3F ಇಲ್ಲದೆ ಸೊರಗಿರುವ ಪಂಚಾಯತ್‌ಗಳು
Team Udayavani, Jan 23, 2018, 8:46 AM IST
ಇಂದು ನಾವೆಲ್ಲಾ ಶಾಸಕರು ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ “ಫಂಕ್ಷನ್, ಫಂಕ್ಷನರಿ, ಫಂಡ್’ ವರ್ಗಾವಣೆಗಾಗಿ ಬೇಡಿಕೆಯೊಡ್ಡಿ ವಿಧಾನಸೌಧದ ಗಾಂಧಿ ಪ್ರತಿಮೆಯಡಿ ಧರಣಿ ಕೂರಲಿದ್ದೇವೆ.
ಗ್ರಾಮ ಪಂಚಾಯತ್‌ಗಳು ಸ್ವತಂತ್ರ ಸರಕಾರದಂತೆ ಕೆಲಸ ಮಾಡಬೇಕಾಗಿದ್ದರೂ ಅವುಗಳಿಗೆ “3F'(ಫಂಕ್ಷನ್, ಫಂಕ್ಷನರಿ, ಫಂಡ್) ವರ್ಗಾವಣೆಯಾಗಿಲ್ಲ ಎಂಬ ಕೊರಗು ಸ್ಥಳಿಯಾಡಳಿ ತದ ಜನಪ್ರತಿನಿಧಿಗಳನ್ನು ಕಾಡುತ್ತಿದೆ. ಕಾಯಿದೆಯ ಆಶಯ ದಂತೆ ಕಾರ್ಯಕ್ರಮಗಳ ವರ್ಗಾವಣೆಯಾಗಿಲ್ಲ. ಆರೋಗ್ಯ ಇಲಾಖೆಯ ಸರಕಾರಿ ಆಸ್ಪತ್ರೆ, ಅಂಗನವಾಡಿ, ಪ್ರಾಥಮಿಕ ಶಾಲೆ ಗಳು, ಗ್ರಂಥಾಲಯ, ಪಡಿತರ ವ್ಯವಸ್ಥೆಗಳು ಸೇರಿದಂತೆ 29 ವಿಷಯಗಳನ್ನೊಳಗೊಂಡ ಕಾರ್ಯಕ್ರಮಗಳ ವರ್ಗಾವಣೆಯೇ ಗ್ರಾಮ ಪಂಚಾಯತ್‌ಗಳಿಗಾಗಿಲ್ಲ. ಇವುಗಳ ಸಮರ್ಪಕ ವರ್ಗಾವಣೆಯಿಂದ ಮಾತ್ರ ಪಂಚಾಯತ್‌ಗಳು ಶಕ್ತಿ ಯುತವಾಗಿ ಕಾರ್ಯನಿರ್ವಹಿಸಲು ಸಾಧ್ಯ. ಈ ಮಧ್ಯೆ ಹಣಕಾಸಿನ ಕೊರತೆಯಿಂದಾಗಿ ಅಭಿವೃದ್ಧಿ ಕಾಮ ಗಾರಿಗಳನ್ನು ನಡೆಸಲು ಪಂಚಾಯತ್ ಪ್ರತಿನಿಧಿಗಳಿಗೆ ಸಾಧ್ಯ ವಾಗುತ್ತಿಲ್ಲ. 3ನೇ ಹಣಕಾಸು ಆಯೋಗದ ನಡಾವಳಿ ಹಾಗೂ ರಮೇಶ್‌ಕುಮಾರ್ ವರದಿಯ ಶಿಫಾರಸ್ಸಿನಂತೆ ಜಾರಿಗೆ ಬಂದ “ಕರ್ನಾಟಕ ಗ್ರಾಮ ಸ್ವರಾಜ್ ಪಂಚಾಯತ್‌ರಾಜ್ ಕಾಯ್ದೆ’ ಹೇಳಿದಂತೆ ಕೇರಳ ಮಾದರಿಯಲ್ಲಿ ಅನುದಾನ ವರ್ಗಾವಣೆಯಾಗಬೇಕು.
ಕನಿಷ್ಟ ಗ್ರಾಮ ಪಂಚಾಯತ್‌ಗಳಿಗೆ ಅನುದಾನ ಹೆಚ್ಚಳ ಮಾಡದಿದ್ದರೆ ಪಂಚಾಯತ್ ನಡೆಸುವುದೇ ಕಷ್ಟವಾಗುತ್ತದೆ. ಈಗ ಹೇಗಿದೆಯೆಂದರೆ 6 ಸದಸ್ಯರನ್ನು ಹೊಂದಿರುವ ಗ್ರಾಮ ಪಂಚಾಯತಿಗೂ, 60 ಸದಸ್ಯರನ್ನು ಹೊಂದಿರುವ ಗ್ರಾಮ ಪಂಚಾಯತಿಗೂ ಒಂದೇ ಮಾದರಿಯ ಅಂದರೆ 10-12 ಲ. ರೂ. ಅನುದಾನ ಬಿಡುಗಡೆಗೊಳಿಸಲಾಗುತ್ತದೆ. ಅದರಲ್ಲಿ ಶೇ.60ರಷ್ಟು ವಿದ್ಯುತ್ ಬಿಲ್ಲಿಗೆ ಶೇ.40ರಷ್ಟು ಸಿಬ್ಬಂದಿ ಗಳಿಗೆ ಎಂದು ಸರಕಾರವೇ ಪಾಲು ಮಾಡಿದ ಮೇಲೆ ಪಂಚಾ ಯತ್‌ನಡೆಸುವುದಾದರೂ ಹೇಗೆ? ಈ ಕಾರಣಕ್ಕೆ ಪ್ರತಿಗ್ರಾಮ ಪಂಚಾಯತ್‌ಗೆ ಸದ್ಯಕ್ಕೆ ಕನಿಷ್ಟ 50 ಲಕ್ಷ ರೂ.ಬಿಡುಗಡೆ ಮಾಡಬೇಕೆಂಬುದು ಬಹುಕಾಲದ ಬೇಡಿಕೆ. ಪಂಚಾಯತ್ ಪ್ರತಿನಿಧಿಗಳು ಅವರಿಗೆ ಅಗತ್ಯವಿರುವ ಕೆಲಸ ಕೈಗೆತ್ತಿ ಕೊಳ್ಳುವುದಕ್ಕಾಗಿ ಶೇ.50ರಷ್ಟು ಮುಕ್ತ ನಿಧಿ ನೀಡಲು ಸರಕಾರ ಕ್ರಮ ಕೈಗೊಳ್ಳುವ ಅಗತ್ಯವಿದೆ. ಈ ಮಧ್ಯೆ ರಾಜ್ಯದಲ್ಲಿರುವ 6022 ಗ್ರಾಮ ಪಂಚಾಯತ್, 176 ತಾಲೂಕು ಪಂಚಾಯತ್, 30 ಜಿಲ್ಲಾ ಪಂಚಾಯತ್‌ಗಳ ನಿಖರವಾದ ಮಾಹಿತಿ ಪಡೆದರೆ ಶೇ. 60ರಷ್ಟು ಸಿಬ್ಬಂದಿಗಳ ಕೊರತೆಯಿರು ವುದು ಕಂಡು ಬರುತ್ತದೆ. ಇದರಿಂದಾಗಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್‌ಗಳು ಸೊರಗುತ್ತಿದ್ದು, ಅಗತ್ಯ ಸಿಬ್ಬಂದಿ ನೇಮಕಾತಿ ಹೊಣೆ ಸರಕಾರದ ಮುಂದಿದೆ.
ಆಡಳಿತ ವ್ಯವಸ್ಥೆ ಮತ್ತು ಅನುದಾನಗಳ ಸಮಸ್ಯೆ ನಿವಾರಿಸದೆ ಪಂಚಾಯತ್‌ರಾಜ್ ವ್ಯವಸ್ಥೆ ಸಬಲೀಕರಣವಾಗುವ ಮಾತೆಲ್ಲಿ? ಕರ್ನಾಟಕ ಪಂಚಾಯತ್ ರಾಜ್ ಕಾಯಿದೆ ಬಂದ ನಂತರ ಅಧಿಕಾರ ಹಸ್ತಾಂತರಿಸುವ ಭರವಸೆ ನೀಡಲಾಗಿತ್ತು. ಆದರೆ ಈ ಕ್ಷಣದವರೆಗೆ ಪಂಚಾಯತ್‌ಗೆ ಅಧಿಕಾರ ಹಸ್ತಾಂತರ ವಾಗಿಲ್ಲ. ವ್ಯವಸ್ಥೆಗೆ ನ್ಯಾಯ ನಿರಾಕರಣೆಯಾದ ಸಂದರ್ಭದಲ್ಲಿ ನ್ಯಾಯಕ್ಕಾಗಿ ಸರಕಾರವನ್ನು ಆಗ್ರಹಿಸುವುದು ಮತ್ತು ಎಚ್ಚರಿಸುವುದು ಶಾಸಕರಾದ ನಮ್ಮ ಆದ್ಯ ಕರ್ತವ್ಯವಾಗಿದೆ. ನಜೀರ್ ಸಾಬ್ ಕಲ್ಪನೆಯಲ್ಲಿ ಗ್ರಾಮಸಭೆ ಹಳ್ಳಿಯ “ವಿಧಾನ ಸಭೆ’ ಎಂದೇ ಬಿಂಬಿತವಾಗಿತ್ತು. ವಿಕೇಂದ್ರಿಕರಣ ವ್ಯವಸ್ಥೆಯಲ್ಲಿ ಸಂಚಲನ ಉಂಟು ಮಾಡಿದ ಗ್ರಾಮ ಸಭೆಯ ಅಧಿಕಾರ ದಿನದಿಂದ ದಿನಕ್ಕೆ ಮೊಟಕಾಗುತ್ತಿದೆ. ಬಡವರಿಗೆ ಮನೆಗಳ ಹಂಚಿಕೆ ಮತ್ತು ಆಯ್ಕೆ ಪ್ರಕ್ರಿಯೆ ಗ್ರಾಮ ಸಭೆಯಲ್ಲಿಯೇ ನಡೆಯಬೇಕೆಂದು 73ನೇ ತಿದ್ದುಪಡಿಯು ಸ್ಪಷ್ಟಪಡಿಸಿದ್ದು, ಗ್ರಾಮ ಸ್ವರಾಜ್ ಕಾಯ್ದೆಯಲ್ಲಿ ಉಲ್ಲೇಖವಾಗಿದ್ದರೂ ಗ್ರಾಮ ಸಭೆಗಳ ಮೂಲಕ ಬಡವರ ಮನೆಯನ್ನು ಆಯ್ಕೆಮಾಡುವುದು ಬಿಟ್ಟರೆ ಫಲಾನುಭವಿಗಳ ಪಟ್ಟಿಯನ್ನು ಇಲಾಖೆ ಅನ್ಯ ಮೂಲಗಳಿಂದ ಪಡೆಯುತ್ತಿದೆ. ಇತ್ತೀಚೆಗೆ ಹೈಕೋರ್ಟ್ ನೀಡಿದ ನಿರ್ದೇಶನವನ್ನು ವಸತಿ ಇಲಾಖೆ ಪಾಲಿಸುತ್ತಿಲ್ಲ. ವಿಧಾನ ಮಂಡಲ ದಲ್ಲಿ ನೀಡಿದ ಸರಕಾರದ ಹೇಳಿಕೆ ಪಾಲಿಸುವಲ್ಲಿಯೂ ಇಲಾಖೆ ನಿರ್ಲಕ್ಷ್ಯ ವಹಿಸಿದೆ. ಗ್ರಾಮ ಸಭೆಯಲ್ಲಿಯೇ ಆಯ್ಕೆಯಾಗಬೇಕಾದ ಮತ್ಸಾéಶ್ರಮ ಮನೆಗಳನ್ನು ಮೀನು ಗಾರಿಕೆ ಇಲಾಖೆಯಲ್ಲಿ ಆಯ್ಕೆ ಮಾಡಲಾಗುತ್ತಿದೆ. ಕೃಷಿಕರಿಗೆ ನೀಡಬೇಕಾದ ಪವರ್‌ಟಿಲ್ಲರ್, ಸಿಂಪರಣೆ ಯಂತ್ರ, ಸ್ಪ್ರಿಂಕ್ಲರ್ ಇವುಗಳೆಲ್ಲಾ ಗ್ರಾಮ ಸಭೆಯಿಂದ ಹೊರತಾಗಿಬಿಟ್ಟಿದೆ. ಹಿಂದುಳಿದ ವರ್ಗಗಳಿಗೆ ಸಿಗುವ ಸಬ್ಸಿಡಿ ವಾಹನ, ಪರಿಶಿಷ್ಟ ಜಾತಿ – ಪಂಗಡದ ಸರ್ವ ಸವಲತ್ತು, ಪಶು ಸಂಗೋಪನ ಇಲಾಖೆಯ ದನಕರು, ತೋಟಗಾರಿಕೆ ಇಲಾಖೆಯ ಸಸಿ, ಸ್ಪ್ರಿಂಕ್ಲರ್ ಇದಾವುದು ಗ್ರಾಮ ಸಭೆಯ ಹತ್ತಿರ ಸುಳಿಯುತ್ತಿಲ್ಲ. ಏಕೆಂದರೆ ಇಲಾಖೆಗಳೇ ಏಜೆನ್ಸಿಗಳಾಗಿರುವಾಗ ಮತ್ತೇಕೆ ಗ್ರಾಮ ಸಭೆ?
ಗ್ರಾಮಸಭೆಗೆ ಅಧಿಕಾರಿಗಳು ಗೈರು
ಒಂದು ಹಂತದಲ್ಲಿ ಗ್ರಾಮ ಸಭೆಗಳ ಹಕ್ಕು ಕಸಿದರೆ ಮತ್ತೂಂದೆಡೆ ಗ್ರಾಮ ಮಟ್ಟದ ಎಲ್ಲ ಇಲಾಖಾಧಿಕಾರಿಗಳು ಗ್ರಾಮ ಸಭೆ ಮತ್ತು ಸಾಮಾನ್ಯ ಸಭೆಯಲ್ಲಿ ಭಾಗವಹಿಸುತ್ತಿಲ್ಲ. ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಜಿಲ್ಲಾ ಮತ್ತು ರಾಜ್ಯ ವåಟ್ಟದ ಅಧಿಕಾರಿಗಳು ಹಾಜರಾಗಬೇ ಕು ಎಂಬ ನಿಯಮವಿದ್ದರೂ, ಗೈರು ಹಾಜರಿ ಮುಂದುವರಿದಿದೆ. ಈ ಹಿನ್ನೆಲೆ ಯಲ್ಲಿ ಅಧಿಕಾರಿಗಳ ಹಾಜರಾತಿ ಕಡ್ಡಾಯಗೊಳಿಸಿದರೆ ಮಾತ್ರ ಪಂಚಾಯತ್ ರಾಜ್ ಸಬಲೀಕರಣಗೊಳ್ಳಲು ಸಾಧ್ಯ. ಗ್ರಾಮ ಸಭೆಯಲ್ಲಿ ಬಂದಿರುವ ದೂರು, ಇಲಾಖಾ ಸಮಸ್ಯೆಗಳು ಪರಿಹಾರದ ಬಗ್ಗೆ ಸರಕಾರಿ ಯಂತ್ರದ ನಿರ್ಲಕ್ಷ್ಯ ಇವುಗಳೆಲ್ಲಾ ಗಮನದಲ್ಲಿಟ್ಟುಕೊಂಡು ಗ್ರಾಮಸಭೆಗೆ ಬಂದಿರುವ ಬೇಡಿಕೆ- ಆಗ್ರಹಗಳನ್ನು ಮುಂದಿನ ಗ್ರಾಮ ಸಭೆಯಲ್ಲಿ ನಿಯಾಮಾನುಸಾರ ಪೂರೈಸಿ ವರದಿ ಕೊಡುವುದು ಕಡ್ಡಾಯವಾಗಬೇಕು. ಗ್ರಾಮ ಸಭೆಗಳು ರಾಜಕೀಯ ಕಿರುಕುಳದಿಂದ ಮುಕ್ತವಾಗಬೇಕೆಂದು ಸರಕಾರದ ಮುಂದೆ ನಾವೆಷ್ಟೇ ವಾದ ಮಂಡಿಸಿದರೂ ಫಲಿತಾಂಶ ಮಾತ್ರ ಶೂನ್ಯ. ಕಡತಗಳ ಅನುಮೋದನೆಯ ವಿಳಂಬ ತಪ್ಪಿಸಲು ಆನ್‌ಲೈನ್ ತಂತ್ರಾಂಶದ ಅಳವಡಿಕೆ ಕಡ್ಡಾಯ ಗೊಳಿಸುವುದು ಮತ್ತು ಇದೇ ಮಾದರಿಯಲ್ಲಿ ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಸಮಸ್ಯೆಗಳನ್ನು ಪರಿಹರಿಸಲು ಪಂಚಾ ಯತ್‌ರಾಜ್ ಇಲಾಖೆಯಲ್ಲಿ ಇ- ಆಡಳಿತ ಅಳವಡಿಸು ವುದು ಅನಿವಾರ್ಯ. ಆದರೆ ಈ ಬೇಡಿಕೆ ಈಡೇರಲು ಎಷ್ಟು ದಿನ ಕಾಯಬೇಕು?
ಸಂಪನ್ಮೂಲ ಕ್ರೋಢಿಕರಣ ಸಮಸ್ಯೆ
ಗ್ರಾಮ ಪಂಚಾಯತ್ ಸಂಪನ್ಮೂಲ ಕ್ರೋಢಿಕರಣಕ್ಕಾಗಿ ತೆರಿಗೆ ಸಂಗ್ರಹಿಸಲು ದರ ನಿಗದಿ, ನಿಯಮ ರಚನೆ ಇತ್ಯಾದಿ ಅಧಿಕಾರ ಗಳನ್ನು ಹೊಂದಿದ್ದರೂ ಬೇಡಿಕೆ ಪಟ್ಟಿಯಲ್ಲಿರುವ ಸುಮಾರು 6000 ಕೋ.ರೂ. ತೆರಿಗೆ ಸಂಗ್ರಹಿಸಿಲ್ಲ. ಇದಕ್ಕೆ ಕಾರಣ ವಾದ ಆಡಳಿತ ಯಂತ್ರವನ್ನು ಚುರುಕುಗೊಳಿಸಬೇಕಾಗಿದೆ. ಗ್ರಾಮ ಪಂಚಾಯತ್ ಕಾಯಿದೆಯಲ್ಲಿ ಉಲ್ಲೇಖೀಸಿರುವಂತೆ ಮೊಬೈಲ್ ಟವರ್, ವಿಂಡ್ ಮಿಲ್, ವಿಮಾನ ನಿಲ್ದಾಣ ಮತ್ತು ಟೋಲ್ ಗೇಟ್‌ನಲ್ಲಿ ತೆರಿಗೆ ಸಂಗ್ರಹ ಮಾಡಲು ಬಲಾಡ್ಯರು ಗ್ರಾಮ ಪಂಚಾಯತಿಗಳಿಗೆ ಅಡ್ಡ ಬರುತ್ತಿದ್ದು, ಇಂತಹ ಕಂಪೆನಿ ಮತ್ತು ಬಲಾಡ್ಯ ಸಂಸ್ಥೆಗಳಿಂದ ತೆರಿಗೆಯನ್ನು ಕಡ್ಡಾಯವಾಗಿ ವಸೂಲಿ ಮಾಡುವ ಬಗ್ಗೆ ಜವಾಬ್ದಾರಿ ಹಂಚಿಕೆ ಮಾಡಿ ವರದಿಯನ್ನು ಜಿಲ್ಲಾ ಪಂಚಾಯತ್ ಅಧಿಕಾರಿಗಳು ಕಣ್ಗಾವಲು ಮಾಡಲು ನಿರ್ದೇಶನ ನೀಡಬೇಕಾಗಿದೆ. ಇವುಗಳೆಲ್ಲದರ ಕುರಿತು ಏಕ ರೂಪದ ನಿಯಮ ಮಾರ್ಗಸೂಚಿಯನ್ನೊಳಗೊಂಡ ಆದೇಶ ಹೊರಡಿಸುವ ಅಗತ್ಯವಿದೆ. ತೆರಿಗೆ (ಬೇಡಿಕೆ- ವಸೂಲಿ- ಬಾಕಿ) ಯನ್ನು ಆನ್‌ಲೈನ್ ಮಾಡುವುದಲ್ಲದೆ ಪಂಚಾಯತ್‌ರಾಜ್ ವ್ಯವಸ್ಥೆಯಲ್ಲಿ ಆನ್‌ಲೈನ್ ಸೇವೆ ಜಾರಿಗೊಳಿಸುವುದನ್ನು ಕಡ್ಡಾಯ ಮಾಡದೇ ಬೇರೆ ದಾರಿಯಿಲ್ಲ. ಈ ಬಗ್ಗೆ ಯಾರೆಷ್ಟೇ ಹೇಳಿದರೂ ವ್ಯವಸ್ಥೆ ಮಾತ್ರ ಸರಿಯಾಗುತ್ತಿಲ್ಲ.
ಬಾಪೂಜಿ ಸೇವಾ ಕೇಂದ್ರ ಅಸ್ವಸ್ಥ
ಪ್ರಮುಖ 100 ಸೇವೆಗಳನ್ನು ಗ್ರಾಮ ಪಂಚಾಯತ್ ಮಟ್ಟದಲ್ಲಿ ನೀಡಲು ಬಾಪೂಜಿ ಸೇವಾ ಕೇಂದ್ರವನ್ನು 2 ವರ್ಷದ ಹಿಂದೆ ಘೋಷಣೆ ಮಾಡಲಾಯಿತು. ಆದರೆ ಆರಂಭದಲ್ಲಿಯೇ ಬಾಪೂಜಿ ಸೇವಾ ಕೇಂದ್ರಕ್ಕೆ ಅಗತ್ಯವಿದ್ದ ಪ್ರಿಂಟರ್, ಸ್ಕ್ಯಾನರ್, ಕಂಪ್ಯೂಟರ್ ಸೇರಿದಂತೆ ಮೂಲಸೌಕರ್ಯಗಳನ್ನು ಒದಗಿಸಲು ಸ್ವತಃ ಮಂತ್ರಿಗಳೇ ಸೂಚನೆ ನೀಡಿದರೂ ಇಲಾಖೆ ಈಡೇರಿಸಲಿಲ್ಲ. ಇದರ ನಿರ್ವಹಣೆಗೆ ಪ್ರತ್ಯೇಕ ಸಿಬ್ಬಂದಿ ನೇಮಕ ಮಾಡಲು ಇಲಾಖೆಯ ಅನುಮತಿ ನೀಡಬೇಕೆಂಬ ಮನವಿಗೆ ಸರ್ಕಾರ ಸ್ಪಂದಿಸಿಲ್ಲ. ಬಾಪೂಜಿ ಸೇವಾ ಕೇಂದ್ರಗಳಲ್ಲಿ ದಾಖಲೆ ಮಟ್ಟದ ಆರ್.ಟಿ.ಸಿ ಸೇವೆ ನಿರಂತರವಾಗಿ ನಡೆಯುತ್ತಿದ್ದು, ಆರ್.ಟಿ.ಸಿಗೆ ಪಡೆಯುವ 10 ರೂಪಾಯಿ ಯಲ್ಲಿ 7.50 ರೂಪಾಯಿಯನ್ನು ಕಂದಾಯ ಇಲಾಖೆಗೆ ಕಟ್ಟಬೇಕೆಂಬ ಆದೇಶ ಹಿಂಪಡೆಯಬೇಕೆಂಬ ನಮ್ಮ ಕೂಗಿಗೆ ಸಂಬಂಧಿಸಿದವರು ಕಿವಿಗೊಟ್ಟಿಲ್ಲ. ಆರ್.ಟಿ.ಸಿ ನೀಡಲು ಸಿಬ್ಬಂದಿ ಮೂಲಸೌಕರ್ಯ ಎಲ್ಲಾ ಗ್ರಾಮ ಪಂಚಾಯತ್‌ನದ್ದು. ಆದರೆ ಪಂಚಾಯತ್ ಮಾಡಿದ ಕೆಲಸಕ್ಕೆ ಲಾಭ ಪಡೆಯು ವುದು ಮಾತ್ರ ಕಂದಾಯ ಇಲಾಖೆ ಎಂಬಂತಾಗಿದೆ. ಇದೀಗ ಬಾಪೂಜಿ ಸೇವಾ ಕೇಂದ್ರದ 100 ಸೇವೆಗಳ ಪೈಕಿ ಒಂದೆರಡು ಸೇವೆಗಳನ್ನು ಬಿಟ್ಟರೆ ಇತರ ಸೇವೆಗಳು ಯಶಸ್ಸು ಕಾಣಲಿಲ್ಲ. ಬಾಪೂಜಿ ಸೇವಾ ಕೇಂದ್ರ ಯಶಸ್ವಿಯಾಗಬೇಕಾದರೆ ಗ್ರಾಮ ಪಂಚಾಯತ್ ಅಧಿಕಾರಿಗಳ ಹುದ್ದೆ ಮೇಲ್ದರ್ಜೆಗೇರಿಸಿ ಗ್ರಾಮ ಪಂಚಾಯತ್‌ನಲ್ಲೆ ಕಡತ ವಿಲೇವಾರಿ ಆಗಬೇಕೆಂಬ ಸಲಹೆಯನ್ನು ಆಡಳಿತ ಕೇಳಿಸಿಕೊಳ್ಳುತ್ತಿಲ್ಲ. ಜನನ-ಮರಣ, ವಾಸ್ತವ್ಯ ದೃಢೀಕರಣ, ಪಡಿತರ ಚೀಟಿ ವಿಲೇವಾರಿ, ವಿವಾಹ ನೋಂದಣಿ, ಧಾರಾಳ ಹಣವಿದ್ದರೂ ಗೊಂದಲದಲ್ಲಿರುವ ಕಾರ್ಮಿಕ ಇಲಾಖೆಯಲ್ಲಿ ಬಡಕಾರ್ಮಿಕರ ನೋಂದಣಿ ಈ ಕೆಲಸವನ್ನು ಗ್ರಾಮ ಪಂಚಾಯ ತುಗಳಿಗೆ ಹಸ್ತಾಂತರಿಸಬೇಕು. ಈ ಕುರಿತು ನಾವು ನಡೆಸುತ್ತಿರುವ ನಿರಂತರ ಹೋರಾಟಗಳಿಗೆ ಸರಕಾರ ಸ್ಪಂದಿತ್ತಿಲ್ಲ.
ಎಸ್ಕ್ರೋದಿಂದ ಮುಕ್ತಿ ನೀಡಿ
ರಾಜ್ಯದಲ್ಲಿ ಜಾರಿಗೆ ತಂದಿರುವ ಎಸ್ಕ್ರೋ ಖಾತೆ ಪಂಚಾಯತ್ ಪ್ರತಿನಿಧಿಗಳ ಕರ್ತವ್ಯಕ್ಕೆ ಚ್ಯುತಿ ಉಂಟು ಮಾಡುತ್ತಿದೆ. ವಿದ್ಯುತ್ ಬಿಲ್ಲು ಸಂಪೂರ್ಣ ಕಟ್ಟಿರುವ ಗ್ರಾಮ ಪಂಚಾಯತ್‌ಗಳು ಎಸ್ಕ್ರೋ ಖಾತೆಯ ದೌರ್ಜನ್ಯಕ್ಕೆ-ಶಿಕ್ಷೆಗೆ ಒಳಪಡು ವಂತಾಗಿದೆ. ಈಗಾಗಲೇ ಗ್ರಾಮ ಪಂಚಾಯತ್‌ಗಳು ಸರಕಾರದ ಅನುಮೋದನೆಯೊಂದಿಗೆ ಖಾತೆ ತೆರೆದಿದ್ದರೂ ಕೇಂದ್ರ-ರಾಜ್ಯ ಸರಕಾರದ ಅನುದಾನವನ್ನು ಗ್ರಾಮ ಪಂಚಾಯತ್ ಹೊರತಾಗಿ ಎಸ್ಕ್ರೋ ಖಾತೆ ತೆರೆದು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಹದ್ದು ಬಸ್ತಿನಲ್ಲಿಡಲು ಸರಕಾರ ಹವಣಿಸುತ್ತಿದ್ದು, ಇದರಿಂದಾಗಿ ಗ್ರಾಮ ಪಂಚಾಯತ್‌ನ ಆಡಳಿತದ ಹಕ್ಕಿಗೆ ಧಕ್ಕೆ ತಂದಂತಾಗಿದೆ. ವಿದ್ಯುತ್ ಬಿಲ್ಲು ಬಾಕಿ ಇಲ್ಲದ ಪಂಚಾಯತುಗಳ ಲಕ್ಷಾಂತರ ರೂಪಾಯಿ ಎಸ್ಕ್ರೋ ಖಾತೆಯಲ್ಲಿ ಕೊಳೆಯುತ್ತಿದೆ. ಗ್ರಾಮ ಪಂಚಾಯತ್ ಆಡಳಿತವನ್ನು ನಿಯಂತ್ರಿಸಲು ಮಾಡಿರುವ ಎಸ್ಕ್ರೋಹೇರಿಕೆ ವ್ಯವಸ್ಥೆಯನ್ನು ತೆಗೆದು ಹಾಕಬೇಕಾಗಿದೆ. ಈ ಸಮಸ್ಯೆಯನ್ನೇ ಆಡಳಿತ ಅರ್ಥ ಮಾಡಿಕೊಳ್ಳಲಿಲ್ಲ.
ದುಬಾರಿ ವಿದ್ಯುತ್ ಬಿಲ್
ಗ್ರಾಮ ಪಂಚಾಯತ್‌ಗಳೆಂದರೆ ವ್ಯವಹಾರ ಮಾಡುವ ಕಂಪೆನಿಗಳಲ್ಲ. ಅದೊಂದು ಸಾರ್ವಜನಿಕ ಹಿತಾಸಕ್ತಿ ಸೇವಾ ಸಂಸ್ಥೆ. ಹಾಗಾಗಿ ಇನ್ನು ಮುಂದೆ ಗ್ರಾಮ ಪಂಚಾಯತ್‌ಗಳ ಕುಡಿಯುವ ನೀರಿನ ಸ್ಥಾವರ ಮತ್ತು ದಾರಿದೀಪದ ದರವನ್ನು ಗೃಹಬಳಕೆಯ ವಿದ್ಯುತ್ ದರವಾಗಿ ಪರಿಗಣಿಸಬೇಕು. ಬಾಕಿಗೆ ಬಡ್ಡಿಯ ವ್ಯವಸ್ಥೆಯನ್ನು ರದ್ದುಗೊಳಿಸಬೇಕು.
ಕೇರಳ ಮಾದರಿ ಗೌರವಧನ
ಪ್ರಸ್ತುತ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಅನೇಕ ಶಾಸನಾತ್ಮಕ ಕೆಲಸಗಳಿದ್ದು, ಉದ್ಯೋಗ ಖಾತ್ರಿಗೆ ಕೂಲಿ ಪಾವತಿಗಾಗಿ ದಿನ ನಿತ್ಯ ನಮೂನೆ 911, ಇ-ಪಾವತಿಗಾಗಿ ಪ್ರತಿನಿತ್ಯ ಗ್ರಾಮ ಪಂಚಾಯತುಗಳಿಗೆ ಓಡಾಟ ಮಾಡಬೇಕಾ ಗಿದೆ. ಇಷ್ಟೆಲ್ಲ ಕೆಲಸ ಮಾಡುವ ಪಂಚಾಯತ್ ಪ್ರತಿನಿಧಿಗಳಿಗೆ ಕೇರಳ ಮಾದರಿಯಲ್ಲಿ ಗೌರವಧನ ಕೊಡಬೇಕೆಂಬ ಬೇಡಿಕೆ ಬಹಳ ಹಿಂದಿ ನಿಂದಲೂ ಇದೆ. ಕೇರಳದಲ್ಲಿ ಗ್ರಾಮ ಪಂಚಾಯತ್‌ಗಳ ಅಧ್ಯಕ್ಷರಿಗೆ ಮಾಸಿಕ ಗೌರವಧನ 13,000ರೂ., ಉಪಾ ಧ್ಯಕ್ಷರಿಗೆ 10,000ರೂ. ಮತ್ತು ಸದಸ್ಯರಿಗೆ 7,000 ರೂ. ಇದೆ. ನಮ್ಮ ರಾಜ್ಯದಲ್ಲಿ ಇದೇ ಮಾದರಿಯಲ್ಲಿ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಅಧ್ಯಕ್ಷರು ಮತ್ತು ಜಿಲ್ಲಾ ಪಂಚಾಯತ್ ಸದಸ್ಯರುಗಳ ಗೌರವಧನ ಹೆಚ್ಚಿಸಬೇಕಾ ಗಿದೆ. ಗ್ರಾಮ ಪಂಚಾ ಯತ್ ಸಭೆಗಳಿಗೆ ಅನಾದಿ ಕಾಲದಿಂದಲೂ 100 ರೂಪಾಯಿ ಉಪವೇಶನ ಶುಲ್ಕ ನೀಡುತ್ತಿದ್ದು, 500 ರೂಗೆ ಏರಿಸ ಬೇಕೆಂದು ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷರು- ಸದಸ್ಯರು ಮಾಸಿಕ ಪ್ರಯಾಣ ಭತ್ಯೆ ನೀಡುವಂತೆಯೂ ಹಾಗೂ ಪಂಚಾಯತ್ ಸದಸ್ಯರು ದಿನನಿತ್ಯ ಜನರ ಮಧ್ಯೆ ಓಡಾಡುವ ಅನಿವಾರ್ಯತೆ ಇರುವುದರಿಂದ, ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಸದಸ್ಯರಿಗೆ ತಾಲೂಕು ಮಟ್ಟದಲ್ಲಿ ಉಚಿತ ಬಸ್‌ಪಾಸ್ ವಿತರಿಸುವಂತೆ, ಜಿಲ್ಲಾ ಪಂಚಾಯತ್ ಸದಸ್ಯರಿಗೂ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಯಾಣಿಸಲು ಉಚಿತ ಬಸ್‌ಪಾಸ್ ವಿತರಿಸಬೇಕೆಂಬ ಬಹುಕಾಲದ ಬೇಡಿಕೆಯನ್ನು ಸರಕಾರ ಒಪ್ಪಿಕೊಂಡು ಸೂಕ್ತ ಆದೇಶ ಹೊರಡಿಸಬೇಕೆನ್ನುವುದು ನಮ್ಮ ಪ್ರಮುಖ ಬೇಡಿಕೆಗಳಲ್ಲೊಂದು. ಅಲ್ಲದೇ ತುರ್ತಾದ ಕಾಮಗಾರಿಗಳ ಅವಶ್ಯಕತೆ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರ ವಿವೇಚನ ನಿಧಿ ರೂ.25,000ಕ್ಕೆ ಏರಿಕೆ ಮಾಡಬೇಕೆಂಬ ಆಗ್ರಹವನ್ನು ಮತ್ತೂಮ್ಮೆ ನೆನಪಿಸುತ್ತಿದ್ದೇವೆ.
ಪಂಚಾಯತರಾಜ್ ವ್ಯವಸ್ಥೆಯ “ಫಂಕ್ಷನರಿ’
ಪಂಚಾಯತ್‌ರಾಜ್ ವ್ಯವಸ್ಥೆ ಸಬಲೀಕರಣವಾಗಬೇಕಾದರೆ ಪೂರಕ ಸಿಬ್ಬಂದಿ ನೇಮಕಾತಿ ಅಗತ್ಯವಿದೆ. ಗ್ರಾಮ ಪಂಚಾಯ ತಿಯ ಬಗ್ಗೆ ಆಡಳಿತ ಯಂತ್ರ ಎಷ್ಟೊಂದು ನಿರ್ಲಕ್ಷ್ಯ ವಹಿಸಿದೆ ಯೆಂದರೆ ಸರಕಾರವೇ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಕಾರ್ಯದರ್ಶಿ ಹುದ್ದೆ ನೇಮಕಾತಿ ಪ್ರಕ್ರಿಯೆ ಮುಗಿಸಿ ಒಂದುವರೆ ವರ್ಷ ಸಂದರೂ ಆಯ್ಕೆ ಪಟ್ಟಿ ಪ್ರಕಟಿಸಿಲ್ಲ. ಚುನಾವಣೆ ಸಂದರ್ಭದವರೆಗೆ ಈ ನಿಧಾನ ಕಾರ್ಯವೈಖರಿ ಮುಂದುವರಿದರೆ ಮತ್ತಾರು ತಿಂಗಳು ಸಿಬ್ಬಂದಿಗಳಿಲ್ಲದೆ ಪಂಚಾಯತ್ ಆಡಳಿತ ಸೊರಗಲಿದೆ. ಆದ್ದರಿಂದ ಇನ್ನೊಂದು ವಾರದಲ್ಲಿ ಪ್ರಸ್ತಾಪಿತ 1800ಕ್ಕೂ ಮಿಕ್ಕಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಕಾರ್ಯದರ್ಶಿ ಹುದ್ದೆಯ ನೇಮಕಾತಿ ಪ್ರಕಟಿಸಬೇಕೆಂದು ಆಗ್ರಹಿಸುತ್ತಿದ್ದೇವೆ. ಪ್ರತಿ ತಾಲೂಕು ಪಂಚಾಯತಿಯಲ್ಲಿ ಹೆಚ್ಚುವರಿಯಾಗಿ ಎರಡು ಸಹಾಯಕ ನಿರ್ದೇಶಕರ ಹುದ್ದೆ ಸೃಷ್ಟಿ ಮಾಡಬೇಕಾಗಿದೆ. ತಾಲೂಕು ಪಂಚಾಯತ್‌ಗಳು ಸಂಜೀವಿನಿ, ವಸತಿ, ಸ್ವತ್ಛ ಭಾರತ್ ಮಿಷನ್, 14 ಹಣಕಾಸು ಸೇರಿದಂತೆ ಒಟ್ಟು 51ಕ್ಕೂ ಹೆಚ್ಚು ಯೋಜನೆಗಳನ್ನು ಅನುಷ್ಠಾನ ಮಾಡುತ್ತಿದ್ದು, ತಾಲೂಕು ಪಂಚಾಯತಿಗೆ ಸಹಾಯಕ ನಿರ್ದೇಶಕರ ಹುದ್ದೆಯ ಅನಿವಾರ್ಯತೆ ಇದೆ. ಈ ವಿಷಯ ಸರ್ಕಾರದ ಪ್ರಸ್ತಾಪನೆಯಲ್ಲಿದ್ದರೂ ಸದ್ಯ ಕ್ಕಂತು ಆಡಳಿತ ಮೌನ ವಹಿಸಿದೆ. ಗ್ರಾಮೀಣಾಭಿವೃದ್ಧಿ ಅಧಿಕಾರಿ ಗಳು ಮತ್ತು ಲೆಕ್ಕ ಸಹಾಯಕರ ಹುದ್ದೆಗಳು ಭರ್ತಿಯಾಗದೆ ಆಡಳಿತ ಕುಂಠಿತವಾಗಿದೆ. ಮಾದರಿ ಸಿಬ್ಬಂದಿ ಪ್ಯಾಟರ್ನ್ನಲ್ಲಿ 5 ಸದಸ್ಯರಿರುವ ಗ್ರಾಮ ಪಂಚಾಯತ್ ಮತ್ತು 60 ಸದಸ್ಯರಿರುವ ಗ್ರಾಮ ಪಂಚಾಯತಿಗೂ ಒಂದೇ ಮಾದರಿಯ ಸಿಬ್ಬಂದಿಗಳನ್ನು ನೇಮಕಾತಿ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಈ ಅವೈಜ್ಞಾನಿಕ ವ್ಯವಸ್ಥೆಗಳನ್ನಾದರೂ ಹೋಗಲಾಡಿಸಿ ಎಂದರೆ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಕೇಳಿಸುತ್ತಿಲ್ಲ.
ಗ್ರಾಮ ಪಂಚಾಯತ್ ನೌಕರರ ಸಂಪೂರ್ಣ ವೇತನವನ್ನು ಸರ್ಕಾರವೇ ಪಾವತಿಸುವುದಾಗಿ ಭರವಸೆ ನೀಡಿತ್ತು ಮತ್ತು 10 ವರ್ಷ ಪೂರೈಸಿದ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗ ಣಿಸುವುದು ಎಂದು ಹೇಳಿತ್ತು. ಪಂಚಾಯತುಗಳಲ್ಲಿ ಹತ್ತಾರು ವರ್ಷಗಳಿಂದ ದುಡಿಯುತ್ತಿರುವ ನೌಕರರಿಗೆ ಇ.ಎಸ್.ಐ ಮತ್ತು ಪಿ.ಎಫ್. ನೀಡುವುದಾಗಿ ಸರ್ಕಾರ ಕೊಟ್ಟಿರುವ ಭರವಸೆ ಒಂದು ಹೆಜ್ಜೆಯೂ ಮುಂದೆ ಹೋಗಿಲ್ಲ. ಗ್ರಾಮ ಪಂಚಾಯತುಗಳಿಗೆ ಜ್ಯೂನಿಯರ್ ಇಂಜಿನಿಯರುಗಳ ನೇಮಕವಾಗದೇ ಆರೆಂಟು ಪಂಚಾಯತುಗಳನ್ನು ಒಬ್ಬ ಇಂಜಿನಿಯರ್ ನಿಭಾಯಿಸಬೇಕಾದ ಸ್ಥಿತಿ ಬಂದರೆ ಸಮಯದ ಮಿತಿಯಲ್ಲಿ ಕೆಲಸ ನಿಭಾಯಿಸಲು ಹೇಗೆ ಸಾಧ್ಯ? ತಾಲೂಕು ಪಂಚಾಯತುಗಳ ಇ.ಓ.ಗಳನ್ನು ಅನ್ಯ ಇಲಾಖೆಯಿಂದ ವರ್ಗಾಯಿಸಿ ಕೊಳ್ಳುವ ಬದಲು ಪಂಚಾಯತ್ ರಾಜ್ ಇಲಾಖೆಯ ಹಿರಿಯ ಸಿಬ್ಬಂದಿಗಳಿಗೆ ಭಡ್ತಿ ನೀಡಿದರೆ ಕೆಲಸವಾದರೂ ಸಮರ್ಪಕ ವಾಗುತ್ತದೆ ಎಂದರೆ ಕೇಳುವ ಕಿವಿಯೆಲ್ಲಿ? ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತು ಗಳಲ್ಲಿ 6000 ಹುದ್ದೆಗಳು ಖಾಲಿಯಿದ್ದರೇ ಕೆಲಸ ಮಾಡುವು ದಾದರೂ ಹೇಗೆ? ಪಂಚಾಯತ್ ಎಂಬ ಗ್ರಾಮಾಭಿವೃದ್ಧಿ ವ್ಯವಸ್ಥೆ ಹಲ್ಲಿಲ್ಲದ ಹಾವಿನಂತಾಗಿದೆ. “3ಎಫ್’ ಗಳೆಂದು ಕರೆಯುವ ಸಮಗ್ರ ಆಡಳಿತ ವ್ಯವಸ್ಥೆಯನ್ನು ಕಾನೂನು ಪುಸ್ತಕದಲ್ಲಿ ಪ್ರಕಟಿಸಿ ಪುಸ್ತಕವನ್ನು ಕಟ್ಟಿ ಅಟ್ಟಕ್ಕೆಸೆಯಲಾಗಿದೆ. ಶಾಸಕರು, ಸಂಸದರಂತೆ ಜನ ಸಾಮಾನ್ಯರಿಂದಲೇ ನೇರ ಓಟು ಪಡೆದು ಅಧಿಕಾರದ ಸೂತ್ರ ಹಿಡಿದರೂ ದಿನದಿಂದ ದಿನಕ್ಕೆ ಧ್ವನಿ ಕಳೆದುಕೊಳ್ಳುತ್ತಿರುವ ರಾಜ್ಯದ 1 ಲಕ್ಷ ಮೀರಿದ ಪಂಚಾಯತ್ ಪ್ರತಿನಿಧಿಗಳ ಧ್ವನಿಗೆ ಧ್ವನಿಯಾಗಿ ಹೋರಾಟಕ್ಕಿಳಿದಿದ್ದೇವೆ. ಈ ಮೇಲಿನ ಬೇಡಿಕೆಗಳು ಜನಪ್ರತಿನಿಧಿಗಳ ಪ್ರತಿನಿಧಿಗಳಾದ ನಮ್ಮದು ಮಾತ್ರವಲ್ಲ ರಾಜ್ಯದಲ್ಲಿರುವ 1 ಲಕ್ಷ ಮೀರಿದ ಪಂಚಾ ಯತ್ ರಾಜ್ ಸದಸ್ಯರದ್ದು. ಸರ್ಕಾರ ಮತ್ತು ಗ್ರಾಮೀಣಾಭಿವೃದ್ಧಿ ಮಂತ್ರಿಗಳು ತಕ್ಷಣ ಸ್ಪಂದಿಸಿ ನ್ಯಾಯ ಒದಗಿಸಿದರೆ ಈ ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಬದುಕುತ್ತಿರುವ ನಾಲ್ಕೂವರೆ ಕೋಟಿ ಜನರಿಗೆ ನ್ಯಾಯ ಮಾತ್ರವಲ್ಲ, ಗೌರವ ಸಲ್ಲಿಸಿದಂತಾ ಗುತ್ತದೆ. ನ್ಯಾಯ ಕೇಳುವ ಕೊರಳು ಗಟ್ಟಿಯಾದಂತೆಲ್ಲಾ ಧ್ವನಿಯಲ್ಲಿ ಬಲ, ಗಡಸು ತುಂಬಿಕೊಳ್ಳುತ್ತದೆ. ಪಂಚಾಯತ್ ರಾಜ್ ನ್ಯಾಯ ಕೇಳುವವರೆಲ್ಲರೂ ಅಭಿವೃದ್ಧಿಯಲ್ಲಿ ಸಹಭಾಗಿ ಗಳೆಂದು ಅರಿತು ಸರ್ಕಾರ ಹೆಜ್ಜೆ ಇಡಬೇಕು.
ಕೋಟ ಶ್ರೀನಿವಾಸ ಪೂಜಾರಿ ವಿಧಾನ ಪರಿಷತ್ ಸದಸ್ಯರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
T20 series: ಪಾಕಿಸ್ಥಾನಕ್ಕೆ ವೈಟ್‌ವಾಶ್ ಟಿ20: ಆಸ್ಟ್ರೇಲಿಯ 3-0 ಜಯಭೇರಿ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
BGT 2024: ಐಪಿಎಲ್ ಹರಾಜಿನ ಕಾರಣಕ್ಕೆ ತಂಡ ತೊರೆದ ಆಸ್ಟ್ರೇಲಿಯಾದ ಸಹಾಯಕ ಕೋಚ್!
Manipal: ಆರ್ಯಭಟ ಪ್ರಶಸ್ತಿ ಪುರಸ್ಕೃತ, ಯಕ್ಷಗಾನ ಕಲಾವಿದ ಚೇರ್ಕಾಡಿ ಕಮಲಾಕ್ಷ ಪ್ರಭು ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.