ನಮೋ 3 ವರ್ಷ: ಗಿಮಿಕ್‌ಗಳು ಇನ್ನು ಸಾಕು
Team Udayavani, May 27, 2017, 2:25 AM IST
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಆಡಳಿತಕ್ಕೆ ಬಂದು ಇದೀಗ ಮೂರು ವರ್ಷ ತುಂಬಿದೆ. ಬಹುನಿರೀಕ್ಷೆಗಳನ್ನು ಹುಟ್ಟಿಸಿ ಅಧಿಕಾರಕ್ಕೆ ಬಂದ ಈ ಸರಕಾರ, ದೇಶಾದ್ಯಂತ ಜನರಲ್ಲಿ ಹೊಸ ಹೊಸ ಆಕಾಂಕ್ಷೆಗಳನ್ನು ಬಿತ್ತಿದ್ದಲ್ಲದೆ, ಬಹುಚರ್ಚಿತವಾಗುವಂತೆಯೂ ಮಾಡಿದೆ. ಕಳೆದ ಮೂರು ವರ್ಷಗಳಲ್ಲಿ ಸರಕಾರ ಮಾಡಿದ್ದೇನು? ಎದ್ದದ್ದೆಲ್ಲಿ? ಬಿದ್ದಿದ್ದೆಲ್ಲಿ? ಈ ಕುರಿತಾಗಿ ರಾಜಕೀಯ ನಾಯಕರ ವಸ್ತುನಿಷ್ಠ ಅಭಿಪ್ರಾಯ ಇಲ್ಲಿದೆ.
ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಮೂರು ವರ್ಷಗಳಲ್ಲಿ ಪ್ರಧಾನಿ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಘೋಷಣೆಯೊಂದಿಗೆ ಮಾಡಿದ ಭಾಷಣಗಳು, ‘ಮನ್‌ಕಿ ಬಾತ್’ ಮೂಲಕ ಆಡಿದ ಮಾತುಗಳು ಕೇಳಲು ಹಿತವಾಗಿತ್ತು ಎನ್ನುವುದು ಬಿಟ್ಟರೆ ಬೇರೇನೂ ಆಗಿಲ್ಲ. ಚುನಾವಣೆಗೆ ಮುನ್ನ ಅವರು ದೇಶದ ಜನರ ಮುಂದಿಟ್ಟಿದ್ದ ಕನಸುಗಳು ನನಸಾಗಿಲ್ಲ. ದೇಶದ ಅಭಿವೃದ್ಧಿ ಮಾಡುವುದು ಎಂದರೆ ಕನಸುಗಳ ಮಾರ್ಕೆಟಿಂಗ್ ಮಾಡುವುದಲ್ಲ. ಭಯೋತ್ಪಾದನೆ ನಿಲ್ಲಲಿಲ್ಲ, ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಯಾಗಲಿಲ್ಲ, ರೈತರ ಆತ್ಮಹತ್ಯೆ ನಿಲ್ಲಲಿಲ್ಲ, ನಿರಂತರ ಬರಕ್ಕೆ ತುತ್ತಾದ ಕರ್ನಾಟಕದ ಬಗ್ಗೆ ಕೇಂದ್ರ ಸರ್ಕಾರ ಕರುಣೆ ತೋರಲಿಲ್ಲ. ಮಾತಿನ ಮೋಡಿ ಮೂಲಕ ‘ಐ ವಾಷ್’ ಹಾಗೂ ‘ಮೈಂಡ್ ವಾಷ್’ ಮಾಡುತ್ತಿರುವುದಷ್ಟೇ ಇವರ ಸಾಧನೆ. ಕೆಲವೇ ಆಯ್ದ ಕೈಗಾರಿಕೋದ್ಯಮಿಗಳ ಕಪಿ ಮುಷ್ಠಿಯಲ್ಲಿ ಕೇಂದ್ರ ಸರ್ಕಾರ ಸಿಲುಕಿದೆ. ಚುನಾವಣೆಗೆ ಮುಂಚೆ ಬಿಜೆಪಿ ಬಿಂಬಿಸಿಕೊಂಡಿದ್ದ ಪರಿ ನೋಡಿದರೆ ಇಡೀ ದೇಶದ ಸಮಗ್ರ ಚಿತ್ರಣ ಬದಲಾಗುತ್ತದೆ ಎಂದು ನಿರೀಕ್ಷಿಸಿದ್ದೇನೋ ಹೌದು. ಆದರೆ, ಸರ್ಕಾರ ಸಾಗಿ ಬಂದ ಹಾದಿ ನೋಡಿದರೆ ಯಾವುದೇ ಜಾದೂ ನಡೆಯಲಿಲ್ಲ. ‘ಒನ್ ಮ್ಯಾನ್’ ಶೋ ದೇಶದ ಜನರಿಗೂ ಅರ್ಥವಾಗಿದೆ. ಒಂದೇ ಮಾತಿನಲ್ಲಿ ಹೇಳುವುದಾದರೆ, ಮಂತ್ರಕ್ಕಿಂತ ಉಗುಳೇ ಹೆಚ್ಚು ಎಂಬ ನಾಣ್ಣುಡಿ ನೆನಪಾಗುತ್ತದೆ. ಮೂರು ಅಂಶಗಳನ್ನು ರಾಜ್ಯದ ಜನತೆ ಮುಂದಿಡುತ್ತೇನೆ. ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಯಿಂದ ರೈತರಿಗೆ ಪ್ರಯೋಜನವಾಗುತ್ತಿಲ್ಲ.
ಕರ್ನಾಟಕದಲ್ಲಿ ಕಳೆದ ವರ್ಷ 2500 ಕೋಟಿ ರೂ. ಪ್ರೀಮಿಯಂ ರೈತರು ಪಾವತಿಸಿದ್ದಾರೆ. ಆದರೆ, ಬೆಳೆನಷ್ಟಕ್ಕೆ ರೈತರಿಗೆ ವಿಮೆಕೊಟ್ಟಿಲ್ಲ. ದೇಶಾದ್ಯಂತ 80 ಸಾವಿರ ಕೋಟಿ ರೂ. ರೈತರಿಂದ ಪ್ರೀಮಿಯಂ ಪಾವತಿಯಾಗಿದೆ ಎಂಬ ಅಂದಾಜು ಇದೆ. ಹಾಗಾದರೆ, ಇಷ್ಟು ದೊಡ್ಡ ಮೊತ್ತ ಯಾರಿಗೆ ತಲುಪಿದೆ? ಕೇಂದ್ರ ಸರ್ಕಾರ ಒಪ್ಪಂದ ಮಾಡಿಕೊಂಡಿರುವ ಆ ವಿಮಾ ಕಂಪನಿಗೂ ಮೋದಿ ಅಥವಾ ಬಿಜೆಪಿಗೆ ಸಂಬಂಧ ಇದೆಯಾ ಎಂಬ ಅನುಮಾನವೂ ಇದೆ. ಸ್ಮಾರ್ಟ್ ಸಿಟಿ, ಅಮೃತ್ ಸಿಟಿ ಯೋಜನೆಗಳಡಿ ಕೇಂದ್ರ ಸರ್ಕಾರ ಕೊಡುವ ಹಣಕ್ಕಿಂತ ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳು ಭರಿಸುವ ಹಣವೇ ಹೆಚ್ಚು. ಆ ಯೋಜನೆಗೆ ಆಯ್ಕೆಯಾಗಬೇಕಾದರೆ ಕೊಳೆಗೇರಿ ಇರಬಾರದು, ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿರಬೇಕು ಎಂದೆಲ್ಲಾ ಷರತ್ತುಗಳಿವೆ. ಎಲ್ಲವೂ ಸರಿ ಇದ್ದರೆ ಯೋಜನೆ ಯಾಕೆ ಬೇಕು?
ಸ್ವಚ್ಛ ಭಾರತ್ ಬಗ್ಗೆ ದೊಡ್ಡದಾಗಿ ಹೇಳಿಕೊಳ್ಳುತ್ತಾರೆ. ಪ್ರಾರಂಭದಲ್ಲಿ ಗರಿ ಗರಿ ಬಟ್ಟೆ ಹಾಕಿಕೊಂಡು ಪೊರಕೆ ಹಿಡಿದು ಮಾಧ್ಯಮಗಳಿಗೆ ಪೋಸ್ ಕೊಟ್ಟಿದ್ದು ಬಿಟ್ಟರೆ ಏನೂ ಆಗಲಿಲ್ಲ. ಮುಂದಿನ 2 ವರ್ಷದಲ್ಲಾದರೂ ಮೋದಿ ‘ಗಿಮಿಕ್’ಗಳಿಗೆ ಒತ್ತುಕೊಡುವುದು ಬಿಟ್ಟು ಜನಸಾಮಾನ್ಯರ ಸಮಸ್ಯೆ ನಿವಾರಿಸಲು ಮುಂದಿನ ವರ್ಷಗಳಲ್ಲಿ ಪ್ರಯತ್ನಪಡಲಿ.
– ಎಚ್.ಡಿ.ಕುಮಾರಸ್ವಾಮಿ ; ಮಾಜಿ ಮುಖ್ಯಮಂತ್ರಿಗಳು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
Editorial: ಪಾಕ್ ಪ್ರೇರಿತ ಉಗ್ರರ ತಂತ್ರಕ್ಕೆ ಸೂಕ್ತ ಪ್ರತಿತಂತ್ರ ಈಗಿನ ತುರ್ತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.