ಸಮಸ್ಯೆಗಳಿಂದ ದೂರ ಓಡುವುದು ಪರಿಹಾರವಲ್ಲ
Team Udayavani, Nov 10, 2018, 6:00 AM IST
ಯಾವ ಬ್ಯಾಂಕ್‌ಗಳು ಆರ್‌ಬಿಐನ ನೀತಿಯನ್ನು ಪಾಲಿಸದೆ, ಸಾಲದ ಬಗ್ಗೆ ನಿಗಾವಹಿಸದೆ ಸರಕಾರದ ಒತ್ತಡಕ್ಕೆ ಮಣಿದು ಸಾಲ ಕೊಟ್ಟಿವೆಯೋ ಆ ಬ್ಯಾಂಕ್‌ಗಳೇ ಹೆಚ್ಚು ಸಂಕಷ್ಟಕ್ಕೆ ಈಡಾಗಿವೆ. ಅವುಗಳು ಹಳಿಗೆ ತಾವಾಗಿಯೇ ಬರಬೇಕು ಎಂಬುದು ಆರ್‌ಬಿಐ ವಾದ. ಇದು ಸರಿ. ಸಾಲ ನೀತಿಯನ್ನು ಸಡಿಲಗೊಳಿಸಿ ಆರ್ಥಿಕ ಚಟುವಟಿಕೆಯನ್ನು ಬಲಪಡಿಸಬೇಕು ಎನ್ನುವುದು ಸರಕಾರದ ನಿರೀಕ್ಷೆ.
ರಾಷ್ಟ್ರದ ಆರ್ಥಿಕ ಅಭಿವೃದ್ಧಿಯ ಹಿತದೃಷ್ಟಿಯಲ್ಲಿ ಕೇಂದ್ರ ಸರಕಾರ ಮತ್ತು ರಿಸರ್ವ್ ಬ್ಯಾಂಕ್ ಹಿಂದಿನ ತಪ್ಪು ನೀತಿಗಳಿಂದ ಉಂಟಾದ ಸಮಸ್ಯೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಿ ಧನಾತ್ಮಕ ಧೋರಣೆಗಳನ್ನು ಅನುಷ್ಠಾನಗೊಳಿಸಬೇಕು. ಎರಡೂ ಕಡೆಯಿಂದ ತಪ್ಪಾಗಿದೆ. ಆರ್‌ಬಿಐಗೆ ಸ್ವಾಯತ್ತತೆಯ ಅಗತ್ಯವಿದ್ದು ಅದನ್ನು ವಿತ್ತ ಸಚಿವಾಲಯವು ಗೌರವಿಸುತ್ತಾ ಬಂದಿದೆ ಎಂಬ ಹಣಕಾಸು ಸಚಿವರ ಹೇಳಿಕೆಯನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಸ್ವಾಗತಿಸೋಣ. ಆದರೆ ಕೇಂದ್ರ ಮತ್ತು ರಿಸರ್ವ್ ಬ್ಯಾಂಕ್ ಮಧ್ಯೆ ಎಲ್ಲವೂ ಸರಿಯಿಲ್ಲ ಮತ್ತು ಇಲ್ಲಿ ಸಂಘಟನೆ, ವಿಶ್ವಾಸ, ಆರ್ಥಿಕ ನೀತಿಗಳ ಬಗ್ಗೆ ದೃಢ ನಿರ್ಧಾರದ ಅಗತ್ಯ ಪ್ರಸಕ್ತ ಸನ್ನಿವೇಶದಲ್ಲಿ ಅನಿವಾರ್ಯ ಮತ್ತು ಅದು ದೇಶದ ಆರ್ಥಿಕ ಸಮತೋಲನ ಮತ್ತು ಅಭಿವೃದ್ಧಿಗೆ ಪೂರಕವಾಗಬೇಕು. ಸರಕಾರದ ಕೆಲವು ನಿರೀಕ್ಷೆಗಳನ್ನು ಈಡೇರಿಸುವುದೆಂದರೆ ವಿವಾದದ ಗೂಡಿಗೆ ಕೈ ಹಾಕಿದಂತೆ ಎಂದು ಆರ್‌ಬಿಐ ತಿಳಿದುಕೊಂಡಿದೆ ಮತ್ತು ಅದು ವಾಸ್ತವವೂ ಹೌದು.
ಕೇಂದ್ರ ಸರಕಾರ ಮತ್ತು ಆರ್‌ಬಿಐ ನಡುವಿನ ಬಿಕ್ಕಟ್ಟಿನ ಬಗ್ಗೆ ಅವಲೋಕಿಸುವ ಮೊದಲು ಆರ್‌ಬಿಐನ ಸ್ವಾಯತ್ತತೆ, ಜವಾಬ್ದಾರಿ, ಬ್ಯಾಂಕಿಂಗ್ ವ್ಯವಸ್ಥೆಯ ಬಗ್ಗೆ ತಳೆದ ನೀತಿ, ಪ್ರಸಕ್ತ ಆರ್ಥಿಕ ಸನ್ನಿವೇಶ ಮತ್ತು ಸರಕಾರದ ಧೋರಣೆಯ ಬಗ್ಗೆ ವಿಶ್ಲೇಷಿಸುವುದು ಸೂಕ್ತ. ರಾಷ್ಟ್ರದ ಆರ್ಥಿಕ ಅಭಿವೃದ್ಧಿಯಲ್ಲಿ ಆರ್‌ಬಿಐನ ಪಾತ್ರ ಬಹಳ ಮಹತ್ವದ್ದಾಗಿದೆ. ನಮ್ಮದು ಅಭಿವೃದ್ಧಿ ಹೊಂದುತ್ತಿರುವ ದೇಶ ಮತ್ತು ಅದಕ್ಕೆ ಅಗತ್ಯವಿರುವ ಬಂಡವಾಳವನ್ನು ಪೂರೈಸುವುದು ಆರ್‌ಬಿಐನ ಮುಖ್ಯ ಕಾರ್ಯ. ಆರ್ಥಿಕ ಅಭಿವೃದ್ಧಿಗೆ ಉತ್ಪಾದನೆಯೇ ಮೂಲ.
ಕೃಷಿ, ಕೈಗಾರಿಕೆ, ಸೇವೆಗಳು ಉತ್ಪಾದನೆಗೆ ಪೂರಕವಾಗುತ್ತವೆ. ದೇಶದ ಅಭಿವೃದ್ಧಿಗೆ ಬಂಡವಾಳ ಬೇಕು. ಬಂಡವಾಳಕ್ಕೆ ಉತ್ಪಾದನೆ ಹೆಚ್ಚಬೇಕು. ಇದಕ್ಕಾಗಿ ರಿಸರ್ವ್ ಬ್ಯಾಂಕ್ ಸೂಕ್ತ ಸಮಯದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಉತ್ಪಾದನಾ ವಲಯಕ್ಕೆ ಆದ್ಯತೆ ನೀಡಿ ಹಣ ಪೂರೈಸಬೇಕು. ಹಣ ಚಲಾವಣೆಯನ್ನು ನಿಯಂತ್ರಿಸಿ ಸ್ಥಿರತೆಯನ್ನು ಕಾಪಾಡಬೇಕು. ವಿದೇಶಿ ವಿನಿಮಯವನ್ನು ಸಂತುಲಿತವಾಗಿ ಸ್ಥಿರಗೊಳಿಸಬೇಕು. ಇಲ್ಲವಾದಲ್ಲಿ ರೂಪಾಯಿ ಬೆಲೆ ಇಳಿಯುತ್ತದೆ. ವಾಣಿಜ್ಯ ಬ್ಯಾಂಕ್‌ಗಳಿಗೆ ಅವುಗಳ ಕಾರ್ಯಾನುಷ್ಠಾನಗಳ ಬಗ್ಗೆ ಕಾಲಾನುಕಾಲಕ್ಕೆ ಸರಿಯಾಗಿ ಆದೇಶ ಮತ್ತು ನಿರ್ದೇಶನಗಳನ್ನು ಕೊಟ್ಟು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಈ ಜವಾಬ್ದಾರಿಯನ್ನು ನಿರ್ವಹಿಸಲು ಸ್ವಂತ ನಿರ್ಣಯಗಳನ್ನು ಕೈಗೊಳ್ಳಬೇಕಾಗುವುದು ಸಹಜ. ಈ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್ ಮತ್ತು ಸರಕಾರ ಪರಸ್ಪರ ತಮ್ಮ ಕಾರ್ಯ ವ್ಯಾಪ್ತಿಯನ್ನು ಗೌರವಿಸಬೇಕು.
ಕೇಂದ್ರ ಸರಕಾರ ಯಾವತ್ತೂ ಆರ್‌ಬಿಐನ ರಕ್ಷಣೆಗೆ ನಿಂತಿದೆ ಹೊರತು ತನ್ನ ಮೂಗಿನ ನೇರಕ್ಕೆ ಆದೇಶಗಳನ್ನು ಕೊಡಲಿಲ್ಲ. ಆದರೆ ಸಾರ್ವಜನಿಕ ಹಿತಾಸಕ್ತಿಯಿಂದ ಭಾರತೀಯ ಅರ್ಥವ್ಯವಸ್ಥೆಗೆ ಅನುಗುಣವಾಗಿ ಉತ್ಪಾದನೆ ಮತ್ತು ಅಭಿವೃದ್ಧಿಗೆ ಉತ್ತೇಜನ ಕೊಡುವುದಕ್ಕೆ ನಿರ್ಧಾರಗಳ ವಿಚಾರ ವಿನಿಮಯ ಮಾಡಿಕೊಳ್ಳುವುದು ಅನಿವಾರ್ಯ. ಈ ಪದ್ಧತಿ ಮುಂದುವರಿಯಬೇಕು.
ಮೇಲ್ನೋಟಕ್ಕೆ ಭಿನ್ನಾಭಿಪ್ರಾಯಗಳಿಗೆ ಕಾರಣವಾದ ವಿಷಯಗಳನ್ನು ಅವಲೋಕಿಸೋಣ. ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಪ್ರಸಕ್ತ ಭಿನ್ನಾಭಿಪ್ರಾಯಕ್ಕೆ ವಸೂಲಾಗದ ಸಾಲ ಮತ್ತು ಬ್ಯಾಂಕ್‌ಗಳಲ್ಲಿ ಬಂಡವಾಳದ ಕೊರತೆ ಮತ್ತು ನಿವ್ವಳ ನಷ್ಟ ಕಾರಣ ಎಂದು ಕಂಡುಬರುತ್ತದೆ. ತತ್ಪರಿಣಾಮವಾಗಿ ಆರ್‌ಬಿಐ ಸಾರ್ವಜನಿಕ ಬ್ಯಾಂಕ್‌ಗಳ ಮೇಲೆ ಅವುಗಳ ಆರ್ಥಿಕತೆಯನ್ನು ಬಲಪಡಿಸಲು ಸಾಲ ನೀತಿಯ ಬದಲಾವಣೆ ನಿರ್ಬಂಧ ಹೇರಿದೆ. ಹಳಿ ತಪ್ಪಿದ ಬ್ಯಾಂಕುಗಳು ತಾವಾಗಿಯೇ ಸಹಜ ಸ್ಥಿತಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ಆರ್ಥಿಕತೆಯನ್ನು ಬಲಪಡಿಸಲು ನಿಯಂತ್ರಣ ಕ್ರಮ ಕೈಗೊಂಡಿದೆ. ಇಲ್ಲಿ ಒಂದು ಮುಖ್ಯ ವಿಚಾರ ಏನೆಂದರೆ ಯಾವುದೇ ಬ್ಯಾಂಕಿನ ನಷ್ಟ ಬಂಡವಾಳಕ್ಕಿಂತ ಜಾಸ್ತಿಯಾಗಬಹುದು. ಇದು ಸಾರ್ವಜನಿಕ ಬ್ಯಾಂಕ್‌ಗಳು ಅರ್ಥ ಮಾಡಿಕೊಳ್ಳಬೇಕು. ಆದರೆ ಇದರಿಂದಾಗಿ ಸಾಲ ವಿತರಣೆ ನಿಂತಂತೆ ಕಾಣುತ್ತದೆ. ಈ ಪರಿಸ್ಥಿತಿಯಲ್ಲಿಯೂ ದೇಶದ ಆರ್ಥಿಕಾಭಿವೃದ್ಧಿಯ ವೇಗವು ನಿಲ್ಲಬಾರದು ಎಂಬುದು ಸರಕಾರದ ಕಾಳಜಿ.
ಹಣದುಬ್ಬರವನ್ನು ಹತೋಟಿಯಲ್ಲಿಟ್ಟುಕೊಂಡು ಉತ್ಪಾದನೆಯನ್ನು ಹೆಚ್ಚಿಸಬೇಕೆಂಬುದು ಸರಕಾರದ ಗುರಿ. ಭಾರತೀಯ ಅರ್ಥ ವ್ಯವಸ್ಥೆಗೆ ಅನುಗುಣವಾಗಿ ಪ್ರಸಕ್ತ ಸನ್ನಿವೇಶದಲ್ಲಿ ಸಾಲ ವಸೂಲಿಗೆ ಮತ್ತು ಈ ಬಗ್ಗೆ ಕಾನೂನು ರೀತ್ಯಾ ಕ್ರಮಗಳನ್ನು ಜರುಗಿಸಿ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ಸಾಲ ನೀಡುವುದರಲ್ಲಿ ತುಸು ರಾಜಿ ಮಾಡಿಕೊಳ್ಳಬಹುದು.
ಆರ್‌ಬಿಐನಲ್ಲಿ ಆಪತ್ಕಾಲಕ್ಕಾಗಿ ಮುಡಿಪಾಗಿಟ್ಟ ಮುಂಗಡವನ್ನು ವರ್ಗಾವಣೆ ಮಾಡಬೇಕು ಎಂದು ಸರಕಾರ ಆದೇಶಿಸಿರುವುದನ್ನು ಆರ್ಥಿಕ ವ್ಯವಸ್ಥೆಯ ಬಗ್ಗೆ ಸಾಮಾನ್ಯ ಜ್ಞಾನವಿರುವವನೂ ಅರ್ಥ ಮಾಡಿಕೊಳ್ಳಬಹುದು. ತಪ್ಪು ಮಾಡಿದ ಬ್ಯಾಂಕ್‌ಗಳು ತಮ್ಮನ್ನು ತಾವೇ ಸರಿಪಡಿಸಿಕೊಳ್ಳಬೇಕು ಎಂಬ ಮಾತನ್ನು ಒಪ್ಪಿಕೊಳ್ಳಬೇಕು. ಆರ್ಥಿಕತೆ ಎಷ್ಟೇ ಸದೃಢವಾಗಿದ್ದರೂ ಸಂಕಷ್ಟ ಮತ್ತು ವಿಪತ್ತಿನ ಕಾಲಕ್ಕೆ ಹಣ ಮೀಸಲಿಟ್ಟು ಮುಂಜಾಗರೂಕತೆಯ ಕ್ರಮ ವಹಿಸಬೇಕು. ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ತರವಲ್ಲ. ಆರ್‌ಬಿಐನ ಸಲಹಾ ಮಂಡಳಿಗೆ ಸಂಘ ಪರಿವಾರದ ಒಬ್ಬರನ್ನು ಸ್ವತಂತ್ರ ನಿರ್ದೇಶಕನನ್ನಾಗಿ ನೇಮಿಸಿದ ಕ್ರಮ ಸರಿಯಲ್ಲ. ಈ ನಿರ್ದೇಶಕರು ಆರ್‌ಬಿಐ ಗವರ್ನರ್‌ರನ್ನು ಪ್ರತಿಯೊಂದು ವಿಚಾರದಲ್ಲಿ ಪ್ರಶ್ನಿಸುವ ಸನ್ನಿವೇಶ ಬಂದರೆ ಕೋರ್ ಕಮಿಟಿ ಅಥವಾ ಮಿನಿ ಸಲಹಾ ಮಂಡಳಿಯ ಸದಸ್ಯರಿಗೆ ತಮ್ಮ ಧೋರಣೆ ಮತ್ತು ದೂರದೃಷ್ಟಿಯ ನಿರ್ಧಾರಗಳನ್ನು ಅನುಷ್ಠಾನಿಸಲು ಅಸಾಧ್ಯವಾಗುವ ಪರಿಸ್ಥಿತಿಗೆ ಬಂದು ಮುಜುಗರ ಅನುಭವಿಸುವಂತಾಗಬಹುದು.
ದಿವಾಳಿತನ ಕಾಯಿದೆಯಿಂದ ವಿದ್ಯುತ್ ಮತ್ತು ಇಂಧನ ಘಟಕಗಳನ್ನು ಹೊರಗಿಡಬೇಕು ಎನ್ನುವ ಸರಕಾರದ ಸಲಹೆಗೆ ಮತ್ತು ಮೀಸಲು ನೀತಿಯನ್ನು ಈ ಇಂಧನ ಘಟಕಗಳಿಗೆ ರಿಯಾಯಿತಿ ನೀಡಲು ಬಳಸಬೇಕೆಂಬ ಸಲಹೆಯನ್ನು ಆರ್‌ಬಿಐ ಒಪ್ಪುತ್ತಿಲ್ಲ. ಈ ರೀತಿ ಮಾಡಿದರೆ ಹಾವಿನ ಹುತ್ತಕ್ಕೆ ಕೈಹಾಕಿದಂತಾಗುವುದು ಮತ್ತು ಎಲ್ಲಾ ದೊಡ್ಡ ಸಾಲಗಾರರು ವಿನಾಯಿತಿ ಕೇಳುವ ಪರಿಸ್ಥಿತಿ ಸೃಷ್ಟಿಯಾಗ ಬಹುದು. ಇದನ್ನು ಎದುರಿಸಲು ಆರ್‌ಬಿಐ ಸಿದ್ಧವಿಲ್ಲ. ಸಾರ್ವಜನಿಕ ಬ್ಯಾಂಕ್‌ಗಳನ್ನು ಸರಿದಾರಿಗೆ ತರುವ ಮಾರ್ಗೋಪಾಯ ಕಂಡುಕೊ ಳ್ಳಲು ಹೆಚ್ಚಿನ ಸ್ವಾಯತ್ತತೆ ಬೇಕು ಎಂಬುದು ಆರ್‌ಬಿಐ ಪ್ರತಿಪಾದನೆ.
2008-2014ರ ಅವಧಿಯಲ್ಲಿ ವಿಶ್ವವೇ ಆರ್ಥಿಕ ಸಂಕಷ್ಟದ ಸುಳಿಯಲ್ಲಿ ಸಿಕ್ಕಿತ್ತು. ಭಾರತದ ಆರ್ಥಿಕತೆಯೂ ಮುಗ್ಗರಿಸುತ್ತಿತ್ತು. ಆದರೆ ಹಲವಾರು ವಿಧಾನಗಳಿಂದ ಮರೆಮಾಚಲಾಯಿತು. ಆರ್ಥಿಕ ತಜ್ಞರು ಎಚ್ಚರಿಸಿದರೂ ಸರಕಾರವು ಯಾವ ಕಾರಣಕ್ಕಾಗಿ ಬೇಕಾಬಿಟ್ಟಿ ಸಾಲಕೊಡುವಂತೆ ಆದೇಶಿಸಿ ದೊಡ್ಡ ಮೊತ್ತದ ಆತಂಕಕಾರಿ ಸಾಲಗಳನ್ನು ಪುನಃಶ್ಚೇತನ ಮಾಡಿ ಕೆಲವೊಮ್ಮೆ ಅಂತಹ ಸಾಲಗಳನ್ನು ಹೆಚ್ಚಳಗೊಳಿಸಿ ಇದೀಗ ಸಾಲಗಾರರು ಕೈಯೆತ್ತುವಂತೆ ಮಾಡಿದೆ.
ಸದ್ಯದ ಪರಿಸ್ಥಿತಿಯಲ್ಲಿ ಬ್ಯಾಂಕ್‌ಗಳ ಪರಿಸ್ಥಿತಿ ಡೋಲಾಯ ಮಾನವಾಗಿದೆ. ಜಾಗತಿಕ ಆರ್ಥಿಕ ಹಿಂಜರಿತದ ಪರಿಸ್ಥಿತಿ ಕಣ್ಣೆದುರೇ ಇರುವಾಗ, ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ ದೇಶಗಳನ್ನು ನೋಡುತ್ತಾ, ಸಾಲ ನೀಡುವಾಗ ಜಾಗರೂಕರಾಗಿರಿ ಎಂಬ ಎಚ್ಚರಿಕೆಯ ಘಂಟಾನಾದವು ಮೊಳಗುತ್ತಿರುವಾಗಲೇ ಭಾರತೀಯ ಬ್ಯಾಂಕ್‌ಗಳು ಮನೆ ಬಾಗಿಲಿಗೆ ಹೋಗಿ ಸಾಲ ಕೊಡಲು ಒತ್ತಾಯಿಸಲಾಯಿತು. ಈ ಆರು ವರ್ಷಗಳಲ್ಲಿ ವಿಶ್ವದ ಬಹುತೇಕ ರಾಷ್ಟ್ರಗಳು ಗ್ರಾಹಕರ ಸಾಲವೆಂಬ ಸಂಕಷ್ಟದಿಂದ ಹೊರಬರಲು ಸಾಲ ಒದಗಿಸುವ ಪ್ರಮಾಣದಲ್ಲಿ ಕಡಿತಗೊಳಿಸಿದ್ದವು. ಹಲವಾರು ರಾಷ್ಟ್ರಗಳ ಅನುತ್ಪಾದಕ ಆಸ್ತಿ ಸಮಸ್ಯೆಯಿಂದ ಹೊರಬಂದವು. ಆ ಸಂದರ್ಭದಲ್ಲಿಯೂ ನಮ್ಮ ಬ್ಯಾಂಕ್‌ಗಳು ಮರೆಮಾಚಿಟ್ಟಿದ್ದ ಎನ್‌ಪಿಎ ಕ್ರಮೇಣ ಕವುಚಿ ಬಿದ್ದದ್ದುª ಮೇಲೇಳಲೇ ಇಲ್ಲ. ಈ ಪರಿಸ್ಥಿತಿಯನ್ನು ಕಂಡ ಬಳಿಕ ಈಗ ಆರ್‌ಬಿಐ ಮುಂಜಾಗ ರೂಕತೆಯಿಂದ ಸಾಲ ನಿಯಂತ್ರಣ ಕ್ರಮ ಕೈಗೊಳ್ಳುತ್ತಿರುವುದು ಸೂಕ್ತ ಎಂದೆನಿಸುವುದಿಲ್ಲವೇ? ಸರಕಾರ ಇದರಲ್ಲಿ ಮೂಗು ತೂರಿಸುವುದು ಸರಿಯಲ್ಲ, ಅಲ್ಪ ಸ್ವಲ್ಪ ಹೊಂದಾಣಿಕೆ ಅಗತ್ಯ.
ಈ ಸಮಯದಲ್ಲಿ ತಪ್ಪನ್ನು ತಿದ್ದಿಕೊಂಡು ಬ್ಯಾಂಕ್‌ಗಳ ವಿರುದ್ಧ ಕಠಿನ ಕಾನೂನು ಕ್ರಮಗಳನ್ನು ಜರಗಿಸಬೇಕೆ ಹೊರತು ದುರ್ಬಲ ಬ್ಯಾಂಕ್‌ಗಳಿಗೆ, ಎನ್‌ಬಿಎಫ್ಸಿಗಳಿಗೆ ಬಂಡವಾಳ ಒದಗಿಸುವುದು ಎಷ್ಟು ಸೂಕ್ತ ಎಂಬುದರ ಬಗ್ಗೆ ವಿಚಾರ ಮಾಡಬೇಕು. ಎಷ್ಟು ವರ್ಷ ಗಳ ಕಾಲ ಈ ರೀತಿ ನಡಾವಳಿಯನ್ನು ಮುಂದುವರಿಸಬಹುದು?
ಸುಸ್ತಿಸಾಲಗಳ ವಸೂಲಿಗೆ ಆರ್‌ಬಿಐ ಹಲವು ಕ್ರಮ ಕೈಗೊಂಡಿದೆ. ಇದರಲ್ಲಿ ಬಹುಪಾಲು ಕಾರ್ಪೊರೇಟ್ ವಲಯದ ಸಾಲ. ಹೀಗಿರುವಾಗ ಅಶಕ್ತ ಕಾರ್ಪೊರೇಟ್ ಕಂಪೆನಿಗಳಿಗೆ ಸಾಲ ಕೊಡುವುದು ಸೂಕ್ತವಲ್ಲ. ಆದರೆ ಸಣ್ಣ ಮತ್ತು ಮಧ್ಯಮ ವಲಯಕ್ಕೆ ಸಾಲ ನೀಡಿ ಅಭಿವೃದ್ಧಿಯನ್ನು ಉತ್ತೇಜಿಸಬಹುದು. ಯಾವ ಬ್ಯಾಂಕ್‌ಗಳು ಆರ್‌ಬಿಐನ ನೀತಿಯನ್ನು ಪಾಲಿಸದೆ, ಸಾಲದ ಬಗ್ಗೆ ನಿಗಾವಹಿಸದೆ ಸರಕಾರದ ಒತ್ತಡಕ್ಕೆ ಮಣಿದು ಸಾಲ ಕೊಟ್ಟಿವೆಯೋ ಆ ಬ್ಯಾಂಕ್‌ಗಳೇ ಹೆಚ್ಚು ಸಂಕಷ್ಟಕ್ಕೆ ಈಡಾಗಿವೆ. ಅವುಗಳು ಹಳಿಗೆ ತಾವಾಗಿಯೇ ಬರಬೇಕು ಎಂಬುದು ಆರ್‌ಬಿಐ ವಾದ. ಇದು ಸರಿ. ಸಾಲ ನೀತಿಯನ್ನು ಸಡಿಲಗೊಳಿಸಿ ಆರ್ಥಿಕ ಚಟುವಟಿಕೆಯನ್ನು ಬಲಪಡಿಸಬೇಕು ಎನ್ನುವುದು ಸರಕಾರದ ನಿರೀಕ್ಷೆ. ಈ ವಿಚಾರದಲ್ಲಿ ಭಿನ್ನಾಭಿಪ್ರಾಯಕ್ಕೆ ಎಡೆಗೊಡುವುದಕ್ಕಿಂತ ಸರಿ ನಿರ್ಧಾರಕ್ಕೆ ಒತ್ತು ಕೊಡಬೇಕು.
ಯಾವ ಬ್ಯಾಂಕ್‌ನ ಒಟ್ಟಾರೆ ಅನುತ್ಪಾದಕ ಸಾಲ ಶೇ.20ಕ್ಕಿಂತ ಹೆಚ್ಚಿದೆಯೋ ಆ ಬ್ಯಾಂಕನ್ನು ದಿವಾಳಿ ಬ್ಯಾಂಕ್‌ಗಳೆಂದು ಪರಿಗಣಿಸಬೇಕಾದರೂ ಕೂಡಾ ಪರಿಗಣಿಸದೆ ಸುಸ್ತಿ ಸಾಲ ವಸೂಲಿ ಮಾಡಿ ಹಳಿಗೆ ತರಲು ಆರ್‌ಬಿಐ ಪ್ರಯತ್ನ ಸರಿಯಾಗಬಹುದು ಎಂದು ನಿರೀಕ್ಷಿಸೋಣ.
ಯಾವುದೇ ಸರಕಾರವಾಗಲಿ ರಾಜಕೀಯ ಲಾಭಕ್ಕಾಗಿ ತನ್ನ ಸೋಲನ್ನು ಸಾಧನೆಯೆಂದು ಪ್ರತಿಬಿಂಬಿಸಿದರೆ ಮುಂದೆ ಮುಜುಗರವನ್ನು ಅನುಭವಿಸುವುದಲ್ಲದೇ ದೇಶದ ಅಭಿವೃದ್ಧಿಗೆ ಕಂಟಕ ಪ್ರಾಯವಾಗುತ್ತದೆ. ಇದೇ ಸಂದರ್ಭದಲ್ಲಿ ವಿಶ್ವದ ಯಾವುದೇ ದೇಶವು ಕೇಂದ್ರ ಬ್ಯಾಂಕಿಗೆ ಸಂಪೂರ್ಣ ಸ್ವಾಯತ್ತತೆ ಕೊಟ್ಟು ತನ್ನ ಕೈಯಲ್ಲಿರುವ ಲಗಾಮನ್ನು ಬಿಟ್ಟುಕೊಟ್ಟಿಲ್ಲ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
ಇಲ್ಲಿ ಇನ್ನೊಂದು ವಿಚಾರವೇನೆಂದರೆ, ರಿಪೊ ದರವು ರಿಸರ್ವ್ ಬ್ಯಾಂಕ್ ವಾಣಿಜ್ಯ ಬ್ಯಾಂಕ್‌ಗಳಿಗೆ ಸಾಲ ಕೊಡುವಾಗ ವಿಧಿಸುವ ದರವಾಗಿದೆ. ರಿಪೋ ದರ ಇಳಿಕೆ ಮಾತ್ರ ಆರ್ಥಿಕ ಸ್ಥಿತಿಯನ್ನು ನಿಯಂತ್ರಿಸಬಲ್ಲದು ಎಂಬುದು ಸೈದ್ಧಾಂತಿಕವಾಗಿ ಒಪ್ಪಬಲ್ಲ ವಿಚಾರವಲ್ಲ. ಆರ್‌ಬಿಐನ ಈ ನೀತಿ ಸರಿಯೆನಿಸುವುದಿಲ್ಲವೇ? ಇದೀಗ ಸೆಕ್ಷನ್ 7 (1) ನ್ನೂ ಕೇಂದ್ರ ಸರಕಾರ ಬಳಸಲು ಹೊರಟಿದೆ. ಅದರ ಸಾರಾಂಶ ಹೀಗಿದೆ: ಸಾರ್ವಜನಿಕ ಹಿತಾಸಕ್ತಿಯಲ್ಲಿ ಕೇಂದ್ರ ನಿರ್ದೇಶಕರ ಮಂಡಳಿಗೆ ಆರ್‌ಬಿಐನ ಜವಾಬ್ದಾರಿಯನ್ನು ನಿರ್ವಹಿಸಲು ಗವರ್ನರ್ ಅನುಪಸ್ಥಿತಿಯಲ್ಲಿ ಉಪ ಗರ್ವನರ್ ಕಾರ್ಯ ಕಲಾಪವನ್ನು ನಿಭಾಯಿಸಬಹುದು. ಆರ್‌ಬಿಐ ನಿರ್ವ ಹಿಸುವ ಎಲ್ಲಾ ಕಾರ್ಯ ಮತ್ತು ವ್ಯವಹಾರಗಳನ್ನು ಕೇಂದ್ರ ನಿರ್ವ ಹಿಸಬಹುದು ಎಂದು. ಇದು ಆರ್‌ಬಿಐ ಸ್ವಾಯುತ್ತತೆಗೆ ಧಕ್ಕೆ ತರುತ್ತದೆ ಮತ್ತು ಈ ಸಂದರ್ಭವನ್ನು ಕೇಂದ್ರ ಸರಕಾರ ಯಾವ ಹಿತಾಸಕ್ತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬಳಸುತ್ತಿದೆ ಎಂಬ ಅನುಮಾನ ಜವಾಬ್ದಾರಿಯುತ ನಾಗರಿಕರಲ್ಲಿ ಮೂಡುವುದು ಸಹಜ.
ಒಂದು ವಿಚಾರವನ್ನು ಗಮನಿಸೋಣ, ನೋಟು ಅಪಮೌಲ್ಯ ದಂತಹ ಕಬ್ಬಿಣದ ಕಡಲೆಯನ್ನು ಆರ್‌ಬಿಐ ಜೀರ್ಣಸಿಕೊಂಡಿತ್ತು. ಅಪಮೌಲ್ಯ ಪ್ರತ್ಯಕ್ಷವಾಗಿ ದೇಶಕ್ಕೆ ಸಹಾಯವಾಗಿದೆ ಎಂದು ಹೇಳುವ ಪರಿಸ್ಥಿತಿ ಇಲ್ಲದಿದ್ದರೂ ಪರೋಕ್ಷವಾಗಿ ದೂರಗಾಮಿ ಆರ್ಥಿಕತೆಗೆ ಸಹಾಯವಾಗಿದೆ.ಇದನ್ನು ನಿಭಾಯಿಸಿದ ಆರ್‌ಬಿಐ ಮತ್ತು ಬ್ಯಾಂಕ್‌ಗಳ ಪರಿಶ್ರಮವನ್ನು ಶ್ಲಾ ಸಬೇಕು.
ಮಹಾಚುನಾವಣೆಯ ಅಂಚಿನಲ್ಲಿ ಬ್ಯಾಂಕ್ ವಿಲೀನ, ದಿವಾಳಿತನ ಕಾಯಿದೆ ಮತ್ತು ಆರ್‌ಬಿನ ಅಧಿಕಾರಗಳನ್ನು ದುರ್ಬಲಗೊಳಿ ಸುವುದಕ್ಕೆ ರಾಜಕೀಯ ಕಾರಣವಿದ್ದರೆ ಪುನರ್ ವಿಮರ್ಶಿಸುವುದು ಸೂಕ್ತ. ರಾಜೀನಾಮೆ ಪಡೆ ಯುವುದು ದೇಶದ ಹಿತದೃಷ್ಟಿಯಿಂದ ಸರಿಯಲ್ಲ. ಸವಾಲುಗಳನ್ನು ಎದುರಿಸುವುದು ಸರಿಯಾದ ಕ್ರಮ ಮತ್ತು ದಿಟ್ಟ ಹೆಜ್ಜೆ.
– ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್ ಬಗ್ಗೆ ರಮ್ಯಾ ಮಾತು
Naxalites; ಶರಣಾಗತಿ ಪ್ಯಾಕೇಜ್ ಬೆಚ್ಚಿಬೀಳಿಸಿದೆ: ಸುನಿಲ್ ಕುಮಾರ್ ತೀವ್ರ ಆಕ್ರೋಶ
ಸುಲೈಮಾನ್ ಮನೆಗೆ ಸ್ಪೀಕರ್ ಯು.ಟಿ.ಖಾದರ್ ಭೇಟಿ; ಎಸ್ಪಿ, ಡಿವೈಎಸ್ಪಿ, ಮನೆಯವರ ಜೊತೆ ಸಮಾಲೋಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.