ಎಡಪಂಥ-ಬಲ ಪಂಥವಲ್ಲ, ಯುಕ್ತಪಂಥದವರ ಯುಕ್ತ ವಾದ!
Team Udayavani, Dec 3, 2019, 4:41 AM IST
“ಅವರು ಗಾಳಿ ಬಂದ ಕಡೆ ತೂರಿಕೊಳ್ಳುವವರು’, “ಅವರಂಥ ಎಡಪಂಥೀಯರನ್ನು ಯಾಕೆ ಆಹ್ವಾನಿಸಿದಿರಿ?’, “ನಿಮ್ಮಂಥ ಬಲಪಂಥೀಯರನ್ನು ಏಕೆ ಕರೆದರು?’ ಎಂದು ಪ್ರಶ್ನಿಸುವವರಿರುತ್ತಾರೆ. ಆದರೆ ಯಾವೆಲ್ಲ ಗುಣಗಳನ್ನು ಬಲಪಂಥೀಯ/ಎಡಪಂಥೀಯ ಎಂದು ಅರೋಪಿಸಲಾಗುತ್ತದೋ ಅಂಥ ಗುಣಲಕ್ಷಣಗಳು ಬಹಳ ಮಂದಿಗೆ ಹೊಂದುವುದೇ ಇಲ್ಲ.
ಈಚಿನ ದಿನಗಳಲ್ಲಿ ಸಾಹಿತ್ಯ, ಸಂಸ್ಕೃತಿ, ಸಮಾಜ, ರಾಜಕೀಯ ಮುಂತಾದ ವಿಚಾರಗಳ ಬಗೆಗಿನ ಬರಹಗಳಲ್ಲಿ ಅಥವಾ ಮಾತು- ಸಂವಾದಗಳಲ್ಲಿ ಎಡಪಂಥ ಮತ್ತು ಬಲಪಂಥ ಎಂಬ ವಿಭಾಗಗಳನ್ನು ಮಾಡುವುದನ್ನು ಸಾಮಾನ್ಯವಾಗಿ ಕಾಣುತ್ತೇವೆ. ಹೀಗೆ ವಿಭಾಗವಷ್ಟೇ ಅಲ್ಲದೆ, ಯಾವುದೇ ಒಂದು ವಿಚಾರಕ್ಕೆ ಸಂಬಂಧಿಸಿದಂತೆ ಎಡಪಂಥದವರ ನಿಲುವು ಹೀಗೆ, ಬಲಪಂಥದವರದು ಹಾಗೆ ಎಂಬ ತೀರ್ಮಾನಗಳುಳ್ಳ ಹೇಳಿಕೆಗಳನ್ನು ಕೂಡ ಕಾಣುತ್ತೇವೆ. ಇವೆರಡೂ ಪಂಥಗಳೂ ಸರಿಯಿಲ್ಲ ಎಂದು ಹೇಳುವ ಮಧ್ಯಮಪಂಥ ಎನ್ನುವ ಒಂದು ವಿಭಾಗವೂ ಈಗ ಇದೆ. ಹಾಗಂತ ಸತ್ಯ ಎಡ ಬಲದ ಮಧ್ಯದಲ್ಲಿ ಇರಬೇಕೆಂದಿಲ್ಲ. ಅವೆರಡರಿಂದಲೂ ಆಚೆಗೂ ಇರಬಹುದು.
ಇಂಥ ವಿಭಾಗೀಕರಣ ಕರ್ನಾಟಕದ ಅಥವಾ ಭಾರತದ ಸಂದರ್ಭದಲ್ಲಿ ನಿರುಪಯುಕ್ತ ಮತ್ತು ಚರ್ಚೆಯ ಹಾದಿ ತಪ್ಪಿಸುವಂಥದ್ದು ಎಂಬುದನ್ನು ಸಾಕಷ್ಟು ಮಂದಿ ಈಗಾಗಲೇ ಹೇಳಿಯೂ ಇದ್ದಾರೆ. ತಮ್ಮನ್ನು ತಾವು ಎಡಪಂಥದವರು ಎಂದು ಕರೆದುಕೊಳ್ಳುವವರು ಕನ್ನಡದ, ಭಾರತೀಯ ಮತ್ತು ಒಟ್ಟಾರೆ ಜಾಗತಿಕ ಬೌದ್ಧಿಕ ವಲಯದಲ್ಲಿ ಹೆಚ್ಚು ಮಂದಿಯಿದ್ದಾರೆ. ಬಲಪಂಥದವರು ಅಥವಾ ಮಧ್ಯಮ ಪಂಥದವರು ಎಂದು ಕರೆದುಕೊಳ್ಳುವವರೂ ಕಡಿಮೆ ಸಂಖ್ಯೆಯಲ್ಲಿ ಇದ್ದಾರೆ. ಎಡ ಪಂಥವಲ್ಲದವರ ಸಂಖ್ಯೆ ವಿವಿಧ ಕ್ಷೇತ್ರಗಳಲ್ಲಿ ದೊಡ್ಡದೇ ಇದೆ. ಅಂಥವರಲ್ಲಿ ಬಹುತೇಕರು ತಮ್ಮನ್ನು ತಾವು ಈ ಯಾವ ವಿಭಾಗಕ್ಕೂ ಸೇರಿದವರು ಎಂದು ಹೇಳಿಕೊಳ್ಳುವುದಿಲ್ಲ.
ಏನೇ ಇದ್ದರೂ ವ್ಯಕ್ತಿಗಳಿಗೆ ಯಾವುದಾದರೊಂದು ಹಣೆಪಟ್ಟಿ ಹಚ್ಚದೆ ಇದ್ದರೆ ಕೆಲವರಿಗೆ ಸಮಾಧಾನವಾಗುವುದಿಲ್ಲ. ಅಲ್ಪಸ್ವಲ್ಪ ಬರೆಯು ವವರಿಗೂ, ಅಲ್ಲಿ ಇಲ್ಲಿ ಭಾಷಣ, ಉಪನ್ಯಾಸಗಳಿಗೆ ಹೋಗುವವರಿಗೂ ಇದು ಚೆನ್ನಾಗಿ ಅನುಭವಕ್ಕೆ ಬಂದಿರುತ್ತದೆ. “ಅವರು ಯಾವ ಪಂಥಕ್ಕೂ ಸೇರದೆ ಗಾಳಿ ಬಂದ ಕಡೆ ತೂರಿಕೊಳ್ಳುವವರು’, “ಅವರಂಥ ಎಡಪಂಥೀ ಯರನ್ನು ಯಾಕೆ ಆಹ್ವಾನಿಸಿದಿರಿ?’, “ನಿಮ್ಮಂಥ ಬಲಪಂಥೀಯರನ್ನು ಏಕೆ ಆ ಗೋಷ್ಠಿಯಲ್ಲಿ ಮಾತನಾಡಲು ಕರೆದರು?’ ಎಂದು (ಅವಕಾಶ ನೀಡಬಾರದಿತ್ತು ಎಂಬರ್ಥದಲ್ಲಿ ಆಗಬೇಕೆಂದಿಲ್ಲÉ; ಬದಲಾಗಿ ಕೇವಲ ಕುತೂಹಲದಿಂದಲೂ) ಪ್ರಶ್ನಿಸುವವರಿರುತ್ತಾರೆ. “ನಿಮ್ಮಂಥ ಬಲಪಂಥೀಯರಿಗೆ/ಎಡಪಂಥೀಯರಿಗೆೆ ಇದು ಅರ್ಥವಾಗದು’ ಎನ್ನುವವರಿದ್ದಾರೆ.
ಆದರೆ ಯಾವೆಲ್ಲ ಗುಣಗಳನ್ನು ಬಲಪಂಥೀಯ ಅಥವಾ ಎಡಪಂಥೀಯ ಎಂಬ ಪ್ರತ್ಯೇಕ ವಿಭಾಗಗಳಿಗೆ ಅನೇಕ ಸಲ ಅರೋಪಿಸ ಲಾಗುತ್ತದೋ ಅಂಥ ಗುಣಲಕ್ಷಣಗಳು ಬಹಳ ಮಂದಿಗೆ ಹೊಂದು ವುದೇ ಇಲ್ಲ. ಅಲ್ಲದೆ, ಯಾವುದೇ ತತ್ವವಾಗಲಿ ಸಿದ್ಧಾಂತವಾಗಲಿ ನಿಂತ ನೀರಾಗಿರುವುದಿಲ್ಲ. ವಿಚಾರಧಾರೆಗಳೂ ನಿರಂತರ ವಿಕಾಸವಾಗುವುದು ಅನಿವಾರ್ಯ. 1930 ಅಥವಾ 1940ರ ದಶಕದಲ್ಲಿದ್ದ ಎಲ್ಲಾ ತತ್ವಗಳನ್ನು ಆರ್.ಎಸ್.ಎಸ್. ಇಂದು ಪಾಲಿಸುತ್ತಿಲ್ಲ. ಕಾಲದೊಂದಿಗೆ ಅದರ ವಿಚಾರಧಾರೆಯೂ ವಿಕಾಸವಾಗಿದೆ. ಆದ್ಯತೆಗಳು ಬದಲಾಗಿವೆ. ಅದೇ ರೀತಿ ಎಡ ಎನಿಸಿದವರ ವಿಚಾರಗಳೂ ಬದಲಾಗುತ್ತ ಬಂದಿವೆ.
ತಥಾಕಥಿತ ಎಡ-ಬಲ ಪಂಥದವರು ಪರಸ್ಪರರ ಬಗ್ಗೆ ಆರೋಪ ಮಾಡುವುದು ಕೂಡ ಹೊಸತಲ್ಲ. ಬಲಪಂಥದ ದೋಷಲಕ್ಷಣಗಳೆಂದು ಎಡಪಂಥೀಯರು ಪಟ್ಟಿ ಮಾಡುವ ಎಲ್ಲ ಲಕ್ಷಣಗಳನ್ನೂ ಆರ್.ಎಸ್. ಎಸ್.ನಂಥ ಸಂಘಟನೆಗೆ ಆರೋಪಿಸಲು ಸಾಧ್ಯವಿಲ್ಲ. ಬಲಪಂಥದ ವರೆಂದರೆ ಹಿಟ್ಲರನನ್ನು ಅನುಸರಿಸುವವರು ಎಂದೂ, ಎಡಪಂಥೀ ಯರು ಎಂದರೆ, ಮಾನವೀಯತೆ, ಸಮಾನತೆ, ಬಹುತ್ವಕ್ಕೆ ಮಾನ್ಯತೆ ನೀಡುವವರು ಎಂದೂ, ತಾವು ಎಡಪಂಥೀಯರೆಂದು ಹೇಳಿಕೊಳ್ಳುವ ಚಿಂತಕರು ಪ್ರತಿಪಾದಿಸುತ್ತಾರೆ. ಆದರೆ ರಷ್ಯಾದಲ್ಲಿ ಭಿನ್ನ ಧ್ವನಿಗಳನ್ನು ಹತ್ತಿಕ್ಕಿದ ದೊಡ್ಡ ಎಡಪಂಥೀಯ ಚರಿತ್ರೆಯಿದೆ ಎಂಬುದನ್ನು ಮರೆಯುತ್ತಾರೆ. ಹೆಚ್ಚೇಕೆ? ಪಶ್ಚಿಮ ಬಂಗಾಳದಲ್ಲಿ 1970ರ ದಶಕದಿಂದಾರಂಭಿಸಿ ಸುಮಾರು ಮೂರು ದಶಕಗಳ ಅವಧಿಯಲ್ಲಿ ಅಕ್ಷರಶಃ ಸಾವಿರಾರು ರಾಜಕೀಯ ಹತ್ಯೆಗಳು ಎಡಪಂಥೀಯ ಆಳುವಿಕೆಯ ಅವಧಿಯಲ್ಲಿ ಏಕೆ ನಡೆದವು? ಆ ಹತ್ಯೆಗಳಿಗಾಗಿ ಎಷ್ಟು ಮಂದಿಗೆ ಶಿಕ್ಷೆಯಾಯಿತು? ಇಂಥ ಪ್ರಶ್ನೆಗಳ ಬಗ್ಗೆ ಭಾರತದ ಎಡಪಂಥೀಯ ಬುದ್ಧಿಜೀವಿ ವರ್ಗ ದಶಕಗಳಿಂದಲೂ ದಿವ್ಯ ಮೌನವನ್ನೇ ವಹಿಸಿದೆ. ಹಾಗೆಯೇ ಎಂದೋ ಕಾರ್ಲ್ಮಾರ್ಕ್ಸ್ ವಸಾಹತುಶಾಹಿಯನ್ನು ಸಮರ್ಥಿಸುವ ರೀತಿಯಲ್ಲಿ ಮಾತನಾಡಿದ್ದ ಎಂದು ಇಂದಿನ ಎಡಪಂಥೀಯರನ್ನು ಹಳಿಯುವುದರಲ್ಲಿ ಅರ್ಥವಿಲ್ಲ. ಈ ಮಾತುಗಳ ಮೂಲಕ ಹೇಳಲು ಯತ್ನಿಸುತ್ತಿರುವುದೇನೆಂದರೆ, ಈ ಪಂಥಗಳೆಂಬ ಹಣೆಪಟ್ಟಿಗಳು ದಾರಿತಪ್ಪಿಸಬಲ್ಲವು. ಭಾರತೀಯ ಚಿಂತನೆಯ ಹಿನ್ನೆಲೆಯಲ್ಲಂತೂ ಈ ಕೃತಕ ವಿಭಾಗಗಳು ದೊಡ್ಡ ತೊಡಕನ್ನು ಉಂಟುಮಾಡುತ್ತವೆ.
ಇಷ್ಟಾಗಿಯೂ ಎಡಪಂಥೀಯರು ಈ ಹಣೆಪಟ್ಟಿಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ. ಏಕೆಂದರೆ ಈಗಾಗಲೇ ಹೇಳಿದಂತೆ ಇವರು ತಮ್ಮನ್ನು ತಾವು ಎಡಪಂಥೀಯರು ಎಂದು ಹೆಮ್ಮೆಯಿಂದ ಕರೆದು ಕೊಳ್ಳುತ್ತಾರೆ. ಆದರೆ ಸಮಸ್ಯೆಯಾಗುವುದು ಯಾವಾಗ ಎಂದರೆ ಎಡಪಂಥದವರ ವಿಚಾರಗಳನ್ನು ಒಪ್ಪದವರನ್ನೆಲ್ಲ ಬಲಪಂಥೀಯರು ಎಂಬ ಒಂದು ವಿಭಾಗದೊಳಗೆ ಕೂಡಿಹಾಕಿದಾಗ ಮತ್ತು ಅಂಥ ವಿಭಾಗಕ್ಕೆ ಕೆಲವು ನಿರ್ದಿಷ್ಟ ದುರ್ಗುಣಗಳನ್ನು ಆರೋಪಿಸಿದಾಗ. ಅಷ್ಟೇ ಅಲ್ಲ; ಬಲಪಂಥವೆಂದರೆ ಅಂತಾರಾಷ್ಟ್ರೀಯ ಬುದ್ಧಿಜೀವಿ ವಲಯದಲ್ಲಿ ಒಂದು ಬಗೆಯ ಋಣಾತ್ಮಕ ಭಾವ ಪ್ರಚಲಿತವಾಗಿರುವುದೂ ನಿಜ. ಇದು ಜಾಗತೀಕರಣದ ಯುಗ. ಸಂಸ್ಕೃತಿಗಳು, ಸಂಘರ್ಷಗಳು ಜಾಗತೀಕರಣಗೊಂಡಿರುವಂತೆ ಅಥವಾ ಅಂತಾರಾಷ್ಟ್ರೀಯವಾ ಗಿರುವಂತೆ ಕಾಳಜಿಗಳೂ ಜಾಗತೀಕರಣಗೊಂಡಿರುವ ಕಾಲ ಇದು. ನಾವು ಎಷ್ಟೇ ಸ್ವಾಯತ್ತ, ಸ್ವತಂತ್ರ ದೇಶ ಅಂತೆಲ್ಲ ಹೇಳಿಕೊಂಡರೂ ಅಥವಾ ನಮ್ಮ ವಿಚಾರಗಳನ್ನು ಇನ್ಯಾರದೋ ಮಾನದಂಡಗಳಲ್ಲಿ ಅಳೆಯಬಾರದು ಅಂತ ಅಂದುಕೊಂಡರೂ ನಮ್ಮ ಯಾವುದೇ ವಿಚಾರಧಾರೆ ಕೂಡ ಅಂತಾರಾಷ್ಟ್ರೀಯ ಪರಿಶೀಲನೆಯಲ್ಲಿ ಉತ್ತೀರ್ಣ ವಾಗುವುದು ಅನಿವಾರ್ಯ. ನಮ್ಮದೇ ಮಾನದಂಡವುಳ್ಳ ಚಿಂತನೆ ಯಾದರೂ, ತರ್ಕಬದ್ಧವಾಗಿ ಪ್ರಾಮಾಣಿಕವಾಗಿ ಚಿಂತಿಸುವ ಯಾರೇ ಆದರೂ ಅದನ್ನು ಕೊನೆಯ ಪಕ್ಷ ಕಣ್ಣೆತ್ತಿ ನೋಡುವಂತೆ ಇರಬೇಕಾಗುತ್ತದೆ. ಅದರ ಜೊತೆಗೆ ಸಂವಾದಿಸುವುದು, ವಾಗ್ವಾದ ನಡೆಸುವುದು ಅಥವಾ ಒಪ್ಪುವುದು ನಂತರದ ಮಾತು. ಹೀಗಿರುವಾಗ ನಾವು ಕಟ್ಟಿಕೊಳ್ಳುವ ಹಣೆಪಟ್ಟಿಗಳು ಅಥವಾ ಪದಗಳು ಕೂಡ ಯುಕ್ತವಾಗಿರಬೇಕು. ಹಾಗಾಗಿ ಎಡದವರ ವಿಚಾರಗಳ ಬಗ್ಗೆ ತಕರಾರು ಹೊಂದಿದವರು ಈ ಹಣೆಪಟ್ಟಿಗಳ ಬಗ್ಗೆ ಚಿಂತಿಸಬೇಕಾಗಿದೆ.
ಈ ಹಿನ್ನೆಲೆಯಲ್ಲಿ ನೋಡಿದಾಗ ಈಗ ನಾವು ಸರಿಯಾದುದನ್ನು ಆಲೋಚಿಸುವವರಾದರೆ ಯೋಗ್ಯವಾದುದನ್ನು ಅಥವಾ ಯುಕ್ತವಾ ದುದನ್ನು ಹೇಳುವವರು ಮತ್ತು ಬರೆಯುವವರಾದರೆ ನಮ್ಮನ್ನು ನಾವು ಯುಕ್ತಪಂಥೀಯರು, ಯುಕ್ತವಾದಿಗಳು ಎಂದು ಕರೆದುಕೊಳ್ಳುವುದು ಹೆಚ್ಚು ಸರಿಯಾದುದು.
ಯುಕ್ತಚಿಂತನೆಯ ಗುಣಲಕ್ಷಣಗಳೇನು?
ಇತಿಹಾಸದ ಬಗ್ಗೆ ಈವರೆಗಿನ ಜ್ಞಾನ, ಸಂಶೋಧನೆಗಳ ಹಿನ್ನೆಲೆಯಲ್ಲಿ ಯಾವುದು ಸತ್ಯವೋ ಅದನ್ನು ಪ್ರತಿಪಾದಿಸುವುದು. ಅದೇರೀತಿ ಇತಿಹಾಸದ ಸತ್ಯ ಮತ್ತು ವರ್ತಮಾನದ ಬೆಳಕಿನಲ್ಲಿ ಮುಂದೆ ಸಹಬಾಳ್ವೆ, ಸಾಮರಸ್ಯಕ್ಕೆ ಪೂರಕವಾದ ನೀತಿನಿರೂಪಣೆಗಳನ್ನು ಪ್ರತಿಪಾದಿಸುವುದು. ಇತಿಹಾಸದ ಕೆಲವು ಸತ್ಯಗಳು ಕೆರಳಿಸುವುದಿಲ್ಲವೇ ಎಂದು ಯಾರಾದರೂ ಕೇಳಬಹುದು. ಇಲ್ಲ, ಇಲ್ಲಿ ನಾವು ಸಾಮಾನ್ಯವಾಗಿ ಗಮನಿಸದ ಒಂದು ಸೂಕ್ಷ್ಮವಿದೆ. ಇತಿಹಾಸದ ನೆಪದಲ್ಲಿ ಕೆರಳಿಸಲು ಸಾಧ್ಯವಾಗುವುದು ವರ್ತಮಾನದ ವಿದ್ಯಮಾನಗಳು ಮತ್ತು ನೀತಿನಿರೂಪಣೆಗಳ ಸಹಾಯವಿದ್ದಾಗ ಮಾತ್ರ. ಹಿಂದೂ – ಮುಸ್ಲಿಂ ಸಂಬಂಧವನ್ನು ಅಥವಾ ದಲಿತ- ದಲಿತೇತರರ ನಡುವಣ ಸಂಬಂಧವನ್ನು ಕೆರಳಿಸಲು ಸಾಧ್ಯವಾಗುವುದು ವರ್ತಮಾನದ ಕಾರಣ ದಿಂದ. ಇತಿಹಾಸದಲ್ಲಿ ನಡೆದಿದ್ದ ಜೈನ- ಶೈವ-ವೈದಿಕ ಸಂಘರ್ಷಗಳು ಇಂದು ಏಕೆ ಸಮುದಾಯಗಳನ್ನು ಕೆರಳಿಸಲು ಸಾಧ್ಯವಾಗುವುದಿಲ್ಲ ಎಂಬುದನ್ನು ಗಮನಿಸಿ. ಹೀಗಾಗಿ ವರ್ತಮಾನದ ಕಥನಗಳು, ನೀತಿ ನಿರೂಪಣೆಗಳು ಮತ್ತು ವಿದ್ಯಮಾನಗಳು ಯುಕ್ತವಾಗಿದ್ದಾಗ ಇತಿಹಾಸದ ಸತ್ಯವನ್ನು ಬಳಸಿಕೊಂಡು ಯಾರನ್ನೂ ಕೆರಳಿಸಲಿಕ್ಕಾಗದು.
ಯುಕ್ತವಾದಿ ಎನ್ನುವಾಗ “ವಾದ’ ಅಥವಾ “ಇಸಂ’ ಎನ್ನುವುದಕ್ಕೆ ಒಂದು ಮಿತಿಯಿದೆ. ವಾದ ಅಥವಾ ಇಸಂ ಎಂಬುದು ಬಹಳ ಬಾರಿ ಸ್ಥಗಿತವಾದ ಚಿಂತನೆಯನ್ನು ಹೇಳುತ್ತದೆ ಎಂಬ ಅಭಿಪ್ರಾಯ ಇದ್ದಾಗ್ಯೂ ಯುಕ್ತ ಎಂಬುದರೊಡನೆ ಸೇರಿದಾಗ ಯುಕ್ತವಾದವೂ ಆಯಾ ಸಂದರ್ಭಕ್ಕೆ ಯುಕ್ತವಾಗಿರುವ ಚಿಂತನೆ ಎಂದೇ ಆಗುತ್ತದೆ. ರಾಷ್ಟ್ರಹಿತ ಬಯಸುವವರು ಎಂಬ ನೆಲೆಯಲ್ಲಿ ರಾಷ್ಟ್ರವಾದಿಗಳು ಎಂದರೂ ಸರಿಯೇ. ಆದರೆ ಇಂಥ ಸಂವಾದಗಳು ಕೇವಲ ರಾಷ್ಟ್ರ ಎಂಬ ವಿಚಾರಕ್ಕೆ ಮಾತ್ರ ಸಂಬಂಧಿಸಿದ್ದಾಗಿರುವುದಿಲ್ಲ. ಬೇರೆ ಹಲವಾರು ವಿಚಾರಗಳ ಬಗ್ಗೆಯೂ ಚರ್ಚೆ ನಡೆಸಬೇಕಾಗುತ್ತದೆ. ಅಷ್ಟೇ ಅಲ್ಲ; ಉದಾತ್ತ ಭಾರತೀಯ ಚಿಂತನೆ ಅಥವಾ ವಿವೇಕಾನಂದರಂಥವರು ಪ್ರತಿಪಾದಿಸಿದ ನಮೂನೆಯ ಭಾರತೀಯ ವೇದಾಂತವು ನಾವೀಗ ಪರಿಕಲ್ಪಿಸುವ ರಾಷ್ಟ್ರಕ್ಕೆ ಸೀಮಿತವೂ ಅಲ್ಲ ತಾನೆ? ಹೀಗಿರುವಾಗ ಎಲ್ಲಾ ಸಂದರ್ಭ ಗಳಲ್ಲಿಯೂ ಯಾವುದು ಯುಕ್ತ, ಯಾವುದು ಯುಕ್ತವಲ್ಲ ಎಂಬ ವಿವೇಚನೆ ಮುಖ್ಯವಾಗುತ್ತದೆ.
ಇತಿಹಾಸ ಅಥವಾ ಕಳೆದು ಹೋದುದರ ವಿವೇಚನೆ ಎಂಬುದು ಕೂಡ ಯಾಂತ್ರಿಕ ಸತ್ಯದ ಹುಡುಕಾಟ ಆಗಬಾರದು. ಅಂಥ ಹುಡುಕಾಟದಲ್ಲಿ ಮುಂದಿನ ದಾರಿಯನ್ನು ಸರಿಯಾಗಿ ರೂಪಿಸಿಕೊಳ್ಳುವ ತರ್ಕ ಮತ್ತು ವಿವೇಚನೆ ಇರಬೇಕು. ಉದಾಹರಣೆಗೆ ಈಗ ತಮ್ಮನ್ನು ಎಡಪಂಥೀಯರು ಎಂದೇ ಕರೆದುಕೊಳ್ಳುವ ಕೆಲವು ಚಿಂತಕರು ಕೂಡ ದೇಶದ ಆರ್ಥಿಕ ಪ್ರಗತಿಗೆ ಮನಮೋಹನ ಸಿಂಗ್ ಅವರು 1990ರ ದಶಕದಲ್ಲಿ ಕೈಗೊಂಡ ನೀತಿಗಳೇ ಕಾರಣ ಎಂದು ಹೇಳುವುದಿದೆ. ಅದು ಸರಿ ಇರಬಹುದು. ಆದರೆ ನಮ್ಮ ವಿವೇಚನೆ ಅಲ್ಲಿಗೆ ನಿಲ್ಲಬಾರದು. ಹಾಗಿದ್ದರೆ ಸ್ವಾತಂತ್ರ್ಯಾ ನಂತರದ ಅಷ್ಟೂ ವರ್ಷಗಳಲ್ಲಿ ಅಲ್ಲಿಯವರೆಗೆ ಇದ್ದ ನೀತಿಗಳಲ್ಲಿ ಇದ್ದ ದೋಷಗಳೇನು? ಅದಕ್ಕೆ ಕಾರಣರು ಯಾರು? ಇಂಥ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು. ಆಗ ವರ್ತಮಾನದಲ್ಲಿ ಆಗಬೇಕಾದುದು ಏನು ಎಂಬ ಬಗ್ಗೆ ನಮ್ಮ ಚರ್ಚೆಗೆ ಹೆಚ್ಚು ನ್ಯಾಯಬದ್ಧತೆ ಬರುತ್ತದೆ. ಅಂತೂ ಒಟ್ಟಿನಲ್ಲಿ ಮುಂದೆ ಏನಾಗಬೇಕು ಎಂಬ ಪ್ರಶ್ನೆ ಬಂದಾಗ ಸರ್ವಜನ ಹಿತವೇ ಅಲ್ಲಿ ಮುಖ್ಯವಾಗಬೇಕು. ಸಮಾಜಶಾಸ್ತ್ರ, ಮಾನವಶಾಸ್ತ್ರ, ರಾಜ್ಯಶಾಸ್ತ್ರ ಅಥವಾ ಅರ್ಥಶಾಸ್ತ್ರಗಳನ್ನು ಕೇವಲ ಮೇಲ್ನೋಟದ ಓದು ಮತ್ತು ಅರ್ಥೈಸುವಿಕೆಯ ಮೂಲಕ ಬಳಸಿಕೊಳ್ಳದೆ ತತ್ವಶಾಸ್ತ್ರೀಯ ಆಳಕ್ಕೆ ಇಳಿದು ನೋಡುವ ಹಂಬಲ ಇರಬೇಕು. ಇದು ಯುಕ್ತಪಂಥದ ಅಥವಾ ಯುಕ್ತವಾದದ ದಾರಿ.
ಈ ಯುಕ್ತವಾದಕ್ಕೆ ಇತರ ಹಲವು ವಾದಗಳಿಗೆ ಇರುವ ಹಾಗೆ ಯಾವ ಜನನಿ ಅಥವಾ ಜನಕರಿಲ್ಲ. ಏಕೆಂದರೆ ಇಲ್ಲಿ ನೀವು ಯಾರ ವಾದದ ಅಂಶಗಳನ್ನು ಬೇಕಾದರೂ ಸಂದರ್ಭಾನುಸಾರವಾಗಿ ಹೊಂದಿಕೆ ಮಾಡಿಕೊಳ್ಳಬಹುದು. ಯಾವುದೂ ವಜ್ಯìವಲ್ಲ; ಸಂಪೂರ್ಣವಾಗಿ ಅಥವಾ ಅಂಧವಾಗಿ ಅನುಸರಿಸತಕ್ಕದ್ದೂ ಅಲ್ಲ. ಹೀಗೆ ಹೇಳಿದಾಗ ಇದನ್ನು ಅವಕಾಶವಾದ ಎಂದು ಹೇಳುವವರೂ ಇದ್ದೇ ಇರುತ್ತಾರೆ. ಇರಲಿ, ಪರವಾಗಿಲ್ಲ. ಆದರೆ ಯಾವ ದೊಡ್ಡ ಮನುಷ್ಯರ ವಾದವೇ ಇರಲಿ ಅದು ಆಯಾ ಕಾಲ ಪರಿಸ್ಥಿತಿಯನ್ನು ನೋಡಿ ಅದಕ್ಕೆ ಅನುಗುಣವಾಗಿ ರೂಪಿಸಿದುದಾಗಿರುತ್ತದೆ. ಹಾಗಾಗಿ ಆಯಾ ಕಾÇಕ್ಕೆ ಯುಕ್ತವಾದುದರ ಹೊರತಾಗಿ ಇನ್ಯಾವುದೂ ಸಾರ್ವಕಾಲಿಕ ಎನಿಸಲಾರದು. ಯಾವುದೇ ವಾದದಲ್ಲಿರುವ ಸರ್ವಕಾಲಕ್ಕೂ ಹೊಂದುವ ವಿಚಾರವನ್ನು ಯುಕ್ತವಾದ/ ಯುಕ್ತಪಂಥ ಕೂಡ ಒಳಗೊಳ್ಳುತ್ತದೆ. ಇದು ಮುಕ್ತಪ್ರಜ್ಞೆಯನ್ನು ಹೊಂದಿದ ಮತ್ತು ಎಲ್ಲ ಬಗೆಯ ಚಿಂತನೆಗಳಲ್ಲೂ ಇರುವ ಯುಕ್ತವಾದುದನ್ನು ಸ್ವೀಕರಿಸುವ ಪಂಥ. ಈ ದೃಷ್ಟಿಯಿಂದ ಇದು ಮುಕ್ತಪಂಥವೂ ಹೌದು.
ಹೀಗಿರುವಾಗ, ಈಗ ನೀವು ದೇಶಭಕ್ತರಾದರೆ, ಸಂವಿಧಾನದ ಮೌಲ್ಯಗಳನ್ನು ಗೌರವಿಸುವವರಾದರೆ, ವ್ಯಕ್ತಿಗತ ಮೌಲ್ಯಗಳಿಂದ ತೊಡಗಿ ಕೌಟುಂಬಿಕ, ಸಾಮಾಜಿಕ, ರಾಷ್ಟ್ರೀಯ ಮೌಲ್ಯಗಳ ಬಗ್ಗೆ ಅಭಿಮಾನ ಹೊಂದಿ ಅವುಗಳನ್ನು ಸಾಧ್ಯವಾದ ಮಟ್ಟಿಗೆ ಪಾಲಿಸುವವರಾಗಿದ್ದರೆ ಮತ್ತು ಆ ಮೂಲಕ ಇಡೀ ಮಾನವ ಕುಲ ಹಾಗೂ ಸಮಸ್ತ ಚರಾಚರ ವಸ್ತುಗಳ ಅಸ್ತಿತ್ವವನ್ನು ಸಂಭ್ರಮಿಸು ವವರಾದರೆ, ಈವರೆಗಿನ ಅರಿವಿನ ಹಿನ್ನೆಲೆಯಲ್ಲಿ ಸತ್ಯದ ಪ್ರತಿಪಾದ ಕರಾದರೆ, ಮುಂದಿನದರ ಬಗ್ಗೆ ನೀತಿನಿರೂಪಣೆಯಲ್ಲಿ ಸರ್ವರ ಹಿತಕ್ಕೆ ಅನುಗುಣವಾದ ನೀತಿಗಳನ್ನು ಹೇಳುವವರಾದರೆ, ಸೋಗಿನ ಸೆಕ್ಯುಲರು ವಾದವನ್ನು ವಿಮರ್ಶೆ ಮಾಡಿ ಪ್ರಶ್ನೆ ಮಾಡುವವರಾದರೆ ನಿಮಗೆ ನೀವೇ ಹಚ್ಚಿಕೊಳ್ಳಬಹುದಾದ ಹಣೆಪಟ್ಟಿ ಯುಕ್ತವಾದಿ ಎಂಬುದು. (ಯುಕ್ತಿವಾದಿ ಅಲ್ಲ; ಅದಕ್ಕೆ ತತ್ವಶಾಸ್ತ್ರದಲ್ಲಿ ಬೇರೆಯೇ ಅರ್ಥ ಬರಬಹುದು) ನಿಮ್ಮ ವಾದವನ್ನು ಯುಕ್ತವಾದ ಎಂದು ಕರೆಯಿರಿ. ನಿಮ್ಮ ಪಂಥ ಯಾವುದು ಎಂದು ಕೇಳಿದರೆ ಯುಕ್ತಪಂಥ ಎನ್ನಿ. ಈ ಪದಗಳು ಅಖೀಲ ಭಾರತ ಮಟ್ಟದಲ್ಲಿ ಹಿಂದಿ ಮತ್ತಿತರ ಕೆಲವು ಭಾಷೆಗಳಲ್ಲೂ ಹೊಂದಿಕೆಯಾಗಬಹುದು. ಇಂಗ್ಲಿಷಿನಲ್ಲಿ ಆ್ಯಪ್ಟಿಸ್ಟ್ ಎಂದು ಕರೆದುಕೊಳ್ಳಬಹುದು. ನಿಮ್ಮ ವಾದವನ್ನು ಇಂಗ್ಲಿಷಿನಲ್ಲಿ ಆ್ಯಪ್ಟಿಸಂ ಎಂದು ಕರೆಯಬಹುದು. ಇಂಗ್ಲಿಷಿನ ಈ ಪದಗಳು ಈವರೆಗೆ ಅಸ್ತಿತ್ವದಲ್ಲಿ ಇಲ್ಲದಿರಬಹುದು. ಇವು ಹೊಸತಾಗಿ ಟಂಕಿಸಿದ ಪದಗಳಾದರೂ ಚಿಂತೆಯಿಲ್ಲ. ಇಂಗ್ಲಿಷಿನ ಆ್ಯಪ್ಟ್ ಎನ್ನುವ ಪದಕ್ಕೆ ನಿಘಂಟಿನಲ್ಲಿ ಇರುವ ಅರ್ಥಗಳನ್ನು ಪರಿಶೀಲಿಸಿದರೆ ಅದೂ ಹೊಂದುತ್ತದೆ ಎಂದು ಮನದಟ್ಟಾಗುತ್ತದೆ. ಕನ್ನಡ, ಮಲಯಾಳ, ಸಂಸ್ಕೃತ, ಹಿಂದಿ, ಗುಜರಾತಿ, ನೇಪಾಳಿ ಮುಂತಾದ ಭಾಷೆಗಳ ನಿಘಂಟುಗಳಲ್ಲಿ ಯುಕ್ತ ಎನ್ನುವ ಪದಕ್ಕೆ ಇರುವ ಅರ್ಥವ್ಯಾಪ್ತಿ ಕೂಡ ನಮ್ಮ ಈ ಚಿಂತನೆಗೆ ಸರಿಯಾಗಿ ಹೊಂದುತ್ತದೆ.
ಬಲ ಪಂಥೀಯ ನೆಂದೋ, ಎಡ ಪಂಥೀಯ ಎಂದೋ ವ್ಯಕ್ತಿಗಳಿಗೆ ಯಾವುದಾದರೊಂದು ಹಣೆಪಟ್ಟಿ ಹಚ್ಚದಿದ್ದರೆ ಕೆಲವರಿಗೆ ಸಮಾಧಾನವಾಗುವುದಿಲ್ಲ.
ನಿಮ್ಮ ವಾದವನ್ನು ಯುಕ್ತವಾದ ಎಂದು ಕರೆಯಿರಿ. ನಿಮ್ಮ ಪಂಥ ಯಾವುದು ಎಂದು ಕೇಳಿದರೆ ಯುಕ್ತಪಂಥ ಎನ್ನಿ.
ನಿಮ್ಮ ವಾದವನ್ನು ಯುಕ್ತವಾದ ಎಂದು ಕರೆಯಿರಿ. ನಿಮ್ಮ ಪಂಥ ಯಾವುದು ಎಂದು ಕೇಳಿದರೆ ಯುಕ್ತಪಂಥ ಎನ್ನಿ.
ಡಾ| ಅಜಕ್ಕಳ ಗಿರೀಶ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shimoga: ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ
Los Angeles: ಮತ್ತೊಂದು ಕಾಡ್ಗಿಚ್ಚು; 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ
Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ
Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ
Donald Trump: ಚೀನಾ ಆಮದು ಮೇಲೆ ಶೇ.10 ಸುಂಕ… ನೂತನ ಅಧ್ಯಕ್ಷ ಟ್ರಂಪ್