ತೃತೀಯ ಲಿಂಗಿಗಳ ಮುಖ್ಯವಾಹಿನಿಗೆ ತಂದ ಸ್ವೀಪ್
Team Udayavani, Apr 28, 2018, 6:00 AM IST
ತೃತೀಯ ಲಿಂಗಿಗಳ ವಿಳಾಸ ದೃಢೀಕರಣವೇ ಅಧಿಕಾರಿಗಳಿಗೆ ದೊಡ್ಡ ಸಮಸ್ಯೆಯಾಗಿತ್ತು. ಈ ಬಾರಿ ಅವರ ಸಮುದಾಯದ ಸಂಘಟನೆಯು ಇಂತಹವರು ನಮ್ಮ ಸಂಘಟನೆಯ ಸದಸ್ಯರು ಎಂದು ಪತ್ರ ಕೊಟ್ಟರೆ ಅವರನ್ನು ಮತದಾರರ ಪಟ್ಟಿಯಲ್ಲಿ ನೊಂದಾಯಿಸುವ ಕ್ರಮವನ್ನು ಆಯೋಗ ಅಳವಡಿಸಿ ಕೊಂಡಿತು.
ಭಾರತದ ಪ್ರಜಾಪ್ರಭುತ್ವದ ಸೌಂದರ್ಯ ಇರುವುದು ಇಲ್ಲಿ ಎಲ್ಲರಿಗೂ ಲಭ್ಯ ಇರುವ ಮುಕ್ತ ಅವಕಾಶದಿಂದಾಗಿ. ರಾಜಕೀಯ ವ್ಯವಸ್ಥೆಯನ್ನು ಒಮ್ಮೆ ಅವಲೋಕಿಸಿದರೆ ಇಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿ ದೇಶದ ಆಡಳಿತದ ಚುಕ್ಕಾಣಿ ಹಿಡಿದ ಉದಾಹರಣೆಗಳು ಸಿಗುತ್ತವೆ. ಇದು ಸಾಧ್ಯವಾಗಿರುವುದು ಭಾರತದ ಚುನಾವಣಾ ವ್ಯವಸ್ಥೆಯಿಂದಾಗಿ. ಮನುಷ್ಯ ನಿರ್ಮಿತ ಆದರೆ ಶಾಶ್ವತ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿರುವ ಭಾರತದ ಸಂವಿಧಾನ ಒದಗಿಸಿರುವ ಮತದಾನದ ಹಕ್ಕು ಯಾರಲ್ಲೂ ಭೇದ ಮಾಡುವುದಿಲ್ಲ. ದೇಶದ ಸರ್ವೋ ಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ ಮತಕ್ಕೂ ರೈತನ ಮತಕ್ಕೂ ಒಂದೇ ಮೌಲ್ಯ. ಒಂದು ಮತದ ಅಂತರದಿಂದ ಗೆದ್ದರೂ ಅದು ಗೆಲುವೇ, ಒಂದು ಮತದ ಅಂತರದಿಂದ ಸೋತರೂ ಅದು ಸೋಲೇ. ಆ ಒಂದು ಮತ ಸಮಾಜದ ಯಾವ ವರ್ಗದಿಂದ ಬಂದಿದೆ, ಆ ವ್ಯಕ್ತಿಯ ಹುದ್ದೆ ಏನು ಎಂಬಿತ್ಯಾದಿ ಪ್ರವರಗಳು ಗಣನೆಗೆ ಬರುವುದಿಲ್ಲ. ಅಷ್ಟರ ಮಟ್ಟಿಗೆ ಸಮಾನತೆಯ ಗೆರೆಯನ್ನು ಸಂವಿಧಾನ ಬಹಳ ನೀಟಾಗಿ ಹಾಕಿದೆ.
ಭಾರತದ ಪ್ರಜಾತಂತ್ರ ವ್ಯವಸ್ಥೆಯ ಜೀವಾಳವಾದ ಪ್ರತಿನಿಧಿಗಳ ಆಯ್ಕೆಯಲ್ಲಿ ಜನರ ಸಹಭಾಗಿತ್ವದ ಪ್ರಮಾಣ ಕಡಿಮೆ ಆಗುತ್ತಿದೆ ಎಂಬ ಕಳವಳಕಾರಿ ಅಂಶದ ಹಿನ್ನೆಲೆಯಲ್ಲಿ ಭಾರತದ ಚುನಾವಣಾ ಆಯೋಗ ಸ್ವೀಪ್ ಕಾರ್ಯಕ್ರಮವನ್ನು ಅನುಷ್ಠಾನ ಮಾಡುತ್ತಿದೆ. ಅರ್ಹ ಮತದಾರರನ್ನು ಮತಗಟ್ಟೆಗೆ ಬರುವಂತೆ ಮಾಡುವ ನಿಟ್ಟಿನ ಈ ಕಾರ್ಯಕ್ರಮ ಈಗ ಒಂದೊಂದು ಜಿಲ್ಲೆಗಳಲ್ಲಿ ಬಹಳ ಸೃಜನಶೀಲ ರೀತಿಯಲ್ಲಿ ಅನುಷ್ಠಾನಗೊಳ್ಳುತ್ತಿದೆ. ಕರಾವಳಿ ಯಲ್ಲಿ ಇದಕ್ಕೆ ಯಕ್ಷಗಾನವನ್ನು ಬಳಸಿಕೊಳ್ಳಲಾಗಿದೆ. ದೋಣಿಗಳಲ್ಲಿ ತೆರಳಿ ಜಾಗೃತಿ ಅಭಿಯಾನ ಒಂದು ಉತ್ತಮ ಪರಿಕಲ್ಪನೆ. ಜತೆಗೆ ಮತದಾರರ ನೋಂದಣಿಗೆ ಕೈಗೊಂಡ ಮಿಂಚಿನ ನೋಂದಣಿ ಅಭಿಯಾನ ಮತದಾರರಿಗೆ ಒದಗಿಸಿಕೊಟ್ಟ ಒಂದು ಸುಲಭ ಬಳಕೆಯ ಅವಕಾಶ. ಈ ಸ್ವೀಪ್ ಈಗ ಸಮಾಜದ ಅಂಚಿನಲ್ಲಿರುವ ಮತ್ತು ತಮ್ಮದೇ ಸಮುದಾಯವನ್ನು ಕಟ್ಟಿಕೊಂಡು ಬದುಕುತ್ತಿ ರುವ ತೃತೀಯ ಲಿಂಗಿಗಳನ್ನು ಮುಖ್ಯವಾಹಿನಿಗೆ ತರುವ ಕೆಲಸವನ್ನು ಪರೋಕ್ಷವಾಗಿ ಮಾಡುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೃತೀಯ ಲಿಂಗಿಗಳ ಬಗ್ಗೆ ಅಧಿಕೃತ ಗಣತಿ ದತ್ತಾಂಶ ಲಭ್ಯವಿಲ್ಲ. ಅನೇಕರು ತಾವು ಇಂತಹ ವರ್ಗಕ್ಕೆ ಸೇರಿದವರೆಂದು ಸಾರ್ವ ಜನಿಕವಾಗಿ ಗುರುತಿಸಿಕೊಳ್ಳುವುದಕ್ಕೆ ಹಿಂಜರಿಯುತ್ತಿರುವುದು ಇದಕ್ಕೆ ಒಂದು ಕಾರಣ. ಆದರೆ ನಗರಗಳಿಗೆ ಬಂದು ಬದುಕುತ್ತಿ ರುವವರು ತಾವು ಗಂಡೂ ಅಲ್ಲ ಹೆಣ್ಣೂ ಅಲ್ಲ ಎಂದು ಸಾರ್ವ ಜನಿಕವಾಗಿ ಪ್ರಕಟಿಸಿಕೊಳ್ಳುವುದರ ಮೂಲಕ ತಮ್ಮದೇ ಸಮುದಾಯ ಕಟ್ಟಿಕೊಂಡಿ¨ªಾರೆ. ಈ ಸಮುದಾಯಕ್ಕೆ ಮತದಾರರ ಗುರುತಿನ ಚೀಟಿ ಒದಗಿಸುವುದಕ್ಕೆ ಇದ್ದ ದೊಡ್ಡ ತೊಡಕೆಂದರೆ ಅವರಿಗೊಂದು ಶಾಶ್ವತ ವಿಳಾಸ ಇಲ್ಲದಿರುವುದು. ಈ ಬಾರಿ ದಕ್ಷಿಣ ಕನ್ನಡ ಜಿಲ್ಲಾ ಸ್ವೀಪ್ ಸಮಿತಿ ಆರು ತಿಂಗಳು ಒಂದೇ ಸ್ಥಳದಲ್ಲಿ ವಾಸವಾಗಿರುವವರು ಮತದಾರರ ಗುರುತಿನ ಕಾರ್ಡ್ ಹೊಂದಲು ಅರ್ಹರು ಎಂಬ ನಿಯಮವನ್ನು ಅನ್ವಯಿ ಸಿಕೊಂಡು, ಅಧಿಕಾರಿಗಳು ತೃತೀಯ ಲಿಂಗಿಗಳು ವಾಸವಾಗಿರುವ ಬಾಡಿಗೆ ಮನೆಗಳು, ಲಾಡ್ಜ್ಗಳಿಗೆ ತೆರಳಿ ಅವರ ವಿಳಾಸ ದೃಢೀಕರಣ ನಡೆಸಿ ಮತದಾರರನ್ನಾಗಿ ನೊಂದಾಯಿಸಿಕೊಂಡಿದ್ದಾರೆ. ಇದರ ಪರಿಣಾಮ 45 ಮಂದಿ ತೃತೀಯ ಲಿಂಗಿಗಳು ಮುಖ್ಯವಾಹಿನಿಗೆ ಬರುವಂತಾಗಿದೆ.
ಚುನಾವಣಾ ಆಯೋಗ ಇಷ್ಟೆಲ್ಲ ಕಾರ್ಯಕ್ರಮಗಳನ್ನು ಕೈಗೊಂಡರೂ ಹಳ್ಳಿಗಳ ಮತದಾರರಷ್ಟು ನಗರಗಳ ಮತದಾರರು ಮತಗಟ್ಟೆಗೆ ಬರುವಲ್ಲಿ ಏಕೆ ಹಿಂದೇಟು ಹಾಕುತ್ತಾರೆ ಎಂಬುದರ ಬಗ್ಗೆ ಒಂದು ವ್ಯವಸ್ಥಿತ ಅಧ್ಯಯನ ಆಗಿಲ್ಲ. ಕರಾವಳಿ ಜಿಲ್ಲೆಗಳಲ್ಲಿ
ಈ ಹಿಂದಿನ ಚುನಾವಣೆಗಳಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶಗಳಲ್ಲಿ ಶೇಖಡಾವಾರು ಹೆಚ್ಚಿನ ಪ್ರಮಾಣದ ಮತದಾನ ವಾಗಿರುವುದನ್ನು ಅಂಕಿಅಂಶಗಳು ಹೇಳುತ್ತಿವೆ. ಈ ಸ್ಥಿತಿಯನ್ನು ಬದಲಾಯಿಸುವ ನಿಟ್ಟಿನ ಹೆಜ್ಜೆಯೇ ಸ್ವೀಪ್, ಆರ್ಥಾತ್ ಮತ ದಾರರ ವ್ಯವಸ್ಥಿತ ಶಿಕ್ಷಣ ಮತ್ತು ಮತದಾನ ಪಾಲ್ಗೊಳ್ಳುವಿಕೆ. ಈ ಸ್ವೀಪ್ ತನ್ನ ಪ್ರಚಾರ ಸಾಮಗ್ರಿಗಳಲ್ಲಿ ತೃತೀಯ ಲಿಂಗಿಗಳ ಭಾವಚಿತ್ರಗಳನ್ನು ಬಳಸಿಕೊಳ್ಳುವ ಮೂಲಕ ಅವರ ಹಕ್ಕನ್ನು ಪ್ರಚುರಪಡಿಸಿದೆ. ಇದು ಈಗ ತೃತೀಯಲಿಂಗಿಗಳಲ್ಲಿ ತಮ್ಮ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ.
ವ್ಯಾಪಕ ಪ್ರಚಾರದಿಂದ ಮತದಾನದ ಮಹತ್ವ ಜನರಿಗೆ ಮನದಟ್ಟಾಗಿದೆ. ಪ್ರಮುಖ ಸ್ಥಳಗಳಲ್ಲಿ ಹಾಕಿರುವ ಮತದಾನದ ಮಹತ್ವ ಸಾರುವ ಫಲಕಗಳು ಆ ಹಾದಿಯಲ್ಲಿ ಸಾಗುವ ಸಾವಿರಾರು ಕಣ್ಣುಗಳ ಗಮನಕ್ಕೆ ಬರುತ್ತಿವೆ. ಈ ಬಾರಿ ಮತದಾನದ ಪ್ರಮಾಣ ಶೇ.75 ದಾಟಬೇಕು ಎಂಬ ಗುರಿಯನ್ನಿಟ್ಟುಕೊಂಡು ಸ್ವೀಪ್ ಕಾರ್ಯನಿರ್ವಹಿಸುತ್ತಿದೆ. ಆಯೋಗದ ಅಂಕಿಅಂಶಗಳ ಪ್ರಕಾರ 2013ರ ವಿಧಾನಸಭಾ ಚುನಾವಣೆಯಲ್ಲಿ ಮತಗಟ್ಟೆಗೆ ಬಂದ ಮತದಾರರ ಪ್ರಮಾಣ ಶೇ. 71.45 ಆಗಿತ್ತು. ನಗರ ಪ್ರದೇಶದಲ್ಲಿ ಬರೇ ಶೇ. 50 ಆಗಿತ್ತು.
ನಮ್ಮ ಚುನಾವಣಾ ವ್ಯವಸ್ಥೆಯ ಬಗ್ಗೆ ಅಧ್ಯಯನ ಮಾಡಿರುವ ಓರ್ನಿತ್ ಶಾನಿ ಎಂಬವರು ಭಾರತ ಹೇಗೆ ಪ್ರಜಾಪ್ರಭುತ್ವ ವಾದಿ ಯಾಯಿತು ಎಂಬ ಚರ್ಚೆಯನ್ನೆತ್ತಿಕೊಂಡು ಬರೆದಿರುವ ಪುಸ್ತಕ ಅನೇಕ ಆಸಕ್ತಿಯ ಅಂಶಗಳನ್ನು ಒಳಗೊಂಡಿದೆ. ಅವರು ಹೇಳು ತ್ತಾರೆ ಭಾರತದ ಸಂವಿಧಾನ ಜಾರಿಗೆ ಬರುವುದಕ್ಕೆ ಮೊದಲೇ ಇಲ್ಲಿ ಮತದಾರರ ಕರಡು ಪಟ್ಟಿ ತಯಾರಾಗಿತ್ತು. ಆದ್ದರಿಂದ ಭಾರತೀ ಯರು ಮತದಾರರಾಗುವುದಕ್ಕೆ ಮೊದಲೇ ಪೌರರಾಗಿ ದ್ದರು (ಸಿಟಿಜನ್). ಚುನಾವಣಾ ಆಯೋಗವಿನ್ನೂ ಅಸ್ತಿತ್ವಕ್ಕೆ ಬಂದಿ ರದ ಆ ಕಾಲದಲ್ಲಿ ಮತದಾರರ ನೋಂದಣಿ ಜವಾಬ್ದಾರಿಯನ್ನು ಸಂವಿಧಾನ ರಚನಾ ಸಭೆಯ ಸಚಿವಾಲಯ ನಿರ್ವಹಿಸುತ್ತಿತ್ತು.
ಸ್ವತಂತ್ರ ಭಾರತದ ಮಹಿಳೆ ಇಂದು ತನ್ನ ಹೆಸರಿನಲ್ಲಿಯೇ ಮತ ದಾರರ ಚೀಟಿಯನ್ನು ಪಡೆಯುತ್ತಿದ್ದರೆ ಅದರ ಹಿಂದೆ ಸುದೀರ್ಘ ಪ್ರಯಾಣದ ಕಥೆ ಇದೆ. 1947ಕ್ಕೆ ಮೊದಲು ಹೆಣ್ಣು ಮಕ್ಕಳು ಇಂತಹವರ ಪತ್ನಿ ಅಥವಾ ಇಂತಹವರ ಮಗಳು ಎಂಬ ಹೆಸರಿ ನೊಂದಿಗೆ ಗುರುತಿಸಿಕೊಳ್ಳಬೇಕಾಗಿತ್ತು. ವಸಾಹತುಶಾಹಿ ಆಡಳಿತ ದಲ್ಲಿದ್ದ ಈ ಸಂಪ್ರದಾಯ ಸ್ವಾತಂತ್ರÂ ಸಿಕ್ಕಿದ ಬಳಿಕ ಬದಲಾಯಿತು. ಇಂತಹವರ ಪತ್ನಿ ಅಥವಾ ಮಗಳು ಎಂದು ಗುರುತಿಸಿಕೊಳ್ಳ ಬೇಕಾಗಿಲ್ಲ ಅವರದೇ ಹೆಸರಿನಲ್ಲಿ ಅವರು ಮತದಾರರ ಪಟ್ಟಿಗೆ ನೊಂದಾಯಿಸಿಕೊಳ್ಳಬಹುದು ಎಂದು ಸರಕಾರ ಸಾರಿತು. ಆರಂಭದ ಹಂತದಲ್ಲಿ ವಯಸ್ಸು ಕೇಳಿಕೊಂಡು ದಾಖಲೆ ಮಾಡು ವುದು ಸಮಸ್ಯೆಯಾಗಿತ್ತು. ಪ್ರಜಾಪ್ರಭುತ್ವದ ಹಾದಿ ಆ ಎಲ್ಲ ಅಡೆತಡೆಗಳನ್ನು ದಾಟಿ ಬಂದಿದೆ. ಈಗ ಗಂಡು ಮತ್ತು ಹೆಣ್ಣು ವರ್ಗದಲ್ಲಿ ಬಾರದ ತೃತೀಯ ಲಿಂಗಿಗಳಿಗೆ ಪ್ರತ್ಯೇಕ ಕಾಲಂ ನಮೂದಿಸಿ ಮತದಾರರ ಗುರುತಿನ ಕಾರ್ಡ್ ನೀಡಿ ಅವರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಪ್ರಜಾಪ್ರಭುತ್ವವನ್ನು ಬಲಗೊಳಿಸುವ ನಿಟ್ಟಿನಲ್ಲಿ ಒಂದು ದೃಢ ಹೆಜ್ಜೆ.
ಹೀಗೆ ಗುರುತಿನ ಕಾರ್ಡ್ ಪಡೆದವರೊಬ್ಬರು ಅದನ್ನು ತೋರಿಸುತ್ತ ನಾನಿನ್ನು ಈ ದೇಶದ ಪೌರ ಎನ್ನುವುದಕ್ಕೆ ಇದೊಂದು ದಾಖಲೆ, ನಾನು ಈ ಬಾರಿ ಮತ ಚಲಾಯಿಸುತ್ತೇನೆ. ನನಗೆ 28 ವರ್ಷವಾಗಿದ್ದರೂ ಮತದಾನ ಮಾಡುತ್ತಿರುವುದು ಇದೇ ಮೊದಲು ಎಂದರು. ಹೊಸ ಮತದಾರರು ತಮ್ಮ ಹಕ್ಕನ್ನು ಚಲಾಯಿಸುವ ಬಗ್ಗೆ ಉತ್ಸುಕರಾಗಿರುತ್ತಾರೆ. ಅವರಿಗೆ ಇದೊಂದು ಹೊಸ ಜವಾಬ್ದಾರಿ. ಹೊಸದಾಗಿ ದೊರಕಿರುವ ಈ ಹಕ್ಕನ್ನು ಚಲಾಯಿಸಲು ಈ ಸಮುದಾಯ ಉತ್ಸುಕವಾಗಿದೆ.
ಈಗ ಲಭ್ಯ ಇರುವ ಅಂಕಿಅಂಶಗಳ ಪ್ರಕಾರ ಕರ್ನಾಟಕದ ಒಟ್ಟು ಮತದಾರರ ಸಂಖ್ಯೆ 4.96 ಕೋಟಿ ಈ ಪೈಕಿ ತೃತೀಯ ಲಿಂಗಿಗಳ ಸಂಖ್ಯೆ 4,552. 2013ರ ವಿಧಾನಸಭಾ ಚುನಾವಣೆಯಲ್ಲಿ ಈ ವರ್ಗದ ಮತದಾರರ ಸಂಖ್ಯೆ 2,100 (ಕರ್ನಾಟಕ ಚುನಾವಣಾ ಆಯೋಗ ಮಾ.27ರಂದು ಒದಗಿಸಿದ ಅಂಕಿ ಅಂಶ). ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2013ರ ಚುನಾವಣೆಯಲ್ಲಿ ತೃತೀಯ ಲಿಂಗಿಗಳೆಂದು ಗುರುತಿಸಿಕೊಂಡು ಮತದಾರರ ಕಾರ್ಡ್ ಪಡೆದವರು ಯಾರೂ ಇರಲಿಲ್ಲ. ಈ ಬಾರಿ 41 ಮಂದಿ ತೃತೀಯ ಲಿಂಗಿಗಳು ಮತದಾರರ ಪಟ್ಟಿಯಲ್ಲಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 19 ಮಂದಿ ಈ ವರ್ಗದಲ್ಲಿ ನೊಂದಾಯಿಸಿಕೊಂಡಿದ್ದಾರೆ. ಅಂತಿಮ ಪಟ್ಟಿ ಪ್ರಕಟಗೊಳ್ಳುವಾಗ ಈ ಸಂಖ್ಯೆಗಳಲ್ಲಿ ಸ್ವಲ್ಪ ಪ್ರಮಾಣದ ಏರಿಕೆ ಆಗುವ ಸಾಧ್ಯತೆ ಇದೆ.
ಕಾರ್ಡ್ ನೀಡಲು ತೊಂದರೆ ಏನು?
ತೃತೀಯ ಲಿಂಗಿಗಳಿಗೆ ಖಾಯಂ ವಾಸಸ್ಥಾನ ಎಂಬುದಿಲ್ಲ. ನಗರ ಪ್ರದೇಶಗಳಲ್ಲಿ ಅವರು ಗುಂಪಾಗಿ ವಸತಿ ಗೃಹಗಳಲ್ಲಿ ವಾಸಿಸುತ್ತಾರೆ ಮತ್ತು ಅದನ್ನು ಆಗಾಗ ಬದಲಾಯಿಸುತ್ತಿರುತ್ತಾರೆ. ಇದರಿಂದ ಅವರ ವಿಳಾಸ ದೃಢೀಕರಣವೇ ಅಧಿಕಾರಿಗಳಿಗೆ ಒಂದು ದೊಡ್ಡ ಸಮಸ್ಯೆಯಾಗಿತ್ತು. ಈ ಬಾರಿ ಅವರ ಸಮುದಾಯದ ಸಂಘಟನೆಯು ಇಂತಹವರು ನಮ್ಮ ಸಂಘಟನೆಯ ಸದಸ್ಯರು ಎಂದು ಪತ್ರ ಕೊಟ್ಟರೆ ಅವರನ್ನು ಮತದಾರರ ಪಟ್ಟಿಯಲ್ಲಿ ನೊಂದಾಯಿಸುವ ಕ್ರಮವನ್ನು ಆಯೋಗ ಅಳವಡಿಸಿ ಕೊಂಡಿತು. ಸರಕಾರದ ಮಟ್ಟದಲ್ಲಿ, ಆಯೋಗದ ಮಟ್ಟದಲ್ಲಿ ನಡೆದ ಈ ನಿರ್ಧಾರ ಲಿಂಗತ್ವ ಅಲ್ಪಸಂಖ್ಯಾತರು ಎದುರಿಸುತ್ತಿದ್ದ ಗುರುತಿನ ಕಾರ್ಡಿಗೆ ಸಂಬಂಧಿಸಿದ ದೊಡ್ಡ ತೊಡಕನ್ನು ನಿವಾರಣೆ ಮಾಡಿದೆ. ಹಾರ್ಮೋನುಗಳ ವ್ಯತ್ಯಾಸದಿಂದ ತಮ್ಮದ ಲ್ಲದ ತಪ್ಪಿಗಾಗಿ ಸಮಾಜದಿಂದ ಬಹಿಷ್ಕೃತರಂತೆ ಬದುಕುತ್ತಿರುವ ತೃತೀಯ ಲಿಂಗಿಗಳಿಗೆ ತಾವು ಭಾರತದ ಪೌರರು ಎಂದು ತೋರಿಸಲು ಈ ಗುರುತಿನ ಚೀಟಿ ನೆರವಾಗಲಿದೆ. ಜತೆಗೆ ಭವಿಷ್ಯದಲ್ಲಿ ಅವರಿಗೆ ಪ್ರತ್ಯೇಕ ಮೀಸಲಾತಿ ಪಡೆಯಲು ನೆರವಾಗಲಿದೆ. ತೃತೀಯ ಲಿಂಗಿಗಳ ಸಮುದಾಯ ತಮಗೆ ಮತದಾನದ ಹಕ್ಕು ಬೇಕು ಎಂದು ದಶಕಗಳ ಕಾಲ ಹೋರಾಟ ಮಾಡಿತ್ತು. 1994ರಲ್ಲಿ ಅವರಿಗೆ ಆ ಹಕ್ಕು ದೊರಕಿತು. ಈ ಸಮುದಾಯದ ಕಮ್ಲಾ ಜಾನ್ ಕತ್ನಿಯ ಮೇಯರ್ ಆಗಿದ್ದರೆ, ಶಬನಂ ಮೌಸಿ 2002ರಲ್ಲಿ ಮಧ್ಯಪ್ರದೇಶದ ಶಾಸಕರಾಗಿ ಆಯ್ಕೆಯಾಗಿದ್ದರು. ಬಳಿಕ ಹಲವೆಡೆ ತೃತೀಯ ಲಿಂಗಿಗಳು ಚುನಾವಣೆಗಳಲ್ಲಿ ಸ್ಪರ್ಧಿಸಿದರು. ಆಶಾದೇವಿ ಗೋರಖ್‌ಪುರದ ಮೇಯರ್ ಆದರು.ಕಲ್ಲು ಕಿನ್ನಾರ ವಾರಣಾಸಿಯ ನಗರ ಪರಿಷತ್ತಿಗೆ ಆಯ್ಕೆಯಾದರು. 2003ರಲ್ಲಿ ಮಧ್ಯಪ್ರದೇಶದ ತೃತೀಯ ಲಿಂಗಿಗಳು ತಮ್ಮದೇ ಆದ ಜೀತಿ ಜಿತಾಯಿ ಪಾಲಿಟಿಕ್ಸ್ (ಜೆ.ಜೆ.ಪಿ.) ಯನ್ನು ಸ್ಥಾಪಿಸಿಕೊಂಡರು.
ಸ್ವೀಪ್ ಜನರಲ್ಲಿ ರಾಜಕೀಯದ ಜವಾಬ್ದಾರಿಯನ್ನು ಮೂಡಿಸಿ ರುವಂತೆಯೇ ಸಮಾಜದ ಅಂಚಿನಲ್ಲಿದ್ದ ತೃತೀಯ ಲಿಂಗಿಗಳನ್ನು ಸಮಾಜದೊಳಗೆ ತಂದು ಅವರಲ್ಲಿ ಆತ್ಮಾಭಿಮಾನ ಬೆಳೆಸುವ ಕೆಲಸವನ್ನು ಮಾಡಿದೆ.
ಡಾ| ನಾಗವೇಣಿ ಎನ್. ಮಂಚಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.