ವೈಚಾರಿಕತೆ ಇಂದಿನ ಆವಶ್ಯಕತೆ
Team Udayavani, Feb 13, 2021, 7:10 AM IST
ವೈಚಾರಿಕತೆ, ವಿಚಾರವಾದ, ಭೌತಿಕತೆ ಇವೆಲ್ಲ ಹೆಚ್ಚು ಕಡಿಮೆ ಒಂದೇ ಅರ್ಥವುಳ್ಳ ಪದಗಳು. ವೈಚಾರಿಕತೆ ಎಂದರೆ ಒಂದು ವಿಷಯವನ್ನು ವಿಮರ್ಶೆಯ ಒರೆಗಲ್ಲಿಗೆ ಹಚ್ಚಿ ಅದರ ಒಳಿತು- ಕೆಡುಕುಗಳನ್ನು ಗುರುತಿಸಿ ಒಳಿತನ್ನು ಸ್ವೀಕರಿಸಿ, ಕೆಡುಕನ್ನು ಬಿಟ್ಟು ಬಿಡುವ ಚಿಂತನಾ ಕ್ರಮ. ಮಾನವ ಬುದ್ಧಿಜೀವಿ. ವಿಚಾರ ಶಕ್ತಿಯಿಂದ ಕೂಡಿರುವುದು ಮಾನವನ ಪ್ರಗತಿಯ ಶಸ್ತ್ರವಾಗಿದೆ. ಈ ವಿಚಾರ ಶಕ್ತಿ ಇರುವುದರಿಂದಲೇ ಮಾನವ ಉಳಿದ ಪ್ರಾಣಿಗಳಿಗಿಂತ ಭಿನ್ನವೆನಿಸಿಕೊಂಡಿದ್ದಾನೆ. ಆದಿ ಮಾನವನಿಂದ ಈ ಆಧುನಿಕ ಮಾನವನವರೆಗೆ ಮನು ಕುಲ ಬೆಳೆದುಬಂದ ಬಗೆ ನೋಡಿದರೆ ವೈಚಾರಿಕತೆ ಮಾಡಿರುವ ಕೆಲಸದ ಅಗಾಧತೆ ಅರಿವಾಗುತ್ತದೆ.
ಬುದ್ಧಿ, ತಿಳಿವಳಿಕೆ, ಜ್ಞಾನ, ಪ್ರಜ್ಞೆ, ವೈಚಾರಿಕತೆಗಳು ಮಾನವನಲ್ಲಿರಬೇಕಾದ ಪ್ರಧಾನ ಅಂಶಗಳು.
ಯಾವುದು ಚಿಂತನೆ, ಮನನಗಳಿಗೆ ಪ್ರೇರಣೆ ನೀಡುವುದೋ ಚರ್ಚೆಗೆ ವಸ್ತುವಾಗುವುದೋ ಮತ್ತು ಯಾವುದು ನಮ್ಮ ತಿಳಿವಳಿಕೆಗೆ ಹೊಸದೊಂದು ಆಯಾಮವನ್ನು ನೀಡಿ ಹೊಸ ಹೊಸ ಕ್ಷಿತಿಜಗಳನ್ನು ತೆರೆದು ತೋರಿಸುವುದೋ ಅದೇ ವೈಚಾರಿಕತೆ. ವೈಚಾರಿಕ ಪ್ರಜ್ಞೆ ಮೂಡಿಸಿಕೊಂಡಿರುವ ವ್ಯಕ್ತಿ ಯಾವುದೇ ವಿಷಯವನ್ನು, ಸಂಗತಿಯನ್ನು ಒಂದೇ ಬಾರಿಗೆ ಒಪ್ಪಲಾರ. ಅದರ ನಿಜಾಂಶವನ್ನು ಅರಿತುಕೊಳ್ಳಲು ಅವನ ವಿಚಾರಶಕ್ತಿ ಶ್ರಮಿಸುತ್ತಿರುತ್ತದೆ. ಪ್ರಪಂಚವೆಲ್ಲ ಅಹುದೆಂದು ಒಂದು ಕಡೆಯಿಂದ ಹೇಳಿದರೂ ವೈಚಾರಿಕನು ಅದನ್ನು ವಿಮರ್ಶಿಸದೆ ಒಪ್ಪಲಾರ. ಅವನ ಪ್ರಜ್ಞೆಗೆ ಒಪ್ಪಿತವಾದರೆ ಮಾತ್ರ ಲೋಕ ಅಲ್ಲಗಳೆದರೂ ಅವನು ತನ್ನ ಅಭಿಪ್ರಾಯವನ್ನು ಬದಲಿಸಲಾರ. ಗೆಲಿಲಿಯೋ, ಅರಿಸ್ಟಾಟಲ್ ಇದಕ್ಕೆ ಐತಿಹಾಸಿಕ ನಿದರ್ಶನಗಳು.
ಶಿವರಾಮ ಕಾರಂತರ ಪ್ರಕಾರ ಸಂಶಯಗಳಿಗೆ ಎಡೆ ಮಾಡಿಕೊಡುವ, ಅಪನಂಬಿಕೆ ಮೂಡಿಸುವ ವಿಷಯ ಗಳು ಯಾವುದೆಂದು ನಾವೀಗ ಹೆಚ್ಚು ಯೋಚಿಸ ಬೇಕಾಗಿಲ್ಲ. ಪರಂಪರೆಯಿಂದ ಸಾಗಿ ಬಂದಿರುವ ಅಧ್ಯಾತ್ಮ, ಮತ, ಧರ್ಮ, ಜಾತಿ-ಪಂಥ ಇವುಗಳಲ್ಲಿಯ ಮೌಡ್ಯ, ಅರ್ಥರಹಿತವಾದ ವಿಧಿ ನಿಷೇಧಗಳು, ಮೂಢನಂಬಿಕೆಗಳು ಮತ್ತು ಅಂಧ ಸಂಪ್ರದಾಯಗಳು ಇವೇ ಮುಂತಾದವುಗಳು ಆ ವಿಷಯಗಳಾಗಿವೆ. ಆದ್ದರಿಂದ ಈ ವಿಷಯಗಳನ್ನು ಕುರಿತು ವಿಶ್ಲೇಷಣೆ ಮಾಡಿ ಅವುಗಳಿಂದಾಗಿ ಮಾನವ ಪ್ರಗತಿಗೆ ಆಗಿರುವ ತೊಡಕುಗಳನ್ನು ವಿಶದೀಕರಿಸಿ, ಅವುಗಳ ಜಾಲದಿಂದ ಪುಟಿದೆದ್ದು ಹೊರಬರಲು ಪ್ರಚೋದನೆ ನೀಡುವಂಥ ಸಾಹಿತ್ಯವೇ ವಿಚಾರ ಸಾಹಿತ್ಯ.
ವಿಜ್ಞಾನವು ಭಾರತಕ್ಕೆ ದೊಡ್ಡ ಪ್ರಮಾಣದಲ್ಲಿ ಕಾಲಿಟ್ಟದ್ದು ಸ್ವಾತಂತ್ರಾéಅನಂತರವೇ ಎನ್ನಬೇಕು. ಇನ್ನು ಬೀಸು ಹೇಳಿಕೆ ಕೊಡಬೇಕಾದರೆ ಜಾಗತೀಕರಣದ ಮೇಲೆಯೇ ಎಂದರೂ ಸರಿಯೇ. ಈಗ ಜಗತ್ತು ವೈಜ್ಞಾನಿಕ ಪ್ರಗತಿಯ ಪೂರ್ಣ ಪ್ರಗತಿಯನ್ನು ಪಡೆಯಲು ಪ್ರಯತ್ನಿಸುತ್ತಿದೆ. ಜಗತ್ತಿನೊಡನೆ ನಾವು ಸ್ಪರ್ಧೆಯೊಡ್ಡಬೇಕಾದರೆ ನಮ್ಮ ಚಿಂತನೆ ಕೂಡ ವೈಚಾರಿಕವಾಗಿದ್ದು ಪ್ರಗತಿಪರವಾಗಿರಬೇಕು.
ವೈಚಾರಿಕತೆ, ಬೌದ್ಧಿಕತೆ, ವಿಚಾರ ವಾದಗಳಿಗೆ ಮೌಲ್ಯ ಬರುವುದು ಅದು ಜೀವನ ಮೌಲ್ಯಗಳಿಂದ ಸಮೃದ್ಧವಾದಾಗ. ಜೀವನ ಮೌಲ್ಯವೆಂದರೆ ಸತ್ಯ, ಅಹಿಂಸೆ, ಶೀಲ, ಸಂಯಮ, ದಯೆ, ಕ್ಷಮೆ, ತನ್ನಂತೆ ಪರರ ಬಗೆಯುವ ರೀತಿ, ಬೌದ್ಧಿಕ ಪ್ರಾಮಾಣಿಕತೆ..ಮತ್ತಿತರ ಮಾನವೀಯ ಗುಣಗಳು. ವೈಚಾರಿಕತೆ ಸಮಾಜವನ್ನು ತಿದ್ದುವ ಮುಖ್ಯವಾದ ಅಸ್ತ್ರವಾಗಿದೆ. ಈ ವೈಚಾರಿಕತೆ ಒಬ್ಬ ವ್ಯಕ್ತಿಯ ರಾಜಕೀಯ, ಸಾಮಾಜಿಕ, ಧಾರ್ಮಿಕ ಇಲ್ಲವೇ ಅವನ ವೈಯಕ್ತಿಕ ಬದುಕಿನ ಚಿಂತನೆಗೆ ಎಡೆಮಾಡಿಕೊಡುತ್ತದೆ.
ವೈಚಾರಿಕತೆ ಎಂದರೆ ಪರಂಪರೆಯಿಂದ ಬಂದ ದ್ದನ್ನೆಲ್ಲ ಕಿತ್ತೂಗೆಯಬೇಕು ಎಂದು ಅರ್ಥವಲ್ಲ. ನಮ್ಮ ಅನುಸರಣೆಗಳಲ್ಲಿ ವೈಜ್ಞಾನಿಕ ಸತ್ಯವಿದೆಯೇ ಎಂದು ವಿಮರ್ಶಿಸಿ ನಿರ್ಧರಿಸಬೇಕೆಂದು ಮಾತ್ರ ಇದರ ಅರ್ಥ. ಇದೇ ಸಂದಿಗ್ಧ ಪಾಶ್ಚಾತ್ಯ ದೇಶಗಳಿಗೆ ಪುನರುಜ್ಜೀವನ ಕಾಲಮಾನದಲ್ಲಿ ಉಂಟಾಗಿದ್ದುದನ್ನು ನಾವು ಸ್ಮರಿಸಬಹುದು. ವೈಚಾರಿಕರು ತಾವು ಪ್ರತಿಪಾದಿಸುವ ತಣ್ತೀಗಳನ್ನು ಮತ್ತು ಸತ್ಯಗಳನ್ನು ತನ್ನ ಪರಿಸರದ ಜನರಿಗೆ ತಿಳಿಹೇಳಲು ಬಹಳಷ್ಟು ಸಂಕಷ್ಟಗಳನ್ನು ಎದುರಿಸಿದರು. ಅಂತಹ ಕೆಲವು ಚಿಂತಕರು ಸಂಕಷ್ಟಗಳನ್ನು ಎದುರಿಸಿದ್ದು ಚರಿತ್ರೆಯಿಂದ ತಿಳಿದು ಬರುತ್ತದೆ.
ಪುರಾತನ ಸಂಸ್ಕೃತಿಯನ್ನು ಹೊಂದಿರುವ ದೇಶ ಭಾರತ. ಮಧ್ಯಮ ಯುಗದ ಚಿಂತನೆ ಮತ್ತು ಧಾರ್ಮಿಕ ಚಿಂತನೆಗಳು ಇಲ್ಲಿನ ಜನಜೀವನದ ಮೇಲೆ ಹೆಚ್ಚು ಪ್ರಭಾವ ಬೀರಿದುವು. ಅವುಗಳಲ್ಲಿ ಕೆಲವು ವೈಜ್ಞಾನಿಕ ತಳಹದಿಯನ್ನು ಹೊಂದಿದ್ದರೂ ಇನ್ನುಳಿದವು ಆ ಕಾಲದ ಊಹಾಪೋಹಗಳಿಂದ ಸೇರಿಕೊಂಡವು. ಅವುಗಳೆಲ್ಲವನ್ನು ವೈಚಾರಿಕತೆಗೆ ಒಳಪಡಿಸುವ ಕೆಲಸ ಈ ತಲೆಮಾರಿನಲ್ಲಿ ಆಗುತ್ತಿರುವುದು ಪ್ರಗತಿಪರ ಚಿಂತನೆಯೇ ಆಗಿದೆ. ಪುರಾತನ ಪರಂಪರೆಯಿಂದ ಮಾತ್ರಕ್ಕೆ ಅನುಸರಿಸಬೇಕೇ ಎಂದು ಜನರು ಪ್ರಶ್ನಿಸತೊಡಗಿರುವುದು ಇದಕ್ಕೆ ನಿದರ್ಶನ.
ವೈಜ್ಞಾನಿಕ ತಳಹದಿ ಇಲ್ಲದ ಮೂಢ ನಂಬಿಕೆಗಳು ಪ್ರಗತಿಗೆ ಅಡಚಣೆಗಳಾಗಿವೆ. ಯಾವುದೋ ಕಾಲ ಘಟ್ಟದಲ್ಲಿ ಸಕಾರಣವಿಲ್ಲದೆ ಪ್ರಾರಂಭವಾದ ಇಂತಹ ಆಚರಣೆಗಳಿಂದ ಹೊರಬರುವುದು ಇಂದಿನ ಅಗತ್ಯ ವಾಗಿದೆ. ಅವು ನಮ್ಮ ದೈನಂದಿಕ ಬದುಕನ್ನು ಭಾದಿಸು ತ್ತವೆ. ಮಾನಸಿಕ ಕಿರಿಕಿರಿಗಳನ್ನು ಉಂಟು ಮಾಡುತ್ತವೆ.
ನಮ್ಮ ವಿವೇಚನೆಗೆ ನಿಲುಕುವ ನಮ್ಮ ದೈನಂದಿಕ ಬದುಕನ್ನು ಭಾದಿಸುವ ಮೇಲ್ನೋಟಕ್ಕೆ ವೈಜ್ಞಾನಿಕ ತಳಹದಿ ಇಲ್ಲದ ಆಚರಣೆಗಳಿಂದ ದೂರ ವಿರೋಣ. ಇದನ್ನು ಸಾಮೂಹಿಕ ನೆಲೆಯಲ್ಲಿ ಕಾರ್ಯ ರೂಪಕ್ಕೆ ತರಬೇಕಾದರೆ ಬಹಳಷ್ಟು ಕಾಲಾವ ಕಾಶ ಬೇಕಾಗಬಹುದು. ಆದರೆ ವೈಯಕ್ತಿಕ ನೆಲೆಯಲ್ಲಿ ಅನುಸರಿಸುವುದು ನಮ್ಮ ಕೈಯ್ಯಲ್ಲಿದೆ. ಅದನ್ನು ಕಾರ್ಯಗತಗೊಳಿಸುವ ಮೂಲಕ ನಾವು ಪ್ರಜ್ಞಾ ವಂತರಾಗಿ ಕೆಲಸ ಮಾಡಲು ಸಾಧ್ಯ.
-ಡಾ| ಕೊಳ್ಚಪ್ಪೆ ಗೋವಿಂದ ಭಟ್ ಮುಂಬಯಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಶಾಸಕ ಮುನಿರತ್ನ ಕೇಸ್: ವಿಕಾಸಸೌಧದಲ್ಲಿ ಸ್ಥಳ ಮಹಜರು
Vitla: ನಾಲ್ಕೂ ದಿಕ್ಕಿನಿಂದ ಬರುವ ರಸ್ತೆಗಳಲ್ಲಿ ಗುಂಡಿಯೋ ಗುಂಡಿ
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bellary; ವಕ್ಫ್ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ
Kushtagi: ದ್ಯಾಮವ್ವ ದೇವಿ ಗುಡಿಗೆ ಭಕ್ತರಂತೆ ಹೋಗಿ ದರ್ಶನ ಪಡೆದ ವಾನರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.