ಹಕ್ಕುಗಳು, ಕರ್ತವ್ಯಗಳು; ಪ್ರಜಾತಂತ್ರ
Team Udayavani, Aug 1, 2022, 5:45 AM IST
“ಒಂದೊಮ್ಮೆ ನಮ್ಮ ಜನತಂತ್ರ ಪ್ರಯೋಗ ಯಶಸ್ವಿ ಆಗದೇ ಹೋದಲ್ಲಿ ಸಮಗ್ರ ಭಾರತ ಅತ್ಯಂತ ಗಂಭೀರ ಪರಿಸ್ಥಿತಿಯನ್ನು ಎದುರಿಸಬೇಕಾದೀತು’-ಇದು ಸಂವಿಧಾನ ರಚನಾ ಸಭೆಯಲ್ಲಿ ಡಾ| ಬಿ.ಆರ್. ಅಂಬೇಡ್ಕರ್ ನೀಡಿದ ಪ್ರಜ್ಞಾವಂತ ಎಚ್ಚರಿಕೆ. ಒಂದು ಮಾತಿದೆ “ಕಳೆದ ನಿನ್ನೆಗಳ ರಾಜಕೀಯ ಇಂದಿನ ಇತಿಹಾಸ; ಪ್ರಚಲಿತ ರಾಜಕೀಯ ಮುಂದಿನ ಇತಿಹಾಸ’ ಈ ಸೂಚನಾ ಫಲಕವನ್ನು ಗಮನಿಸಿಯೇ ಪ್ರತಿಯೊಬ್ಬ ಪ್ರಜ್ಞಾವಂತ ಪ್ರಜೆಯ ವ್ಯಕ್ತಿಗತ ಹಾಗೂ ಸಾಮೂಹಿಕ ಬದುಕಿನ ಹೆಜ್ಜೆಗಳು ಸಾಗಬೇಕಾಗಿದೆ.
“ರಾಜಕೀಯ ಎಂಬುದು ಸಮಾಜದ ಪ್ರತಿಫಲನ (Politics in the reflection of Society)’ ಎಂಬ ವ್ಯಾಖ್ಯಾನವೂ ರಾಜಕೀಯದ ಬಗೆಗಿನ ಹಲವು ವಿಶ್ಲೇಷಣೆಗಳಲ್ಲಿ ಒಂದು. ಭಾರತ ದಂತಹ ವಿಶಾಲ ಹಾಗೂ ವೈವಿಧ್ಯ ಮಯ ರಾಷ್ಟ್ರದ ಬದುಕು ನಿಂತ ನೀರಿನಂತಿರಲು ಸಾಧ್ಯವೇ ಇಲ್ಲ ತಾನೇ? ಹರಿಯುವ ನದಿಯನ್ನು ಅರ್ಥಾತ್ ನದಿಯಲ್ಲಿ ಹರಿದು ಹೋದ ನೀರನ್ನು ಸಮಯದ ಗತಿಚಕ್ರಕ್ಕೆ ಹೋಲಿಸುತ್ತಾರೆ. ಅದೇ ರೀತಿ ಸುಮಾರು 30 ವರ್ಷ ಎಂದರೆ ಒಂದು ತಲೆಮಾರು ಎಂಬುದಾಗಿ ಲೆಕ್ಕಿಸುವುದೂ ಇದೆ. ಆ ದೃಷ್ಟಿಯಲ್ಲಿ ಇದೀಗ ಭಾರತದ ತ್ರಿವರ್ಣ ಧ್ವಜವೇರಿ ನಾವು 3ನೇ ತಲೆಮಾರಿನ ಹೊಸ್ತಿಲಲ್ಲಿ ಇದ್ದೇವೆ. ಈ ನಿಟ್ಟಿನಲ್ಲಿ ಪ್ರಚಲಿತ ರಾಷ್ಟ್ರೀಯ ಬದುಕು, ಪ್ರಚಲಿತ ವಿದ್ಯಮಾನ, ರಾಷ್ಟ್ರೀಯ ಸಾಮಾಜಿಕ ಏರುಪೇರು…, ಆರ್ಥಿಕ ಸಂಚಲನ ಹೊಸ ಪೀಳಿಗೆಯ ಮುಂದಿನ ಗುರಿ, ಚಿಂತನಾ ಪರಿಧಿ ಇವೆಲ್ಲವನ್ನೂ ಸ್ಥೂಲವಾಗಿ ವಿಶ್ಲೇಷಿಸಬೇಕಾಗಿದೆ.
ನಮ್ಮ ಸಂವಿಧಾನ 1950 ಜನವರಿ 26ರ ಬಳಿಕ ಈ ವಿಶಾಲ ನೆಲದ ಬುನಾದಿ. ಅದರ ಮೇಲೆಯೇ ದಿಲ್ಲಿಯ ಸಂಸತ್‌ನಿಂದ ಪಂಚಾಯತ್ ಕಟ್ಟೆಯವರೆಗೆ ಜನತಂತ್ರದ ಸೌಧ ಕಟ್ಟಿದ್ದೇವೆ. ನಮ್ಮದೇ ರಾಷ್ಟ್ರಗೀತೆಯ ಏಕತಾನದಲ್ಲಿ ಈ “ಮಣ್ಣಿನ ಮಕ್ಕಳ’ ಮಿಡಿತ, ಎದೆ ಬಡಿತ ಇರುವಂತಾಗಲೀ ಎಂಬುದಾಗಿ “ಭಾರತ ಭಾಗ್ಯವಿಧಾತ’ ಜಯಕಾರ ಹಾಕುತ್ತೇವೆ. ಆದರೆ ಅಂತಹ ಮಾನಸಿಕ ಪಕ್ವತೆಯನ್ನು ಪ್ರತಿಯೊಂದು ಮನಸ್ಸಲ್ಲಿ, ಮನೆಯಲ್ಲಿ ಸಿದ್ಧಗೊಳಿಸುವಲ್ಲಿ ಉತ್ತರದ ಹಿಮಗಿರಿಯಿಂದ ಕಡಲ ತಡಿಯ ಕನ್ಯಾಕುಮಾರಿ ಯವರೆಗೆ, ಅರುಣೋದಯದ ಅರುಣಾಚಲದಿಂದ ಸಿಂಧೂ ಮಡಿಲಿನ ಸೌರಾಷ್ಟ್ರದವರೆಗೆ ವಾತಾವರಣ ತುಂಬಿ ದೆಯೇ? ಇದೊಂದು 75ರ ಸ್ವಾತಂತ್ರ್ಯೋತ್ಸವದ ಹರುಷದ ಸಂಭ್ರಮದ ಜತೆಜತೆಗೇ ಸ್ವಗತದ ಪ್ರಜ್ಞಾವಂತಿಕೆಯ ಪಲ್ಲವಿ ಕೂಡ. ರಾಷ್ಟ್ರ, ರಾಷ್ಟ್ರೀಯತೆ- ಈ ಎಲ್ಲ ಶಬ್ದಗಳ ನೈಜ ಅರ್ಥ ವಾದರೂ ಏನು? ಮೂಲತಃ ಇದೊಂದು ಭೌಗೋಳಿಕತೆಯ, ಅಗಾಧ ಜನಸಮೂಹದ, ತನ್ನದೇ ರಾಜಕೀಯ ವ್ಯವಸ್ಥೆಯಿಂದ ರೂಪುಗೊಂಡ, ಭಾವನಾತ್ಮಕ ಸಂಬಂಧ. ಈ ಬಗ್ಗೆ ಒಂದು ಪುಟ್ಟ ವಿವರಣೆ ಕೊಡುವುದಾದರೆ 1905ರ ವಂಗಭಂಗದ ಪಳೆಯುಳಿಕೆಯೆನಿಸಿ ಈಗಲೂ ಬಾಂಗ್ಲಾದೇಶ, 1935ರ ವಿಭಜನೆಯ ಫಲಶ್ರುತಿಯಾಗಿ ಬರ್ಮಾ (ಮ್ಯಾನ್ಮಾರ್) ನಮ್ಮ ಗಡಿಗೆ ಅಂಟಿಕೊಂಡೇ ಇರುವ ಪುಟಾಣಿ ರಾಷ್ಟ್ರಗಳಾದ ಭೂತಾನ್, ನೇಪಾಲ ಇವುಗಳೇ ಒಂದು ಜ್ವಲಂತ ನಿರ್ದೇಶನಗಳು.
ಈ ಪೀಠಿಕೆಯೊಂದಿಗೆ ನಾವು ಪ್ರಸ್ತುತ ಚಿಂತೆ ಪಡಬೇಕಾದ, ಅಲ್ಲಿ ಚಿಂತಿಸಬೇಕಾದ ಅಂಶವಿದೆ. ನಮ್ಮ ಮೂಲಭೂತ ಹಕ್ಕುಗಳ ಹಾಗೂ ಮೂಲಭೂತ ಕರ್ತವ್ಯಗಳ ಸಮಪಾಕದಲ್ಲಿ ಹೇಗೆ ವ್ಯಕ್ತಿಗತ, ಕೌಟುಂಬಿಕ, ಗ್ರಾಮೀಣ, ನಗರಗಳ, ರಾಜ್ಯದ ಹಾಗೂ ಕೊನೆಯದಾಗಿ ರಾಷ್ಟ್ರ ಮಟ್ಟದಲ್ಲಿ ಬದುಕನ್ನು ಕಟ್ಟಿಕೊ ಳ್ಳಬೇಕು ಎಂಬುದು. ನೂರಕ್ಕೆ ನೂರು ಪ್ರತಿಶತಃ ರಾಮರಾಜ್ಯ ಅಥವಾ ಸುಖೀ ರಾಜ್ಯ (Welfare State)ದ ಕಲ್ಪನೆಯ ಆಗಸದಲ್ಲಿ ನಾವಂತೂ ವಿಹರಿಸುವಂತಿಲ್ಲ. ಬದಲಾಗಿ, ರಾಷ್ಟ್ರ ನೌಕೆಯಲ್ಲಿ ಕುಳಿತು ಅಗಾಧ ತೆರೆಗಳ ಮೇಲೇರಿ, ಅಪಾರ ಸಾಗರದ ಅನಂತ ಪಯಣದಲ್ಲಿ ನಾವು ನಾವಾಗಿ ಸಾಗಲೇ ಬೇಕಾಗಿದೆ. ಅಂತೆಯೇ ವಿಶ್ವ ಕುಟುಂಬದ ಸದಸ್ಯ ಎನಿಸಿಯೂ ನಮ್ಮ ಭಾರತದ ಸಹಚರ್ಯೆ ಹಾಗೂ ಎಚ್ಚರದ ಇರವು, ಹರವು ನಮ್ಮದಾಗಿಸಬೇಕಾಗಿದೆ. ಮಾತ್ರವಲ್ಲ ಈ ನಮ್ಮ ದೇಶದ ಕಳೆದ ನಿನ್ನೆಗಳ ನೆನಪಿನ ಅಂಗಳದಲ್ಲಿ ತುಂಬಿನಿಂತ, ಈಗ ಸಮಯದ ಪರಿಧಿಯಾಚೆ ಸರಿದು ಹೋದ ಹತ್ತು ಹಲವು ಪ್ರಕೃತಿಯ ವಿಕೋಪಗಳು, ಮಾನವ ನಿರ್ಮಿತ ದುರಂತಗಳ ತಿಳಿ ಬೆಳಕಿನಲ್ಲೇ ಭಾರತದ ಮುಂದಿನ ಸೂರ್ಯೋದಯಗಳನ್ನು ಸ್ವಾಗತಿಸಬೇಕಾಗಿದೆ.
ಜನತಂತ್ರದ ಜಾಣ್ನುಡಿಯೊಂದಿಗೆ – “ನಾವು ಹೇಗಿದ್ದೇವೋ ಅದೇ ರೀತಿ ನಮ್ಮನ್ನಾಳುವ ಸರಕಾರ ಕೂಡ’. ಹಾಗಾಗಿ ನಮ್ಮ ಸಂವಿಧಾನದ ಹಕ್ಕುಗಳನ್ನು ಯಥಾವತ್ತಾಗಿ ಅನು ಭೋಗಿಸುವಲ್ಲಿ ಎರಡು ಎಚ್ಚರಗಳು ನಮಗೆ ಸದಾ ಇರಬೇಕಾಗಿದೆ- ಒಂದು ಕಾನೂನನ್ನು ಭಂಗಗೊಳಿಸದೆ, ಕಾನೂನನ್ನೇ ಕೈಗೆತ್ತಿಕೊಳ್ಳದೆ, ಶಾಂತಿ ಭಂಗಗೊಳಿಸದೆ, ಸಾಮರಸ್ಯದ ಸರೋವರ ಕದಡದ ತೆರದಲ್ಲಿ ನಮ್ಮ ಎಲ್ಲ ಮೂಲಭೂತ ಹಕ್ಕುಗಳನ್ನು ಹೊಂದುವ ಜಾಣ್ಮೆ ನಮ್ಮದಾಗಿಸಬೇಕು; ಅಷ್ಟೇ ನುಣುಪಾಗಿ ಇನ್ನೊಬ್ಬರ ಸ್ವಾತಂತ್ರ್ಯ ಹಾಗೂ ಹಕ್ಕನ್ನು ಹೃಸ್ವಗೊಳಿಸದೆ ನಾವು ಈ ಎಲ್ಲ ಹಕ್ಕುಗಳನ್ನೂ ಅನುಭೋಗಿಸುವ ಮನ ಹಾಗೂ ಚಾಕಚಕ್ಯತೆ ನಮ್ಮದಾಗಿಸಬೇಕು. ಇಂತಹ ಪ್ರಜ್ಞಾವಂತಿಕೆ ಅರಳಿತು ಎಂದಾದರೆ ನಮ್ಮ ಪ್ರಜಾಪ್ರಭುತ್ವದ ಬೇರುಗಳು ಇನ್ನೂ ಕೆಲವು ಶತಮಾನಗಳ ಮಟ್ಟಿಗೂ ಭದ್ರವಾದಂತೆಯೇ ಸರಿ. ಬದಲಾಗಿ ಸರಕಾರದ ಕಾನೂನು ಭಂಜನೆ, ಸಾಮಾಜಿಕ ಅಶಾಂತಿ, ರಾಷ್ಟ್ರಕ್ಕಿಂತ ಮಿಗಿಲಾಗಿ ನಮ್ಮ ಒಳ ಪ್ರಭೇದಗಳ ವೈಭವೀಕರಣ ಹಾಗೂ ಅತಿರೇಕದ ಮಟ್ಟ ಜನಸಮುದಾಯ ಮುಟ್ಟಿತು ಎಂದಾದರೆ ಜನತಂತ್ರಕ್ಕೆ ಅಪಾಯದ ಬಿಸಿ ತಟ್ಟಿತು ಎಂದು ಅರ್ಥ. ಇದನ್ನು ಸೂಕ್ಷ್ಮವಾಗಿ ಗಮನಿಸುವ ಜನ-ಮನ ಇದ್ದಾಗ ಮಾತ್ರ ಗಣರಾಜ್ಯ ಪ್ರಜಾಪ್ರಭುತ್ವ ಈ ಎರಡೂ ಸುಮಗಳು ಬಿರಿದು ಅರಳಿ ಸೌರಭ ನೀಡಬಲ್ಲದು.
“ಸ್ವಾತಂತ್ರ್ಯ ಎಂದರೆ ಸ್ವೇಚ್ಛೆ ಅಲ್ಲ’ ಎಂಬ ಎಚ್ಚರ ನಿಚ್ಚಳವಾಗಿ ಇರುವಿಕೆ ಜನತಂತ್ರದ ತಳಪಾಯ. ಪ್ರತಿಯೊಂದು ಹಕ್ಕಿಗೂ ಅದರದೇ ಆದ ಇತಿಮಿತಿ ಇದೆ. ರಾಜಕೀಯ ಎಂದರೆ ಅದೊಂದು ಯುದ್ಧವಲ್ಲ; ಬದಲಾಗಿ ಅದೊಂದು ಕ್ರೀಡೆ. ಅಂತಹ ಕ್ರೀಡಾ ಮನೋಭೂಮಿಕೆ (Sportsmanship) ರಾಜಕೀಯ ಪಕ್ಷಗಳಲ್ಲಿ, ನೇತಾರರಲ್ಲಿ ಒಡಮೂಡಿದಾಗ “ಕಿಡಿಕಾರಿದರು’, “ಕತ್ತಿ ಮಸೆದರು’ ಎಂಬ ವಿಚಿತ್ರ ಶಬ್ದಗಳೂ ಮಾಧ್ಯಮದ ನುಡಿಮುತ್ತುಗಳಲ್ಲಿ ನುಸುಳಲಾರವು. ಹಾಗೆಂದು “ಸಂತೆಯೊಳಗೊದು ಮನೆಯ ಮಾಡಿ ಶಬ್ದಕ್ಕೆ ಅಂಜಿದೊಡೆ ಎಂತಯ್ಯಾ …’ ಎಂಬುದಾಗಿ ಪ್ರಜಾತಂತ್ರ ಬೆಳಕು ಕತ್ತಲೆಯ ರಂಗಿನಾಟದಲ್ಲೇ ಸುಂದರವಾಗಿ ರಾಷ್ಟ್ರೀಯ, ಅಂತೆಯೇ ವ್ಯಕ್ತಿಗತ ಬದುಕನ್ನು ಹೆಣೆದುಕೊಳ್ಳುವ ಕಾಯಕಕ್ಕೂ ನಾವು ಮುಂದಾಗಬೇಕು, ನಮ್ಮ ನಮ್ಮ ಮನೆ ಗಳಲ್ಲಿ ನಮಗೆ ಸ್ವಾತಂತ್ರ್ಯವೂ ಇದೆ. ಅದೇ ತೆರನಾಗಿ ರಾಷ್ಟ್ರಭಕ್ತಿ ರಾಷ್ಟ್ರ ಶಕ್ತಿಯಾಗಿ ಪರಿವರ್ತನೆಗೊಳ್ಳುವಲ್ಲಿ, ದೇಶದ ಪ್ರಗತಿಯ ಮಹಾನ್ ಚಕ್ರಪಾಲನೆಯಲ್ಲಿ ಅಪಾರ ಸಿಂಧುವಿನ ಬಿಂದು ಬಿಂದುಗಳಾಗಿ ನಮ್ಮೆಲ್ಲರ ಪಾತ್ರವೂ ಇದೆ. ಏಕೆಂದರೆ ನಮ್ಮ ಭಾರತ ಮಹಾನ್ ಆಗುವಲ್ಲಿ ನಮ್ಮೆಲ್ಲರ ಪರಿಶ್ರಮ, ಪ್ರಜ್ಞಾವಂತಿಕೆ, ಸಹಚಿಂತನೆ, ಸಾಮರಸ್ಯದ ಮಾನಸಿಕತೆ ಎನ್ನುವ ಚತುಶ್ಚಕ್ರದ ಪರಿಭ್ರಮಣೆ ರಾಷ್ಟ್ರ ರಥ ಚಾಲನೆಗೆ ಇಂದಿನ ಹಾಗೂ ಮುಂದಿನ ಆವಶ್ಯಕತೆ.
– ಡಾ| ಪಿ.ಅನಂತಕೃಷ್ಣ ಭಟ್, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.