ಹುತಾತ್ಮರ ರಕ್ತದಲ್ಲಿ ರಾಜಕೀಯ ಓಕುಳಿಯಾಟ
Team Udayavani, Feb 21, 2019, 12:30 AM IST
ಸತ್ತ ಯೋಧರ ಮಾಂಸದ ಮುದ್ದೆಗಳ ನಡುವೆ ಜನಿವಾರ, ಶಿವದಾರದ ಉತ್ಖನನ ಮಾಡುವುದಕ್ಕಿಂತ ನೀಚತನ, ಕೊಳಕು ಮನಸ್ಥಿತಿ ಇನ್ನೊಂದಿದೆಯೇ? ಇಂತಹ ಅಮಾನವೀಯ ಕೃತ್ಯಗಳಲ್ಲಿ ಚೆಲ್ಲಿದ ರಕ್ತದಲ್ಲೂ ರಾಜಕೀಯ, ಪಕ್ಷ, ಸಿದ್ಧಾಂತಗಳ ಪೋಸ್ಟರ್ ಬರೆಯುವ, ರಾಷ್ಟ್ರೀಯತೆ, ದೇಶಭಕ್ತಿ ಎಂದರೆ ಮುಳ್ಳು ಚುಚ್ಚಿದಂತೆ ಆಡುವ ಅತಿಬುದ್ಧಿವಂತರು ಭಾರತದ ಏಕತೆ, ಅಖಂಡತೆಯ ಅರ್ಥವನ್ನು ಈ ಯೋಧರ ಸಾವಿನ ಹಿನ್ನೆಲೆಯಲ್ಲಾದರೂ ತಿಳಿದುಕೊಳ್ಳಬೇಕಿತ್ತು.
ಕಳೆದ ವಾರ ದಕ್ಷಿಣ ಕಾಶ್ಮೀರದ ಪುಲ್ವಾಮಾದಲ್ಲಿ ಪಾಕ್ ಪ್ರಚೋದಿತ ಜೆಇಎಮ್ ಉಗ್ರರ ಸಂಚಿಗೆ ನಮ್ಮ ಹೆಮ್ಮೆಯ 44 ಸಿಆರ್‌ಪಿಎಫ್ ವೀರ ಯೋಧರು ಹುತಾತ್ಮರಾದ ನಂತರ ಮೋದಿಯನ್ನು ಟಾರ್ಗೆಟ್ ಮಾಡಿರುವ ನೂರಾರು ಬರಹಗಳು ಸಾಮಾಜಿಕ ಲತಾಣಗಳಲ್ಲಿ ಹರಿದಾಡುತ್ತಿವೆ. ಹಾಗೆಯೇ ಅದನ್ನು ವಿರೋಧಿಸಿ ಮೋದಿಯವರನ್ನು ಸಮರ್ಥಿಸಿದ ಸಾವಿರಾರು ದಿಟ್ಟ ಉತ್ತರಗಳೂ ಇವೆ. ಆದರೆ ವಿದ್ಯಾವಂತರೂ, ಪ್ರಜ್ಞಾವಂತರೂ ಆದ ನಮಗೆ ಯಾವ ಸಮಯದಲ್ಲಿ ಯಾವ ರೀತಿ ವರ್ತಿಸಬೇಕೆಂಬ ವಿವೇಕವಿಲ್ಲದೆ ಹೋದದ್ದೇ ಒಂದು ದುರಂತ.
ದೇಶದ ಹಲವು ಯೋಧರು ಉಗ್ರರ ದಾಳಿಗೆ ಹತರಾಗಿದ್ದಾರೆ ಎಂಬುದೇ ಒಂದು ದೊಡ್ಡ ಆಘಾತದ ಸಂಗತಿ. ಅಂತಹ ಸಮಯ ದಲ್ಲಿ ನಮ್ಮ ದೇಶಭಕ್ತಿ ಜಾಗೃತವಾಗಬೇಕು. ನಮ್ಮ ರಾಷ್ಟ್ರಪ್ರೇಮ ಉದ್ದೀಪನಗೊಳ್ಳಬೇಕು. ನಾವೆಲ್ಲಾ ಒಂದೇ ಎಂಬ ಭಾವನೆ ಮೂಡಬೇಕು. ಒಂದು ಸಾತ್ವಿಕ ಆಕ್ರೋಶ ನಮ್ಮ ರಕ್ತದಲ್ಲಿ ಹರಿಯ ಬೇಕು. ನಮ್ಮ ನರನಾಡಿಗಳು ಸೆಟೆದು ನಿಂತು ಈ ಕ್ಷಣ ಯಾವುದೇ ತ್ಯಾಗಕ್ಕೆ, ಬಲಿದಾನಕ್ಕೆ ಸಿದ್ಧ ಎಂಬ ಭಾವೋತ್ಕರ್ಷ ನಮ್ಮಲ್ಲಿ ಉಕ್ಕ ಬೇಕು. ನಮ್ಮನ್ನೇ ನಾವು ಒಂದು ಅಘೋಷಿತ ತುರ್ತುಪರಿಸ್ಥಿತಿಗೆ ಒಳಪಡಿಸಿಕೊಳ್ಳಬೇಕಿತ್ತು. ನಮ್ಮ ವೈಯಕ್ತಿಕ ರಾಜಕೀಯ ಚಪಲಗಳಿಗೆ, ವೈಯಕ್ತಿಕ ನಿಂದನೆಗೆ ಕಡಿವಾಣ ಹಾಕಿಕೊಳ್ಳಬೇಕಿತ್ತು. ಇದು ಕೇವಲ ಆ ಯೋಧರ ಕುಟುಂಬಗಳಿಗೆ ಆದ ನಷ್ಟವಲ್ಲ, ಇಡೀ ದೇಶಕ್ಕೆ ಆದ ಘೋರ ನಷ್ಟ, ಇತಿಹಾಸದ ಪುಟಗಳಲ್ಲಿ ದಾಖಲಾಗುವ ಮತ್ತೂಂದು ರಕ್ತಸಿಕ್ತ ಕರಾಳ ದುರಂತ. ನಮ್ಮೆಲ್ಲಾ ಸಂಯಮ, ಸಹನೆಯನ್ನು ಕೆದಕಿ ಘಾಸಿಗೊಳಿಸಿದ ಮರ್ಮಾಘಾತ. ನಮ್ಮ ಶಾಂತಿ ಮಾರ್ಗವನ್ನೇ ಅಣಕಿಸುವ ಕುತಂತ್ರ.
ನಮ್ಮ ಸರ್ಜಿಕಲ್ ಸ್ಟ್ರೈಕನ್ನೇ ಅಣಕಿಸುವ, ನಮ್ಮ ಸೈನಿಕರೇ ಅತ್ಯಾಚಾರಿಗಳು ಎಂದು ಅವಹೇಳನ ಮಾಡುವ, ಕೊನೆಗೆ ಇಂತಹ ಅಮಾನವೀಯ ಕೃತ್ಯಗಳಲ್ಲಿ ಚೆಲ್ಲಿದ ರಕ್ತದಲ್ಲೂ ರಾಜಕೀಯ, ಪಕ್ಷ, ಸಿದ್ಧಾಂತಗಳ ಪೋಸ್ಟರ್ ಬರೆಯುವ, ರಾಷ್ಟ್ರೀಯತೆ, ದೇಶಭಕ್ತಿ ಎಂದರೆ ಮುಳ್ಳು ಚುಚ್ಚಿದಂತೆ ಆಡುವ ಅತಿಬುದ್ಧಿವಂತರು ಭಾರತದ ಏಕತೆ, ಅಖಂಡತೆಯ ಅರ್ಥವನ್ನು ಈ ಯೋಧರ ಸಾವಿನ ಹಿನ್ನೆಲೆಯಲ್ಲಾದರೂ ತಿಳಿದುಕೊಳ್ಳಬೇಕಿತ್ತು.
ಆದರೆ ನಮ್ಮ ಕೆಲವು ಬುದ್ಧಿಜೀವಿಗಳು ಮತ್ತು ಜಾಲತಾಣ ಜೀವಿಗಳು ಮೋದಿಯವರನ್ನೇ ಈ ದೇಶದ ಶತ್ರು ಎಂಬಂತೆ ಬಿಂಬಿಸುತ್ತಾ ಶಾಂತಿ, ಸಂಧಾನದ ಉಪದೇಶ ಮಾಡಲು ಹೊರಟುಬಿಟ್ಟರು. ತಾಳ್ಮೆ ಎನ್ನುವುದು ಹೇಡಿತನವಾಗಬಾರದು, ಸಂಧಾನ ಎನ್ನುವುದು ಶರಣಾಗತಿಯಾಗಬಾರದು. ತಂತ್ರಕ್ಕೆ ಪ್ರತಿತಂತ್ರ ರೂಪಿಸುವುದು ಬಿಟ್ಟು ಶಾಂತಿ ಮಂತ್ರ ಹೇಳಬೇಕೇ? ಶಾಂತಿ ಮಂತ್ರಕ್ಕಿಂತ ಇಂತಹ ಸಂದರ್ಭಗಳಲ್ಲಿ ಮುಖ್ಯವಾಗುವುದು ಐಕ್ಯತೆಯ ಮಂತ್ರ. ದೇಶದ ಧರ್ಮ ಎನ್ನುವುದು ಮಾನವತೆಯನ್ನು ಮೀರಿದ ಮತಾಂಧತೆಯ ಅಧರ್ಮ ಯುದ್ಧವಾಗಬಾರದು.
ಯೋಧರ ಮನೆಯ ಸೊಡರು ಆರಿದ ಹೊಗೆ ಇನ್ನೂ ಉಸಿರುಕಟ್ಟಿಸುತ್ತಿದೆ. ಅವರ ಅಸ್ಥಿ ಪಶ್ಚಿಮವಾಹಿನಿ ತಲುಪುವ ಮುಂಚೆಯೇ ಹೆತ್ತವರ ಕಣ್ಣೀರವಾಹಿನಿಯಲ್ಲಿ ಕರಗಿ ಹೋಗುತ್ತಿವೆ. ಇಂತಹ ಸಂದರ್ಭದಲ್ಲಿ ಜೀವಪರರು ಎಂದು ಕರೆಸಿಕೊಳ್ಳುವ ಈ ಬುದ್ಧಿಜೀವಿಗಳೇ ಸೈನಿಕರ ಜೀವಕ್ಕೆ ಬೆಲೆಯೇ ಇಲ್ಲ ಎಂಬಂತೆ ನಡೆದುಕೊಂಡರೆ ಅದನ್ನು ಮನುಷ್ಯ ಧರ್ಮ ಎಂದು ಯಾರಾದರೂ ಕರೆಯಲು ಸಾಧ್ಯವಾ? ಪ್ರಜಾಪ್ರಭುತ್ವ ಮೌಲ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವೆಂದರೆ ದೇಶದ ಹಿತಾಸಕ್ತಿಯನ್ನೇ ಬಲಿಕೊಟ್ಟು ಪಡೆಯುವ ಸ್ವೇಚ್ಛೆಯಾ? ಗಾಂಧೀಜಿಯ ಅಹಿಂಸಾ ಮಾರ್ಗವನ್ನು ಖಂಡಿಸಿ ನೇತಾಜಿಯವರ ಕ್ರಾಂತಿಕಾರಿ ಮನೋಭಾವವನ್ನೇ ಬೆಂಬಲಿಸುವ ಹಲವು ಬುದ್ಧಿಜೀವಿಗಳು ಏಕಾಏಕಿ ಉಗ್ರರ ಪರ, ಪಾಕಿಸ್ತಾನದ ಪರ ಶಾಂತಿಮಂತ್ರ, ಸಂಧಾನಗಳ ಜಪ ಮಾಡುವುದೇಕೆ? ತಾಳ್ಮೆಯ ಪಾಠ ಹೇಳಿಕೊಡುವುದೇಕೆ? ಇವರ ಕ್ರಾಂತಿಯ ಮನೋಭಾವ ಕೇವಲ ಭಾತಿಯೇ? ಇದೆಂಥ ದ್ವಂದ್ವ ನೀತಿ?
ಇಂತಹ ದುರಂತಗಳು ಸಂಭವಿಸಿದಾಗ ಇಡೀ ವಿಶ್ವ ನಮ್ಮನ್ನು ಗಮನಿಸುತ್ತಿದೆ ಎಂಬ ಮಹತ್ತರವಾದ ಅಂಶವನ್ನೇ ನಮ್ಮಲ್ಲಿ ಬಹಳಷ್ಟು ಜನ ಮೇಧಾವಿಗಳು ಮರೆತು ಬಿಟ್ಟಿದ್ದಾರೆ. ತುರ್ತುಪರಿಸ್ಥಿತಿಯ ಅಥವಾ ಒಂದು ಆಘಾತಕರ ಸಂದರ್ಭವನ್ನು ಒಂದು ದೇಶ ಮತ್ತು ಅಲ್ಲಿನ ಜನ ಹೇಗೆ ನಿಭಾಯಿಸುತ್ತಾರೆ ಎಂಬುದರ ಮೇಲೆ ಆ ದೇಶದ ಜನರ ಅತಃಸ್ಸತ್ವ ಮತ್ತು ಗಟ್ಟಿತನ ನಿರೂಪಿತವಾಗುತ್ತದೆ. ಆದರೆ ಇಲ್ಲಿನ ಬಹಳಷ್ಟು ಜನ ಬುದ್ಧಿವಂತರು ಇದ್ದಬದ್ದ ಕೆಲಸ ಬಿಟ್ಟು ಮೋದಿಯವರ ವಿರುದ್ಧ ಆಕ್ರಮಣಕಾರಿ ಹೇಳಿಕೆಗಳನ್ನು ನೀಡಲು ಶುರು ಹಚ್ಚಿದರು. ಅಂಕಿ ಅಂಶಗಳನ್ನೆಲ್ಲಾ ಅಗೆದಗೆದು ಹುಡುಕಿ ಮೋದಿ ಅಸಮರ್ಥರು ಎನ್ನುವಂತೆ ಬಿಂಬಿಸುವ ಪ್ರಯತ್ನ ಮಾಡಿದರು. ದಿನದ 24 ಗಂಟೆ ನಮ್ಮ ತಲೆಕಾಯುವ ಸೈನಿಕರು ಇಡೀ ದಿನ ತಮ್ಮ ಕ್ಯಾಂಪ್‌ಗ್ಳ ಬಗ್ಗೆ, ದಾಳಿಗಳ ಬಗ್ಗೆ, ಕಾರ್ಯಾಚರಣೆಗಳ ಬಗ್ಗೆ ಮಾತಾಡುತ್ತಾರೆ. ಅಲ್ಲಿ ರಾಜಕೀಯ ಮತ್ತು ಹೆಂಗಸರ ವಿಷಯ ಮಾತಾಡುವುದು ನಿಷಿದ್ಧ. ಹಾಗೆ ಮಾತಾಡಿದರೆ ಅಂತಹವರಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗುತ್ತದೆ. ಆದರೆ ನಾವು ಒಂದು ದಿನದ ಮಟ್ಟಿಗೂ ಸೈನಿಕರಾಗಲಾಗುತ್ತಿಲ್ಲ. ಅವರ ಶಿಸ್ತನ್ನು ರೂಢಿಸಿಕೊಳ್ಳಲಾಗುತ್ತಿಲ್ಲ. ನಮ್ಮ ಕರ್ತವ್ಯಕ್ಕೆ ಗೌರವ ಕೊಡಲಾಗುತ್ತಿಲ್ಲ.
ನಮಗೆ ಕರ್ತವ್ಯದ ಮಾದರಿಗಳಾಗಿರುವ ಸೈನಿಕರು ಹುತಾತ್ಮರಾದಾಗ ನಾವು ಇನ್ನೂ ಹೆಚ್ಚು ರಾಜಕೀಯ ಮಾತನಾಡುತ್ತೇವೆ, ಕಾಲೆಳೆಯುತ್ತೇವೆ, ಕೆಸರೆರಚಾಟ ನಡೆಸುತ್ತೇವೆ. ಸೈನಿಕರು ಶ್ರದ್ಧೆ, ಭಕ್ತಿಯಿಂದ ನಿಷ್ಠರಾಗಿರುವ ಪ್ರಧಾನಮಂತ್ರಿ ಹುದ್ದೆಯನ್ನು ನಾವು ಅಗೌರವಿಸುತ್ತೇವೆ. ಪ್ರಧಾನಿ ಮೋದಿಯಾಗಿರಲಿ, ಅಥವಾ ಸಿಂಗ್ ಆಗಿರಲಿ, ನಮ್ಮ ಸೈನಿಕರ ಬಲಿದಾನವಾದಾಗ ನಾವು ತತ್‌ಕ್ಷಣ ಅವರ ಬೆಂಬಲಕ್ಕೆ ನಿಲ್ಲಬೇಕು. ಅವರಿಗೆ ಮಾನಸಿಕ ಹಾಗೂ ನೈತಿಕ ಸ್ಥೆçರ್ಯ ತುಂಬಬೇಕು. ಅದು ಆ ಹೊತ್ತಿನ ತುರ್ತು ಮತ್ತು ದೇಶಪ್ರೇಮದ ಅವಿಚ್ಛಿನ್ನ ನಡವಳಿಕೆ. ಇಲ್ಲವಾದಲ್ಲಿ ಇಲ್ಲಿರುವ ಉಗ್ರಗಾಮಿಗಳು ನಮ್ಮ ಒಡಕಿನ ದುರ್ಬಳಕೆ ಮಾಡಿಕೊಳ್ಳುತ್ತಾರೆ. ಆ ಸಂದೇಶವನ್ನು ಶತ್ರುರಾಷ್ಟ್ರಗಳಿಗೆ ರವಾನಿಸುತ್ತಾರೆ. ಇದು ಜಾಗತಿಕ ಮಟ್ಟದಲ್ಲಿ ನಮ್ಮನ್ನೇ ನಾವು ಅವಮಾನ ಮಾಡಿಕೊಂಡಂತೆ, ನಮ್ಮ ದೌರ್ಬಲ್ಯ, ಒಡಕುಗಳನ್ನು ಅವರಿಗೆ ತೋರಿಸಿಕೊಟ್ಟಂತೆ ಅಲ್ಲವೇ?
ನಮ್ಮ ಆತ್ಮಸ್ಥೆçರ್ಯ, ನಮ್ಮ ಸೈನಿಕರ ಆತ್ಮಸ್ಥೈರ್ಯವನ್ನು ನಾವೇ ಕುಗ್ಗಿಸಿದಂತೆ ಅಲ್ಲವೇ? ಸತ್ತ ಯೋಧರ ಅಸ್ತಿಭಾರವೇ ಇಲ್ಲದಿರುವಾಗ ಅವರ ಮಾಂಸದ ಮುದ್ದೆಗಳ ನಡುವೆ ಜನಿವಾರ, ಶಿವದಾರದ ಉತ್ಖನನ ಮಾಡುವುದಕ್ಕಿಂತ ನೀಚತನ, ಕೊಳಕು ಮನಸ್ಥಿತಿ ಇನ್ನೊಂದಿದೆಯೇ? ಇತಿಹಾಸದಲ್ಲಿ ಯಾರೂ ತಪ್ಪೇ ಮಾಡಿಲ್ಲವೇ? ಜಮ್ಮು ಮತ್ತು ಕಾಶ್ಮೀರ ಹೊತ್ತಿ ಉರಿಯಲು ಹಿಂದಿನ ಆಡಳಿತಗಾರರ ದಕ್ಷವಲ್ಲದ ಆಡಳಿತ ನೀತಿ, ರಾಜತಾಂತ್ರಿಕ ನೈಪುಣ್ಯ ಹಾಗೂ ದೂರದೃಷ್ಟಿಯ ಕೊರತೆ ಮತ್ತು ಸೈನ್ಯದ ಶಕ್ತಿಯನ್ನು ಅವಗಣನೆ ಮಾಡಿದ್ದು ಮುಖ್ಯ ಕಾರಣಗಳು. ನೆಹರೂ ಅವರ ದೂರದೃಷ್ಟಿಯ ಕೊರತೆ, ಅಲಿಪ್ತ ನೀತಿಯ ಪ್ರತಿಪಾದನೆ, ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಎಡವಿದ್ದು, ಅಸಮರ್ಪಕ ರಾಜತಾಂತ್ರಿಕತೆ ಇಂದು ನೂರಾರು ಸೈನಿಕರ ಬಲಿದಾನಕ್ಕೆ ಕಾರಣವಾಗಿದೆ ಎಂಬ ಸತ್ಯ ನಮ್ಮ ಬುದ್ಧಿಜೀವಿಗಳಿಗೆ ಗೊತ್ತಿಲ್ಲವೇ?
1947ರಲ್ಲಿ ಪಾಕ್ ಸೇನೆ ಮುಜಾಫರ್‌ನಗರವನ್ನು ಆಕ್ರಮಿಸ ದಂತೆ ನಮ್ಮ ಸೇನೆ ಹೊರಟಾಗ ಭಾರತ ಸರ್ಕಾರ ಅದನ್ನು ಪೂಂಚ್‌ನ ಗಲಭೆ ನಿಯಂತ್ರಿಸಲು ಕಳುಹಿಸಿದ್ದು ಅತಿ ದೊಡ್ಡ ತಪ್ಪು. ಪೂಂಚ್‌ನ ಗಲಭೆ ನಿಯಂತ್ರಿಸುವ ಬದಲು ಸೈನ್ಯಕ್ಕೆ ಮುಜಾಫರ್ ನಗರವನ್ನು ಆಕ್ರಮಿಸಿಕೊಳ್ಳಲು ಅವಕಾಶ ನೀಡಿದ್ದರೆ ಇವತ್ತು ಪಾಕ್ ಆಕ್ರಮಿತ ಕಾಶ್ಮೀರ ನಮ್ಮ ವಶದಲ್ಲಿರುತ್ತಿತ್ತು. ನಂತರ ಜನರಲ್ ಕಾರ್ಯಪ್ಪ ಈ ಪ್ರದೇಶವನ್ನು ವಾಪಸ್ ವಶಪಡಿಸಿಕೊಳ್ಳುವ ಇರಾದೆ ವ್ಯಕ್ತಪಡಿಸಿ ದಾಗಲೂ ಭಾರತ ಸರ್ಕಾರ ಅವರಿಗೆ ಅಂತಹ ಅವಕಾಶವನ್ನೇ ಕೊಡಲಿಲ್ಲ. ಸೇನಾ ಮುಖ್ಯಸ್ಥರ ಹಾಗೂ ಹಲವು ರಾಜಕೀಯ ನಾಯಕರ ತೀವ್ರ ವಿರೋಧದ ನಡುವೆಯೂ ಜಮ್ಮು ಮತ್ತು ಕಾಶ್ಮೀರ ಸಮಸ್ಯೆಯನ್ನು ಚಾಪ್ಟರ್ 7ರ ಬದಲು ಚಾಪ್ಟರ್ 6ರ ಅಡಿ ವಿವಾದಿತ ಪ್ರದೇಶ ಎಂದು ತಪ್ಪಾಗಿ ವಿಶ್ವಸಂಸ್ಥೆಗೆ ದೂರು ನೀಡಿದ್ದೇ ಘೋರ ದುರಂತಕ್ಕೆ ಕಾರಣವಾಯಿತು.
ವಿಶ್ವಸಂಸ್ಥೆಯ ಒಪ್ಪಂದಗಳ ಪ್ರಕಾರ ಎರಡೂ ರಾಷ್ಟ್ರಗಳು ಸೀಸ್‌ಫೈರ್ ನೀತಿ ಅನುಸರಿಸಬೇಕಿದ್ದರೂ ಪಾಕಿಸ್ತಾನ ಮಾತ್ರ ಉಗ್ರರ ಮೂಲಕ ಪ್ರಚೋದಿತ ದಾಳಿ ನಡೆಸುತ್ತಲೇ ಇದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ನಾಗರಿಕರನ್ನು ತೆರವುಗೊಳಿಸಿ ಅಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೇನೆಯ ಉಸ್ತುವಾರಿ ನಡೆಸಬೇಕಿತ್ತು. ಆದರೆ ನೆಹರು ಎಂದಿಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಂತಹ ಒಂದು ತೆರವುಗೊಳಿಸುವಿಕೆಗೆ ಒತ್ತಡ ಹಾಕಲೇ ಇಲ್ಲ. ಅದರ ಪರಿಣಾಮವಾಗಿ ಈಗ ಬಲೂಚಿಸ್ತಾನ, ಪಂಜಾಬ್, ಸಿಂಧ್ ಪ್ರಾಂತ್ಯಗಳಿಂದ ಲಕ್ಷಾಂತರ ಜನ ಬಂದು ಅಲ್ಲಿ ನೆಲೆಸಿದ್ದಾರೆ. ಈಗ ಅವರನ್ನು ತೆರವುಗೊಳಿಸುವುದು ಸಾಧ್ಯವೇ ಇಲ್ಲ. ಪಾಕಿಸ್ತಾನ ಗಿಲಿYಟ್-ಬಾಲ್ಟಿಸ್ತಾನ್ ಪ್ರದೇಶಗಳನ್ನು ಒಳಗೊಂಡಂತೆ ಉತ್ತರ ಪ್ರಾಂತ್ಯ ರಚಿಸಿ ಈ ಭಾಗಗಳನ್ನು ಪಾಕ್ ಆಕ್ರಮಿತ ಪ್ರದೇಶಕ್ಕೆ ಸೇರಿದ್ದಲ್ಲ ಎಂಬಂತೆ ಬಿಂಬಿಸಹೊರಟಿದೆ.
1971ರಲ್ಲಿ ಬಾಂಗ್ಲಾ ಉದಯಿಸಿದ ಸಂದರ್ಭದಲ್ಲಿ ಒತ್ತೆಯಾಳುಗಳಾಗಿ ಸೆರೆಸಿಕ್ಕಿದ್ದ 93 ಸಾವಿರ ಸೈನಿಕರನ್ನು ಭುಟ್ಟೋ ಮಾತು ನಂಬಿ ಬೇಷರತ್ತಾಗಿ ಬಿಡುಗಡೆ ಮಾಡಿದ ಭಾರತ ಆಡಳಿತದ ಅತ್ಯಂತ ಕೆಟ್ಟ ನಿರ್ಧಾರ ಇಂದಿನ ದುರ್ಗತಿಗೆ ಮುಖ್ಯ ಕಾರಣ ಎಂದು ನಿವೃತ್ತ ಲೆಫ್ಟಿನೆಂಟ್ ಜನರಲ್ ಪಿ.ಜಿ. ಕಾಮತ್ ಹೇಳುತ್ತಾರೆ. ಈ ಸತ್ಯಗಳನ್ನೆಲ್ಲಾ ಮುಚ್ಚಿಟ್ಟು ನಮ್ಮ ಬುದ್ಧಿಜೀವಿಗಳು ಹುತಾತ್ಮ ಸೈನಿಕರ ರಕ್ತದಲ್ಲಿ ರಾಜಕೀಯ ಓಕುಳಿಯಾಟ ಆಡಲು ಹೊರಟಿರುವುದು ಎಷ್ಟರ ಮಟ್ಟಿನ ನೈತಿಕತೆ?
ಒಬ್ಬರು ಈ ವಿಷಯದ ಕುರಿತು ಜನಮತಗಣನೆ ನಡೆಯಬೇಕು ಎಂದೂ ಅಪ್ಪಣೆ ಕೊಟ್ಟಿದ್ದಾರೆ. ಪಿಇಡಬ್ಲ್ಯು ವರದಿಯ ಪ್ರಕಾರ ಶೇ.76ರಷ್ಟು ದೇಶದ ಜನ ಈಗಿನ ಭಾರತ ಸರ್ಕಾರ ಭಯೋತ್ಪಾದನೆ ನಿಗ್ರಹದಲ್ಲಿ ತೆಗೆದುಕೊಂಡಿರುವ ಕ್ರಮಗಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಶೇ.65ಕ್ಕೂ ಹೆಚ್ಚು ಜನ ಜಮ್ಮು ಮತ್ತು ಕಾಶ್ಮೀರ ಸಮಸ್ಯೆಯ ನಿರ್ವಹಣೆ ಕುರಿತು ಸಹಮತ ವ್ಯಕ್ತಪಡಿಸಿದ್ದಾರೆ. ಇನ್ಯಾವ ಜನಮತಗಣನೆ ಬೇಕು?
ನಿವೃತ್ತ ಯೋಧರೊಬ್ಬರು ಹೇಳುತ್ತಾರೆ: “ಎಷ್ಟೋ ವರ್ಷಗಳು ಪ್ರತಿದಿನ, ನಾವು ಸೈನಿಕರಾ? ಇದು ನಾವು ಈ ಪರಿಸ್ಥಿತಿಯಲ್ಲಿ ನಡೆದುಕೊಳ್ಳಬೇಕಾದ ರೀತಿಯಾ? ಸೈನಿಕರಂತೆ ನಾವೇಕೆ ನಟಿಸುತ್ತಿದ್ದೇವೆ ಎಂದು ನಮ್ಮನ್ನು ನಾವೇ ಕೇಳಿಕೊಂಡಿದ್ದೇವೆ. ಮೋದಿಯವರು ಪ್ರಧಾನಿಯಾದ ನಂತರ ನಮಗೆ ನಾವು ಸೈನಿಕರೆಂಬ ಆತ್ಮವಿಶ್ವಾಸ ಮೂಡಿದೆ, ನಾವು ಸೈನಿಕರಂತೆ ನಡೆದುಕೊಳ್ಳುತ್ತಿದ್ದೇವೆ, ಮುಖ್ಯವಾಗಿ ಎಂತಹ ಸಂದರ್ಭದಲ್ಲೂ ಸೈನಿಕರಂತೆ ಹೆಮ್ಮೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದೇವೆ.’
ಇಂತಹ ನೈತಿಕತೆ, ಆತ್ಮವಿಶ್ವಾಸ ಮತ್ತು ಘನತೆಯನ್ನು ನಾವು ನಮ್ಮ ಯೋಧರಲ್ಲಿ ತುಂಬಬೇಕಲ್ಲವೇ?
ತುರುವೇಕೆರೆ ಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.