ರಾಜಕೀಯದ ಸೀಟು ಹಂಚಿಕೆಯೂ ಕರ್ಮ ಸಿದ್ಧಾಂತವೂ…
Team Udayavani, Apr 13, 2019, 6:00 AM IST
ಚುನಾವಣೆ ಬಂತೆಂದರೆ ಎಲ್ಲ ಪಕ್ಷಗಳ ನಾಯಕರ ಬಾಯಲ್ಲೂ “ಕಾರ್ಯಕರ್ತರೇ ಪಕ್ಷದ ಜೀವಾಳ. ಕಾರ್ಯಕರ್ತರೇ ನಮ್ಮ ಪಕ್ಷದ ಆಸ್ತಿ, ಕಾರ್ಯಕರ್ತರಿಂದಲೇ ನಾವಿರುವುದು. ನಾವು ಗೆದ್ದಾಗ ನಿಮ್ಮ ಋಣವನ್ನು ತೀರಿಸದೆ ಇರಲಾರೆ’ ಎಂಬಂತಹ ಪುಂಖಾನುಪುಂಖ ವರ್ಣರಂಜಿತ ಮಾತುಗಳನ್ನು ಕೇಳದ ಕಾರ್ಯಕರ್ತರೇ ಇಲ್ಲ. ಬಹಳ ಹಿಂದೆ “ದೇವದುರ್ಲಭ ಕಾರ್ಯಕರ್ತರು’ ಎಂಬ ಘೋಷಣೆ ಇತ್ತು.
ಆದರೆ ವಾಸ್ತವದಲ್ಲಿ ಇಂತಹ ವರ್ಣರಂಜಿತ ಮಾತುಗಳು ಪೊಳ್ಳು ಎಂದೆನಿಸುತ್ತದೆ, ಕಾರ್ಯಕರ್ತರು “ದೇವದುರ್ಲಭ’ರಲ್ಲ, “ದುರ್ಬಲ’ರು ಎನ್ನುವುದು ಅರಿವಿಗೆ ಬರುತ್ತದೆ.
ತ್ರಿಪಕ್ಷಗಳ ತ್ರಿಶಂಕು ಕಾರ್ಯಕರ್ತರು: ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಮೂರೂ ಪಕ್ಷಗಳ ಸ್ಥಿತಿಯನ್ನು ನೋಡಿ. ಕಾರ್ಯಕರ್ತರು ಬಿಜೆಪಿಯ ಶೋಭಾ ಕರಂದ್ಲಾಜೆಯವರನ್ನು ಬೇಡವೆಂದರು, ಜಯಪ್ರಕಾಶ್ ಹೆಗ್ಡೆಯವರನ್ನು ಬೇಕೆಂದರು. ಇಲ್ಲಿ ಸ್ಥಾನ ಸಿಕ್ಕಿದ್ದು ಶೋಭಾ ಕರಂದ್ಲಾಜೆಯವರಿಗೆ. ಒಂದೇ ಒಂದು ಗ್ರಾ.ಪಂ. ಸ್ಥಾನ ಇಲ್ಲದ ಜೆಡಿಎಸ್‌ಗೆ ಈ ಕ್ಷೇತ್ರವನ್ನು ಬಿಟ್ಟುಕೊಡಬೇಡಿ ಎಂದು ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಜಿಲ್ಲಾ ಕಾಂಗ್ರೆಸ್ ಸಮಿತಿ ಪಕ್ಷದ ಹೈಕಮಾಂಡ್‌ಗೆ ಅಂಗಲಾಚಿ ಮನವಿ ಮಾಡಿತು. ಈ ಮನವಿಗೆ ಹೈಕಮಾಂಡ್‌ನಿಂದ ಯಾವುದೇ ಮಾನ್ಯತೆ ಸಿಗಲಿಲ್ಲ. ಏತನ್ಮಧ್ಯೆ ಕಾಂಗ್ರೆಸ್ ನಾಯಕ ಪ್ರಮೋದ್ ಮಧ್ವರಾಜ್ ಅವರು ಜೆಡಿಎಸ್ ಟಿಕೆಟ್‌ನಡಿ ಎರಡೂ ಪಕ್ಷಗಳ ಮೈತ್ರಿ ಅಭ್ಯರ್ಥಿ ಎಂದು ಘೋಷಣೆಯಾಯಿತು. ಜೆಡಿಎಸ್ ಹೇಳಹೆಸರಿಲ್ಲದ ಉಡುಪಿ ಜಿಲ್ಲೆಯಲ್ಲಂತೂ ಗ್ರಾಮ ಗ್ರಾಮಗಳಿಗೆ ಜೆಡಿಎಸ್ ಚಿಹ್ನೆಯನ್ನು ಹೊತ್ತೂಯ್ದು ಕೊಡುವ ಕೆಲಸವನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡಬೇಕು. ಅತ್ತ ತಮಗೆ ಬೇಡವೆಂದ ಅಭ್ಯರ್ಥಿ ಪರವಾಗಿ ಮತ ಹಾಕಿ ಎಂದು ಬಿಜೆಪಿ ಕಾರ್ಯಕರ್ತರು ಪ್ರಚಾರ ಮಾಡಬೇಕು. ಇನ್ನೊಂದೆಡೆ ಕಾಂಗ್ರೆಸ್ ಕಾರ್ಯಕರ್ತ ಅಮೃತ್ ಶೆಣೈ ಹೈಕಮಾಂಡ್ ನಿರ್ಧಾರವನ್ನು ವಿರೋಧಿಸಿ ಪಕ್ಷೇತರರಾಗಿ ನಿಂತರು. ಅವರನ್ನೀಗ ಹೈಕಮಾಂಡ್ ಅಮಾನತುಗೊಳಿಸಿದೆ. ಇಂತಹ ನಡವಳಿಕೆಗೆ ಕಾರ್ಯಕರ್ತರೂ “ಜೀ ಹುಜೂರ್’, ಮಾನಸಿಕತೆಯವರೆಂಬುದು ನಾಯಕ ವರ್ಗಕ್ಕೂ ಗೊತ್ತಿರುವುದು ಕಾರಣವಾಗಿರಬಹುದೆ?
ಮಹಿಳಾಪರ ನಡೆಯೆ?: ಕೇಂದ್ರ ಸಚಿವರಾಗಿ ಮೆರೆದ, ರಾಜ್ಯದಲ್ಲಿ ಬಿಜೆಪಿ ಸಂಘಟನೆಗೆ ಬಹು ಅಮೂಲ್ಯ ಕೊಡುಗೆ ನೀಡಿದ್ದ ಅನಂತಕುಮಾರ್ ಮತ್ತು ಕೇಂದ್ರ – ರಾಜ್ಯ ಸಚಿವರಾಗಿ, ಒಕ್ಕಲಿಗ ಮುಖಂಡರಾಗಿ, ಮಂಡ್ಯದಲ್ಲಿ ಜೆಡಿಎಸ್ ದೊಡ್ಡಗೌಡರ ಪಾಳಯಕ್ಕೆ ಸಡ್ಡು ಹೊಡೆದ ಚಿತ್ರನಟ ಅಂಬರೀಷ್ ಇಬ್ಬರೂ ಇತ್ತೀಚಿಗೆ ನಿಧನ ಹೊಂದಿದರು. ಸೂತಕದ ಛಾಯೆ ಆರಿ ಹೋಗದಂತಿದ್ದ ಕಾಲಘಟ್ಟದಲ್ಲಿ ಚುನಾವಣೆ ನಡೆಯುತ್ತಿದೆ. ಮಾತೆತ್ತಿದರೆ ಮಹಿಳಾಪರ ಎಂದು ಪೋಸು ಕೊಡುವ ಎರಡೂ ಪಕ್ಷಗಳ ನಾಯಕರು ಸತ್ತವರಿಗೆ ಸದ್ಗತಿ ತೋರದ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ತೇಜಸ್ವಿನಿ ಅನಂತಕುಮಾರ್ ಅವರಿಗೆ ಟಿಕೆಟ್ ನೀಡುವುದಾಗಿ ಹೇಳಿದ ಪಕ್ಷದ ಮುಖಂಡರು ಇನ್ನೊಬ್ಬರಿಗೆ ಟಿಕೆಟ್ ಕೊಟ್ಟು ತಮ್ಮದೇ ನಾಲಗೆಗೆ ತಾವೇ ಬೆಲೆ ಕೊಡದ ಸ್ಥಿತಿಯಲ್ಲಿದ್ದಾರೆ. ಇತ್ತೀಚಿಗಷ್ಟೆ ಮಹಿಳಾ ದಿನಾಚರಣೆ ನಡೆದಿದೆ. ಅಂಬರೀಷ್ ಪತ್ನಿ ಸುಮಲತಾ ಅವರ ಕುರಿತು ಜೆಡಿಎಸ್- ಕಾಂಗ್ರೆಸ್‌ನ ದೊಡ್ಡ ದೊಡ್ಡ ನಾಯಕರೆಂಬವರು ಆಡಿದ ಮಾತು ಯಾವುದೇ ಮಹಿಳೆಗೆ ಸಹಿಸಿಕೊಳ್ಳಲು ಕಷ್ಟಸಾಧ್ಯವಾಗಬಹುದು. ಇದು ತೇಜಸ್ವಿನಿ ಮುಂಗೈಗೆ ಬೆಲ್ಲ ಒರೆಸಿದ ಬಿಜೆಪಿ ನಾಯಕರಿಗೂ ಅನ್ವಯ. ಏತನ್ಮಧ್ಯೆ ತೇಜಸ್ವಿನಿ ಅನಂತಕುಮಾರರಿಗೆ ಟಿಕೆಟ್ ನಿರಾಕರಿಸಲು ಸಾಧ್ಯ ಮಾಡಿದ ಬಿಜೆಪಿ ನಾಯಕರು ಸುಮಲತಾ ಅಂಬರೀಷರ ವಿಶೇಷ ಅನುಕಂಪ ಮೆರೆದಿರುವುದು ಸೋಗಲಾಡಿತನದ ಮುಖ ಎಂದು ವಿಶ್ಲೇಷಿಸಿದರೆ ಅತಿಶಯವಾಗದು.
ನಿಷ್ಠಾವಂತರ ಆತ್ಮವಂಚನೆ: ಇಂತಹ ಸಂದಿಗ್ಧ, ಆತ್ಮವಂಚನೆಯ ಸ್ಥಿತಿಯಲ್ಲಿಯೂ ಸಾರ್ವಜನಿಕವಾಗಿ ಮರ್ಯಾದೆ ಉಳಿಸಿಕೊಳ್ಳಲು ಬೇರೆ ಬೇರೆ ತೆರನಾದ ವರಸೆಗಳನ್ನು ಹರಿಬಿಡುವ ನಿಷ್ಠಾವಂತ ಕಾರ್ಯಕರ್ತರನ್ನು ಕಂಡಾಗ “ಅಯ್ಯೋ’ ಎಂದೆನಿಸುತ್ತದೆ. ನಿಷ್ಠಾವಂತರಾಗಿಯೂ ಇಂತಹ ದೈನೇಸಿ ಬದುಕು ಬೇಕೆ ಎಂದು ಪ್ರಶ್ನೆ ಮೂಡುತ್ತದೆ. ಇವರು ಒಂದೋ ಗೊತ್ತಿದ್ದೂ ಮರ್ಯಾದೆ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ ಅಥವಾ ಇವರಿಗೆ ಲೋಕದ ಯಾವುದೇ ವಾಸ್ತವ ಪರಿಜ್ಞಾನವಿಲ್ಲ ಎಂದು ಪರಿಗಣಿಸಬೇಕು. ತಪ್ಪನ್ನು ತಪ್ಪು ಎಂದು ಹೇಳಲಾಗದ ಆತ್ಮವಂಚಕರಾಗಿ ಇವರು ಕಾಣುತ್ತಾರೆ.
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವಾಗ “ನಮ್ಮ ಆಸ್ಕರಣ್ಣ ಸಹಿ ಮಾಡದೆ ಏನೂ ಆಗದು. ಅದು ಹೇಗೆ ಆಗಲು ಸಾಧ್ಯ? ಅವರು ನಾಳೆ ದಿಲ್ಲಿಗೆ ಹೋದ ಬಳಿಕ ಕ್ಲಿಯರ್ ಆಗುತ್ತದೆ’ ಎಂದು ಸ್ಥಳೀಯ ಕಾಂಗ್ರೆಸ್ ನಾಯಕರು ಬಡಬಡಿಸುತ್ತಿದ್ದರು. ಅತ್ತ ಮರುದಿನ ಜೆಡಿಎಸ್ ದೊಡ್ಡಗೌಡರ ಆದೇಶಾನುಸಾರವೇ ಬಿಎಸ್‌ಪಿಗೆ ಸೇರಿದ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಆಲಿ ಹಿಂದಿನ ದಿನ ಕೊಚ್ಚಿಯಲ್ಲಿ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ಸೀಟು ಹಂಚಿಕೆಯನ್ನು ಅಂತಿಮಗೊಳಿಸಿದ್ದರು. ಆಸ್ಕರಣ್ಣನನ್ನು ಯಾಮಾರಿಸುವ ಹಲವು ಉತ್ತರಾಧಿಕಾರಿಗಳು ಹುಟ್ಟಿರುವುದು ಸ್ಥಳೀಯ ನಾಯಕರಿಗೆ ತಿಳಿಯದಿರುವುದು ಹುಂಬತನಕ್ಕೆ ಒಂದು ಉದಾಹರಣೆ ಎನ್ನಬಹುದು ಅಥವಾ ಇವರು ಇದನ್ನು ಬಹಿರಂಗವಾಗಿ ಒಪ್ಪಿಕೊಂಡರೆ ಮರ್ಯಾದೆ ಹೋಗುತ್ತದೆ ಎಂದು ತಿಳಿದಿರಬಹುದು. ಮರುದಿನ ಡ್ಯಾನಿಶ್ ಆಲಿ ದಿಲ್ಲಿಯಲ್ಲಿ ಬಿಎಸ್‌ಪಿ ಸೇರಿ “ಟಾಟಾ ಬಾಯಿ ಬಾಯಿ’ ಎಂಬ ಪೋಸು ಕೊಟ್ಟರು. ಇಂದಿಗೂ ಉಡುಪಿ ಮಟ್ಟಿಗೆ ಕಾಂಗ್ರೆಸ್ ಹೈಕಮಾಂಡ್ ಎಂಬಂತಿರುವ ಆಸ್ಕರ್ ಫೆರ್ನಾಂಡಿಸ್ ಅವರ ಗಮನಕ್ಕೆ ಬಾರದೆ ನಾಯಕರು ನಿರ್ಧಾರ ತಳೆದಿರಬೇಕಾದರೆ ಸಾಮಾನ್ಯ ಕಾರ್ಯಕರ್ತರ ಪಾಡೇನು ಎಂದು ಅರ್ಥವಾಗುತ್ತದೆ.
ತುಮಕೂರಿನಲ್ಲಿ ಹಾಲಿ ಸಂಸದರು ಕಾಂಗ್ರೆಸ್ ಪಕ್ಷದಿಂದ ಗೆದ್ದವರಾದರೂ ತವರು ಜಿಲ್ಲೆಯಾದ ಆ ಕ್ಷೇತ್ರವನ್ನೇ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರ ಸ್ಥಾನದಲ್ಲಿದ್ದ ಡಾ|ಜಿ.ಪರಮೇಶ್ವರ್ ಬಿಟ್ಟು ಕೊಡಬೇಕಾಯಿತು. ಪರಮೇಶ್ವರರು ಅವರಿವರ ಮನೆ ಮೆಟ್ಟಿಲು ಹತ್ತಿ “ಲಬೊ ಲಬೋ’ ಎಂದದ್ದು ಸುದ್ದಿಯಾಯಿತು. ಇದು ಹಾಲಿ ಸಂಸದ ಮುದ್ದ ಹನುಮೇಗೌಡರು, ಡಾ|ಪರಮೇಶ್ವರರ ಸ್ಥಿತಿ. ಬಂಡಾಯ ಅಭ್ಯರ್ಥಿಯಾಗಲು ಮುಂದಾದ ಮುದ್ದಹನುಮೇಗೌಡರ ಮನವೊಲಿಸಲು “ಇದು ಹೈಕಮಾಂಡ್ ನಿರ್ಧಾರ. ರಾಜ್ಯ ಘಟಕದ ಪಾತ್ರವಿಲ್ಲ’ ಎಂದು ಸ್ವತಃ ಪರಮೇಶ್ವರ್, ದಿನೇಶ್ ಗುಂಡೂ ರಾವ್ ಹೇಳಬೇಕಾಗಿ ಬಂದುದು ಪಕ್ಷದ ದೈನೇಸಿ ಸ್ಥಿತಿಯನ್ನು ತೋರಿಸುತ್ತದೆ.
ವಂಶಪಾರಂಪರ್ಯದ ಕಾಯಿಲೆ: 1980-90ರ ದಶಕದಲ್ಲಿ ನಿಜ ಅರ್ಥದಲ್ಲಿ ರಾಷ್ಟ್ರ ಮಟ್ಟದ ಪಕ್ಷವಾಗಿದ್ದ ಜೆಡಿಎಸ್ ಈಗ ನಾಲ್ಕೈದು ಜಿಲ್ಲೆಗಳಿಗೆ ಸೀಮಿತವಾಗಿದ್ದರೂ ತುಮಕೂರು, ಹಾಸನ, ಬೆಂಗಳೂರು ಕ್ಷೇತ್ರದಲ್ಲಿ ಅಜ್ಜ, ಮೊಮ್ಮಕ್ಕಳು ಸೇರಿ ಮೂವರು ಸ್ಪರ್ಧಿಸುತ್ತಿದ್ದಾರೆ (ಸಂಭ್ರಮಿಸುತ್ತಿದ್ದಾರೆ). ಒಬ್ಬ ಮಗ ಮುಖ್ಯಮಂತ್ರಿ, ಇನ್ನೊಬ್ಬ ಮಗ ಪ್ರಭಾವಿ ಮಂತ್ರಿ. ವಂಶಪಾರಂಪರ್ಯ ಅಧಿಕಾರ ಕಾಯಿಲೆ ಜೆಡಿಎಸ್‌ಗೆ ಮಾತ್ರವಲ್ಲದೆ ಬಿಜೆಪಿ, ಕಾಂಗ್ರೆಸ್‌ಗೂ ತಟ್ಟಿದೆ. ಏತನ್ಮಧ್ಯೆ ಹಾಸನದಲ್ಲಿ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಂಡ ಎ.ಮಂಜು ಕಾರ್ಯಕರ್ತರ ಶಿಫಾರಸ್ಸಿನಂತೆ ಆದದ್ದಲ್ಲ ಎಂಬುದು ಲೋಕಕ್ಕೇ ಗೊತ್ತಿದೆ. ಸುಮಲತಾ ಅವರ ವಿರುದ್ಧ ಸ್ಪರ್ಧಿಸಲು ಹಲವು ಸುಮಲತಾರನ್ನು ಸೃಷ್ಟಿಸಿದ ಖ್ಯಾತಿ ಕಾಂಗ್ರೆಸ್, ಜೆಡಿಎಸ್ ಪ್ರಭಾವಿ ನಾಯಕರಿಗೆ ಸಲ್ಲುತ್ತದೆ. ಅರಸಿಕೆರೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತಾವು ಜೆಡಿಎಸ್‌ಗೆ ಮತ ಹಾಕುವುದಿಲ್ಲ, ಬಿಜೆಪಿಗೆ ಹಾಕುತ್ತೇವೆ ಎಂದು ಅರಸಿಕೆರೆಯಲ್ಲಿ ರೇವಣ್ಣರ ಎದುರೇ ಗುಡುಗಿದ್ದು ವರದಿಯಾಗಿದೆ. ಹಲವೆಡೆ ಕಾಂಗ್ರೆಸ್ ಹೈಕಮಾಂಡ್ ಎಚ್ಚರಿಕೆಗೂ ಕಾರ್ಯಕರ್ತರು ಬಗ್ಗದೆ ಇರುವ ಸ್ಥಿತಿ ಇದೆ. ಮೈಸೂರಿನಲ್ಲಿ ಬಿಜೆಪಿ, ಜೆಡಿಎಸ್- ಕಾಂಗ್ರೆಸ್‌ನಲ್ಲಿ, ಚಿಕ್ಕೋಡಿ ಬಿಜೆಪಿಯಲ್ಲಿ ಇಂತಹುದೇ ಬೆಳವಣಿಗೆಗಳು ನಡೆಯುತ್ತಿವೆ. ಇಡೀ ರಾಷ್ಟ್ರವನ್ನೇ ಹಿಡಿತದಲ್ಲಿಟ್ಟುಕೊಂಡಿದ್ದ ಕಾಂಗ್ರೆಸ್ ಈಗ ಜೆಡಿಎಸ್‌ನಂತಹ ಪಕ್ಷಗಳ ಜತೆ ನೆಂಟಸ್ತಿಕೆ ಬೆಳೆಸುವ ಮಟ್ಟಕ್ಕೆ ಕುಸಿದಿದೆ. ಕಾರ್ಯಕರ್ತರನ್ನು ಕಡೆಗಣಿಸಿದರೆ ಏನಾಗುತ್ತದೆ ಎಂಬುದಕ್ಕೆ ಈ ಪಕ್ಷಗಳನ್ನು ಕಂಡರೆ ತಿಳಿಯುತ್ತದೆ, ಮುಂದೆ ಬಿಜೆಪಿ ಏನಾಗುತ್ತದೆ ಎಂಬುದನ್ನೂ ಸೂಚಿಸಬಲ್ಲದು. ಕಾರ್ಯಕರ್ತರನ್ನು ಕಡೆಗಣಿಸಿದರೂ ಯಾವುದೇ ಪಕ್ಷ ಅಧಿಕಾರಬಲದಲ್ಲಿ ಕೆಲವು ವರ್ಷ ಮುನ್ನಡೆಯಬಹುದು, ಖಾಯಂ ಅಲ್ಲ ಅನುವುದಕ್ಕೆ ಹಿಂದಿನ, ಕೆಲವು ಪಕ್ಷಗಳ ನಿದರ್ಶನಗಳು ಮುಂದಿನ, ಕೆಲವು ಪಕ್ಷಗಳಿಗೂ ಅನ್ವಯವಾಗುತ್ತದೆ ಎಂದು ತರ್ಕಿಸಬಹುದು.
ಮೇಲಿನ ಘಟನಾವಳಿಗಳನ್ನು ನಿಷ್ಪಕ್ಷಪಾತವಾಗಿ ಕಂಡಾಗ ಸಂತ್ರಸ್ತರ ಪರವಾಗಿ ಅನುಕಂಪ ಮೂಡುತ್ತದೆ. ಇದೆಲ್ಲ ಈಗಿನ ಘಟನಾವಳಿಗಳನ್ನು ಕಂಡಾಗ ನಮಗನಿಸುವುದು. ಇದಕ್ಕೂ ಹಿಂದೆ ಹಿಂದೆ ಹೋಗಿ ನೋಡಿದಾಗ “ಮಾಡಿದ್ದುಣ್ಣೋ ಮಹಾರಾಯ’ ಗಾದೆ ಅಥವಾ ಕರ್ಮ ಸಿದ್ಧಾಂತದಂತೆ ನಡೆಯುತ್ತಿದೆಯೆ ಎಂದೂ ಭಾಸವಾಗುತ್ತದೆ. ಇದರರ್ಥ ಈಗ ಮಾಡಿದ್ದು/ ಆದದ್ದು ಸರಿ ಎಂಬ ವಾದವಲ್ಲ. ಇನ್ನು ಹತ್ತಿಪ್ಪತ್ತು ವರ್ಷಗಳ ಬಳಿಕ ನೋಡಿದಾಗ ಈಗ ಆತ್ಮವಂಚನೆ ಮಾಡಿಕೊಂಡವರ ಮಕ್ಕಳ ಪರಿಸ್ಥಿತಿಯನ್ನು ನೋಡಬೇಕು. ನಮಗೆ ಅಷ್ಟು ತಾಳ್ಮೆ ಇರುವುದಿಲ್ಲವಷ್ಟೆ.
ಸಣ್ಣ ಸೀಟು ಕೊಡದಿದ್ದರೆ ದೊಡ್ಡ ಸೀಟು ತಪ್ಪೀತು!: ಇದಕ್ಕೆ ಒಂದು ಉದಾಹರಣೆ ಕೊಡಬಹುದು. ಇದು ಕಾಲ್ಪನಿಕ ಕಥೆಯಲ್ಲ, ವಾಸ್ತವ. ಒಬ್ಬ ಪ್ರಭಾವಿ ನಾಯಕ, ಒಬ್ಬ ಸಾಮಾನ್ಯ ವ್ಯಕ್ತಿ ಇಬ್ಬರೂ ಕಾಲೇಜು ಹಂತದಲ್ಲಿ ಒಟ್ಟಿಗೇ ಸೇರಿ ಚಳವಳಿಗಳಲ್ಲಿ ಭಾಗವಹಿಸಿದ್ದರು. ಒಬ್ಬರು ರಾಜಕೀಯದಲ್ಲಿ ಮುಂದೆ ಹೋದರು. ಇನ್ನೊಬ್ಬರು ತಾವು ವ್ಯವಹಾರ ಮಾಡಿಕೊಂಡು ಮುಂದೆ ಬಂದರು ಮತ್ತು ಯಾವತ್ತೂ ಸ್ನೇಹಿತನಿಂದ ಲಾಭವನ್ನು ಪಡೆದುಕೊಂಡಿರಲಿಲ್ಲ. ವ್ಯವಹಾರ ಮಾಡಿಕೊಂಡವರು ಅಕಸ್ಮಾತ್ ನಿಧನ ಹೊಂದಿದರು. ರಾಜಕೀಯದಲ್ಲಿದ್ದ ವ್ಯಕ್ತಿ ತನ್ನ ಸಹಪಾಠಿ ಮನೆಗೆ ಬಂದು ಅತ್ತು ಹೋದದ್ದು ಪತ್ರಿಕೆಗಳಲ್ಲಿಯೂ ಸುದ್ದಿಯಾಗಿ ರಾರಾಜಿಸಿತು. ತಂದೆ ನಿಧನದಿಂದಾಗಿ ಮಾನಸಿಕವಾಗಿ ಜರ್ಝರಿತಳಾದ ಮಗಳಿಗೆ ಸಿಇಟಿ ಪರೀಕ್ಷೆಯನ್ನು ಸರಿಯಾಗಿ ಎದುರಿಸಲಾಗಲಿಲ್ಲ. ಮೆನೇಜೆ¾ಂಟ್ ಕೋಟಾದ ವೈದ್ಯಕೀಯ ಶಿಕ್ಷಣದ ಸೀಟು ಬೇಕಾದಾಗ ಪ್ರಭಾವಿ ನಾಯಕನ ಬಳಿ ಸಹಾಯ ಯಾಚಿಸಲಾಯಿತು. ಎಂಬಿಬಿಎಸ್ ಸೀಟು ಕೊನೆಗೂ ದಕ್ಕಲಿಲ್ಲ, ಈಗ ಪ್ರಭಾವಿ ನಾಯಕನ ಹೆಂಡತಿಗೆ ಎಂಪಿ ಸೀಟು ಕೊನೆಗೂ ದಕ್ಕಲಿಲ್ಲ. ಇವೆರಡಕ್ಕೂ ಹೆಚ್ಚು ವರ್ಷಗಳ ಅಂತರವಿಲ್ಲ. ಇದನ್ನು ಕರ್ಮಫಲ ಎನ್ನದೆ ಬೇರೆ ವಾದ ಮಂಡನೆ ಇದ್ದರೆ ಹುಡುಕಬಹುದು, ಇದೂ ಒಂದು ಸಂಶೋಧನೆ. ಇದರರ್ಥ ಈಗ ಎಂಪಿ/ಎಂಎಲ್‌ಎ ಸೀಟು ಕೊಡದೆ ಅನ್ಯಾಯ ಮಾಡಿದ್ದನ್ನು ಸರಿ ಎನ್ನುವುದಲ್ಲ. ಈಗ ಅರ್ಹತೆ ಇದ್ದರೂ, ಕಾರ್ಯಕರ್ತರ ಆಗ್ರಹವಿದ್ದರೂ ಅವರಿಗೆ ಅಧಿಕಾರಬಲದಿಂದ ಎಂಪಿ ಸೀಟಿಗೋ, ಎಂಎಲ್‌ಎ ಸೀಟಿಗೋ ಕೈಕೊಡಬಹುದು. ಆದರೆ ಮುಂದೊಂದು ದಿನ ಈಗ ಕೈಕೊಟ್ಟವರ ಮಕ್ಕಳಿಗೆ ಅಥವಾ ಅವರಿಗೇ ಸ್ವತಃ ಎಂಪಿ, ಎಂಎಲ್‌ಎ ಸೀಟು ಬೇಕಾದಾಗ ಸೀಟು ಕೊಡುವ ಸ್ಥಾನದಲ್ಲಿರುವವರು ಕೈಕೊಡದೆ ಇರುತ್ತಾರೇನೋ? ಆಗ ಅಧಿಕಾರದಲ್ಲಿರುವವರು ಈಗ ಅಧಿಕಾರಿದಲ್ಲಿದ್ದವರಿಂದ ಪೆಟ್ಟು ತಿಂದವರಾಗಿರುತ್ತಾರೆ. ಆಗ ಗತ ಇತಿಹಾಸ ಅರಿಯದ ಸಾಮಾನ್ಯ ಜನರು “ಇಂತಹ ಅನ್ಯಾಯ ಮಾಡಬಾರದಿತ್ತು’ ಎಂದು ಅಲವತ್ತುಕೊಳ್ಳುತ್ತಾರೆ. ಆಗ ಮತ್ತೂಂದಿಷ್ಟು ಜನರು “ಫಿಶಿಂಗ್ ಇನ್ ಟ್ರಬಲ್ಡ್ ವಾಟರ್’ಗೆ ಕೈ ಹಾಕುತ್ತಾರೆ. ಈ ಪರಿ ದುಃಖ ಮುಂದೆ ಮುಂದೆ ಚಲಿಸುತ್ತಲೇ ಇರುತ್ತದೆ.
ಕರ್ಮಸಿದ್ಧಾಂತದಲ್ಲಿ ಪಕ್ಕಾ ಲೆಕ್ಕ: “ಎ’ ವ್ಯಕ್ತಿ “ಬಿ’ ವ್ಯಕ್ತಿಗೆ 100 ರೂ. ಕೊಡಲಿಕ್ಕಿದೆ ಎಂದಿಟ್ಟುಕೊಳ್ಳಿ. “ಬಿ’ ವ್ಯಕ್ತಿ “ಎ’ ವ್ಯಕ್ತಿಗೆ 10 ರೂ. ಕೊಡಲಿಕ್ಕಿದೆ ಎಂದುಕೊಳ್ಳಿ. ನಮ್ಮ ವ್ಯಾವಹಾರಿಕ ಜಗತ್ತಿನಲ್ಲಿ “ಎ’ ವ್ಯಕ್ತಿ “ಬಿ’ ವ್ಯಕ್ತಿಗೆ 90 ರೂ. ಕೊಟ್ಟರೆ ಸಾಕು. ಆದರೆ ಕರ್ಮ ಸಿದ್ಧಾಂತದಲ್ಲಿ “ಎ’ ವ್ಯಕ್ತಿ “ಬಿ’ ವ್ಯಕ್ತಿಗೆ 100 ರೂ. ಮತ್ತು “ಬಿ’ ವ್ಯಕ್ತಿ “ಎ’ ವ್ಯಕ್ತಿಗೆ 10 ರೂ. ಕೊಡಲೇಬೇಕು. ಈ ನಿಯಮದಂತೆ ಅರ್ಹತೆ ಇದ್ದೂ, ದೊಡ್ಡ ಅಧಿಕಾರದಲ್ಲಿದ್ದವರು ಒಂದು ಸಣ್ಣ ಸೀಟು ಕೊಡಿಸಲಾಗದಿದ್ದರೆ ಮುಂದೊಂದು ದಿನ ದೊಡ್ಡ ಸೀಟನ್ನು ದಕ್ಕಿಸಿಕೊಳ್ಳಲಾಗದೆ ಹೋಗಬಹುದು. ವರ್ತಮಾನ ಕಾಲದಲ್ಲಿ ಅನ್ಯಾಯವನ್ನು ಅನುಭವಿಸಿದರು ಎಂಬ ಅನುಭವಕ್ಕೆ ಬಂದಾಗಲೆಲ್ಲ ಅವರ ಗತ ಇತಿಹಾಸವನ್ನು ಒರೆಗಲ್ಲಿಗೆ ಹಚ್ಚಿ ನೋಡಿದಾಗ ಕರ್ಮಸಿದ್ಧಾಂತದ ಫಲ ಅಂಟಿಕೊಂಡದ್ದು ಕಂಡುಬರುತ್ತದೆ. ಅದೇ ರೀತಿ ವರ್ತಮಾನ ಕಾಲದಲ್ಲಿ ಅನ್ಯಾಯವನ್ನು ಮಾಡಿದವರು ಮುಂದೆ ಯಾವಾಗಲೋ ಆ ಫಲವನ್ನು ಅನುಭವಿಸುವಂತೆ ಮಾಡುತ್ತದೆ.
ಇವರು ಮಾಡಿದ ಉತ್ತಮ ಕೆಲಸಗಳಿಗೆ ಬೆಲೆ ಇಲ್ಲವೆ ಎಂದು ಪ್ರಶ್ನಿಸಬೇಡಿ. ಉತ್ತಮ ಕೆಲಸಗಳಿಗೆ ಬೆಲೆ ಇರುವುದರಿಂದಲೇ ಇವರು ಬೇರೆಯವರಿಗಿಂತ ಸಾವಿರ, ಲಕ್ಷ ಪಟ್ಟು ಉತ್ತಮ ರೀತಿಯಲ್ಲಿ ಬದುಕುತ್ತಿರುವುದು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. 100 ರೂ. ಕೊಡಬೇಕಾದವ ಅದನ್ನು ಕೊಡಬೇಕು, ಅದೇ ವ್ಯಕ್ತಿ ಬೇರೆಯವರಿಂದ ಬರಬೇಕಾದ 10 ರೂ. ಮೊತ್ತವನ್ನೂ ತೆಗೆದುಕೊಳ್ಳಬೇಕು.
ಇವೆರಡೂ ಬೇರೆ ಬೇರೆ ಪ್ರಕ್ರಿಯೆ. ಅಧಿಕಾರದ ಸ್ಥಾನ ಎಷ್ಟು ಅಪಾಯ ಎನ್ನುವುದಕ್ಕೆ ನಮ್ಮ ದೇಶದ ಪ್ರಧಾನಿಗಳಾಗಿದ್ದವರ ಜೀವನದ ಕೊನೆ, ರಾಷ್ಟ್ರಪತಿಗಳಾಗಿದ್ದವರ ಜೀವನದ ಕೊನೆ ಎರಡನ್ನೂ ತುಲನೆ ಮಾಡಿ ನೋಡಬಹುದು. ಇದಕ್ಕಾಗಿಯೋ ಏನೋ “ಅಧಿಕಾರ ಹೊಂದಿದ ಹುದ್ದೆಯನ್ನೇ ನನಗೆ ಕಲ್ಲು ಹೊಡೆದವನಿಗೆ ಕೊಡು. ನಾನೂ ಹಿಂದಿನ ಜನ್ಮದಲ್ಲಿ ಅದೇ ಹುದ್ದೆಯಲ್ಲಿದ್ದಾಗ ಹೀಗೆಯೇ ಮಾಡಿದ್ದೆ. ಮುಂದೆ ಆತನೂ ಹಾಗೆಯೇ ಮಾಡುತ್ತಾನೆ. ಮತ್ತೆ ಆತ ನಾಯಿಯಾಗಿ ಹುಟ್ಟಿ ಬೇರೆಯವರಿಂದ ಕಲ್ಲು ಹೊಡೆಸಿಕೊಳ್ಳುತ್ತಾನೆ’ ಎಂದು ನಾಯಿಯೊಂದು ರಾಮನಿಗೆ ಹೇಳಿರುವ ಕಥೆಯನ್ನು ವಾಲ್ಮೀಕಿ ಹೆಣೆದದ್ದು ಎಂದೆಂದಿಗೂ ಪ್ರಸ್ತುತ ಎನಿಸುತ್ತದೆ. “ಆಧುನಿಕ ರಾಮಾಯಣ’ದ ಜೀವನದಲ್ಲಿ ಈ ಜನ್ಮದಲ್ಲಿಯೇ ಕ್ರಿಯೆ, ಪ್ರತಿಕ್ರಿಯೆ ಕಂಡುಬರುತ್ತದೆ. ಈಗ ಆಗುತ್ತಿರುವ ಸ್ಪೀಡ್, ಫಾಸ್ಟ್ ಗತಿಗಳು ಕರ್ಮಸಿದ್ಧಾಂತವನ್ನೂ ಬಿಡುತ್ತಿಲ್ಲ ಎಂದೆನಿಸುತ್ತದೆ. ಇದು ರಾಜಕಾರಣಿಗಳಿಗೆ ಮಾತ್ರ ಎಂದು ಅರ್ಥ ಮಾಡಬಾರದು, ಅವರವರ ವ್ಯಾಪ್ತಿಯಲ್ಲಿ ಅಧಿಕಾರ ಹೊಂದಿದ ಎಲ್ಲರಿಗೂ ಅನ್ವಯಿಸುತ್ತದೆ. ಇದರ ಎಚ್ಚರವಿದ್ದರೆ ವ್ಯಕ್ತಿಗಳು ಮಾಡುವ ಅನ್ಯಾಯದ ಪ್ರಮಾಣ ಇಳಿಮುಖವಾಗುತ್ತದೆ, ಇದರಿಂದ ಸಮಾಜದಲ್ಲಿ ಸ್ವಲ್ಪ ಮಟ್ಟಿಗಾದರೂ ಶಾಂತಿ, ನೆಮ್ಮದಿ ಸಿಗಬಹುದು, ಸಮಾಜಕ್ಕೆ ಎನ್ನುವ ಬದಲು ಅವರವರಿಗೇ ಶಾಂತಿ, ನೆಮ್ಮದಿ ಎಂಬುದೇ ತಾತ್ಪರ್ಯ. ಅವರವರು ಸೇರಿ ಸಮಾಜವಾಗುವುದಲ್ಲವೆ? ಕರ್ಮಸಿದ್ಧಾಂತ ವಿರೋಧಿಗಳಿಗೂ ಇಂತಹ ಸ್ವಸ್ಥ ಸಮಾಜ ಬೇಕಲ್ಲವೆ?
ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್ 8, ಬಿಜೆಪಿ 3, ಪಕ್ಷೇತರ 1
Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.