ರಾಜಕೀಯ ಶುದ್ಧಿಗೆ ಬೇಕಲ್ಲವೇ ಬಿಗಿ ನಿಯಮ?


Team Udayavani, Jun 15, 2019, 6:00 AM IST

Q-25

ದೇಶದ ಅಭಿವೃದ್ಧಿ ಯೋಜನೆಗಳು ಯಶಸ್ವಿಯಾಗಲು ರಾಜಕೀಯದ ಶುದ್ಧೀಕರಣಕ್ಕಾಗಿ ಕೆಲವು ನಿಯಮಾವಳಿಗಳಿಗೆ ತಿದ್ದುಪಡಿ ಮಾಡಬೇಕಿದೆ. ಇತ್ತೀಚಿನ ವರ್ಷಗಳಲ್ಲಿ ಈ ನಿಟ್ಟಿನಲ್ಲಿ ಭರವಸೆಯ ಆಶಾಕಿರಣ ಮೂಡುತ್ತಿದ್ದರೂ ಕೆಲವು ನ್ಯೂನತೆಗಳನ್ನು ಕಾನೂನಿನ ವ್ಯಾಪ್ತಿಗೆ ತಂದಲ್ಲಿ ಮಾತ್ರ ಇವುಗಳ ಪುನರಾವರ್ತನೆ ತಪ್ಪಿಸಬಹುದೇನೋ. ಸ್ವತಂತ್ರ ಭಾರತದ ಸಂವಿಧಾನ ನಿರ್ಮಾತೃಗಳು ಪರಿಶ್ರಮದಿಂದ ತಯಾರಿಸಿದ ಸಂವಿಧಾನದಲ್ಲಿ ಅವಕಾಶವಾದಿ ರಾಜಕಾರಣಿಗಳ ದುರಾಲೋಚನೆಗಳ ಸಂಭಾವ್ಯ ದುಷ್ಪರಿಣಾಮಗಳ ನಿಯಂತ್ರಣಕ್ಕೆ ಕೆಲವು ನಿರ್ಬಂಧಗಳನ್ನು ವಿಧಿಸಿದ್ದರು. ಆದರೆ ಎಷ್ಟೇ ಕಟ್ಟುನಿಟ್ಟಿನ ನಿಯಮಾವಳಿಗಳು ಇದ್ದರೂ ಅವುಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ತಿರುಚಿ ವ್ಯವಸ್ಥೆಯನ್ನು ಗಬ್ಬೆಬ್ಬಿಸುವುದು ಮಾತ್ರವಲ್ಲ, ಅವಕಾಶ ಸಿಕ್ಕಲ್ಲೆಲ್ಲ ಒಂದಿಷ್ಟು ಸಂಪಾದನೆ ಮಾಡುವವ‌ರ ಸಂಖ್ಯೆ ಹೆಚ್ಚುತ್ತಿದೆ. ಆದ್ದರಿಂದ ದೇಶದ ಅಭಿವೃದ್ಧಿ ಯೋಜನೆಗಳು ಸಮರ್ಪಕವಾಗಿ ಕಾರ್ಯಗತವಾಗಬೇಕಾದರೆ ಅಂತಹ ಯೋಜನೆ ಗಳನ್ನು ರೂಪಿಸುವುದರ ಜತೆಗೆ ಈ ಕಳೆ ಕೀಳುವ ನಿಯಮಗಳನ್ನು ಜಾರಿಗೊಳಿಸುವ ಅಗತ್ಯವಿದೆ.

ನಮ್ಮ ದೇಶದಲ್ಲಿ, ಮಂತ್ರಿ-ಮುಖ್ಯಮಂತ್ರಿ ಅಷ್ಟೇಕೆ ಚಾಲ್ತಿಯಲ್ಲಿರುವ ನಿಯಮಗಳಂತೆ ಪ್ರಧಾನಮಂತ್ರಿ ಹುದ್ದೆಗೂ ಯಾವುದೇ ಅನುಭವದ ಅಗತ್ಯವನ್ನು ನಿಗದಿಪಡಿಸಿಲ್ಲ. ಆದ್ದರಿಂದ ಅವರು ಸಂಪೂರ್ಣವಾಗಿ ಅಧಿಕಾರಿ ವರ್ಗದ ಮೇಲೆ ಅವಲಂಬಿ ಸಿರುವುದು ಅನಿವಾರ್ಯವಾಗುತ್ತದೆ. ಮುಖ್ಯವಾದ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಹುದ್ದೆಗಳಿಗೆ ನೇಮಕವಾಗುವವರಿಗೆ ಯಾವುದೇ ವಿದ್ಯಾರ್ಹತೆ ಮತ್ತು ಅನುಭವ ನಿಗದಿ ಪಡಿಸದಿರುವುದು ಅಭಾಸ ಹಾಗೂ ಈ ನಿಟ್ಟಿನಲ್ಲಿ ಸೂಕ್ತ ನಿಯಮಾವಳಿಗಳನ್ನು ಜಾರಿಗೊಳಿಸುವುದು ಅಗತ್ಯ ಎನಿಸುವುದಿಲ್ಲವೆ?

ಸಂವಿಧಾನದ 75ನೇ ಅನುಚ್ಛೇದದಲ್ಲಿ ರಾಜ್ಯಪಾಲರ ನೇಮಕಾತಿ ಬಗ್ಗೆ ವಿವರಿಸಲಾಗಿದೆ. ಆದರೆ ಎಲ್ಲೂ ಈ ಹುದ್ದೆಗೆ ನೇಮಕ ಹೊಂದುವವರಿಗೆ ಇರಬೇಕಾದ ಅರ್ಹತೆಗಳ ಬಗ್ಗೆ ಮಾನದಂಡಗಳನ್ನು ನಿಗದಿಪಡಿಸಿಲ್ಲ. ರಾಜ್ಯ ಮಟ್ಟದಲ್ಲಿ ಸಾಂವಿಧಾನಿಕ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುವ ರಾಜ್ಯಪಾಲರನ್ನು ಕೇಂದ್ರ ಸರಕಾರದ ಶಿಫಾರಸಿನ ಮೇರೆಗೆ ರಾಷ್ಟ್ರಪತಿಯವರು ನೇಮಕ ಮಾಡುತ್ತಾರೆ. ನೇಮಕಕ್ಕೆ ಕೇಂದ್ರ ಸರಕಾರದ ಶಿಫಾರಸ್ಸು ಅಗತ್ಯ. ಅವರ ಅಧಿಕಾರಾವಧಿ ಸಂವಿಧಾನದ ಅನುಚ್ಛೇದ 156(3)ರಂತೆ ಅಧಿಕಾರ ವಹಿಸಿಕೊಂಡ ದಿನದಿಂದ ಐದು ವರ್ಷಗಳ ಕಾಲ ಎಂದು ನಿಗದಿ ಪಡಿಸಿದ್ದರೂ ಅನುಚ್ಛೇದ 156(1)ರಲ್ಲಿ ರಾಷ್ಟ್ರಪತಿಯವರ ಇಷ್ಟ ಪರ್ಯಂತ ಅಧಿಕಾರದಲ್ಲಿ ಇರತಕ್ಕದ್ದು ಎಂದು ವಿವರಿಸಲಾಗಿದೆ. ಆದರೆ ನಿರ್ದಿಷ್ಟ ಕಾರಣವಿಲ್ಲದೆ ಕೇಂದ್ರ ಸರಕಾರದ ಅಥವಾ ರಾಷ್ಟ್ರಪತಿಯವರ ಧೋರಣೆಗೆ ಹೊಂದಾಣಿಕೆಯಾಗದ ಕಾರಣಕ್ಕೆ ರಾಜ್ಯಪಾಲರನ್ನು ವಜಾಗೊಳಿಸಿದ ಬಹಳಷ್ಟು ಪ್ರಕರಣಗಳಿವೆ. ರಾಜ್ಯಪಾಲರು ಕೇಂದ್ರ ಮತ್ತು ರಾಜ್ಯದ ನಡುವೆ ಆಡಳಿತಾತ್ಮಕ ವಿಷಯದಲ್ಲಿ ಸಂಪರ್ಕಕೊಂಡಿಯಾಗಿ ಇರಬೇಕೆಂಬುದು ಸಂವಿಧಾನ ನಿರ್ಮಾತೃಗಳ ಆಶಯವಾಗಿದ್ದರೂ ಅದೆಷ್ಟೋ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಭಿನ್ನ ಪಕ್ಷಗಳು ಅಧಿಕಾರದಲ್ಲಿದ್ದರೆ ರಾಜ್ಯಪಾಲರ ಮೂಲಕ ಸಂವಿಧಾನದ 356ನೇ ವಿಧಿಯನ್ನು ಉಪಯೋಗಿಸಿ ವಿಧಾನಸಭೆಯನ್ನು ವಿಸರ್ಜಿಸಿದ್ದು ಇದೆ. ರಾಜಕೀಯ ರಹಿತ ಮನೋಭಾವದ ರಾಜ್ಯಪಾಲರು ಕೇಂದ್ರದ ಉದ್ದೇಶವನ್ನು ಅನುಸರಿಸಲು ಒಪ್ಪದಿದ್ದರೆ ಅವರನ್ನೇ ವಜಾ ಮಾಡಿದ ಪ್ರಕರಣಗಳಿವೆ.

1980ರಲ್ಲಿ ತಮಿಳುನಾಡಿನ ರಾಜ್ಯಪಾಲರಾಗಿದ್ದ ಪ್ರಭುದಾಸ ಪಟ್ವಾರಿಯವರು ಶುದ್ಧ ಸಸ್ಯಾಹಾರಿ ಮತ್ತು ಅಪ್ಪಟ ಗಾಂಧಿವಾದಿ ಯಾಗಿದ್ದರು. ಆಗಿನ ರಾಷ್ಟ್ರಪತಿ ನೀಲಂ ಸಂಜೀವ ರೆಡ್ಡಿಯವರಿಗೆ ತಮಿಳುನಾಡು ಪ್ರವಾಸದ ವೇಳೆ ಅವರ ಅಪೇಕ್ಷೆಯಂತೆ ಊಟೋಪಚಾರ ವ್ಯವಸ್ಥೆ ಮಾಡದ ಕಾರಣಕ್ಕೆ ಹುದ್ದೆಯಿಂದ ವಜಾ ಮಾಡಲಾಗಿತ್ತು. ಇನ್ನೂ ಬಹಳಷ್ಟು ಪ್ರಕರಣಗಳಲ್ಲಿ ಕೇಂದ್ರ ಸರಕಾರಕ್ಕೆ ನಿಷ್ಠೆಯಿಂದ ಇರುವವರನ್ನೇ ನೇಮಕಾತಿ ಮಾಡುವುದರಿಂದ ರಾಜ್ಯಪಾಲರಾದ ನಂತರವೂ ಪಕ್ಷ ನಿಷ್ಠೆ ಮೆರೆದವರುಂಟು. ಲೋಕಸಭಾ ಚುನಾವಣೆಯ ಸಮಯದಲ್ಲಿ ರಾಜಸ್ಥಾನದ ರಾಜ್ಯಪಾಲ ಕಲ್ಯಾಣ್‌ ಸಿಂಗ್‌, ಮೋದಿಯವರು ಮತ್ತೂಮ್ಮೆ ಪ್ರಧಾನಿ ಆಗಬೇಕೆಂಬ ಹೇಳಿಕೆ ಕೊಟ್ಟು ಮುಜುಗರಕ್ಕೆ ಈಡಾದ ಪ್ರಕರಣ ಹಸಿರಾಗಿದೆ. ಇವೆಲ್ಲವೂ ಆಗಬಾರದೆಂದರೆ ಇಂತಹ ಹುದ್ದೆಗೆ ರಾಜಕೀಯೇತರ ವ್ಯಕ್ತಿಗಳನ್ನು ನೇಮಿಸುವ ಕಟ್ಟುನಿಟ್ಟಿನ ನಿಯಮ ಜಾರಿಗೆ ಬರಬೇಕು. ಚುನಾವಣಾ ಸುಧಾರಣೆಗಳಿಗೆ ಸಂಬಂಧಿಸಿದಂತೆ 1983ರಲ್ಲಿ ನೇಮಕವಾದ ನ್ಯಾ| ಸರ್ಕಾರಿಯಾ ಆಯೋಗ ಸಲ್ಲಿಸಿದ ಶಿಫಾರಸುಗಳಲ್ಲಿ ರಾಜ್ಯಪಾಲರು ಅದೇ ರಾಜ್ಯದವರಾಗಿರಬಾರದೆಂಬ ನಿಯಮ ಮಾತ್ರ ಪಾಲನೆಯಾಗುತ್ತಿದೆ. ಆದರೆ ರಾಜಕೀಯ ವ್ಯಕ್ತಿ ಆಗಿರಬಾರದೆಂಬ ಶರತ್ತು ಎಳ್ಳಷ್ಟೂ ಪಾಲನೆಯಾಗುತ್ತಿಲ್ಲ. ಹಾಗೆಯೇ ರಾಜ್ಯಪಾಲರ ನೇಮಕಾತಿ ಸಂಬಂಧ ಆಯಾ ರಾಜ್ಯ ಸರಕಾರದೊಡನೆ ಸಮಾಲೋಚಿಸಬೇಕೆಂಬುದೂ ಕಾಟಾಚಾರಕ್ಕೆ ಪಾಲನೆ ಆಗುತ್ತದೆ.

ಪ್ರಮುಖ ನಿರ್ಧಾರಗಳನ್ನು ಸಂಪುಟ ಸಭೆಯಲ್ಲಿ ಅಂಗೀಕರಿಸಿದ ನಂತರ ಅವುಗಳು ಮೊದಲಿಗೆ ಲೋಕಸಭೆಯಲ್ಲಿ ಬಳಿಕ ರಾಜ್ಯ ಸಭೆಯಲ್ಲಿ ಅಂಗೀಕರಿಸಲ್ಪಡಬೇಕು. ಅಂತಿಮವಾಗಿ ರಾಷ್ಟ್ರಪತಿಯವರ ಅನುಮೋದನೆಯೊಂದಿಗೆ ಕಾನೂನಾಗಿ ಜಾರಿಗೆ ಬರುವುದು. ಇದರ ಅರ್ಥ ಮತ್ತು ರಾಜ್ಯಸಭೆಯ ಕಾರ್ಯಭಾರದ ಉದ್ದೇಶ ಲೋಕಸಭಾ ವ್ಯವಹಾರಗಳಿಗೆ ಹೆಚ್ಚಿನ ಮಾರ್ಗದರ್ಶನ ನೀಡುವುದಾಗಿದೆ. ರಾಜ್ಯಗಳ ವಿಧಾನಸಭೆಯಿಂದ ತಮ್ಮ ರಾಜ್ಯದ ಹಿತಾಸಕ್ತಿಗೆ ಪೂರಕ ಶಾಸನ ಮತ್ತಿತರ ವಿಷಯದಲ್ಲಿ ನಿಗಾ ವಹಿಸುವ ಉದ್ದೇಶದಿಂದ ಪ್ರಾತಿನಿಧಿಕ ಸದಸ್ಯರ ಆಯ್ಕೆ ಮಾಡಲಾಗುತ್ತದೆ. ಎಲ್ಲಾ ರಾಜ್ಯಗಳ ಶಾಸನ ಸಭೆಗಳ ಪ್ರಾತಿನಿಧಿಕ ಸದಸ್ಯರ ಜತೆಗೆ ಸಾಹಿತ್ಯ, ಕಲೆ, ವಿಜ್ಞಾನ, ಸಮಾಜ ಸೇವೆ ಮುಂತಾದ ಕ್ಷೇತ್ರಗಳಲ್ಲಿ ವಿಶೇಷ ಜ್ಞಾನವನ್ನು ಮತ್ತು ವ್ಯಾವಹಾರಿಕ ಅನುಭವವನ್ನು ಹೊಂದಿದ ಸದಸ್ಯರು ಇರತಕ್ಕದ್ದು ಎಂದು ಸಂವಿಧಾನದ 80ನೇ ಪರಿಚ್ಛೇದದಲ್ಲಿ ವಿಧಿಸಲಾಗಿದೆ.

ಆದರೆ ಇದು ಎಷ್ಟರಮಟ್ಟಿಗೆ ಪಾಲನೆಯಾಗುತ್ತದೆ? ಈ ನಾಮ ನಿರ್ದೇಶನವನ್ನೂ ರಾಜಕೀಯ ದೃಷ್ಟಿಯಿಂದ ಮಾಡಿದ ಉದಾಹರಣೆ ಇವೆ. ಆದರೆ ಪ್ರಶ್ನೆ ಇದಲ್ಲ. ಅನುಭವಿಗಳ ಮಾರ್ಗದರ್ಶನದ ಉದ್ದೇಶದಿಂದ ರೂಪಿಸಲಾದ ಮೇಲ್ಮನೆ, ಜನರಿಂದ ನೇರವಾಗಿ ಆಯ್ಕೆಯಾದ ಲೋಕಸಭೆಯಲ್ಲಿ ಅಂಗೀಕೃತವಾದ ಶಾಸನಗಳು ಆಡಳಿತ ಪಕ್ಷಕ್ಕೆ ಬಹುಮತ ಇಲ್ಲವೆಂಬ ಕಾರಣಕ್ಕೆ ಪರೋಕ್ಷವಾಗಿ ಪ್ರಾತಿನಿಧ್ಯ ಹೊಂದಿರುವ ರಾಜ್ಯಸಭೆಯಲ್ಲಿ ತಿರಸ್ಕೃತವಾಗುವುದು ಎಷ್ಟರಮಟ್ಟಿಗೆ ಸಮಂಜಸ? ಈ ಕಾರಣದಿಂದ ಪ್ರಜೆಗಳಿಂದ ನೇರವಾಗಿ ಆಯ್ಕೆಯಾದ ಸಂಸತ್‌ ಮತ್ತು ವಿಧಾನಸಭಾ ಸದಸ್ಯರ ನಿರ್ಧಾರ ಜಾರಿಗೆ ಬರಲು ತಡವಾಗುವುದು ಎಷ್ಟರಮಟ್ಟಿಗೆ ಸಮರ್ಥನೀಯ?

ಏಕಪಕ್ಷೀಯ ಆಡಳಿತ, ದ್ವಿಪಕ್ಷೀಯ ವ್ಯವಸ್ಥೆಯ ಕಾಲ ಮುಗಿಯಿತು. ಪ್ರಾದೇಶಿಕ ಪಕ್ಷಗಳು ರಾಷ್ಟ್ರೀಯ ಪಕ್ಷಗಳ ಜತೆಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವ ಸಂಪ್ರದಾಯ ಆರಂಭವಾಗಿದೆ. ಚುನಾವಣೋತ್ತರ ಮೈತ್ರಿಗಿಂತ ಇದು ಲೇಸು. ಆದರೂ ಇಂತಹ ಚುನಾವಣಾ ಪೂರ್ವ ಮೈತ್ರಿಗೆ ಕಾನೂನಿನ ಮಾನ್ಯತೆ, ಸಮರ್ಪಕ ಮಾನದಂಡ ನಿಗದಿ ಪಡಿಸುವ ಅಗತ್ಯವಿದೆ. ಈ ರೀತಿ ಮೈತ್ರಿ ಮಾಡಿಕೊಳ್ಳುವ ಪಕ್ಷಗಳು ಚುನಾವಣೆಯ ನಂತರ ಸರಕಾರದಲ್ಲಿ ಪಾಲ್ಗೊಳ್ಳುವ/ ಪಾಲ್ಗೊಳ್ಳದಿರುವ ಬಗ್ಗೆ ಹಾಗೂ ಸರಕಾರದ ಸಾಮಾನ್ಯ ಕಾರ್ಯಕ್ರಮ ಗಳಲ್ಲಿ ಎಷ್ಟರ ಮಟ್ಟಿಗೆ ಬದ್ಧರಾಗಿರುತ್ತವೆ ಎಂಬುದನ್ನು ಚುನಾವಣೆಯ ಮೊದಲೇ ದೃಢಪಡಿಸಿ ಕೊಳ್ಳುವುದರಿಂದ ಸಂಭಾವ್ಯ ಗೋಜಲು ನಿವಾರಿಸಲು ಸಾಧ್ಯ. ಇಲ್ಲವಾದರೆ ಹಿಂದಿನ ಸರಕಾರದಲ್ಲಿ ರಾಮ್‌ ವಿಲಾಸ್‌ ಪಾಸ್ವಾನ್‌ ಒಂದು ನಿರ್ದಿಷ್ಟ ವಿಷಯದಲ್ಲಿ ಬೆಂಬಲ ಹಿಂದೆಗೆದುಕೊಳ್ಳುವ ಬೆದರಿಕೆ ಹಾಕಿದ್ದು, ನಿತೀಶ್‌ ಕುಮಾರ್‌ ಮತ್ತು ಶಿವಸೇನೆಯ ಉದ್ಧವ ಠಾಕ್ರೆ ಒಂದು ಹಂತದಲ್ಲಿ ಬೆಂಬಲ ಹಿಂತೆಗೆದುಕೊಂಡು ಚುನಾವಣೆ ಸಮೀಪಿಸುತ್ತಿದ್ದಂತೆ ಮತ್ತೆ ಮೈತ್ರಿಗೆ ಮುಂದಾದದ್ದು, ಚಂದ್ರಬಾಬು ನಾಯ್ಡು ಬೆಂಬಲವನ್ನೇ ಹಿಂತೆಗೆದುಕೊಂಡದ್ದು, ಈಗ ತಾನೇ ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ನಿತೀಶ್‌ ಕುಮಾರ್‌ ತಮ್ಮ ಪಕ್ಷಕ್ಕೆ ನೀಡಲಾದ ಮಂತ್ರಿ ಪದವಿ ಕಡಿಮೆಯಾಯಿತೆಂಬ ನೆಪವೊಡ್ಡಿ ಸರಕಾರದಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ್ದು ಇಂತಹ ದೊಂಬರಾಟಗಳಿಗೆ ಅವಕಾಶವಾಗುತ್ತದೆ. ಜನಾದೇಶ ಮೈತ್ರಿಗೆ ಹೊರತು ಪ್ರತ್ಯೇಕವಾಗಿ ಅಲ್ಲ ಎಂಬುದನ್ನು ಈ ಸಂದರ್ಭದಲ್ಲಿ ನೆನಪಿಡಬೇಕಲ್ಲವೇ? ಜನಾದೇಶ ಮೈತ್ರಿ ಕೂಟಕ್ಕೆ ಬಂದಿರುವಾಗ, ಎಲ್ಲಾ ಪಕ್ಷಗಳು ಬದ್ಧತೆ ತೋರಿಸುವ ಅಗತ್ಯವಿರು ವುದರಿಂದ ಇದನ್ನು ಶಾಸನ ಬದ್ಧವಾಗಿಸಲು ಇದು ಸಕಾಲ. ಆದ್ದರಿಂದ ಇಂತಹ ಚಟುವಟಿಕೆಗಳನ್ನು ಪಕ್ಷಾಂತರ ನಿಷೇಧ ಕಾಯಿದೆಯಡಿ ತರಬೇಕು.

ಇನ್ನು ಯಾರನ್ನೋ ಓಲೈಸಲು ಸಂವಿಧಾನದಲ್ಲಿ ಇಲ್ಲದ ಉಪಪ್ರಧಾನಿ, ಉಪ ಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿ ಏತಕ್ಕಾಗಿ? ಅತಂತ್ರ ಸರಕಾರ, ಆಯ್ಕೆಯಾದ ಪಕ್ಷಕ್ಕೆ, ಮತದಾರರ ಭಾವನೆಗಳಿಗೆ ಧಕ್ಕೆ ಬರುವಂತೆ ಅವಧಿ ಪೂರ್ವ ರಾಜೀನಾಮೆ, ಪಕ್ಷ ಬದಲಾವಣೆ ಇವೆಲ್ಲವೂ ರಾಜಕಾರಣಿಗಳು ರಂಗೋಲಿ ಕೆಳಗೆ ತೂರುವ ಚಾಣಾಕ್ಷತೆಯನ್ನು ಪ್ರದರ್ಶಿಸುವ ಮೂಲಕ ಪರೋಕ್ಷವಾಗಿ ಪ್ರಜಾಪ್ರಭುತ್ವಕ್ಕೆ ಮಾಡುವ ಅಪಮಾನ. ಇದೆಲ್ಲದಕ್ಕೂ ನಿಯಂತ್ರಣ ತರುವ ಕಾಯಿದೆ ಜಾರಿಗೊಳಿಸಿದರೆ ಮಾತ್ರ ಚುನಾಯಿತ ಸರಕಾರ ತನ್ನ ಅವಧಿಯನ್ನು ಸುಗಮವಾಗಿ ಮುಗಿಸಲು ಮತ್ತು ಅಭಿವೃದ್ಧಿ ಯೋಜನೆಗಳನ್ನು ರೂಪಿಸಿ ಜಾರಿಗೆ ತರುವಲ್ಲಿ ಸಫ‌ಲವಾಗಲು ಸಾಧ್ಯ.

ಇತ್ತೀಚೆಗೆ ಚುನಾವಣೆಗಳಲ್ಲಿ ಪಕ್ಷಗಳು ತಮ್ಮ ನಡುವಿನ ಸ್ಪರ್ಧೆಯನ್ನು ಕ್ರೀಡಾ ಮನೋಭಾವದಿಂದ ನೋಡುವ ಪ್ರವೃತ್ತಿ ಕಡಿಮೆಯಾಗುತ್ತಿದೆ. ಚುನಾವಣೆಯ ಸಂದರ್ಭದ ಮನಸ್ಥಿತಿಯನ್ನು ಫ‌ಲಿತಾಂಶದ ನಂತರವೂ ಮುಂದುವರಿಸಿಕೊಂಡು ಹೋಗುವ ಕೆಟ್ಟ ಸಂಪ್ರದಾಯ ಹೆಚ್ಚಾಗುತ್ತಿದೆ. ಸಾರ್ವಜನಿಕರು ಯಾವುದಾದರೂ ಮನವಿ ಹಿಡಿದು ಬಂದರೆ, ನೀವು ಯಾರಿಗೆ ಮತ ಹಾಕಿದ್ದೀರೋ ಅವರನ್ನು ಕೇಳಿ, ನಿಮಗೇಕೆ ಅನುದಾನ ಕೊಡಬೇಕು, ಸೌಲಭ್ಯ ಕೇಳಲು ನಾಚಿಕೆಯಾಗುವುದಿಲ್ಲವೇ ಎಂದು ಉದ್ಧಟತನದ ಮಾತನಾಡುತ್ತಾರೆ.ತಾವು ಇಡೀ ರಾಜ್ಯದ ಮಂತ್ರಿ/ಮುಖ್ಯಮಂತ್ರಿ ಎಂಬುದರ ಪರಿವೆಯೇ ಇಲ್ಲದಂತೆ ವರ್ತೀಸುತ್ತಾರೆ? ಇಂತಹದೊಂದು ಬದ್ಧತೆಯನ್ನು ಕಾನೂನಿನ ವ್ಯಾಪ್ತಿಗೆ ತಂದು ಕೇಂದ್ರ-ರಾಜ್ಯಗಳೆರಡರ ಯೋಜನೆಗಳು ದೇಶದ ಎಲ್ಲಾ ಅರ್ಹ ಫ‌ಲಾನುಭವಿಗಳಿಗೆ ತಲುಪುವಂತೆ ಮಾಡದಿದ್ದರೆ ಕ್ಷುಲ್ಲಕ ರಾಜಕೀಯ ಕಾರಣಕ್ಕೆ ನಿಜವಾಗಿ ಅಗತ್ಯವಿರುವವರು ವಂಚಿತರಾಗುತ್ತಾರೆ. ಉದಾಹರಣೆಗೆ ಆಯುಷ್ಮಾನ್‌ ಭಾರತ್‌, ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆ ಇವುಗಳು ವಿಪಕ್ಷಗಳ ಸರಕಾರ ಇರುವ ರಾಜ್ಯಗಳಲ್ಲಿ ಸಮರ್ಪಕವಾಗಿ ಜಾರಿಗೆ ಬಂದಿಲ್ಲ. ಇಂಥವುಗಳಿಗೆ ಕಡಿವಾಣ ಹಾಕುವ ಅಗತ್ಯವಿದೆ.

ಓರ್ವ ಸರಕಾರಿ ನೌಕರ ಅಥವಾ ಅಧಿಕಾರಿಗೆ ಸೇವೆಯಲ್ಲಿ ಇರುವಾಗ ಯಾವುದೇ ಅನ್ಯ ಉದ್ಯೋಗ ಕೈಗೊಳ್ಳಲು ಅವಕಾಶವಿಲ್ಲ. ಆದರೆ ಜನಪ್ರತಿನಿಧಿಗಳಿಗೆ ಈ ನಿರ್ಬಂಧವಿಲ್ಲ. ಹೀಗಾಗಿ ಅವರು ಅಥವಾ ಅವರ ಪತಿ/ಪತ್ನಿ, ಮಕ್ಕಳು ಲಾಭದಾಯಕ ಉದ್ದಿಮೆಗಳಲ್ಲಿ ಪಾಲುದಾರರಾಗಲು ಅವಕಾಶವಿದೆ. ಇರಲಿ, ಪ್ರಾಮಾಣಿಕವಾಗಿ ಈ ವ್ಯವಹಾರ ಮಾಡಿದರೆ ತಪ್ಪೇನಿಲ್ಲ ಎಂದು ಭಾವಿಸೋಣ. ಪ್ರಶ್ನೆ ಅದಲ್ಲ, ಓರ್ವ ಸರಕಾರಿ ನೌಕರನಿಗೆ ಪಿಂಚಣಿಗೆ ಅರ್ಹರೆನಿಸಲು ಕನಿಷ್ಟ 10 ವರ್ಷಗಳ ಮತ್ತು ಪೂರ್ಣ ಪ್ರಮಾಣದ ಪಿಂಚಣಿ ಸಿಗಬೇಕಾದರೆ 33(ಈಗ 30) ವರ್ಷಗಳ ಸೇವೆ ಸಲ್ಲಿಸುವ ಅಗತ್ಯವಿದೆ. ಅಲ್ಲದೆ 01-04-2006ರಿಂದೀಚೆಗೆ ಸೇವೆಗೆ ಸೇರಿದವರಿಗೆ ಹಿಂದಿನಂತೆ ಸರಕಾರ ನೇರವಾಗಿ ಪಿಂಚಣಿ-ಉಪದಾನ ಪಾವತಿಸುವ ಪದ್ಧತಿ ಕೈಬಿಟ್ಟು ನೌಕರರ ವೇತನದಿಂದ ಶೇ.10 ಕಡಿತಗೊಳಿಸಿ ಸರಕಾರದ ನಿಧಿಯಿಂದ 10 ಸೇರಿಸಿ ಪ್ರತ್ಯೇಕ ನಿಧಿ ಸ್ಥಾಪಿಸಿ ಅದರ ಮೂಲಕ ಪಾವತಿಸುವ ನಿಯಮ ನೂತನ ಪಿಂಚಣಿ ಯೋಜನೆ ಜಾರಿಗೆ ಬಂದಿದೆ. ಆದರೆ ಓರ್ವ ಸಂಸತ್‌ ಸದಸ್ಯ/ಶಾಸಕ ಒಂದು ಅವಧಿ ಪೂರೈಸಿದರೆ ಸಾಕು, ಪಿಂಚಣಿಗೆ ಅರ್ಹರಾಗುತ್ತಾರೆ. ಖಾಸಗಿ ಉದ್ದಿಮೆಯಲ್ಲಿ ಪಾಲುದಾರಿಕೆ ಮೂಲಕ ದೊಡ್ಡ ಮೊತ್ತದ ಸಂಪಾದನೆ ಇದ್ದರೂ ತೆರಿಗೆ ಹಣದಿಂದ ಪಿಂಚಣಿಗಾಗಿ ವೆಚ್ಚ ಮಾಡುವುದರಲ್ಲಿ ಯಾವ ಸಮರ್ಥನೆಯಿದೆ? ಜನ ಸಾಮಾನ್ಯರಿಗೆ ಗ್ಯಾಸ್‌ ಸಬ್ಸಿಡಿ ತ್ಯಾಗ ಮಾಡಲು ಕರೆಕೊಟ್ಟಂತೆ ಸ್ವಪ್ರೇರಣೆಯಿಂದ ಖಾಸಗಿ ಆದಾಯ ಇರುವವರು ಪಿಂಚಣಿ ತ್ಯಾಗ ಮಾಡಬಾರದೇಕೆ?

ಟಾಪ್ ನ್ಯೂಸ್

Perth Test: Jaiswal scores century; record partnership with Rahul

Perth Test: ಜೈಸ್ವಾಲ್‌ ಶತಕದಾಟ; ರಾಹುಲ್‌ ಜತೆ ದಾಖಲೆಯ ಜೊತೆಯಾಟ

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

Maryade Prashne Review

Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ

4-Laparoscopic

Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

ರಾಜ್ಯದಲ್ಲಿ ಇನ್ನೊಂದು ಪಕ್ಷದ ಸರ್ಕಾರವಿದ್ದಾಗ ಈ ರಾಜ್ಯಪಾಲರುಗಳು‎ ತುಂಬಾ ಆತಂತ್ರ ಸ್ಥಿತಿ

ಮುಡಾ: ಸಿದ್ದು ವಿರುದ್ಧ ರಾಜ್ಯಪಾಲರ prosecution ಅನುಮತಿ ಸಿಎಂ ಸ್ಥಾನಕ್ಕೆ ಮುಳುವಾಗಬಹುದೇ?

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Perth Test: Jaiswal scores century; record partnership with Rahul

Perth Test: ಜೈಸ್ವಾಲ್‌ ಶತಕದಾಟ; ರಾಹುಲ್‌ ಜತೆ ದಾಖಲೆಯ ಜೊತೆಯಾಟ

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

Maryade Prashne Review

Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.