ಅಲೆ ಅರಿಯದೆ ಸುನಾಮಿಗೆ ಬಲಿ!
Team Udayavani, Jun 3, 2019, 6:10 AM IST
(ನಿನ್ನೆಯ ಸಂಚಿಕೆಯಿಂದ)
ರಾಹುಲ್ ತನ್ನ ಭಾಷಣದಲ್ಲಿ ಜನ ಧನ್, ಶೌಚಾಲಯ, ಗ್ಯಾಸ್ ಸಿಲಿಂಡರ್ ಯೋಜನೆಯನ್ನೇಕೆ ಪ್ರಸ್ತಾವಿಸಲಿಲ್ಲ. ಏಕೆಂದರೆ ಅವುಗಳೆಲ್ಲ ಯಶಸ್ವಿಯಾಗಿದ್ದವು. ಒಂದು ವೇಳೆ ಈ ಯೋಜನೆಗಳು ವಿಫಲವಾಗಿದ್ದರೆ ಅವುಗಳೇ ರಾಹುಲ್ ಗಾಂಧಿಯ ಕಾರ್ಯಸೂಚಿಯ ಪ್ರಮುಖ ವಿಷಯಗಳಾಗುತ್ತಿದ್ದವು. ಕೆಲವೊಮ್ಮೆ ಮೌನವೂ ತನ್ನದೇ ಆದ ಕತೆ ಹೇಳುತ್ತದೆ.
ನರೇಂದ್ರ ಮೋದಿ 2019ರ ಸಾರ್ವತ್ರಿಕ ಚುನಾವಣೆಯ ಪ್ರಣಾಳಿಕೆಯನ್ನು 2014, ಆ.15ರಂದು ಕೆಂಪುಕೋಟೆಯಲ್ಲಿ ನಿಂತು ಮಾಡಿದ ಭಾಷಣದಲ್ಲೇ ಘೋಷಿಸಿದ್ದರು. ಎಲ್ಲ ಪ್ರಧಾನಮಂತ್ರಿಗಳು ಬಡತನದ ಕುರಿತು ವಿಷಾದ ವ್ಯಕ್ತಪಡಿಸಿ ಬಳಿಕ ಅದನ್ನು ಅರ್ಥಶಾಸ್ತ್ರಜ್ಞರಿಗೆ ಬಿಟ್ಟು ಬಿಡುತ್ತಿದ್ದರು. ಮಹಾತ್ಮ ಗಾಂಧೀಜಿ ಹೇಳಿದ ‘ಬಡವರ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಮತ್ತು ಅವರ ಬವಣೆಯನ್ನು ನಿವಾರಿಸಲು ಪ್ರಾಯೋಗಿಕವಾಗಿ ಏನಾದರೂ ಮಾಡಿದ್ದೀರಾ ಎಂದು ನಿಮ್ಮನ್ನು ಕೇಳಿಕೊಳ್ಳಿ’ ಎಂಬ ಮಾತನ್ನು ಮೋದಿ ನೆನಪಿನಲ್ಲಿಟ್ಟುಕೊಂಡಿದ್ದರು. ಸ್ಮರಣೀಯವಾದ ಈ ಭಾಷಣದಲ್ಲಿ ಶೌಚಾಲಯಗಳಿಲ್ಲದೆ ಮಹಿಳೆಯರು ಅನುಭವಿಸುತ್ತಿರುವ ಕಷ್ಟದ ಕುರಿತು ಮೋದಿ ಹೇಳಿದ್ದನ್ನು ನಾನೆಂದಿಗೂ ಮರೆಯಲಾರೆ.
ಜವಾಹರಲಾಲ್ ನೆಹರು ಪ್ರಧಾನಿಯಾಗಿದ್ದಾಗ ನೊಬೆಲ್ ಪ್ರಶಸ್ತಿ ಪುರಸ್ಕೃತ ವಿ.ಎಸ್.ನೈಪಾಲ್, ಭಾರತೀಯರು ಕತ್ತಲಲ್ಲಿ ಬಹಿರ್ದೆಶೆಗೆ ಹೋಗುತ್ತಿದ್ದ ದೃಶ್ಯವನ್ನು ಕಂಡು ಭಾರತದ ಗಾಢಾಂಧಾಕಾರದ ದೇಶ ಎಂಬರ್ಥ ಬರುವ ಪುಸ್ತಕವೊಂದನ್ನು ಬರೆದಿದ್ದರು. ನೆಹರು ಆಗಲಿ ಅವರ ಪುತ್ರಿಯಾಗಲಿ ಎಂದೂ ಶೌಚಾಲಯದ ವಿಷಯ ಮಾತನಾಡಿಲ್ಲ. ಮೋದಿಗೆ ತನ್ನ ದೇಶದ ಬಗ್ಗೆ ತಿಳಿದುಕೊಳ್ಳಲು ವಿದೇಶದವರ್ಯಾರೋ ಬರೆದ ಪುಸ್ತಕದ ಅಗತ್ಯವಿರಲಿಲ್ಲ. ಅವರು 75 ದಶಲಕ್ಷ ಶೌಚಾಲಯಗಳನ್ನು ನಿರ್ಮಿಸಿಕೊಟ್ಟರು. ಇದೀಗ ಈ ಅಭಿಯಾನದ ಮುಂದಿನ ಮಜಲಾಗಿ ಶುದ್ಧ ನೀರು ಪೂರೈಕೆಯ ಘೋಷಣೆ ಮಾಡಿದ್ದಾರೆ. 2014ರಲ್ಲಿ ಶೇ. 34 ಇದ್ದ ನೈರ್ಮಲ್ಯ 2018ರಲ್ಲಿ ಶೇ. 83್ಕೕರಿದೆ.
ಕೆಂಪುಕೋಟೆಯಿಂದ ಮಾಡಿದ ಭಾಷಣದ ಪರಿಣಾಮ ಐದು ವರ್ಷಗಳ ಬಳಿಕ ಗೋಚರಿಸುತ್ತಿದೆ. 300 ದಶಲಕ್ಷಕ್ಕೂ ಅಧಿಕ ಬ್ಯಾಂಕ್ ಖಾತೆಗಳನ್ನು ಬಡವರಿಗಾಗಿ ತೆರೆಯಲಾಯಿತು. 100 ದಶಲಕ್ಷಕ್ಕೂ ಹೆಚ್ಚು ಮಂದಿ ಮುದ್ರಾ ಸಾಲ ಪಡೆದುಕೊಂಡಿದ್ದಾರೆ. ಈ ಯೋಜನೆಗಳ ಫಲಾನುಭವಿಗಳಲ್ಲಿ ಮುಕ್ಕಾಲು ಪಾಲು ಮಹಿಳೆಯರು, ಅದರಲ್ಲೂ ಹಿಂದುಳಿದ ಜಾತಿಗಳಿಗೆ ಸೇರಿದವರು. ಹೊಗೆಯಿಂದ ತುಂಬಿರುತ್ತಿದ್ದ 50 ದಶಲಕ್ಷ ಕುಟುಂಬಗಳಿಗೆ ಗ್ಯಾಸ್ ಸಿಲಿಂಡರ್ ಸಿಕ್ಕಿದೆ. ಮನೆಯಿಲ್ಲದ ಅಥವಾ ಮುರುಕಲು ಮನೆ ಹೊಂದಿದ 10 ದಶಲಕ್ಷಕ್ಕೂ ಅಧಿಕ ಮಂದಿ ಈಗ ಹೊಸಮನೆಗಳಲ್ಲಿ ವಾಸಿಸುತ್ತಿದ್ದಾರೆ. 40 ದಶಲಕ್ಷಕ್ಕೂ ಅಧಿಕ ರೈತರಿಗೆ ಬೆಳೆ ವಿಮೆ ಸಿಕ್ಕಿದೆ. ಕಳೆದ ಐದು ವರ್ಷಗಳಲ್ಲಿ ಕಡಿಮೆ ಆದಾಯ ವರ್ಗದ ಕನಿಷ್ಠ ಅರ್ಧ ಶತಕೋಟಿ ಜನರಿಗೆ ಒಂದಿಲ್ಲೊಂದು ಒಂದು ಯೋಜನೆಯಿಂದ ಪ್ರಯೋಜನವಾಗಿದೆ. ಅವರೇಕೆ ಮೋದಿಯನ್ನು ತಿರಸ್ಕರಿಸಬೇಕು?
ಒಂದು ರೀತಿಯಲ್ಲಿ ಇದು 1971ರ ಸಾರ್ವತ್ರಿಕ ಚುನಾವಣೆಯನ್ನು ನೆನಪಿಸುತ್ತದೆ. 1971ಕ್ಕೂ 2019ಕ್ಕೂ ಅಗಾಧವಾದ ವ್ಯತ್ಯಾಸವೂ ಇದೆ. ಇಂದಿರಾ ಗಾಂಧಿ ಕೂಡ ಪಕ್ಷವನ್ನು ಬೇರುಮಟ್ಟದಿಂದ ಗಟ್ಟಿಗೊಳಿಸಿದ್ದರು. ರಾಜಕೀಯದ ಆಗಸದಲ್ಲಿ ಯಾವೆಲ್ಲ ತಾರೆಗಳು ಯಾರ ರೀತಿ ಚಲಿಸುತ್ತವೆ, ಯಾವ ಗ್ರಹಗಳು ಯಾವ ದಿಕ್ಕಿಗೆ ಹೋಗುತ್ತಿವೆ ಎಂದೆಲ್ಲ ಭವಿಷ್ಯ ನುಡಿದಿದ್ದ ಪಂಡಿತರ ಲೆಕ್ಕಾಚಾರಗಳನ್ನೆಲ್ಲ ಇಂದಿರಾ ಬುಡಮೇಲು ಮಾಡಿದ್ದರು. ಇಂದಿರಾ ಮತ್ತು ಮೋದಿ ನಡುವಿನ ಮುಖ್ಯ ವ್ಯತ್ಯಾಸ ಎಂದರೆ ಇಂದಿರಾ ಭರವಸೆಗಳು ಭರವಸೆಗಳಾಗಿಯೇ ಉಳಿದವು, ನರೇಂದ್ರ ಮೋದಿ ಬಡವರ ಬದುಕಿನಲ್ಲಿ ದೃಷ್ಟಿ ಗೋಚರವಾಗುವಂಥ ಗುಣಾತ್ಮಕವಾದ ಬದಲಾವಣೆಗಳನ್ನು ತಂದರು.
ಇಂದಿರಾ ಗಾಂಧಿ ಭರವಸೆಗಳನ್ನೆಲ್ಲ 20 ಅಂಶ ಕಾರ್ಯಕ್ರಮಗಳಾಗಿ ವಿಂಗಡಿಸಿ ಬಳಿಕ ಅದನ್ನು ಆಮೆನಡಿಗೆಯಲ್ಲಿ ಸಾಗುತ್ತಿದ್ದ ಸರಕಾರಕ್ಕೆ ಬಿಟ್ಟುಕೊಟ್ಟರು. ನರೇಂದ್ರ ಮೋದಿ 100ಕ್ಕೂ ಹೆಚ್ಚು ಯೋಜನೆಗಳನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಾಗದಷ್ಟು ವೇಗದಲ್ಲಿ ಜಾರಿಗೊಳಿಸಿದರು. ಬಡತನ ನಿವಾರಣೆ ಎಂಬ ಹಳೆ ದುರ್ಬಲ ಘೋಷಣೆ ಮೋದಿ ಆಡಳಿತದಲ್ಲಿ 2022ಕ್ಕಾಗುವಾಗ ಬಡತನ ನಿರ್ಮೂಲನೆ ಎಂಬ ಗುರಿಯಾಗಿ ಬದಲಾಗಿದೆ. ಮೋದಿಯ ಯಶಸ್ಸು ಒಂದಕ್ಕಿಂತ ಹೆಚ್ಚು ಮೂಲಗಳಲ್ಲಿ ಕಾಣಿಸುತ್ತಿತ್ತು. ರಾಹುಲ್ ಗಾಂಧಿ ತನ್ನ ಭಾಷಣದಲ್ಲಿ ಜನ ಧನ್, ಶೌಚಾಲಯ, ಗ್ಯಾಸ್ ಸಿಲಿಂಡರ್, ಆವಾಸ್ ಯೋಜನೆ, ಆಯುಷ್ಮಾನ್ ಭಾರತ್ ಅಥವಾ ಮುದ್ರಾ ಯೋಜನೆಯನ್ನೇಕೆ ಪ್ರಸ್ತಾವಿಸಲಿಲ್ಲ. ಏಕೆಂದರೆ ಅವುಗಳೆಲ್ಲ ಯಶಸ್ವಿಯಾಗಿದ್ದವು. ಒಂದು ವೇಳೆ ಈ ಯೋಜನೆಗಳು ವಿಫಲವಾಗಿದ್ದರೆ ಅವುಗಳೇ ರಾಹುಲ್ ಗಾಂಧಿಯ ಕಾರ್ಯಸೂಚಿಯ ಪ್ರಮುಖ ವಿಷಯಗಳಾಗುತ್ತಿದ್ದವು. ಕೆಲವೊಮ್ಮೆ ಮೌನವೂ ತನ್ನದೇ ಆದ ಕತೆ ಹೇಳುತ್ತದೆ. ಪಶ್ಚಿಮ ಬಂಗಾಳದಲ್ಲಿ ‘ಜೈ ಶ್ರೀರಾಮ್’ ಮೇಲೆ ಆಕ್ರಮಣವಾದಾಗ ಬಲವಾದ ಪ್ರತಿರೋಧ ಬಂದದ್ದು ರಾಜಕೀಯ ಎದುರಾಳಿಗಳಿಂದಲ್ಲ ಬದಲಾಗಿ ಜನರಿಂದ. ಇದಕ್ಕೆ ಸಂಬಂಧಿಸಿದ ಒಂದು ಜೋಕ್ ವೈರಲ್ ಆಯಿತು.
ಕೋಲ್ಕತ್ತಕ್ಕೆ 20 ಮೈಲು ದೂರದಲ್ಲಿ ನದಿ ದಡದಲ್ಲಿ ಶ್ರೀರಾಮ್‌ಪುರ ಎಂಬ ಊರಿದೆ. ಶ್ರೀರಾಮ್‌ಪುರಕ್ಕೆ ಹೋಗುವ ಟಿಕೇಟ್ ಖರೀದಿಸಲು ಸಾಧ್ಯವಾಗುತ್ತಿಲ್ಲ ಎಂದು ಬಂಗಾಳಿಗಳು ಹೇಳಲಾರಂಭಿಸಿದರು. ಅವರು ಬೇಗಮ್‌ಪುರದ ಟಿಕೇಟ್ ಎಂದು ಕೇಳ ಬೇಕಿತ್ತು. ಜೋಕ್ ಆಗಿದ್ದರೂ ಇದು ಬಂಗಾಳದ ಪರಿಸ್ಥಿತಿಯನ್ನು ವಿಡಂಬಿಸುತ್ತಿದೆ.
ಸರಕಾರ ಸಿಟ್ಟನ್ನು ತಾಳಿಕೊಳ್ಳಬಲ್ಲುದು, ಆದರೆ ವ್ಯಂಗ್ಯವನ್ನಲ್ಲ. ಸ್ಯಾಮ್ ಪಿತ್ರೋಡ ಬಿಜೆಪಿ ಪಾಲಿಗೆ ಅಗೋಚರವಾಗಿ ಸಿಕ್ಕಿದ ವರವಾದರು. ಪಿತ್ರೋಡ ತಾನು 2019ರ ಮನಮೋಹನ್ ಸಿಂಗ್ ಆಗಬಹುದು ಎಂದು ಭಾವಿಸಿದ್ದರು ಎಂಬ ರಹಸ್ಯವನ್ನು ಅವರ ಕೆಲವು ಆತ್ಮೀಯರೇ ಬಹಿರಂಗಪಡಿಸಿದ್ದಾರೆ. ಕಾಂಗ್ರೆಸ್ ಗೆದ್ದರೂ ರಾಹುಲ್ ಗಾಂಧಿ ಪ್ರಧಾನಮಂತ್ರಿಯಾಗಲು ತಯಾರಿರುವುದಿಲ್ಲ. ಆಗ ತನಗೆ ಪ್ರಧಾನಿ ಹುದ್ದೆ ಅಲಂಕರಿಸಲು ಕರೆ ಬರಬಹುದು ಎಂಬ ಹಗಲು ಕನಸು ಕಂಡಿದ್ದರು ಪಿತ್ರೋಡ. ಇಂಥ ಭ್ರಮೆಗಳೆಲ್ಲ ಕೆಲವೊಮ್ಮೆ ತುಟಿ ಮೀರಿ ಹೊರಗೆ ಬಂದು ಬಿಡುತ್ತವೆ. ‘ಜೋ ಹುವಾ ಸೋ ಹುವಾ’ ವಿವಾದದ ಬಳಿಕ ಕಾಂಗ್ರೆಸ್ ಹೈಕಮಾಂಡ್ ಬಾಯಿಮುಚ್ಚಿಕೊಂಡಿರಲು ಪಿತ್ರೋಡಗೆ ಆದೇಶಿಸಿದುದರಿಂದ ನಿಜವಾಗಿ ನಷ್ಟವಾದದ್ದು ಬಿಜೆಪಿಗೆ. ಪಿತ್ರೋಡ ಇನ್ನಷ್ಟು ಸಂದರ್ಶನಗಳನ್ನು ಕೊಡುತ್ತಿದ್ದರೆ ಬಿಜೆಪಿಯ ಸ್ಥಾನ ಗಳಿಕೆ ಮತ್ತಷ್ಟು ಹೆಚ್ಚುತ್ತಿತ್ತು. ಮೋದಿ ಗೆಲ್ಲುತ್ತಾರೆ ಎನ್ನುವುದು ಅಗತ್ಯಕ್ಕಿಂತಲೂ ಹೆಚ್ಚು ಖಚಿತವಾದದ್ದು ಎಕಾನಾಮಿಸ್ಟ್ ಎಂಬ ಪತ್ರಿಕೆ ಪ್ರಕಟಿಸಿದ ಲೇಖನದಿಂದ. ಮೋದಿ ವಿರುದ್ಧ ಈ ಪತ್ರಿಕೆ ಪಕ್ಷಪಾತದಿಂದ ಕೂಡಿದ, ಹುರುಳೇ ಇಲ್ಲದ ಸುದೀರ್ಘ ಲೇಖನವೊಂದನ್ನು ಪ್ರಕಟಿಸಿತು. ಒಂದು ಕಾಲದಲ್ಲಿ ತುಸು ಘನತೆ ಹೊಂದಿದ್ದ ಈ ಪತ್ರಿಕೆ ಚುನಾವಣೆಯನ್ನು ಸರಿಯಾಗಿ ಅಂದಾಜಿಸಿದ್ದು ಮಾತ್ರ ವಿರಳ. ಹಿತ್ತಾಳೆ ಕಿವಿಯ ವ್ಯಕ್ತಿಯೊಬ್ಬ ಸಿಗುವ ತನಕ ಈ ಪತ್ರಿಕೆ ದಿಲ್ಲಿಗೆ ಪೂರ್ಣಾವಧಿ ಪ್ರತಿನಿಧಿಯನ್ನೇ ಹೊಂದಿರಲಿಲ್ಲ. ಯಾವಾಗ ಈ ಪತ್ರಿಕೆ ಮೋದಿ ಸೋಲುತ್ತಾರೆ ಎಂದು ಹೇಳಿತೋ ಆಗಲೇ ಮೋದಿ ಗೆಲ್ಲುತ್ತಾರೆ ಎನ್ನುವುದು ಖಚಿತವಾಗಿತ್ತು.
ಕಾಂಗ್ರೆಸ್ ಕೇರಳ ಮತ್ತು ತಮಿಳುನಾಡಿಗೆ ಸೀಮಿತವಾದ ಪಕ್ಷವಾಯಿತು. ಅದೂ ಮಿತ್ರ ಪಕ್ಷಗಳ ಸಹಾಯದಿಂದ ಒಂದಷ್ಟು ಸ್ಥಾನಗಳನ್ನು ಗೆದ್ದು. ವಯನಾಡಿನಲ್ಲಿ ತನಗೆ ಸಿಕ್ಕಿದ ಗೆಲುವಿಗೆ ಮುಸ್ಲಿಂ ಲೀಗ್ ಕಾರಣ ಎಂದು ಸ್ವತಃ ರಾಹುಲ್ ಗಾಂಧಿಯೇ ಹೇಳಿಕೊಂಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮುಸ್ಲಿಂ ಲೀಗ್‌ನಿಂದ ಮತಭಿಕ್ಷೆ ಕೇಳಿದ್ದು ಪಕ್ಷದ ಸುದೀರ್ಘ ಇತಿಹಾಸದಲ್ಲಿ ಇದೇ ಮೊದಲು.
ಕುಟುಂಬದ ಹಿಡಿತದಲ್ಲಿರುವ ಪಕ್ಷಗಳಿಗೆ ಈ ಚುನಾವಣೆಯೊಂದು ದುಃಸ್ವಪ್ನ. ಮಮತಾ ಬ್ಯಾನರ್ಜಿಯ ಚರಿಷ್ಮಾ ಪತನಗೊಂಡಿತು. ಪ್ರಚಾರದ ವೇಳೆ ಅವರಿಗಿದ್ದ ಅಸಹನೆಯನ್ನು ಫಲಿತಾಂಶ ಸಮರ್ಥಿಸಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ 2021ರ ವಿಧಾನಸಭೆ ಚುನಾವಣೆಯಲ್ಲೂ ಮಮತಾ ಬ್ಯಾನರ್ಜಿ ಸೋಲೊಪ್ಪಿಕೊಳ್ಳಬೇಕಾಗಬಹುದು. ಬಂಗಾಳದಾದ್ಯಂತ ಪಿಸುನುಡಿಯಂತೆ ವ್ಯಾಪಕವಾಗಿ ಕೇಳಿ ಬರುತ್ತಿದ್ದ ಮಾತೊಂದು ಸತ್ಯವಾಗಿದೆ. ‘ಉನ್ನಿಶೇ ಹಾಲ್ಫ್, ಎಕುಶೆ ಶಾಫ್’. ಇದರರ್ಥ ಏನೆಂದರೆ 2019ರಲ್ಲಿ ಮಮತಾ ಸ್ಥಾನ ಗಳಿಕೆ ಅರ್ಧಕ್ಕಿಳಿಸಿ ಮತ್ತು 2021ರಲ್ಲಿ ಅವರು ಅಧಿಕಾರದಿಂದ ತೊಲಗಿಸಿ ಎಂದು. ನವೀನ್ ಪಟ್ನಾಯಕ್ ದಾಖಲೆ ಅವಧಿಗೆ ಮತ್ತೂಮ್ಮೆ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ್ದಾರೆ.
ಆದರೆ ಪಕ್ಷ ಸಂಪೂರ್ಣವಾಗಿ ಅವರ ಅಸ್ತಿತ್ವನ್ನಷ್ಟೇ ಅವಲಂಬಿಸಿದೆ. ಮುಂದಿನ ಐದು ವರ್ಷಗಳಲ್ಲಿ ಒಡಿಶಾದಲ್ಲಿ ಸಾಕಷ್ಟು ರಾಜಕೀಯ ಸ್ಥಿತ್ಯಂತರಗಳಿಗೆ ಅವಕಾಶವಿದೆ. ಈ ಹೀನಾಯ ಸೋಲಿಗೆ ಕಾಂಗ್ರೆಸ್‌ನ ಏಕೈಕ ಪ್ರತಿಕ್ರಿಯೆ ಎಂದರೆ ರಾಹುಲ್ ಗಾಂಧಿಯನ್ನು ಪಕ್ಷದ ಖಾಯಂ ಅಧ್ಯಕ್ಷನೆಂದು ಘೋಷಿಸುವುದು. ಬಿಜೆಪಿಗೆ ಪರ್ಯಾಯವಾಗಲು ಕಾಂಗ್ರೆಸಿನಿಂದ ಅಸಾಧ್ಯ. ಇನ್ನೇನಿದ್ದರೂ ಬಿಜೆಪಿ ಮತ್ತು ಪ್ರಾದೇಶಿಕ ಪಕ್ಷಗಳ ನಡುವೆ ಹೋರಾಟ.
ಚುನಾವಣೆ ಪ್ರಕ್ರಿಯೆ ಆರಂಭವಾದ ಸಂದರ್ಭದಲ್ಲಿ ಪತ್ರಿಕೆಯೊಂದಕ್ಕೆ ಬರೆದ ಲೇಖನದಲ್ಲಿ ನಾನು ರಾಜಕೀಯ ವಲಯದಲ್ಲಿ ‘ಅಲೆ’ಯೊಂದು ಹರಿದಾಡುತ್ತಿದೆ ಎಂದು ಹೇಳಿದ್ದೆ. ಆದರೆ ಯಾರಿಗೂ ಅಲೆಯ ಮೂಲ ಸ್ವಭಾವ ಏನೆಂದು ಅರ್ಥವಾಗಿರಲಿಲ್ಲ. ಅಲೆ ದಡಕ್ಕೆ ತಲಪುವ ತನಕ ಕಾಣಿಸುವುದಿಲ್ಲ. ಮೋದಿ ಅಲೆ ಸುನಾಮಿಯಾಗಿ ಅಪ್ಪಳಿತ್ತಿದೆ ಎಂದು ಅಂದಾಜಿಸಲು ವಿಫಲರಾದವರೆಲ್ಲ ಮುಳುಗಿದ್ದಾರೆ.
– ಎಂ.ಜೆ.ಅಕ್ಬರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubli: ತೀವ್ರತೆ ಪಡೆದ ಬಂದ್; ಬಸ್-ಆಟೋ ಇಲ್ಲದೆ ಪರದಾಡಿದ ಜನತೆ
Bhopal: ಉಗ್ರರನ್ನು ಇರಿಸಲಾಗಿದ್ದ ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ…
Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್; ಹೊರಗೆ ಹೋದದ್ದು ಇವರೇ
Champions Trophy: ರಾಹುಲ್, ಶಮಿ, ಜಡೇಜಾ ಸ್ಥಾನ ಪಡೆಯುವುದು ಅನುಮಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.