ನಿರ್ಭಯಾ ಪ್ರಕರಣ: ಹೋರಾಟದ ದನಿ ಸತತ ಕೇಳಿಸಬೇಕು
Team Udayavani, Mar 21, 2020, 7:00 AM IST
ಈ ಪ್ರಕರಣದಲ್ಲಿ ಕೇವಲ ಮೂರೇ ವರ್ಷ ಶಿಕ್ಷೆ ಅನುಭವಿಸಿ ಬಿಡುಗಡೆ ಹೊಂದಿದ ಬಾಲಾಪರಾಧಿಯ ವಿಚಾರಕ್ಕೆ ಬರುವುದಾದರೆ ಆತ ಅಂಥದ್ದೊಂದು ಭೀಕರ ಅಪರಾಧ ಮಾಡಿದಾಗ ಆತನ ವಯಸ್ಸು ಹದಿನೇಳುವರೆ ವರ್ಷ ಮತ್ತು ಅದೊಂದೇ ಕಾರಣಕ್ಕೆ ಆತ ಮಾಡಿದ ಅಪರಾಧಕ್ಕೆ ನಮ್ಮ ಕಾನೂನಿನಲ್ಲಿ ಭಾರೀ ವಿನಾಯಿತಿ ಸಿಕ್ಕಿಬಿಟ್ಟಿತ್ತು.
ನಿರ್ಭಯಾಳಿಗೆ ಕೊನೆಗಾದರೂ ನ್ಯಾಯ ಸಿಕ್ಕಿದೆಯೇ? ಈ ಪ್ರಶ್ನೆ ಜನರನ್ನು ಕಾಡುತ್ತಿದೆ, ಉತ್ತರ ಮಾತ್ರ ಸ್ಪಷ್ಟವಾಗುತ್ತಿಲ್ಲ. 2012,ಡಿ.16ರ ರಾತ್ರಿಯಂದು ದಿಲ್ಲಿಯಲ್ಲಿ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿಯ ಮೇಲೆ ಪಾಶವಿ ರೀತಿಯಲ್ಲಿ ಅತ್ಯಾಚಾರ ನಡೆಸಿ ಆಕೆಯ ಕ್ರೂರ ಸಾವಿಗೆ ಕಾರಣರಾದ ನಾಲ್ವರು ಆರೋಪಿಗಳು ಏಳು ವರ್ಷಗಳ ಬಳಿಕ ಅಂತೂ ಇಂತೂ ನೇಣುಗಂಬಕ್ಕೇರಿದ್ದಾರೆ. ಇನ್ನೊಬ್ಬ ಅಪರಾಧಿ 2013ರಲ್ಲಿ ಜೈಲಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದ. ಅಷ್ಟರ ಮಟ್ಟಿಗೆ ನಿರ್ಭಯಾಳಿಗೆ ನ್ಯಾಯ ಸಿಕ್ಕಿತು ಎಂದು ಖಂಡಿತಾ ಭಾವಿಸಬಹುದು. ಈ ನಿಟ್ಟಿನಲ್ಲಿ ನಿರ್ಭಯಾ ಕುಟುಂಬದ ಪರವಾಗಿ ನಿಂತು ವಾದಿಸಿದ್ದ ವಕೀಲೆ ಸೀಮಾ ಕುಶ್ವಾಹ ನಿಜಕ್ಕೂ ಅಭಿನಂದನಾರ್ಹರು.
ಆದರೆ ಇದೇ ಪ್ರಕರಣದಲ್ಲಿ ಪಾಲ್ಗೊಂಡಿದ್ದ ಪ್ರಮುಖ ಅಪರಾಧಿಯೊಬ್ಬನಿಗೆ ಬಾಲ ನ್ಯಾಯ ಮಂಡಳಿ ಕೇವಲ ಮೂರು ವರ್ಷದ ಜೈಲು ಶಿಕ್ಷೆಯನ್ನು ನೀಡಿ ಕೈತೊಳೆದುಕೊಂಡಿದ್ದನ್ನು ಮರೆಯಲಾದೀತೆ? ಆತ 2015ರಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದ. ಅದಕ್ಕಿಂತ ಹೆಚ್ಚಾಗಿ ಎ.ಪಿ.ಸಿಂಗ್ ಎನ್ನುವ ಮನುಷ್ಯತ್ವವೇ ಮರೆತಂತಿದ್ದ ವಕೀಲರೊಬ್ಬರು ಈ ನಾಲ್ಕು ಅಪರಾಧಿಗಳನ್ನು ರಕ್ಷಿಸುವುದಕ್ಕಾಗಿ ನಿರಂತರ ಪ್ರಯತ್ನಪಡುತ್ತಿದ್ದ ರೀತಿ ಇಡೀ ವಕೀಲ ಸಮುದಾಯವನ್ನೇ ಅವಮಾನಿಸುವಂತಿತ್ತು. ಆತ ತನ್ನನ್ನು ಸಮರ್ಥಿಸಿಕೊಳ್ಳುತ್ತಿದ್ದ ರೀತಿಯೂ ರೇಜಿಗೆ ಹುಟ್ಟಿಸುವಂತಿತ್ತು. ಖಚಿತ ಸಾಕ್ಷಿಗಳು ದೊರೆತಿ ದ್ದಾಗಿಯೂ ಅಪರಾಧಿಗಳನ್ನು ಗಲ್ಲಿಗೇರಿಸಲು ಬರೋಬ್ಬರಿ ಏಳು ವರುಷಗಳ ತನಕ ಕಾಯಬೇಕಾಯಿತು ಎನ್ನುವ ವಿಚಾರ ನಿಜಕ್ಕೂ ನಮ್ಮ ಒಟ್ಟಾರೆ ಕಾನೂನು ವ್ಯವಸ್ಥೆಯ ಬಗೆಗೆ ಜನಸಮಾನ್ಯರಲ್ಲಿ ಒಂದು ತೀರಾ ಬೇಸರ, ಅಸಡ್ಡೆ, ಜಿಜ್ಞಾಸೆಯನ್ನು ಹುಟ್ಟುಹಾಕಿರುವುದಂತೂ ಸತ್ಯ.
ಈ ಪ್ರಕರಣದಲ್ಲಿ ಕೇವಲ ಮೂರೇ ವರ್ಷ ಶಿಕ್ಷೆ ಅನುಭವಿಸಿ ಬಿಡುಗಡೆ ಹೊಂದಿದ ಬಾಲಾಪರಾಧಿಯ ವಿಚಾರಕ್ಕೆ ಬರುವುದಾದರೆ ಆತ ಅಂಥದ್ದೊಂದು ಭೀಕರ ಅಪರಾಧ ಮಾಡಿದಾಗ ಆತನ ವಯಸ್ಸು ಹದಿನೇಳುವರೆ ವರ್ಷ ಮತ್ತು ಅದೊಂದೇ ಕಾರಣಕ್ಕೆ ಆತ ಮಾಡಿದ ಅಪರಾಧಕ್ಕೆ ನಮ್ಮ ಕಾನೂನಿನಲ್ಲಿ ಭಾರೀ ವಿನಾಯತಿ ಸಿಕ್ಕಿಬಿಟ್ಟಿತ್ತು. ವಾಸ್ತವವಾಗಿ ಆತ ಆಕೆಯನ್ನು ಎರಡೆರಡು ಬಾರಿ ಅತ್ಯಾಚಾರ ಮಾಡಿದ್ದ.ಅಷ್ಟೇ ಅಲ್ಲ, ಆಕೆಯ ಹೊಟ್ಟೆಯೊಳಕ್ಕೆ ಕಬ್ಬಿಣದ ಸಲಾಕೆಯನ್ನು ತುರುಕಿ ತಿರುಚಿ ತಿರುಚಿ ಆಕೆಯ ಕರುಳನ್ನು ತೀವ್ರವಾಗಿ ಘಾಸಿಗೊಳಿಸಿ ಆಕೆಯನ್ನು ಆವತ್ತೇ ಜೀವಂತ ಶವ ಮಾಡಿದ್ದ.
ಅತ್ಯಾಚಾರ ಮಾಡಿದ್ದಷ್ಟೇ ಅಲ್ಲದೇ ಆ ಬಳಿಕ ವಿಕೃತವಾಗಿ ವರ್ತಿಸಿ ಹಲ್ಲೆ ನಡೆಸಿ ಪಾಶವೀ ಕೃತ್ಯ ಮೆರೆದವನಿಗೆ ನಮ್ಮ ಕಾನೂನು ಇಷ್ಟು ಸಣ್ಣ ಪ್ರಮಾಣದ ಶಿಕ್ಷೆ ನೀಡುತ್ತದೆ ಎಂದರೆ. ಅಷ್ಟಕ್ಕೂ ಆತ ಬಾಲಕನೇ? ಬಾಲ್ಯತನದ ಮುಗ್ಧತೆಯೇ ಇಲ್ಲದವ ಬಾಲಕ ಹೇಗಾಗಬಲ್ಲ?ಒಬ್ಬ ವ್ಯಕ್ತಿಯ ಅಪರಾಧಕ್ಕೆ ಶಿಕ್ಷೆ ಆತನ ವಯಸ್ಸಿನ ನೆಲೆಯಲ್ಲಿ ನಿರ್ಧಾರವಾಗುವುದಾದರೆ ಅಂತಹ ಕಾನೂನಿಗೆ ಏನಾದರೂ ಅರ್ಥ ಇದೆ ಅಂಥ ಅನ್ನಿಸುತ್ತಾ?
ಈ ಬಾಲಾಪರಾಧಿ ಎನ್ನಿಸಿಕೊಂಡವ ಮಾಡಿದ್ದು ಅತ್ಯಂತ ಅಮಾನುಷವಾದ ಹಲ್ಲೆ ಸಹಿತದ ಅತ್ಯಾಚಾರ. ತೋರಿಸಿದ್ದು ವಿಕೃತಿಯ ಪರಮಾವಧಿ. ಅದಕ್ಕೆಲ್ಲಾ ಆತನ ಬಾಲ್ಯ ಅಡ್ಡಿ ಬಂದಿರಲಿಲ್ಲ ಎಂದಾದಲ್ಲಿ ಕಠಿಣ ಶಿಕ್ಷೆ ಕೊಡುವುದರಲ್ಲಿ ಅರ್ಥವಿದ್ದಿತ್ತಲ್ಲವೆ?ಆತ ಆವತ್ತು ಸಿಕ್ಕಿಬಿದ್ದಾಗ ಎಷ್ಟಾದರೂ ಆತ ಚಿಕ್ಕವನು ಬಾಲಕ. ಯಾವುದೋ ಅನಾಗರಿಕ ಹಿನ್ನಲೆಯಲ್ಲಿ ಬೆಳೆದುಬಂದವನು. ಅದಕ್ಕೆ ಹೀಗಾಗಿದೆ. ಒಂದಿಷ್ಟು ವರ್ಷ ಜೈಲಿನಲ್ಲಿಟ್ಟು ಕೌನ್ಸೆಲಿಂಗ್ ಮಾಡಿದರೆ ಸರಿಹೋಗುತ್ತಾನೆ. ಅವನ ಭವಿಷ್ಯ ಹಾಳು ಮಾಡುವುದು ಸರಿಯಲ್ಲ ಎಂದೆಲ್ಲಾ ತೀರಾ ಸಭ್ಯರ ಶೈಲಿಯಲ್ಲಿ ಮಾತನಾಡಿದವರಿದ್ದರು. ನಮ್ಮ ಕಾನೂನೂ ಅದನ್ನೇ ಹೇಳುವಂತಿತ್ತು. ಆದರೆ ಹೀಗೆಲ್ಲಾ ಮಾತನಾಡುವ ಮೊದಲು ಇಂಥದ್ದೊಂದು ಘಟನೆ ತೀರಾ ನಮ್ಮ ಆತ್ಮೀಯರಲ್ಲೇ ನಡೆದುಹೋಗಿದ್ದರೆ ನಮ್ಮ ಪ್ರತಿಕ್ರಿಯೆ ಹೀಗೆ ಇರುತಿತ್ತಾ? ಸತತ ಏಳು ವರುಷಗಳ ಕಾಲ ನಿರ್ಭಯಾಳ ತಂದೆ ತಾಯಿ ಅದೆಷ್ಟು ಸಂಕಟ ನೋವುಗಳಿಂದ ತೊಳಲಾಡಿರಬೇಡ. ತಾವು ಮಾಡುವ ಅಮಾನುಷ ಕೃತ್ಯದಂತಹ ತಪ್ಪುಗಳಿಗೂ ನಮ್ಮ ಕಾನೂನು ತೀವ್ರತೆರನಾದ ಶಿಕ್ಷೆಯನ್ನೇನೂ ಕೊಡುವುದಿಲ್ಲ. ಆಕಸ್ಮಾತ್ ಶಿಕ್ಷೆ ಅಂತ ಕೊಟ್ಟರೂ ಬಾಲಾಪರಾಧಿ ಅನ್ನೋ ನೆಲೆಯಲ್ಲಿ ಅದರ ಪ್ರಮಾಣ ತೀರಾ ಕಡಿಮೆ ಇರುತ್ತದೆ ಅಂತ ಹದಿಹರೆಯದ ಮನಸ್ಸುಗಳಿಗೆ ಒಮ್ಮೆ ಖಚಿತವಾಗಿಬಿಟ್ಟರೆ ಅಷ್ಟೇ ಸಾಕು ಪ್ರೇರೇಪಣೆಗೊಳ್ಳಲಿಕ್ಕೆ. ಆಗ ಯಾರನ್ನು ದೂಷಿಸೋಣ? 2016ರಲ್ಲಿ ಹೊಸ ಬಾಲಾಪರಾಧ ಕಾನೂನು ಜಾರಿಗೆ ಬಂದಿದ್ದು ಅತ್ಯಾಚಾರ ಕೊಲೆಯಂತಹ ಘೋರ ಕೃತ್ಯಗಳಿಗೆ ಸಂಬಂಧಿಸಿದಂತೆ 16 ರಿಂದ 18 ವರುಷಗಳ ಆರೋಪಿಗಳನ್ನು ವಯಸ್ಕರಂತೆಯೇ ವಿಚಾರಣೆ ಮಾಡಲಾಗುತ್ತದೆ ಎನ್ನುವುದು ಸ್ವಲ್ಪಮಟ್ಟಿಗೆ ಸಂತೋಷ ತಂದಿದೆ.
ಅತ್ಯಾಚಾರ ಮಾಡಿದವರಿಗೆ ಗಲ್ಲು ಶತಃಸಿದ್ಧ ಅಂತ ಒಂದು ಕಾನೂನು ತರಬಾರದೇಕೆ? ಅಂತಹ ಕಾನೂನುಗಳು ಬಂದ ತಕ್ಷಣ ಅತ್ಯಾಚಾರ ನಿಂತು ಹೋಗುತ್ತದೆ ಎಂದಲ್ಲ. ಆದರೆ ಅತ್ಯಾಚಾರ ಪ್ರಕರಣಗಳಲ್ಲಿ ಗಮನಾರ್ಹ ಇಳಿಕೆಯಾಗಬಹುದು. ಇವತ್ತಿನ ದಿನ ಒಬ್ಬನಿಗೆ ನೀಡುವ ಶಿಕ್ಷೆಯಿಂದ ಮುಂದಿನ ದಿನಗಳಲ್ಲಿ ಘಟಿಸುವ ಅಪರಾಧಗಳು ಕಡಿಮೆಯಾಗುತ್ತವೆ ಅಂತ ಖಾತ್ರಿ ಇರುವಾಗ ಅಂತಹ ಶಿಕ್ಷೆ ನೀಡಲಿಕ್ಕೆ ಏನಡ್ಡಿ? ಎಲ್ಲವನ್ನೂ ಬಾಲಾಪರಾಧದ ನೆಲೆಯಲ್ಲಿ ನೋಡುವುದು ಎಷ್ಟು ಸಮಂಜಸ? ಶಿಕ್ಷೆ ಆಗೋದು ಮಾತ್ರ ಮುಖ್ಯ ಅಲ್ಲ. ಅದು ಎಷ್ಟು ಶೀಘ್ರವಾಗಿ ಆಗುತ್ತದೆ ಅನ್ನೋದು ಕೂಡ ಅಷ್ಟೇ ಮುಖ್ಯ.
ಅತ್ಯಾಚಾರ ಪ್ರಕರಣಗಳು ನಡೆದದ್ದು ಇದೇ ಮೊದಲಲ್ಲ ಮತ್ತು ಕೊನೆಯೂ ಅಲ್ಲ. ಆಗೊಮ್ಮೆ ಈಗೊಮ್ಮೆ ನಾವು ನಿರ್ಭಯಾ ರೀತಿಯ ಪ್ರತಿಭಟನೆಗಳನ್ನು ನಡೆಸಿದ್ದೇವೆ. ಗಲಾಟೆ ಮಾಡಿದ್ದೇವೆ. ನ್ಯಾಯಾಂಗ ವ್ಯವಸ್ಥೆಯ ಬದಲಾವಣೆಗೆ ಅಗ್ರಹಿಸಿದ್ದೇವೆ.ಅದರೆ ಫಲಿತಾಂಶ? ಪ್ರತೀ ಬಾರಿ ಕೂಡ ರಾಜಕೀಯ ನುಸುಳುತ್ತದೆ. ಒಂದಿಷ್ಟು ಮಾತಿನ ಪಟಾಕಿ ಸದ್ದು ಮಾಡುತ್ತದೆ. ಆಡಳಿತಾಧಿಕಾರಿಗಳ ನಿದ್ದೆ ಮುಂದುವರೆಯುತ್ತದೆ. ಒಂದಿಷ್ಟು ಕ್ಷಿಪ್ರಗತಿ ನ್ಯಾಯಾಲಯಗಳನ್ನು ಸ್ಥಾಪನೆ ಮಾಡಿದ ಮಾತ್ರಕ್ಕೆ ಸಮಸ್ಯೆಗಳು ಪರಿಹಾರವಾಗಿಬಿಡಲಾರದು. ಆರೋಪಿಗಳು ತಮ್ಮ ಅಪರಾಧಗಳನ್ನು ಒಪ್ಪಿಕೊಂಡ ಬಳಿಕವೂ ಅವರಿಗೆ ಕೊಡುವ ಶಿಕ್ಷೆಯನ್ನು ನಿರ್ಧರಿಸಲು ನಮ್ಮ ನ್ಯಾಯಾಂಗ ವ್ಯವಸ್ಥೆ ವರ್ಷಗಳನ್ನು ತೆಗೆದುಕೊಳ್ಳಲು ಕಾರಣವಾಗಿರುವಂಥದ್ದು ನಮ್ಮ ಕಾನೂನು ವ್ಯವಸ್ಥೆಯ ಲೋಪ ಎನ್ನುವುದರಲ್ಲಿ ಅನುಮಾನವಿಲ್ಲ.
ದಿಲ್ಲಿ ವಿಷಯದಲ್ಲಿ ಒಂದು ಹಂತಕ್ಕೆ ನ್ಯಾಯ ಲಭಿಸಿದೆ. ಆದರೆ ಸಹಸ್ರಾರು ಅತ್ಯಾಚಾರ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ನಿಜವಾದ ಅರ್ಥದಲ್ಲಿ ನ್ಯಾಯ ಸಿಗುವುದು ಯಾವಾಗ? ನಿಜಕ್ಕೂ ನಮ್ಮ ಕಾನೂನಿನಲ್ಲಿ ಆಗಬೇಕಾದ ಬದಲಾವಣೆಗಳೇನು?ಯಾವೆಲ್ಲಾ ಪ್ರಯತ್ನಗಳಿಂದ ನಮ್ಮ ನ್ಯಾಯಾಂಗ ವ್ಯವಸ್ಥೆಯನ್ನು ಸುಧಾರಿಸಬಹುದು? ಎನ್ನುವುದರ ಕುರಿತಂತೆ ಒಂದು ವಿಶೇಷ ಅಧಿವೇಶನವನ್ನು ಕರೆದು ಚರ್ಚೆ ನಡೆಸಿ ವಿಶೇಷ ಕಾನೂನು ಕಾಯಿದೆಗಳನ್ನು ಜಾರಿಗೆ ತರುವ ಕೆಲಸ ಯಾವಾಗಲೋ ಆಗಿಹೋಗಬೇಕಿತ್ತು. ಇನ್ನಾದರೂ ಈ ನಿಟ್ಟಿನಲ್ಲಿ ಹೊಸ ಕಾನೂನೂ ರೂಪಿಸುವ ಕೆಲಸ ಶೀಘ್ರವಾಗಿ ಆಗಲಿ ಎನ್ನುವುದು ಆಶಯ.
ಇಂತಹ ವಿಚಾರಗಳಲ್ಲಿ ನಮ್ಮ ಹೋರಾಟದ ದನಿ ಸತತವಾಗಿ ಕೇಳಿಸಬೇಕಿದೆ. ಇಲ್ಲವಾದಲ್ಲಿ ಅತ್ಯಾಚಾರಕ್ಕೀಡಾದ ಹೆಣ್ಣುಮಕ್ಕಳ ನೆನಪುಗಳ ಸಾಲು ಮುಂದುವರೆಯುತ್ತದೆ ಅಷ್ಟೆ. ನಮ್ಮ ಕಾನೂನು ನಮ್ಮ ಅಸಹಾಯಕತೆಯನ್ನೆ ಅಣಕಿಸಿ ನಗುತ್ತಿರುವಂತೆ ಅನ್ನಿಸುತ್ತಿದೆ.
– ನರೇಂದ್ರ ಎಸ್. ಗಂಗೊಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್ ನೇಮಕ: ಚಿನ್ನದ ಪದಕ ವಿಜೇತ VN ಪರಿಚಯ…
Sandalwood: ಸ್ಪಾನ್ಸರ್ಸ್ ಇದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್ ಬಗ್ಗೆ ರಮ್ಯಾ ಮಾತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.