ಅರೆದ ಗಂಧವನ್ನೇ ಮತ್ತೆ ಅರೆಯುವುದೇ?


Team Udayavani, Aug 9, 2018, 6:00 AM IST

23.jpg

ಸಿನೆಮಾ  ಕ್ಷೇತ್ರದಲ್ಲಿ ಅಧ್ಯಯನದ ಕೊರತೆಯಿದೆ. ಸಾವಧಾನವಾಗಿ ಎಲ್ಲ ಘಟಕದವರೂ ಒಂದೇ ಸೂರಿನಲ್ಲಿ ಕುಳಿತು ಚರ್ಚಿಸುವ, ಸಂವಾದಿಸುವ ಪರಿಪಾಠವಿಲ್ಲ. ಅಹಾ! ಎಲ್ಲವೂ ಪಸಂದಾಗಿದೆ, ಅದ್ಭುತ ಎನ್ನುವ (ಕೃತಕ!) ಸಮಾಧಾನ. ಹಾಗಾಗಿ ಪ್ರಯೋಗಗಳು ಬೆರಳೆಣಿಕೆಯಷ್ಟೂ ಇಲ್ಲ. ಪುನರಾವಲೋಕನ ಶಿಬಿರ, ಕಮ್ಮಟಗಳು ಸಾಗಿ ವಿಚಾರ ವಿನಿಮಯವಾಗದಿದ್ದರೆ ಹೇಗೆ?

ಮನೋರಂಜನೆಯೊಂದಿಗೆ ಅರಿವನ್ನೂ ಮೂಡಿಸ‌ಬಲ್ಲ ಸಿನಿಮಾ ಜನಸಂವಹನದ ಪ್ರಮುಖ ಸಾಧನ. ಒಂದು ಕಾಲದಲ್ಲಿ ತಯಾರಾಗುತ್ತಿದ್ದ ಚಲನಚಿತ್ರಗಳು ಸಮಾಜಕ್ಕೆ ಏನಾದರೊಂದು ಘನ ಸಂದೇಶವನ್ನು ಹೊತ್ತಿರುತ್ತಿದ್ದವು. ಆದರೆ ಇಂದು ಸಿನಿಮಾ ನಿರ್ಮಾಣ ಬಹುತೇಕ ಒಂದು ವ್ಯಾಪಾರವಾಗಿದೆ ಎನ್ನುವುದು ನಿಷ್ಠುರ ಸತ್ಯ. ಇಂತಿಷ್ಟು ಕೋಟಿ ರೂಪಾಯಿಗಳ ಭಾರೀ ಖರ್ಚಿನಲ್ಲಿ ಸಿದ್ಧವಾಗುತ್ತಿದೆ,  ಹಿಂದೆ ಯಾರೂ ಬಳಸಿರದ ದೊಡ್ಡ ಹಡಗು, ವಿಮಾನ ಬಳಸಲಾಗುತ್ತಿದೆ ಎಂದೇ ಚಲನಚಿತ್ರಗಳು ಪ್ರಚಾರ ಆರಂಭಿಸಿರುತ್ತವೆ! 

ನಾಯಕ ಬಂದೂಕು, ಲಾಂಗ್‌ ಅಥವಾ ಉರಿಯುವ ಪಂಜನ್ನೋ ಕೈನಲ್ಲಿ ಹಿಡಿಯದ ಸಿನೆಮಾ ಜಾಹೀರಾತುಗಳೇ ಅಪರೂಪ. ನಮ್ಮ ಮಣ್ಣಿಗೆ ಒಗ್ಗದ ಪೋಷಾಕಿನಲ್ಲಿ ಆತ ಮಿಂಚಿರುತ್ತಾನೆ. ಶಿಷ್ಟ ರಕ್ಷಣೆ, ದುಷ್ಟ ರಕ್ಷಣೆಯೇ ನಾಯಕನ ಧ್ಯೇಯವಿರಬಹುದೆ ಎಂದು ಊಹಿಸಲು ಹುಡುಕಿದರೂ ಮುಖಚರ್ಯೆಯಲ್ಲಿ ಅಂಥ ಸಣ್ಣ ಎಳೆ ಕೂಡ ಸಿಗದು. ಚಲನ ಚಿತ್ರಗಳಲ್ಲಿ ಕೊಲೆ, ಕ್ರೌರ್ಯ, ಲೈಂಗಿಕ  ಹಿಂಸೆ ಮೇಲುಗೈಯಾದಾಗ ಎಂಥ‌ ಮೌಲಿಕ ತಿರುಳು ತಾನೆ ಅದು ಹೊಂದಿರಲು ಸಾಧ್ಯ? ಪ್ರೇಕ್ಷಕರ ಅಭಿರುಚಿಯನ್ನು ಕಾಲಕಾಲಕ್ಕೆ ತಿದ್ದುವ, ಸುಧಾರಿಸುವ ನಿರ್ದೇಶಕರು ಶ್ರೇಷ್ಠರೆನ್ನಿಸುತ್ತಾರೆ. ಕನ್ನಡದ ಸಂದರ್ಭದಲ್ಲಿ ಮಹತ್ತರ ಕಾಳಜಿ, ಬದ್ಧತೆಯ ಸಿನಿಮಾ ನಿರ್ದೇಶಕರು ಸಂದಿದ್ದಾರೆ. ಸಂಗೀತ ಪ್ರಧಾನ ಚಿತ್ರವೊಂದರಲ್ಲಿ ನಾಯಕಿ ವೀಣೆಯ ಮೇಲೆ ತಪ್ಪು ತಪ್ಪಾಗಿ ಬೆರಳಾಡಿಸಬಾರದೆಂದು ಆಕೆಗೆ ವೀಣೆ ಕಲಿಸಲಾಗಿತ್ತು. ಅಂತೆಯೇ ಇನ್ನೊಂದು ಚಿತ್ರದಲ್ಲಿ ನಟನಿಗೆ ನಾಟ್ಯದ ಪಾಠ ಹೇಳಿಸಲಾಗಿತ್ತು. ಕಥೆ, ಕಾದಂಬರಿಗಳನ್ನು ತೆರೆಗೆ ತರುವಾಗ ವಹಿಸಲಾಗುತ್ತಿದ್ದ ಮುತು ವರ್ಜಿ ಅಷ್ಟಿಷ್ಟಲ್ಲ. ಪಾತ್ರವೇ ತಾನಾಗಿ ಅಭಿನಯಿಸುವಂತಾಗಲು ಚಿತ್ರೀಕರಣ ಪೂರ್ವದಲ್ಲಿ ನಾಯಕ/ನಾಯಕಿ ಹತ್ತಾರು ಬಾರಿ ಅದನ್ನು ಓದಬೇಕಿತ್ತು. ಗಾಯಕನ ಪಾತ್ರಕ್ಕೆ ಶಾಸ್ತ್ರೀಯ ಸಂಗೀತ ಜ್ಞಾನವಿರುವವರನ್ನೇ ಆಯ್ಕೆ ಮಾಡಲಾಗುತ್ತಿದ್ದ ದಿನಗಳವು. ನಟನೆಗಿಂತಲೂ ಉಚ್ಚಾರಣೆ ಮುಖ್ಯವಾಗಿರುತ್ತಿತ್ತು. ಆದರೆ ಅಂಥ ಶ್ರದ್ಧೆ ಉಳಿದಿದೆಯೇ? ಜನರ ಕೈಯಲ್ಲಿ ಮೊಬೈಲಿದೆ, ಸ್ಮಾರ್ಟ್‌ಫೋನಿದೆ. ಹಾಗಾಗಿ ಅವರು ಟಾಕೀಸಿಗೆ ದೂರವೆಂಬ ತರ್ಕ ಸರಿಯಲ್ಲ. ಉತ್ತಮ ಸಿನಿಮಾ ನಿರ್ಮಿಸಿದರೆ ಖಂಡಿತವಾಗಿ ಮಂದಿ ನೋಡಲು ಸರದಿಯಲ್ಲಿರುತ್ತಾರೆ.

ಜನ ಬಯಸುವುದು ರಂಜನೆ ಸಮೇತ ಅಷ್ಟು ಬೌದ್ಧಿಕ ಸಾಮಗ್ರಿಯನ್ನು. ನಿಜವೆ, ಕುಟುಂಬದವರೆಲ್ಲರೂ ಒಟ್ಟಿಗೆ ಕುಳಿತು ವೀಕ್ಷಿಸಬಹುದಾದ ಚಿತ್ರಗಳು ಬರುತ್ತಿಲ್ಲ. ಅದೇ ವರಸೆ, ಅದೇ ಸವಾಲು. ನೀನು ಅವನ ಕೈಹಿಡಿದರೆ ನನ್ನ ಆಸ್ತಿಯಲ್ಲಿ ಒಂದು ಪೈಸೆ ಸಹ ನಿನಗೆ ಕೊಡುವುದಿಲ್ಲ ಎಂಬ ನಮೂನೆಯ  ಸಿದ್ಧ ಸಂಭಾಷಣೆ ಗಳು. ಪೋಲಿಸ್‌ ಉನ್ನತಾಧಿಕಾರಿಯ ತಮ್ಮ ಇಲ್ಲವೆ ಸಹೋದರನೇ ಕೊಲೆಯೊಂದರಲ್ಲಿ ಭಾಗಿಯಾಗಿರುವ, ನೋಡಲು ಬಂದ ಭಾವೀ ಬೀಗರಿಗೆ ವಧು ಕಾಫಿಗೆ ಸಕ್ಕರೆ ಬದಲು ಉಪ್ಪು ಹಾಕಿ ಉಪಚರಿಸುವುದು-ಹೀಗೆ ಪ್ರೇಕ್ಷಕರು ಮುಂದೆ ಸರಾಗವಾಗಿ ಓ ಕಥೆ ಇಷ್ಟೆ ಅಂತ ಅಂದಾಜಿಸಬಹುದಾದ ಸನ್ನಿವೇಶಗಳು. ಈ ನ್ಯೂನತೆಗಳನ್ನು ಶಮನಗೊಳಿಸುವುದು ಸಿನೆಮಾ ನಿರ್ಮಾಪಕ ನಿರ್ದೇಶಕರದ್ದೇ ಮಾತ್ರವಲ್ಲ ಎಲ್ಲರ ಜವಾಬ್ದಾರಿ. ಒಂದು ವರ್ಷದಲ್ಲಿ ಎಷ್ಟು ಸಿನಿಮಾಗಳು ಬಿಡುಗಡೆಯಾದವು ಮುಖ್ಯವಲ್ಲ. ಅವು ಎಷ್ಟು ಪ್ರಭಾವಿಸಿದವು ಮುಖ್ಯ. ಇಷ್ಟು ದಿನಗಳು ಓಡಿದವು, ಇಷ್ಟನೇಯ ದಿನ ಎಂಬ ಜಾಹೀರೇ ಅನಗತ್ಯ. ಪ್ರೇಕ್ಷಕರೇ ನಿಜವಾದ ವಿಮರ್ಶಕರು. ಒಂದು ಚಲನ ಚಿತ್ರ ಚೆನ್ನಾಗಿದೆ/ಚೆನ್ನಾಗಿಲ್ಲ ಎಂದರೆ ಸಾಲದು. ಏಕೆ ಚೆನ್ನ/ಚೆನ್ನಾಗಿಲ್ಲ ಎನ್ನುವ ವಿವರಗಳೂ ಹಿಂಬಾಲಿಸಬೇಕು. 

ಸಿನೆಮಾ  ಮಾಡಲು ಕಥೆಗಳೇ ಸಿಗುತ್ತಿಲ್ಲ ಎಂಬ ಕೊರಗುಂಟು. ಇದು ಹಾಗಿರಲಿ. ಸಿನಿಮಾಗೆ ಹೆಸರಿಡಲು ಒಂದು ಕಾಲದ ಜನಪ್ರಿಯ ಸಿನೆಮಾ ಹಾಡುಗಳ ಸಾಲುಗಳನ್ನು ಬಳಸುವುದು! ಇದು ಬೌದ್ಧಿಕ ಬರವಲ್ಲ. ನಿರ್ಮಾಪಕರು, ನಿರ್ದೇಶಕರು ಕಥೆಗೆ, ಹಾಡುಗಳಿಗೆ, ನಾಮಕರಣಕ್ಕೆ ವ್ಯವಧಾನ ಕಲ್ಪಿಸಕೊಳ್ಳಬೇಕಷ್ಟೆ. ಹಾಗೆ ನೋಡಿದರೆ ಪ್ರತಿಯೊಬ್ಬರಲ್ಲೂ  ಒಂದು ಕಥೆಯಿದೆ. 

ಸಿನೆಮಾ  ಕ್ಷೇತ್ರದಲ್ಲಿ ಅಧ್ಯಯನದ ಕೊರತೆಯಿದೆ. ಸಾವಧಾನವಾಗಿ ಎಲ್ಲ ಘಟಕದವರೂ ಒಂದೇ ಸೂರಿನಲ್ಲಿ ಕುಳಿತು ಚರ್ಚಿಸುವ, ಸಂವಾದಿಸುವ ಪರಿಪಾಠವಿಲ್ಲ. ಅಹಾ! ಎಲ್ಲವೂ ಪಸಂದಾ ಗಿದೆ, ಅದ್ಭುತ ಎನ್ನುವ (ಕೃತಕ!) ಸಮಾಧಾನ. ಹಾಗಾಗಿ ಪ್ರಯೋಗಗಳು ಬೆರಳೆಣಿಕೆಯಷ್ಟೂ ಇಲ್ಲ. ಪುನರಾವಲೋಕನ ಶಿಬಿರ, ಕಮ್ಮಟಗಳು ಸಾಗಿ ವಿಚಾರ ವಿನಿಮಯವಾಗದಿದ್ದರೆ ಹೇಗೆ? ಸಾಂಸ್ಕೃತಿಕ ವಲಯ ಬೆಳೆಯುವುದು ಹೊಗಳಿಕೆಗಿಂತಲೂ ಹೆಚ್ಚಾಗಿ ತೆಗಳಿಕೆಯಿಂದ. ಆದರೆ ಅದು ರಚನಾತ್ಮಕ ವಾಗಿರಬೇಕಷ್ಟೆ. ಇಂಥದ್ದು ಬೇಕಿತ್ತೆ ಎನ್ನಿಸುವ ಅಲೆಯೊಂದು ಇತ್ತೀಚೆಗೆ ಪ್ರಾರಂಭವಾಗಿದೆ.

ನಾಲ್ಕೆದು ದಶಕಗಳ ಹಿಂದೆ ಒಂದು ಸಿನೆಮಾ ಭರ್ಜರಿ ಜನಪ್ರಿಯತೆ ಗಳಿಸಿರುತ್ತದೆ. ಅದು ಬಿಂಬಿಸುವ ಸಮಾಜಪರ ಸಂದೇಶದ ಬಗ್ಗೆ ಎರಡು ಮಾತಿಲ್ಲ. ಅದರ ಸಂಭಾಷಣೆಗಳು, ಹಾಡುಗಳು ಇಂದಿಗೂ ಮಾತಾಗಿವೆ. ಯಶಸ್ವೀ ಚಿತ್ರವೆಂದರೆ ಇದಪ್ಪ ಎಂಬ ಪ್ರಶಂಸೆಯಿದೆ. ಎಲ್ಲ ಸರಿಯೆ. ಆದರೆ ಅದೇ ಚಿತ್ರವನ್ನು ಹಿಂದೆ ಎಂದೂ ಇಲ್ಲದ ಬಗೆಯಲ್ಲಿ ಇಂದು ಪುನರ್ನಿಮಿಸಲಾಗುತ್ತದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಆ ಚಿತ್ರದ ನಾಯಕ ನಟರು ಕೀರ್ತಿಶೇಷರಾಗಿದ್ದರೂ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಾರೆ! ಇಂಥ ಚಿತ್ರ ಬಿಡುಗಡೆಯಾದ ದಿನ ಅಭಿಮಾನಿಯೊಬ್ಬ ಭಾವೋದ್ವೇಗಕ್ಕೆ ಜೀವವೊಪ್ಪಿಸಿದ್ದು ಎಂಥ ವಿಪರ್ಯಾಸ? ಚಿತ್ರ ಮರುನಿರ್ಮಿತಿಯ ಉದ್ದೇಶ ತಾನೆ ಏನು? ಆ ಪ್ರತಿಭಾಶಾಲಿ ಗತಿಸಿಲ್ಲ, ನಮ್ಮೊಳಗೇ ಇದ್ದಾರೆಂಬ ನಿರೂಪಣೆಯೋ ಅಥವಾ ಅವರ ಅಗಲಿಕೆ ಸ್ವಲ್ಪಮಟ್ಟಿಗಾದರೂ ಈ ಮೂಲಕ ಭರಿಸುವ ಯೋಜನೆಯೋ? ಪ್ರೇಕ್ಷಕರಿಗೆ ಅವರದೇ ಗ್ರಹಿಕೆ, ಸ್ವಂತಿಕೆ, ವಿಚಾರಶೀಲತೆಯಿರುತ್ತದೆ. ಒಂದು ಚಿತ್ರವನ್ನು ಪುನರ್‌ ಸೃಷ್ಟಿಸಿ ಅಂಥ ಪ್ರಬುದ್ಧ ಅಭಿನಯ ಪಟುವನ್ನು ಮರೆಯಲಾಗದು, ಮರೆಯಬೇಡಿ ಎಂದು ಸಂವಹಿಸುವ ಅಗತ್ಯವಿಲ್ಲ. ಆತ ಪ್ರೇಕ್ಷಕರ ಮನೋನೆಲೆಯಲ್ಲಿ ಅವರವರ ಒಳಕಾಣೆಗೆ ತಕ್ಕಂತೆ ಸಲ್ಲುತ್ತಾನೆ. ಒಬ್ಬ ಒಳ್ಳೆಯ ನಟನೇ/ನಟಿಯೇ ತಾನು ಚೆನ್ನಾಗಿ ನಿರ್ವಹಿಸಿದ ಪಾತ್ರವನ್ನೇ ಪುನಃ ನಿರ್ವಹಿಸಬಯಸುವುದಿಲ್ಲ. ಮತ್ತೂ ಉತ್ತಮವಾಗಿ ತಾನು ಮಾಡಬಹುದಾದ ಪಾತ್ರಗಳನ್ನು ಅರಸುವ ಇರಾದೆ ನಟ, ನಟಿಯರಿಗಿರುತ್ತದೆ..

ಆಯಿತು, ಇನ್ನು ಪುನರ್ನಿಮಿತಿಯ ಸಾಧಕ ಬಾಧಕಗಳನ್ನು ಅವಲೋಕಿಸೋಣ. ಅರೆದ ಗಂಧವನ್ನೇ ಮತ್ತೆ ಮತ್ತೆ ಅರೆಯುವ ಅಗತ್ಯವಿರದು. ಪಾಕಪಟುವೊಬ್ಬ ತಾನು ಸಿದ್ಧಪಡಿಸುವ ಹೊಸ ರುಚಿಯ ಹದದ ಮೇಲೆ ಹತೋಟಿ ಸಾಧಿಸಿರುತ್ತಾನೆ. ಅದೇ ಪಾಕಕ್ಕಂಟಿಕೊಳ್ಳದೆ ಮುಂದೆ ಹೊಸ ಪಾಕವೈವಿಧ್ಯದ ಪರಿಣತಿಯತ್ತ ದಾಪುಗಾಲಿಡುತ್ತಾನೆ. ಒಂದು ಚಲನ ಚಿತ್ರ, ಶಿಲ್ಪ, ನೃತ್ಯ, ನಾಟಕ, ವರ್ಣಚಿತ್ರ, ಕಟ್ಟಡ, ಯಂತ್ರ, ಕಸೂತಿ….ಯಾವುದೇ ಸಂರಚನೆ ಸೊಗಸಾಗಿದೆಯೆಂದು ಎಷ್ಟು ಕಾಲ ಅದನ್ನು ಹೊಗಳುತ್ತಿರಬೇಕು? ಅದರ ನಿಜವಾದ ಶ್ಲಾಘನೆ ಅಂತರ್ಗತ ವಾಗಿರುವುದು ಅಂಥದ್ದರ ಪ್ರಭಾವದಿಂದ ಇನ್ನೊಂದು, ಮತ್ತೂಂದು ಕಲಾ ಕೃತಿಯ ರೂಪಣೆಯ ಯತ್ನದಲ್ಲಿ, ಹೊಸ ಚಿಂತನೆಯಲ್ಲಿ, ಹೊಸ ಹಾದಿಯಲ್ಲಿ, ಶೈಲಿಯಲ್ಲಿ. ಈ ಹಿನ್ನೆಲೆಯಲ್ಲೇ ಮೆಕ್ಸಿಕೋದ ಪ್ರಖ್ಯಾತ ಸಿನೆಮಾ ನಿರ್ದೇಶಕ ಅಲೆಜಾಂಡ್ರೊ ಇನಾರಿಟೊ ನುಡಿಯುತ್ತಾರೆ; “”ಸಿನೆಮಾ ನಮ್ಮನ್ನು ನಾವೇ ಆಗಿಂದಾಗ್ಗೆ ನೋಡಿಕೊಳ್ಳುವ ಕನ್ನಡಿ”. ನಮ್ಮಲ್ಲಿ ಅವಕಾಶಗಳಿಗಾಗಿ ಹಂಬಲಿಸುವ ಉದಯೋನ್ಮುಖ ಕಲಾವಿದರು ಧಾರಾಳವಾಗಿದ್ದಾರೆ. “ಮರುಸೃಷ್ಟಿ’ಯ ಸಾಹಸದ ಬದಲು ಸಂದ ಪ್ರತಿಭಾವಂತ ನಟರ ಹೆಸರಿನಲ್ಲಿ ಹೊಸ ಸಿನೆಮಾ ತಯಾರಿಸುವ ಯೋಜನೆ ಕೈಗೊಂಡು ಅದರಲ್ಲಿ ಆಕಾಂಕ್ಷಿಗಳಿಗೆ ಅವಕಾಶ ಒದಗಿಸಬಹು ದಲ್ಲವೇ?  ಅಂದಕಾಲತ್ತಲಿನ ಸಿನಿಮಾಕರ್ತರು ಆ ದಿನಗಳಿಗೆ ಹಳೆಯದಾದ ಚಿತ್ರಗಳಿಗೇ ಜೋತು ಬಿದ್ದಿದ್ದರೆ ಸೃಜನಶೀಲತೆ ಅಷ್ಟರಮಟ್ಟಿಗೆ ಸ್ಥಗಿತಗೊಳ್ಳುತ್ತಿತ್ತು. ಗತದ ಅತಿ ವೈಭವೀಕರಣ ವರ್ತಮಾನದ ಚಿಗುರನ್ನು ಉಪೇಕ್ಷಿಸಿದಂತೆ.

ಬಿಂಡಿಗನವಿಲೆ ಭಗವಾನ್‌

ಟಾಪ್ ನ್ಯೂಸ್

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

3-

Investigative Authorities: ಕುಸಿಯುತ್ತಿದೆ ತನಿಖಾ ಪ್ರಾಧಿಕಾರಗಳ ವಿಶ್ವಾಸಾರ್ಹತೆ !

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Brahmavar

Siddapura: ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.