ಮೀಸಲಾತಿಯ ಪುನರ್‌ವಿಮರ್ಶೆ ಅಗತ್ಯ
Team Udayavani, Nov 9, 2022, 6:15 AM IST
ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10ರಷ್ಟು ಮೀಸಲಾತಿ ನೀಡುವ ಕೇಂದ್ರ ಸರಕಾರದ ತೀರ್ಮಾನವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಈ ತೀರ್ಪಿನಿಂದ ದೇಶದಲ್ಲಿ ಕಳೆದ ಹಲವಾರು ದಶಕಗಳಿಂದ ಜಾರಿಯಲ್ಲಿರುವ ಮೀಸಲಾತಿ ಕಾನೂನಿನ ಪರಾಮರ್ಶೆ ನಡೆಸಬೇಕೆಂಬ ಬೇಡಿಕೆಗೆ ಮತ್ತಷ್ಟು ಬಲ ಬಂದಿದೆ. ಈ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಬದ್ಧತೆಯನ್ನು ತೋರಬೇಕಿದೆ.
ಜಗತ್ತಿನಲ್ಲಿ ವಿಶೇಷ ಸ್ಥಾನಮಾನವನ್ನು ಹೊಂದಿ ರುವ ಭಾರತ ಇಂದಿಗೂ ಮುಂದುವರಿದ ರಾಷ್ಟ್ರ ವಾಗಿರದೆ ಇನ್ನೂ ಮುಂದುವರಿಯುತ್ತಿರುವ ರಾಷ್ಟ್ರಗಳ ಸಾಲಿನಲ್ಲಿಯೇ ಇದೆ. ಹೀಗೆ ಹಿನ್ನಡೆ ಕಾಣಲು ಮೀಸಲಾತಿ ಕಾನೂನು ಪ್ರಮುಖ ಕಾರಣಗಳಲ್ಲೊಂದಾಗಿದೆ. ಮೀಸಲಾತಿ ಕಾನೂನನ್ನು ಆಗಾಗ್ಗೆ ಪುನರ್ ವಿಮರ್ಶಿಸದೆ ಕಣ್ಣು ಮುಚ್ಚಿ ಮುಂದುವರಿಸಿಕೊಂಡು ಬರುತ್ತಿರುವುದೇ ನಮ್ಮ ದೇಶದ ಆರ್ಥಿಕಾಭಿವೃದ್ಧಿಗೆ ದೊಡ್ಡ ಪೆಟ್ಟು. ಸ್ವಾತಂತ್ರ್ಯ ದೊರೆತು 50 ವರ್ಷಗಳ ವರೆಗೆ ಮಾತ್ರ ಮೀಸಲಾತಿ ಮುಂದುವರಿಸಬೇಕೆಂದು ಆಗ ಕಾನೂನು ಮಾಡಿದ್ದರೂ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ರಾಜಕೀಯ ಪಕ್ಷಗಳು ಮತಬ್ಯಾಂಕ್‌ಗಾಗಿ ಜಾತಿ ಮೀಸಲಾತಿಯನ್ನು ಮುಂದುವರಿಸುತ್ತಾ ಬಂದುದಲ್ಲದೆ “ಒಳ ಮೀಸಲಾತಿ’ಯನ್ನು ಸೇರಿಸಿ ಮತ್ತಷ್ಟು ಕಗ್ಗಂಟು ಮಾಡಿವೆ. ನೂರಕ್ಕೂ ಹೆಚ್ಚು ಜಾತಿಗಳನ್ನು ಮೀಸಲಾತಿಗೆ ಸೇರಿಸುತ್ತಾ ಬಂದಿರುವ ಕಾರಣ ಇನ್ನೂ ಮೂರ್‍ನಾಲ್ಕು ಜಾತಿಗಳು ಮಾತ್ರ ಜಾತಿ ಮೀಸಲಾತಿಗೆ ಬಾಕಿ ಉಳಿದಿದೆ ಎನ್ನುವ ವಿಚಾರ ನಾಚಿಕೆಗೇಡು. ಇದಕ್ಕೊಂದು ಕೊನೆ ಬೇಡವೇ..? ಜಾತಿ ಮೀಸಲಾತಿಯನ್ನು ಬಿಟ್ಟು ಆರ್ಥಿಕ ಮೀಸಲಾತಿಯನ್ನು ಜಾರಿಗೆ ತರಬೇಕೆಂಬ ಕೂಗು ಆಗಾಗ್ಗೆ ಕೇಳಿಬರುತ್ತಿದೆ. ಆದರೆ ದೇಶದ ರಾಜಕೀಯ ಪಕ್ಷಗಳಿಗೆ ಈ ಕೂಗು ಕೇಳಿಸುತ್ತಿಲ್ಲ.ಚೆನ್ನಾಗಿ ಹಸಿದವನಿಗೆ ಊಟ ಹಾಕಬೇಕೇ ಹೊರತು ಹಸಿವಾದವನಂತೆ ನಾಟಕ ಮಾಡುವವನಿಗೆ ಊಟ ಹಾಕಿದರೆ ಏನಾಗಬಹುದು? ಅಜೀರ್ಣ ವಾಗಬಹುದು…ಇಲ್ಲವೇ ದಂಡ ಆಗಬಹುದು…ಈ ರೀತಿಯಾಗಿದೆ ನಮ್ಮ ಜಾತಿ ಮೀಸಲಾತಿ.
ಪ್ರತಿಯೊಂದೂ ಜಾತಿ, ವರ್ಗದಲ್ಲಿಯೂ ಬಡವರು ಇರುತ್ತಾರೆ. ಬಡತನವೆಂಬುದು ಯಾವುದೇ ಜಾತಿಯನ್ನು ಹಿಡಿದುಕೊಂಡು ಬರುವು ದಿಲ್ಲ. ಬಡತನವನ್ನು ಆತನ ಸಂಪಾದನೆ, ಆತನ ಅವಲಂಬಿತರ ಸಂಪಾದನೆ, ಅವರು ಹೊಂದಿರುವ ಜಾಗ ಇತ್ಯಾದಿಗಳಿಂದ ಅಳೆದು, ಆತನ ಕುಟುಂಬಕ್ಕೆ ಜೀವನ ಸಾಗಿಸಲು ಕಷ್ಟವೆಂದು ಪರಿಶೀಲನ ತಂಡಗಳು ವರದಿ ಮಾಡಿದಾಗ ಅಂತಹ ಕುಟುಂಬಕ್ಕೆ ಆರ್ಥಿಕ ಸಹಾಯದ ಮೀಸಲಾತಿಯನ್ನು ಒದಗಿಸಬೇಕು. ಆ ಸಮಯದಲ್ಲಿ ಆ ಕುಟುಂಬದ ಜಾತಿ, ವರ್ಗಗಳನ್ನು ಪರಿಗಣಿಸಬಾರದು. ಈ ತರಹ ಎಲ್ಲ ಜಾತಿ, ವರ್ಗದ ಬಡ ಕುಟುಂಬಗಳಿಗೆ ಆರ್ಥಿಕ ಸಹಾಯ ನೀಡಿದಾಗ ಅದು ನಿಜವಾದ “ಮೀಸಲಾತಿ’ ಎನಿಸುತ್ತದೆ.
ಭಾರತದ ಆರ್ಥಿಕ ಪ್ರಗತಿಗೆ ಇನ್ನೊಂದು ದೊಡ್ಡ ಹೊಡೆತ “ರೇಷನ್’ ಕೊಡುವುದು. ಇದು ಸಹ ಜಾತಿ ಆಧಾರಿತವಾಗಿದ್ದು ನಿಜವಾದ ಫಲಾನುಭವಿಗಳಿಗೆ ಸಿಗುತ್ತಿಲ್ಲ. ಐಷಾರಾಮಿ ಮನೆ, ಬೈಕ್, ಕಾರು ಇರುವವರು ಸಹಾ ಬಿಪಿಎಲ್ ಕಾರ್ಡ್ ಮಾಡಿಸಿಕೊಂಡು ಪುಕ್ಕಟೆ ದವಸಧಾನ್ಯಗಳನ್ನು ಪಡೆಯುತ್ತಿರುವ ಸ್ಥಿತಿ ನಾಚಿಕೆಗೇಡು. ಸರಕಾರ ಉಚಿತವಾಗಿ ನೀಡುವ ಈ ಸವಲತ್ತು ಗಳು ಇಂದು ಪೋಲಾಗುತ್ತಿರುವುದೇ ಜಾಸ್ತಿ. ಆದ್ದರಿಂದ ಜಾತಿಯನ್ನು ಪರಿಗಣಿಸದೆ ನಿಜ ವಾಗಿ ಬಡತನದಲ್ಲಿರುವವರಿಗೆ ರೇಷನ್ ನೀಡ ಬೇಕು. ಅಷ್ಟು ಮಾತ್ರವಲ್ಲದೆ ಇದನ್ನು ವಸ್ತುಗಳ ರೂಪದಲ್ಲಿ ನೀಡದೆ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಹಣವನ್ನು ಜಮಾಯಿಸಬೇಕು. ಹೀಗೆ ಮಾಡುವುದರಿಂದ ದವಸಧಾನ್ಯಗಳನ್ನು ಉಚಿತ ವಾಗಿ ಪಡೆದು ಕಾಳಸಂತೆಯಲ್ಲಿ ಮಾರುವ ದಂಧೆ ಕೊನೆಗೊಳ್ಳುತ್ತದೆ.
ಎಲ್ಲರೂ ಭಾಷಣ ಮಾಡುವಾಗ ಜಾತಿ ಭೇದ ಮಾಡಬಾರದು ಎನ್ನುತ್ತಾರೆ. ಇದು ನಿಜ ಗೊಳ್ಳಬೇಕಾದರೆ ಎಲ್ಲ ತರಹದ ಅರ್ಜಿ ಫಾರಂಗಳಲ್ಲಿ “ಜಾತಿ’ ಕಾಲಂನ್ನು ತೆಗೆದುಹಾಕಬೇಕು. ಇದರ ಬದಲಾಗಿ ಆರ್ಥಿಕವಾಗಿ ಹಿಂದುಳಿದವರು ಎಂಬ ಕಾಲಂನ್ನು ಅಗತ್ಯವಿದ್ದರೆ ಸೇರಿಸಿಕೊಳ್ಳಬಹುದು.
ಇನ್ನು ಚುನಾವಣೆಗಳಲ್ಲಿ ಸರಕಾರ, ಪಂಚಾ ಯತ್, ಸಂಘ-ಸಂಸ್ಥೆಗಳಲ್ಲಿ ಅಧ್ಯಕ್ಷ ಪದವಿ ಸಾಮಾನ್ಯ ವಿಭಾಗಕ್ಕೆ ಮೀಸಲು ಇದ್ದರೂ ಜಾತಿ ಆಧಾರದ ಮೀಸಲಾತಿ ಇದ್ದವರು ಸಾಮಾನ್ಯ ವಿಭಾಗಕ್ಕೆ ಸ್ಪರ್ಧಿಸಬಹುದು. ಆದರೆ ಸಾಮಾನ್ಯ ವಿಭಾಗದವರು ಮೀಸಲಾತಿ ವಿಭಾಗದ ಅಧ್ಯಕ್ಷ ಪದವಿಗೆ ಸ್ಪರ್ಧಿಸುವಂತಿಲ್ಲ. ಇದರಲ್ಲಿ ತಾರತಮ್ಯ ವೇಕೆ? ಒಂದೇ ತರಗತಿಯಲ್ಲಿ ಶಿಕ್ಷಣ ಪಡೆದ ಸಾಮಾನ್ಯ ವಿಭಾಗದ ವಿದ್ಯಾರ್ಥಿ ಸರಕಾರದ ನೌಕರಿಯಲ್ಲಿ ಭಡ್ತಿ ಪಡೆಯದೇ ಜಾತಿ ಆಧಾರದ ಮೀಸಲಾತಿ ಪಡೆದ ಉದ್ಯೋಗಿ ಅಧಿಕಾರಿಯಾಗಿ ಬಂದ ಎಷ್ಟೋ ನಿದರ್ಶನಗಳಿವೆ.
ಮಗು ಹುಟ್ಟುವಾಗ ಅಂಬೆಗಾಲಿಡುತ್ತದೆ. ಅನಂತರ ಎದ್ದು ಕುಳಿತುಕೊಳ್ಳಲು, ನಡೆಯಲು ಪ್ರಯತ್ನಿಸುತ್ತದೆ. ಆಗ ನಾವು ಕೈ ಹಿಡಿದು ಸಹಾಯ ಮಾಡುತ್ತೇವೆ. ಇದು ಆ ಮಗು ಚೆನ್ನಾಗಿ ನಡೆಯುವವರೆಗೆ ಮಾತ್ರ. ಅನಂತರ ನಮ್ಮ ಸಹಾಯ ಅದಕ್ಕೆ ಬೇಕಿಲ್ಲ, ಅನಂತರವೂ ನಾವು ಮಗುವಿಗೆ ದೊಡ್ಡದಾಗುವವರೆಗೂ ವಾಕರ್ ಒದಗಿಸಿದರೆ ಅದರ ಕೈಕಾಲುಗಳು ನಿಶ್ಶಕ್ತಿಗೊಂಡು ಆ ಮಗು ನಿಷ್ಪ್ರಯೋಜಕ ಎಂದೆನಿಸಿಕೊಳ್ಳಬಹುದು. ಈಗಿನ ನಮ್ಮ ಜಾತಿ ಮೀಸಲಾತಿಯು ಹಾಗೇ ಇದೆ. ಒಂದು ಹಂತದವರೆಗೆ (ಶಿಕ್ಷಣದ ಹಂತ) ಮಾತ್ರ ಉಚಿತ ಸೌಲಭ್ಯಗಳನ್ನು ನೀಡಬೇಕು. ಅನಂತರದ (ಉದ್ಯೋಗ, ಮುಂಭಡ್ತಿ ಇತ್ಯಾದಿ) ವ್ಯವಸ್ಥೆಗೆ ಸಹಾಯ ನೀಡಬಾರದು. ಈಗಿನ ಮೀಸಲಾತಿ ವ್ಯವಸ್ಥೆ ಹಾಗೇ ಇರುವ ಕಾರಣ ಕೆಲವರು ತಾವು ತಿಂದು ತೇಗುವುದು ಮಾತ್ರವಲ್ಲದೆ ತಮ್ಮ ಸಂತತಿ ಪರ್ಯಂತ ತಿಂದು ತೇಗುವಷ್ಟು ಆಸ್ತಿ-ಪಾಸ್ತಿ ಮಾಡಿಟ್ಟಿದ್ದಾರೆ. ಇಂತಹ ವ್ಯವಸ್ಥೆ ನಮ್ಮ ದೇಶಕ್ಕೆ ಒಂದು ರೀತಿಯ ಶಾಪ ಎಂದರೆ ತಪ್ಪಲ್ಲ.
ಕಳೆದ ಹಲವಾರು ದಶಕಗಳಿಂದ ದೇಶದಲ್ಲಿ ಜಾರಿಯಲ್ಲಿರುವ ಜಾತಿ ಆಧರಿತ ಮೀಸಲಾತಿ ವ್ಯವಸ್ಥೆಯು ಇನ್ನೂ ಮುಂದುವರಿದಿರುವುದರಿಂದ ದೇಶದ ಒಟ್ಟಾರೆ ಪ್ರಗತಿಗೆ ಬಲುದೊಡ್ಡ ಹೊಡೆತವನ್ನು ನೀಡುತ್ತಿದೆ. ಈ ಮೀಸಲಾತಿ ವ್ಯವಸ್ಥೆಯಿಂದಾಗಿ ನಿಜವಾಗಿಯೂ ಮೀಸಲಾತಿಯ ಪ್ರಯೋಜನ ಲಭಿಸಬೇಕಾದ ಕುಟುಂಬಗಳಿಗೆ ಆರ್ಥಿಕ ಸಹಾಯ, ಪಡಿತರ ಸೌಲಭ್ಯ, ಸಮಾಜದಲ್ಲಿ ಸಮಾನತೆ, ಮೂಲಸೌಕರ್ಯಗಳ ಸಹಿತ ಅಗತ್ಯ ಸೌಲಭ್ಯಗಳು ಸಿಗುತ್ತಿಲ್ಲ. ಮೀಸಲಾತಿ ಪಟ್ಟಿಗೆ ವರ್ಷಗಳುರುಳಿದಂತೆಯೇ ಹೊಸದಾಗಿ ಜಾತಿ, ಉಪಜಾತಿಗಳು ಸೇರ್ಪಡೆಯಾಗುತ್ತಿವೆಯೇ ವಿನಾ ಯಾವೊಂದೂ ಜಾತಿ, ವರ್ಗಗಳನ್ನು ಮೀಸಲಾತಿ ಪಟ್ಟಿಯಿಂದ ಕೈಬಿಡಲಾಗುತ್ತಿಲ್ಲ.
ಹಾಗಾದರೆ ಇಷ್ಟೊಂದು ದಶಕಗಳಿಂದ ಮೀಸಲಾತಿಯ ಪ್ರಯೋಜನ ಪಡೆಯುತ್ತಿದ್ದರೂ ಈ ಜಾತಿ, ವರ್ಗ ಗಳ ಜನರು ಇನ್ನೂ ಸಮಾಜದ ಮುಖ್ಯವಾಹಿನಿಗೆ ಬರುವಲ್ಲಿ ವಿಫಲರಾಗಿದ್ದಾರೆ ಎಂದಾದರೆ ಒಂದೋ ಮೀಸಲಾತಿ ವ್ಯವಸ್ಥೆಯಲ್ಲಿ ದೋಷ ಇರಬೇಕು ಇಲ್ಲವೇ ಅದರ ಅನುಷ್ಠಾನದಲ್ಲಿ ಸಮಸ್ಯೆಗಳಿರ ಬಹುದು. ಇದೇ ವೇಳೆ ಈ ಜಾತಿ ಆಧರಿತ ಮೀಸಲಾತಿ ವ್ಯವಸ್ಥೆಗೆ ಅಂತ್ಯ ಹಾಡದೇ ಹೋದಲ್ಲಿ ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳ ಗೋಳನ್ನು ಕೇಳುವವರೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾದರೆ ಅದರಲ್ಲಿ ಅಚ್ಚರಿ ಏನೂ ಇಲ್ಲ. ದೇಶದ ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿ ದಾಗ ಇಡೀ ಮೀಸಲಾತಿ ಕಾನೂನನ್ನು ಪರಾಮರ್ಶಿಸ ಬೇಕಾದ ಅನಿವಾರ್ಯತೆ ಎದ್ದು ಕಾಣುತ್ತಿದೆ. ದೇಶದ ವಾಸ್ತವ ಸ್ಥಿತಿಯ ಬಗ್ಗೆ ರಾಜಕೀಯ ಪಕ್ಷಗಳಿಗೆ ಮತ್ತು ಜನನಾಯಕರಿಗೆ ಸಂಪೂರ್ಣ ಅರಿವಿದ್ದರೂ ಅವರೆಲ್ಲರೂ ಈ ವಿಚಾರದಲ್ಲಿ ಜಾಣಮೌನಕ್ಕೆ ಶರಣಾಗಿದ್ದಾರೆ. ಈ ವಿಚಾರದಲ್ಲಿ ಯಾವೊಂದೂ ರಾಜಕೀಯ ಪಕ್ಷವೂ ಪ್ರಬುದ್ಧತೆಯನ್ನಾಗಲಿ, ಇಚ್ಛಾ ಶಕ್ತಿಯನ್ನಾಗಲೀ ಪ್ರದರ್ಶಿಸುತ್ತಿಲ್ಲ. ಅವುಗಳ ದೇನಿದ್ದರೂ ಚುನಾವಣ ರಾಜಕೀಯ.
ಮೀಸಲಾತಿ ವಿಚಾರದಲ್ಲಿ ಇನ್ನಾದರೂ ರಾಜ್ಯ- ರಾಷ್ಟ್ರ ರಾಜಕಾರಣ ಎಚ್ಚೆತ್ತುಕೊಳ್ಳಬೇಕು. ನಿಜವಾದ ಬಡವರನ್ನು ಗುರುತಿಸಿ ಆರ್ಥಿಕ ಸಹಾಯ ನೀಡಬೇಕೇ ಹೊರತು ಜಾತಿ ಆಧಾರದಿಂದ ಆಗಬಾರದು. ಹೀಗೆ ಆದಾಗ ಮಾತ್ರ ಭಾರತ ರಾಮರಾಜ್ಯ ಆದೀತು.
-ವೇ| ಮೂ| ಕುತ್ಯಾರು ಕೇಂಜ ಶ್ರೀಧರ ತಂತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.