ಅಧಿಕಾರಕ್ಕೇರುವರೇ ಮಹಿಂದಾ ಸಹೋದರ?
ಭಾರತಕ್ಕೆ ಆತಂಕ ಮೂಡಿಸುತ್ತಿದೆ ಶ್ರೀಲಂಕಾ ಚುನಾವಣೆ, ಚೀನಾ ಪರ ರಾಜಪಕ್ಷೆ ಧೋರಣೆ
Team Udayavani, Oct 22, 2019, 5:02 AM IST
ತಾವು ಅಧಿಕಾರಕ್ಕೆ ಬಂದರೆ, ಚೀನಾದೊಂದಿಗಿನ ಸಂಬಂಧವನ್ನು ಗಟ್ಟಿಯಾಗಿ ಮರುಸ್ಥಾಪಿಸುವುದಾಗಿ ಹೇಳುತ್ತಿದ್ದಾರೆ ಮಹಿಂದಾ ಸಹೋದರ. ಮೊದಲೇ, ಜಗತ್ತಿನ ಅತ್ಯಂತ ಬ್ಯುಸಿ ಸಮುದ್ರಮಾರ್ಗದ ಪಕ್ಕದಲ್ಲಿ ಇರುವಂಥ ರಾಷ್ಟ್ರ ಶ್ರೀಲಂಕಾ. ಹೀಗಾಗಿ, ಅದು ತೆಗೆದುಕೊಳ್ಳುವ ಯಾವುದೇ ನಿರ್ಧಾರವೂ ಇತರೆ ರಾಷ್ಟ್ರಗಳ ಮೇಲೆ, ಅದರಲ್ಲೂ ಭಾರತದ ಮೇಲೆ ಪರಿಣಾಮ ಬೀರುವುದು ನಿಶ್ಚಿತ. ಹಿಂದೂಮಹಾಸಾಗರದಲ್ಲಿ ಚೀನಾ ವರ್ಸಸ್ ಪ್ರಜಾಪ್ರಭುತ್ವಿಯ ರಾಷ್ಟ್ರಗಳ ನಡುವೆ ಸಾಗರ ಶಕ್ತಿಗಾಗಿ ಪೈಪೋಟಿ ನಡೆದೇ ಇದೆ.
ಏಷ್ಯಾದ ಪ್ರಮುಖ ಪ್ರಜಾಪ್ರಭುತ್ವಿಯ ರಾಷ್ಟ್ರವಾದ ಶ್ರೀಲಂಕಾದ ಈಗ ಅಡಕತ್ತರಿಯಲ್ಲಿ ಸಿಲುಕಿದೆ. ಮುಂದಿನ ತಿಂಗಳು ಈ ದ್ವೀಪರಾಷ್ಟ್ರದಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ, ರಾಜಪಕ್ಷೆ ಕುಟುಂಬದ ಮತ್ತೂಬ್ಬ ಸದಸ್ಯಅಧಿಕಾರಕ್ಕೆ ಏರುವ ಸಾಧ್ಯತೆ ಗೋಚರಿಸಲಾರಂಭಿಸಿದೆ. ಮಹಿಂದಾ ರಾಜಪಕ್ಷೆಯವರ ಸಹೋದರ ಗೋಟಬಾಯಾ ರಾಜಪಕ್ಷೆಯೇ ಈ ವ್ಯಕ್ತಿ. ಸರ್ವಾಧಿಕಾರ, ಹಿಂಸೆ ಮತ್ತು ಭ್ರಷ್ಟಾಚಾರದ ಬಗ್ಗೆ ಗೋಟಬಾಯಾ ಅವರಿಗೆ ಇರುವ “ಒಲವು’ ಜಗತ್ತಿಗೇ ತಿಳಿದಿದೆ. ಹೀಗಾಗಿ, ಅವರೇನಾದರೂ ಅಧಿಕಾರಕ್ಕೆ ಬಂದರೆ ಶ್ರೀಲಂಕಾದಲ್ಲಿನ ಪ್ರಜಾಪ್ರಭುತ್ವಿàಯ ಪದ್ಧತಿಗೆ ಇತಿಶ್ರೀ ಹಾಡಿದಂತೆಯೇ ಸರಿ.
ಗೋಟಬಾಯಾ ರಾಜಪಕ್ಷೆ, ಅವರ ಅಣ್ಣ ಮಹಿಂದಾ ರಾಜಪಕ್ಷೆಯ ಆಡಳಿತದಲ್ಲಿ ಶ್ರೀಲಂಕಾದ ರಕ್ಷಣಾ ಮುಖ್ಯಸ್ಥರಾಗಿದ್ದರು. 2015ರಲ್ಲಿ ಅಂತ್ಯವಾದ ಮಹಿಂದಾ ರಾಜಪಕ್ಷೆಯ ಒಂದು ದಶಕದ ಆಡಳಿತವು, ಲಜ್ಜೆಗೆಟ್ಟ ಸ್ವಜನ ಪಕ್ಷಪಾತದಿಂದಲೇ ಹೆಚ್ಚಾಗಿ ಗುರುತಿಸಿಕೊಂಡಿತ್ತು. ಅಂದು ಸರ್ಕಾರದ ಬಹುತೇಕ ಸಚಿವಾಲಯಗಳು ಮತ್ತು 80 ಪ್ರತಿಶತದಷ್ಟು ಸರ್ಕಾರಿ ಹಣ ರಾಜಪಕ್ಷೆ ಸಹೋದರರ(ನಾಲ್ವರು) ಹಿಡಿತದಲ್ಲೇ ಇತ್ತು. ಅಧ್ಯಕ್ಷೀಯ ಅಧಿಕಾರದ ವ್ಯಾಪ್ತಿಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ವಿಸ್ತರಿಸುತ್ತಾ ಹೋದ ಮಹಿಂದಾ ರಾಜಪಕ್ಷೆ ಒಂದರ್ಥದಲ್ಲಿ ಶ್ರೀಲಂಕಾದಲ್ಲಿ ಅರೆ-ಸರ್ವಾಧಿಕಾರಿ ವ್ಯವಸ್ಥೆಯನ್ನೇ ಸೃಷ್ಟಿಸಿಬಿಟ್ಟರು. ಅವರ ಆಡಳಿತವು ಮಾನವ ಹಕ್ಕುಗಳ ವ್ಯಾಪಕ ಉಲ್ಲಂಘನೆ, ಯುದ್ಧಾಪರಾಧಗಳಿಂದ ತುಂಬಿಹೋಯಿತು.
ಎಲ್ಲಕ್ಕಿಂತ ಹೆಚ್ಚಾಗಿ, ಮಹಿಂದಾರ “ಚೀನಾ ಪರ’ ಒಲವು, ಚೀನಾ ಕೇಂದ್ರಿತ ವಿದೇಶಾಂಗ ನೀತಿಯಿಂದಾಗಿ, ಶ್ರೀಲಂಕಾದಲ್ಲಿ ಚೀನಿ ಪ್ರಭಾವ ಹೆಚ್ಚಾಗಿಬಿಟ್ಟಿತು. ಮಹಿಂದಾರ ಆಡಳಿತಾವಧಿಯಲ್ಲೇ ಶ್ರೀಲಂಕಾ, ಚೀನಾದ ಸಾಲದ ಸುಳಿಗೆ ಸಿಲುಕಿತು. ರಾಜಪಕ್ಷೆ ಅವಧಿಯಲ್ಲಿ ಮಾಡಿದ ಸಾಲವನ್ನು ಭರಿಸಲಾಗದೇ ಸಿರಿಸೇನಾ ಸರ್ಕಾರ 2017ರಲ್ಲಿ, ಹಿಂದೂ ಮಹಾಸಾಗರದ ಪ್ರಮುಖ ವ್ಯೂಹಾತ್ಮಕ ಬಂದರು “ಹಂಬನ್‌ತೋಟ’ವನ್ನು ಚೀನಾಕ್ಕೆ 99 ವರ್ಷ ಲೀಸ್‌ಗೆ ಬಿಟ್ಟುಕೊಡಬೇಕಾಯಿತು! ಇದಷ್ಟೇ ಅಲ್ಲದೇ, ಹಂಬನ್‌ತೋಟಕ್ಕೆ ಹೊಂದಿಕೊಂಡಿರುವ 6,070 ಹೆಕ್ಟೇರ್(15,000 ಎಕರೆ) ಭೂಪ್ರದೇಶವನ್ನೂ ಶ್ರೀಲಂಕಾ ಚೀನಾಕ್ಕೆ ಬಿಟ್ಟುಕೊಟ್ಟಿದೆ.
ಗೋಟಬಾಯಾ ಅಧಿಕಾರಕ್ಕೆ ಬಂದರೆ, ಮತ್ತೆ ಮಹಿಂದಾ ಶೈಲಿಯ ಆಡಳಿತವನ್ನೇ ಅವರು ಅಸ್ತಿತ್ವಕ್ಕೆ ತರುತ್ತಾರೆ ಎನ್ನುವುದರಲ್ಲಿ ಸಂಶಯವೇ ಬೇಡ. ಗೋಟಬಾಯಾ ರಾಜಪಕ್ಷೆ ಶ್ರೀಲಂಕಾದ ರಕ್ಷಣಾ ಮುಖ್ಯಸ್ಥರಾಗಿದ್ದಾಗ ಎಲ್‌ಟಿಟಿಇ ಮತ್ತು ತಮಿಳರ ವಿರುದ್ಧ ನಡೆಸಿದ ಯುದ್ಧಾಪರಾಧಕ್ಕಾಗಿ ಈಗಲೂ ಅಮೆರಿಕದ ಫೆಡರಲ್ ನ್ಯಾಯಾಲಯದಲ್ಲಿ ಅವರ ವಿರುದ್ಧ ಎರಡು ಮೊಕದ್ದಮೆಗಳು ಬಾಕಿ ಇವೆ. ಈಗ ಅಧ್ಯಕ್ಷರಾಗಿ ಆಯ್ಕೆಯಾದರೆ, ಅವರು ತಮ್ಮ ರಕ್ಷಣೆಗಾಗಿ ಎಲ್ಲಾ ರೀತಿಯಿದಂಲೂ ಪ್ರಯತ್ನಿಸಲಿದ್ದಾರೆ. ಈ ಮೊಕದ್ದಮೆಗಳಿಂದ ತಮಗೆ ಏನೇನೂ ಆಗದಂತೆ ನೋಡಿಕೊಳ್ಳುತ್ತಾರೆ.
ಆದಾಗ್ಯೂ ಮಹಿಂದಾ ರಾಜಪಕ್ಷೆ ಅವರ ಆಡಳಿತಾವಧಿಯಲ್ಲೇ ಶ್ರೀಲಂಕಾದಲ್ಲಿನ 25 ವರ್ಷಗಳ ರಕ್ತಸಿಕ್ತ ನಾಗರಿಕ ಸಮರ (ಎಲ್‌ಟಿಟಿಇ ವಿರುದ್ಧ) ಕೊನೆಗೊಂಡಿತಾದರೂ. ಯುದ್ಧದ ಅಂತ್ಯದ ವರ್ಷಗಳಲ್ಲಿ ಸಾವಿರಾರು ಜನರು, ತಮಿಳು ನಾಗರಿಕರು ಮತ್ತು ರಾಜಪಕ್ಷೆ ಕುಟುಂಬದ ರಾಜಕೀಯ ವಿರೋಧಿಗಳು- ಹೇಳಹೆಸರಿಲ್ಲದಂತೆ ಕಣ್ಮರೆಯಾಗಿಬಿಟ್ಟರು. ಇಲ್ಲವೇ, ಇವರೆಲ್ಲ ತೀವ್ರ ಚಿತ್ರಹಿಂಸೆಗೆ ಈಡಾದರು. ಇನ್ನು ತಮಿಳ್ ಟೈಗರ್ ವಿರುದ್ಧದ್ಧದ ಅಂದಿನ ಸೇನಾ ಕಾರ್ಯಾಚರಣೆಯನ್ನಂತೂ ವಿಶ್ವಸಂಸ್ಥೆ “”ಅಂತಾರಾಷ್ಟ್ರೀಯ ಕಾನೂನಿನ ಮೇಲಾದ ಗಂಭೀರ ದಾಳಿ” ಎಂದೇ ಕರೆಯುತ್ತದೆ. ಆ ವೇಳೆಯಲ್ಲಿ 40,000ಕ್ಕೂ ಹೆಚ್ಚು ನಾಗರಿಕರ ಕೊಲೆಯಾದವು. ಯುದ್ಧಕಾಲದ ಮಿಲಿಟರಿ ಕಮಾಂಡರ್ ಸರತ್ ಫೋನ್ಸೆಕಾ ಪ್ರಕಾರ, ಗೋಟಬಾಯಾ ರಾಜಪಕ್ಷೆಯವರು, “”ಶರಣಾಗತರಾದವರನ್ನೆಲ್ಲ ಸಾಮೂಹಿಕವಾಗಿ ಹತ್ಯೆಗೈಯ್ಯುವಂತೆ” ಸೈನಿಕರಿಗೆ ಆಜ್ಞಾಪಿಸಿದರಂತೆ.
ರಾಜಪಕ್ಷೆ ಸಹೋದರರು ಶ್ರೀಲಂಕಾದ ತಮಿಳು ಹಿಂದೂ ಅಲ್ಪಸಂಖ್ಯಾತರ ಮೇಲೆ ನಡೆಸಿದ ಇಷ್ಟೆಲ್ಲ ದೌರ್ಜನ್ಯಗಳ ಹೊರತಾಗಿಯೂ, ಶ್ರೀಲಂಕಾದ ಬೌದ್ಧ ಸಿಂಹಳಿಯರಲ್ಲಿ ಹೀರೋಗಳಾಗಿಬಿಟ್ಟರು. ಬಹುಸಂಖ್ಯಾತರ ಬೆಂಬಲ ತಮಗೆ ಇರುವುದರಿಂದಾಗಿ, ಬಹುಜನಾಂಗೀಯ-ಬಹುಸಂಸ್ಕೃತಿಯ ಶ್ರೀಲಂಕಾಕ್ಕೆ ಏಕಜನಾಂಗೀಯ-ಏಕ ಧಾರ್ಮಿಕ ಗುರುತು ಕೊಡಲು ಮಹಿಂದಾ ಮುಂದಾಗಿಬಿಟ್ಟರು.
ಗೋಟಬಾಯಾ ರಾಜಪಕ್ಷೆ ಅಧಿಕಾರಕ್ಕೆ ಬಂದರೆ, ಜನರ ನಡುವಿನ ಈ ವೈಮನಸ್ಯ-ಕಂದಕವನ್ನು ಮತ್ತಷ್ಟು ದೊಡ್ಡದು ಮಾಡುವುದರಲ್ಲಿ ಸಂದೇಹವಿಲ್ಲ. ಇನ್ನು ಅವರು ಸಿಂಹಳಿಯರು ಮತ್ತು ಮುಸಲ್ಮಾನರ ನಡುವಿನ ಬಿಕ್ಕಟ್ಟನ್ನು ಬಗೆಹರಿಸುವುದು ದೂರದ ಮಾತಾಯಿತು.(ಅದರಲ್ಲೂ ಏಪ್ರಿಲ್ ತಿಂಗಳಲ್ಲಿ ಇಸ್ಲಾಮಿಕ್ ಭಯೋತ್ಪಾದಕರು ಈಸ್ಟರ್ ಭಾನುವಾರದಂದು ಚರ್ಚ್‌ನ ಮೇಲೆ ದಾಳಿ ಮಾಡಿ, 253 ಜನರ ಬಲಿ ಪಡೆದ ನಂತರವಂತೂ ಮುಸಲ್ಮಾನರು ಮತ್ತು ಸಿಂಹಳಿಯರ ಮಧ್ಯೆ ತೀವ್ರ ಬಿಕ್ಕಟ್ಟು ಸೃಷ್ಟಿಯಾಗಿದೆ) ರಾಜಪಕ್ಷೆ ಸಹೋದರರು ಬಾಂಬ್‌ಸ್ಫೋಟದ ವಿಚಾರವನ್ನು ಹಿಡಿದುಕೊಂಡು “ಸಿಂಹಳ ರಾಷ್ಟ್ರವಾದ’ದ ಅಗ್ನಿಗೆ ತುಪ್ಪ ಸುರಿಯಲಾರಂಭಿಸಿದ್ದಾರೆ. ಗೋಟಬಾಯಾ ಅವರಂತೂ ಒಂದು ವೇಳೆ ತಾವು ಅದಿಧಿಕಾರಕ್ಕೆ ಬಂದದ್ದೇ ಆದಲ್ಲಿ, ದೇಶದ ಗುಪ್ತಚರ ಸೇವೆಗಳನ್ನು ಬಲಿಷ್ಠಪಡಿಸಿ, ಇಸ್ಲಾಮಿಕ್ ತೀವ್ರವಾದವನ್ನು ಕೊನೆಗೊಳಿಸಲು ನಾಗರಿಕರ ಮೇಲೆ ಹದ್ದಿನಗಣ್ಣು ಇಡುವುದಾಗಿ ಭರವಸೆ ನೀಡಿದ್ದಾರೆ.
ಇನ್ನೂ ಯುದ್ಧಾಪರಾಧದ ಆರೋಪದಿಂದ ಮುಕ್ತನಾಗದ ವ್ಯಕ್ತಿಯೊಬ್ಬ ಅಧ್ಯಕ್ಷನಾಗಿ ಅಧಿಕಾರವೇರುವ ವಿಚಾರವೇ ಶ್ರೀಲಂಕಾದ ತಮಿಳು ಹಿಂದೂಗಳು, ಮುಸಲ್ಮಾನರಿಗೆ, ಅಲ್ಪಸಂಖ್ಯಾತ ಗುಂಪುಗಳಿಗೆ, ಮಾಧ್ಯಮಗಳಿಗೆ, ನಾಗರಿಕ ಹಕ್ಕು ಹೋರಾಟಗಾರರಿಗೆ ಬೆಚ್ಚಿ ಬೀಳಿಸುವಂಥ ಸಂಗತಿಯಾಗಿದೆ.
ಭಾರತದ ಪಾಲಿಗೂ ಕಳವಳದ ಸುದ್ದಿಯಿದು. ತಾವು ಅಧಿಕಾರಕ್ಕೆ ಬಂದರೆ, ಚೀನಾದೊಂದಿಗಿನ ಸಂಬಂಧವನ್ನು ಗಟ್ಟಿಯಾಗಿ ಮರುಸ್ಥಾಪಿಸುವುದಾಗಿ ಹೇಳುತ್ತಿದ್ದಾರೆ ಮಹಿಂದಾ ಸಹೋದರ. ಮೊದಲೇ, ಜಗತ್ತಿನ ಅತ್ಯಂತ ಬ್ಯುಸಿ ಸಮುದ್ರಮಾರ್ಗದ ಪಕ್ಕದಲ್ಲಿ ಇರುವಂಥ ರಾಷ್ಟ್ರ ಶ್ರೀಲಂಕಾ. ಹೀಗಾಗಿ, ಅದು ತೆಗೆದುಕೊಳ್ಳುವ ಯಾವುದೇ ನಿರ್ಧಾರವೂ ಇತರೆ ರಾಷ್ಟ್ರಗಳ ಮೇಲೆ, ಅದರಲ್ಲೂ ಭಾರತದ ಮೇಲೆ ಪರಿಣಾಮ ಬೀರುವುದು ನಿಶ್ಚಿತ. ಹಿಂದೂಮಹಾಸಾಗರದಲ್ಲಿ ಚೀನಾ ವರ್ಸಸ್ ಪ್ರಜಾಪ್ರಭುತ್ವಿಯ ರಾಷ್ಟ್ರಗಳ ನಡುವೆ ಸಾಗರ ಶಕ್ತಿಗಾಗಿ ಪೈಪೋಟಿ ನಡೆದೇ ಇದೆ. ಅತ್ತ ಚೀನಾ ಪ್ರಮುಖ ವ್ಯೂಹಾತ್ಮಕ ಮಿಲಿಟರಿ ಸ್ಥಾನಗಳನ್ನು ಹಾಗೂ ಹಿಂದೂ ಮಹಾಸಾಗರದಲ್ಲಿನ ವಾಣಿಜ್ಯ ಪ್ರದೇಶಗಳನ್ನು ತನ್ನ ವಶಮಾಡಿಕೊಂಡು ಭಾರತವನ್ನು ಎಲ್ಲಾ ಕಡೆಯಿಂದಲೂ ಸುತ್ತುವರಿಯಬೇಕೆಂಬ ಉದ್ದೇಶ ಹೊಂದಿದೆ. ಇದನ್ನು string of pearls ತಂತ್ರ ಎಂದು ಕರೆಯಲಾಗುತ್ತದೆ. ಈಗ ಶ್ರೀಲಂಕಾ ಬಿಟ್ಟುಕೊಟ್ಟಿರುವ ಹಂಬನ್‌ತೋಟ ಬಂದರು ಚೀನಾದ ಪಾಲಿಗೆ ಒಂದು ಪ್ರಮುಖ pearls ಆಗಿದೆ ಎನ್ನುವುದನ್ನು ನಾವು ಗಮನಿಸಬೇಕು.
ಈಗಾಗಲೇ ಚೀನಾದ ಬೆಲ್ಟ್ ಆ್ಯಂಡ್ ರೋಡ್ ಪರಿಕಲ್ಪನೆಯ ಬಗ್ಗೆ, ಅದರ ಹಿಂದಿನ ಉದ್ದೇಶದ ಬಗ್ಗೆೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಶಯ ಅಧಿಕವಾಗುತ್ತಿದೆ. ಇಂಥ ಹೊತ್ತಲ್ಲಿ ರಾಜಪಕ್ಷೆ ಕುಟುಂಬವು ಅಧಿಕಾರಕ್ಕೇರುವುದು ಚೀನಾಕ್ಕಂತೂ ಶುಭಸುದ್ದಿಯಾಗುತ್ತದೆ. ಹಾಗೇನಾದರೂ ಆದರೆ ಇಡೀ ಶ್ರೀಲಂಕಾವನ್ನು ತನ್ನ ಮಿಲಿಟರಿ ಔಟ್‌ಪೋಸ್ಟ್ ಮಾಡಿಕೊಳ್ಳಬೇಕೆಂಬ ಅದರ ಬಯಕೆಗೆ ರಾಜಪಕ್ಷೆ ಕುಟುಂಬ ಸಹಕರಿಸಲಿದೆ.
ಗೋಟಬಾಯಾ ರಾಜಪಕ್ಷೆಯೇ ಈ ಬಾರಿ ಗೆಲ್ಲುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ. ಶ್ರೀಲಂಕಾ ಚುನಾವಣೆಯಲ್ಲಿ ಚೀನಾ ಹಸ್ತಕ್ಷೇಪ ಜೋರಾಗಿ ನಡೆದಿದೆ. ಒಟ್ಟಲ್ಲಿ, ಚೀನಾವನ್ನು ಹೊರತುಪಡಿಸಿ ಉಳಿದ ಎಲ್ಲರಿಗೂ ರಾಜಪಕ್ಷೆ ಗೆಲುವು ಕೆಟ್ಟ ಸುದ್ದಿಯಾಗಲಿದೆ. ಮಹಿಂದಾ ಕಾಲದಲ್ಲಿ ದೌರ್ಜನ್ಯಕ್ಕೊಳಗಾದ ಅಸಂಖ್ಯಾತ ನಾಗರಿಕರಿಗಂತೂ ಇದು ಮತ್ತಷ್ಟು ನೋವು ಕೊಡುವಂಥ ವಿಚಾರವಾಗಲಿದೆ. ಒಟ್ಟಲ್ಲಿ, ಶ್ರೀಲಂಕಾದ ಪ್ರಜಾಪ್ರಭುತ್ವ ವ್ಯವಸ್ಥೆಯು ಹಿಂದೆಂದಿಗಿಂತಲೂ ಹೆಚ್ಚು ಅಪಾಯದಲ್ಲಿದೆ..
(ಲೇಖಕರು ದೆಹಲಿ ಮೂಲದ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಲ್ಲಿ “ವ್ಯೂಹಾತ್ಮಕ ಅಧ್ಯಯನ’ ಪ್ರಾಧ್ಯಾಪಕರು. ಲೇಖನ ಕೃಪೆ: ಲೈವ್ ಮಿಂಟ್)
ಬ್ರಹ್ಮ ಚೆಲ್ಲಾನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.