ಓ ಬಾಲ್ಯವೇ ಮತ್ತೊಮ್ಮೆ ಬಾ! ನಮ್ಮ ಬಾಲ್ಯದಾಟ ಈಗ ಎಲ್ಲಿ ಮರೆಯಾದವು…
Team Udayavani, Nov 30, 2019, 1:23 PM IST
ಲೇ…..ಸವಿತಾ….. ಕವಿತಾ ಬನ್ರೋ…ಆಟ ಆಡೋಣ…ಶಾಲೆಯಿಂದ ಬಂದು ಹೊಟ್ಟೆ ತುಂಬಿಸಿಕೊಂಡ ಲಲಿತಾಳ ಕರೆಗೆ ಮನೆಮನೆಗಳಿಂದ ಹೊರಹೊಮ್ಮಿ ಓಡಿ ಬಂತು ಗೆಳತಿಯರ ದಂಡು. ಒಬ್ಬಳ ಕೈಯಲ್ಲಿ ಚೌಕಾಕಾರದ ಹೆಂಚಿನ ತುಂಡುಗಳು, ಇನ್ನೊಬ್ಬಳ ಕೈಯಲ್ಲಿ ಉರುಟಾದ ಪುಟ್ಟ ಕಲ್ಲುಗಳು . ಲಲಿತಾಳೋ ಕೈಯಲ್ಲಿ ಒಂದಿಷ್ಟು ಹಿಡಿಸೂಡಿ ಕಡ್ಡಿಗಳನ್ನು ಒಪ್ಪವಾಗಿ ಒಂದೇ ಅಳತೆಯಲ್ಲಿ ತುಂಡರಿಸಿ ತಂದಿದ್ದಾಳೆ. ಸೀಬೆ ಮರದ ಬುಡದಲ್ಲಿ ಒಟ್ಟು ಸೇರಿದ ಗೆಳತಿಯರೆಲ್ಲರೂ ಗುಂಪಾಗಿ ಆಟಗಳಲ್ಲಿ ತಲ್ಲೀನರಾದರು.
ಅದೋ ಮರಗಳ ಗೆಲ್ಲು ಗೆಲ್ಲುಗಳನ್ನು ಅಲುಗಾಡಿಸುತ್ತಾ ಚೀರುತ್ತಾ ಕೇಕೆ ಹಾಕಿ ನಗುತ್ತಾ ಗುಡ್ಡ ಏರಿ ತಗ್ಗು ದಿನ್ನೆಗಳೆನ್ನದೆ ಓಡೋಡಿ ಬರುತ್ತಿರುವ ಹುಡುಗರ ದಂಡು! . ಹುಣಸೆ ಮರದ ಹೀಚು ಕಾಯಿಗಳು.. ಒಬ್ಬನ ಕೈಯಲ್ಲಿ ಉಪ್ಪಿನ ಹರಳು… ಉಪ್ಪಳಿಗೆ ಮರದ ಎಲೆಗಳೇ ತಟ್ಟೆ .ಆಹಾ… ಚಪ್ಪರಿಸುವ ಅಂದ ಅದಾವ ಮದುವೆ ಮನೆ ಊಟಕ್ಕೂ ಕಡಿಮೆಯಿಲ್ಲ. ಕತ್ತಲಾವರಿಸುವ ವರೆಗೂ ನಡೆದವು ಆಟಗಳು . ಮನೆಯಿಂದ ಎಚ್ಚರಿಕೆಯ ಕರೆ ಒಂದೆರಡು ಬಾರಿ ಬಂದರೂ ಆಟದೆಡೆಯಲ್ಲಿ ಕೇಳಿಸಲೇ ಇಲ್ಲ. ಅಮ್ಮಂದಿರು ಬಾರಕೋಲಿನಿಂದ ಬೆನ್ನ ಮೇಲೆ ಗೆರೆ ಎಳೆದಾಗ ಮನೆಯ ಕಡೆ ಓಟ. ಹೌದು ನಮ್ಮ ಬಾಲ್ಯದಾಟಗಳಿವು. ಈಗ ಎಲ್ಲಿ ಮರೆಯಾದವು?
ಅಂದಿನ ದಿನಗಳಲ್ಲಿ ಹತ್ತಿ ಇಳಿಯದ ಮರಗಳಿಲ್ಲ.ತಿನ್ನದ ಕಾಡ ಹಣ್ಣುಗಳಿಲ್ಲ. ಕೆರೆ ತೋಡು ಹಳ್ಳಗಳಲ್ಲಿ ನೀರಿನಾಟ , ಬರಿ ಕಾಲಿನಿಂದ ನೆಲದ ಮೇಲೆಲ್ಲಾ ಗೆರೆ ಎಳೆದು ಜಿಬಿಲಿ ಪಲ್ಲೆಯಾಟ ಕಲ್ಲುಗಳಿಂದ ವಿಧ ವಿಧ ಆಟಗಳು ಬಳೆಚೂರುಗಳು ಹುಳಿಬೀಜಗಳು ಹೊಂಗಾರೆ ಕಾಯಿಗಳ ಜತೆ ಆಟಗಳ ವೈವಿಧ್ಯ.
ಗೋಳಿ ಮರದ ಬಿಳಲೇ ಉಯ್ಯಾಲೆ. ಗೆರಟೆಗಳಲ್ಲಿ ಮಣ್ಣುಕಲಸಿ ತುಂಬಿಸಿ ಆಡುವ ಅಡುಗೆಯ ಆಟದ ಅಂದ ವರ್ಣಿಸಲು ಸಾಧ್ಯವೇ? ವಿಶೇಷವೆಂದರೆ ಅತ್ಯಂತ ಆರೋಗ್ಯದ ದಿನಗಳವು. ಕೆಮ್ಮು ನೆಗಡಿ ಸೀನು ಶೀತ ವಾಂತಿ ಬೇಧಿ ಈ ರೀತಿಯ ಯಾವುದೇ ತೊಂದರೆಗಳಿಲ್ಲ.ಝರಿ ತೊರೆ ಕೆರೆ ಬಾವಿ ಹೀಗೆ ಯಾವ ನೀರಾದರೂ ದೇಹಕ್ಕೆ ಪಥ್ಯವೇ ಸರಿ. ಅಂದಿನ ಗಡಸುತನ ಇಂದಿನ ಮಕ್ಕಳಲ್ಲಿ ಇಲ್ಲ ಏಕೆ?
ರಜೆ ಬಂತೆಂದರೆ ಊರಿಗೆ ಊರೇ ಸಂಭ್ರಮ. ಅಜ್ಜಿ ಮನೆಗೆ ಬರುವ ಮೊಮ್ಮಕ್ಕಳ ಸಂತಸ ಒಂದು ಕಡೆಯಾದರೆ ಅಜ್ಜ ಅಜ್ಜಿ ಅತ್ತೆ ಮಾವಂದಿರು ರಜೆಯಲ್ಲಿ ಬರುವ ಮಕ್ಕಳಿಗಾಗಿ ಹಲವು ವಿಧಗಳಲ್ಲಿ ಸಜ್ಜಾಗುತ್ತಿದ್ದರು. ಅಡುಗೆಯಲ್ಲೋ ವೈವಿಧ್ಯತೆ. ರಜಾಕಾಲ ಜತೆಗೆ ಬಿಸಿಲ ಬೇಗೆ ಹಪ್ಪಳಸಂಡಿಗೆ ಮಾಡುವ ಸಡಗರ!
ಮಾವಿನ ಮರದ ಕೆಳಗಡೆ ಮಕ್ಕಳ ದಂಡು. ಬೀಳುವ ಹಣ್ಣು ಮಾವುಗಳನ್ನು ಹೆಕ್ಕಿ ಚಡ್ಡಿ ಅಂಗಿಗಳಿಗೆ ಒರೆಸಿ ಚೀಪುತ್ತಾ ಪಟ್ಟ ಖುಷಿ ಇಂದು ನೆನಪು ಮಾತ್ರ! ಅಷ್ಟೇ ಏಕೆ ಕುಂಟಲ ಸೀಬೆ ಮುಳ್ಳುಕಾಯಿ ನೇರಳೆ ಒಂದೇ ಎರಡೇ ಕಾಡ ಹಣ್ಣುಗಳೆಲ್ಲಾ ಮಕ್ಕಳ ಹೊಟ್ಟೆ ಸೇರುತ್ತಿದ್ದವು ಮಧ್ಯಾಹ್ನದ ಊಟವೋ ಬಹಳ ಸಡಗರ.ಎಲ್ಲಾ ಮಕ್ಕಳೂ ಗುಂಪಾಗಿ ಕುಳಿತು ಅವರವರ ಕಥೆಗಳು ಶಾಲೆಯ ಘಟನೆಗಳನ್ನು ಹೇಳುತ್ತಾ ಸಾಗುತ್ತಿತ್ತು ಊಟದ ಸೊಬಗು. ಊಟದ ನಂತರ ವಿಶ್ರಾಂತಿ ಪಡೆಯಲು ಮನೆಯವರು ಸೂಚಿಸಿದರೂ ಕೇಳದೆ ಮತ್ತೆ ಮಕ್ಕಳು ಆಟದ ಅಂಗಳಕ್ಕೆ! ಕಾಗದದ ದೋಣಿಗಳನ್ನು ರಚಿಸಿ ನೀರಿನಲ್ಲಿ ತೇಲಿ ಬಿಡುವ ಸಂಭ್ರಮ. ಅವು ದೂರ ಸಾಗಿದಾಗಿನ ಖುಷಿ, ಒದ್ದೆಯಾಗಿ ಮುಳುಗಿದರೆ ಬೇಸರ. ಎತ್ತರದ ಮರಗಳಿಗೆ ಕಟ್ಟಿದ ಬಾವಿಯ ಹಗ್ಗವೇ ಉಯ್ಯಾಲೆ, ಅದಕ್ಕೋ ಒಂದಷ್ಟು ಜಗಳ ನಾನು ನಾನೆಂದು. ಆಗ ಮಕ್ಕಳೊಳಗೇ ಒಪ್ಪಂದ ಪ್ರತಿಯೊಬ್ಬರಿಗೂ 50 50 ಸುತ್ತು ಎಂದು.ಎಣಿಕೆ ಶುರು ಜೋರಾಗಿ ,ಜತೆಗೆ ಹಾಡು ಬೇರೆ ಹತ್ತೂರಿಗೂ ತಿಳಿಯಬೇಕು
ಓಹೋ ಮಕ್ಕಳಿಗೆ ಬೇಸಿಗೆ ರಜೆ. ಆಟ ಜೋರಾಗಿದೆಯೆಂದು.
ಸಂಜೆಯಾಗುತ್ತಿದ್ದಂತೆ ಮಣ್ಣು ಧೂಳು ಮೆತ್ತಿದ ಮೈಗೆ ಸ್ನಾನದ ಪುಳಕ. ಒಣಸೌದೆ ಹಾಳೆ ಮಡಲುಗಳನ್ನು ತಂದು ಒಲೆಗೆ ಬೆಂಕಿ ಹಾಕಿ ಬಿಸಿನೀರು ಮಾಡುವ ಸಂಭ್ರಮ.ಒಬ್ಬೊಬ್ಬರಾಗಿ ಸ್ನಾನ ಮುಗಿಸಿದ ಹಾಗೇ ಗುಂಪಾಗಿ ಕುಳಿತು ಭಜನೆ!ತಾಳ, ಹಾಡುಗಳ ಸ್ಪರ್ಧೆ ಮನಸ್ಸಿಗೆ ಏನೋ ಉಲ್ಲಾಸ.ಅಜ್ಜ ಅಜ್ಜಿಗೆ ದಂಬಾಲು ಬಿದ್ದು ಅವರು ಹೇಳುವ ಕಥೆಗಳಿಗೆ ಹಾಂ..ಹೂಂ…ಹೌದಾ..ಎಂಬ ಉದ್ಗಾರಗಳು . ಸಾಲದೆಂಬಂತೆ ಹಳೆಯ ಪೆಟ್ಟಿಗೆ ಗಳೊಳಗೆಲ್ಲಾ ಹುಡುಕಿ ಚಂದಮಾಮ, ಗಿಳಿವಿಂಡು ಬಾಲ ಮಂಗಳಗಳೊಳಗೆ ಕಥೆಗಳ ಆಸ್ವಾದ. ಕಣ್ಣೆವೆ ಮುಚ್ಚುವುದರೊಳಗೆ ಬೇಸಿಗೆ ರಜೆ ಮುಗಿಯುತ್ತಾ ಮತ್ತೆ ಮನೆ ಕಡೆ ಪಯಣ!
ರಜೆಯ ಮಜ ವರ್ಷದುದ್ದಕ್ಕೂ ಸವಿ ನೆನಪು. ಬೀಸುವ ಮಳೆ ಗಾಳಿಯೆನ್ನದೆ ಅಂದು ಪ್ರಕೃತಿಯೊಂದಿಗೆ ಒಂದಾಗಿ ಮಿಂದೆದ್ದ ದಿನಗಳು ಹಲವು.ಅನಾರೋಗ್ಯವೆಂಬುದಿಲ್ಲ ಬರಿಕಾಲಲ್ಲಿ ನಡೆದರೂ ನೋವಿಲ್ಲ. ಕಾಲ ಬಹಳ ಬದಲಾಗಿ ಹೋಯಿತು ಅಲ್ಲವೇ? ಇಂದು ನಾವೇ ನಮ್ಮ ಮಕ್ಕಳಿಗೆ ಹಲವು ದಿಗ್ಬಂಧನಗಳನ್ನು ಹಾಕುತ್ತಿದ್ದೇವೆ.ಅಲ್ಲದೆ ಆವರಿಗೆ ಎಲ್ಲರ ಜತೆ ಬೆರೆಯುವ ಅವಕಾಶಗಳು ಬಹಳ ಕಡಿಮೆ ಇವೆ. ವಿವಿಧ ಕಲಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿ ವಾರದ ಏಳು ದಿನಗಳೂ ಕಡಿಮೆ ಆಯಿತೇನೋ ಎಂಬಂತೆ ವರ್ತಿಸುತ್ತೇವೆ.ಪ್ರಕೃತಿಯ ವೀಕ್ಷಣೆಯ ಗೊಡವೆಗೆ ಹೋಗದ ಇಂದಿನ ಮಕ್ಕಳು ವಿಜ್ಞಾನದ ಆವಿಷ್ಕಾರ ಗಳೊಳ ಹೊಕ್ಕು ಅತಿ ಜ್ಞಾನಿಗಳಾಗುತ್ತಾ ಸ್ವಾರ್ಥಿಗಳಾಗುತ್ತಿದ್ದಾರೆ.
ಇಂದಿನ ಮಕ್ಕಳಿಗೆ ಗೆಳೆಯರ ಒಡನಾಟಕ್ಕಿಂತ ಏಕಾಂತತೆ ಪ್ರಿಯವೆನಿಸುತ್ತದೆ.. ಕಾಡ ಹಣ್ಣುಗಳನ್ನು ಮಕ್ಕಳಿಗೆ ತಿನ್ನಿಸಲು ನಮಗೂ ಭಯ. ಫ್ರಿಡ್ಜ್ ನ ಹಣ್ಣು, ನೀರು ಜ್ಯೂಸ್ ಗಳೇ ಆಹಾರ. ಜತೆಗೆ ಆಗಾಗ ಅನಾರೋಗ್ಯವೂ ಕಟ್ಟಿಟ್ಟ ಬಿತ್ತಿ!
ನಮಗೋ ನಮ್ಮ ಬಾಲ್ಯದ ದಿನಗಳನ್ನು ನೆನಪಿಸಲಷ್ಟೇ ಸಂತಸ. ನಮ್ಮ ಮಕ್ಕಳಿಗೆ ಅಂತಹ ಅವಕಾಶ ಮಾಡಿಕೊಡುವ ಸಾಮರ್ಥ್ಯ ಧೈರ್ಯ ಗಳು ನಮಗಿಲ್ಲ. ನಾಲ್ಕು ಗೋಡೆಗಳ ಮಧ್ಯೆ ಬಂಧಿಗಳಾಗಿರುವ ಇಂದಿನ ಮಕ್ಕಳು ಬಂಧನದಿಂದ ಹೊರಬರಬೇಕಿದೆ.ಪ್ರಕೃತಿಯ ವಿಸ್ಮಯಗಳಿಗೆ ಕಣ್ಣಾಗಬೇಕಿದೆ ಕಿವಿಯಾಗಬೇಕಿದೆ. ಆನಂದಮಯ ಬಾಲ್ಯವನ್ನು ಅನುಭವಿಸಬೇಕಿದೆ.ಈ ನಿಟ್ಟಿನಲ್ಲಿ ಪೋಷಕರಾದ ನಮ್ಮ ಪ್ರಯತ್ನ ಖಂಡಿತಾ ಅಗತ್ಯವಿದೆ.
ನಮ್ಮ ಬಾಲ್ಯದ ದಿನಗಳಲ್ಲಿ ನಾವುಕಲಿತ ಜೀವನ ಪಾಠಗಳು ಇಂದಿಗೂ ನಮಗೆ ದಾರಿದೀಪ .ಆದುದರಿಂದಲೇ ಕ್ಷಮೆ ತಾಳ್ಮೆ ಸಹನೆ ಸಹಕಾರ ಮನೋಭಾವ ಮೊದಲಾದ ಗುಣಗಳು ನಮ್ಮಲ್ಲಡಗಿವೆ.ಇಂದಿನ ಮಕ್ಕಳು ಇವೆಲ್ಲವುಗಳಿಂದ ವಂಚಿತರಾಗಿ ಸ್ವಾರ್ಥದ ಗೂಡುಗಳಾಗುತ್ತಿದ್ದಾರೆ . ಇದಕ್ಕೆ ಪರ್ಯಾಯವಾಗಿ ವಿಶಾಲ ಆಟದ ಅಂಗಳ ವಿವಿಧ ಗೆಳೆಯ ಗೆಳತಿಯರ ಒಡನಾಟವನ್ನು ಅವರಿಗೆ ಕಲಿಸಬೇಕಿದೆ.
ನಾವೂ ಅಷ್ಟೇ ಕಳೆದು ಹೋದ ಬಾಲ್ಯದ ದಿನಗಳ ಸಂತಸವನ್ನು ಆಗಾಗ ಕನವರಿಸುತ್ತಾ ಸಂಭ್ರಮಪಡೋಣ. ಸಾಧ್ಯವಾದರೆ ಆ ನಿಷ್ಕಲ್ಮಶ ಹೃದಯದ ಪರಿಶುದ್ದ ಮನದ ಪುಟ್ಟ ಮಕ್ಕಳಂತಾಗೋಣ.ಚಿಂತೆಗಳನ್ನೆಲ್ಲ ಮರೆತು ಮತ್ತೆ ಕೇಕೆ ಹಾಕೋಣ.’ಅನುಭವಕ್ಕಿಂತ ಅನುಭವದ ನೆನಪು ಹೆಚ್ಚು ಸವಿ ‘ಅಲ್ಲವೇ? ಓ ಬಾಲ್ಯವೇ …ಒಂದು ಬಾರಿ ಒಂದೇ ಒಂದು ಬಾರಿ ಮತ್ತೆ ಬರಲಾರೆಯಾ….
ಪುಷ್ಪಲತಾ .ಎಂ
ಪದವೀಧರ ಸಹ ಶಿಕ್ಷಕಿ
ಸರಕಾರಿ ಪ್ರೌಢಶಾಲೆ ವಳಾಲು, ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.