ತ್ರಿಭಾಷಾ ಗದ್ದಲದಲ್ಲಿ ಮೂಲೆ ಗುಂಪಾದ ಮಹತ್ವದ ಅಂಶಗಳು
Team Udayavani, Jul 11, 2019, 5:00 AM IST
ದಕ್ಷಿಣ ಭಾರತದಲ್ಲಿರುವವರು ಹಿಂದಿ ಕಲಿಯಲೇಬೇಕು ಎಂದು ಹೇಳುವ ಅಗತ್ಯವಿರಲಿಲ್ಲ
ಇತ್ತೀಚೆಗೆ ಸಮಿತಿಯೊಂದು ರಾಷ್ಟ್ರೀಯ ಶಿಕ್ಷಣ ನೀತಿಯ(ಎನ್‌ಇಪಿ) ಹೊಸ ಕರಡನ್ನು ಬಿಡುಗಡೆಗೊಳಿಸಿತು. ಅದೊಂದು 484 ಪುಟಗಳ ಅದ್ಭುತ ದಸ್ತಾವೇಜಾಗಿತ್ತು. ಶಿಕ್ಷಣ ವ್ಯವಸ್ಥೆಯಲ್ಲಿನ ಸಮಸ್ಯೆಗಳನ್ನು ಅದರಲ್ಲಿ ಒಪ್ಪಿಕೊಳ್ಳಲಾಗಿತ್ತು, ಕೆಲವು ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮಾರ್ಗಸೂಚಿಗಳನ್ನು ನೀಡಲಾಗಿತ್ತು. ಆದರೆ, ನಾವೇನು ಮಾಡಿದೆವು? ಅದರಲ್ಲಿ, ತ್ರಿಭಾಷಾ ಸೂತ್ರದ ಬಗ್ಗೆಯಿದ್ದ ಕೆಲವು ಸಾಲುಗಳನ್ನಷ್ಟೇ ಎತ್ತಿಕೊಂಡು, ಅದನ್ನು ಎಂದಿನ “ದಕ್ಷಿಣ ರಾಜ್ಯಗಳ ಮೇಲೆ ಹಿಂದಿ ಹೇರಿಕೆ’ ಎಂಬ ವಿಷಯವಾಗಿ ಬದಲಿಸಿಬಿಟ್ಟೆವು.
ಭಾರತೀಯ ಶಿಕ್ಷಣ ವ್ಯವಸ್ಥೆಯ ಮೂಲ ಸಮಸ್ಯೆಯೇನು ಎನ್ನುವುದರ ಬಗ್ಗೆ ಅಕ್ಷರಶಃ ಸಾವಿರಾರು ಲೇಖನಗಳು ಪ್ರಕಟವಾಗಿವೆ. ಈ ವಿಷಯದ ಮೇಲೆಯೇ ಪುಸ್ತಕಗಳು, ಸಿನೆಮಾಗಳು, ಟಿವಿ ಶೋಗಳು ಮತ್ತು ವೆಬ್ ಸರಣಿಗಳು ಕೂಡ ಬಂದು, ಭಾರತೀಯರ ಹೃದಯವನ್ನು ತಾಕಿವೆ. ಶಿಕ್ಷಣ ವ್ಯವಸ್ಥೆಯನ್ನು ಸರಿಪಡಿಸಬೇಕು ಎನ್ನುವ ವಿಚಾರಕ್ಕೆ ನಮ್ಮೆಲ್ಲರ ಸಹಮತಿಯಿದೆ. ಆದರೆ, ಯಾರಾದರೂ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನ ಆರಂಭಿಸಿದ್ದೇ ನಾವು ಗೊಣಗುವುದಕ್ಕೆ, ತಪ್ಪುಗಳನ್ನು ಹುಡುಕುವುದಕ್ಕೆ, ಸಿನಿಕತನ ಮತ್ತು ಸಂಶಯ ವ್ಯಕ್ತಪಡಿಸುವುದಕ್ಕೆ ಒಂದು ಕ್ಷಣವೂ ತಡಮಾಡುವುದಿಲ್ಲ.
ಕೆಲವು ವಾರಗಳ ಹಿಂದೆ ಆಗಿದ್ದು ಹೀಗೆಯೇ. ಸರ್ಕಾರಿ ನಿಯೋಜಿತ ಸಮಿತಿಯೊಂದು ರಾಷ್ಟ್ರೀಯ ಶಿಕ್ಷಣ ನೀತಿಯ(ಎನ್‌ಇಪಿ) ಹೊಸ ಕರಡನ್ನು ಬಿಡುಗಡೆಗೊಳಿಸಿತು. 484 ಪುಟಗಳ ಡಾಕ್ಯುಮೆಂಟ್ ಅದು. ಅದು ದೀರ್ಘವೇನೋ ಆಗಿತ್ತು ಬಿಡಿ, ಆದರೆ, ಅದೊಂದು ಅದ್ಭುತ ದಸ್ತಾವೇಜಾಗಿತ್ತು. ಶಿಕ್ಷಣ ವ್ಯವಸ್ಥೆಯಲ್ಲಿನ ಸಮಸ್ಯೆಗಳನ್ನು ಅದರಲ್ಲಿ ಒಪ್ಪಿಕೊಳ್ಳಲಾಗಿತ್ತು, ವಿವಿಧ ತರಗತಿಗಳಿಗೆ, ಗ್ರೇಡ್‌ಗಳಿಗೆ ಸಂಬಂಧಿಸಿದ ಸಮಸ್ಯೆಗಳೇನು ಎನ್ನುವುದನ್ನು ಹಲವು ಕೆಟಗರಿಗಳನ್ನು ವಿಂಗಡಿಸಲಾಗಿತ್ತು, ಕೆಲವು ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮಾರ್ಗಸೂಚಿಗಳನ್ನು ನೀಡಲಾಗಿತ್ತು. ಹಾಗೆಂದು ಅದೇನೂ ಪರಿಪೂರ್ಣ/ಪಫೆìಕ್ಟ್ ಎನ್ನುವಂಥ ಡಾಕ್ಯುಮೆಂಟ್ ಆಗಿರಲಿಲ್ಲ. ಸಮಸ್ಯೆಗಳನ್ನು ಪರಿಹರಿಸುವ, ಕರಡನ್ನು ಉತ್ತಮಗೊಳಿಸುವ ವಿಚಾರದಲ್ಲಿ ನಾಗರಿಕರು ಸಲಹೆಗಳನ್ನು ನೀಡಲಿ ಎಂಬ ಕಾರಣಕ್ಕೇ ಅದನ್ನು ಬಿಡುಗಡೆಗೊಳಿಸಲಾಗಿತ್ತು.
ಆದರೆ, ನಾವೇನು ಮಾಡಿದೆವು? ಅದರಲ್ಲಿ, ತ್ರಿಭಾಷಾ ಸೂತ್ರದ ಬಗ್ಗೆಯಿದ್ದ ಕೆಲವು ಸಾಲುಗಳನ್ನಷ್ಟೇ ಎತ್ತಿಕೊಂಡು, ಅದನ್ನು ಎಂದಿನ “ದಕ್ಷಿಣ ರಾಜ್ಯಗಳ ಮೇಲೆ ಹಿಂದಿ ಹೇರಿಕೆ’ ಎಂಬ ಮಾಸಲು ವಿಷಯವಾಗಿ ಬದಲಿಸಿಬಿಟ್ಟೆವು. ಇದು ಕೋಲಾಹಲವೆಬ್ಬಿಸಿಬಿಟ್ಟಿತು.
ಆದಾಗ್ಯೂ ದಕ್ಷಿಣ ಮತ್ತು ಉತ್ತರದ ನಡುವೆ ವಿಭಜನೆ ನಿಜವಾಗಿಯೂ ಇದೆ. ಈ ಸಂಗತಿಯನ್ನು ಬಳಸಿಕೊ ಳ್ಳುವುದರಿಂದ, ರಾಜಕಾರಣಿಗಳಿಗೆ ರಾಜಕೀಯ ಲಾಭವೂ ಆಗುತ್ತದೆ. ಒಟ್ಟಲ್ಲಿ, ತ್ರಿಭಾಷಾ ಸೂತ್ರದ ವಿವಾದ ಭುಗಿಲೇಳುತ್ತಲೇ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಪ್ರತಿಯಲ್ಲಿದ್ದ ಬಹುಪಾಲು ಅಂಶಗಳನ್ನು, ಅದರಲ್ಲಿನ ಐಡಿಯಾಗಳನ್ನು ನಾವು ಮರೆತೇಬಿಟ್ಟೆವು. ಶಿಕ್ಷಣ ವ್ಯವಸ್ಥೆ ಯಲ್ಲಿನ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ನಿಜಕ್ಕೂ ಪ್ರಯತ್ನಿಸುತ್ತಿರುವ ಜನರನ್ನು ಪ್ರೋತ್ಸಾಹಿಸುವ ಬದಲು, ನಾವು ಅವರನ್ನು ಹಿಂದಿ/ಹಿಂದು/ಹಿಂದುತ್ವ/ ಬಿಜೆಪಿಯ ಅಜೆಂಡಾ ಹೇರುವ ರಕ್ಕಸರಾಗಿ ಬದಲಿಸಿಬಿಟ್ಟೆವು. ಇದೆಲ್ಲ ನಾನ್‌ಸೆನ್ಸ್.
ಮೊದಲನೆಯದಾಗಿ, ಎನ್‌ಇಪಿ ಬಗ್ಗೆ ಕೆಲವು ಒಳ್ಳೆಯ ಸಂಗತಿಗಳನ್ನು ಅರ್ಥಮಾಡಿಕೊಳ್ಳೋಣ. ಮೊದಲನೆಯದಾಗಿ, ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ರಚನಾ ಸಮಿತಿಯ ನೇತೃತ್ವ ವಹಿಸಿಕೊಂಡವರು ಇಸ್ರೋದ ಮಾಜಿ ಅಧ್ಯಕ್ಷ ಕೆ. ಕಸ್ತೂರಿರಂಗನ್ ಅವರು. ನಮ್ಮ ದೇಶದ ಮುಂದಿನ ಪೀಳಿಗೆ ಹೇಗೆ ಶಿಕ್ಷಣವನ್ನು ಪಡೆಯಬೇಕು ಎಂದು ನಿರ್ಧರಿಸುವಲ್ಲಿ ಇವರಿಗಿಂತ ಉತ್ತಮ ವ್ಯಕ್ತಿ ಯಾರಾದರೂ ಇದ್ದಾರಾ? ಸಮಿತಿಯಲ್ಲಿನ ಇತರೆ 10 ಸದಸ್ಯರೂ ಕೂಡ ಹೆಸರಾಂತ ಶಿಕ್ಷಣತಜ್ಞರು.
ಈ ವರದಿಯು ಒಂದು ಅದ್ಭುತ ಪ್ರಸ್ತಾವನೆ ಮತ್ತು ದೃಷ್ಟಿಯೊಂದಿಗೆ ಆರಂಭವಾಗುತ್ತದೆ. ವರದಿಯಲ್ಲಿ ಹೇಳಿರುವ ಸಂಗತಿಯನ್ನೇ ಉಲ್ಲೇಖೀಸುವುದಾದರೆ- “”ಭಾರತದ ನವ ಶಿಕ್ಷಣ ವ್ಯವಸ್ಥೆಯ ಮುನ್ನೋಟವನ್ನು ದೇಶದ ಪ್ರತಿಯೊಬ್ಬ ವ್ಯಕ್ತಿಯ ಜೀವನವನ್ನು ತಾಕುವಂತೆ ವಿನ್ಯಾಸಗೊಳಿಸಲಾಗಿದೆ. ಒಂದೆಡೆ ಈ ದೇಶದಲ್ಲಿ ಬೆಳೆಯುತ್ತಿರುವ ಅನೇಕ ಅಭಿವೃದ್ಧಿ ಸಂಬಂಧಿ ಸಂಗತಿಗಳಿಗೆ ಪೂರಕ ಆಗುವಂತೆ ಮತ್ತು ಇನ್ನೊಂದೆಡೆ ನ್ಯಾಯಯುತ, ಸಮಾನತೆಯ ಸಮಾಜವನ್ನು ರಚಿಸುವ ದಿಕ್ಕಿನಲ್ಲಿ ಸಹಕಾರಿಯಾಗುವಂತೆ ಇದನ್ನು ರಚಿಸಲಾಗಿದೆ” ಇದನ್ನು ಬೇರೆ ರೀತಿ ಯಲ್ಲಿ ಇನ್ನಷ್ಟು ಸೊಗಸಾಗಿ ವ್ಯಕ್ತಪಡಿಸಲು ಸಾಧ್ಯವಿದೆ ಯೇನು? ಈ ಸಾಲುಗಳು ಏನು ಹೇಳುತ್ತಿವೆಯೋ ಗಮನಿಸಿ. ಶಿಕ್ಷಣವು (ಅ) ಎಲ್ಲರಿಗೂ ತಲುಪಬೇಕು (ಆ) ದೇಶವು ಅಭಿವೃದ್ಧಿ ಯಾಗಲು ಸಹಕರಿಸುತ್ತದೆ (ಇ) ಹೆಚ್ಚು ನ್ಯಾಯಯುತ ಮತ್ತು ಸಮಾನ ಸಮಾಜವನ್ನು ಸೃಷ್ಟಿಸುತ್ತದೆ ಎಂದೇ ತಾನೆ? ದೊಡ್ಡ ಸಮಸ್ಯೆಯೊಂದನ್ನು ಪರಿಹರಿಸಲು ನಡೆದಿರುವ ಪ್ರಯತ್ನವನ್ನು ಅದೇಕೆ ನಾವು ನಮ್ಮ ಋಣಾತ್ಮಕತೆಯ ಮೂಲಕ ಸಾಯಿಸಿ ಬಿಡುತ್ತಿದ್ದೇವೆ? ಒಳ್ಳೆಯದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲು ನಮಗೇಕೆ ಸಾಧ್ಯವಾಗುವುದಿಲ್ಲ?
ನಾನಿಲ್ಲಿ ಸರ್ಕಾರದ ವರದಿಯ ಬಗ್ಗೆ ಉತ್ಪ್ರೇಕ್ಷಿತ ಉತ್ಸಾಹದಿಂದ ಮಾತನಾಡಲು ಬಂದಿಲ್ಲ. ಆದಾಗ್ಯೂ, ನಾನು ಇದುವರೆಗಿನ ಸರ್ಕಾರದ ಅನೇಕ ವರದಿಗಳನ್ನು, ಡಾಕ್ಯುಮೆಂಟ್‌ಗಳನ್ನು ನೋಡಿದ್ದೇನೆ. ಆದರೆ ಈ ದಸ್ತಾವೇಜು ಮಾತ್ರ ಅತ್ಯಂತ ಸ್ಪಷ್ಟವಾಗಿದೆ ಮತ್ತು ಸಮಸ್ಯೆಯನ್ನು ನಿಖರವಾಗಿ ನೋಡುತ್ತದೆ. ಉಳಿದ ಸರ್ಕಾರಿ ವರದಿಗಳಿಗಿಂತಲೂ ಇದು ಭಿನ್ನವಾಗಿರುವುದಕ್ಕೆ ಹೆಚ್ಚುವರಿ ಮಾರ್ಕ್ಸ್ ಕೊಡಲೇಬೇಕು. ಇದನ್ನು ಅಚ್ಚುಕಟ್ಟಾಗಿ ರೂಪಿಸಿ, ಸರಳ ಆಂಗ್ಲಭಾಷೆಯಲ್ಲಿ ನಿರೂಪಿಸಿ ಮತ್ತು ಕಲಾತ್ಮಕವಾಗಿ ಡಿಸೈನ್ ಮಾಡಲಾಗಿದೆ.
ಈಗ, ರಾಜಕೀಯ ಬಿರುಗಾಳಿಯಾಗಿ ಮಾರ್ಪಟ್ಟ ಟೀಕೆಯ ಬಗ್ಗೆ ಮಾತನಾಡೋಣ. ವಿದ್ಯಾರ್ಥಿಯೊಬ್ಬ ಮೂರು ಭಾಷೆಗಳನ್ನು ಕಲಿಯುವ ಸೂತ್ರದ ಬಗ್ಗೆ ಈ ವರದಿ ಸಲಹೆ ನೀಡಿದೆ. ಇಂಗ್ಲಿಷ್, ಪ್ರಾದೇಶಿಕ ಭಾಷೆ ಮತ್ತು ಮೂರನೆಯದಾಗಿ ಮತ್ತೂಂದು ಭಾರತೀಯ ಭಾಷೆಯನ್ನು ಕಲಿಸಬೇಕೆಂಬ ತ್ರಿಭಾಷಾ ಸೂತ್ರವಿದು. ಭಾರತೀಯ ಭಾಷೆಗಳಿಗೆ ಪ್ರಚಾರ ನೀಡುವ, ರಾಷ್ಟ್ರೀಯ ಏಕತೆಯನ್ನು ಹೆಚ್ಚಿಸುವ ಮತ್ತು ಬಹುಶಃ, ಇನ್ನೊಂದು ಭಾಷೆಯ ಕೌಶಲವನ್ನು ವ್ಯಕ್ತಿಗೆ ಕಲಿಸಿ, ಆತ ವಲಸೆ ಹೋದರೆ ನೌಕರಿ ಹುಡುಕಲು ಸಹಾಯವಾಗುವಂಥ ಐಡಿಯಾ ಈ ಸೂತ್ರದ ಹಿಂದಿದೆ.
ಉದಾಹರಣೆಗೆ, ದೆಹಲಿಯ ವಿದ್ಯಾರ್ಥಿಯೊಬ್ಬ ಇಂಗ್ಲಿಷ್, ಹಿಂದಿ ಮತ್ತು ತಮಿಳು ಭಾಷೆ ಕಲಿಯುತ್ತಾನೆ ಎಂದುಕೊಳ್ಳಿ. ಉತ್ತರ ಭಾರತೀಯ ವಿದ್ಯಾರ್ಥಿಯೊಬ್ಬ ತಮಿಳು ಕಲಿಯುವುದು ಅಥವಾ ಗುಜರಾತಿ ವಿದ್ಯಾರ್ಥಿನಿ ಬೆಂಗಾಲಿ ಕಲಿಯುವುದು ಎಷ್ಟು ಚೆನ್ನಾಗಿರುತ್ತದಲ್ಲವೇ? ಒಂದು ವೇಳೆ ಅವರು ಆ ರಾಜ್ಯಗಳಿಗೆ ಹೋದರೆ ಅವರಿಗೆ ನೌಕರಿ ಸಿಗುವಲ್ಲಿ ಪ್ರಯೋಜನವಾಗಬಹುದು ಅಥವಾ ಅದು ಉದ್ಯೋಗಕ್ಕೆ ಸೇರ್ಪಡೆಯಾಗುವಾಗ “ಕೌಶಲ’ವಾಗಿಯೂ ಉಪಯೋಗಕ್ಕೆ ಬರಬಹುದು. ಆದರೆ ಎನ್‌ಇಪಿ ತುಸು ಎಡವಿದ್ದು ಎಲ್ಲಿ ಅಂದರೆ, ಅದು ದಕ್ಷಿಣ ಭಾರತದ ರಾಜ್ಯಗಳಿಗೆ ತ್ರಿಭಾಷಾ ಸೂತ್ರದ ಸಲಹೆ ನೀಡುವಾಗ, ಇಂಗ್ಲಿಷ್, ಪ್ರಾದೇಶಿಕ ಭಾಷೆ ಮತ್ತು ಹಿಂದಿಯನ್ನು ಕಲಿಸಬೇಕು ಎಂದು ಹೇಳಿದ್ದು. ಇತ್ತ ಉತ್ತರ ಭಾರತದಲ್ಲಿ ತೃತೀಯ ಭಾಷೆ ಫಿಕ್ಸ್ ಮಾಡಲಾಗಿಲ್ಲ. ಅಂದರೆ, ಮೂರನೆಯ ಭಾಷೆಯಾಗಿ ಉತ್ತರಭಾರತೀಯರು ಅಸ್ಸಾಮಿಯಿಂದ ಹಿಡಿದು ತಮಿಳು, ಗುಜರಾತಿಯವರೆಗೂ ಭಾಷೆಗಳನ್ನು ಕಲಿಯಬಹುದು. ಆದರೆ ದಕ್ಷಿಣದ ರಾಜ್ಯಗಳು ಮಾತ್ರ ಹಿಂದಿ ಇದ್ದೇ ಇರುತ್ತದೆ ಎನ್ನುವುದು! ಈ ರೀತಿ ಹೇಳುವ ಅಗತ್ಯವೇ ಇರಲಿಲ್ಲ(ವಾಸ್ತವವೇನೆಂದರೆ ಬಹಳಷ್ಟು ಜನರು ಹಿಂದಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ). ಅಫ್ಕೋರ್ಸ್, ಎನ್‌ಇಪಿ ಎಂದರೆ ಅದೇನೂ ಕಾನೂನಲ್ಲ. ಹೀಗಾಗಿ, ಇಲ್ಲಿ ಹೇರಿಕೆಯ ಪ್ರಶ್ನೆಯೇ ಉದ್ಭವವಾಗುವುದಿಲ್ಲ. ಆದರೆ, ದಕ್ಷಿಣ ಭಾರತದಲ್ಲಿರುವವರು ಹಿಂದಿ ಕಲಿಯಲೇಬೇಕು ಎಂದು ಹೇಳುವ ಅಗತ್ಯವಿರಲಿಲ್ಲ. ಇದರಿಂದಾಗಿ ಕೇವಲ ಹಿಂದಿಗಷ್ಟೇ ಅಲ್ಲ, ದಕ್ಷಿಣಕ್ಕೆ ಮತ್ತು ಎನ್‌ಇಪಿಗೂ ಕೂಡ ಅಪಚಾರ ಎಸಗಿದಂತೆ.
ತ್ರಿಭಾಷಾ ಸೂತ್ರವೇನೂ ಹೊಸದಲ್ಲ. ದಶಕಗಳಿಂದಲೂ ಶಿಕ್ಷಣ ನೀತಿಯ ವರದಿಗಳಲ್ಲಿ ಈ ಬಗ್ಗೆ ಸಲಹೆಗಳು ಇದ್ದೇ ಇವೆ. ಆದರೆ, ಇದೆಂದಿಗೂ ಉತ್ತಮವಾಗಿ ಅನುಷ್ಠಾನಗೊಂಡಿಲ್ಲ. ಈಗೇನಾದರೂ ನಾವಿದನ್ನು ಸರಿಯಾಗಿ ರೂಪಿಸಿದರೆ, ಜನರು ತಮಗೆ ಇಷ್ಟವಾದ ಮೂರನೇ ಭಾಷೆಯನ್ನು ಆಯ್ಕೆ ಮಾಡಿಕೊಳ್ಳುವಂಥ ಅವಕಾಶ ಮಾಡಿಕೊಟ್ಟರೆ, ಇಡೀ ದೇಶಕ್ಕೇ ಇದರಿಂದ ಪ್ರಯೋಜನವಾಗುತ್ತದೆ.
ಬಹುಶಃ ಇದಕ್ಕೆ ಇತರರು ಅಸಮ್ಮತಿ ಸೂಚಿಸಬಹುದು. ಆದರೆ, ಒಬ್ಬ ಉತ್ತರ ಭಾರತೀಯ ವಿದ್ಯಾರ್ಥಿ ಎರಡು ವರ್ಷಗಳವರೆಗೆ ಸಂಸ್ಕೃತವನ್ನು ಕಂಠಪಾಠ ಮಾಡುವು ದಕ್ಕಿಂತಲೂ, ತುಸು ದಕ್ಷಿಣದ ಭಾಷೆಯನ್ನು ಕಲಿಯುವುದು ನಿಸ್ಸಂಶಯವಾಗಿಯೂ ಪ್ರಯೋಜನಕ್ಕೆ ಬರುತ್ತದೆ (ಸತ್ಯವೇನೆಂದರೆ, ಅನೇಕರು ಸಂಸ್ಕೃತ ಭಾಷೆಯನ್ನು ಹೆಚ್ಚು ಅಂಕ ಸಿಗುತ್ತದೆಂಬ ಕಾರಣಕ್ಕೇ ಆಯ್ಕೆ ಮಾಡಿಕೊಳ್ಳುತ್ತಾರೆ). ಶಿಕ್ಷಣ ಅಥವಾ ಭಾಷೆಯ ವಿಚಾರದಲ್ಲಿ ಅತಿ ರಾಜಕೀಯ ಆರೋಗ್ಯಕರವಲ್ಲ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಮರುರೂಪಿಸಲೇಬೇಕಿದೆ. ಆದರೆ ಹಾಗೆ ಮಾಡುವಾಗ, ನಾವು ಭಾರತೀಯ ವಿದ್ಯಾರ್ಥಿಗಳು ಮತ್ತು ಆಕೆ/ ಅವನ ಶಿಕ್ಷಣಕ್ಕೆ ಮೊದಲು ಆದ್ಯತೆ ಕೊಡಬೇಕು, ರಾಜಕೀಯವೇನಿದ್ದರೂ ಆಮೇಲೆ!
(ಕೃಪೆ: ಟೈಮ್ಸ್ ಆಫ್ ಇಂಡಿಯಾ)
ಚೇತನ್ ಭಗತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.