‘ಒಳಿತು ಮಾಡು ಮನುಜ…!’; ವಿಶ್ವಕ್ಕೇ ಸಹಬಾಳ್ವೆಯ ಸಂದೇಶ ನೀಡಿತೇ ಈ ಮಹಾಮಾರಿ
ಅವ್ಯವಸ್ಥೆಯಲ್ಲೂ ವ್ಯವಸ್ಥೆ.. ; ನಾಗರಿಕ ಸಮಾಜಕ್ಕೆ ಸವಾಲಾದ ಕೋವಿಡ್ 19 ವೈರಸ್
Team Udayavani, Apr 3, 2020, 5:48 PM IST
ದುಡ್ಡು, ಪ್ರತಿಷ್ಠೆ, ಪದವಿಯ ಹಿಂದೆ ಓಡುತ್ತಾ ಸಂಬಂಧಗಳನ್ನು ಮೂಲೆಗುಂಪಾಗಿಸಿದ್ದ ನಮಗಿಂದು ಮನೆ, ಸಂಬಂಧ, ಸಂಸಾರಗಳ ಬೆಲೆ ಅರ್ಥವಾಗತೊಡಗಿದೆ. ಹೀಗೆ ಕೋವಿಡ್ 19 ವೈರಸ್ ತಂದಿರುವ ಸಾಮಾಜಿಕ ಬದಲಾವಣೆಗಳ ಕುರಿತಾಗಿರುವ ವಿಶ್ಲೇಷಿಸಿದ್ದಾರೆ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಸಮಾಜಶಾಸ್ತ್ರ ಪ್ರಾದ್ಯಾಪಕಿಯಾಗಿರುವ ವಿದ್ಯಾ ಎಸ್. ಅವರು.
ಬದುಕು ಜಟಕಾಬಂಡಿ… ವಿಧಿ ಅದರ ಸಾಹೇಬ…. ಇಂದಿನ ಈ ಪರಿಸ್ಥಿತಿಯಲ್ಲಿ ಪದೆ ಪದೇ ನೆನಪಾಗುವ ಡಿವಿಜಿ ಅವರ ಕಗ್ಗದ ಸಾಲುಗಳು. ಇಂದು ಹೀಗಿದ್ದೇವೆ ಅನ್ನಬಹುದೇ ವಿನಹ ನಾಳೆ ಹೇಗಿರುತ್ತೇವೆ ಅನ್ನುವುದು ಊಹೆಗೆ ನಿಲುಕದ ವಿಷಯ.
ಸಾಮಾನ್ಯ ದಿನಗಳಲ್ಲೇ ಹಾಗಿರುವಾಗ ಕೋವಿಡ್ 19 ವೈರಸ್ ಎಂಬ ಮಹಾಮಾರಿಯ ಭಯ ನಮ್ಮನ್ನು ಆಕ್ರಮಿಸಿ ಹಿಂಡಿ ಹಿಪ್ಪೆ ಮಾಡಿದೆ ಅನ್ನುವ ಸಂದರ್ಭದಲ್ಲಿ ಕೇಳುವುದೇ ಬೇಡ. ಬದುಕಿನ ಯಾವ ಆಯಾಮಗಳಿಂದ ನೋಡಿದರೂ ಜನರಲ್ಲಿ ಭಯ ಮನೆಮಾಡಿದೆ. ಬಡವ ಬಲ್ಲಿದರೆನ್ನದೆ ದಿನೇ ದಿನೇ ಹೆಚ್ಚುತ್ತಿರುವ ಈ ಭಯಾನಕ ಸನ್ನಿವೇಶ ಇನ್ನೆಷ್ಟು ದಿನಗಳವರೆಗೋ ಗೊತ್ತಿಲ್ಲ.
ಈ ಮಧ್ಯೆ ಈ ಮಹಾಮಾರಿ ಜನರನ್ನು ಸುಸಂಸ್ಕೃತರನ್ನಾಗಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸಿದೆ ಎಂದರೆ ತಪ್ಪಲ್ಲವೇನೋ. ರಾಜಕೀಯವಾಗಿ ಆರ್ಥಿಕವಾಗಿ ದ್ವೇಷದ ಕಿಚ್ಚು ಹೊತ್ತಿ ಉರಿಯುತ್ತಿದ್ದ ಸಮಯಕ್ಕೇ ಇದೊಂದು ಹೊಸ ರೀತಿಯ ಭಯ ಜನರನ್ನು ಬೆಚ್ಚಿ ಬೀಳಿಸಿದ್ದು ಒಂದು ರೀತಿಯಲ್ಲಿ ಮನುಷ್ಯನಲ್ಲಿ ಮರೆತ ಮನುಷ್ಯತ್ವವನ್ನು ಪುನರ್ಸ್ಥಾಪಿಸುವುದಕ್ಕೆಯೇ ಇರಬಹುದೇ ಎನ್ನುವಂತಾಗಿದೆ.
ತಿನ್ನುವುದಕ್ಕೂ, ನಿಲ್ಲುವುದಕ್ಕೂ, ಪರಸ್ಪರ ಮಾತನಾಡು ಮತ್ತು ಕೊನೆಗೆ ಸರಿಯಾಗಿ ನಿದ್ರಿಸಲೂ ಪುರುಸೊತ್ತಿಲ್ಲದಂತೆ ಬದುಕುತ್ತಿದ್ದ ನಮ್ಮನ್ನು ಇವತ್ತು ಕಣ್ಣಿಗೆ ಕಾಣದ ವೈರಸ್ ಒಂದು ಕೆಲಸವಿಲ್ಲದ ಸ್ಥಿತಿಗೆ ತಂದುಬಿಟ್ಟಿದೆ. ಅದೇ ಇನ್ನೊಂದೆಡೆ ನಮ್ಮ ಆರೋಗ್ಯ ಪಾಲನೆ ಮಾಡುವ ವೈದ್ಯರು, ನರ್ಸ್ ಗಳು, ಆರೋಗ್ಯ ಸಿಬ್ಬಂದಿಗಳು, ಪೊಲೀಸ್ ವ್ಯವಸ್ಥೆ, ಅಧಿಕಾರಿ ವರ್ಗಗಳಿಗೆ ಬಿಡುವೇ ಇಲ್ಲದಂತೆ ಕೆಲಸ ಮಾಡುವ ತುರ್ತು ಪರಿಸ್ಥಿತಿಯನ್ನು ತಂದೊಡ್ಡಿರುವುದೂ ಇದೇ ಮಹಾಮಾರಿ.
ಎಲ್ಲರೂ ಮನೆಯೊಳಗೆ ಇರಬೇಕೆಂಬ ಸರಕಾರದ ಆಜ್ಞೆ ಪಾಲಿಸುವ ಈ ವಿಷಮ ಪರಿಸ್ಥಿತಿಯಲ್ಲಿ ಪರಸ್ಪರ ಸಂಬಂಧ ಸಂಪರ್ಕ ವೃದ್ಧಿಸಲು ನೆರವಾಗಿದೆ. ಪಕ್ಕದ ಅಂಗಡಿಗಳಲ್ಲಿ ಸಿಗದ ವಸ್ತುಗಳ ಜೋಡಿಸುವಿಕೆಯಲ್ಲಿ, ವಾಹನ ಓಡಾಟ ನಿಲುಗಡೆಯಾಗಿರುವ ದುರ್ಗಮ ಪರಿಸ್ಥಿತಿಯಲ್ಲಿ ನಮ್ಮಿಂದೇನಾದರೂ ಸಹಾಯ ಬೇಕಾ ಎನ್ನುವ ನೆರೆಹೊರೆಯವರು, ಹೇಗಿದ್ದೀರಿ? ನೀವು ಸುರಕ್ಷಿತ ರಾಗಿದ್ದೀರಿ ತಾನೆ ಎಂದು ಪರಸ್ಪರ ವಿಚಾರಿಸುವ ದೂರದಲ್ಲಿರುವ ಸ್ನೇಹಿತರು, ಏನೇ ಆದರೂ ಮನೆಯಲ್ಲೇ ಇರೋಣ, ಮಹಾಮಾರಿಯನ್ನು ಹೊಡೆದೋಡಿಸುವಲ್ಲಿ ನೆರವಾಗೋಣ ಅನ್ನುವ ದೇಶಪ್ರೇಮಿ ಬಂಧುಗಳು, ಇಂದು ಕುಳಿತು ಅವಲೋಕಿಸಿದರೆ ನಿಜಕ್ಕೂ ಹೆಮ್ಮೆ ಎನಿಸುತ್ತದೆ. ಕಷ್ಟದ ದಿನಗಳಲ್ಲೂ ಒಂದಾಗಿ ಭಾರತ ಗೆಲ್ಲಬೇಕೆನ್ನುವ ಹಂಬಲ ಬಲವಾಗಿದೆಯಲ್ಲಾ ಅದಕ್ಕೆ ಸಂತೋಷವಾಗುತ್ತದೆ..
ದಿನ ದಿನ ದುಡಿದು ಸಂಪಾದಿಸಿ ಜೀವನ ನಡೆಸಬೇಕಾದವರ ಪರಿಸ್ಥಿತಿ ಚಿಂತಾಜನಕವೇ ಹೌದು. ಆದರೆ ಅದರ ಜೊತೆಗೆ ಲಕ್ಷ ರೂಪಾಯಿ ಬಂಡವಾಳ ಹೂಡಿ ವ್ಯಾಪಾರ ವಹಿವಾಟುಗಳಲ್ಲಿ ತೊಡಗಿರುವವರ ಪಾಡೂ ಸುಲಭದ್ದೇನಲ್ಲ. ಎಲ್ಲಾ ರೀತಿಯ ಕೆಲಸಗಾರರಿಗೂ ಅವರವರದ್ದೇ ಆದ ಕಷ್ಟ ಕಾರ್ಪಣ್ಯಗಳು ಇದ್ದೇ ಇವೆ.
ಇವೆಲ್ಲದರ ನಡುವೆ ಇಂತಹ ವಿಷಮ ಪರಿಸ್ಥಿತಿಯಲ್ಲಿ ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವ ವೈದ್ಯರು, ದಾದಿಯರು, ಪೊಲೀಸ್ ಅಧಿಕಾರಿ ವರ್ಗದವರು,ಮಾಧ್ಯಮ ವಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವವರು, ಪೌರಕಾರ್ಮಿಕರು, ಹೀಗೆ ಉದ್ದ ಪಟ್ಟಿಯೊಳಗೆ ಬರುವ ಒಂದಷ್ಟು ಜನ ಸಲ್ಲಿಸುವ ಸೇವೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅವರ ಬಗೆಗೂ ಮನಸ್ಸು ತುಂಬಿ ಬರದಿರದು..
ಇಷ್ಟೆಲ್ಲ ಇದ್ದರೂ ಇವೆಲ್ಲದರ ಜೊತೆಗೆ ಒಂದಿಷ್ಟು ಅಮಾನವೀಯ ನಡವಳಿಕೆಗಳು ನಾವು ಎಷ್ಟು ಸುಸಂಸ್ಕೃತರು ಎಂಬುದಾಗಿ ಪ್ರಶ್ನಿಸುವಂತೆಯೂ ಮಾಡುತ್ತಿರುವುದು ಬೇಸರದ ಸಂಗತಿ. ಆಹಾರ ಪದಾರ್ಥಗಳನ್ನು ಸಹ ಮನೆ ಮನೆಗೇ ತಲುಪಿಸುವ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದರೂ ಮನೆಯಿಂದ ಹೊರಗೆ ಬಂದು ಬೇಕಾಬಿಟ್ಟಿ ಸುತ್ತಾಡುತ್ತಿರುವ ಹಲವರನ್ನು ನೋಡಿದ್ದೇವೆ.
ಬೇಕಂತಲೇ ಆಡಳಿತ ವ್ಯವಸ್ಥೆಯ ತಾಳ್ಮೆ ಪರೀಕ್ಷಿಸುವ ಸ್ಥಿತಿಯನ್ನು ತಂದೊಡ್ಡಿದ್ದನ್ನು ನೋಡಿದರೆ ಮನುಷ್ಯ ಬುದ್ಧಿವಂತ ಹೌದೇ ಎಂಬ ಪ್ರಶ್ನೆ ಏಳುತ್ತದೆ. ಎಲ್ಲರ ತಾಳ್ಮೆಗೂ ಒಂದು ಮಿತಿ ಖಂಡಿತವಾಗಿ ಇದ್ದೇ ಇದೆ. ಅಲ್ಲಿ ಇಲ್ಲಿ ನೂಕು ನುಗ್ಗಲು, ಎಡೆಬಿಡದೆ ಓಡಾಡುವ ವಾಹನಗಳು, ಅಗತ್ಯ ಇದ್ದೋ ಇಲ್ಲದೆಯೋ ಎಂದು ಪರಿಶೀಲಿಸಲೇ ಬೇಕಾದರೂ ತಮ್ಮ ಮಿತಿಯ ತಾಳ್ಮೆ ಮೀರಿದ ಒಂದೆರಡು ಘಟನೆಗಳು ಹೀಗೆ ಎಲ್ಲವೂ ಮತ್ತೆ ಮತ್ತೆ ನಮ್ಮನ್ನೇ ಪ್ರಶ್ನೆ ಮಾಡುವಂತಿದೆ ನಾವು ಮನುಷ್ಯರಾಗಿ ಮನುಷ್ಯತ್ವ ಉಳಿಸಿಕೊಂಡಿದ್ದೇವೆಯೇ?
ಏನೇ ಇರಲಿ ಹೇಗೆಯೇ ಇರಲಿ ಇರುವುದರಲ್ಲಿ ಸುಖಿಸುವ ಮನೋಭಾವ ಬೆಳೆಸಿಕೊಳ್ಳಲೇ ಬೇಕಾಗಿದೆ. ಐಷಾರಾಮಿ ಬದುಕನ್ನೇ ಓಲೈಸುತ್ತಿದ್ದವರೆಲ್ಲಾ ಸಾತ್ವಿಕರಾಗಿ ಬದುಕುವ ಪ್ರಯತ್ನ ಮಾಡಬೇಕಾಗಿದೆ. ತಮ್ಮ ತಮ್ಮ ಜೀವ ಜೀವನದ ಭದ್ರತೆಗಾಗಿ ಇರುವುದರಲ್ಲಿ ತೃಪ್ತಿ ಪಡಬೇಕಾಗಿದೆ.
ಮನೆಮಂದಿಯ, ನಮ್ಮೂರ ಜನರ, ನಮ್ಮ ರಾಜ್ಯದ, ದೇಶದ ಹಿತಕ್ಕಾಗಿ ನಮ್ಮೆಲ್ಲ ಆಸೆ ಆಕಾಂಕ್ಷೆಗಳನ್ನು ಹಿಡಿದಿಟ್ಟುಕೊಳ್ಳಲೇಬೇಕಾಗಿದೆ. ಈಗಲೂ ನನ್ನ ಕಿವಿಯಲ್ಲಿ ಅನುರಣಿಸುತ್ತಿರುವ ಹಾಡು.. ‘ಒಳಿತು ಮಾಡು ಮನುಜ, ನಾವಿರೋದು ಮೂರು ದಿವಸ…
– ವಿದ್ಯಾ ಎಸ್., ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥರು,
ವಿವೇಕಾನಂದ ಕಾಲೇಜು ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.