunil kumar

Naxalites; ಶರಣಾಗತಿ ಪ್ಯಾಕೇಜ್ ಬೆಚ್ಚಿಬೀಳಿಸಿದೆ: ಸುನಿಲ್ ಕುಮಾರ್ ತೀವ್ರ ಆಕ್ರೋಶ

1-vitla

ಸುಲೈಮಾನ್ ಮನೆಗೆ ಸ್ಪೀಕರ್ ಯು.ಟಿ.ಖಾದರ್ ಭೇಟಿ; ಎಸ್ಪಿ, ಡಿವೈಎಸ್ಪಿ, ಮನೆಯವರ ಜೊತೆ ಸಮಾಲೋಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Culture: ಪೋಷಕರ ಕೊರತೆಯಿಂದ ಕಲೆಗಳು ಕಳಾಹೀನವಾಗುತ್ತಿವೆಯೇ?

Culture: ಪೋಷಕರ ಕೊರತೆಯಿಂದ ಕಲೆಗಳು ಕಳಾಹೀನವಾಗುತ್ತಿವೆಯೇ?

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

3-

Investigative Authorities: ಕುಸಿಯುತ್ತಿದೆ ತನಿಖಾ ಪ್ರಾಧಿಕಾರಗಳ ವಿಶ್ವಾಸಾರ್ಹತೆ !

MUST WATCH

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಹೊಸ ಸೇರ್ಪಡೆ

4-dandeli

Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ

naksal (2)

Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು

3-naxal

Naxalites ಶರಣಾಗತಿಯಲ್ಲಿ ಟ್ವಿಸ್ಟ್‌; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ

2-belagavi

Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.