ಏಕಕಾಲದ ಚುನಾವಣೆಗಿಂತ ಕ್ರಾಂತಿಕಾರಿ ಚುನಾವಣಾ ಸುಧಾರಣೆ ಅಗತ್ಯ
Team Udayavani, Jun 11, 2017, 2:10 PM IST
ಸ್ವೇಚ್ಛಾಚಾರದ ಸ್ವಾತಂತ್ರ್ಯವನ್ನು ಅನುಭವಿಸುವವರು ನಮ್ಮ ದೇಶದಲ್ಲಿ ರಾಜಕಾರಣಿಗಳು ಮಾತ್ರ. ಲೋಕಸಭಾ ಸದಸ್ಯನಾಗಿದ್ದವ ರಾಜೀನಾಮೆ ನೀಡಿ ಆ ಸಂಸದೀಯ ಕ್ಷೇತ್ರ ಇರುವ ರಾಜ್ಯದ ಸಿಎಂ ಆಗಬಹುದು. ಕೆಲವು ಸಮಯದಲ್ಲಿ ಕೇಂದ್ರದ ಮೇಲ್ಮನೆಯ ಸದಸ್ಯನಾಗಬಹುದು. ಒಬ್ಬ ವ್ಯಕ್ತಿ ಸಾರ್ವತ್ರಿಕ ಚುನಾವಣೆಯಲ್ಲಿ ಒಂದಕ್ಕಿಂತ ಹೆಚ್ಚು ಕ್ಷೇತ್ರದಲ್ಲಿ ಸ್ಪರ್ಧಿಸಬಹುದು.
ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಗಳಾದ ಬಳಿಕ ಕೆಲವು ಪ್ರಾಧಿಕಾರಗಳ ಹೆಸರನ್ನು ಬದಲಾಯಿಸುವ ಮತ್ತು ಅವುಗಳ ಕರ್ತವ್ಯ ಹಾಗೂ ಉದ್ದೇಶಕ್ಕೆ ಅನ್ವರ್ಥವಾಗುವಂತೆ ಮರು ನಾಮಕರಣ ಮಾಡುವ ಕೆಲಸ ಮಾಡುತ್ತಿರುವುದು ಅವರ ಪ್ರಗತಿಪರ ಚಿಂತನೆಯನ್ನು ಸೂಚಿಸುತ್ತದೆ. ಈ ಬದಲಾವಣೆಗಳಲ್ಲಿ ನೀತಿ ಆಯೋಗ ಒಂದು. ಹಿಂದೆ ಇದು ಯೋಜನಾ ಆಯೋಗ ಎಂಬ ಹೆಸರಿನಲ್ಲಿ ಕಾರ್ಯವೆಸಗುತ್ತಿತ್ತು.
ಈ ನೀತಿ ಆಯೋಗ ಇತ್ತೀಚೆಗೆ ಒಂದು ಮಹತ್ವಪೂರ್ಣ ಸಲಹೆ ಯನ್ನು ಸರಕಾರಕ್ಕೆ ನೀಡಿದೆ. ಅದಾವುದೆಂದರೆ ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳ ಚುನಾವಣೆಯನ್ನು ಏಕಕಾಲ ದಲ್ಲಿ ನಡೆಸುವುದು. ಇದರಿಂದ ಸಾರ್ವಜನಿಕ ಖರ್ಚುವೆಚ್ಚ ಗಳು ಗಣನೀಯವಾಗಿ ಕಡಿಮೆಯಾಗುತ್ತವೆ ಹಾಗೂ ಚುನಾ ವಣಾ ಸಮಯವು ಉಳಿತಾಯವಾಗುತ್ತದೆ. ಈಗ ನಮ್ಮ ದೇಶದಲ್ಲಿ ವರ್ಷದುದ್ದಕ್ಕೂ ಒಂದಲ್ಲ ಒಂದು ಕಡೆ ಚುನಾವಣೆ ನಡೆಯುತ್ತಿದ್ದು, ಆ ಪ್ರಯುಕ್ತ ವಿಧಿಸಿದ ನೀತಿಸಂಹಿತೆ ಮತ್ತು ಇತರೆ ನಿಬಂìಧಗಳು ಆಡಳಿತಕ್ಕೆ ಅಡಚಣೆಯಾಗುವುದನ್ನು ನೋಡುತ್ತಿದ್ದೇವೆ. ಏಕಕಾಲದಲ್ಲಿ ಕೇಂದ್ರ ಹಾಗೂ ರಾಜ್ಯಗಳಿಗೆ ಚುನಾವಣೆಯಾದರೆ ಈ ಅಡಚಣೆ ಐದು ವರ್ಷಕ್ಕೆ ಒಮ್ಮೆ ಮಾತ್ರ ಉಂಟಾಗುತ್ತದೆ. ಏಕಕಾಲದ ಚುನಾವಣೆ ಬಗ್ಗೆ ಭಾರತೀಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಲಾಗಿದ್ದು, ಬರುವ 2024ರ ಸಾರ್ವತ್ರಿಕ ಚುನಾವಣಾ ಕಾಲಕ್ಕೆ ಯೋಜನೆಯನ್ನು ಅನುಷ್ಠಾನಕ್ಕೆ ತರುವ ಪೂರ್ವ ಸಿದ್ಧತೆಗಳ ಕುರಿತು ಆಯೋಗ ಗಂಭೀರ ಚಿಂತನೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ.
ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳ ಚುನಾವಣೆ ಏಕಕಾಲದಲ್ಲಿ ಜರಗುವುದರಿಂದಾಗುವ ಸಂಭಾವ್ಯ ಸಾರ್ವಜನಿಕ ಖರ್ಚು ವೆಚ್ಚಗಳ ಹಾಗೂ ಸಮಯದ ಉಳಿತಾಯ, ನಿರಾತಂಕ ಆಡಳಿತ, ತತ್ಪರಿಣಾಮವಾಗಿ ಅಭಿವೃದ್ಧಿಯನ್ನು ನೆನಸಿಕೊಂಡಾಗ ಒಂದು ಸುಂದರ ಕನಸನ್ನು ಕಂಡಂತಾಗುವುದಿಲ್ಲವೇ! ಆದರೆ ಇದು ಅನುಷ್ಠಾನಕ್ಕೆ ಬಂದಲ್ಲಿ ನಿರಾತಂಕವಾಗಿ ನಡೆದೀತೇ?
ಸಂಸತ್ತಿನಲ್ಲಿ ಒಂದು ಮಸೂದೆ ಶಾಸನವಾಗಬೇಕಾದರೆ ಉಭಯ ಸದನಗಳಲ್ಲಿಯೂ ಅನುಮೋದನೆಗೊಳ್ಳಬೇಕೆಂಬ ವಿಧಿ ಸಂವಿಧಾನದಲ್ಲಿದೆ. ಲೋಕಸಭೆಯಲ್ಲಿ ಬಹುಮತವುಳ್ಳ ರಾಜಕೀಯ ಪಕ್ಷ ಆಡಳಿತ ನಡೆಸುವುದು ವಾಡಿಕೆ. ಹಾಗೆ ರಾಜ್ಯಸಭೆಯಲ್ಲಿಯೂ ಆ ಪಕ್ಷದ ಪ್ರಾತಿನಿಧ್ಯ ಬಹುಮತದ ರೂಪ ದಲ್ಲಿದ್ದರೆ ಮಸೂದೆ ಸಲೀಸಾಗಿ ಅನುಮೋದನೆಗೊಳ್ಳುತ್ತದೆ. ಏಕಕಾಲದಲ್ಲಿ ಕೇಂದ್ರ ರಾಜ್ಯಗಳಲ್ಲಿ ಚುನಾವಣೆಯಾಗುವ ಸಂದರ್ಭದಲ್ಲಿ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬರುವ ರಾಜಕೀಯ ಪಕ್ಷ ಬಹುತೇಕ ರಾಜ್ಯಗಳಲ್ಲಿ ಬಹುಮತ ಸಾಧಿಸುವ ಸಾಧ್ಯತೆಯುಂಟು. ನಾವು ಈ ತನಕ ಕಂಡ ಚುನಾವಣಾ ಟ್ರೆಂಡ್ ಇದು. ಹಾಗಾದಲ್ಲಿ ಕೇಂದ್ರದಲ್ಲಿ ಆಡಳಿತ ನಡೆಸುವ ರಾಜಕೀಯ ಪಕ್ಷವನ್ನು ಬೆಂಬಲಿಸುವವರ ಸಂಖ್ಯೆ ಮೇಲ್ಮನೆಯಲ್ಲಿಯೂ ಹೆಚ್ಚಾಗುವ ಸಾಧ್ಯತೆಯುಂಟು. ಆಗ ಮಸೂದೆಗಳು ಸಂಘರ್ಷ ವಿಲ್ಲದೆ ಅನುಮೋದನೆಗೊಳ್ಳುವುದರಲ್ಲಿ ಅನುಮಾನವಿಲ್ಲ.
ಎರಡು ವರ್ಷಗಳಿಗೊಮ್ಮೆ ಆರು ವರ್ಷ ಅವಧಿ ಪೂರೈಸಿದ ಮೇಲ್ಮನೆಯ ಸದಸ್ಯರನ್ನು ಬದಲಾಯಿಸುವುದಾದರೂ ಐದು ವರ್ಷ ಅವಧಿಯ ಲೋಕಸಭೆಯ ವಿದ್ಯಮಾನ ಹಾಗೆ ಉಳಿಯುವ ಸಾಧ್ಯತೆ ಇರುವುದರಿಂದ ಈಗ ನಾವು ನೋಡುವ ಮಸೂದೆ ಮಂಜೂರಾಗುವಲ್ಲಿನ ಸಂಘರ್ಷ ಖಂಡಿತ ಕಡಿಮೆಯಾದೀತು. ಆ ನಿಟ್ಟಿನಲ್ಲಿ ಏಕಕಾಲದಲ್ಲಿ ಚುನಾವಣೆ ಆಡಳಿತ ನಡೆಸುವ ರಾಜಕೀಯ ಪಕ್ಷಕ್ಕೆ ಸಹಕಾರಿ ಹಾಗೆ ಸಾರ್ವಜನಿಕವಾಗಿಯೂ ಸ್ವಾಗತಾರ್ಹ. ಆದರೆ ಈ ಸರಕಾರಗಳು ಅವಧಿ ಮುಗಿಸುತ್ತವೆ ಎಂಬ ಖಾತರಿಯುಂಟೇ? ನಮಗೆ ಸ್ವಾತಂತ್ರ್ಯ ಸಿಕ್ಕಿದ ಅನಂತರ ಸುಮಾರು 1972ರ ಸಾರ್ವತ್ರಿಕ ಚುನಾವಣೆಯ ತನಕ ಲೋಕಸಭೆ ಹಾಗೂ ವಿಧಾನಸಭೆಗಳಿಗೆ ಜತೆಜತೆಯಾಗಿ ಚುನಾವಣೆ ನಡೆದಿದೆ. ತದನಂತರ ಪರಿಸ್ಥಿತಿ ಬದಲಾಗುತ್ತಾ ಬಂತು. ಕೆಲವು ಸರಕಾರಗಳು ಅವಧಿಗೆ ಮುನ್ನ ಪತನಗೊಳ್ಳುವ ಪರಿಸ್ಥಿತಿ ಪ್ರಾಪ್ತವಾಯ್ತು.
ಮುಖ್ಯವಾಗಿ ಸ್ಪಷ್ಟ ಬಹುಮತವಿಲ್ಲದೆ ಮಾಡಿದ ಮೈತ್ರಿ ಸರಕಾರಗಳು ಬಿದ್ದು ಹೋಗಿ ಮರು ಚುನಾವಣೆ ನಡೆಯಿತು. ಆ ಸರಕಾರದ ಅವಧಿ ಆ ಚುನಾವಣೆ ಮುಗಿದ ದಿನದಿಂದ ಆರಂಭ, ಮುಂದಿನ ಐದು ವರ್ಷದ ತನಕ. ಅದು ಸಾಂವಿಧಾನಿಕ ಹಕ್ಕು. ಪರಿಣಾಮವಾಗಿ ನಮ್ಮ ದೇಶದಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಸುವ ಲಯ ತಪ್ಪಿಹೋಗಿದೆ.
ಏಕಕಾಲದ ಚುನಾವಣೆ ಸಾರ್ವತ್ರಿಕಗೊಳಿಸುವುದಾದಲ್ಲಿ ಇನ್ನು ಮುಂದಕ್ಕೆ ಅವಧಿ ಮುನ್ನ ಪತನಗೊಳ್ಳುವ ಸರಕಾರದ
ಮರು ಚುನಾವಣಾ ನಂತರದ ಅವಧಿಯನ್ನು ನಿರ್ಧರಿ ಸಲು ಸಂವಿಧಾನ ತಿದ್ದುಪಡಿ ಮಾಡಬೇಕಾಗುತ್ತದೆ. ಅದು ಇನ್ನೊಂದು ಅಧ್ಯಾಯಕ್ಕೆ ನಾಂದಿ. ಆಗಾಗ ಸಂವಿಧಾನ ತಿದ್ದು ಪಡಿ ಮಾಡುತ್ತಿರುವುದರಿಂದ ಸಂವಿಧಾನದ ನೆಲಗಟ್ಟು ಶಿಥಿಲ ಗೊಳ್ಳುತ್ತದೆ ಎನ್ನುವುದು ಸಂವಿಧಾನ ತಜ್ಞರ ಅಭಿಪ್ರಾಯ. ಹಾಗಾದರೆ ಏಕಕಾಲದ ಚುನಾವಣೆಗೆ ಪ್ರಾಶಸ್ತÂ ನೀಡಬೇಕೇ ಯಾ ಬೇಡವೇ ಎಂಬುದು ಸಾರ್ವಜನಿಕರ ಚಿಂತನೆಗೆ ಗ್ರಾಸ.
ಇಲ್ಲಿ ನಮ್ಮ ದೇಶದ ಚುನಾವಣಾ ಕಾನೂನು ಹಾಗೂ ಪ್ರಸಕ್ತ ರಾಜಕೀಯ ಸ್ಥಿತಿಯ ಅವಲೋಕನ ಅಗತ್ಯ. ನಮ್ಮದು ಒಕ್ಕೂಟ ಪದ್ಧತಿ. ರಾಜ್ಯಗಳಿಗೂ ಪ್ರತ್ಯೇಕ ಅಸ್ತಿತ್ವವಿದ್ದು ಆಡಳಿತ ನಡೆಸು ತ್ತವೆ. ಚುನಾವಣೆಯೂ ನಡೆಯುತ್ತದೆ. ಆದರೆ ಚುನಾವಣಾ ಕಾನೂನು ಒಂದೇ. ಒಬ್ಬ ಪೌರ ಪಂಚಾಯತ್ ಸದಸ್ಯತ್ವದಿಂದ ಪಾರ್ಲಿಮೆಂಟ್ ಸದಸ್ಯತ್ವದ ತನಕ ಸ್ಪರ್ಧಿಸಬಹುದು. ವೈಯಕ್ತಿಕ ವಾಗಿಯೂ ಸ್ಪರ್ಧಿಸಬಹುದು. ಅಥವಾ ಸಂಘಟನೆ ಯಾ ಮಾನ್ಯತೆ ಪಡೆದ ರಾಜಕೀಯ ಪಕ್ಷದ ಮೂಲಕ ಸ್ಪರ್ಧಿಸಬಹುದು. ರಾಜಕೀಯ ಪಕ್ಷವನ್ನು ರಚಿಸಿಕೊಳ್ಳಬಹುದು. ನಮ್ಮ ದೇಶ ದಲ್ಲಿ ಈಗ 5-6 ರಾಷ್ಟ್ರೀಯ ರಾಜಕೀಯ ಪಕ್ಷಗಳಿವೆ. ಸುಮಾರು 60ರಷ್ಟು ರಾಜ್ಯ ಅಥವಾ ಪ್ರಾದೇಶಿಕ ಪಕ್ಷಗಳಿವೆ. ಅಲ್ಲದೆ 750ಕ್ಕೂ ಅಧಿಕ ಸಂಖ್ಯೆಯ ಏಕವ್ಯಕ್ತಿ ನಾಮಾಂಕಿತ ಪಕ್ಷಗಳಿದ್ದಾವೆ.
ಈ ಎಲ್ಲ ಪಕ್ಷಗಳಿಗೂ ಚುನಾವಣೆಗೆ ಸ್ಪರ್ಧಿಸುವ ಹಾಗೂ ಗೆದ್ದು ಬಹುಮತ ಗಳಿಸಿದಲ್ಲಿ ಆಡಳಿತ ನಡೆಸುವ ಅವಕಾಶ
ಕಾನೂನು ರೀತ್ಯಾ ಕಲ್ಪಿಸಲಾಗಿದೆ. ಹಾಗೆ ಸಾಮರಸ್ಯ ಮುಂದುವರಿಯದಿದ್ದಲ್ಲಿ ಸರಕಾರವನ್ನು ಕೆಡಹುವ ಅವಕಾಶವುಂಟು. ಸ್ವೇಚ್ಛಾಚಾರದ ಸ್ವಾತಂತ್ರ್ಯವನ್ನು ಅನುಭವಿಸುವವರು ನಮ್ಮ ದೇಶದಲ್ಲಿ ರಾಜಕಾರಣಿಗಳು ಮಾತ್ರ. ಲೋಕಸಭಾ ಸದಸ್ಯನಾಗಿದ್ದವ ರಾಜೀನಾಮೆ ನೀಡಿ ಆ ಸಂಸದೀಯ ಕ್ಷೇತ್ರ ಇರುವ ರಾಜ್ಯದ ಸಿಎಂ ಆಗಬಹುದು.
ಕೆಲವು ಸಮಯದಲ್ಲಿ ಕೇಂದ್ರದ ಮೇಲ್ಮನೆಯ ಸದಸ್ಯನಾಗಬಹುದು. ಒಬ್ಬ ವ್ಯಕ್ತಿ ಸಾರ್ವತ್ರಿಕ ಚುನಾವಣೆಯಲ್ಲಿ ಒಂದಕ್ಕಿಂತ ಹೆಚ್ಚು ಕ್ಷೇತ್ರದಲ್ಲಿ ಸ್ಪರ್ಧಿಸ ಬಹುದು. ಸ್ಪರ್ಧಿಸಿದ ಎಲ್ಲ ಕ್ಷೇತ್ರಗಳಲ್ಲಿಯೂ ಗೆದ್ದರೆ ತನಗೆ ಆಸಕ್ತಿ ಇರುವ ಕ್ಷೇತ್ರವನ್ನು ಉಳಿಸಿಕೊಂಡು, ಉಳಿದವುಗಳನ್ನು ತ್ಯಜಿಸಬಹುದು. ಅವುಗಳಿಗೆ ಸಾರ್ವಜನಿಕ ಖರ್ಚಿನಲ್ಲಿ ಮರು ಚುನಾವಣೆ ನಡೆಯಲಿ, ನಮ್ಮದೇನು ಹೋಗುತ್ತದೆ ಎಂದು ನಿಶ್ಚಿಂತೆಯಿಂದಿರಲು ಅವಕಾಶ!
ಒಂದು ವಿಧಾನಸಭಾ ಅಥವಾ ಸಂಸತ್ ಕ್ಷೇತ್ರದಲ್ಲಿ ಆಯ್ಕೆ ಗೊಂಡ ವ್ಯಕ್ತಿ ವೈಯಕ್ತಿಕ ಕಾರಣಗಳಿಗಾಗಿ ರಾಜೀನಾಮೆ ನೀಡಿ ಅದೇ ಕ್ಷೇತ್ರದಲ್ಲಿ ಮರು ಚುನಾವಣೆಗೆ ಇನ್ನೊಂದು ರಾಜಕೀಯ ಪಕ್ಷದ ಮೂಲಕ ಸ್ಪರ್ಧಿಸಬಹುದು. ಒಬ್ಬ ವ್ಯಕ್ತಿಯನ್ನು ಚುನಾವಣೆ ಇಲ್ಲದೆ ಮಂತ್ರಿಯನ್ನಾಗಿ ನೇಮಕ ಮಾಡಬಹುದು. ಆತ ಆರು ತಿಂಗಳೊಳಗಾಗಿ ಉಭಯ ಸದನಗಳೊಂದರಲ್ಲಿ ಸದಸ್ಯತ್ವ ಹೊಂದಿದರಾಯ್ತು. ಅದು ಚುನಾವಣೆ ಯಾ ನಾಮ ನಿರ್ದೇಶನದ ಮೂಲಕವೂ ಆಗಬಹುದು. ನಮ್ಮ ಸಂವಿಧಾನದಲ್ಲಿ ಮತದಾರನಾಗತಕ್ಕವನ ಅರ್ಹತೆಯನ್ನು ವಿಷದಪಡಿಸಲಾ ಗಿದೆ. ಆದರೆ ಚುನವಣೆಗೆ ಸ್ಪರ್ಧಿಸತಕ್ಕ ಅಭ್ಯರ್ಥಿಯ ಅರ್ಹತೆ ಯನ್ನು ಪ್ರತ್ಯೇಕವಾಗಿ ಹೇಳಲಾಗಿಲ್ಲ. ಚುನಾವಣೆಗೆ ಸಂಬಂಧಿ ಸಿದ ಜನತಾ ಪ್ರಾತಿನಿಧ್ಯ ಕಾಯಿದೆ 1951ರ ಸೆಕ್ಷನ್ 11ಎ(1)ರಲ್ಲಿ ಜೈಲು ಶಿಕ್ಷೆ ಅನುಭವಿಸಿದಾತ ಜನಪ್ರತಿನಿಧಿಯಾಗಲು ಅನರ್ಹವೆಂದು ಮಾತ್ರ ಉಲ್ಲೇಖೀಸಲ್ಪಟ್ಟಿದೆ. ಮುಂದುವರಿದು, ವಿಚಾರಣಾಧೀನ ಖೈದಿ ಚುನಾವಣೆಗೆ ಸ್ಪರ್ಧಿಸಲು ಚುನಾವಣಾ ಕಾನೂನು ಅಡ್ಡ ಬರುವುದಿಲ್ಲ. ಆತ ಅನ್ಯರ ಮೂಲಕ ನಾಮಪತ್ರವನ್ನು ಚುನಾವಣಾಧಿಕಾರಿಯ ಸಮಕ್ಷಮ ಮಂಡಿಸಬಹುದು. ಅರ್ಥಾತ್ ಆರೋಪಿಗಳು ಅನರ್ಹರಲ್ಲ, ಜನಪ್ರತಿ ನಿಧಿಗಳಾಗಬಹುದು. ಪರಿಣಾಮವಾಗಿ ನಮ್ಮ ಸದನಗಳಲ್ಲಿ ಶೇ.35ಕ್ಕಿಂತ ಅಧಿಕ ಪ್ರಮಾಣದ ಕ್ರಿಮಿನಲ್ ಆರೋಪಿಗಳಿದ್ದಾರೆ ಎಂದು ಅಧಿಕೃತ ಅಂಕಿ ಅಂಶಗಳೇ ಸಾರುತ್ತವೆ. ಹಾಗಾಗಿ ಸದನದಲ್ಲಿ ಯಾವತ್ತೂ ಕದನ ಕೋಲಾಹಲ. ಕೆಲವರು ಸದನದ ಬಾವಿಯಲ್ಲಿ ಕುಳಿತು ಎತ್ತರದ ಧ್ವನಿಯಲ್ಲಿ ಕೂಗುತ್ತಿರುತ್ತಾರೆ. ಒಬ್ಬರನ್ನೊಬ್ಬರು ತಳ್ಳುವ ಭರದಲ್ಲಿ ಅಂಗಿ ಹರಿದು ಕೊಳ್ಳುತ್ತಾರೆ. ಮಸೂದೆಗಳು ತಾತ್ವಿಕವಾಗಿ ಚರ್ಚಿಸಲ್ಪಡುವುದಿಲ್ಲ. ವಿಪರ್ಯಾಸವೆಂದರೆ ಸಭೆಯ ನಿರ್ವಹಣೆಯನ್ನು ಸಮರ್ಥವಾಗಿ ನಿಭಾಯಿಸಲಿಕ್ಕಾಗದೆ ಸಭಾಪತಿಗಳು ಮುಂದೂಡುವಾಗ ಕೆಲವು ಮಸೂದೆಗಳು ಚರ್ಚೆ ಇಲ್ಲದೆ ಪಾಸಾಗಿರುತ್ತದೆ. ಅದೂ ಧ್ವನಿಮತದಿಂದ ಅಂದರೆ ಆಧುನಿಕ ಸಂಸದೀಯ ಭಾಷೆಯಲ್ಲಿ ಧ್ವನಿ ಅಥವಾ ಗದ್ದಲದ ನಡುವೆ ಎಂದರ್ಥ.
ಈ ಜನಪ್ರತಿನಿಧಿಗಳು ಭಾರತದ ಸಮಗ್ರತೆಯನ್ನು ಎತ್ತಿ ಹಿಡಿಯುವರೇ? ನಮ್ಮ ಚುನಾವಣಾ ಕಾನೂನು ಎಷ್ಟು ದುರ್ಬಲವೆಂಬುದಕ್ಕೆ ಇವು ಜ್ವಲಂತ ನಿದರ್ಶನಗಳು. ಇನ್ನೂ ನೂರಾರು ನ್ಯೂನತೆಗಳು ಕಾನೂನಿನಲ್ಲಿವೆ.
ನಮ್ಮ ದೇಶಕ್ಕೆ ತುರ್ತಾಗಿ ಬೇಕಾಗಿರುವುದು ಕ್ರಾಂತಿಕಾರಿ ಚುನಾವಣಾ ಸುಧಾರಣೆ. ಏಕಕಾಲದ ಚುನಾವಣೆಯಲ್ಲ. ಕ್ರಿಮಿನಲ್ ಆರೋಪಿಗಳು ಕೂಡ ಆಡಳಿತ ಕ್ಷೇತ್ರವನ್ನು ಪ್ರವೇಶಿಸದಂತೆ ನಿರ್ಬಂಧಿಸುವ ಹಾಗೂ ಕಾನೂನಿನಲ್ಲಿ ಅಡಕವಾದ ಅನುಚಿತ ಅವಕಾಶಗಳ ರಂಧ್ರಗಳನ್ನು ಮುಚ್ಚುವ ಪ್ರಗತಿಪರ ಚುನಾವಣಾ ಕಾನೂನಿನ ತಿದ್ದುಪಡಿ ಅಗತ್ಯ. ಆ ಬಗ್ಗೆ ಸಾರ್ವಜನಿಕರು ಚಿಂತಿಸುವ ಕಾಲ ಸನ್ನಿಹಿತವಾಗಿದೆ.
– ಬೇಳೂರು ರಾಘವ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.