ಅಭಿಮತ: ಮೋದಿಗೆ ಧನ್ಯವಾದ ಹೇಳಬೇಕು ನಿತೀಶ್!
Team Udayavani, Nov 12, 2020, 6:32 AM IST
ರಾಜಕೀಯ ನಿವೃತ್ತಿಗೂ ಮುನ್ನ ಸತತ ನಾಲ್ಕನೇ ಬಾರಿ ಬಿಹಾರದ ಮುಖ್ಯಮಂತ್ರಿಯಾಗಬೇಕು ಎಂಬ ನಿತೀಶ್ ಕುಮಾರ್‌ರ ಆಸೆ ಈಡೇರಿದೆ. ಆದರೆ
ಇದಕ್ಕಾಗಿ ನಿತೀಶ್ ಕುಮಾರ್ ನರೇಂದ್ರ ಮೋದಿಯವರಿಗೆ ಕೃತಜ್ಞತೆ ಅರ್ಪಿಸಬೇಕು.
ಬಿಹಾರ ಚುನಾವಣೆಯಲ್ಲಿ ತೀವ್ರ ಹಣಾಹಣಿಯ ನಡುವೆ ಎನ್‌ಡಿಎ ಸಾಧಿಸಿದ ಗೆಲುವಿನ ಶ್ರೇಯಸ್ಸು ಮೋದಿಯವರಿಗೆ ಸಲ್ಲಬೇಕು. ಏಕೆಂದರೆ ಮೋದಿ ನಿತೀಶ್ ಕುಮಾರ್ ವಿರುದ್ಧ ಸೃಷ್ಟಿಯಾಗಿದ್ದ ಅಧಿಕಾರ ವಿರೋಧಿ ಅಲೆಯನ್ನು ತಡೆದರು. ಅಲ್ಲದೇ ಸಾಂಕ್ರಾಮಿಕದ ಕಾರಣ ಸೃಷ್ಟಿಯಾಗಿದ್ದ ವಲಸಿಗರ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ನಿತೀಶ್‌ರ ವೈಫಲ್ಯದ ಬಗ್ಗೆ ಜನರಲ್ಲಿದ್ದ ಸಿಟ್ಟನ್ನೂ ಅವರು ಶಮನಗೊಳಿಸಿದರು.
ಉದ್ಯೋಗ ಸೃಷ್ಟಿಯಲ್ಲಿ ನಿತೀಶ್ ಕುಮಾರ್‌ರ ವೈಫಲ್ಯ, 2015-2020ರ ನಡುವಿನ ಅವರ ನೀರಸ ಆಡಳಿತ ಮತ್ತು ಭ್ರಷ್ಟರೆಂದು ಭಾವಿಸಲಾಗುವ ಅಧಿಕಾರಶಾಹಿಯ ಮೇಲಿನ ಅತಿಯಾದ ಅವಲಂಬನೆಯಿಂದಾಗಿ ನಿತೀಶ್‌ರ ಆಡಳಿತದ ವಿರುದ್ಧ ಜನರಲ್ಲಿ ಆಕ್ರೋಶ ಸೃಷ್ಟಿಯಾಗಿತ್ತು. ಒಂದು ಕಾಲದಲ್ಲಿ “ಸುಶಾಸನ್ ಬಾಬು’ ಎಂದು ಗುರುತಿಸಿಕೊಂಡಿದ್ದ ನಿತೀಶ್ ಈಗ ತಮ್ಮ ಹೊಳಪನ್ನು ಕಳೆದುಕೊಂಡಿದ್ದಾರೆ.
ಆದಾಗ್ಯೂ, 2005 ಮತ್ತು 2015ರ ನಡುವಿನ ಅವರ ಆಡಳಿತದಲ್ಲಿ ಬಿಹಾರ ಬಹಳ ಅಭಿವೃದ್ಧಿಗೆ ಸಾಕ್ಷಿಯಾಯಿತು ಎನ್ನುವುದು ನಿರ್ವಿವಾದವಾದರೂ, ಅವರ ಮೂರನೇ ಅವಧಿಯಲ್ಲಿ ಅಭಿವೃದ್ಧಿಯ ವೇಗವು ಗಮನಾರ್ಹವಾಗಿ ಕುಸಿದಿತ್ತು. ಮೊದಲೆರಡು ಅವಧಿಯಲ್ಲಿ ನಿತೀಶ್ ಮಾಡಿದ ಅಭಿವೃದ್ಧಿ(ರಾಜ್ಯದ ಭೌತಿಕ, ಸಾಮಾಜಿಕ ಮೂಲಸೌಕರ್ಯಗಳಲ್ಲಿ) ಯುವ ಜನಾಂಗದ ಆಕಾಂಕ್ಷೆಗಳನ್ನು ಹೆಚ್ಚಿಸಿಬಿಟ್ಟಿತು. ಆದರೆ ಮುಂದೆ ಈ ಆಕಾಂಕ್ಷೆಗಳನ್ನು ತಲುಪಲು ನಿತೀಶ್ ವಿಫಲರಾಗಿ ಜನರಲ್ಲಿ ನಿರಾಸೆ ಮೂಡಿಸಿದರು. ಸಾಂಕ್ರಾಮಿಕದ ಕಾರಣಕ್ಕೆ ವಿವಿಧ ರಾಜ್ಯಗಳಿಂದ ಹಿಂದಿರುಗಿದ ಲಕ್ಷಾಂತರ ವಲಸಿಗ ಕಾರ್ಮಿಕರಿಗೂ ನಿತೀಶ್ ಸಹಾಯ ಮಾಡಲಿಲ್ಲ ಎಂಬ ಭಾವನೆ ಇದೆ. ವಲಸಿಗ ಕಾರ್ಮಿಕರಿಗೆ ಕೇಂದ್ರೀಯ ಕಾರ್ಯಕ್ರಮಗಳಿಂದ ಹೆಚ್ಚಿನ ಸಹಾಯ ದೊರೆತಿದೆ ಎನ್ನಲಾಗುತ್ತದೆ.
ಇನ್ನೊಂದೆಡೆ ಆರ್‌ಜೆಡಿಯ ತೇಜಸ್ವಿ ಯಾದವ್, ನಿತೀಶರ ಈ ವೈಫಲ್ಯಗಳನ್ನು ಜನರೆದುರು ತೆರೆದಿಟ್ಟು, ಚಡಪಡಿಕೆಯಲ್ಲಿದ್ದ ಬಿಹಾರಿಗಳಿಗೆ (ಮುಖ್ಯವಾಗಿ ಯುವ ಜನಾಂಗಕ್ಕೆ) ಈ ಸಂಗತಿ ಹೃದಯಕ್ಕೆ ತಾಕಿತು. ಇನ್ನು ತಾವು ಅಧಿಕಾರಕ್ಕೆ ಬಂದರೆ 10 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತೇನೆ ಎಂಬ ತೇಜಸ್ವಿ ಭರವಸೆಯೂ ಯುವಕರಲ್ಲಿ ಹುರುಪು ತುಂಬಿತು. ಈ ಕಾರಣಕ್ಕಾಗಿಯೇ, ತೇಜಸ್ವಿ ಯಾದವ್ ರ್ಯಾಲಿಗಳಲ್ಲಿ ಬೃಹತ್ ಸಂಖ್ಯೆಯಲ್ಲಿ ಜನ ನೆರೆಯಲಾರಂಭಿಸಿದರು. ಇದಕ್ಕೆ ಹೋಲಿಸಿದರೆ ನಿತೀಶ್‌ರ ಪ್ರಚಾರ ನೀರಸವಾಗಿತ್ತು. ಅನೇಕ ಕಡೆಗಳಲ್ಲಿ ಅವರು ತಮ್ಮ ರ್ಯಾಲಿಗಳಿಗೆ ತಕ್ಕಮಟ್ಟಿಗೆ ಜನರನ್ನು ಸೆಳೆಯಲೂ ವಿಫಲರಾದರು, ಅವರ ಪ್ರಚಾರಗಳ ಕಾವು ವೇಗವಾಗಿ
ತಗ್ಗುತ್ತಿರುವುದು ಗೋಚರಿಸಿತು.
ಮೊದಲ ಹಂತದ ಮತದಾನಕ್ಕೂ ಒಂದು ವಾರ ಮುನ್ನ ತೇಜಸ್ವಿ ಯಾದವ್ ನಿತೀಶರಿಗೆ ಪ್ರಬಲ ಪೈಪೋಟಿ ಎದುರೊಡ್ಡಲಿದ್ದಾರೆ ಎನ್ನುವುದು ಸ್ಪಷ್ಟವಾಯಿತು. ನಿರೀಕ್ಷೆಯಂತೆಯೇ, ಮಹಾಘಟಬಂಧನ್ ಮೊದಲ ಹಂತದಲ್ಲಿ ಉತ್ತಮ ಪ್ರದರ್ಶನ ತೋರಿಸಿತು. ಫಲಿತಾಂಶಗಳ ಅವಲೋಕನ ಮಾಡಿ ನೋಡಿದರೆ, ಆ ಹಂತದಲ್ಲಿ ಮಹಾಘಟಬಂಧನ್ ಮತ ಗಳಿಕೆ ಪ್ರಮಾಣ 67.6 ಪ್ರತಿಶತದಷ್ಟಿದ್ದರೆ, ಎನ್‌ಡಿಎ 29.6 ಪ್ರತಿಶತವಷ್ಟೇ ಪಡೆದಿತ್ತು.
ಮೊದಲನೇ ಹಂತದಲ್ಲಿ ಮಹಾಘಟಬಂಧನ್ ಭರ್ಜರಿ ಪ್ರದರ್ಶನ ತೋರಿದೆ ಎನ್ನುವ ಎಚ್ಚರಿಕೆಯ ಗ್ರೌಂಡ್ ರಿಪೋರ್ಟ್‌ಗಳು ಬರುತ್ತಿದ್ದಂತೆಯೇ, ಬಿಜೆಪಿ ಕೇಂದ್ರೀಯ ನಾಯಕತ್ವ ಹಾಗೂ ಮೋದಿ, ಎನ್‌ಡಿಎ ಪ್ರಚಾರಗಳಿಗೆ ಶಕ್ತಿ ತುಂಬಲು ನಿರ್ಧರಿಸಿದರು. ಮೋದಿ ತಮ್ಮ ಹೆಸರಾಂತ ವಾಗ್‌ವೈಖರಿ ಬಳಸಿ ಎನ್‌ಡಿಎ ಬೇರುಮಟ್ಟದ ಕೆಲಸಗಾರರಲ್ಲಿ ಹುರುಪು ತುಂಬಿದರು. ಅಷ್ಟೇ ಅಲ್ಲದೇ, ತೇಜಸ್ವಿ ವಿರುದ್ಧ ದಾಳಿಯನ್ನೂ ಹರಿತಗೊಳಿಸಿದರು. 1990ರಿಂದ 2005ರ ನಡುವೆ ಬಿಹಾರದಲ್ಲಿ ಆರ್‌ಜೆಡಿ ಆಡಳಿತದಲ್ಲಿ ಸೃಷ್ಟಿಯಾಗಿದ್ದ ಕರಾಳ ದಿನಗಳನ್ನು ಮತದಾರರಿಗೆ ನೆನಪುಮಾಡಿಕೊಟ್ಟರು. ಹೇಗೆ ಆರ್‌ಜೆಡಿಯ “ಜಂಗಲ್ ರಾಜ್’ನ ಅವಧಿಯು ಕೊಲೆ, ಸುಲಿಗೆ, ಅಪಹರಣ, ವ್ಯಾಪಕ ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣದಿಂದ ತುಂಬಿಹೋಗಿತ್ತು ಎಂದು ನೆನಪಿಸಿ, ನಿತೀಶ್ ವಿರುದ್ಧ ಸೃಷ್ಟಿಯಾಗಿದ್ದ ಅಧಿಕಾರ ವಿರೋಧಿ ಅಲೆಯಿಂದ ಜನರ ಗಮನ ಬೇರೆಡೆ ಸೆಳೆದರು.
ಮೋದಿ ತೇಜಸ್ವಿ ಯಾದವ್‌ರನ್ನು “ಜಂಗಲ್ ಕಾ ಯುವರಾಜ್’ ಎಂದು ಕರೆದು, ತೇಜಸ್ವಿಯವರ ತಂದೆ ಲಾಲೂರ ಸಮಯದಲ್ಲಿ ನಡೆದಿದ್ದ ವ್ಯಾಪಕ ಭ್ರಷ್ಟಾಚಾರವನ್ನು ಹೈಲೈಟ್ ಮಾಡಿದರು. ತೇಜಸ್ವಿ “ಆ ದಿನಗಳ’ ನೆನಪನ್ನು ಮರೆಮಾಚುವ ಸಲುವಾಗಿ, ಆರ್‌ಜೆಡಿಯ ಪ್ರಚಾರ ಪತ್ರಗಳಲ್ಲಿ ತಮ್ಮ ಪೋಷಕರ ಫೋಟೋಗಳನ್ನೂ ಹಾಕಲಿಲ್ಲ. ಆದರೆ ಮೋದಿ ಜಾಗರೂಕತೆಯಿಂದ ಸಿದ್ಧಪಡಿಸಿದ ಪ್ಲ್ರಾನ್ ಅನ್ನೇ ಅನುಷ್ಠಾನಕ್ಕೆ ತಂದು, ಪ್ರಚಾರದ ಕೇಂದ್ರ ವಿಷಯವನ್ನು “ಜಂಗಲ್ ರಾಜ್’ ಆಗಿ ಬದಲಿಸಿಬಿಟ್ಟರು.
ಇದೇ ವೇಳೆಯಲ್ಲೇ ಆರ್‌ಜೆಡಿಯ ಸಾಂಪ್ರದಾಯಿಕ ಮತಗಳಾದ ಮುಸ್ಲಿಂ-ಯಾದವ್(ಎಂವೈ)ಗೆ ವಿರುದ್ಧವಾಗಿ ಮೇಲ್ವರ್ಗಗಳು, ಯಾದವೇತರ ಇತರ ಹಿಂದುಳಿದ ವರ್ಗಗಳು, ಅತ್ಯಂತ ಹಿಂದುಳಿದ ವರ್ಗಗಳು ಮತ್ತು ಮಹಾದಲಿತ ವರ್ಗಗಳು ಒಂದಾಗಿಬಿಟ್ಟವು. ಈ ವರ್ಗಗಳೆಲ್ಲ ಈ ಹಿಂದೆ ಆರ್‌ಜೆಡಿಯ ದುರಾಡಳಿತದಿಂದ ಪೀಡಿನೆ ಅನುಭವಿಸಿದ್ದವು.
1990-2005ರ ನಡುವಿನ ಆರ್‌ಜೆಡಿ ಆಡಳಿತದಲ್ಲಿ ಕುಖ್ಯಾತ ಮಾಫಿಯಾ ಡಾನ್‌ಗಳು(ಹೆಚ್ಚಾಗಿ ಯಾದವರು ಮತ್ತು ಮುಸ್ಲಿಮರು) ಬೆಳೆದು ನಿಂತಿದ್ದರು. ಆರ್‌ಜೆಡಿ ಬೆಳೆಸಿತೆನ್ನಲಾದ ಈ ಡಾನ್‌ಗಳು ಮತ್ತು ಕ್ರಿಮಿನಲ್ ಗ್ಯಾಂಗ್‌ಗಳು ಬಿಹಾರಕ್ಕೆ ಆಳವಾದ ಗಾಯವನ್ನು ಮಾಡಿಬಿಟ್ಟವು. ಈ ಕಾರಣಕ್ಕಾಗಿಯೇ, ಆ ದಿನಗಳು ಮತ್ತೆ ಹಿಂದಿರುಗದಿರಲಿ ಎಂದು ಜನರು ಎನ್‌ಡಿಎನತ್ತ ವಾಲತೊಡಗಿದರು. 2ನೇ ಮತ್ತು 3ನೇ ಹಂತದ ಮತದಾನ ಫಲಿತಾಂಶವನ್ನು ಗಮನಿಸಿದಾಗ ಇದು ವೇದ್ಯವಾಗುತ್ತದೆ. ಈ ಹಂತದಲ್ಲಿ ಎನ್‌ಡಿಎ ಮತಗಳಿಕೆ 54.3ರಿಂದ 66.7 ಪ್ರತಿಶತಕ್ಕೆ ನಾಟಕೀಯ ರೀತಿಯಲ್ಲಿ ಜಿಗಿದರೆ, ಮಹಾಘಟಬಂಧನದ ಮತಗಳಿಕೆ ಪ್ರಮಾಣ 44.7 ಪ್ರತಿಶತದಿಂದ 26.9 ಪ್ರತಿಶತಕ್ಕೆ ಕುಸಿಯಿತು.
ಮೋದಿ ಪ್ರಚಾರ ರ್ಯಾಲಿಗಳನ್ನು “ನಡೆಸಿದ’ ಹಾಗೂ “ನಡೆಸದ’ ಜಿಲ್ಲೆಗಳಲ್ಲಿ ಎನ್‌ಡಿಎನ ಮತ ಗಳಿಕೆ ಪ್ರಮಾಣ ಹೇಗಿದೆ ಎನ್ನುವುದನ್ನು ನೋಡಿದರೂ ಇದು ಅರ್ಥವಾಗುತ್ತದೆ. ಮೊದಲ ಹಂತದ ಮತದಾನದ ಸಮಯದಲ್ಲಿ ಮೋದಿ ಪ್ರಜಾರ ನಡೆಸಿದ ಜಿಲ್ಲೆಗಳಲ್ಲಿ ಎನ್‌ಡಿಎನ ಮತಗಳಿಕೆ ಪ್ರಮಾಣ 29.2 ಪ್ರತಿಶತವಿದ್ದರೆ, ಅವರು ಪ್ರಚಾರ ಕೈಗೊಳ್ಳದ ಜಿಲ್ಲೆಗಳಲ್ಲಿ 29.8 ಪ್ರತಿಶತದಷ್ಟಿತ್ತು. 2ನೇ ಹಂತದ ಮತದಾನದಲ್ಲಿ ಈ ಪ್ರಮಾಣ ಕ್ರಮವಾಗಿ 56.3 ಮತ್ತು 52.2 ಪ್ರತಿಶತವಿದೆ. ಮೂರನೇ ಹಂತದ ಮತದಾನದಲ್ಲಿ ಮೋದಿ ಪ್ರಚಾರ ನಡೆಸಿದ ಜಿಲ್ಲೆಗಳಲ್ಲಿ ಎನ್‌ಡಿಎ ಮತಗಳಿಕೆ ಪ್ರಮಾಣ 73.7 ಪ್ರತಿಶತದಷ್ಟಿದ್ದರೆ, ಅವರು ಪ್ರಚಾರ ಮಾಡದ ಜಿಲ್ಲೆಗಳಲ್ಲಿ 62.5 ಪ್ರತಿಶತದಷ್ಟಿತ್ತು.
ಮೊದಲ ಹಂತದ ಮತದಾನಕ್ಕೂ ಮುನ್ನ ಮೋದಿ ಕೇಂದ್ರದಲ್ಲಿ ಎನ್‌ಡಿಎ ಸರಕಾರದ ಸಾಧನೆ ಹಾಗೂ ನಿತೀಶ್ ಕುಮಾರರ ಉತ್ತಮ ಕೆಲಸಗಳ ಪಟ್ಟಿ ಮಾಡುವುದಕ್ಕೆ ಸೀಮಿತವಾಗಿದ್ದರು. ಆದರೆ, ಇದು ಕೆಲಸ ಮಾಡಲಿಲ್ಲ. ಕೂಡಲೇ ತಂತ್ರ ಬದಲಿಸಿದ ಮೋದಿ ಮತ್ತು ಬಿಜೆಪಿಯ ಪ್ರಮುಖ ಪ್ರಚಾರಕರಾದಂಥ ಯೋಗಿ ಆದಿತ್ಯನಾಥ್‌ರಂಥವರು, ಪ್ರಚಾರದ ದಿಕ್ಕನ್ನು “ಆರ್‌ಜೆಡಿಯ ದುರಾಡಳಿತ, ಕಾಂಗ್ರೆಸ್‌ನ ಭ್ರಷ್ಟಾಚಾರ ಮತ್ತು ಇವೆರಡೂ ಪಕ್ಷಗಳ ಕುಟುಂಬ ರಾಜಕಾರಣ’ ದತ್ತ ಹೊರಳಿಸಿದರು.
ಈ ಕಾರಣಕ್ಕಾಗಿಯೇ ನಿತೀಶ್ ಕುಮಾರ್ ಅವರು ತಮ್ಮ ಕೊನೆಯ ರಾಜಕೀಯ ಆಸೆ ಈಡೇರಿದ್ದಕ್ಕಾಗಿ ಮೋದಿಯವರಿಗೆ ಧನ್ಯವಾದ ಅರ್ಪಿಸಬೇಕು. ಮೋದಿ ಇಲ್ಲದೇ ಇರುತ್ತಿದ್ದರೆ, ಬಿಹಾರ ಮತ್ತೆ ಜಂಗಲ್ ರಾಜ್‌ಗೆ ಮರಳುವುದನ್ನು ಜನರು ನೋಡಬೇಕಾಗುತ್ತಿತ್ತು.
(ಕೃಪೆ: ಸ್ವರಾಜ್ಯ)
ಜೈದೀಪ್ ಮಜುಂದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊ*ಲೆ; ಇಂದು ತೀರ್ಪು; ಭಾರೀ ಬಂದೋಬಸ್ತು
Surathkal: ಸಿಲಿಂಡರ್ ಸ್ಫೋ*ಟ ಪ್ರಕರಣ; ಮತ್ತೋರ್ವ ಮಹಿಳೆಯ ಸಾವು
Daily Horoscope: ದೀರ್ಘಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ
Vijay Hazare Trophy: ಅರುಣಾಚಲ ಎದುರಾಳಿ; ರಾಜ್ಯಕ್ಕೆ 4ನೇ ಜಯದ ನಿರೀಕ್ಷೆ
Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.