ರಿಯಾಲಿಟಿ ಶೋ ಮತ್ತು ಬದಲಾದ ಕಲಾ ಪರಿಕಲ್ಪನೆಗಳು


Team Udayavani, Dec 29, 2017, 6:00 AM IST

Reality-show.jpg

ಪ್ರೇಕ್ಷಕರು ಗಂಭೀರ ಸಂಗೀತವನ್ನು, ನೃತ್ಯ, ನಾಟಕಗಳನ್ನು, ಸಿನೆಮಾಗಳನ್ನು, ಸೀರಿಯಲ್‌ಗ‌ಳನ್ನು ಬಿಟ್ಟು ರಿಯಾಲಿಟಿ ಶೋ ವೀಕ್ಷಿಸುತ್ತಾರೆ ಎಂದರೆ ಬಹುಶಃ ಕಲೆಯ ವ್ಯಾಖ್ಯೆ ಮತ್ತೆ ಬದಲಾಗುತ್ತಿದೆ ಎಂದೇ ಅನಿಸುತ್ತಿದೆ. ಮುಂದಿನ ದಿನಗಳಲ್ಲಿ ಜನಪ್ರಿಯ ಕಲಾ ಪ್ರಕಾರಗಳು, ಸಾಹಿತ್ಯ-ಸಂಗೀತಗಳು ಯಾವ ರೀತಿಯಲ್ಲಿ ಮರುಹುಟ್ಟು ಪಡೆಯಲಿವೆ ಎನ್ನುವುದು ತುಂಬ ಕುತೂಹಲದ ವಿಷಯ.

ಬಿಗ್‌ಬಾಸ್‌ನಂಥ ಜನಪ್ರಿಯ ರಿಯಾಲಿಟಿ ಶೋಗಳ ಬಗ್ಗೆ ಚರ್ಚಿಸುವ ಮುನ್ನ ಕಲೆ ಎಂದರೇನು? ಅದಕ್ಕೂ ಜೀವನಕ್ಕೂ ಏನು ಸಂಬಂಧ? ಕಲೆಗೂ ಸಮಾಜಕ್ಕೂ ಏನು ಸಂಬಂಧ? ಇತ್ಯಾದಿ ಪ್ರಶ್ನೆಗಳು ಮಹಾನ್‌ ಗ್ರೀಕ್‌ ಮೇಧಾವಿ ಪ್ಲೇಟೋನಿಂದ ಆರಂಭಗೊಂಡು ಇಂದಿಗೂ ಮುಂದುವರೆದಿವೆ. ಪ್ಲೇಟೋನ ಒತ್ತು ಒಳ್ಳೆಯ ಸಮಾಜವೊಂದನ್ನು ಕಟ್ಟುವುದಾಗಿತ್ತು. ಅವನಿಗೆ ಕಲೆಯ ಚರ್ಚೆ ಬೇಕಿರಲಿಲ್ಲ. ಹಾಗಾಗಿ ಅವನಿಗೆ ಕಲೆ ಜೀವನವನ್ನು ಚಿತ್ರ ವಿಚಿತ್ರವಾಗಿ, ಇಲ್ಲ ಸಲ್ಲದ ಬಣ್ಣಗಳಲ್ಲಿ, ಉತ್ಪ್ರೇಕ್ಷೆಗಳಲ್ಲಿ ಪ್ರದರ್ಶಿಸು ವುದು ಇಷ್ಟವಿರಲಿಲ್ಲ. ಅದಕ್ಕಾಗಿ ಆತ ಕಲೆಯನ್ನು ವಾಸ್ತವದಿಂದ ದೂರವಾದುದು ಮತ್ತು ಸುಳ್ಳು ಹೇಳುವಂತಹುದು ಎಂದು ಹೇಳಿದ. ಅಲ್ಲದೇ ಕಲೆ ಮನಸ್ಸುಗಳ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ ಎಂದು ಅಭಿಪ್ರಾಯಪಟ್ಟ. ಈ ಹಿನ್ನೆಲೆಯಲ್ಲಿ ಕಲಾವಿದರು ಒಂದು ಆದರ್ಶಮಯವಾದ ರಿಪಬ್ಲಿಕ್‌ನಲ್ಲಿ ಉಳಿಯಲು ಅನರ್ಹರು ಎಂದು ಆತ ವಾದಿಸಿದ. ಆದರೆ ಗುರುವಿಗೆ ತಿರುಮಂತ್ರ ಹಾಕಿದ ಶಿಷ್ಯ ಅರಿಸ್ಟಾಟಲ್‌, ಕಲೆ ವಾಸ್ತವದ ಪರಿಪೂರ್ಣತೆಯ ಸ್ವರೂಪ, ಕಲೆ ಮನುಷ್ಯನನ್ನು ಒಂದು ಭಾವನೆಯ ಸ್ಫೋಟ(ಕೆಥಾರ್ಸಿಸ್‌)ಕ್ಕೆ ಒಳಪಡಿಸುವುದರ ಮೂಲಕ ಆತನನ್ನು ಮಹೋನ್ನತಿಗೆ ಒಯ್ಯುತ್ತದೆ ಎಂದು ಹೇಳಿದ. ಅಂದಿನಿಂದ ಆರಂಭವಾದ ಕಲೆ ಮತ್ತು ಅದರ ವಿವಿಧ ಆಯಾಮಗಳ ಕುರಿತಾದ ಚರ್ಚೆ ಇಂದಿಗೂ ಮುಂದುವರೆದಿದೆ.

ಕುತೂಹಲವೆಂದರೆ ಕಲೆ ಎಂದರೆ ಏನೆಂಬುದರ ಕುರಿತಾಗಿ ಸ್ಪಷ್ಟವಾದ ವ್ಯಾಖ್ಯೆಗಳಿಲ್ಲದಿದ್ದರೂ ಪಂಡಿತರಿಂದ ಹಿಡಿದು ಪಾಮರರ ವರೆಗೂ ಕಲೆಯ ಕುರಿತಾಗಿ ಇರುವ ವೈವಿಧ್ಯಮಯ ಕಲ್ಪನೆ ಗಳಲ್ಲಿಯೂ ಕೆಲವು ಸಾಮಾನ್ಯ ಅಂಶಗಳಿವೆ. ಅವುಗಳಲ್ಲಿ ಒಂದನೆಯದು, ಕಲೆ ಎಂದರೆ ಜೀವನದ ಸೌಂದರ್ಯವನ್ನು, ಸೊಗಡನ್ನು, ದಿವ್ಯತೆಯನ್ನು ತನ್ನದೇ ಆದ ಮಾಧ್ಯಮವೊಂದರ ಮೂಲಕ ಪ್ರಕಟಿಸುವ ಕ್ರಿಯೆ. ಪಂಡಿತ ಮಲ್ಲಿಕಾರ್ಜುನ ಮನ್ಸೂರ್‌ ಅವರ ಸಂಗೀತಕ್ಕೂ, ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಯಕ್ಷಗಾನ ಪ್ರದರ್ಶನಕ್ಕೂ, ರಫೇಲ್‌, ಲಿಯೋನಾಡೋì ಡಾ ವಿಂಚಿಯವರ ವರ್ಣ ಚಿತ್ರಗಳಿಗೂ, ತಾಜಮಹಲ್‌ ಅಂತಹ ಶಿಲ್ಪಕಲಾ ಮಾದರಿಗೂ, ಶೇಕ್ಸಪಿಯರ್‌ನ ಕೃತಿಗಳಿಗೂ ಏನೋ ಒಂದು ಸಾಮ್ಯತೆ ಇದೆ. ಅದೇನೆಂದರೆ ಇವೆಲ್ಲವೂ ಬದುಕಿನ ಆಳದಲ್ಲಿ ಎಲ್ಲೊ ಹುದುಗಿದ್ದ ಸೌಂದರ್ಯವನ್ನು, ಹೆಕ್ಕಿ, ಹೀರಿ ಹೊರತೆಗೆದು ಸಾಮಾನ್ಯರಿಗಾಗಿ ಪ್ರದರ್ಶಿಸುವ ಗುಣ ಹೊಂದಿರುವುದು. ಇವೆಲ್ಲವುಗಳಲ್ಲಿಯೂ ಎದ್ದು ಕಾಣುವ ಅಂಶ ಸೌಂದರ್ಯ. ಸೌಂದರ್ಯ ಎಂದರೆ ಕಣ್ಣುಗಳಿಗೆ, ಮನಸ್ಸಿಗೆ ಹೃದಯಕ್ಕೆ ತಟ್ಟುವ, ಮೈಮನ ಪುಳಕಗೊಳಿಸುವ, ಮೈ ನವಿರೇಳಿಸುವ ಭಾವನೆಗಳನ್ನು ಸೃಷ್ಟಿಸಬಲ್ಲ ಒಂದು “ಟ್ರಿಗರ್‌’ ಎಂದು  ಇಲ್ಲಿ ಹೇಳಿಕೊಳ್ಳಬಹುದು. ರಾಜಾ ರವಿವರ್ಮನ ಪೇಂಟಿಂಗ್‌ಗಳೂ ಹಾಗೆಯೇ. ಅವುಗಳಲ್ಲಿ ಬರುವ ನಗ್ನ, ಅರೆ ನಗ್ನ ಸುಂದರಿಯರು ಬದುಕಿನ ಒಳಗಡೆ ಎಲ್ಲೊ ಹುದುಗಿಕೊಂಡಿರುವ ಮಹಾನ್‌ ಸೌಂದರ್ಯದ ಪ್ರತಿಫಲನ. ಗ್ರೀಕ್‌ ಶಿಲ್ಪಗಳಲ್ಲಿ ಬರುವ ಅತಿ ಸುಂದರ ನಗ್ನ ಪುರುಷರೂ ಹಾಗೆಯೇ. ಇವೆಲ್ಲ ಮನಸ್ಸಿಗೆ ವಿಚಿತ್ರ ಸಂತೋಷ-ಮುದವನ್ನು ತರುತ್ತವೆ. ಮನಸ್ಸನ್ನು ಹೂಗಳ ಹಾಗೆ ಅರಳಿಸಿ ಪ್ರಸನ್ನಗೊಳಿಸಿ ಬಿಡುತ್ತವೆ. ಇಂತಹ ಸೊಬಗನ್ನು ಕವಿಗಳು, ಕುಂಚಗಾರರು, ಶಿಲ್ಪಿಗಳು ಸುಂದರಿಯರ ಶರೀರಗಳಲ್ಲಿ, ಜಿಂಕೆಗಳ ಓಟದಲ್ಲಿ, ನವಿಲಿನ ನೃತ್ಯದಲ್ಲಿ, ಅರಳಿ ನಿಂತ ಹೂಗಳ ದಟ್ಟ ಬಣ್ಣಗಳಲ್ಲಿ, ಸುರಿಯುವ ಮಳೆಯಲ್ಲಿ, ಹಸಿರಲ್ಲಿ, ಹೊನ್ನಲ್ಲಿ, ಬೆಳದಿಂಗಳಲ್ಲಿ ಹೀಗೆ ಜೀವನದ ವಿವಿಧ ಆಯಾಮಗಳಲ್ಲಿ ಕಂಡುಕೊಂಡಿದ್ದಾರೆ. ಪರಿಣಾಮವಾಗಿ ಕಲಾಕೃತಿಗಳು ಎಲ್ಲೆಲ್ಲೂ ಅರಳಿ ನಿಂತಿವೆ.

ಕಲೆಯ ಇನ್ನೊಂದು ಮಹತ್ವದ ಆಯಾಮವೆಂದರೆ ಮನುಷ್ಯನ ಮನಸ್ಸಿನಲ್ಲಿ ಮಹೋನ್ನತಿಯ ಭಾವನೆಯನ್ನು ಸೃಷ್ಟಿಸುವ ಅದರ ವಿಚಿತ್ರ ಶಕ್ತಿ. ಮಾನವ ಜೀವಿ ಊಟ, ತಿಂಡಿ ಮತ್ತು ಮೈಥುನಗಳಿಂದ ಮಾತ್ರ ತೃಪ್ತನಾಗುವುದಿಲ್ಲ. ಬದುಕಿನ ದಿವ್ಯತೆಯನ್ನು ಕಾಣುವ, ಅನುಭವಿಸುವ ಅದಮ್ಯ ಹಂಬಲ ಆತನ ಮನಸ್ಸಿನಾಳ ದೊಳಗಿರುತ್ತದೆ. ಕಲೆಯಲ್ಲಿನ ಸೌಂದರ್ಯ ಮಾಧ್ಯಮ ಆತನನ್ನು ಮಹೋನ್ನತಿಯ ದಾರಿಯಲ್ಲಿ ಕೊಂಡೊಯ್ಯುತ್ತದೆ. ಮಹೋನ್ನತಿ ಅನುಭವಿಸುವ ಸುಮಧುರ ಬಯಕೆಯ ಯಾತನೆ ಆತನನ್ನು ಬೇರೊಂದು ದಿವ್ಯದ ಯೋಚನೆಗೆ ಕರೆದೊಯ್ಯುತ್ತದೆ. ಸೌಂದರ್ಯದ ಜತೆ ಇರುವ ಮಹೋನ್ನತಿಯೊಂದಿಗೆ ಆತನ ಮನಸ್ಸು ತಾದ್ಯಾತ್ಮಗೊಂಡಾಗ ದಿವ್ಯತೆಯ ಅನುಭವ ಆತನಿಗೆ ಸಿದ್ಧಿಸುತ್ತದೆ. ಈಗ ಆತ ದೈನಂದಿನ ಬದುಕಿನ ಕ್ಷುಲ್ಲಕತೆಯನ್ನು, ಕ್ಷುದ್ರತೆಯನ್ನು ಮೀರಿ ಬೇರೊಂದು ಅತಿ ಮಾನವ ಜಗತ್ತಿಗೆ ಹೋಗುತ್ತಾನೆ.

ಕಲೆ ನೀಡುವ ಆನಂದದ ಅನುಭೂತಿ ಅಂತಹುದು. ಹಾಗಾಗಿಯೇ ಹಲವೊಮ್ಮೆ ಶ್ರೇಷ್ಠ ಕಲಾವಿದರ ಕಲಾವಂತಿಕೆಯ ಸಮ್ಮುಖದಲ್ಲಿ ಜನ ಮತಿಭ್ರಮೆಗೊಂಡವರಂತೆ ವರ್ತಿಸುವುದು. ಗಜಲ್‌ ಗಾಯಕ ಗುಲಾಮ್‌ ಅಲಿ ಅವರು “ಚುಪಕೆ ಚುಪಕೆ ರಾತ್‌ ದಿನ್‌’ ಹಾಡಿದಾಗ ಪ್ರೇಕ್ಷಕರು ಹುಚ್ಚರಂತೆ ವರ್ತಿಸುವುದನ್ನು ಸ್ವತಃ ಕಂಡಿದ್ದೇನೆ. ಇಂತಹ ಸಂದರ್ಭಗಳಲ್ಲಿ ಪ್ರೇಕ್ಷಕ ತನ್ನನ್ನು ಮೀರಿದ ಒಂದು ಅತಿ ಮಾನವ ಜಗತ್ತನ್ನು ಪ್ರವೇಶಿಸುತ್ತಾನೆ. ಬಹುಶಃ ಇದೇ ಕಾರಣದಿಂದಲೇ ಬ್ರಿಟಿಷ್‌ ಕವಿ ಜಾನ್‌ ಕೀಟ್ಸ್‌ “ಎ ಥಿಂಗ್‌ ಆಫ್‌ ಬ್ಯೂಟಿ ಇಸ್‌ ಎ ಜಾಯ್‌ ಫಾರೆವರ್‌’ ಎಂದು ಹೇಳಿದ್ದು. ಇಂಗ್ಲಿಷ್‌ ಸಾಹಿತ್ಯದಲ್ಲಿ ಶೇಕ್ಸ್‌ಪಿಯರ್‌ನಿಂದ ಹಿಡಿದು ವರ್ಡ್ಸ್‌ವರ್ಥ್- ಟೇನಿಸನ್‌ವರೆಗೆ, ಕನ್ನಡದಲ್ಲಿ ಹೆಚ್ಚು ಕಡಿಮೆ ಇಪ್ಪತ್ತನೆಯ ಶತಮಾನದ ಮೊದಲ ಅರ್ಧಭಾಗದವರೆಗಿನ ಕಲಾ ಪರಂಪರೆಗಳೆ ಲ್ಲವೂ ಹೀಗೆ ಸೌಂದರ್ಯೋಪಾಸಕ, ಮಹೋನ್ನತಿಯ ದಿವ್ಯತೆಯ ಹುಡುಕಾಟದ ಪರಂಪರೆಗಳು. ಅಂದರೆ ಕವಿಗಳು ಮುಖ್ಯವಾಗಿ ಸೌಂದರ್ಯೋಪಾಸಕರಾಗಿದ್ದವರು. ಅದರ ಮೂಲಕ ದಿವ್ಯತೆಯನ್ನು ಅನುಭವಿಸಿದವರು. ಉದಾಹರಣೆಗೆ ಕನ್ನಡದಲ್ಲಿ ಕುವೆಂಪು ಬಹು ದೊಡ್ಡ ಸೌಂದರ್ಯಾರಾಧಕರಾಗಿದ್ದವರು. ಇನ್ನೊಬ್ಬ ಪ್ರಸಿದ್ಧ ಕವಿ ದ.ರಾ.ಬೇದ್ರೆ ಭೃಂಗದ ಬೆನ್ನೇರಿ ಬಂದ ಕಲ್ಪನಾ ವಿಲಾಸವನ್ನು ಕಂಡವರು. ಮುಖ್ಯವಾಗಿ ನನಗೆ ಹೇಳಬೇಕಾದದ್ದೆಂದರೆ ಇಂಗ್ಲಿಷ್‌ ಸಾಹಿತ್ಯದಲ್ಲಿ, ಸಂಸ್ಕೃತಿಯಲ್ಲಿ ಸುಮಾರು ಹತ್ತೂಂಬತ್ತನೆಯ ಶತಮಾನದ ಕೊನೆಯವರೆಗೂ ಮತ್ತು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ಸುಮಾರು ಇಪ್ಪತ್ತನೆಯ ಶತಮಾನದ ಮಧ್ಯ ಭಾಗದವರೆಗೂ ಕಲೆಯ ಪ್ರಮುಖ ಆಯಾಮಗಳಾಗಿದ್ದವು ಸೌಂದರ್ಯ ಮತ್ತು ಮಹೋನ್ನತಿಯ ಪರಿಕಲ್ಪನೆಗಳು.

ಆದರೆ ವರ್ಜಿನಿಯಾ ವೂಲ್ಫ್ ಎನ್ನುವ ಇಪ್ಪತ್ತನೆಯ ಶತಮಾನದ ಇಂಗ್ಲಿಷ್‌ ಭಾಷೆಯ ಶ್ರೇಷ್ಠ ಕಾದಂಬರಿಕಾರ್ತಿ ಹೇಳುವ ಹಾಗೆ ಬಹುಶಃ ಇಪ್ಪತ್ತನೆಯ ಶತಮಾನದಲ್ಲಿ ಎಲ್ಲೋ ಒಂದು ಕಡೆ ಮಾನವ ಮನಸ್ಸು ಬದಲಾಗಿ ಹೋಯಿತು. ಇಂತಹ ಬದಲಾ ವಣೆಯ ಚಿತ್ರಣವನ್ನು ಸ್ಪಷ್ಟವಾಗಿ ಕಂಡುಕೊಳ್ಳಬಹುದಾಗಿದ್ದು, ಹತ್ತೂಂಬತ್ತನೆಯ ಶತಮಾನದ ಕೊನೆಯ ಭಾಗದ ಇಂಗ್ಲಿಷ್‌ ಸಾಹಿತ್ಯದಲ್ಲಿ ಹಾಗೂ ನಂತರ. ಕ್ರಮೇಣ ಕಲೆಯ ಕುರಿತಾದ ಮೇಲೆ ವಿವರಿಸಲಾದ ಮೊದಲಿನ ಪರಿಕಲ್ಪನೆಗಳು ಸಂಪೂರ್ಣವಾಗಿ ತಲೆ ಕೆಳಗಾಗಿ ಕಲೆ ಜೀವನದ ಗಲೀಜಿನ ಮತ್ತು ಕೊಳಕಿನ ಪ್ರದರ್ಶನವಾಗಿ ಪರಿವರ್ತನೆಯಾಗಿ ಹೋಯಿತು. ಬಹುಶಃ ಇದಕ್ಕೆ ಕಾರಣವೆಂದರೆ ಹತ್ತೂಂಬತ್ತನೆಯ ಶತಮಾನದ ಕೊನೆಯ ಭಾಗದಲ್ಲಿ ಮತ್ತು ನಂತರ ಯುರೋಪಿನಲ್ಲಿ ಹುಟ್ಟಿಕೊಂಡ ಅವಂಟ್‌ಗಾರ್ಡ್‌ ಚಳವಳಿಗಳು. ಉದಾಹರಣೆಗೆ ಇರುವವುಗಳು ಫ್ರೆಂಚ್‌ ಸಿಂಬಲಿಸ್ಟ್‌ ಚಳವಳಿ, ಆ್ಯಂಗ್ರಿ ಯಂಗ್‌ ಮ್ಯಾನ್‌ ಇತ್ಯಾದಿ ಚಳವಳಿಗಳು. ಫ್ರೆಂಚ್‌ ಸಿಂಬಲಿಸ್ಟ್‌ ಪಂಥಕ್ಕೆ ಸೇರಿದ ಕವಿ ಬೌದಲೇಯರ್‌ನ ಕವನಗಳು ಮಡಿವಂತರಿಗೆ ದಿಗ್ಭ್ರಮೆ ಮತ್ತು ಅಸಹ್ಯ ಹುಟ್ಟಿಸುವಂತಹ ಕವಿತೆಗಳು. ಪಾಪದ ಹೂಗಳು ಎನ್ನುವ ಹೆಸರಿನಲ್ಲಿ ಪಿ.ಲಂಕೇಶ್‌ ಅವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇದರಲ್ಲಿ ಒಂದು ಕವಿತೆ ಒಬ್ಬ ವೇಶ್ಯೆಯ ಸಾಂಗತ್ಯದ ಕುರಿತು ಇದೆ. ಇನ್ನೊಂದು ಕವನದಲ್ಲಿ “ನನ್ನ ತಂಗಿ ಹಾಗೂ ನನ್ನ ಪ್ರೇಯಸಿ’ ಎನ್ನುವ ಬೆಚ್ಚಿ ಬೀಳಿಸುವ ಹೊಸ ನೈತಿಕತೆಯ ಸಾಲುಗಳು ಬರುತ್ತವೆ. ನಂತರ ಇಂಗ್ಲಿಷಿನಲ್ಲಿ ವಾರ್‌ ಪೋಯೆಟ್‌ ಆಗಿದ್ದ ವಿಲ್‌ಫ್ರೆಡ್‌ ಓವನ್‌ ಎನ್ನುವ ಕವಿ “ನನ್ನ ಕವಿತೆಗಳು ಇರುವುದು ಹರಿಯುವ ಭಾವನೆಗಳ ಕುರಿತಲ್ಲ. ಜೀವನದ ಕರುಣಾಜನಕ ಸ್ಥಿತಿಯ ಕುರಿತು’ ಎಂದು ಹೇಳುವ ಮೂಲಕ ಇಂಗ್ಲೆಂಡಿನಲ್ಲಿ ಹೊಸ ಕಲಾ ಪರಂಪರೆಯ ಉದಯಕ್ಕೆ ನಾಂದಿ ಹಾಡುತ್ತಾನೆ. ಇಪ್ಪತ್ತನೆಯ ಶತಮಾನದ ಯುರೋಪಿನ ಒಂಟಿತನದ, ಅಸಹಾಯಕತೆಯ, ಕೊಳಕಿನ ಧ್ವನಿಯಾದ ಟಿ.ಎಸ್‌. ಎಲಿಯಟ್‌ ಅಂದಿನ ಜಗತ್ತಿನ “ಮುರಿದು ಹೋದ ಪ್ರತಿಮೆ’ಗಳ ಕುರಿತು ಬರೆಯುತ್ತಲೇ ಹೋಗುತ್ತಾನೆ.

ಆತನ ಪ್ರಸಿದ್ಧ ಕವನ “ವೇಸ್ಟ್‌ ಲ್ಯಾಂಡ್‌’ನಲ್ಲಿ ಬರುವ ಪ್ರೇಯಸಿಯೊಬ್ಬಳು ಬಂದ ಪ್ರಿಯಕರನ ಸಾಂಗತ್ಯ ಮುಗಿದ ಕೂಡಲೇ ಪುನಃ ಕೂದಲು ಬಾಚಿಕೊಂಡು ಬೇರೊಬ್ಬನಿಗಾಗಿ ಕಾಯುವುದರ ವರ್ಣನೆ ಬರುತ್ತದೆ. ಹಾಗೆಯೇ ಅಲ್ಲಿ ಬರುವ ಲಿಲ್‌ ಎನ್ನುವ ಮಹಿಳೆಯೊಬ್ಬಳು ಇನ್ನೊಬ್ಬ ಮಹಿಳೆಯನ್ನು ಅವಳಿಗೆ ಬೇಡವಾಗಿರುವ ಸಂಪರ್ಕವೊಂದಕ್ಕೆ ಪ್ರೋತ್ಸಾಹಿಸುತ್ತಾಳೆ. ಹೆಚ್ಚು ಕಡಿಮೆಯಾಗಿ ನೀನೇನಾದರೂ ಗರ್ಭವತಿಯಾದರೆ ಅದೇನೂ ದೊಡ್ಡ ವಿಷಯವಲ್ಲ. ಅದಕ್ಕೆಲ್ಲ ಗುಳಿಗೆಗಳಿವೆ ಎಂದು ಆ ಮಹಿಳೆಗೆ ಹೇಳುತ್ತಾಳೆ. ನೀನು ಹೋಗದಿದ್ದರೆ ಆತನ ಬಳಿ ಇನ್ನೊಬ್ಬಳು ಹೋಗುತ್ತಾಳೆ ನೋಡು! ಎನ್ನುವ ನಿರ್ಲಜ್ಜವಾದ ಅವಳ ಮಾತುಗಳು ಕಾವ್ಯದ ಭಾಗವಾಗಿ ಬರುತ್ತವೆ. ಅರ್ಥವೆಂದರೆ ಕಲಾ ಪರಂಪರೆ ಈಗ ಸಂಪೂರ್ಣವಾಗಿ ಬದಲಾಗಿ ಹೋಗಿದೆ. ಹೀಗೆ ಇಪ್ಪತ್ತನೆಯ ಶತಮಾನ ಕಲೆಯನ್ನು ಅದರ ಸೌಂದರ್ಯದ, ಮಹೋನ್ನತ ಗೋಪುರಗಳಿಂದ ಕೆಳಗಿಳಿಸಿ ತಂದು ಹಿಂದಿನ ರಾತ್ರಿ ಚೆಲ್ಲಿದ ಬಿಯರಿನ ಕಮಟು ವಾಸನೆಯ, ಸುಟ್ಟ ಸಿಗರೇಟುಗಳ ಬುಡಗಳು ಮತ್ತಿತರ ರಾತ್ರಿಯ ಗುರುತುಗಳು, ಚೆಲ್ಲಿದ ಕಸ ತುಂಬಿದ ವಾಕರಿಕೆ ಬರುವ ಓಣಿಯೊಂದಕ್ಕೆ ಇಳಿಸಿಬಿಟ್ಟಿದೆ.

ಈಗ ರಿಯಾಲಿಟಿ ಶೋ ಕುರಿತು ಕೆಲವು ಅನಿಸಿಕೆಗಳು. ಬಿಗ್‌ ಬಾಸ್‌ನಂಥ ಲಕ್ಷಾಂತರ ಜನರ ಮನಸ್ಸಿಗೆ ಮುದ ನೀಡಬಲ್ಲ ಕಾರ್ಯಕ್ರಮವು “ನಾಟಕ’ದಂತಹ ಕಲಾ ಪ್ರಕಾರವಾಗಿ(?) ಪರಿವರ್ತನೆಗೊಂಡಿರುವ ಕಾರಣ ಬಹುಶಃ ಇಲ್ಲಿ ಇದೆ: ಏನೆಂದರೆ ಇಪ್ಪತ್ತನೆಯ ಶತಮಾನದಲ್ಲಿ ಆರಂಭವಾದ ಕಲೆಯ ಕುರಿತಾದ ಬೇರೊಂದು ಪರಿಕಲ್ಪನೆ ಬಹುಶಃ ಬಿಗ್‌ಬಾಸ್‌ನ್ನು ನಿರೂಪಿಸಿದಂತೆ ತೋರುತ್ತದೆ. ಕುತೂಹಲವೆಂದರೆ ಇದರಲ್ಲಿ(ಬಣ್ಣ ಹಚ್ಚಿದ) ವಾಸ್ತವಿಕ ಜೀವನವೇ ಒಂದು ಪ್ರೇಕ್ಷಣಿಯ ವಿಷಯವಾಗಿ, ಕಲೆಯಾಗಿ (?) ನಿರೂಪಣೆಗೊಂಡಿದೆ. 

ಬಹಳ ಮಹತ್ವದ ವಿಷಯವೆಂದರೆ ಲಕ್ಷಾಂತರ ಜನ ಇಂಥ ರಿಯಾಲಿಟಿ ಶೋಗಳನ್ನು ಮುಗಿಬಿದ್ದು ನೋಡುತ್ತಾರೆ ಎಂದರೆ ಅದಕ್ಕೆ ಏನೋ ಒಂದು ರೀತಿಯ ಕಲಾತ್ಮಕ ಆಕರ್ಷಣೆ ಇದೆ ಎಂದೇ ಭಾವಿಸಬೇಕಾಗುತ್ತದೆ. ಬಹುಶಃ ಪ್ರೇಕ್ಷಕರು ಗಂಭೀರ ಸಂಗೀತವನ್ನು, ನೃತ್ಯವನ್ನು, ನಾಟಕಗಳನ್ನು, ಸಿನೆಮಾಗಳನ್ನು ಸೀರಿಯಲ್‌ಗ‌ಳನ್ನು ಬಿಟ್ಟು ಇವನ್ನು ವೀಕ್ಷಿಸುತ್ತಾರೆ ಎಂದರೆ ಬಹುಶಃ ಕಲೆಯ ವ್ಯಾಖ್ಯೆ ಮತ್ತೆ ಬದಲಾಗುತ್ತಿದೆ ಎಂದೇ ಅನಿಸುತ್ತಿದೆ. ಮುಂದಿನ ದಿನಗಳಲ್ಲಿ ಜನಪ್ರಿಯ ಕಲಾ ಪ್ರಕಾರಗಳು, ಸಾಹಿತ್ಯ-ಸಂಗೀತಗಳು ಯಾವ ರೀತಿಯಲ್ಲಿ ಮರುಹುಟ್ಟು ಪಡೆಯಲಿವೆ ಎನ್ನುವುದು ತುಂಬ ಕುತೂಹಲದ ವಿಷಯ.

– ಡಾ. ಆರ್‌.ಜಿ. ಹೆಗಡೆ, ವಿಜಯಪುರ

ಟಾಪ್ ನ್ಯೂಸ್

kejriwal 2

Delhi excise policy; ಕೇಜ್ರಿವಾಲ್ ವಿಚಾರಣೆಗೆ ಲೆಫ್ಟಿನೆಂಟ್ ಗವರ್ನರ್ ಅನುಮತಿ ಪಡೆದ ಇಡಿ

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

1-russia

9/11-ಶೈಲಿಯಲ್ಲಿ ರಷ್ಯಾದ ವಸತಿ ಕಟ್ಟಡಗಳ ಮೇಲೆ ಉಕ್ರೇನ್ ನಿಂದ ಸರಣಿ ಡ್ರೋನ್ ದಾಳಿ!

ತಾಯಿಯ ಕ್ಯಾನ್ಸರ್ ಚಿಕಿತ್ಸೆಗೆ ಕೂಡಿಟ್ಟ ಹಣದಲ್ಲೇ ರಮ್ಮಿ ಆಡಿದ ಮಗ.. ಕೊನೆಗೆ ಜೀವ ಕಳೆದುಕೊಂಡ

ತಾಯಿಯ ಕ್ಯಾನ್ಸರ್ ಚಿಕಿತ್ಸೆಗೆ ಕೂಡಿಟ್ಟ ಹಣದಲ್ಲೇ ರಮ್ಮಿ ಆಡಿದ ಮಗ.. ಕೊನೆಗೆ ಜೀವ ಕಳೆದುಕೊಂಡ

ಸಿನೆಮಾ ಪೋಸ್ಟರ್‌ ಗಳ ಕೋಣೆಯಲ್ಲಿ-ಹಾಲಿವುಡ್‌ ನಿರ್ದೇಶಕರ ದಂಡು; ಮರೆ ಯಲಾಗದ ಅದ್ಭುತ ಕ್ಷಣ

ಸಿನೆಮಾ ಪೋಸ್ಟರ್‌ ಗಳ ಕೋಣೆಯಲ್ಲಿ-ಹಾಲಿವುಡ್‌ ನಿರ್ದೇಶಕರ ದಂಡು; ಮರೆ ಯಲಾಗದ ಅದ್ಭುತ ಕ್ಷಣ

1-wewqe

Vijay Hazare Trophy;ಕೃಷ್ಣನ್ ಶ್ರೀಜಿತ್ ಅಮೋಘ ಶತಕ:ಬಲಿಷ್ಠ ಮುಂಬೈ ಎದುರು ಕರ್ನಾಟಕ ಜಯಭೇರಿ

mumbai1

ಮುಂಬೈ ದೋಣಿ ದುರಂತ: ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ, ಮೃತರ ಸಂಖ್ಯೆ 15ಕ್ಕೆ ಏರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

3-

Investigative Authorities: ಕುಸಿಯುತ್ತಿದೆ ತನಿಖಾ ಪ್ರಾಧಿಕಾರಗಳ ವಿಶ್ವಾಸಾರ್ಹತೆ !

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

kejriwal 2

Delhi excise policy; ಕೇಜ್ರಿವಾಲ್ ವಿಚಾರಣೆಗೆ ಲೆಫ್ಟಿನೆಂಟ್ ಗವರ್ನರ್ ಅನುಮತಿ ಪಡೆದ ಇಡಿ

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

1-russia

9/11-ಶೈಲಿಯಲ್ಲಿ ರಷ್ಯಾದ ವಸತಿ ಕಟ್ಟಡಗಳ ಮೇಲೆ ಉಕ್ರೇನ್ ನಿಂದ ಸರಣಿ ಡ್ರೋನ್ ದಾಳಿ!

Belapu

ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ

8

Chikkamagaluru: ಪ್ರವಾಸಕ್ಕೆ ಬಂದಿದ್ದ ಶಾಲಾ ಮಕ್ಕಳ ವ್ಯಾನ್ ಪಲ್ಟಿ; ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.