ಭಾರತೀಯ ಟೆಕ್ಕಿಗಳು ಲಾಗೌಟ್‌? 


Team Udayavani, Feb 4, 2017, 10:57 AM IST

Log-Out-3-2.jpg

ಅಮೆರಿಕದಲ್ಲಿ ಭಾರತೀಯ ಟೆಕ್ಕಿಗಳು ಹೆಚ್ಚು ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅತಿಹೆಚ್ಚು ವಿದೇಶೀ ವಿನಿಮಯ ಈ ಮೂಲದಿಂದ ಹರಿದು ಬರುತ್ತಿದೆ. ಭಾರತೀಯ ಉದ್ಯೋಗಿಗಳು ಅಲ್ಲಿ ಕೆಲಸ ಮಾಡುವುದರಿಂದ ಭಾರತಕ್ಕೆ ಮಾತ್ರ ಲಾಭವಲ್ಲ, ಅಮೆರಿಕಕ್ಕೂ ದೊಡ್ಡ ಪ್ರಮಾಣದ ಪ್ರಯೋಜನವಿದೆ. ಹೀಗಿದ್ದೂ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಲಸೆ ನಿರ್ಬಂಧಿಸುವ ಕಠಿಣ ನಿಲುವಿಗೆ ಮುಂದಾಗಿದ್ದಾರೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಮ್ಮ ಚುನಾವಣಾ ಪ್ರಚಾರಗಳಲ್ಲಿ ಭರವಸೆ ನೀಡಿದಂತೆ, ಮೆಕ್ಸಿಕೋ ಗಡಿಗೆ ಗೋಡೆ ಕಟ್ಟುವ, ಅಮೆರಿಕಕ್ಕೆ ಕೆಲವು ಇಸ್ಲಾಮಿಕ್‌ ರಾಷ್ಟ್ರಗಳಿಂದ ವಲಸೆಯನ್ನು ನಿಯಂತ್ರಿಸುವ ಮತ್ತು ಎಚ್‌1ಬಿ ವೀಸಾ ಸಂಖ್ಯೆಯನ್ನು ಕಡಿತಮಾಡುವ ತಮ್ಮ ಮಹತ್ತರ ಮತ್ತು ಆದ್ಯತಾ ಕಾರ್ಯಸೂಚಿಯನ್ನು ಅಕ್ಷರಶಃ ಜಾರಿಗೊಳಿಸಲು ತಮ್ಮ ಅಧಿಕಾರದ ಮೊದಲವಾರದಿಂದಲೇ ಅರಂಭಿಸಿದ್ದಾರೆ. ಕೆಲವು ಇಸ್ಲಾಮಿಕ್‌ ದೇಶಗಳಿಂದ ವಲಸೆ ನಿಯಂತ್ರಿಸುವ ಕ್ರಮದ ವಿರುದ್ಧ ಪ್ರತಿಭಟನೆಯ ಕಹಳೆ ವಿಶ್ವಾದ್ಯಂತ ಮೊಳಗುತ್ತಿದ್ದಂತೆ, ನಿರುದ್ಯೋಗಿ ಅಮೆರಿಕನ್ನರನ್ನು ಸಮ್ಮೋಹನಗೊಳಿಸುವ ತಮ್ಮ “ಅಮೆರಿಕ ಅಮೆರಿಕನ್ನರಿಗೆ’ ಘೋಷಣೆಯನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ದಾಪುಗಾಲು ಇರಿಸಿದ್ದಾರೆ. ಅಮೆರಿಕ ಕಂಪೆನಿಗಳ ಹೊರಗುತ್ತಿಗೆ ಮತ್ತು ಎಚ್‌1ಬಿ ವೀಸಾ ನೀತಿ ಅಮೆರಿಕನ್‌ ಯುವಕರ ಹೊಟ್ಟೆಯ ಮೇಲೆ ತಣ್ಣೀರ ಪಟ್ಟಿ ಹಾಕುತ್ತಿದೆ ಎಂದು ತಮ್ಮ ಚುನಾವಣಾ ಪ್ರಚಾರದಲ್ಲಿ ಪದೇ ಪದೇ ಹೇಳುತ್ತಿದ್ದ ಡೊನಾಲ್ಡ್‌ ಟ್ರಂಪ್‌, ಅಧಿಕಾರ ಸ್ವೀಕಾರದ ಸಹಿಯ ಶಾಯಿ ಆರುವ ಮೊದಲೇ ಈ ನಿಟ್ಟಿನಲ್ಲಿ ಕಾರ್ಯ ತತ್ಪರರಾಗಿದ್ದಾರೆ ಎಂದರೆ ಅವರು ಈ ವಿಷಯದಲ್ಲಿ ಎಷ್ಟು ಗಂಭೀರರಾಗಿದ್ದರು, ಆಕ್ರೋಶಗೊಂಡಿದ್ದರು ಮತ್ತು ಕೆಲವು ರಾಜಕೀಯ ಪಂಡಿತರು ವಿಶ್ಲೇಷಿಸಿದಂತೆ ಅವರ ಹೇಳಿಕೆ ಕೇವಲ ಚುನಾವಣಾ ಸ್ಟಂಟ್‌ ಆಗಿರಲಿಲ್ಲ ಎನ್ನುವುದು ಗೊತ್ತಾಗುತ್ತದೆ. 

ಭಾರತೀಯ ಟೆಕ್ಕಿಗಳಿಗೆ ನಡುಕ
ಟ್ರಂಪ್‌ ಅವರ ಕ್ರಮ ಜಗತ್ತಿನಾದ್ಯಂತ ನಡುಕ ಹುಟ್ಟಿಸಿದ್ದು, ಭಾರತದಲ್ಲಿ ಅದು ಸುನಾಮಿಯಂತೆ ಅನುಭವ ಆಗುತ್ತಿದೆ. ಅಮೆರಿಕವನ್ನೇ ನೆಚ್ಚಿಕೊಂಡ ಭಾರತದ ಕಂಪೆನಿಗಳು ಅಘಾತಗೊಂಡಿವೆ. ಒಂದೇ ದಿನ ಟೆಕ್‌ ಕಂಪನಿಗಳ ಶೇರುಗಳ ಬೆಲೆ ದಲಾಲ್‌ ಸ್ಟ್ರೀಟ್‌ನಲ್ಲಿ ಶೇ.9ರಷ್ಟು ಬಿದ್ದದ್ದು, ಹೂಡಿಕೆದಾರರು 53,000 ಕೋಟಿ ಕಳೆದುಕೊಂಡಿದ್ದಾರಂತೆ. ಭಾರತೀಯ ಮೂಲದ ಸುಮಾರು 3.50 ಲಕ್ಷ ಟೆಕ್ಕಿಗಳು ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದು, ಅವರಲ್ಲಿ 10,000ಕ್ಕಿಂತ ಹೆಚ್ಚು ಟೆಕ್ಕಿಗಳು ಕರ್ನಾಟಕದವರು. ಇನ್ಫೋಸಿಸ್‌ ಮತ್ತು ಟಿಸಿಎಸ್‌ – ಈ ಎರಡು ಕಂಪೆನಿಗಳೇ 2005ರಿಂದ 2014ರ ಅವಧಿಯಲ್ಲಿ ಸುಮಾರು 86,000 ಟೆಕ್ಕಿಗಳನ್ನು ಅಮೆರಿಕಕ್ಕೆ ಕಳುಹಿಸಿರಬೇಕಾದರೆ, ಅಮೆರಿಕದಲ್ಲಿರುವ ಭಾರತೀಯ ಟೆಕ್ಕಿಗಳ ಒಟ್ಟು ಸಂಖ್ಯೆಯ ಅಂದಾಜಾಗಬಹುದು. ಅಮೆರಿಕ ಪ್ರತಿವರ್ಷ ನೀಡುವ ಎಚ್‌1ಬಿ ವೀಸಾಗಳಲ್ಲಿ ಸುಮಾರು ಶೇ.70 ವೀಸಾಗಳು ಭಾರತೀಯ ಟೆಕ್ಕಿಗಳ ಪಾಲಾಗುತ್ತವೆಯಂತೆ. ಕಳೆದ ವರ್ಷ ಭಾರತೀಯರು 1,10,000 ವೀಸಾಗಳನ್ನು ಪಡೆದಿದ್ದು, ಅವುಗಳಲ್ಲಿ ಇನ್ಫೋಸಿಸ್‌ 33,289, ಐಬಿಎಂ 16,553, ವಿಪ್ರೊ 12,220, ಆಕ್ಷೆಂಚರ್‌ 9,600, ಡೆಲೊಲೈಟ್‌ 7,600, ಎಚ್‌ಸಿಎಲ್‌ 6,110, ಐಗೇಟ್‌ 4,553, ಟೆಕ್‌ ಮಹೇಂದ್ರ 6,041 ಮತ್ತು ಮೈಕ್ರೋಸಾಫ್ಟ್ 4,575 ವೀಸಾಗಳನ್ನು ಪಡೆದಿವೆ. ಇನ್ಫೋಸಿಸ್‌ನ ಅಮೆರಿಕ ಶಾಖೆಯಲ್ಲಿ ಶೇ.60 ಉದ್ಯೋಗಿಗಳು ಎಚ್‌1ಬಿ ವೀಸಾದಡಿ ಕೆಲಸ ಮಾಡುತ್ತಾರಂತೆ. ಈ ಮಸೂದೆ ಜಾರಿಗೆ ಬಂದರೆ ಅಮೆರಿಕದಲ್ಲಿ ಉದ್ಯೋಗ ಹೊಂದಿರುವ ಲಕ್ಷಾಂತರ ಟೆಕ್ಕಿಗಳು ಉದ್ಯೋಗ ಕಳೆದುಕೊಳ್ಳುವ ಸಾಧ್ಯಡತೆ ಇದ್ದು, ಭಾರತೀಯ ಮಾಹಿತಿ ತಂತ್ರಜ್ಞಾನ ವಲಯಕ್ಕೆ ಲಕ್ವಾ ಹೊಡೆದಂತಾಗುತ್ತದೆ.

ಭಾರತಕ್ಕೆ ಬರುವ ವಿದೇಶೀ ಹಣದ ಹರಿವು ನಮ್ಮ ಜಿಡಿಪಿಯ ಶೇ.4ರಷ್ಟು ಇದೆ. ಇದರಲ್ಲಿ ಶೇ.26ರಷ್ಟು ಟೆಕ್ಕಿಗಳಿಂದ ಬರುತ್ತದೆ ಎನ್ನುವುದು ದೇಶದ ವಿದೇಶಿ ವಿನಿಮಯ ನಿರ್ವಹಿಸುವವರ ಮತ್ತು ಹಣಕಾಸು ಮಂತ್ರಾಲಯದ ನಿದ್ದೆಗೆಡಿಸಿದೆ. ಅಂತೆಯೇ ಇಂಥ ವಲಸೆ ನಿರ್ಬಂಧವನ್ನು ಭಾರತವು ಅಷ್ಟು ಹಗುರಾಗಿ ಪರಿಗಣಿಸುವಂತಿಲ್ಲ. ಭಾರತದಲ್ಲಿ ಈ ಸಾಫ್ಟ್ವೇರ್‌ ಸುಮಾರು 146.90 ಬಿಲಿಯನ್‌ ಡಾಲರ್‌ಗಳ ಉದ್ಯಮವಾಗಿದ್ದು, ಅದರಲ್ಲಿ ಶೇ.65 ನಿರ್ಯಾತವಾಗುತ್ತದೆ. ಈ ನಿರ್ಯಾತದಲ್ಲಿ ಸುಮಾರು ಶೇ.75 ಅಮೆರಿಕಕ್ಕೆ ಹೋಗುತ್ತದೆ. ಭಾರತೀಯ ಟೆಕ್‌ ಕಂಪೆನಿಗಳು 2011ರಿಂದ 2015ರ ಅವಧಿಯಲ್ಲಿ  ಅಮೆರಿಕದಲ್ಲಿ 22.5 ಬಿಲಿಯನ್‌ ಡಾಲರ್‌ನಷ್ಟು ದೊಡ್ಡ ಮೊತ್ತವನ್ನು ತೆರಿಗೆಯಾಗಿ ನೀಡಿವೆಯಲ್ಲದೆ, ಅಮೆರಿಕದಲ್ಲಿ ಸುಮಾರು 4,10,000 ಉದ್ಯೋಗ ಸೃಷ್ಟಿಗೆ ಸಹಾಯ ಮಾಡಿವೆ. ಹಾಗೆಯೇ ಅದೇ ಸಮುಯದಲ್ಲಿ 6.60 ಬಿಲಿಯನ್‌ ಡಾಲರ್‌ಗಳನ್ನು ಅಲ್ಲಿನ ಸೋಶಿಯಲ್‌ ಸೆಕ್ಯುರಿಟಿ ಫ‌ಂಡ್‌ಗೆ ನೀಡಿದ್ದು, ಇದು ಸುಮಾರು 1,20,000 ಜನರಿಗೆ ಅಗತ್ಯ ಸಹಾಯಕ್ಕೆ ನೆರವಾಗಿದೆ. ವೀಸಾ ಶುಲ್ಕದ ಮೂಲಕವೇ 375 ಮಿಲಿಯನ್‌ ಡಾಲರ್‌ಗಳನ್ನು ಅಮೆರಿಕ ಗಳಿಸಿದ್ದು ಬೇರೆ ಮಾತು. ಇವೆಲ್ಲವನ್ನೂ ಮರೆತು ಅಥವಾ ನಿರ್ಲಕ್ಷಿಸಿ ಟ್ರಂಪ್‌ ಈ ಹೆಜ್ಜೆ ಇಟ್ಟಿದ್ದೇಕೆ?

ಟ್ರಂಪ್‌ ಕಾಠಿಣ್ಯಕ್ಕೆ ಕಾರಣ ಏನು?
ಕೆಲವು ವಿಶ್ಲೇಷಕರ ಪ್ರಕಾರ, ಅಮೆರಿಕದ ಡಿಸ್ನಿ ವರ್ಲ್ಡ್ ಕಂಪೆನಿಯಲ್ಲಿ  250 ಮಂದಿ ಅಮೆರಿಕನ್‌ ಸಿಬಂದಿಯನ್ನು ಮನೆಗೆ ಕಳುಹಿಸಿ ಹೊರಗಿನವರನ್ನು (ಮುಖ್ಯವಾಗಿ ಭಾರತೀಯರನ್ನು) ಕಡಿಮೆ ಸಂಬಳಕ್ಕೆ ನೇಮಕ ಮಾಡಿಕೊಳ್ಳಲಾಗಿದೆ ಮತ್ತು ಈ ತಾರತಮ್ಯದ ವಿರುದ್ಧ ಇಬ್ಬರು ಅಮೆರಿಕನ್‌ ಸಿಬಂದಿ ದಾಖಲಿಸಿದ ದಾವೆಯ ಬಗೆಗೆ ಟ್ರಂಪ್‌ ಚುನಾವಣಾ ಪ್ರಚಾರ ಸಮಯದಲ್ಲಿ ಆಗಾಗ ಉಲ್ಲೇಖೀಸುತ್ತಿದ್ದರು. ಭಾರತದ ಎರಡು ಟೆಕ್‌ ಕಂಪೆನಿಗಳು ಈ ನಿಟ್ಟಿನಲ್ಲಿ ಕ್ಲಾಸ್‌ ಆ್ಯಕ್ಷನ್‌ ಲಾ ಸ್ಯೂಟ್‌ ಎದುರಿಸುತ್ತಿವೆಯಂತೆ. ಹಾಗೆಯೇ ಪ್ರಧಾನಿ ಮೋದಿಯವರ ಮೇಕ ಇನ್‌ ಇಂಡಿಯಾ ಕೂಡ ಅವರನ್ನು ಇಂಥ ಹೆಜ್ಜೆಗಳಿಗೆ ಪ್ರೇರೇಪಿಸಿದೆ ಎಂದು ಹೇಳಲಾಗುತ್ತಿದೆ. ಭಾರತದ ಉತ್ಪನ್ನಗಳಿಗೆ ಶೇ.35 ತೆರಿಗೆಯನ್ನು ವಿಧಿಸುವ ಚಿಂತನೆಯೂ ಟ್ರಂಪ್‌ ಅವರಿಗೆ ಇದೆಯಂತೆ.

ಡೊನಾಲ್ಡ್‌ ಟ್ರಂಪ್‌ ಎಚ್‌1ಬಿ ವಲಸೆ ನಿರ್ಬಂಧಿಸುವುದಾಗಿ ಹೇಳಿಲ್ಲ. ಆದರೆ ತಮ್ಮ ಕ್ರಮಗಳಿಂದ ಅದು ಸುಲಭವಾಗಿ ದೊರಕದಂತೆ ಮಾಡಿದ್ದಾರೆ. 1989ರಿಂದ ಈ ವೀಸಾ ಪಡೆಯಲು ಉದ್ಯೋಗಿಗೆ ಕನಿಷ್ಟ ವೇತನ 60,000 ಡಾಲರ್‌ (40 ಲಕ್ಷ ರೂ.) ಇರಬೇಕಾಗಿತ್ತು. ಇದನ್ನು 1,30,000 ಡಾಲರ್‌ (88 ಲಕ್ಷ ರೂ.)ಗಳಿಗೆ ಏರಿಸಿದ್ದು ಜಾಣ್ಮೆಯ ನಡೆ ಎನ್ನಬಹುದು. ಒಂದು ವೀಸಾ ಮಂಜೂರಿಗೆ ಅಮೆರಿಕ 7 ಲಕ್ಷ ರೂ. ಶುಲ್ಕ ವಸೂಲು ಮಾಡುತ್ತಿರುವುದು ಬೇರೆ ವಿಚಾರ. ಒಂದು ವೇಳೆ ಈ ಮಸೂದೆ ಪಾಸಾದರೆ, ಭಾರತೀಯ ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ಈ ಮಟ್ಟದ ಸಂಬಳವನ್ನು ಕೊಡಬಹುದೇ? ಭಾರತೀಯ ಟೆಕ್‌ ಕಂಪೆನಿಗಳು ಈ ಹಣಕಾಸು ಹೊರೆಯನ್ನು ಭರಿಸಬಹುದೇ? ಹಾಗೆಯೇ ವೀಸಾ ಪಡೆಯಲು ಸ್ನಾತಕೋತ್ತರ ಪದವಿ ಕಡ್ಡಾಯ ಮಾಡುವ ಪ್ರಯತ್ನವೂ ಅಡ್ಡಿ ಸೃಷ್ಟಿಸುವ ಇನ್ನೊಂದು ಜಾಣತನದ ಪ್ರಯತ್ನ ಎನ್ನಬಹುದು. ಎಚ್‌1ಬಿ ವೀಸಾದವರ ಕುಟುಂಬಕ್ಕೂ ನಿರ್ಬಂಧ ವಿಧಿಸಲು ಪ್ರಯತ್ನಿಸುತ್ತಿರುವುದು ಬೇರೆ ವಿಚಾರ. ಸುಮಾರು ಶೇ.20 ವೀಸಾಗಳನ್ನು ಹೊಸ ಕಂಪೆನಿಗಳಿಗೆ ಮತ್ತು ಸ್ಟಾರ್ಟ್‌ಅಪ್‌ಗ್ಳಿಗೆ ಮೀಸಲಾಗಿ ಇರಿಸಲಾಗಿದ್ದು, ಇದು ಹಳೆಯ ಮತ್ತು ದೊಡ್ಡ ಕಂಪೆನಿಗಳಿಗೆ ಭಾರೀ ಹೊಡೆತ ಎನ್ನಬಹುದು. ಅದಕ್ಕೂ ಮಿಗಿಲಾಗಿ, ಅಮೆರಿಕದಲ್ಲಿ ವ್ಯಾಸಂಗ ಮಾಡುವ ಭಾರತೀಯ ವಿದ್ಯಾರ್ಥಿಗಳು ಕೋರ್ಸ್‌ ಮುಗಿದ ಮೇಲೆ ಕೆಲವು ಕಾಲ ಅಲ್ಲಿಯೇ ತಂಗಬಹುದಿತ್ತು. ಆದರೆ, ಇನ್ನು ಆ ಅವಕಾಶ ಕೂಡ ಇರುವುದಿಲ್ಲ.

ಅಮೆರಿಕದ ಮೇಲೆ ಪರಿಣಾಮ ಏನು?
ಭಾರತದ ಟೆಕ್‌ ಕಂಪೆನಿಗಳ ಅಮೆರಿಕನ್‌ ಗ್ರಾಹಕರಿಗೆ ಇದರಿಂದ ತೊಂದರೆಯಾಗುತ್ತದೆ. ಭಾರತದ ಟೆಕ್ಕಿಗಳಿಗೆ ಹೋಲಿಸಿದರೆ ಅಮೆರಿಕನ್‌ ಟೆಕ್ಕಿಗಳ ಉತ್ಪಾದಕತೆ ಕಡಿಮೆ. ಅಲ್ಲದೆ, ಅಮೆರಿಕದಲ್ಲಿ ಅನುಭವಿ ಟೆಕ್ಕಿಗಳ ತೀವ್ರ ಕೊರತೆ ಇದೆ. ಹೊಸ ನಿಯಮಾವಳಿಯಂತೆ ಭಾರತೀಯ ಟೆಕ್ಕಿಗಳಿಗೆ 1,50,000 ಡಾಲರ್‌ ವೇತನ ನೀಡಿದರೆ, ಅಮೆರಿಕನ್‌ ಟಿಕ್ಕಿಗಳಿಗೆ ಇನ್ನೂ ಹೆಚ್ಚು ವೇತನ ನೀಡಬೇಕಾಗುತ್ತದೆ. ಇಂಥ ವೇತನ ನೀಡಲು ಸಾಧ್ಯವೇ?

ಭಾರತಕ್ಕೆ ಏನಾದರೂ ಅನುಕೂಲ ಇದೆಯೇ?
ಟ್ರಂಪ್‌ ಅವರ ನೀತಿಯಿಂದ ಹೆಚ್ಚು ಹೆಚ್ಚು ಟೆಕ್ಕಿಗಳು, ಸ್ಟಾರ್ಟ್‌ ಅಪ್‌ಗ್ಳಿಗೆ ಉತ್ತೇಜನ ಸಿಗಬಹುದು.ಅಮೆರಿಕದಲ್ಲಿ ಅನುಭವಿ ಉದ್ಯೋಗಿಗಳ ಕೊರತೆ ಉಂಟಾಗುವುದರಿಂಧ ಭಾರತಕ್ಕೆ ಹೆಚ್ಚಿನ ಹೊರಗುತ್ತಿಗೆ ದೊರಕಲಿದೆ. ಇದು ಬರಿಯ ಆಶಾವಾದವಾಗಿ ಉಳಿಯುವುದೋ ಅಥವಾ ನನಸಾಗುವುದೋ ಎನ್ನುವುದನ್ನು ಕಾದು ನೋಡಬೇಕಾಗಿದೆ. ಐಟಿ ದಿಗ್ಗಜರೊಬ್ಬರ ಪ್ರಕಾರ ಇನ್ನು ಹತ್ತು ವರ್ಷಗಳಲ್ಲಿ ಪ್ರಸ್ತಾವಿತ ಅಟೋಮೇಷನ್‌ ಶೇ.69 ಉದ್ಯೋಗಗಳನ್ನು ಬಲಿ ತೆಗೆದುಕೊಳ್ಳಲಿದ್ದು, ಸಾಫ್ಟ್ವೇರ್‌ ಟೆಕ್ಕಿಗಳೇ ಇದಕ್ಕೆ ಮೊದಲ ಬಲಿ ಆಗಬಹುದು, 20 ಕೋಟಿ ಯುವ ಭಾರತೀಯರು ನಿರುದ್ಯೋಗಿಗಳಾಗಬಹುದು. ಇದು 2ರಿಂದ 2.25 ಲಕ್ಷ ಹೆಚ್ಚುವರಿ ಉದ್ಯೋಗಗಳಿಗೆ ರೆಡ್‌ ಸಿಗ್ನಲ್‌ ತೋರಿಸುವುದರೊಂದಿಗೆ 2.25 ಲಕ್ಷ ಮಧ್ಯಮ ದರ್ಜೆಯ ಉದ್ಯೋಗಗಳನ್ನು ಕಡಿಮೆ ಮಾಡಲಿದೆ. ಈ ಭೀತಿ ಇರುವಾಗಲೇ ಡೊನಾಲ್ಡ್‌ ಟ್ರಂಪ್‌ ಗಾಯದ ಮೇಲೆ ಬರೆ ಎಳೆಯುತ್ತಿರುವುದು ತೀರಾ ವಿಷಾದನೀಯ.

ಡೊನಾಲ್ಡ್‌ ಟ್ರಂಪ್‌ ಅವರ ನಿಲುವು ನಮ್ಮ ದೇಶಕ್ಕೆ ಮಾರಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಯಾವುದೇ ರಾಷ್ಟ್ರವೂ ತನ್ನ ದೇಶದ ಮತ್ತು ತನ್ನ ಜನತೆಯ ಹಿತಾಸಕ್ತಿಯನ್ನು ರಕ್ಷಿಸಬೇಕಾದರೆ ಇಂಥ ಕ್ರಮಗಳು ಕೈಕೊಳ್ಳುವುದು ಅನಿವಾರ್ಯ ಎನ್ನುವ ಕೆಲವು ವಿಶ್ಲೇಷಕರ ಅಭಿಪ್ರಾಯದಲ್ಲಿ ಅರ್ಥವಿಲ್ಲದಿಲ್ಲ. ಸ್ಥಳೀಯರನ್ನು ಕಡೆಗಣಿಸಿ ಹೊರಗಿನವರಿಗೆ ಮಣೆ ಹಾಕಲು ಅಮೆರಿಕ ನಮ್ಮ ಕರ್ನಾಟಕವಲ್ಲವಲ್ಲ! ಅದಕ್ಕೂ ಮಿಗಿಲಾಗಿ, ಮಣ್ಣಿನ ಮಕ್ಕಳು ಎಂಬ ಭಾವನೆ ನಮ್ಮಲ್ಲೇ ತುಂಬಿ ತುಳುಕುತ್ತಿರುವಾಗ ಈ ಧೋರಣೆಯನ್ನು ವಿರೋಧಿಸುವ ನೈತಿಕ ಹಕ್ಕು ನಮಗಿದೆಯೇ? 

– ರಮಾನಂದ ಶರ್ಮಾ, ಬೆಂಗಳೂರು

ಟಾಪ್ ನ್ಯೂಸ್

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!

snehamayi krishna

Snehamayi Krishna ವಿರುದ್ಧ ಕಾಂಗ್ರೆಸ್‌ನಿಂದ ಪೊಲೀಸರಿಗೆ ಮತ್ತೊಂದು ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

ರಾಜ್ಯದಲ್ಲಿ ಇನ್ನೊಂದು ಪಕ್ಷದ ಸರ್ಕಾರವಿದ್ದಾಗ ಈ ರಾಜ್ಯಪಾಲರುಗಳು‎ ತುಂಬಾ ಆತಂತ್ರ ಸ್ಥಿತಿ

ಮುಡಾ: ಸಿದ್ದು ವಿರುದ್ಧ ರಾಜ್ಯಪಾಲರ prosecution ಅನುಮತಿ ಸಿಎಂ ಸ್ಥಾನಕ್ಕೆ ಮುಳುವಾಗಬಹುದೇ?

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.