ಮರಗಳನ್ನು ಉಳಿಸಲು ಆರೆ ಕಾಲನಿ ಹೋರಾಟ ದಿಕ್ಸೂಚಿ
Team Udayavani, Oct 13, 2019, 5:23 AM IST
ಮುಂಬಯಿ ಆರೆ ಕಾಲನಿ ಪ್ರದೇಶದಲ್ಲಿ ಮೆಟ್ರೊ ರೈಲು ಯೋಜನೆಯ ಕಾರ್‌ಶೆಡ್ ನಿರ್ಮಾಣಕ್ಕಾಗಿ (ಆರೆ ಕಾಡಿನ) ಎರಡು ಸಾವಿರಕ್ಕೂ ಅಧಿಕ ಮರಗಳನ್ನು ಕಡಿಯುವ ವಿಚಾರದಲ್ಲಿ ಮುಂಬಯಿ ಸಿಡಿದೆದ್ದಿರುವುದು ನಗರವಾಸಿಗಳು ಪರಿಸರ ನಾಶವನ್ನು ಸಹಿಸುವುದಿಲ್ಲ ಎಂಬುದನ್ನು ಸಾರಿ ಹೇಳಿದೆ. ಅಕ್ಟೋಬರ 6ರಂದು ಮುಂಬಯಿಯ ಕಾನೂನು ವಿದ್ಯಾರ್ಥಿ ರಿಶವ್ ರಂಜನ್ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯ್‌ರವರಿಗೆ ಆರೆ ಕಾಲನಿಯಲ್ಲಿ ಮರಗಳನ್ನು ಕಡಿದುರಿಳಿಸುವುದನ್ನು ನಿಲ್ಲಿಸಲು ತಕ್ಷಣ ಮಧ್ಯಪ್ರವೇಶಿಸಿ ತಡೆಯಾಜ್ಞೆ ನೀಡುವಂತೆ ಕೋರಿ ಬರೆದ ಪತ್ರವನ್ನು ಸಾರ್ವಜನಿಕ ಹಿತಾಸಕ್ತಿ ದಾವೆಯನ್ನಾಗಿ ಪರಿವರ್ತಿಸಿದ ಅಪರೂಪ ಪ್ರಕರಣವಾಗಿದೆ. ಅಕ್ಟೋಬರ್ 7ರಂದು ಈ ವಿಷಯವನ್ನೆತ್ತಿದ ಸುಪ್ರೀಂ ಕೋರ್ಟ್ ಅಕ್ಟೋಬರ್ 21ರಂದು ತನ್ನ ಹಸಿರು ಪೀಠದ ಮುಂದಿನ ವಿಚಾರಣೆ ಮತ್ತು ಆಜ್ಞೆಯವರೆಗೆ ಮರಗಳ ಮಾರಣಹೋಮ ನಿಲ್ಲಿಸುವಂತೆ ಮೆಟ್ರೊ ನಿಗಮ, ಸ್ಥಳೀಯಾಡಳಿತ ಮತ್ತು ಮಹಾರಾಷ್ಟ್ರ ಸರಕಾರಕ್ಕೆ ಆದೇಶಿಸಿದೆ. ಆರೆ ಕಾಲನಿಯ ಮರ ಕಡಿಯುವುದನ್ನು ವಿರೋಧಿಸಿದವರಲ್ಲಿ ಯುವ ಜನರು ಮುಂಚೂಣಿಯಲ್ಲಿರುವುದು ಪರಿಸರ ರಕ್ಷಣೆ ಯಲ್ಲಿ ತರುಣ ಜನಾಂಗಕ್ಕಿರುವ ಕಾಳಜಿಯನ್ನು ಒತ್ತಿ ಹೇಳಿದೆ. ಜೊತೆಗೆ ಸುಪ್ರಿಂ ಕೋರ್ಟ್ ಕೇಂದ್ರ ಪರಿಸರ ಖಾತೆಯನ್ನು ಪ್ರತಿವಾದಿಯನ್ನಾಗಿ ಸೇರಿಸಿರುವುದು ಪರಿಸರ ರಕ್ಷಣೆಯಲ್ಲಿ ಅದರ ಪಾತ್ರವನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಮಾಡಿದೆ.
ನೀವು ಎಷ್ಟು ಸಸಿಗಳನ್ನು ನೆಟ್ಟಿದ್ದೀರಿ? ಅವು ಯಾವ ರೀತಿ ಬೆಳೆದಿವೆ? ನಿಮ್ಮ ಅರಣ್ಯದ ವ್ಯಾಖ್ಯಾನ ಏನು? ಎಂದು ಸಂಬಂಧಪಟ್ಟ ಸರಕಾರ ಮತ್ತಿತರಿಗೆ ಕೇಳುವ ಮೂಲಕ ಯಾವುದೇ ಕಾನೂನುಗಳನ್ವಯ ಅಥವಾ ಪ್ರಕಟನೆಗಳ ಮೂಲಕ ರಚಿಸಲ್ಪಟ್ಟು, ಸರಕಾರಿ ನಿಯಂತ್ರಣವಿರುವ ಕಾಡುಗಳು ಮಾತ್ರ ಅರಣ್ಯವಾಗುತ್ತವೆ ಎಂಬ ಸರಕಾರಿ ಧೋರಣೆಯನ್ನು ಸುಪ್ರೀಂ ಪ್ರಶ್ನಿಸಿದೆ. ಬೆಳೆದು ನಿಂತ ಹಲವಾರು ವರ್ಷಗಳ ಮರವನ್ನು ಕಡಿಯುವ ಸಂದರ್ಭ ಸಸಿಯೊಂದನ್ನು ನೆಡುವುದು ಪರಿಸರದ ಪರ ಕಾಳಜಿ ವ್ಯಕ್ತಪಡಿಸಿದಂತಾಗುವುದಿಲ್ಲ. ನೆಟ್ಟ ಸಸಿ ಬೆಳೆದು ಮರವಾಗುವಂತೆ ನೋಡುವುದೂ ಅಗತ್ಯ ಎಂದು ಸುಪ್ರೀಂ ಕೋರ್ಟ್ ಸಾರಿದೆ. ಸಸಿಗಳನ್ನು ನೆಡುವುದು ಮತ್ತು ಅವುಗಳು ಬೆಳೆದು ಮರವಾಗುವಂತೆ ನೋಡಿಕೊಳ್ಳುವುದು ಬೇರೆ ಬೇರೆ ಸಂಗತಿಗಳೆಂದು ಸುಪ್ರೀಂ ನ್ಯಾಯಾದೀಶ ಅರುಣ್ ಮಿಶ್ರಾ ಹೇಳಿರುವುದು ಅರ್ಥಗರ್ಭಿತವಾಗಿದೆ.
ನಮ್ಮ ದೇಶದಲ್ಲಿ ನಗರೀಕರಣದ ಉದ್ದೇಶಗಳಿಗಾಗಿ ಯಾರ್ಯಾರೋ ನೆಟ್ಟು, ಕಷ್ಟಪಟ್ಟು ಬೆಳೆಸಿದ ಮರಗಳನ್ನು ಆರೆ ಪ್ರಕರಣದಂತೆ ರಾತೋರಾತ್ರಿ ಕಡಿದುರುಳಿಸಲಾಗುತ್ತದೆ. ಸಾರ್ವಜನಿಕ ಟೀಕೆಗಳಿಗೆ ಹೆದರಿ ಕಡಿದುರುಳಿಸಿದ ಮರಗಳ ಸ್ಥಾನ ತುಂಬುವಂತೆ ಒಂದೆರಡು ಸಸಿಗಳನ್ನು ನೆಡಲಾಗುತ್ತದೆ. ಅ ಸಸಿಗಳು ಕೆಲವೇ ಸಮಯದೊಳಗೆ ಮಂಗಮಾಯವಾಗಿ ಬಿಡುತ್ತವೆ. ಪ್ರಾಕೃತಿಕ ಸಮತೋಲನ ಕಾಪಾಡಲು ಪ್ರತಿಯೊಂದು ಮರಗಿಡ, ಪ್ರಾಣಿಪಕ್ಷಿ ಮತ್ತಿತರ ಎಲ್ಲಾ ಜೀವಿಗಳು ಸಮತೋಲಿತವಾಗಿ ಇರಬೇಕಾಗುತ್ತವೆ ಎಂಬುದಕ್ಕೆ ಮಹತ್ವವೇ ದೊರೆಯುವುದಿಲ್ಲ. ಸಮತೋಲಿತವಾಗಿ ಇರಬೇಕಾದ ಅಂಶಗಳಲ್ಲಿ ಮಾನವನ ದುರಾಶೆಯಿಂದಾಗಿ ಏರುಪೇರಾದಾಗ ಅದರ ಪರಿಣಾಮ ಎದ್ದು ಕಾಣುತ್ತದೆ. ವಿಪರೀತ ಸೆಕೆ, ಅಕಾಲಿಕ ಮಳೆ, ನೀರಿನ ಅಭಾವ, ವಾತಾವರಣ ಮಾಲಿನ್ಯ, ಸಾಂಕ್ರಾಮಿಕ ರೋಗರುಜಿನಗಳು, ಕಾಡು ಪ್ರಾಣಿಗಳ ನಾಡಿನ ಪ್ರವೇಶ ಇತ್ಯಾದಿ ಸಂಗತಿಗಳು ಈಗೀಗ ಆಗಿಂದಾಗೆ ಘಟಿಸುತ್ತಿರುವುದಕ್ಕೆ ಅರಣ್ಯ ಪ್ರದೇಶಗಳ ಮತ್ತು ಮರಗಿಡಗಳ ನಾಶ, ವಾಹನಗಳ ಹೊಗೆ ಮತ್ತು ವಿಪರೀತ ಕೈಗಾರೀಕರಣ ಕಾರಣ ಎಂದು ತಿಳಿದಿದ್ದರೂ ಅದರ ಬಗ್ಗೆ ಸ್ಥಳೀಯಾಡಳಿತ ಅಥವಾ ಸರಕಾರಗಳು ಕ್ರಮಕೈಗೊಂಡದ್ದು ಕಡಿಮೆ ಎಂದೇ ಹೇಳಬಹುದು. ಇತೀಚೆಗಷ್ಟೇ ಅರೆ ಮನಸ್ಸಿನೆಂಬಂತೆ ಈ ವಿಚಾರಗಳ ಬಗ್ಗೆ ಲಕ್ಷ್ಯ ವಹಿಸಲಾಗುತ್ತದೆ.
ಮುಂಬಯಿ, ಬೆಂಗಳೂರುಗಳಂತಹ ಮಹಾನಗರಗಳಾಗಲಿ ಅಥವಾ ಮಂಗಳೂರಿನಂತಹ ಎರಡನೇ ಶ್ರೇಣಿಯ ನಗರಗಳಾಗಲಿ ಕೆಲವು ವರ್ಷಗಳ ಹಿಂದೆ ಮರಗಿಡಗಳಿಂದ ತುಂಬಿ ತುಳುಕುತ್ತಿದ್ದವು. ಹಲವಾರು ಪ್ರದೇಶಗಳಲ್ಲಿ ರಸ್ತೆಗಳ ಇಕ್ಕೆಲಗಳಲ್ಲಿ ದೊಡ್ಡದೊಡ್ಡ ಮರಗಳಿದ್ದು ಆ ಪ್ರದೇಶಕ್ಕೂ, ಅಲ್ಲಿಂದ ಹಾದುಹೋಗುವ ಜನರಿಗೂ ತಂಪಿನ ಸಿಂಚನ ಎರೆಯುತ್ತಿದ್ದವು. ಜನರೂ ನೆರಳಿನ ಮತ್ತು ತಂಪು ಹವೆಯ ಕಾರಣಕ್ಕಾಗಿ ನಡೆದಾಡುತ್ತಿದ್ದರು. ಆ ಮೂಲಕ ಜನರ ಆರೋಗ್ಯ ಕಾಪಾಡಲೂ ಈ ಮರಗಿಡಗಳು ಪರೋಕ್ಷವಾಗಿ ಕಾರಣವಾಗಿದ್ದವು. ಆದರೆ ಕ್ರಮೇಣ ರಸ್ತೆಗಳ ಅಗಲೀಕರಣ, ಕಾಂಕ್ರಿಟೀಕರಣಕ್ಕಾಗಿ, ಕಟ್ಟಡ ಮತ್ತಿತರ ನಾಗರಿಕ ಸವಲತ್ತಗಳಿಗಾಗಿ ಅದೆಷ್ಟೋ ವರ್ಷಗಳಿಂದ ಆಸರೆಯಾಗಿದ್ದ ಮರಗಿಡಗಳನ್ನು ಕಡಿದುರುಳಿಸಲಾಯಿತು ಮತ್ತು ಇದು ಅವ್ಯಾಹತವಾಗಿ ಮುಂದುವರಿಯುತ್ತಾ ಇರುವುದು ದುರ್ದೈವ. ನಾಮ್‌ಕೇವಾಸ್ತೆ ಎಂಬಂತೆ ಕೆಲವೆಡೆ ಸಸಿಗಳನ್ನು ನೆಡಲಾಗು ತ್ತದೆಯಾದರೂ, ಅವುಗಳನ್ನು ಬೆಳೆಸಿ ಮರಗಳನ್ನಾಗಿಸುವ ಪ್ರಯತ್ನವನ್ನೇ ಮಾಡುವುದಿಲ್ಲ. ಸಸಿ ನೆಟ್ಟ ಒಂದೆರಡು ವರ್ಷಗಳೊಳಗೆ ಅದರ ಕುರುಹೂ ಇಲ್ಲದಂತೆ ಮಾಯವಾಗಿ ಬಿಡುತ್ತದೆ. ಹೆಚ್ಚಿನ ನಗರಗಳಲ್ಲಿ ಮರಗಿಡಗಳಿಂದ ತುಂಬಿ ತುಳುಕುತ್ತಿದ್ದ ಪ್ರದೇಶಗಳು ಇಂದು ಕಾಂಕ್ರಿಟ್ ಕಾಡುಗಳಾಗಿ ಬದಲಾಗಿವೆ. ಅಂತಹ ಸಂದರ್ಭಗಳಲ್ಲಿ ಹತ್ತಿರದಲ್ಲೇ ಅಥವಾ ಸ್ವಲ್ಪ ದೂರದ ಪ್ರದೇಶದಲ್ಲಿ ಸಸಿಗಳನ್ನು ನೆಟ್ಟು ಹಿಂದಿನಂತಹ ಮರಗಿಡಗಳುಳ್ಳ ಪ್ರದೇಶವನ್ನು ರೂಪಿಸುವ ಯಾವ ಪ್ರಯತ್ನವನ್ನೂ ನಡೆಸುವುದಿಲ್ಲ. ಹೀಗಾಗಿ ದೊಡ್ಡ ಮತ್ತು ಸಣ್ಣ ನಗರಗಳು ಈಗ ಕಡು ಸೆಕೆಯನ್ನು ಅನುಭವಿಸುತ್ತಾ ಇವೆ. ಸರಕಾರ ಮತ್ತು ನಗರಾಡಳಿತಗಳ ಮೇಲೆ ಯಾವುದೇ ಅಂಕುಶಗಳಿಲ್ಲದಿದ್ದಲ್ಲಿ ನಗರಗಳಲ್ಲಿ ಅಳಿದುಳಿದ ಮರಗಳು ಮುಂದಿನ ದಿನಗಳಲ್ಲಿ ನಾಶವಾಗುವ ಅಪಾಯ ಇಲ್ಲದಿಲ್ಲ.
ಇಂತಹ ಸನ್ನಿವೇಶದಲ್ಲಿ ಮುಂಬಯಿ ಆರೆ ಕಾಲನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟಿನ ಮಧ್ಯ ಪ್ರವೇಶ ಒಂದು ಆಶಾಕಿರಣವಾಗಿದೆ. ಅರಣ್ಯ ಪ್ರದೇಶ, ಮರಗಿಡಗಳ ನಾಶ ತಡೆಯಲು ಸುಪ್ರೀಂ ದಿಟ್ಟ ಮತ್ತು ಸ್ಪಷ್ಟ ನಿರ್ದೇಶನಗಳನ್ನು ನೀಡಬಹುದೆಂಬ ಭರವಸೆ ಯಿದೆ. ಮರಗಿಡಗಳನ್ನು ಕಡಿದುರುಳಿಸಿದಾಗ ಅವುಗಳ ಬದಲಿಗೆ ಎರಡು ಪಟ್ಟು ಸಸಿಗಳನ್ನು ನೆಟ್ಟು ಮುಂದಿನ ಕನಿಷ್ಟ ಹತ್ತು ವರ್ಷಗಳ ಕಾಲ ಆ ಸಸಿಗಳ ಬೆಳವಣಿಗೆಯ ಬಗ್ಗೆ ನಿಗಾ ಇಡಲು ವ್ಯವಸ್ಥೆಯೊಂದನ್ನು ರೂಪಿಸುವಂತೆ ಸರಕಾರಗಳಿಗೆ ನಿರ್ದೇಶನ ನೀಡಬಹುದಾಗಿದೆ. ನಗರಗಳಲ್ಲಿರುವ ಮರಗಿಡಗಳಿಂದ ಸಮೃದ್ಧವಾಗಿರುವ ಪ್ರದೇಶಗಳನ್ನು ಅನ್ಯ ಉದ್ದೇಶಗಳಿಗೆ ಪರಿವರ್ತಿಸದಂತೆ, ಒಂದು ವೇಳೆ ಅಂತಹ ಸ್ಥಳಗಳು ಅನ್ಯ ಉದ್ದೇಶಗಳಿಗೆ ಅಗತ್ಯ ಎಂದು ಕಂಡು ಬಂದರೆ ಕನಿಷ್ಟ ಇಂತಿಷ್ಟೇ ವರ್ಷ ಕಾಯುವಂತೆ ಮತ್ತು ಈ ಅವಧಿಯೊಳಗೆ ಅದೇ ಅಥವಾ ಸ್ವಲ್ಪ ದೂರದ ಸ್ಥಳದಲ್ಲಿ ನಾಶವಾಗುವ ಮರಗಳ ದುಪ್ಪಟ್ಟು ಸಂಖ್ಯೆಯಲ್ಲಿ ನಿಜವಾಗಿಯೂ ಮರಗಳ ಪ್ರದೇಶ ರೂಪಿಸಲು ಕಾನೂನು ಮಾಡಬಹು ದಾಗಿದೆ. ಸರಕಾರಿ ಸ್ಥಳಗಳಲ್ಲಿ ಮತ್ತು ಖಾಲಿಯಾಗಿರುವ ವಿಶಾಲ ಖಾಸಗಿ ನಿವೇಶನಗಳಲ್ಲಿ ಮರಗಳನ್ನು ಬೆಳೆಸುವಂತೆ ಪ್ರೇರೇಪಿಸಬೇಕು. ಅಂತಹ ಪ್ರಯತ್ನ ಕೈಗೊಳ್ಳುವ ಖಾಸಗಿ ಆಸ್ತಿಗಳಿಗೆ ಅಸ್ತಿತೆರಿಗೆ ವಿನಾಯಿತಿ , ರಿಯಾಯಿತಿ ಇತ್ಯಾದಿ ನೀಡಿ ಪ್ರೋತ್ಸಾಹಿಸಬಹುದಾಗಿದೆ.
ಎಚ್. ಆರ್. ಆಳ್ವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.