ಅಮಾನವೀಯ ಆಚರಣೆಗಳಿಗೆ ಮಾತ್ರ ನಿರ್ಬಂಧ
Team Udayavani, Oct 20, 2017, 2:39 PM IST
ವಿ. ಕೃ. ಗೋಕಾಕರ ಭಾರತ ಸಿಂಧುರಶ್ಮಿ ಮಹಾ ಕಾವ್ಯದಲ್ಲಿ ಪ್ರಸ್ತಾಪಗೊಂಡಿರುವ ಪ್ರಸಂಗವೊಂದರಲ್ಲಿ ಯಮ ಯಮಿಯರ ಸಂವಾದ ನಡೆಯುತ್ತದೆ. ಅದರ ಸಾರಾಂಶವೇನೆಂದರೆ ಯಮ ತನ್ನ ತಂಗಿಯಾದ ಯಮಿಯನ್ನು ಪತ್ನಿಯನ್ನಾಗಿ ಸ್ವೀಕರಿಸಲು ನಿರಾಕರಿಸುವುದು. ಪ್ರಾಪ್ತ ವಯಸ್ಕಳಾದ ಯಮಿ ಆಚಾರದ ಪ್ರಕಾರ ಯಮ ತನ್ನ ಕ್ಷೇತ್ರದಲ್ಲಿ ಸಂತಾನ ಪಡೆಯುವಂತೆ ಆಹ್ವಾನಿಸುತ್ತಾಳೆ. ಯಮ ಅದು ಯುಕ್ತ ಆಚಾರವಲ್ಲವೆಂದು ಹೇಳುತ್ತಾನೆ. ಅದಕ್ಕೆ ಯಮಿ ಈ ಹಿಂದೆ ತಂಗಿಯರನ್ನು ವಿವಾಹ ಮಾಡಿಕೊಂಡು ಸಂತಾನ ಪಡೆದ ದೇವಾನುದೇವತೆಗಳು ಮತ್ತು ಋಷಿವರೇಣ್ಯರ ಹೆಸರುಗಳನ್ನು ಉಲ್ಲೇಖೀಸಿ, ಅವರೆಲ್ಲಾ ಆಚರಿಸಿದ್ದು ಯುಕ್ತವಲ್ಲದೇ ಇರಲು ಹೇಗೆ ಸಾಧ್ಯ ಎಂದು ಪ್ರಶ್ನಿಸುತ್ತಾಳೆ. ಅವಳ ವಾದಕ್ಕೆ ಮಣಿಯದ ಯಮ ಈ ಹಿಂದೆ ನಡೆದಿದ್ದು ಏನೇ ಇರಲಿ ಇನ್ನು ಮುಂದೆ ಸಹೋದರಿಯರನ್ನು, ಸಗೋತ್ರದವರನ್ನು ವಿವಾಹವಾಗುವುದು, ಸಂತಾನ ಪಡೆಯು ವುದು ನಿಷಿದ್ಧವೆಂದು ನಿಯಮ ಮಾಡುತ್ತಾನೆ. ಸಗೋತ್ರ ವಿವಾಹ ಅಲ್ಲಿಂದೀಚೆಗೆ ಅಮಾನ್ಯವೆಂಬ, ದಂಡನಾರ್ಹವೆಂಬ ಸಾಮಾಜಿಕ ನೀತಿ ಜಾರಿಗೊಳ್ಳುತ್ತದೆ.
ಸಗೋತ್ರ ವಿವಾಹ ನಿಷೇಧದ ಮಾದರಿಯಲ್ಲೇ ಲೈಂಗಿಕ ಸ್ವೇಚ್ಛೆಯ ಪದ್ಧತಿಯನ್ನು ಅಮಾನ್ಯಗೊಳಿಸಿದ ಪ್ರಸಂಗವೊಂದು ಪ್ರಾಚೀನ ಕಥನಗಳಲ್ಲಿ ನಮಗೆ ದೊರೆಯುತ್ತದೆ. ಉದ್ಧಾಲಕ ಆರುಣಿಯ ಆಶ್ರಮಕ್ಕೆ ಬಂದ ಆಗಂತುಕನೊಬ್ಬ ಆರುಣಿಯ ಪತ್ನಿಯ ಕೈಯನ್ನು ಹಿಡಿದು ಕಾಮಕ್ರಿಯೆಗೆ ಆಹ್ವಾನಿಸುತ್ತಾನೆ. ತನ್ನ ಕಣ್ಣೆದುರೇ ತನ್ನ ಪತ್ನಿಯನ್ನು ಪರಪುರುಷನೊಬ್ಬ ಲೈಂಗಿಕ ಕ್ರಿಯೆಗೆ ಆಹ್ವಾನಿಸಿದರೂ ಪ್ರಶ್ನಿಸದೇ ಇರುವ ತನ್ನ ತಂದೆಯ
ಮೌನವನ್ನು ಉದ್ಧಾಲಕ ಆರುಣಿಯ ಮಗ ಶ್ವೇತಕೇತು ಆಕ್ಷೇಪಿಸುತ್ತಾನೆ. ಇದರಲ್ಲಿ ತಪ್ಪೇನೂ ಇಲ್ಲವೆಂದೂ, ಇದು ಪ್ರಾಚೀನ ಆರ್ಷೇಯ ಆಚಾರವೆಂದೂ ಆರುಣಿ ತನ್ನ ಮಗನನ್ನು ಸಮಾಧಾನಪಡಿಸುತ್ತಾನೆ. ಇದನ್ನು ಒಪ್ಪದ ಶ್ವೇತಕೇತು ವಿವಾಹಿತ ಸ್ತ್ರೀಯರ ಜೊತೆ ಅವಳ ಗಂಡನಲ್ಲದೆ ಬೇರೆಯವರು ನಡೆಸುವ ಲೈಂಗಿಕಕ್ರಿಯೆ ಅನಾಚಾರವೆಂದೂ, ಅಂತಹ ನಡವಳಿಕೆಯನ್ನು ಇನ್ನು ಮುಂದೆ ಯಾರೂ ಅನುಸರಿಸಕೂಡದೆಂದು, ಹೆಣ್ಣು ಪಾತಿವ್ರತ್ಯ ಪಾಲಿಸಬೇಕೆಂದೂ ವಿಧಿಸುತ್ತಾನೆ. ಅಲ್ಲಿಂದಾಚೆಗೆ ಅದೊಂದು ಪವಿತ್ರ ಮೌಲ್ಯವೆಂಬಂತೆ ಆಚರಣೆಗೆ ಬರುತ್ತದೆ. ಇದನ್ನು ಮತ್ತೂಂದು ಉದಾಹರಣೆಯಿಂದಲೂ ನೋಡಬಹುದು. ಒಂದು ಕಾಲದಲ್ಲಿ ನಾಥಸಿದ್ಧ ಪಂಥದ ಅನುಯಾಯಿ
ಗಳಲ್ಲಿ ಪಂಚಮಕಾರಗಳೆಂಬ ವಸ್ತುಗಳ ಬಳಕೆ ಚಾಲ್ತಿಯಲ್ಲಿತ್ತು.
ಇದು ಪಂಥದೊಳಗೆ ಅನೀತಿ ಬೆಳೆಯಲು, ಪೂಜೆಯ ಹೆಸರಿನಲ್ಲಿ ಭೋಗಾಸಕ್ತಿ ಈಡೇರಿಸಿಕೊಳ್ಳುವ ಅಧೋಗತಿ ಕಾಣಿಸಿಕೊಳ್ಳಲು ಕಾರಣವಾಯಿತು. ಈ ಭೋಗಾಸಕ್ತಿಯ ಈಡೇರಿಕೆಗಾಗಿಯೇ ಶ್ರೀಮಂತರು, ರಾಜ ಮಹಾರಾಜರು ಈ ಪಂಥದ ಅನುಯಾಯಿಗಳಾಗುತ್ತಿದ್ದ ನಿದರ್ಶನಗಳೂ ಹೆಚ್ಚಾಗ ತೊಡಗಿದ್ದವು. ಮತ್ಸ್ಯೇಂದ್ರನಾಥನ ಕಾಲದಲ್ಲಿ ಇದು ಪರಾಕಾಷ್ಠೆ ಮುಟ್ಟಿತ್ತು ಎಂಬ ಮಾತಿದೆ. ಮತ್ಸ್ಯೇಂದ್ರನಾಥನ ಶಿಷ್ಯನಾದ ಗೋರಕ್ಷ ನಾಥನು ನಾಥ ಪಂಥದ ಆಚರಣೆಗಳಲ್ಲಿ ಮದ್ಯ, ಮೈಥುನದ ಬಳಕೆಯನ್ನು ನಿಷೇ ಧಿಸಿದ. ಬೇರೆ ಕೆಲವು ಕವಲು ಪಂಥಗಳಲ್ಲಿ ಅದು ಗುಪ್ತವಾಗಿ ಮುನ್ನಡೆಯಿತಾದರೂ ಅದರ ಬಹಿರಂಗ ಆಚರಣೆ ನಿಂತು ಹೋಯಿತು.
ಈ ನಿದರ್ಶನಗಳನ್ನು ನಾನು ಹೇಳಲು ಕಾರಣ ಸರ್ಕಾರ ಮಂಡಿಸಲು ಬಯಸಿರುವ ಮೌಢ್ಯನಿಷೇಧ ವಿಧೇಯಕದ ಬಗ್ಗೆ ಎದ್ದಿರುವ ವಾದ ವಿವಾದಗಳು. ಮೌಢ್ಯನಿಷೇಧ ವಿಧೇಯಕದಲ್ಲಿನ ಅಂಶಗಳು ಜನತೆಯ ಆಚರಣೆ, ನಂಬಿಕೆಗಳ ಮೇಲೆ ಪ್ರಹಾರ ಮಾಡುತ್ತಿದೆ ಎಂಬುದು ಕೆಲವರ ವಾದ. ಜನರ ನಂಬಿಕೆಗಳು, ಆಚರಣೆಗಳು ಮೊದಲಿಂದಲೂ ಇದ್ದ ಹಾಗೆಯೇ ಮುಂದುವರೆಯುವ ಶಕ್ಯತೆಯಿಲ್ಲ ಎಂಬುದನ್ನು ಮೇಲೆ ಕಾಣಿ
ಸಿದ ಉದಾಹರಣೆಗಳು ನಿದರ್ಶಿಸುತ್ತಿವೆ. ನಂಬಿಕೆ ಆಚರಣೆಗಳೆಲ್ಲ ಕಾಲಮಾನದ ಜೊತೆ ಬದಲಾಗುತ್ತಾ ನಡೆಯುವಂತಹವು. ಕೆಲವು ನಿಂತು ಹೋಗುತ್ತವೆ. ಕೆಲವು ರೂಪಾಂತರಗೊಳ್ಳುತ್ತವೆ.
ಕುಂಬಳ ಕಾಯಿ ಒಡೆಯುವುದು, ತಲೆ ಬೋಳಿಸಿಕೊಳ್ಳುವುದು, ಯಜ್ಞಕಾರ್ಯದಲ್ಲಿ ಪಶುಬಲಿಯ ಬದಲು ಪಶುವಿನ ಹಿಟ್ಟಿನ ಬೊಂಬೆಯನ್ನು ಬಳಸುವುದು ಮುಂತಾದವುಗಳೆಲ್ಲ ಹೀಗೆ ರೂಪಾಂತರಗೊಂಡ ಪ್ರಾಚೀನ ಆಚರಣೆಗಳಾಗಿವೆ. ಕಾಲಕಾಲಕ್ಕೆ ಮನುಷ್ಯ ಸಮಾಜದ ಸ್ವಭಾವದಲ್ಲಿ ಬಂದ ಎಚ್ಚರದ ಅನುಸಾರ ಕೆಲವು ನಂಬಿಕೆಗಳನ್ನು ನಿಯಂತ್ರಿಸಬೇಕಾಗುತ್ತದೆ. ಕೆಲವು ಆಚರಣೆಗಳನ್ನು ನಿಷೇಧಿ ಸಬೇಕಾಗುತ್ತದೆ. ಹಾಗೆ ನೋಡಿದರೆ ಈಗಿನ ಮೌಢ್ಯ ನಿಷೇಧ ವಿಧೇಯಕದಲ್ಲಿ ಜನರ ಭಕ್ತಿ ಆಚರಣೆಗಳನ್ನು, ಖಾಸಗಿ ನಂಬುಗೆಗಳನ್ನು ನಿರ್ಬಂಧಿಸುವ ಪ್ರಯತ್ನಗಳೇನೂ ಇಲ್ಲ. ಮಾಟ ಮಂತ್ರ, ಮಡೆ ಸ್ನಾನ ಮುಂತಾದ ಅಮಾನವೀಯ ಆಚರಣೆಗಳನ್ನು ಮಾತ್ರ ಅದು ನಿರ್ಬಂಧಿಸಿದೆ.
ಪರಿಣಾಮದ ದೃಷ್ಟಿಯಿಂದ ಹೇಳುವುದಾದರೆ ಇದು ತೀವ್ರಗಾಮಿ ಪರಿಣಾಮ ಬೀರುವ ಸಾಮರ್ಥ್ಯವನ್ನು ಹೊಂದಿಲ್ಲ. ಆದರೆ ಒಂದು ಆಚರಣೆ ಇತರರನ್ನು ಕೀಳುಗಳೆಯುವಂತಿದ್ದರೆ, ಮೋಸಗೊಳಿಸುವಂತಿದ್ದರೆ, ಭಯ ಹುಟ್ಟಿಸಿ ವಂಚಿಸುವಂತಿದ್ದರೆ ಅಂತಹದನ್ನು ನಿಷೇಧಿ ಸುವುದರಿಂದ ಜನರಿಗೆ ಒಳಿತೇ ಆಗುತ್ತದೆ. ಯಾಕೆಂದರೆ ನಮ್ಮ ಸಮಾಜದಲ್ಲಿ ಎಲ್ಲರ ಸಾಮಾಜಿಕ ಸ್ಥಾನಮಾನ, ಆರ್ಥಿಕ ಪರಿಸ್ಥಿತಿ, ವಿದ್ಯಾಭ್ಯಾಸದ ಮಟ್ಟ ಒಂದೇ ತೆರನಾಗಿಲ್ಲ. ಇಂತಹ ಸನ್ನಿವೇಶದಲ್ಲಿ ನಂಬಿಕೆ ಮತ್ತು ಆಚರಣೆಗಳ ಹೆಸರಲ್ಲಿ ಅವಮಾನಕ್ಕೀಡು ಮಾಡುವ, ವಂಚಿಸುವ, ಹೆದರಿಕೆ ಹುಟ್ಟಿಸಿ ತಮ್ಮ ಸ್ವಾರ್ಥ ಸಾಧಿಸಿಕೊಳ್ಳುವ ಅವಕಾಶಗಳು ಹೇರಳವಾಗಿವೆ. ಆದ್ದರಿಂದ ಮೌಢ್ಯನಿಷೇಧ ಈ ದಿಸೆಯಲ್ಲಿ ಮಾನವ ಸಂಸ್ಕೃತಿಯ ಶ್ರೇಯಸ್ಸನ್ನು ಆಶಿಸುವ ಮತ್ತೂಂದು ಹೆಜ್ಜೆಯಾಗಿದೆ.
*ಬಂಜಗೆರೆ ಜಯಪ್ರಕಾಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ
Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!
Padubidri: ಸ್ಕೂಟಿಗೆ ಈಚರ್ ವಾಹನ ಢಿಕ್ಕಿ; ಸವಾರನಿಗೆ ಗಾಯ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.