ಶಾಲೆಗೆ ಹೋಗುವುದೆಂದರೆ ಹಬ್ಬವಾಗಬೇಕು..
Team Udayavani, Jun 1, 2017, 12:32 AM IST
ಇಂದು ಹೋಂವರ್ಕ್, ಪ್ರಾಜೆಕ್ಟ್ ಗಳು ಎಂದೆಲ್ಲ ಮಕ್ಕಳನ್ನು ಯಂತ್ರಗಳನ್ನಾಗಿಸುತ್ತಾ ಸಾಗಿದ್ದೇವೆ. ಇವುಗಳ ಭಾರವನ್ನು ಬೆನ್ನಿಗೆ ಹೊರಿಸಿ ಬಾಲ್ಯವನ್ನು ಕಸಿದು ಕೊಂಡುಬಿಟ್ಟಿದ್ದೇವೆ. ಪಠ್ಯೇತರ ಚಟುವಟಿಕೆಗಳ ಕುರಿತು ಆಸಕ್ತಿ ಮೂಡದಂತೆ ನೋಡಿಕೊಂಡಿದ್ದೇವೆ. ದಡ್ಡನಾದರೆ ಮಾತ್ರ ಆತ ಕ್ರೀಡಾಂಗಣದಲ್ಲಿ ಇರುತ್ತಾನೆ ಎನ್ನುವಂತೆ ಬಿಂಬಿಸಲಾಗುತ್ತದೆ!
ಮತ್ತೆ ಹೊಸ ಶೈಕ್ಷಣಿಕ ವರ್ಷ ಆರಂಭಗೊಂಡಿದೆ. ಮಕ್ಕಳ ಚಿಲಿಪಿಲಿ ಶಾಲಾವರಣದಲ್ಲಿ ಅನುರಣನಗೊಳ್ಳಲಿದೆ. ತಮ್ಮ ಮಗು ಮುಂದಿನ ತರಗತಿಯಲ್ಲಿ ಓದುವ ಹೆಮ್ಮೆ ಎಲ್ಲ ತಂದೆ ತಾಯಂದಿರಲ್ಲಿ ಎದ್ದು ಕಾಣುತ್ತಿದೆ. ಹೊಸ ಬಟ್ಟೆ, ಹೊಸ ಪುಸ್ತಕ ಮಕ್ಕಳಲ್ಲಿ ನವೋತ್ಸಾಹ ಮೂಡಿಸಿದೆ. ಶಾಲೆಗಳು ಕೂಡ ಹೊಸ ಶೈಕ್ಷಣಿಕ ವರ್ಷಕ್ಕೆ ಸಜ್ಜಾಗಿವೆ. ಈ ವರ್ಷ ಇನ್ನಷ್ಟು ಉತ್ತಮ ವಾಗಿ ಕಾರ್ಯನಿರ್ವಹಿಸುವ, ಮತ್ತಷ್ಟು ಉತ್ತಮ ಫಲಿತಾಂಶ ಮೊಗೆದುಕೊಳ್ಳುವ ಧಾವಂತದಲ್ಲಿವೆ. ಹೊಸ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲು ಅಂಕಗಳ ಬೆಂಚ್ ಮಾರ್ಕ್ ಎಷ್ಟಿರಬೇಕು? ಎಂಬ ಆಲೋಚನೆಯಲ್ಲಿವೆ ಶಾಲೆಗಳು. ಅಲ್ಲದೇ ಹೊಸ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುತ್ತಿರುವುದರಿಂದ ತಾವೇನು ಕಲಿಸ ಬೇಕು? ಹೇಗೆ ಕಲಿಸಬೇಕು? ಎಂಬೆಲ್ಲ ಲೆಕ್ಕಾಚಾರಗಳು, ಚರ್ಚೆಗಳು ನಡೆಯುತ್ತಿವೆ. ಇದರ ಜೊತೆಗೆ ತಮ್ಮ ಕಟ್ಟಡ ಕಾಮಗಾರಿ ವಿಸ್ತರಣೆ ಇತ್ಯಾದಿಗಳ ಕುರಿತೂ ಅವು ಗಮನ ಹರಿಸುತ್ತಿವೆ. ಇದಕ್ಕೆ ಬೇಕಾದ ಆರ್ಥಿಕ ಸಂಪನ್ಮೂಲ ಕ್ರೋಡೀಕರಣದ ಬಗ್ಗೆ ತಲೆಕೆಡಿಸಿಕೊಂಡಿವೆ. ಇದಕ್ಕಾಗಿ ಪೋಷಕರಿಂದ ಯಾವ ಯಾವ ರೂಪದಲ್ಲಿ ಹಣ ಪಡೆಯಬಹುದು ಎಂಬ ಲೆಕ್ಕಾಚಾರಗಳು ಶಾಲೆಯ ಪಡಸಾಲೆಯಲ್ಲಿ ನಡೆಯುತ್ತಿವೆ. ಆದರೆ, ಇವೆಲ್ಲದರ ನಡುವೆಯೇ, ತಾವು ಮಕ್ಕಳ ಮನಸ್ಸನ್ನು ಯಾವ ರೀತಿ ಅರಿಯಬೇಕು ಎಂದು ಮಾತ್ರ ಯಾವ ಶಾಲೆಯೂ ಯೋಚಿಸುತ್ತಿದ್ದಂತೆ ಕಾಣುತ್ತಿಲ್ಲ! ಬಡ ಮಕ್ಕಳು ಮತ್ತು ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಮುಖ್ಯವಾಹಿನಿಗೆ ತರುವ ಕುರಿತು ಎಲ್ಲಿಯೂ ಚಿಂತನೆ ನಡೆಯುತ್ತಿಲ್ಲ. ಇದೇ ನಮ್ಮ ಶೈಕ್ಷಣಿಕ ವ್ಯವಸ್ಥೆಯ ದುರಂತ!
ಎಲ್ಲ ಶಾಲೆಗಳಿಗೂ ಬುದ್ಧಿವಂತ ವಿದ್ಯಾರ್ಥಿಗಳೇ ಬೇಕು. ಈ ವಿದ್ಯಾರ್ಥಿಗಳನ್ನು ಇಟ್ಟುಕೊಂಡು ಶೇ. 100 ಫಲಿತಾಂಶ ದಾಖಲಿಸಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವ ಪ್ರಯತ್ನದ ಲ್ಲಿಯೇ ಶಾಲೆಗಳು ಇವೆ. ಎಲ್ಲವನ್ನೂ ಕಲಿಸಬಲ್ಲ ಶಿಕ್ಷಕರಿಗಾಗಲಿ, ಇವರನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಶಾಲಾ ಆಡಳಿತ ಮಂಡಳಿಗಳಿಗಾಗಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಕುರಿತು ಆಲೋಚನೆಯೇ ಬರುತ್ತಿಲ್ಲ. ಆಲೋಚನೆ ಯಿರಲಿ, ಕನಿಷ್ಠ ಕನಿಕರವೂ ಮೂಡುತ್ತಿಲ್ಲ. ಯಾವ ವಿದ್ಯಾರ್ಥಿಯೂ ದಡ್ಡನಾಗಿರುವುದಿಲ್ಲ. ಬದಲಾಗಿ ಅವರ ಗ್ರಹಿಸುವ ಕ್ರಮದಲ್ಲಿ ಸಣ್ಣ ದೋಷವಿರುತ್ತದಷ್ಟೆ. ಆ ದೋಷವನ್ನು ನಿವಾರಿಸಿ ವಿದ್ಯಾರ್ಥಿಯನ್ನು ಎಲ್ಲರ ಜೊತೆ ಸಮನಾಗಿ ತೆಗೆದುಕೊಂಡು ಹೋಗುವ ಸಾಧ್ಯತೆಯ ಕುರಿತು ಯೋಚಿಸಲು ಯಾರೂ ಸಿದ್ಧರಿಲ್ಲ. ತಮ್ಮ ಶಿಕ್ಷಣ ಸಂಸ್ಥೆಯ ವಿಸ್ತರಣೆಯತ್ತಲೇ ಗಮನಹರಿಸುವ ಶಾಲಾ ಆಡಳಿತ ಮಂಡಳಿಗಳಿಗೆ ಇಂತಹ ‘ಚಿಕ್ಕಪುಟ್ಟ’ ವಿಷಯಗಳ ಕುರಿತು ಗಮನ ಹರಿಸಲು ವೇಳೆಯಾದರೂ ಎಲ್ಲಿರುತ್ತದೆ? ನಮ್ಮ ಶಾಲೆಯಲ್ಲಿ ಪ್ರಯೋಗ ಶಾಲೆಯಿದೆ, ಕಂಪ್ಯೂಟರ್ ಕೇಂದ್ರವಿದೆ, ಆಂಗ್ಲಭಾಷೆಯಲ್ಲಿಯೇ ಕಲಿಸಲಾಗುತ್ತದೆ, ಉತ್ತಮ ಕಟ್ಟಡವಿದೆ, ಪ್ರತಿ ಶಾಲಾ ಕೊಠಡಿಗೆ ಫ್ಯಾನುಗಳಿವೆ, ಉತ್ತಮ ಡೆಸ್ಕ್ಗಳಿವೆ.. ಹೀಗೆ ಇಲ್ಲದ್ದನ್ನು, ಇದ್ದುದನ್ನು ಸೇರಿಸಿ ಉದ್ದುದ್ದ ಪಟ್ಟಿಯನ್ನು ಪೋಷಕರಿಗೆ ನೀಡಲಾಗುತ್ತದೆ. ಆದರೆ ಹೀಗೆ ಪಟ್ಟಿ ಮುಂದಿಡುವ ಯಾವ ಶಾಲೆಯೂ ತಮ್ಮಲ್ಲಿ ಮಕ್ಕಳಿಗೆ ಮಾನವೀಯತೆಯ ಪಾಠ ಹೇಳಿಕೊಡಲಾಗುತ್ತದೆ ಎನ್ನುವುದಿಲ್ಲ, ನೀತಿ ಪಾಠವಿದೆ ಎಂದು ಪಟ್ಟಿ ಕೊಡುತ್ತಿಲ್ಲ, ಎಲ್ಲರನ್ನೂ ಸಮಾನವಾಗಿ ಕಾಣುತ್ತೇವೆ ಎಂದು ಪ್ರಚಾರ ಮಾಡುವುದಿಲ್ಲ!
ಶಿಕ್ಷಣದ ಕ್ರಮ ವರ್ಷದಿಂದ ವರ್ಷಕ್ಕೆ ಬದಲಾಗುತ್ತಿದೆ. ‘ಬದಲು’ ಎಂದರೆ ಅಂಕಗಳಿಗಷ್ಟೇ ಮೊದಲ ಪ್ರಾಶಸ್ತ್ಯ ನೀಡಲಾಗುತ್ತದೆ. ಅಂಕ ಗಳಿಕೆಯೇ ಮಕ್ಕಳ ಜೀವನದ ಮುಖ್ಯ ಗುರಿ ಎಂದೇ ಕಲಿಸಲಾಗುತ್ತದೆ. ರ್‍ಯಾಂಕ್ ಗಳಿಸದಿದ್ದರೆ ಈ ಪ್ರಪಂಚದಲ್ಲಿ ಸ್ಥಾನವೇ ಇಲ್ಲ ಎಂಬುದನ್ನು ಮಕ್ಕಳ ಮುಗ್ಧ ಮನಸ್ಸಿನಲ್ಲಿ ತುಂಬಲಾಗುತ್ತದೆ. ಮಕ್ಕಳಿಗೆ ಮಾತ್ರವಲ್ಲ, ಪೋಷಕರಿಗೂ ಕೂಡ! ತರಗತಿಯೊಳಗೆ ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗಳ ಕಡೆಗಷ್ಟೇ ಶಿಕ್ಷಕರ ಗಮನ ಕೇಂದ್ರೀಕೃತವಾಗುತ್ತದೆ. ಜ್ಞಾನ ದಾಸೋಹಿಗಳು, ದೇವರ ಸಮಾನರು ಎಂದು ಕರೆಸಿಕೊಳ್ಳುವ ಶಿಕ್ಷಕರೇ ಎಳೆಯ ಮಕ್ಕಳ ನಡುವೆ ತಾರತಮ್ಯ ಮಾಡುತ್ತಾರೆ. ಮಕ್ಕಳನ್ನು ಮಕ್ಕಳಂತೆ ನೋಡುವ ಬದಲು ತಮ್ಮ ದೃಷ್ಟಿಕೋನಕ್ಕೆ ಮತ್ತು ತಮ್ಮ ಭಾವನೆಗೆ ತಕ್ಕಂತೆ ನೋಡುತ್ತಿದ್ದಾರೆ. ಎಲ್ಲ ಮಕ್ಕಳು ತಮ್ಮ ಮಕ್ಕಳು, ಎಲ್ಲರೂ ಒಂದೇ ಎಂಬ ಭಾವನೆ ಎಷ್ಟು ಶಿಕ್ಷಕರಲ್ಲಿದೆ? ತರಗತಿಯಲ್ಲಿ ಯಾವ ರೀತಿ ನಡೆದುಕೊಳ್ಳಬೇಕು ಎಂದು ಎಷ್ಟು ಶಿಕ್ಷಕರಿಗೆ ತರಬೇತಿ ನೀಡಲಾಗಿರುತ್ತದೆ? ಕೇಳುತ್ತಾ ಹೋದರೆ ಪ್ರಶ್ನೆಗಳು ರಾಶಿ ರಾಶಿ ಸೃಷ್ಟಿಯಾಗುತ್ತವೆ. ಆದರೆ ಉತ್ತರ ಮಾತ್ರ ಸಿಗುವುದೇ ಇಲ್ಲ.
ಇಂದು ಹೋಂವರ್ಕ್, ಪ್ರಾಜೆಕ್ಟ್ಗಳು ಎಂದೆಲ್ಲ ಮಕ್ಕಳನ್ನು ಯಂತ್ರಗಳನ್ನಾಗಿಸುತ್ತಾ ಸಾಗಿದ್ದೇವೆ. ಇವುಗಳ ಭಾರವನ್ನು ಮಕ್ಕಳ ಬೆನ್ನಿಗೆ ಹೊರಿಸಿ ಅವರಿಂದ ಬಾಲ್ಯವನ್ನು ಕಸಿದು ಕೊಂಡುಬಿಟ್ಟಿದ್ದೇವೆ. ಪಠ್ಯೇತರ ಚಟುವಟಿಕೆಗಳ ಕುರಿತು ಆಸಕ್ತಿ ಮೂಡದಂತೆ ನೋಡಿಕೊಂಡಿದ್ದೇವೆ. ದಡ್ಡನಾದರೆ ಮಾತ್ರ ಆತ ಕ್ರೀಡಾಂಗಣದಲ್ಲಿ ಇರುತ್ತಾನೆ ಎನ್ನುವಂತೆ ಬಿಂಬಿಸಲಾಗುತ್ತದೆ! ಸಾಮಾನ್ಯ ಜ್ಞಾನ ಕುರಿತು ಅರಿವು ಇಲ್ಲದಂತೆ ಮಾಡಲಾಗು ತ್ತಿದೆ. ಇನ್ನಾದರೂ ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕರು ಬದಲಾಗಬೇಕು. ಶಿಕ್ಷಕರು ರಾಗ ದ್ವೇಷ ಭಾವನೆಯಿಂದ ಮುಕ್ತರಾಗಿ ಕಾರ್ಯನಿರ್ವಹಿಸುವ ಮನಃಸ್ಥಿತಿಗೆ ಬಂದು ನಿಲ್ಲಬೇಕು. ಪ್ರತಿ ಮಕ್ಕಳನ್ನೂ ಪ್ರೀತಿಯಿಂದ ಕಾಣುತ್ತಾ ಅವರಲ್ಲಿ ಆತ್ಮವಿಶ್ವಾಸ ತುಂಬುವ ಪ್ರಯತ್ನ ನಡೆಸಬೇಕು. ಪ್ರತಿ ಮಕ್ಕಳೂ ಭಿನ್ನ, ಒಂದೊಂದು ಮಗುವಿನ ಆಲೋಚನಾ ಕ್ರಮವೂ ಒಂದೊಂದು ರೀತಿಯಿರುತ್ತದೆ. ಅವರ ಕಲಿಕಾ ಸಾಮರ್ಥ್ಯವೂ ಬೇರೆ ಬೇರೆಯದಾಗಿರುತ್ತದೆ. ಇದನ್ನೆಲ್ಲಾ ಸಾವಧಾನದಿಂದ ನೋಡುವ ತಾಳ್ಮೆ ಬೆಳೆಸಿಕೊಳ್ಳಬೇಕು. ಮಕ್ಕಳಿಗೆ ಶಾಲೆಗೆ ಹೋಗುವುದೆಂದರೆ ಅದೊಂದು ಹಬ್ಬವಾಗಬೇಕು. ಅಲ್ಲೊಂದು ಪ್ರೀತಿಯ ಸೆಳೆತ ಹುಟ್ಟಬೇಕು. ಆಸಕ್ತಿ ಕೆರಳಬೇಕು.
ಬೇರೆಯದಲ್ಲದಕ್ಕೂ ಯುರೋಪಿಯನ್ನರನ್ನು, ಮುಂದುವರೆದ ದೇಶಗಳನ್ನು ಅನುಕರಿಸುವ ನಾವು ಕೆಲವು ವಿಷಗಳಲ್ಲಿ ಮಾತ್ರ ಆ ಕಡೆಯಿಂದ ವಿಮುಖರಾಗಿ ಬಿಡುತ್ತೇವೆ. ಆಸ್ಟ್ರೇಲಿಯಾ ಸೇರಿದಂತೆ ಮುಂದುವರಿದ ಅನೇಕ ದೇಶಗಳಲ್ಲಿ ಮಕ್ಕಳು ಮನೆಯಿಂದ ಬ್ಯಾಗ್ ಹೊತ್ತುಕೊಂಡು ಶಾಲೆಗೆ ಹೋಗುವುದಿಲ್ಲ. ಹೋಂವರ್ಕ್ ಎಂದರೆ ಅವರಿಗೆ ಗೊತ್ತೇ ಇಲ್ಲ. ಹಾಗೆಂದಾಕ್ಷಣ ಆ ಮಕ್ಕಳೆಲ್ಲ ಜೀವನದಲ್ಲಿ ‘ವಿಫಲರಾಗುತ್ತಾರೆ’ ಎಂದರ್ಥವೇ? ಅಂಥ ಶಿಕ್ಷಣ ವ್ಯವಸ್ಥೆಯಿಂದ ಬಂದ ಎಷ್ಟೊಂದು ಸಾಧಕರಿದ್ದಾರೆ?! ಆದರೆ ನಾವಿನ್ನೂ ಮಕ್ಕಳನ್ನು ದಂಡಿಸಿಯೇ ಕಲಿಸಬೇಕು ಎಂದು ಹಠಕ್ಕೆ ಬಿದ್ದಂತೆ ವರ್ತಿಸುತ್ತಿದ್ದೇವೆ. ನಾವೂ ಬದಲಾಗಬೇಕಲ್ಲವೆ? ಮಕ್ಕಳಲ್ಲಿ ಸಹಜವಾಗಿ ಕಲಿಯುವ ಆಸಕ್ತಿಯನ್ನು ಬೆಳೆಸಬೇಕು. ಪ್ರತಿ ವಿಷಯವೂ ಆಸಕ್ತಿ ಕೆರಳಿಸುವಂತಿರಬೇಕು. ಆಗ ಮಗು ಸ್ವಯಂ ಪ್ರೇರಣೆಯಿಂದ ಎಲ್ಲವನ್ನೂ ಕಲಿತುಬಿಟ್ಟಿರುತ್ತದೆ.
ಮಕ್ಕಳು ಕಲಿಯುವುದನ್ನು ಸಂಭ್ರಮಿಸಬೇಕು. ಆಸ್ವಾದಿಸಬೇಕು. ಅದರಲ್ಲಿ ತನ್ಮಯಗೊಳ್ಳಬೇಕು, ತಾದ್ಯಾತ್ಮತೆ ಸಾಧಿಸುವಂತಾಗಬೇಕು. ಪುಸ್ತಕ, ಪಾಠ, ಶಾಲೆ ಎಂದರೆ ನನ್ನ ಇಷ್ಟದ ವಿಷಯ ಎಂದುಕೊಳ್ಳುವಂತಾಗಬೇಕು. ಅಂಥ ವಾತಾವರಣವನ್ನು ನಿರ್ಮಿಸುವ ಬದಲು ಮಕ್ಕಳಿಗೆ ಪುಸ್ತಕ ಕಂಡರೆ ಅಲರ್ಜಿ ಹುಟ್ಟುವಂತೆ ಮಾಡುತ್ತಿದ್ದೇವೆ. ಹಿರಿಯರೆನಿಸಿಕೊಂಡ ನಾವು ಎಲ್ಲಿ ಎಡವುತ್ತಿದ್ದೇವೆ ಎಂದು ವಿಮರ್ಶಿಸುವ ಯಾವ ಪ್ರಯ ತ್ನವೂ ನಡೆಯುತ್ತಿಲ್ಲ. ಯಾರೋ ಭಾಷಾ ತಜ್ಞರು, ವಿಷಯ ತಜ್ಞರು ಕುಳಿತು ಈ ಮಕ್ಕಳು ಏನನ್ನು ಕಲಿಯಬೇಕು ಎಂದು ನಿರ್ದೇಶಿಸುತ್ತಾರೆ. ಆ ಮಕ್ಕಳ ಮಟ್ಟಕ್ಕೆ ಇಳಿದು ಯಾರಾದರೂ, ಎಂದಾದರೂ ಯೋಚಿಸಿದ್ದಾರೆಯೇ? ಕಲಿಸುವುದು ಎಂದರೆ ಚೀಲಕ್ಕೆ ಸಾಮಾನನ್ನು ಒತ್ತಿ ಒತ್ತಿ ತುಂಬಿದಂತೆ ತುಂಬುತ್ತಲೇ ಇದ್ದರೆ ಅದರೊಳಗಿನ ಸಾಮಾನುಗಳ ಕತೆ ಏನಾದೀತು? ಎಲ್ಲ ಕಲಸುಮೇಲೋಗರ ತಾನೆ?!
– ಗೋಪಾಲ್ ಯಡಗೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.