ಆದಾಯ ಬೇಕು, ಮೀನುಗಾರ ಬೇಡವೇ?
Team Udayavani, Jan 14, 2019, 12:30 AM IST
ಒಂದು ಬೋಟಿನಲ್ಲಿ ಕನಿಷ್ಠ 800 ಲೀಟರ್ ಡೀಸೆಲ್ ಮೀನುಗಾರಿಕೆಗೆ ತೆರಳುವ ಮುನ್ನ ಭರ್ತಿ ಮಾಡಲಾಗುತ್ತದೆ. ಇದರ ಜತೆಗೆ ಹತ್ತು ದಿನಕ್ಕೆ ಬೇಕಾಗುವಷ್ಟು ಆಹಾರ ಸಾಮಗ್ರಿಗಳನ್ನು ಕೊಂಡೊಯ್ಯುತ್ತಾರೆ. ಊಟ, ತಿಂಡಿ, ನಿತ್ಯಕರ್ಮ ಎಲ್ಲವಕ್ಕೂ ಒಳಗೇ ವ್ಯವಸ್ಥೆ ಇರುತ್ತದೆ. ಅಷ್ಟು ದಿನ ಇಡೀ ಬೋಟು ಅವರ ಪ್ರಪಂಚ. ಅದನ್ನು ಬಿಟ್ಟರೆ ಬರೀ ನೀರು. ಏನೇ ಸಮಸ್ಯೆಯಾದರೂ ತಕ್ಷಣವೇ ಕಂಪೆನಿ ಬೋಟಿಗೆ ಮಾಹಿತಿ ನೀಡಲಾಗುತ್ತದೆ.
ಹೊಲದಲ್ಲಿ ಮೊಳಕೆಯೊಡದ ಬೀಜದ ಫಸಲನ್ನು ರೈತರು ಸುಲಭವಾಗಿ ಅಂದಾಜಿಸಿ, ಕಷ್ಟ-ನಷ್ಟದ ಲೆಕ್ಕಚಾರ ಹಾಕುತ್ತಾರೆ. ಮಳೆಯಿಲ್ಲದೇ ಎಷ್ಟು ಬೆಳೆ ಬೆಳೆಯಬಹುದು ಎಂಬುದನ್ನೂ ಗ್ರಹಿಸಬಲ್ಲರು. ಹೈನುಗಾರಿಕೆ, ಕುಕ್ಕುಟೋದ್ಯಮ, ತೋಟಗಾರಿಕೆ ಯಲ್ಲಿ ವಾರ್ಷಿಕ ಲಾಭ-ನಷ್ಟ ಹಾಕಿಯೇ ಬಂಡವಾಳ ಹೂಡಿಕೆ ಹೂಡುತ್ತಾರೆ. ಆದರೆ, ಸಮುದ್ರ ಮೀನುಗಾರಿಕೆ ಹಾಗಿಲ್ಲ. ಮೀನುಗಾರಿಕೆಗೆ ತೆರಳಿದ ದೋಣಿ(ಬೋಟು) ಇಷ್ಟೇ ಪ್ರಮಾಣದ ಮೀನು ತರಬಹುದು ಎಂದು ಅಂದಾಜಿಸಲು ಸಾಧ್ಯವೇ ಇಲ್ಲ.
ಒಮ್ಮೊಮ್ಮೆ ನಿರೀಕ್ಷೆಗೂ ಮೀರಿ ಮೀನು ಸಿಗಬಹುದು. ಹಲವು ಬಾರಿ ಸಾವಿರಾರು ಲೀಟರ್ ಡೀಸೆಲ್ ವ್ಯಯಿಸಿದರೂ ಖಾಲಿ ಬೋಟು ದಡಕ್ಕೆ ಬರುವುದು ಉಂಟು. ಇದು ಮೀನುಗಾರಿಕೆಯ ಸಹಜ ಪ್ರಕ್ರಿಯೆ. ಇಷ್ಟಾಗಿಯೂ ಮೀನುಗಾರ ಛಲ ಬಿಡದೆ ಮಳೆ, ಚಳಿ, ಗಾಳಿ, ಬಿಸಿಲು ಲೆಕ್ಕಿಸದೆ ಸಮುದ್ರಕ್ಕೆ ತೆರಳುತ್ತಾನೆ. ನೀರ ಮೇಲಿನ ಗುಳ್ಳೆಯಂತೆ ಹಗಲಿರುಳು ಸಮುದ್ರ ಸುತ್ತುತ್ತಾನೆ. ಸಿಕ್ಕಷ್ಟು ಮೀನು ಹಿಡಿದು ದಡಕ್ಕೆ ಬರುತ್ತಾನೆ.
ಮಂಗಳೂರು, ಮಲ್ಪೆ, ಗಂಗೊಳ್ಳಿ, ಭಟ್ಕಳ ಹಾಗೂ ಕಾರವಾರ- ರಾಜ್ಯದ ಪ್ರಮುಖ ಬಂದರುಗಳು. ಇದರ ಜತೆಗೆ ಹಲವು ಕಿರು ಬಂದರುಗಳೂ ಇವೆ. ರಾಜ್ಯದ ಒಟ್ಟು ಕಡಲು ಮೀನು ಉತ್ಪಾದನೆಯಲ್ಲಿ ಶೇ.85ಕ್ಕಿಂತ ಹೆಚ್ಚಿನ ಪ್ರಮಾಣದ ಮೀನು ಹಿಡಿಯಲಾಗುತ್ತದೆ.
ಇತ್ತೀಚಿನ ವರ್ಷದಲ್ಲಿ ಕಡಲ ಮೀನು ಇಳುವರಿ ವಾರ್ಷಿಕ 4 ಲಕ್ಷ ಮೆಟ್ರಿಕ್ ಟನ್ ದಾಟುತ್ತಿದ್ದು, ವಾರ್ಷಿಕ ಸರಾಸರಿ ಸಾವಿರ ಕೋಟಿಗೂ ಅಧಿಕ ಮೌಲ್ಯದ ಮೀನನ್ನು ರಾಜ್ಯದಿಂದ ಹೊರ ರಾಜ್ಯಕ್ಕೆ ಮತ್ತು ವಿದೇಶಕ್ಕೆ ರಫ್ತು ಮಾಡಲಾಗುತ್ತದೆ. ಸರ್ಕಾರಗಳಿಗೆ ಕೋಟ್ಯಂತರ ರೂಪಾಯಿ ಆದಾಯ ಮೀನುಗಾರಿಕೆಯಿಂದ ಬರುತ್ತಿದೆ. ಮೀನುಗಾರಿಕೆಗೆ ತೆರಳುವ ಕೆಲವರು, ಮೀನು, ಮೀನಿನ ಉತ್ಪನ್ನ ಹಾಗೂ ಮೀನು ಮಾರುಕಟ್ಟೆ ಅವಲಂಬಿತವಾಗಿ ಸಾವಿರಾರು ಕುಟುಂಬಗಳು ಜೀವನ ನಡೆಸುತ್ತಿವೆ. ಲಕ್ಷಾಂತರ ಜನರಿಗೆ ಉದ್ಯೋಗವೂ ನೀಡಿದೆ.
2013-14ರಲ್ಲಿ 3.57 ಲಕ್ಷ ಮೆಟ್ರಿಕ್ ಟನ್ ಕಡಲ ಮೀನು ಉತ್ಪಾದನೆಯಾಗಿದ್ದು, 1210 ಕೋಟಿ ಮೌಲ್ಯದ 1,06,693 ಮೆಟ್ರಿಕ್ ಟನ್‌ಗಳಷ್ಟು ಕಡಲು ಉತ್ಪನ್ನ ರಫ್ತು ಮಾಡಲಾಗಿದೆ. 2014-15 ಮತ್ತು 2015-16ರಲ್ಲಿ ಸರಾಸರಿ ತಲಾ 3.90 ಲಕ್ಷ ಮೆಟ್ರಿಕ್ ಟನ್ ಮೀನು ಇಳುವರಿ ಪಡೆಯಲಾಗಿದೆ. 1426 ಕೋಟಿ ಮೌಲ್ಯದ 1,28,415 ಮೆಟ್ರಿಕ್ ಟನ್‌ಗಳಷ್ಟು ರಫ್ತಾಗಿದೆ. 2016-17ರಲ್ಲಿ 3.99 ಲಕ್ಷ ಮೆಟ್ರಿಕ್ ಟನ್ ಹಾಗೂ 2017-18ರಲ್ಲಿ 4.14 ಲಕ್ಷ ಮೆಟ್ರಿಕ್ ಮೀನು ಉತ್ಪಾದನೆಯಾಗಿದ್ದು, ಕ್ರಮವಾಗಿ 1050 ಕೋಟಿ ಮೌಲ್ಯದ 84,032 ಮೆಟ್ರಿಕ್ ಟನ್ ಹಾಗೂ 1,589 ಕೋಟಿ ಮೌಲ್ಯದ 1,26,592 ಮೆಟ್ರಿಕ್ ಟನ್ ರಫ್ತು ಮಾಡಲಾಗಿದೆ.
ಬಹುತೇಕರ ಆಹಾರ ಪದ್ಧತಿಯಲ್ಲಿ ಮೀನು ಅವಿಭಾಜ್ಯ ಅಂಗವಾಗಿ ಸೇರಿಬಿಟ್ಟಿದೆ. ಹಲವರಿಗೆ ಮೀನಿನ ಖಾದ್ಯ ಇಲ್ಲದಿದ್ದರೆ ಒಪ್ಪತ್ತಿನ ಊಟವೂ ಸೇರುವುದಿಲ್ಲ. ಹಸಿ ಮೀನು ಸಿಗದಿದ್ದಾಗ ಒಣಮೀನಿನ ಮೊರೆ ಹೋಗುತ್ತಾರೆ. ಕಡಲ ಮೀನಿನ ರುಚಿ ಕಂಡವರು ಇದನ್ನು ಅನುಭವಿಸಿಯೂ ಇರುತ್ತಾರೆ.
ಹೀಗೆ ತಿನ್ನಲು ಮೀನು ಬೇಕು, ಸರ್ಕಾರಕ್ಕೆ ಮೀನಿನ ಆದಾಯ ಬೇಕು. ಹಾಗಾದರೆ ಮೀನುಗಾರರು ಬೇಡವೇ? ಏಳು ಮಂದಿ ಮೀನುಗಾರರ ಜೀವ ಸರ್ಕಾರಗಳಿಗೆ ಮುಖ್ಯವಲ್ಲವೇ?
ಮಲ್ಪೆ ಬಂದರಿನಿಂದ ಹೋಗಿದ್ದ ಬೋಟು ಮತ್ತು ಅದರಲ್ಲಿದ್ದ 7 ಮಂದಿ ಮೀನುಗಾರರು ನಾಪತ್ತೆಯಾಗಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮೀನುಗಾರರ ಬೋಟು ಕಾಣೆಯಾಗಿ 15-20 ದಿನಗಳ ನಂತರ ಗಂಭೀರ ಶೋಧ ಆರಂಭಿಸಿವೆ. ಸಮುದ್ರದಲ್ಲಿ ಬೋಟೊಂದು ಕಾಣೆಯಾಗುವುದು ಸಾಮಾನ್ಯದ ವಿಚಾರವಲ್ಲ. ನಾಪತ್ತೆಯಾದ ಬೋಟು ಮೀನುಗಾರರ ಬದುಕಿನಿಂದ ರಾಷ್ಟ್ರದ ಭದ್ರತೆಯವರೆಗಿನ ಹತ್ತಾರು ಪ್ರಶ್ನೆ ಹುಟ್ಟು ಹಾಕಿವೆ.
ಮೀನುಗಾರಿಕೆಗೆ ತೆರಳಿದ ಬೋಟು ಸಮುದ್ರದಲ್ಲಿ ಯಾರ ಸಂಪರ್ಕಕ್ಕೂ ಸಿಗದೇ ನಾಪತ್ತೆಯಾಗಿರುವುದು ಇಡೀ ಮೀನುಗಾರ ಸಮುದಾಯದಲ್ಲೇ ಒಂದು ರೀತಿಯ ಜಿಜ್ಞಾಸೆ ಮೂಡಿಸಿದೆ. ಮುಂದೆ ನಮ್ಮ ಬೋಟು ಹೀಗಾಗಬಹುದು ಎಂಬ ಆತಂಕವನ್ನೂ ಸೃಷ್ಟಿಸಿದೆ. ಬೋಟು ಏಕಾಏಕಿ ನಾಪತ್ತೆಯಾಗಿದೆ ಎಂಬುದನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ ಮತ್ತು ನಂಬುವುದು ಕಷ್ಟ. ಆದರೂ, ಬೋಟು ನಾಪತ್ತೆಯಾಗುವುದು ಸತ್ಯ.
ಸಮುದ್ರ ಮೀನುಗಾರಿಕೆಯಲ್ಲಿ ನಾಲ್ಕು ವಿಧ. ನಾಡದೋಣಿಗಳು ನಿತ್ಯ ಸಮುದ್ರಕ್ಕೆ ಹೋಗಿ ತೀರದಲ್ಲಿ ಬಲೆ ಹಾಕಿ ಸಿಕ್ಕಿದಷ್ಟು ಮೀನು ಹೊತ್ತು ಬಂದರಿಗೆ ಬರುತ್ತವೆ. ಪರ್ಷಿಯನ್ ಬೋಟ್‌ಗಳಲ್ಲಿ 28 ರಿಂದ 32 ಮೀನುಗಾರರು ಇದ್ದು, ಒಂದು ಅಥವಾ ಎರಡು ದಿನ ಸಮುದ್ರದಲ್ಲಿದ್ದು ಸಿಕ್ಕಿರುವ ಮೀನಿನೊಂದಿಗೆ ದಡಕ್ಕೆ ಬರುತ್ತವೆ. ಇನ್ನು ನಾಲ್ಕೈದು ದಿನ ಸಮುದ್ರದಲ್ಲೇ ಇರುವ ಬೋಟುಗಳು ಇವೆ. ಆದರೆ, ಈ ಬೋಟುಗಳು ಆಳ ಸಮುದ್ರಕ್ಕೆ ಹೋಗುವುದಿಲ್ಲ. ಆಳ ಸಮುದ್ರದಲ್ಲಿ ಮೀನುಗಾರಿಕೆ ಮಾಡುವ ಬೋಟುಗಳಲ್ಲಿ ಆರು ಅಥವಾ ಏಳು ಮೀನುಗಾರು ಇರುತ್ತಾರೆ. ಒಮ್ಮೆ ಮೀನುಗಾರಿಕೆಗೆ ಬಂದರಿನಿಂದ ಹೊರಟರೆ ಹತ್ತು ಹನ್ನೊಂದು ದಿನದ ನಂತರ ವಾಪಾಸಾಗುವುದು. ಪರ್ಷಿಯನ್ ಬೋಟು ಹಾಗೂ ಆಳ ಸಮುದ್ರದ ಬೋಟುಗಳಿಗೆ ನಿಗದಿ ಮಾಡಿರುವ ಪರಿಧಿಯೊಳಗೆ ಮೀನುಗಾರಿಕೆ ಮಾಡಬೇಕು. ಆಳ ಸಮುದ್ರದ ಬೋಟುಗಳು 12 ನಾಟಿಕಲ್ ಮೈಲ್‌ನಿಂದ ಒಳಗೆ ಬಂದು ಬಲೆ ಎಳೆಯುವಂತಿಲ್ಲ. ಹಾಗೆಯೇ ಗೋವಾ, ಮಹಾರಾಷ್ಟ್ರ, ಕೇರಳ, ತಮಿಳುನಾಡು ಗಡಿ ದಾಟಿ ಹೋಗುವಂತೆಯೂ ಇಲ್ಲ. ಎಲ್ಲ ರಾಜ್ಯಗಳಿಗೂ ಸಮುದ್ರದಲ್ಲಿ ತಮ್ಮದೇ ಆದ ಗಡಿರೇಖೆಗಳಿವೆ. ಅಪ್ಪಿತಪ್ಪಿ ಕರ್ನಾಟಕದ ಬೋಟುಗಳು ಆ ರಾಜ್ಯಕ್ಕೆ ಹೋದಾಗ ಅಲ್ಲಿನವರ ಕಿರುಕುಳವೂ ಹೆಚ್ಚಿದೆ.
12 ನಾಟಿಕಲ್ ಮೈಲ್ ಒಳಗೆ ಕರವಾಳಿ ಪೊಲೀಸ್ ಪಡೆ ಕಣ್ಗಾವಲು ಇರುತ್ತದೆ. 12 ನಾಟಿಕಲ್ ಮೈಲು ನಂತರ ಕೇಂದ್ರದ ಕರವಾಳಿ ಪಡೆ(ಕೋಸ್ಟ್‌ಗಾರ್ಡ್) ಕಣ್ಗಾವಲು ಇರುತ್ತದೆ. ಯಾವುದೇ ಬೋಟು ಒಂಟಿಯಾಗಿ ಆಳ ಸಮುದ್ರದ ಮೀನುಗಾರಿಕೆಗೆ ಹೋಗುವುದಿಲ್ಲ. ಕಂಪೆನಿ ಬೋಟುಗಳ ಜತೆಗೆ ಹೋಗುತ್ತವೆ. 5 ರಿಂದ 20 ಬೋಟುಗಳವರೆಗೆ ಒಟ್ಟೊಟ್ಟಿಗೆ ಹೋಗುತ್ತವೆ. ಸಮುದ್ರದಲ್ಲಿ ಅವುಗಳ ಪಥವೇ ಬೇರೆಯಾಗಿರುತ್ತದೆ. ಎಲ್ಲ ಬೋಟುಗಳಲ್ಲಿ ಎರಡು ಬಗೆಯ ವೈರ್‌ಲೆಸ್ ಸಂಪರ್ಕ ಇರುತ್ತದೆ. ಒಂದರಲ್ಲಿ ಕಂಪೆನಿ ಬೋಟ್‌ಗಳೊಂದಿಗೆ ಮಾತ್ರ ವ್ಯವಹರಿಸಲು ಸಾಧ್ಯ. ಇನ್ನೊಂದು ವೈರ್‌ಲೆಸ್‌ನಲ್ಲಿ ಎಲ್ಲ ಬೋಟುಗಳು ಕರವಾಳಿ ಭದ್ರತಾ ಪಡೆ, ಕೋಸ್ಟ್ ಗಾರ್ಡ್ ಅಧಿಕಾರಿ, ಸಿಬ್ಬಂದಿ ಜತೆ ಸಂಪರ್ಕದಲ್ಲಿ ಇರಬಹುದು, ಮಾಹಿತಿ ವಿನಿಮಯ ಮಾಡಿಕೊಳ್ಳಲು ಅವಕಾಶ ಇದೆ.
ಕರ್ನಾಟಕದ ಬೋಟುಗಳು 45 ರಿಂದ 60 ನಾಟಿಕಲ್‌ಮೈಲಿ ಆಳದವರೆಗೂ ಮೀನುಗಾರಿಕೆಗೆ ಹೋಗುತ್ತವೆ. ತಮಿಳುನಾಡು ಬೋಟುಗಳು 80 ರಿಂದ 90 ನಾಟಿಕಲ್ ಮೈಲಿ ದೂರದವರೆಗೂ ಹೋಗುತ್ತವೆ. ಹಾಗೆಯೇ ಎಲ್ಲ ರಾಜ್ಯದ ಬೋಟುಗಳಿಗೂ ಪ್ರತ್ಯೇಕ ಬಣ್ಣ ಇದೆ. ಕರ್ನಾಟಕದ ಬೋಟುಗಳು ಕೆಂಪುಬಣ್ಣದ್ದಾಗಿದ್ದು, ಮೇಲ್ಭಾಗದ ಪಟ್ಟಿಗೆ ಕಪ್ಪು ಬಣ್ಣ ಹೊಡೆಯಲಾಗಿದೆ. ಕ್ಯಾಬಿನ್ ಒಳಗೆ ನೀಲಿ ಮತ್ತು ಬಿಳಿ ಬಣ್ಣ ಇರುತ್ತದೆ. ಹೀಗೆ ಕೇರಳ, ತಮಿಳುನಾಡು, ಗೋವಾ ಮತ್ತು ಮಹಾರಾಷ್ಟ್ರದ ಬೋಟುಗಳಿಗೂ ಪ್ರತ್ಯೇಕ ಬಣ್ಣ ಇರುತ್ತದೆ.
ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳುವ ಬೋಟಿನಲ್ಲಿ ತಲಾ 500 ಲೀಟರ್‌ನ ಎರಡು ಡೀಸೆಲ್ ಟ್ಯಾಂಕ್ ಇರುತ್ತದೆ. ಒಂದು ಬೋಟಿನಲ್ಲಿ ಕನಿಷ್ಠ 800 ಲೀಟರ್ ಡೀಸೆಲ್ ಮೀನುಗಾರಿಕೆಗೆ ತೆರಳುವ ಮುನ್ನ ಭರ್ತಿ ಮಾಡಲಾಗುತ್ತದೆ. ಇದರ ಜತೆಗೆ ಹತ್ತು ದಿನಕ್ಕೆ ಬೇಕಾಗುವಷ್ಟು ಆಹಾರ ಸಾಮಗ್ರಿಗಳನ್ನು ಕೊಂಡೊಯ್ಯುತ್ತಾರೆ. ಊಟ, ತಿಂಡಿ, ನಿತ್ಯಕರ್ಮ ಎಲ್ಲವಕ್ಕೂ ಒಳಗೇ ವ್ಯವಸ್ಥೆ ಇರುತ್ತದೆ. ಅಷ್ಟು ದಿನ ಇಡೀ ಬೋಟು ಅವರ ಪ್ರಪಂಚ. ಅದನ್ನು ಬಿಟ್ಟರೆ ಬರೀ ನೀರು. ಬೋಟಿನ ಎಂಜಿನ್ ಸಹಿತವಾಗಿ ಏನೇ ಸಮಸ್ಯೆಯಾದರೂ ತಕ್ಷಣವೇ ಕಂಪೆನಿ ಬೋಟಿಗೆ ಮಾಹಿತಿ ನೀಡುತ್ತಾರೆ ಅಥವಾ ಸಮೀಪದ ಬಂದರಿಗೆ ಹೋಗಿ ಸಮಸ್ಯೆ ಸರಿಪಡಿಸಿಕೊಳ್ಳುತ್ತಾರೆ (ಮೀನು ಖಾಲಿ ಮಾಡಲು ಹೊರರಾಜ್ಯದ ಬಂದರಿನಲ್ಲಿ ಅವಕಾಶ ಇಲ್ಲ) ಅಥವಾ ಕಂಪೆನಿ ಬೋಟುಗಳ ಸಹಾಯದಿಂದ ತವರು ಬಂದರಿಗೆ ಬರುತ್ತಾರೆ. ಈ ಸಂದರ್ಭದಲ್ಲಿ ವೈರ್‌ಲೆಸ್ ಕಾರ್ಯನಿರ್ವಹಿಸುತ್ತಿರುತ್ತದೆ. ಎಂಜಿನ್ ರೂಂನಲ್ಲಿರುವ ಬೆಲ್ಟ್ ತುಂಡಾದಾಗ ಮಾತ್ರ ಬೋಟಿನ ವೈರ್‌ಲೆಸ್ ಸಹಿತವಾಗಿ ಬೆಳಕಿನ ಸಂಪರ್ಕವೂ ಕಡಿದು ಹೋಗುತ್ತದೆ.
ಮಲ್ಪೆಯ ಸುವರ್ಣ ತ್ರಿಭುಜ ಬೋಟು ಕೂಡ ಕಂಪೆನಿ ಬೋಟಿನೊಂದಿಗೆ ಆಳ ಸಮುದ್ರಕ್ಕೆ ತೆರಳಿತ್ತು. ಕಂಪೆನಿ ಬೋಟ್‌ಗಳಿಗೆ ಸುವರ್ಣ ತ್ರಿಭುಜ ಬೋಟಿನ ಸಂಪರ್ಕ ಸಿಗದೇ ಇದ್ದಾಗ ಮಲ್ಪೆಗೆ ಮಾಹಿತಿ ನೀಡಿದ್ದರು ಮತ್ತು ನಾಲ್ಕು ತಂಡ ಮಾಡಿಕೊಂಡು ತಾವಾಗಿಯೇ ಮೂರ್‍ನಾಲ್ಕು ದಿನ ಮಲ್ಪೆ ಬೋಟು ಆಳ ಸಮುದ್ರದಲ್ಲಿ ಮೀನುಗಾರಿಕೆ ಮಾಡುವ ಪ್ರದೇಶದಲ್ಲಿ ನಿರಂತರ ಹುಡುಕಾಟ ನಡೆಸಿದ್ದರು. ಸ್ವಲ್ಪವೂ ಕುರುಹು ಸಿಕ್ಕಿರಲಿಲ್ಲ. ಬೋಟು ಕಾಣೆಯಾಗಿರುವ ಬಗ್ಗೆ ಪೊಲೀಸ್ ದೂರು ದಾಖಲಾಗಿದ್ದರೂ, ಸ್ಥಳೀಯಾಡಳಿತಗಳು ಆರಂಭದಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಿಯೇ ಇರಲಿಲ್ಲ.
ಕರಾವಳಿ ಭಾಗದ ಮೀನುಗಾರರ ಒತ್ತಡ ಹೆಚ್ಚಾಗುತ್ತಿದ್ದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಶೋಧಕಾರ್ಯ ಚುರುಕುಗೊಳಿಸಿವೆ. ಈಗ ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಪತ್ತೆ ಕಾರ್ಯ ನಡೆಸುತ್ತಿವೆ. ಅತ್ಯಾಧುನಿಕ ತಂತ್ರಜ್ಞಾನ ಸರ್ಕಾರದ ಬಳಿ ಇದ್ದರೂ, ಬೋಟು ಪತ್ತೆ ಮಾಡುವುದು ಕಗ್ಗಂಟಾಗಿ ಉಳಿದಿದೆ. ಎಲ್ಲಿಗೆ ಹೋಗಿದೆ ಎಂಬುದೇ ನಿಗೂಢವಾಗಿದೆ. ಮೀನುಗಾರರ ಕುಟುಂಬಗಳು ನೋವಿನಲ್ಲಿ ಕಂಗಾಲಾಗಿವೆ. ಎಲ್ಲದಕ್ಕೂ ಸರ್ಕಾರಗಳೇ ಉತ್ತರ ನೀಡಬೇಕಿದೆ.
– ರಾಜು ಖಾರ್ವಿ ಕೊಡೇರಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.