ಮಂದಿರ ನಿರ್ಮಾಣದ ಭಾಗ್ಯದ ಬಾಗಿಲು ತೆರೆಯುವುದೇ?
ನೂತನ ಇತಿಹಾಸದ ಪುಟ ತೆರೆಯಲಿರುವ ರಾಮ ಜನ್ಮಭೂಮಿ
Team Udayavani, Nov 5, 2019, 5:17 AM IST
ಜಗದಗಲದ ಹಿಂದೂ ಜನಮಾನಸದಲ್ಲಿ ಶ್ರದ್ಧಾಕೇಂದ್ರ ಬಿಂದು ಎನಿಸಿದ ಅಯೋಧ್ಯೆಯ 2.77 ಎಕರೆಯ “ಪುಟ್ಟ ನೆಲ’, ನ್ಯಾಯಾಲಯದ ಮೆಟ್ಟಿಲೇರಿದ ವಿವಾದಿತ ಕಿರು ಭೂ – ಪರಿಧಿ. ಅಲ್ಲಿ ಈಗಾಗಲೇ ಮುಗಿಲೆತ್ತರಕ್ಕೆ ತಲೆ ಎತ್ತಿನಿಂತ, ರಾಮ, ಸೀತೆ, ಲಕ್ಷ್ಮಣ, ಹನುಮಂತನ ಹತ್ತು ಹಲವು ಮಂದಿರಗಳಿವೆ. ಆದರೆ “ಶ್ರೀ ರಾಮಜನ್ಮಭೂಮಿ’ ಎಂಬ ಶ್ರದ್ಧಾ ಕೇಂದ್ರದ ಮಹತ್ವವನ್ನು ಪಡೆದ ಸ್ಥಳದಲ್ಲೇ ಕುಶ ಮಹಾರಾಜ ಭವ್ಯ ಮಂದಿರವನ್ನು ರಚಿಸಿ ಶ್ರೀ ರಾಮ ಪೂಜೆಗೈದ ಹಾಗೂ ಮುಂದೆ ಅದೇ ವಂಶದ 44ನೇ ರಾಜನಾದ ಬೃಹದ್ಬಲನವರೆಗೆ ಆ ಮಂದಿರ ಸುಸ್ಥಿತಿಯಲ್ಲಿತ್ತಂತೆ. ಸಾಮ್ರಾಟ್ ವಿಕ್ರಮಾದಿತ್ಯ ಶಿಥಿಲಗೊಂಡ ಆ ಮಂದಿರವನ್ನು ಏಳು ಅಂತಸ್ತಿನ ಬೃಹತ್ ಮಂದಿರವಾಗಿ ಪುನರ್ ನಿರ್ಮಿಸಿದ ಎನ್ನುವಲ್ಲಿ ಪುರಾಣ ಹಾಗೂ ಇತಿಹಾಸದ ಸಂಧಿಕಾಲ ಉಗಮಗೊಳ್ಳುತ್ತಿದೆ.
ಮೊಘಲರ ದಾಳಿಯ ಧೂಳು ಅಯೋಧ್ಯೆಗೆ ಮುಸುಕಿತು. ಬಾಬರನ ಸೇನಾಪತಿ ಮೀರ್ ಬಾಖೀ ಒಡೆದು ಹಾಕಿದ ಅದೇ ಜನ್ಮಭೂಮಿ ಮಂದಿರದ ಪಳೆಯುಳಿಕೆಗಳ ಮೇಲೆಯೇ ಮೂರು ಗುಂಬಜಗಳ ಕಟ್ಟಡ ನಿರ್ಮಿಸಿದ. ಈ ಬಗ್ಗೆ ವಿವರಗಳನ್ನು ಲಖನ್ ಗಜೇಟಿಯರ್‌ನಲ್ಲಿ ಪಾಶ್ಚಾತ್ಯ ಇತಿಹಾಸಕಾರ ಕನ್ನಿಂಗ್‌ಹ್ಯಾಮ್ ವಿವರಿಸಿದ್ದಾನೆ. ಅದೇ ರೀತಿ ಬಾಬರ್ ತನ್ನ “ಬಾಬರ್‌ನಾಮಾ’ ಗ್ರಂಥದಲ್ಲಿ 173ನೇ ಪುಟದಲ್ಲಿ “ಹಜರತ್ ಅಬ್ಟಾಸ್ ಮೂಸಾ ಕಲಂದರ್ ಸಾಹೇಬರ ಆಜ್ಞೆಯಂತೆ ಮಸೀದಿಯನ್ನು ಜನ್ಮಭೂಮಿಯ ಮಂದಿರ ಭಗ್ನಗೊಳಿಸಿ ರಚಿಸಿದ್ದೇನೆ’ ಎಂದು ಬರೆಸಿಕೊಂಡಿದ್ದಾನೆ. ಮುಂದೆ ಅಕºರ್, ಜಹಾಂಗೀರ್, ಶಹಜಹಾನ್ ಕಾಲದಲ್ಲಿ ಅಷ್ಟೇನೂ ಹೋರಾಟವಾದುದು ದಾಖಲಿತವಾಗಿಲ್ಲ. ಏಕೆಂದರೆ “ದಿವಾನ್- ಅಕºರೀ’ ಗ್ರಂಥದಲ್ಲಿ ಉಲ್ಲೇಖೀತವಾದಂತೆ ಅಕºರ್, ಜನ್ಮಭೂಮಿಯ ಮಸೀದಿಯ ಎದುರು ಸಣ್ಣ ರಾಮ ಮಂದಿರ ನಿರ್ಮಿಸಲು, ಹಿಂದೂಗಳ ಪೂಜಾ ಸಂಕೀರ್ತನೆಗೆ ಅಡ್ಡಿಯಾಗಬಾರದೆಂದು ಫರ್ಮಾನು ಹೊರಡಿಸಿದ್ದ. ಆದರೆ 1640ರಲ್ಲಿ ಔರಂಗಜೇಬ ದೆಹಲಿ ಗದ್ದುಗೆಯೇರಿದ ಬಳಿಕ ಕಾಶಿ, ಮಥುರಾ, ಅಯೋಧ್ಯೆಯ ಮೇಲಿನ ಪ್ರಹಾರ ದಾಖಲಿತಗೊಂಡಿತು.
ಮುಂದೆ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ವಿರುದ್ಧ ಘಟಿಸಿದ 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಫಲಶ್ರುತಿಯೇ ಎಂಬಂತೆ ಹಿಂದು-ಮುಸ್ಲಿಂ ಬಾಂಧವ್ಯ ಬೆಸೆಯಲಾರಂಭಿಸಿತು. ಮುಸಲ್ಮಾನ ನಾಯಕ ಅಮೀರ್ ಅಲೇ, ಸ್ವಾಮಿ ರಾಮಚರಣ ದಾಸರಿಗೆ ಸಂತಸದಿಂದ ರಾಮಜನ್ಮಭೂಮಿ ಒಪ್ಪಿಸಲು ಮುಂದಾದ “ಸುವರ್ಣ ಸಂಧಿ’ಯೊಂದು ಕುಡಿಯೊಡೆಯಿತು. ಈ ರಾಜಿ ಪ್ರಸ್ತಾಪದಿಂದ “ಬೆಚ್ಚಿಬಿದ್ದ’ ಬ್ರಿಟಿಷ್ ಸರಕಾರ 1858 ಮಾರ್ಚ್ 18ರಂದು ಜನ್ಮಭೂಮಿಯ ಸಮೀಪ “ಕುಬೇರ ಟೇಲಾ’ ಎಂಬಲ್ಲಿ ಬಹಿರಂಗವಾಗಿ ಅವರೀರ್ವರನ್ನೂ ಗಲ್ಲಿಗೇರಿಸಿತು. ಹೀಗೆ ಆ ಭೂಮಿ ಯನ್ನು ಎಂದೋ ಮರಳಿ ಹೊಂದುವ ಅವಕಾಶ ಹಿಂದುಗಳ ಪಾಲಿಗೆ ಇಲ್ಲವಾಯಿತು. 1528ರಿಂದ 1934ರವರೆಗೆ ಸುಮಾರು 76 ಬಾರಿ ಹಿಂದುಗಳು ಜನ್ಮಭೂಮಿ ವಿಮುಕ್ತಿಗಾಗಿ ಸೆಣಸಾಡಿದ್ದಾರೆ. 1934ರ ನಿರ್ಣಾಯಕ ಹೋರಾಟದಲ್ಲಿ ಜರ್ಝರಿತಗೊಂಡ ಆ ಕಟ್ಟಡವನ್ನು ಬಹುತೇಕ ನಿರ್ಮಿಸಿದುದು ಅಂದಿನ ಫೈಜಾಬಾದ್ ಜಿಲ್ಲಾಧಿಕಾರಿ ಜೆ.ವಿ. ನಿಕಲ್ಸನ್. 1992 ಡಿಸೆಂಬರ್ 6ರಂದು ಇಲ್ಲವಾದ 3 ಗುಂಬಜಗಳ ಹಳೆಯ ಕಟ್ಟಡದ ಹೆಸರು ಎಲ್ಲಾ ದಾಖಲಿತ ಇತಿಹಾಸದ ಅನ್ವಯ “ಜನ್ಮಸ್ಥಾನ್ ಮಸ್ಜಿದ್’ ಎಂಬುದಾಗಿದೆ. ಆದರೆ ತಥಾಕಥಿತ ಬುದ್ಧಿಜೀವಿಗಳು ಈ ಹೆಸರು ತ್ಯಜಿಸಿ, “ಬಾಬ್ರಿ ಮಸೀದಿ’ ಎಂದು 1986ರಿಂದ ಮರು ನಾಮಕರಣ ಮಾಡಿದ ಮೂಲ ಉದ್ದೇಶ ಸೂರ್ಯನ ಬೆಳಕಿನಷ್ಟೇ ಸುಸ್ಪಷ್ಟ. “ಜನ್ಮಸ್ಥಾನ್’ ಎಂದರೆ “ಯಾರ ಹುಟ್ಟು ಸ್ಥಳ’ ಎಂಬ ಪ್ರಶ್ನೆ ಸ್ಥಳನಾಮದಲ್ಲೇ ಹುಟ್ಟಿಕೊಳ್ಳುತ್ತದೆ ತಾನೆ? ಮೇಲಾಗಿ, 1992ರ ಕಾರ್ಯಾಚರಣೆಯಲ್ಲಿ ಇಲ್ಲವಾದ ಕಟ್ಟಡ ದಾಳಿ ಕೋರ ಬಾಬರ್ ನಿರ್ಮಿತ ಎನ್ನುವುದಕ್ಕಿಂತ ದುರುದ್ದೇಶಪೂರಿತ ಬ್ರಿಟಿಷ್ ಪುನರ್‌ರಚಿತ ಎಂಬುದು ಇಲ್ಲಿನ ಗಮನಾರ್ಹ ಅಂಶ.
1949 ಡಿಸೆಂಬರ್ 23ರಂದು ಮಧ್ಯರಾತ್ರಿ ತೊಟ್ಟಿಲಲ್ಲಿ ಪವಡಿಸಿದ ಪುಟ್ಟ ರಾಮನ ವಿಗ್ರಹ ಕಾಣಿಸಿಕೊಂಡಿತು. ಮರುದಿನ ಪ್ರಾತಃಕಾಲ ಸುದ್ದಿ ಪಸರಿಸುತ್ತಿದ್ದಂತೆಯೇ ಸುತ್ತುಮುತ್ತಲ ಹಳ್ಳಿಗಳಿಂದ ಸಹಸ್ರಾರು ಜನ ತಂಡೋಪತಂಡವಾಗಿ ಭಾವುಕತೆ ಯಿಂದ “ವಿರಾಜಮಾನ ರಾಮಲಲ್ಲಾ’ನಿಗೆ ಕೈಮುಗಿದು, ಸಾಷ್ಟಾಂಗ ಪ್ರಣಾಮಗೈಯ ಲಾರಂಭಿಸಿದರು. ಈ ಪಾಳು ಬಿದ್ದ ಗುಂಬಜಗಳ ಕಟ್ಟಡ 1949ರಲ್ಲಿ ಏಕಾಏಕಿ “ವಿವಾದಗ್ರಸ್ತ’ ಎಂಬುದಾಗಿಬಿಟ್ಟಿತು. ತಕ್ಷಣ ಆ ಮೂರ್ತಿ ಯನ್ನು ತೆಗೆಸಲು ಆದೇಶಿಸಿದ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಆಜ್ಞೆಯನ್ನು ಅಂದಿನ ಜಿಲ್ಲಾ ಕಲೆಕ್ಟರ್ ಕೆ.ಕೆ. ನಯ್ನಾರ್ ತಿರಸ್ಕರಿಸಿದರು. ಇದರಿಂದ ಕ್ಷುದ್ರಗೊಂಡ ಸರಕಾರ ಮೊದಲನೇ ಗುಂಬಜದ ಅಡಿಯಲ್ಲಿ ನೆಲೆಗೊಂಡ ರಾಮವಿಗ್ರಹದ ದರ್ಶನಕ್ಕೆ ಭದ್ರವಾದ ಬೀಗ ಜಡಿಯಿತು. ಪ್ರತಿದಿನ ಅರ್ಚಕರು ಮಾತ್ರ ಒಳ ಪ್ರವೇಶಿಸಿ, “ಸರಕಾರಿ ಖರ್ಚಿನಲ್ಲೆ’ ಪೂಜೆ ಮಾಡಲು ಅನುವುಗೊಳಿಸಿತು. ಸಾರ್ವ ಜನಿಕರನ್ನು ತಡೆಯಲು ನಿತ್ಯ ಕಾವಲು; ರಾಮಲಲ್ಲಾನಿಗೆ ಹೀಗೆ ಜನ್ಮ ಸ್ಥಳದಲ್ಲೇ ದಿಗ್ಬಂಧನ. ಈ ಕಟ್ಟಡದ ಸುತ್ತ 200 ಗಜಕ್ಕಿಂತ ಸಮೀಪ ಮುಸ್ಲಿಮರು ಸುಳಿಯಲು ಅನುಮತಿ ನಿರಾಕರಿಸಲಾಯಿತು.
ಜನ್ಮಭೂಮಿಯ ವಿವಾದಿತ ಸ್ಥಳದ ಹೊರ ವಲಯದಲ್ಲಿ ನಿರಂತರ ಭಜನೆ ಸಂಕೀರ್ತನೆ ನಡೆಯುತ್ತಾ ಇದ್ದಂತೆ ಇನ್ನೊಂದೆಡೆ ಹಿಂದುಗಳಿಗೆ ಮರಳಿ ರಾಮ ಜನ್ಮಭೂಮಿ ನೀಡಬೇಕೆಂಬ ಹಕ್ಕೊತ್ತಾಯದ ಯತ್ನದ ಕಾವು ಏರತೊಡಗಿತು. 1984 ಏಪ್ರಿಲ್ 7ರಂದು ದೆಹಲಿಯ ವಿಜ್ಞಾನ ಭವನದಲ್ಲಿನ ಪ್ರಪ್ರಥಮ “ಧರ್ಮ ಸಂಸತ್’ ಅಧಿವೇಶನದಲ್ಲಿ ಅಯೋಧ್ಯೆಯ ಮುಕ್ತಿಗೆ ಪ್ರಥಮ ಆದ್ಯತೆ ನೀಡಲು ಸಂತ ಮಹಂತರು ಒಕ್ಕೊರಲಿನಿಂದ ಘೋಷಿಸಿದರು. ವಿಶ್ವ ಹಿಂದೂ ಪರಿಷತ್ 1985 ಮಾರ್ಚ್ 25ರಂದು ಅಧ್ಯಕ್ಷ ಶಿವನಾಥ ಕಾಟುj , ಕಾರ್ಯದರ್ಶಿ ಹರಮೋಹನ ಲಾಲ್ ಹಾಗೂ ಅಂದಿನ ಸಹ ಕಾರ್ಯದರ್ಶಿ ಅಶೋಕ ಸಿಂಘಾಲ್ ಪ್ರಧಾನಿ ರಾಜೀವರನ್ನು ಭೇಟಿಯಾಗಿ ಜನ್ಮಭೂಮಿಯ ವಿಮುಕ್ತಿಗೆ ಮನವಿ ಒಪ್ಪಿಸಿದರು.
1985 ನವೆಂಬರ್ 30ರಂದು ಧರ್ಮ ಸಂಸತ್ತಿನ ದ್ವಿತೀಯ ಅಧಿವೇಶನ ಉಡುಪಿಯಲ್ಲಿ ಜರುಗಿದಾಗ, “ಮುಂದಿನ ಶಿವರಾತ್ರಿ ಯೊಳಗೆ ಅಯೋಧ್ಯೆಯ ದೇವಸನ್ನಿಧಿಯಲ್ಲಿ ರಾಮದರ್ಶನಕ್ಕೆ ಅನುವು ದೊರೆಯದಿದ್ದರೆ ಆತ್ಮಾಹುತಿಗೆ ಸಿದ್ಧ’ ಎಂಬುದಾಗಿ 50 ಸಾಧು ಸಂತರು ಪ್ರತಿಜ್ಞೆಗೈದರು. ಹೀಗೆ ಶ್ರೀ ಕೃಷ್ಣ ಸನ್ನಿಧಿಯ “ತಾಲಾ – ಖೋಲೋ’ ಚಳವಳಿಯ ಕಾವು ಏರುತ್ತಿದ್ದಂತೆಯೇ
1986 ಫೆಬ್ರವರಿ 1ರಂದು ಮುಕ್ತ ಅವಕಾಶಕ್ಕೆ ಜಿಲ್ಲಾ ನ್ಯಾಯಾಲಯ ಆಜ್ಞಾಪಿಸಿತು. ಇದೇ ಕಾಲಘಟ್ಟದಲ್ಲಿ ಸಯ್ಯದ್ ಶಹಬುದ್ದೀನ್ “ಬಾಬ್ರಿ ಮಸೀದಿ ಕ್ರಿಯಾ ಸಮಿತಿ’ ಎಂದು ಹೊಸ ಸಂಸ್ಥೆ ಹುಟ್ಟು ಹಾಕಿದುದು.
1949ರಲ್ಲಿ ಸ್ಥಾಪನೆಗೊಂಡು, ಪೂಜಾದಿಗಳು ನಡೆಯುತ್ತಲೇ ಇದ್ದ “ಶ್ರೀ ರಾಮಲಲ್ಲಾ’ ಮುಂದೆ 1986ರಿಂದ 1992 ಡಿ.6ರವರೆಗೆ ಅದೇ ಶಿಥಿಲಗೊಂಡ ಕಟ್ಟಡದಲ್ಲಿ ದರ್ಶನ ಭಾಗ್ಯ ನೀಡುತ್ತಿದ್ದುದು ವಾಸ್ತವಿ ಕತೆ. ಸ್ವತಃ ಪ್ರಧಾನಿ ವಿ.ಪಿ. ಸಿಂಗ್ ವಿವಾದಿತ ಸ್ಥಳಕ್ಕೆ ಆಗಮಿಸಿ ಶ್ರೀರಾಮದರ್ಶನ ಪಡೆದು, ಮಿಠಾಯಿ ಪ್ರಸಾದ ಸ್ವೀಕರಿಸಿ “ಅರೆ, ಮಸ್ಜಿದ್ ಹೈ ಹೀ ಕಹಾಂ? ವೋ ತೋ ರಾಮ್‌ಲಲ್ಲಾ ಕಾ ಮಂದಿರ್ ಹೀ ಹೈ’ ಎಂದು ಉದ್ಗರಿಸಿದ್ದರು. ಇದೇ ಪ್ರಶ್ನೆ ಕೇಂದ್ರ ಗೃಹ ಸಚಿವ ಎಸ್.ಬಿ. ಚವ್ಹಾಣರಿಗೂ ಕಾಡಿದ್ದರೂ, “ಗುಂಬಜಕ್ಕೆ ಒಂದಿಷ್ಟು ಹಾನಿ ಯಾದರೂ, ಕೇವಲ 8 ನಿಮಿಷದೊಳಗೆ ಫೈಜಾಬಾದ್‌ನಿಂದ ಕ್ಷಿಪ್ರ ಪಡೆ ಧಾವಿಸಲಿದೆ’ ಎಂದು ಸಂಸತ್ತಿನಲ್ಲಿ ಗುಡುಗಿದ್ದರು.
ಸ್ವತಃ ಉ.ಪ್ರದೇಶ ಸರಕಾರದ ಖರ್ಚಿನಲ್ಲೇ ರಾಮಲಲ್ಲಾ ಪೂಜಾದಿಗಳು ನಡೆಯುತ್ತಿದ್ದರೂ.”ಬಾಬ್ರಿ ಮಸೀದಿ’ಯೆಡೆಗೆ ಒಂದು ಹಕ್ಕಿಯೂ ಹಾರುವಂತಿಲ್ಲ ಎಂಬ ದ್ವಿಮುಖ ನೀತಿಯನ್ನು ಮುಲಾಯಂ ಕೂಡಾ ಪ್ರದರ್ಶಿಸಿದ್ದರು. 1987ರ ಏಪ್ರಿಲ್ 14ರಂದು ಅಯೋಧ್ಯೆಯಲ್ಲಿ ಸಂಭ್ರಮದ ರಾಮನವಮಿ ಆಚರಿಸಲಾಯಿತು. ಶ್ರೀ ರಾಮ ಜಾನಕಿ ರಥ ಯಾತ್ರೆ, 1989ರ ವೈಭವದ 2,97,705 ಸ್ಥಾನಗಳ ಹಾಗೂ 39 ವಿದೇಶಗಳಲ್ಲಿನ ರಾಮ ಶಿಲಾಪೂಜನ, ಸಾಕಷ್ಟು ಜನಜಾಗೃತಿ ನಿರ್ಮಿಸಿತು. 1989 ನವೆಂಬರ್ 9ರಂದು ಮಧ್ಯಾಹ್ನ 1.55ಕ್ಕೆ ಶ್ರೀ ರಾಮಮಂದಿರ ಶಿಲಾನ್ಯಾಸ ಜರುಗಿತು. 1990 ಸೆಪ್ಟೆಂಬರ್ 1ರಂದು ಅರಣಿ ಮಥನದಿಂದ ಪ್ರಜ್ವಲಿಸಿದ ಶ್ರೀ ರಾಮ ಜ್ಯೋತಿ 5 ಲಕ್ಷ ಹಳ್ಳಿಗಳಿಗೆ ತಲುಪಿ ಆ ವರ್ಷದ ದೀಪಾವಳಿಯನ್ನು ಅಭೂತಪೂರ್ವವನ್ನಾಗಿಸಿತು. 1990 ಅಕ್ಟೋಬರ್ 30ರ ದೇವೋ ತ್ಥಾನ ದ್ವಾದಶಿಯಂದು ಬೇಲಿಯನ್ನೂ ಲೆಕ್ಕಿಸದೆ ಕರಸೇವಕರು ಗುಂಬಜವೇರಿ ಸಾಂಕೇತಿಕ ಕರಸೇವೆಯೊಂದಿಗೆ ಭಗವಾಧ್ವಜ ಹಾರಿಸಿ ಯೇಬಿಟ್ಟರು. ಬಿಗಿ ಭದ್ರತೆಯನ್ನು ಬೇಧಿಸಿ ಅಯೋಧ್ಯೆ ಪ್ರವೇಶಿಸಿದ ಲಕ್ಷಾಂತರ ಕರಸೇವಕರು ರಾಮದರ್ಶನಗೈಯ್ಯುವಲ್ಲಿ ಹೋರಾಟದ ಒಂದು ಘಟ್ಟ ಮುಕ್ತಾಯಗೊಂಡಿತು.
ಆ ಬಳಿಕವೂ ರಥಯಾತ್ರೆ ರಾಮ ಜ್ಯೋತಿ, ರಾಮಶಿಲಾ ಪೂಜನ, ಶ್ರೀ ರಾಮ ಪಾದುಕಾ ಮೆರವಣಿಗೆ – ಇವೆಲ್ಲಾ ನಿರುಪಯುಕ್ತ ಎಂಬ ಹತಾಶೆ ಹಿಂದೂ ಜನಮನದಲ್ಲಿ ಧುಮ್ಮಿಕ್ಕಲಾರಂಭಿಸಿದವು. ಇದರ ಫಲಶೃತಿಯೋ ಎಂಬಂತೆ 1992 ಡಿಸೆಂಬರ್ 6ರಂದು ಮೂರು ಗುಂಬಜಗಳ ಶಿಥಿಲ ಕಟ್ಟಡ ಧರಾಶಾಹಿಯಾಯಿತು. ಅದೇ ಜಾಗ ದಲ್ಲಿ ತಾತ್ಕಾಲಿಕ ಮಂದಿರದಲ್ಲಿ ಶ್ರೀ ರಾಮಲಲ್ಲಾನಿಗೆ ಅಂದೇ ರಾತ್ರಿ ಪೂಜೆ ಜರುಗಿತು. ಮರುದಿನ 40×40 ಅಡಿಯ ಸ್ಥಳ ಸಮತಟ್ಟು ಗೊಳಿಸಿ, ನ್ಯಾಯಾಲಯದ ಆದೇಶದಂತೆ ಪುಟ್ಟ
ರಾಮನ ಪುಟ್ಟ ದೇಗುಲದಲ್ಲಿನ ದರ್ಶನ ಭಾಗ್ಯ ಇಂದಿಗೂ ಲಭಿಸುತ್ತಿದೆ.
ಹೀಗೆ 2.77 ಎಕರೆಯ ತಲೆತಲಾಂತರದ ಆರಾಧನಾ ಹಕ್ಕಿನ, ನೂತನ ಎರಡು ಅಂತಸ್ತಿನ ಶ್ರೀ ರಾಮ ಮಂದಿರ ನಿರ್ಮಾಣದ ಭಾಗ್ಯದ ಬಾಗಿಲು ಸರ್ವೋಚ್ಚ ನ್ಯಾಯಾಲಯ ಮೂಲಕ ತೆರೆಯುವಂತಾಗಲು ವಿಶ್ವವೇ ಕಾದು ನಿಂತಿದೆ.
2010 ಸೆಪ್ಟೆಂಬರ್ 30ರ ಲಕ್ನೋ ಹೈಕೋರ್ಟಿನ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟಿಗೆ ಸಲ್ಲಿಸಲಾದ ಸುಮಾರು 17,000 ಪುಟಗಳ ದೇವನಾಗರಿ, ಉರ್ದು, ಪರ್ಷಿಯನ್ ಲಿಪಿಗಳ ದಾಖಲೆಯ ಆಂಗ್ಲ ಭಾಷಾ ತರ್ಜುಮೆ ಭಾರತೀಯ ಪುರಾತತ್ವ ಸಮೀಕ್ಷಣಾ ಸಂಸ್ಥೆಯ ಕೆನಡಾದ ಜಿಪಿಆರ್ ನೀಡಿದ ಅಂಶ, ಅದೇ ರೀತಿ ವಿರಾಜಮಾನ್ ರಾಮಲಲ್ಲಾ, ನಿರ್ಮೋಹಿ ಅಖಾಡಾ, ಸುನ್ನಿ ವಕ್ಫ್ ಬೋರ್ಡ್, ಪರವಾದ ವಾದ, ಪ್ರತಿವಾದ, ಲಿಖೀತ ಹೇಳಿಕೆ, ಸಂಧಾನ ಸಮಿತಿಯೊಂದರ ವರದಿ – ಈ ಎಲ್ಲಾ ಬೃಹತ್ ಅಂಶಗಳು ರಾಷ್ಟ್ರದ ಸರ್ವೋಚ್ಚ ನ್ಯಾಯಾಲಯದ ತಕ್ಕಡಿಯಲ್ಲಿದೆ.
– ಡಾ| ಪಿ. ಅನಂತಕೃಷ್ಣ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
ಹಾವೇರಿ-ಸಿದ್ದರಾಮಯ್ಯ ಪಂಜರದ ಗಿಳಿ: ಕೇಂದ್ರ ಸಚಿವ ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.