ಕಲ್ಪನೆಯ ಬಲೂನು ಮತ್ತು ವಾಸ್ತವದ ಮುಳ್ಳು
Team Udayavani, Aug 2, 2018, 6:00 AM IST
ಬೆಂಬಲ ಬೆಲೆ ಹೆಚ್ಚಳ ಎಷ್ಟೇ ಇರಲಿ. ಅದರ ಪ್ರಯೋಜನಗಳನ್ನು ರೈತರಿಗೆ ತಲುಪಿಸುವ ಜವಾಬ್ದಾರಿ ಮಹತ್ವದ್ದಾಗಿದೆ. ಬೆಂಬಲ ಬೆಲೆಗಳು ರೈತರನ್ನು ಅಣಕಿಸಿದಂತೆ; ರೈತರಿಗೆ ಅವಮಾನ ಮಾಡಿದಂತೆ ಆಗಬಾರದಲ್ಲವೇ? ಜನರ ಹಸಿವು ನೀಗಿಸುವ ಪೌಷ್ಟಿಕ ಶ್ರೀಮಂತಿಕೆ ಹೊಂದಿರುವ ಜೋಳ ಸಾವಿ, ನವಣೆ, ಸೆಜ್ಜಿಯಂತಹ ಧಾನ್ಯಗಳ ಬೆಂಬಲ ಬೆಲೆ ಹೆಚ್ಚಿಸುವುದು ಮುಖ್ಯವಾಗುತ್ತದೆ.
ಮೊನ್ನೆ ಹುಬ್ಬಳ್ಳಿಗೆ ಹೋದಾಗ ಜನತಾ ಬಜಾರಕ್ಕೆ ಹೋಗಿದ್ದೆ. ಆಲ್ಲಿ ಜೋಳದ ಧಾರಣಿ (ಬೆಲೆ) ಕೇಜಿಗೆ 27ರೂಪಾಯಿ ಎಂದು ಚೀಟಿ ತೂಗಾಡುತ್ತಿತ್ತು. ಜನತಾ ಬಜಾರದ ಸಿಬ್ಬಂದಿಯನ್ನು ಉದ್ದೇಶಿಸಿ ನನ್ನಲ್ಲಿ ಏಳೆಂಟು ಕ್ವಿಂಟಾಲ್ ಜೋಳ ಇದೆ. ಅದೂ ಸಾವಯವ ಕೃಷಿ ಮಾಡಿ ಬೆಳೆದದ್ದು! ಖರೀದಿ ಮಾಡ್ತೀರಾ ಎಂದೆ. “ಜ್ವಾಳದ ಸುಗ್ಯಾಗ ಖರೀದಿ ಮಾಡಿಟ್ಟಿàದೇವರಿ’ ಎಂದಾತ ಹೇಳಿದ. ಸುಗ್ಗಿ ಹೋಗಲಿ ಆಷಾಢ ಮಾಸದಾಗೂ ಜೋಳದ ಬೆಲೆ ಕ್ವಿಂಟಾಲ್‌ಗೆ ಹದಿನೈದು ನೂರು ಮಿಕ್ಕಿಲ್ಲ. ಇದಾದ ಮಾರನೇ ದಿನ ಕೇಂದ್ರ ಸರಕಾರ ಹದಿನಾಲ್ಕು ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಭಾರೀ ಹೆಚ್ಚಳ ಮಾಡಿದ್ದು ಮಾಧ್ಯಮಗಳಲ್ಲಿ ಪ್ರಮುಖ ಸುದ್ದಿ ಆಗಿತ್ತು. “ರೈತರಿಗೆ ಬಂಪರ್ ಬೆಲೆ’ “ಕೇಂದ್ರ ಸರಕಾರದ ದಿಟ್ಟ ಕ್ರಮ’ “ರೈತರ ಕೈಗೆ ಹಣದ ಥೈಲಿ’ “ಎಪ್ಪತ್ತು ವರ್ಷಗಳ ರೈತರ ಬೇಡಿಕೆ ಈಡೇರಿಕೆ. ಇದೊಂದು ಐತಿಹಾಸಿಕ ಕ್ರಮ’ “ಆನ್ನದಾತ ಸುಖೀಯಾಗಿರಲಿ’ “ರೈತರ ಆದಾಯ ದುಪ್ಪಟ್ಟಾಗಿಸುವ ಕ್ರಮ’ “ರೈತರ ಸಂಕಷ್ಟ ಮತ್ತು ನಷ್ಟ ದೂರವಾಗಿ ಲಾಭ ಹೊಂದುವಂತೆ ಮಾಡಿದ ಕ್ರಮ’ “ಸ್ವಾಮಿನಾಥನ್ ವರದಿಯ ಅನುಷ್ಠಾನ’ ಹೀಗೆ ತಮ ತಮಗೆ ತೋಚಿದಂತೆ ಹೊಗಳಿದ್ದೇ ಹೊಗಳಿದ್ದು.
ಹೌದು ರೈತರ ಬಗ್ಗೆ ಇಷ್ಟು ದಿನ ಮನದ ಮಾತುಗಳಾಗಿದ್ದ ಮಾತುಗಳು ಮನದಾಳಕ್ಕೆ ಇಳಿದಿವೆ. ಮನ ತೆರೆದು ಪ್ರಧಾನಿ ಯವರು ಮಾತಾಡಿದ್ದಾರೆ. ಧರ್ಮ ಗುರುಗಳ್ಳೋ, ಸಮಾಜ ಸುಧಾರಕರೋ, ನೀತಿ ಬೋಧಕರೋ ಆಡುವ ಮಾತು ಉಪ ದೇಶಗಳ ಬದಲಾಗಿ ರೈತರ ಸಂಕಷ್ಟ ಪರಿಹಾರದ ದಿಸೆಯಲ್ಲಿ ಆಲೋಚನೆ ಮಾಡಿದ್ದು ರೈತರಲ್ಲಿ ಆಶಾಭಾವನೆ ಮೂಡಿಸಿದ್ದು ಖರೆ. ಇದರಲ್ಲಿ ಭರವಸೆ ಎಷ್ಟು ಕಲ್ಪನೆ ಎಷ್ಟು ಆಸೆ ಮತ್ತು ಕನಸು ಎಷ್ಟು ಮತ್ತು ವಾಸ್ತವ ಎಷ್ಟು ಹಾಗೂ ನಿರಾಸೆ ಎಷ್ಟು ಎಂಬುದನ್ನು ರೈತನೊಬ್ಬ ಇನ್ನೊಬ್ಬ ರೈತನ ಹೊಲದಲ್ಲಿ ಆತನ ಮನೆಯ ಕಟ್ಟೆಯ ಮೇಲಿರುವ ಕಾಳುಕಡಿ ನೋಡುತ್ತ ಮಾತಾಡಿದಾಗ ಬಂಪರ್‌ನ ಆವತಾರ ಸಾಕಾರಗೊಳ್ಳುವುದು. ಚುನಾವಣೆಯ ಹೊಸ್ತಿಲಲ್ಲಿ ಭರವಸೆಯ ಬಲೂನು ಉಬ್ಬಿದೆ. ಮತಗಳ ಸುರಿಮಳೆಗೆ ಪರ್ಜನ್ಯ ಜಪ ಶುರು ಆಗಿದೆ. ಇದು ಕೇಂದ್ರ ಸರಕಾರಕ್ಕಷ್ಟೆ ಸಂಬಂಧಪಟ್ಟ ಮಾತಲ್ಲ. ರಾಜ್ಯ ಸರಕಾರವೂ ಸುಸ್ತಿ ಸಾಲ ಮನ್ನಾ ಮಾಡಿ ದಾಖಲೆ ಸ್ಥಾಪಿಸಿದ್ದೇವೆ ಎಂದು ತನ್ನ ಬೆನ್ನು ತಟ್ಟಿಕೊಳ್ಳುತ್ತಿದೆ. ರೈತರ ಬೆನ್ನಿನ ಮೇಲಿನ ಹೊರೆಯ ಭಾರ ಕಡಿಮೆ ಮಾಡಿದ ಹೆಮ್ಮೆ ಇದು.
ಬೆಂಬಲ ಬೆಲೆ ಹೆಚ್ಚಿಸಿದ್ದು ಮೇಲ್ನೋಟಕ್ಕೆ ಗೊತ್ತಾಗದೇ ಇರದು. ಇಲ್ಲಿ ಎರಡು ಸಂಗತಿಗಳನ್ನು ಗಮನಿಸಬೇಕಿದೆ. ಒಂದು ಉತ್ಪಾದನಾ ವೆಚ್ಚದ ಬೆಲೆ ಹೋಲಿಸಿ ನೋಡಬೇಕಿದೆ. ಆಂದರೆ ಮಾರುಕಟ್ಟೆಯ ಬೆಲೆಗಳಿಗಿಂತ ಬೆಂಬಲ ಬೆಲೆ ಕಡಿಮೆ ಆಗಿದೆಯೋ, ಹೆಚ್ಚಾಗಿದೆಯೋ, ಅಷ್ಟೇ ಇದೆಯೋ ಎಂಬುದು ಸ್ಪಷ್ಟ ಆಗಬೇಕಿದೆ. ಅದೂ ಅಲ್ಲದೆ ಯಾವ ಆಧಾರದಲ್ಲಿ ಕನಿಷ್ಠ ಬೆಂಬಲ ಬೆಲೆ ನಿರ್ಧರಿಸಲಾಗಿದೆ ಎಂಬುದು ರೈತರಿಗೆ ಗೊತ್ತಾಗ ಬೇಕಿದೆ. ಯಾವುದೇ ಒಂದು ಆಹಾರಧಾನ್ಯ ಎಣ್ಣೆಕಾಳು ಉತ್ಪಾದಿಸಲು ಒಂದುನೂರು ಖರ್ಚಾಗುವುದು ಎಂದಿಟ್ಟು ಕೊಳ್ಳುವಾ. ಅಂಥ ಆಹಾರಧಾನ್ಯಕ್ಕೆ ನೂರಾ ಐವತ್ತು ರೂಪಾಯಿ ಬೆಂಬಲ ಬೆಲೆ ನಿಗದಿಪಡಿಸುವಂತಾಗಬೇಕು. ಒಟ್ಟಾರೆಯಾಗಿ ಈಗ ಪ್ರಕಟಿಸಲಾದ ಬೆಂಬಲ ಬೆಲೆಗಳು ಮಾರುಕಟ್ಟೆಯಲ್ಲಿ
ಹಾಲಿ ಚಾಲ್ತಿಯಲ್ಲಿರುವ ದರಗಳಿಗೆ ಸರಿಸಮ ಆಗಿವೆ. ನಿದರ್ಶನಕ್ಕೆ ಹೇಳಬೇಕೆಂದರೆ ಹತ್ತಿ, ಶೇಂಗಾ, ಸೋಯಾಬಿನ್ ಮೊದಲಾದವುಗಳು ಇವೆ.
ಇನ್ನು ಬೆಂಬಲ ಬೆಲೆ ಹೆಚ್ಚಳದಿಂದಾಗಿ ರೈತರಿಗೆ ಲಾಭ ಎಂದು ಹೇಳುವ ವಿಚಾರ. ನೂರು ರೂಪಾಯಿ ಖರ್ಚು ಮಾಡಿದ ಉತ್ಪನ್ನ ನೂರಾ ಐವತ್ತು ರೂಪಾಯಿಗೆ ಮಾರಾಟವಾದರೆ. ಐವತ್ತು ರೂಪಾಯಿ ಲಾಭ ಆಗುವುದು. ಆದರ ಬದಲಾಗಿ ನೂರು ರೂಪಾಯಿ ಖರ್ಚು ಮಾಡಿ ಉತ್ಪಾದಿಸಿದ ಉತ್ಪಾದನೆಗೆ ಆರವತ್ತೋ ಎಪ್ಪತ್ತೋ ರೂಪಾಯಿಗೆ ಮಾರಾಟವಾದರೆ 30 ರಿಂದ 40 ರೂಪಾಯಿ ನಷ್ಟ ಅಗುವುದು. ಇದು ಲಾಭ ನಷ್ಟದ ವಾಸ್ತವ ಅಷ್ಟೇ ಆಲ್ಲ. ವ್ಯವಹಾರ ವಹಿವಾಟಿನ ವಾಸ್ತವ.
ಹಿಂದಿನ ವರ್ಷದ ಬೆಂಬಲ ಬೆಲೆಗಳಿಗೆ ಹೋಲಿಸಿದರೆ ಪ್ರಸಕ್ತ ಹಂಗಾಮಿಗೆ ಘೋಷಣೆ ಮಾಡಿದ ಬೆಂಬಲ ಬೆಲೆ ಹೆಚ್ಚಾಗಿರುವುದು ಸುಳ್ಳಲ್ಲ. ಇನ್ನು ಸುಮ್ಮಸುಮ್ಮನೆ ಡಾ| ಸ್ವಾಮಿನಾಥನ್ ಆಯೋಗದ ವರದಿಯ ಆನುಷ್ಠಾನ ಎನ್ನುವದಾಗಲಿ, ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಎಂಬ ಹೊಗಳಿಕೆಯ ಮಾತುಗಳು. ರೈತರ ಆದಾಯ ಹೆಚ್ಚಳ ಮಾಡಿದ್ದೇವೆಂದು ಬೆನ್ನು ತಟ್ಟಿಕೊಳ್ಳುತ್ತಿರುವ ಸಂಗತಿಗಳು ಪರಾತ ಪಂಪಿನಿಂದ ಬಲೂನು ಉಬ್ಬಿಸಿದಂತಾಗಿದೆ. ಯಾರು ಏನೇ ಹೇಳಿದರೂ ರೈತರ ಆದಾಯ ಹೆಚ್ಚಿಸುವ ದಿಸೆಯಲ್ಲಿ ಈ ಕ್ರಮ ಒಂದು ಆರಂಭದ ಸಣ್ಣ ಪ್ರಯತ್ನ ಅಷ್ಟೇ!
ಬೆಂಬಲ ಬೆಲೆ ಹೆಚ್ಚಳ ಎಷ್ಟೇ ಇರಲಿ. ಅದರ ಪ್ರಯೋಜನಗಳನ್ನು ರೈತರಿಗೆ ತಲುಪಿಸುವ ಜವಾಬ್ದಾರಿ ಮಹತ್ವದ್ದಾಗಿದೆ. ಇಲ್ಲದಿದ್ದರೆ ಬೆಂಬಲ ಬೆಲೆಗಳು ರೈತರನ್ನು ಅಣಕಿಸಿದಂತೆ; ರೈತರಿಗೆ ಅವಮಾನ ಮಾಡಿದಂತೆ ಆಗಬಾರದಲ್ಲವೇ? ಈ ಮಾತನ್ನು ಯಾಕೆ ಹೇಳಬೇಕಾಯಿತೆಂದರೆ ಕಳೆದ ವರ್ಷ ಮೆಕ್ಕೆ ಜೋಳಕ್ಕೆ ಕೇಂದ್ರ ಸರಕಾರ ಬೆಂಬಲ ಬೆಲೆ ಕೊಡಲೇ ಇಲ್ಲ. ಕಡಲೆಗೆ ಬೆಂಬಲ ಬೆಲೆ ಕೊಡಲಾಗಿತ್ತಾದರೂ ರೈತರು ಬೆಳೆದ ಎಲ್ಲಾ ಕಡಲೆಯನ್ನು ಖರೀದಿ ಕೇಂದ್ರಗಳಲ್ಲಿ ಖರೀದಿ ಮಾಡಲೇ ಇಲ್ಲ. ಅಷ್ಟಿಷ್ಟು ಕಡಲೆ ಖರೀದಿ ಮಾಡಿದ ಮೊತ್ತ ಐದಾರು ತಿಂಗಳಾದರೂ ರೈತರ ಕೈಗೆ ಸಿಗಲೇ ಇಲ್ಲ. ಜೋಳವನ್ನಾಗಲಿ, ಹೆಸರನ್ನಾಗಲಿ ಖರೀದಿ ಮಾಡಲೇ ಇಲ್ಲ. ಇದೇ ಪರಿಸ್ಥಿತಿ ಈ ವರ್ಷ ಮುಂದುವರಿದರೆ ಬೆಂಬಲ ಬೆಲೆಯ ಬದಲಾಗಿ ರೈತರ ಬೆನ್ನಿನ ಮೇಲೆ ಮತ್ತಷ್ಟು ಭಾರ ಹೇರಿದಂತಾಗದೇ ಇರದು.
ರಾಗಿಗೊಂದು ನೀತಿ ಜೋಳಕ್ಕೆ ಅನೀತಿ: ರಾಗಿಗೆ ಎಲ್ಲಾ ಆಹಾರ ಧಾನ್ಯಗಳಿಗಿಂತ ಹೆಚ್ಚಿನ ಬೆಂಬಲ ಬೆಲೆ ಘೋಷಿಸಲಾಗಿದೆ. ಆದರೆ ಅದೂ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಆಗಿದ್ದು ವಾಸ್ತವ. ರಾಗಿಗೆ ರಾಗಿ ಬೆಳೆದ ರೈತನ ಕಣ್ಣಿಗೆ ಬೆಣ್ಣೆ ಹಾಕಿದ ಕೇಂದ್ರ ಸರಕಾರ ಜೋಳ ಬೆಳೆದ ರೈತನ ಕಣ್ಣಿಗೆ ಸುಣ್ಣ ಹಾಕಿದೆ. ರಾಗಿಯಂತೆ ಜೋಳವೂ ಸಿರಿ(ಕಿರು) ಧಾನ್ಯಗಳ ಗುಂಪಿಗೆ ಸೇರಿದೆ. ಜೋಳ ಉತ್ತರ ಕರ್ನಾಟಕದ ಪ್ರಮುಖ ಆಹಾರ ಬೆಳೆ. ಜನರ ಹಸಿವು ನೀಗಿಸುವ ಪೌಷ್ಟಿಕಾಂಶಗಳ ಶ್ರೀಮಂತಿಕೆ ಹೊಂದಿರುವ ಜೋಳ ಸಾವಿ, ನವಣೆ, ಬರಕು ಹಾರಕ, ಸೆಜ್ಜಿಯಂತಹ ಸಿರಿ(ಕಿರು) ಧಾನ್ಯಗಳ ಬೆಂಬಲ ಬೆಲೆ ಹೆಚ್ಚಿಸದೇ ಇರುವುದು ಇಂಥ ಬೆಳೆಗಾರರಿಗೆ ಅವಮಾನ ಮಾಡಿದಂತಾಗಿದೆ.
ಇನ್ನೇನು ತಿಂಗಳೊಪ್ಪತ್ತಿನಲ್ಲಿ ಮುಂಗಾರಿಯಲ್ಲಿ ಬೆಳೆದ ಹೆಸರು, ಉದ್ದು, ಶೇಂಗಾ ಕಟಾವಿಗೆ ಬರಲಿವೆ. ಪ್ರತಿ ಪಂಚಾಯಿತಿ ಯಲ್ಲಿ ಖರೀದಿ ಕೇಂದ್ರ ಆರಂಭಿಸಿ ರೈತರು ಬೆಳೆದು ಖರೀದಿ ಕೇಂದ್ರಕ್ಕೆ ತಂದ ಉತ್ಪನ್ನಗಳನ್ನು ಖರೀದಿಸಿ, ಖರೀದಿ ಮಾಡಿದ ತಕ್ಷಣ ಹಣ ಪಾವತಿ ಮಾಡಬೇಕು. ರಾಜ್ಯ ಸರಕಾರಕ್ಕೆ ಅಗತ್ಯ ಹಣ ಪೂರೈಕೆ ಮಾಡಿ ಕಟ್ಟು ನಿಟ್ಟಾಗಿ ರೈತರ ಉತ್ಪನ್ನ ಖರೀದಿಸುವಂತೆ ಮಾಡಬೇಕಿದೆ. ಅಂದಾಗ ಬೆಂಬಲ ಬೆಲೆಗಳು ರೈತರ ಬೆನ್ನಿಗೆ ಭಾರ ಆಗದೆ. ಬೆನ್ನು ಭಾರ ಕಡಿಮೆ ಮಾಡಬಲ್ಲವು ಬೆಂಬಲ ಬೆಲೆಗಳು. ಅವು ಕಲ್ಪನೆಯ ಬಲೂನು ಆಗದಿರಲಿ. ಸಂತೋಷದ ಬಲೂನು ಆಗಲಿ. ಅದಕ್ಕೆ ವಾಸ್ತವದ ಮುಳ್ಳು ಚುಚ್ಚದಿರಲಿ ಎಂಬುದೇ ಪ್ರಜ್ಞಾವಂತರ ಕಳಕಳಿ ಆಗಿದೆ.
ಈರಯ್ಯ ಕಿಲ್ಲೇದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.