ಚಿಕ್ಕ ರೂಪದ ಮುಖ್ಯ ಚುನಾವಣೆ
ಪಂಚಾಯಿತಿ ಚುನಾವಣೆ: ಅರ್ಹರ ಆಯ್ಕೆ ನಮ್ಮ ಹೊಣೆ!
Team Udayavani, May 29, 2019, 6:06 AM IST
ರಾಜ್ಯದ 8 ನಗರಸಭೆ, 33 ಮುನಿಸಿಪಲ್ ಕೌನ್ಸಿಲ್ ಮತ್ತು 22 ಪಟ್ಟಣ ಪಂಚಾಯಿತಿಗಳು ಸೇರಿದಂತೆ 63 ಸ್ಥಳೀಯ ಸಂಸ್ಥೆಗಳಿಗೆ ಇಂದು ಚುನಾವಣೆ ನಡೆಯುತ್ತಿದೆ. ಬಹುತೇಕ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ತೀವ್ರ ಸೆಣಸಾಟಕ್ಕೆ ಬಿದ್ದು ಸ್ಥಳೀಯ ಆಡಳಿತದ ಚುಕ್ಕಾಣಿ ಹಿಡಿಯುವ ಹರಸಾಹಸ ಮಾಡುತ್ತಿವೆ. ಯಾವುದೇ ಲೋಕಸಭೆ, ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಕಮ್ಮಿ ಇಲ್ಲದಂತೆ ಅಭ್ಯರ್ಥಿಗಳು, ವಿವಿಧ ಪಕ್ಷಗಳ ನಾಯಕರು ಮನೆ ಮನೆ ಎಡತಾಕಿ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಮತದಾರರ ಮನವೊಲಿಸುವ ಹಲವು ತಂತ್ರ ಹೂಡಿದ್ದಾರೆ. ಪ್ರತಿ ವಾರ್ಡ್‌ನಲ್ಲೂ ಮತದಾರರ ಸಂಖ್ಯೆ ಸೀಮಿತವಾಗಿರುವುದರಿಂದ ಮತ್ತು ಪ್ರತಿಯೊಂದು ಮತವೂ ನಿರ್ಣಾಯಕವಾದ್ದರಿಂದ ಬೇರೆ ಚುನಾವಣೆಗಳಂತೆ ಈ ಮಿನಿಚುನಾವಣೆಗಳಲ್ಲೂ ಎಲ್ಲಾ ರೀತಿಯ ಆಮಿಶಗಳನ್ನು ಮತದಾರರಿಗೆ ಒಡ್ಡಲಾಗುತ್ತಿದೆ. ಸೀರೆ, ಪಂಚೆ, ಹೆಂಡ, ನಗದು ಚಿನ್ನಾಭರಣ ನೀಡಲಾಗುತ್ತಿದೆ. ಗುಲಾಬ್ ಜಾಮೂನ್, ಮಟನ್, ಚಿಕನ್ ಮೊದಲಾದ ಊಟದ ಪ್ಯಾಕೆಟ್‌ಗಳು, ಬೆಳಿಗ್ಗೆ ಹಾಲು, ಸಂಜೆ ಅಲ್ಕೋಹಾಲು ಕಳೆದೊಂದು ವಾರದಿಂದ ನಿರಂತರವಾಗಿ ಮತದಾರರಿಗೆ ಸರಬರಾಜಾಗುತ್ತಿವೆ ಎಂದು ಪತ್ರಿಕೆಗಳೇ ವರದಿ ಮಾಡುತ್ತಿವೆ.
ವಾಸ್ತವವಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಪಕ್ಷಗಳಿಗಿಂತ ವ್ಯಕ್ತಿಗೇ ಹೆಚ್ಚಿನ ಪ್ರಾಶಸ್ತÂ ಕೊಡಬೇಕಾಗುತ್ತದೆ.
ಒಂದು ವಾರ್ಡ್ ಅಥವಾ ಬಡಾವಣೆ ಅಭಿವೃದ್ಧಿಯ ಮೂಲ ಕೇಂದ್ರ. ಇದು ತಳ ಹಂತದ ಅಭಿವೃದ್ಧಿ ಪ್ರಕ್ರಿಯೆ ನಡೆಯಬೇಕಾದ ಜಾಗ. ಅಭಿವೃದ್ಧಿಯ ವಿವಿಧ ಮಾದರಿಗಳ ನಿಷ್ಕರ್ಷೆ ಮಾಡುವ ಪ್ರಯೋಗ ಶಾಲೆಯಿದ್ದಂತೆ. ಹಾಗಾಗಿ ಒಂದು ವಾರ್ಡ್‌ಗೆ ಸೇರಿದ, ಆ ವ್ಯಾಪ್ತಿಯ ಸಮಸ್ಯೆಗಳ ಬಗ್ಗೆ ಅರಿವುಳ್ಳ ಮತ್ತು ಅಲ್ಲಿನ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ, ಸಮರ್ಥವಾಗಿ ನಿಭಾಯಿಸಬಲ್ಲ, ಪ್ರಾಮಾಣಿಕ, ದಕ್ಷ ವ್ಯಕ್ತಿಯನ್ನು ಜನ ತಮ್ಮ ಪ್ರತಿನಿಧಿಯಾಗಿ ಆರಿಸುವುದು ಉಚಿತ. ದುರದೃಷ್ಟವೆಂದರೆ ಇಲ್ಲೂ ಪಕ್ಷ,ಹಣ, ಅಧಿಕಾರ ಹಾಗೂ ಆಮಿಷಗಳ ಆಧಾರದ ಮೇಲೆಯೇ ಚುನಾವಣೆ ನಡೆಯುತ್ತಿದೆ.
ಹಿಂದೆಲ್ಲಾ ನೀರು, ವಿದ್ಯುತ್, ವಸತಿ ಇವು ಮೂಲಭೂತ ಸೌಲಭ್ಯಗಳು ಎನಿಸಿತ್ತು. ಆದರೆ ವಿವಿಧ ಯೋಜನೆಗಳು ಮತ್ತು ಮೇಲು ಹಂತದ ಅಭಿವೃದ್ಧಿ ಪ್ರಕ್ರಿಯೆಗಳಿಂದಾಗಿ ಹಲವೆಡೆ ಇವು ಇಂದು ತೀವ್ರ ಸಮಸ್ಯೆಗಳಾಗಿ ಉಳಿದಿಲ್ಲ. ಈಗ ಆರೋಗ್ಯ, ನೈರ್ಮಲ್ಯ, ಪರಿಸರ ನಿರ್ವಹಣೆ, ಘನತ್ಯಾಜ್ಯ ನಿರ್ವಹಣೆ ಇವು ಗ್ರಾಮಾಂತರ ಪ್ರದೇಶದಲ್ಲಿ ಸವಾಲಾಗಿವೆ. ಇವುಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸುವಲ್ಲಿ ಸ್ಥಳೀಯ ಸಂಸ್ಥೆಗಳು ಸೋಲುತ್ತಿವೆ. ಒಂದು ಬಡಾವಣೆಯಲ್ಲಿ ಐದು ವರ್ಷಕ್ಕೊಮ್ಮೆ ಯಾರೂ ರಸ್ತೆ ವಿಸ್ತರಣೆ ಮಾಡುವುದಿಲ್ಲ ಅಥವಾ ಹೊಸ ಚರಂಡಿ ನಿರ್ಮಾಣ ಮಾಡುವುದಿಲ್ಲ, ಹೊಸ ವಿನ್ಯಾಸದ ವಿದ್ಯುತ್ ಕಂಬಗಳನ್ನು, ದೀಪಗಳನ್ನು ಅಳವಡಿಸುವುದಿಲ್ಲ ಅಥವಾ ಹೊಸ ನೀರಿನ ಪೈಪ್‌ಗ್ಳನ್ನು ಅಳವಡಿಸುವುದಿಲ್ಲ. ಇವೆಲ್ಲಾ ಬಹುತೇಕ ಶಾಶ್ವತವಾಗಿ ಹಾಗೇ ಇರುತ್ತವೆ. ಇವುಗಳ ನಿರ್ವಹಣೆಯೂ ವರ್ಷಪೂರ್ತಿ ಮಾಡಬೇಕಾದ ಕೆಲಸವಲ್ಲ. ಅದು ಜನಪ್ರತಿನಿಧಿಗಳ ದಕ್ಷತೆಗೇ ಸವಾಲಾಗಿ ಕಳಪೆ ನಿರ್ವಹಣೆಗಳಾಗಿಯೇ ಉಳಿದಿರುತ್ತವೆ. ಉದಾಹರಣೆಗೆ ತ್ಯಾಜ್ಯವಸ್ತು ಸಂಸ್ಕರಣಾ ಘಟಕ ಇದ್ದರೂ ಬಡಾವಣೆಗಳಲ್ಲಿ ರಾಶಿ ರಾಶಿ ಕಸ ತಿಪ್ಪೆಗಳಾಗಿ ರಾರಾಜಿಸಿರುತ್ತವೆ. ಅತ್ಯಾಧುನಿಕ ಡ್ರೆçನೇಜ್‌ಗಳಲ್ಲಿ ಕೊಳಚೆ ನೀರು ಮುಂದಕ್ಕೇ ಹರಿಯುವುದಿಲ್ಲ. ಮಳೆ ಬಂದರೆ ತಗ್ಗು ಪ್ರದೇಶದಲ್ಲಿ ವಾಸಿಸುವ ಜನರ ಮನೆಗಳಿಗೆ ಈ ಕೊಳಚೆ ನೀರು ಚರಂಡಿಯಿಂದ ಉಕ್ಕಿ ಹರಿದು ನೇರವಾಗಿ ನುಗ್ಗುತ್ತದೆ. ಇನ್ನು ಈ ಡ್ರೆçನೇಜ್‌ಗಳಲ್ಲಿ ಮಲ, ಮೂತ್ರಾದಿ ಸಕಲ ಮಲಿನಗಳೂ ಕೆಂಗೇರಿ ಕೊಳಚೆಯನ್ನೇ ನಾಚಿಸುವಂತೆ ಹರಿಯುತ್ತವೆ. ಗುಂಡಿ ಬಿದ್ದ ರಸ್ತೆಗಳ ಗುಂಡಿಗಳು ವರ್ಷಪೂರ್ತಿ ಹಾಗೇ ಇರುತ್ತವೆ. ಪಟ್ಟಣದಲ್ಲಿ ಹಾದು ಹೋಗುವ ಹೆದ್ದಾರಿಯ ಪಕ್ಕದಲ್ಲೇ ಕೋಳಿ, ಮಾಂಸದಂಗಡಿಗಳಿಗೆ ಪರವಾನಗಿ ನೀಡಲಾಗುತ್ತದೆ. ಚರಂಡಿಗೆ ಹರಿಯುವ ಮಲಮೂತ್ರಗಳ ದುರ್ನಾತವನ್ನು ಯಾವ ಸದಸ್ಯನೂ ನಿವಾರಿಸಲಾರ. ಖಾಲಿ ಸೈಟುಗಳಲ್ಲಿ ಬೆಳೆಯುವ ಬೃಹತ್ ಕಳೆ ಇವತ್ತಿಗೂ ಸ್ಥಳೀಯ ಸಂಸ್ಥೆಗಳಿಗೆ ಒಂದು ಸವಾಲೇ! ಇದಕ್ಕೆಲ್ಲಾ ಜನರೂ ಹೊಂದಿಕೊಂಡುಬಿಟ್ಟಿದ್ದಾರೆ. ತೀರಾ ಮಿತಿಮೀರಿದಾಗ ಸ್ಥಳೀಯ ನಿವಾಸಿಗಳೇ ಪಂಚಾಯಿತಿ ಕಛೇರಿಗೆ ಹೋಗಿ ಈ ಅವ್ಯವಸ್ಥೆಗಳ ವಿರುದ್ಧ ಧ್ವನಿ ಎತ್ತುವಷ್ಟು ಜಾಗೃತಿ ಈಗ ಜನರಲ್ಲಿದೆ. ಹಾಗಾಗಿ ಈಗ ಒಬ್ಬ ಸ್ಥಳೀಯ ಸಂಸ್ಥೆಯ ಜನಪ್ರತಿನಿಧಿಯ ಕಾರ್ಯಸ್ವರೂಪದ ವಿನ್ಯಾಸವೇ ಬದಲಾಗಿದೆ.
ಒಂದು ವಾರ್ಡ್‌ನ ಅಭಿವೃದ್ಧಿಗಿಂತ ಒಟ್ಟಾರೆ ಒಂದು ಊರಿನ ಅಭಿವೃದ್ಧಿಯ ದೃಷ್ಟಿಯಿಂದ ಸಮಗ್ರ ಸುಧಾರಣೆಯತ್ತ ಕಾರ್ಯಸೂಚಿ ರೂಪಿಸುವುದು ಮುಖ್ಯ ಎನಿಸುತ್ತದೆ. ಇಡೀ ಊರಿಗೆ ಉಪಯೋಗವಾಗುವಂತಹ ಶಾಶ್ವತ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಎಲ್ಲಾ ಜನಪ್ರತಿನಿಧಿಗಳು ಪûಾತೀತವಾಗಿ ಹೋರಾಟ ಮಾಡಬೇಕಾಗುತ್ತದೆ.
ಇನ್ನು ನಗರ ಸ್ವತ್ಛತೆಯಷ್ಟೇ ಆಡಳಿತ ಸ್ವತ್ಛತೆಯೂ ಮುಖ್ಯವಾಗುತ್ತದೆ. ಬಹುತೇಕ ಆಡಳಿತಗಳು ಭ್ರಷ್ಟಕೂಪಗಳಾಗಿಯೇ ಉಳಿದಿವೆ. ಇವನ್ನು ಸ್ವತ್ಛ ಮಾಡುವುದು ಇಂದಿನ ತುರ್ತು ಅಗತ್ಯ ಎನಿಸಿದೆ. ಸಾಮಾನ್ಯ ನಾಗರಿಕನೊಬ್ಬನ ಕೆಲಸ ಮಾಡಿಕೊಡಲು ಆ ವಾರ್ಡಿನ ಜನಪ್ರತಿನಿಧಿಯ ಶಿಫಾರಸ್ಸು ಬೇಕು, ಅವರು ಫೋನ್ ಮಾಡಿ ಹೇಳಬೇಕು ಎಂಬ ಧೋರಣೆ, ವ್ಯವಸ್ಥೆ ಇರಬಾರದು.
ಅವನ ಕೆಲಸ ಯಾರ ಪ್ರಭಾವ, ಶಿಫಾರಸ್ಸೂ ಇಲ್ಲದೆ ಆಗಬೇಕು. ಅಂತಹ ವ್ಯವಸ್ಥೆಯನ್ನು, ಆಡಳಿತವನ್ನು ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ರೂಢಿಸಬೇಕು. ಭ್ರಷ್ಟತೆಯ ಜೊತೆ ಜೊತೆಗೇ ನಿರ್ಲಕ್ಷ್ಯ, ನಿಷ್ಕ್ರಿಯತೆ ಹಾಗೂ ಅಭಿವೃದ್ಧಿ ವಿರೋಧಿ ಧೋರಣೆಗಳೂ ಆಡಳಿತವನ್ನು ಕೇವಲ ಮೇಲ್ಮಟ್ಟದ ನಿರ್ವಹಣೆಗೆ ಸೀಮಿತಗೊಳಿಸಿದೆ. ಯಾವುದೇ ಕಾಮಗಾರಿ, ಅಭಿವೃದ್ಧಿ ಯೋಜನೆಗಳ ಬಗ್ಗೆ ಮುಂದಾಲೋಚನೆ, ಆಳವಾದ ಜ್ಞಾನ, ಅವುಗಳ ಬಾಳಿಕೆಯ ಅವಧಿಗಳ ನಿಷ್ಕರ್ಶೆ ಮಾಡದೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಕುಂಠಿತ ಕಾಮಗಾರಿಗಳ ದೆಸೆಯಿಂದಾಗಿ ಅಂದಾಜು ಮಾಡಿದ್ದರ ಹತ್ತಾರು ಪಟ್ಟು ಸಂಪನ್ಮೂಲ ಈ ಕಾಮಗಾರಿಗಳಿಗೆ ವ್ಯರ್ಥವಾಗಿ ಹರಿದು ಹೋಗುತ್ತದೆ.
ಉದಾಹರಣೆಗೆ ತುಮಕೂರು ಜಿಲ್ಲೆ ತುರುವೇಕೆರೆ ಪಟ್ಟಣ ಪಂಚಾಯಿತಿಯ ಯುಜಿಡಿ ಯೋಜನೆಯನ್ನು ಗಮನಿಸಲೇಬೇಕು. ಇಲ್ಲಿ ಯುಜಿಡಿ(ಒಳಚರಂಡಿ ವ್ಯವಸ್ಥೆ) ಕಾಮಗಾರಿ ಪ್ರಾರಂಭವಾಗಿ ಸುಮಾರು 15 ವರ್ಷಗಳಾಗಿವೆ. ನೆಲದಡಿ ಹತ್ತಾರು ಅಡಿ ಆಳದಲ್ಲಿ ಪೈಪುಗಳನ್ನು ಹೂತಿಟ್ಟು ಸಮಾಧಿ ಮಾಡಲಾಗಿದೆ. ಆದರೆ ಈವರೆಗೆ ಒಂದೇ ಒಂದು ಮನೆಗೂ ಯುಜಿಡಿ ಸಂಪರ್ಕ ನೀಡಲಾಗಿಲ್ಲ. ಅಸಲಿಗೆ ಈ ಯೋಜನೆ ಅಧಿಕೃತವಾಗಿ ಜನರಿಗೆ ಲೋಕಾರ್ಪಣೆಯೇ ಆಗಿಲ್ಲ. ಸುಮಾರು ರೂ.7 ಕೋಟಿ ಇದ್ದ ಮೂಲ ವೆಚ್ಚ ಇಂದು ಅದರ ದುಪ್ಪಟ್ಟು ಆಗಿರಬಹುದು. ಈ ಯೋಜನೆಯು ನೆನೆಗುದಿಗೆ ಬಿದ್ದಿರುವುದರಿಂದ ಪಟ್ಟಣದಲ್ಲಿ ಸಾರ್ವಜನಿಕ ಶೌಚಾಲಯಗಳು ತೀವ್ರ ಸಮಸ್ಯೆ ಎದುರಿಸುತ್ತಿವೆ.
ಶೌಚಾಲಯಗಳ ಮಲಮೂತ್ರಾದಿಗಳನ್ನು ಕಾನೂನು ಬದ್ಧವಾಗಿ ಚರಂಡಿಗೆ ಬಿಡುವಂತಿಲ್ಲ..( ಪಟ್ಟಣದ ನೂರಾರು ಮನೆಗಳ ಮಲ ಮೂತ್ರಾದಿಗಳು ಚರಂಡಿಗಳಲ್ಲಿ ಇಂದಿಗೂ ಹರಿಯುತ್ತಿವೆ ಎನ್ನುವುದು ಬೇರೆ ಮಾತು) ಅವುಗಳನ್ನು ಸಾಗಿಸಲು ಯುಜಿಡಿ ಸಂಪರ್ಕವಿಲ್ಲ, ಪಟ್ಟಣ ಪಂಚಾಯಿತಿಯ ಕೌನ್ಸಿಲ್ ಮೂರು ಬಾರಿ ಬದಲಾಗಿದೆ. ಈ ಮೂರೂ ಅವಧಿಯ ನಂತರವೂ ಯಥಾಸ್ಥಿತಿಯೇ ಮುಂದುವರೆದಿದೆ ಎಂದರೆ ಇದಕ್ಕಿಂತ ದೊಡ್ಡ ದುರಂತ ಬೇಕೆ? ಇದೇ ರೀತಿ ಇಲ್ಲಿನ ವಾಣಿಜ್ಯ ಸಂಕೀರ್ಣ ಕಟ್ಟಡದ ಕಾಮಗಾರಿ ಕಳೆದ ಏಳು ವರ್ಷಗಳಿಂದ ನಿರ್ಮಾಣ ಹಂತದಲ್ಲೇ ಕುಂಟುತ್ತಾ ಸಾಗಿದೆ. ಹಲವು ಹಗರಣ, ಹಣದುರುಪಯೋಗದ ಆರೋಪ ಹೊತ್ತ ಈ ಕಟ್ಟಡಕ್ಕೆ ಅಂದಾಜಿಸಿದ್ದ ರೂ.2.5 ಕೋಟಿ ಖರ್ಚು ಕನಿಷ್ಟ ಮೂರು ಪಟ್ಟಾದರೂ ಹೆಚ್ಚಾಗಿರಬಹುದು.
ಪಂಚಾಯಿತಿಯು ವಿವೇಚನೆ ಇಲ್ಲದೆ ನೀಡಿದ ಸಾಲಗಳಿಗೆ ಬಡ್ಡಿಯೇ ಇಲ್ಲದೆ ಲಕ್ಷಾಂತರ ರೂಪಾಯಿ ಸಾಲ ವಸೂಲಿಗೆ ಕೋರ್ಟ್ ಕಟೆಕಟೆ ಹತ್ತುವಂತಾಗಿದೆ. ಪಟ್ಟಣದಿಂದ ಅರಳೀಕೆಯವರೆಗೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಅಳವಡಿಸಿರುವ ವಿದ್ಯುತ್ ದೀಪಗಳ ಪೈಕಿ ಸ್ಯಾಂಪಲ್‌ಗಾದರೂ ಒಂದು ದೀಪ ಉರಿಯುವುದಿಲ್ಲ. ಪಟ್ಟಣದ ವಿವಿಧ ವಾರ್ಡುಗಳಲ್ಲಿ ಉದ್ಯಾನವನಗಳ ಅಭಿವೃದ್ಧಿಗೆಂದು 40 ನಿವೇಶನಗಳನ್ನು ಮೀಸಲಿಡಲಾಗಿದೆ.
ವಿಪರ್ಯಾಸವೆಂದರೆ ಒಂದೇ ಒಂದು ಸುಸಜ್ಜಿತ ಉದ್ಯಾನವನ್ನು ಪಟ್ಟಣ ಪಂಚಾಯಿತಿ ಅಭಿವೃದ್ಧಿಪಡಿಸಿಲ್ಲ. ಪ್ರತಿವರ್ಷದ ಬಜೆಟ್‌ನಲ್ಲಿ ಈ ಉದ್ಯಾನವನಗಳ ನಿರ್ವಹಣೆಗಾಗಿ ಮೀಸಲಿಡುವ ರೂ.10 ಲಕ್ಷ ಏನಾಗುತ್ತದೆ ಎಂದು ಅಧಿಕಾರಿಗಳೇ ಹೇಳಬೇಕು. ಇಂತಹ ಅವ್ಯಸ್ಥೆಗಳನ್ನು ಹುಡುಕುತ್ತಾ ಹೋದರೆ ಅದೆಷ್ಟೋ!
ಮುಖ್ಯವಾಗಿ ಸ್ಥಳೀಯ ಸಂಸ್ಥೆಗಳ ಆಡಳಿತ ಪಾರದರ್ಶಕವಾಗಿರುವಂತೆ ನೋಡಿಕೊಳ್ಳಬೇಕಾದ್ದು ಅಲ್ಲಿನ ಜನಪ್ರತಿನಿಧಿಗಳ ಕರ್ತವ್ಯ. ಈಗ ಎಲ್ಲಾ ವ್ಯವಸ್ಥೆಗಳು ಡಿಜಿಟಲೀಕರಣವಾಗಿರುವಂತೆ ಸ್ಥಳೀಯ ಸಂಸ್ಥೆಗಳ ಆಡಳಿತವೂ ಡಿಜಿಟಲೀಕರಣಗೊಂಡಿದೆ. ಮನೆ ನಿರ್ಮಾಣ ಪರವಾನಗಿ, ವ್ಯಾಪಾರ ಪರವಾನಗಿ, ನೀರಿನ ಸಂಪರ್ಕ, ಜನನ-ಮರಣ ನೊಂದಣಿ ,ಇ-ಆಸ್ತಿ ಹೀಗೆ ಎಲ್ಲವನ್ನೂ ಆನ್‌ಲೈನ್ ಮುಖಾಂತರವೇ ಪಡೆಯಬಹುದಾಗಿದೆ. ಆದರೆ ಬಹುತೇಕ ಜನಪ್ರತಿನಿ ಧಿಗಳಿಗೇ ಈ ಬಗ್ಗೆ ಸಮಗ್ರ ಮಾಹಿತಿ ತಿಳಿದಿಲ್ಲ.
ಹಲವರಿಗೆ ಕಂಪ್ಯೂಟರ್ ಜ್ಞಾನವೇ ಇಲ್ಲ. ಹೀಗಿರುವಾಗ ದಿನನಿತ್ಯದ ಆಡಳಿತ ಹಾಗೂ ಯೋಜನೆಗಳಿಗೆ ಸಂಬಂಧಿಸಿದಂತಹ ಮಾಹಿತಿ ಪಡೆಯಲು ಅಧಿಕಾರಿಗಳನ್ನೇ ಅವಲಂಬಿಸಬೇಕಾಗುತ್ತದೆ. ಹೀಗಾದಾಗ ಆಡಳಿತದ ಮೇಲೆ ಜನಪ್ರತಿನಿಧಿಗಳಿಗೆ ನಿಯಂತ್ರಣ ಇರುವುದಿಲ್ಲ. ಅಲ್ಲಿ ನಡೆಯುವ ಲೋಪದೋಷಗಳನ್ನು ಗುರುತಿಸಲೂ ಆಗುವುದಿಲ್ಲ. ಇದಕ್ಕೆ ಮೀಸಲಿರುವ ಅಂತರ್ಜಾಲ ತಾಣವನ್ನು ಹಲವು ಸಂಸ್ಥೆಗಳಲ್ಲಿ ಸಮರ್ಪಕವಾಗಿ ನಿರ್ವಹಿಸಲಾಗುತ್ತಿಲ್ಲ. ಉದಾಹರಣೆಗೆ ತುರು ವೇಕೆರೆ ಪಟ್ಟಣ ಪಂಚಾಯಿತಿ ಪೋರ್ಟಲ್‌ನಲ್ಲಿ ಮುಗಿದಿರುವ ಕಾಮ ಗಾರಿ ಗಳು, ಚಾಲ್ತಿಯಲ್ಲಿರುವ ಕಾಮ ಗಾರಿ, ಸಾರ್ವಜನಿಕ ಸೌಲಭ್ಯ, ಕುಂದುಕೊರತೆ ಈ ವಿಭಾಗಗಳಲ್ಲಿ ಯಾವ ಮಾಹಿತಿಯನ್ನೂ ನೀಡದೆ ಎಲ್ಲಾ ಕಡೆ ಪಂಚಾಯಿತಿಯ ಬಜೆಟ್‌ಪ್ರತಿಯನ್ನು ಅಪ್‌ಲೋಡ್ ಮಾಡಲಾಗಿದೆ. 2017-18ರ ಆಡಿಟ್ ವರದಿಯೇ ಇಲ್ಲ. 2016-17ರ ಆಡಿಟ್ ವರದಿಯಲ್ಲಿ ಮಾಡಲಾಗಿರುವ ಆಕ್ಷೇಪಗಳಿಗೆ ಉತ್ತರವೇ ಇಲ್ಲ. ಹಲವು ವಿಭಾಗಗಳು ಅಪ್‌ಡೇಟ್ ಆಗೇ ಇಲ್ಲ.
ಚುನಾವಣಾ ಸಂದರ್ಭದಲ್ಲೂ ನಮ್ಮ ಸ್ಥಳೀಯ ಸಂಸ್ಥೆಯ ಆಡಳಿತ ಹೇಗಿದೆ ಎಂದು ನಮಗೆ ಗೊತ್ತಿಲ್ಲದಿದ್ದರೆ ಯಾರಿಗೆ ಮತ ಹಾಕಿ ಏನು ಪ್ರಯೋಜನ? ಆದ್ದರಿಂದ ಈಗ ಚುನಾವಣಗೆ ನಿಂತಿರುವ ಅಭ್ಯರ್ಥಿಗಳು ಕೇವಲ 14ನೇ ಹಣಕಾಸು ಯೋಜನೆ, ಎಸ್‌ಎಫ್ಸಿ ಮುಕ್ತ ನಿಧಿ ಹಂಚುವುದಕ್ಕಷ್ಟೇ ಮೀಸಲಾಗದೆ ನಗರೋ ತ್ಥಾನ ಅಭಿವೃದ್ಧಿ ಯೋಜನೆ, ಸ್ವತ್ಛಭಾರತ್ ಅನುದಾನದ ಪರಿಣಾಮಕಾರಿ ಬಳಕೆ, ಕೌಶಲ ಅಭಿವೃದ್ದಿ, ಮಾನವ ಸಂಪನ್ಮೂಲದ ಅಭಿವೃದ್ಧಿ, ಆರೋಗ್ಯ, ನೈರ್ಮಲ್ಯ ನಿರ್ವಹಣೆ, ಪರಿಸರ ನಿರ್ವಹಣೆ ಇವನ್ನು ಆದ್ಯತೆಯ ಕಾರ್ಯ ಸೂಚಿಯನ್ನಾಗಿ ರೂಪಿಸಿಕೊಳ್ಳಬೇಕಿದೆ. ಅಂತಹ ದೂರದರ್ಶಿತ್ವವುಳ್ಳ ಸಮರ್ಥ ವ್ಯಕ್ತಿಗಳಿಗೇ ಯಾವುದೇ ಆಮಿಶಕ್ಕೊಳಗಾಗದೆ ಮತದಾರರು ಮತ ಚಲಾಯಿಸಬೇಕು.
– ತುರುವೇಕೆರೆ ಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.