ನಮ್ಮ ಆರ್ಥಿಕತೆಯ ಚಿತ್ರಣ ವಿಶ್ವಾಸಾರ್ಹವಾದುದೆ?
Team Udayavani, Jul 5, 2017, 7:21 AM IST
ಬಿಪಿಎಲ್ ಕಾರ್ಡು ಪಡೆಯಲು ಆದಾಯ ಪ್ರಮಾಣ ಪತ್ರವೇ ಆಧಾರ. ಆದರೆ ಆದಾಯ ಪತ್ರಕ್ಕೂ ಆದಾಯಕ್ಕೂ ಸಂಬಂಧವೇ ಇಲ್ಲದೆ ಹೋದಲ್ಲಿ ಆರ್ಥಿಕತೆಯಲ್ಲಿ ಪಾರದರ್ಶಕತೆಯನ್ನು ನಿರೀಕ್ಷಿಸುವುದಾದರೂ ಹೇಗೆ? ಇಲ್ಲಿ ಇನ್ನೂ ಒಂದು ವಿಶೇಷವೆಂದರೆ, ಒಮ್ಮೆ ಆದಾಯ ಪ್ರಮಾಣ ಪತ್ರ ಮಾಡಿಸಿದರೆ ಅದು ಐದು ವರ್ಷಗಳ ಮಟ್ಟಿಗೆ ಸಿಂಧುವೆನಿಸುತ್ತದೆ. ಅಂದರೆ ಐದು ವರ್ಷ ಕಾಲ ಆದಾಯದಲ್ಲಿ ಏರುಪೇರು ಆಗದು ಎಂದರ್ಥವೆ?
ಕಳೆದ ಮೂರು ವರ್ಷಗಳಿಂದ ಹಣದುಬ್ಬರ ಇಳಿಕೆಯ ಹಾದಿಯಲ್ಲಿದೆ. 2018ರ ಆರ್ಥಿಕ ವರ್ಷದ ಮೊದಲರ್ಧದಲ್ಲಿ ಗ್ರಾಹಕ ಬೆಲೆ ಸೂಚ್ಯಂಕ ಹಣದುಬ್ಬರ ಶೇ.2.5ಕ್ಕಿಂತಲೂ ಕೆಳಗಿಳಿಯಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಅಂದಾಜಿಸಿದೆ. ದೇಶದ ಆರ್ಥಿಕತೆ ಚೇತರಿಸುತ್ತಿರುವ ಕುರುಹು ಇದು. ಇದೊಂದು ಸಮಾಧಾನಕರ ಸಂಗತಿಯೂ ಹೌದು. ಆದರೆ ನಮ್ಮ ದೇಶದಲ್ಲಿ ಆರ್ಥಿಕತೆಯ ಚಿತ್ರಣ ಎಷ್ಟರಮಟ್ಟಿಗೆ ಸ್ಪಷ್ಟವಾಗಿರಬಲ್ಲುದು? ಇಲ್ಲಿಯ ಆರ್ಥಿಕ ಅಂಕಿ-ಅಂಶಗಳು ಎಷ್ಟರಮಟ್ಟಿಗೆ ವಿಶ್ವಾಸಾರ್ಹವಾದುದು? ಎಂಬುದು ಒಂದಿಷ್ಟು ಜಿಜ್ಞಾಸೆಗೆ ಎಡೆಮಾಡುವ ಪ್ರಶ್ನೆ.
ಅಂಕೆಯಿಲ್ಲದ ಬಿಪಿಎಲ್ ಕಾರ್ಡುದಾರರ ಸಂಖ್ಯೆ
ಈ ಕುಟುಂಬದ ವಾರ್ಷಿಕ ಆದಾಯವು ಎಲ್ಲ ಮೂಲಗಳಿಂದ ಒಟ್ಟಾಗಿ ರೂ.11,000 ಮಾತ್ರ ಎಂದು ಪ್ರಮಾಣಿಕರಿಸಲಾಗಿದೆ ಎಂಬುದಾಗಿ ಆದಾಯ ಮತ್ತು ಜಾತಿ ಪ್ರಮಾಣ ಪತ್ರದಲ್ಲಿ ತಹಸೀಲ್ದಾರರು ಸಹಿ ಮಾಡಿರುವುದನ್ನು ನೋಡಿರಬಹುದು. ಅದು ರೂ.11,000ದಿಂದ ರೂ.20,000ದವರೆಗೂ ಇರಬಹುದು. ಜತೆಗೆ ದಯವಿಟ್ಟು ಈ ಪ್ರಮಾಣ ಪತ್ರದ ನೈಜತೆಯನ್ನು ಪರಿಶೀಲಿಸಲು ನಾಡಕಚೇರಿಯ ವೆಬ್‌ಸೈಟನ್ನು ಸಂಪರ್ಕಿಸಬಹುದು ಎಂಬ ಒಕ್ಕಣೆಯನ್ನೂ ಅದರ ಕೆಳಗೆ ಕಾಣಬಹುದು. ಇಲ್ಲೊಂದು ಪ್ರಶ್ನೆ. ನೈಜತೆ ಎಂದರೇನು? ಆ ಕುಟುಂಬದ ವಾರ್ಷಿಕ ಆದಾಯ ರೂ.11,000 ಮಾತ್ರ ಎಂಬುದೆ? ಹೌದು ಎಂದಾದಲ್ಲಿ ಅದು ನಂಬಲರ್ಹವೆ? ಅಷ್ಟು ಕಡಿಮೆ ಆದಾಯದಲ್ಲಿ ಇಂದಿನ ದಿನಗಳಲ್ಲಿ ದಿನ ತೆಗೆಯಲು ಸಾಧ್ಯವೆ? ಅಷ್ಟರಲ್ಲೇ ದಿನ ತೆಗೆಯುವವರು ನಮ್ಮಲ್ಲಿದ್ದಾರೆ ಎಂದರೆ ನಮ್ಮ ದೇಶದ ಆರ್ಥಿಕ ಸ್ಥಿತಿಗತಿ ದಯನೀಯ ಸ್ಥಿತಿಯಲ್ಲಿದೆ ಅನಿಸದೆ? ಗಣತಿ ಕಾರ್ಯಕ್ಕೆ ಹೋದವರೂ ಆ ಬಗ್ಗೆ ಹೇಳುವುದು ಕೇಳಿದ್ದೇನೆ. ತಾರಸಿ ಮನೆ, ಮನೆ ಮುಂದೆ ಬೈಕು ಅಥವಾ ಕಾರು. ಹೀಗಿದ್ದೂ ವಾರ್ಷಿಕ ಆದಾಯ ಪ್ರಮಾಣ ಪತ್ರದಲ್ಲಿ ಆದಾಯ ರೂ.20,000ಕ್ಕಿಂತಲೂ ಕಡಿಮೆ! ಆ ಬಗ್ಗೆ ಪ್ರಶ್ನಿಸಿದಲ್ಲಿ “ಹೌದು ಅಷ್ಟೇ. ಹೆಚ್ಚು ಬರೆದುಬಿಡ್ಬೇಡಿ’ ಅಂತ ಬಾಯು¾ಚ್ಚಿಸಿಬಿಡುತ್ತಾರೆ ಅಂತ. ಎಲ್ಲರೂ ಹಾಗೆ ಅನ್ನುತ್ತಿಲ್ಲ. ಸರಿ. ಸರಕಾರಿ ಉದ್ಯೋಗವಿಲ್ಲ, ಆದಾಯಕ್ಕೆ ಪುರಾವೆಯಿಲ್ಲ, ಗ್ರಾಮ ಲೆಕ್ಕಿಗನ ಸಹಿ ಬಿದ್ದರೆ ಮುಗಿಯಿತು. ಪರಿಣಾಮವಾಗಿಯೇ ನಮ್ಮ ರಾಜ್ಯದಲ್ಲಿ ಒಟ್ಟು 1.31 ಕೋಟಿ ಕುಟುಂಬಗಳ ಪೈಕಿ 1.1 ಕೋಟಿ ಕುಟುಂಬದವರು ಬಿಪಿಎಲ್ ಕಾರ್ಡು ಹೊಂದಿರುವರು. ಬಿಪಿಎಲ್ ಕಾರ್ಡುಗಳೇ ಬಡತನಕ್ಕೆ ಪುರಾವೆ ಎಂದಾದಲ್ಲಿ ರಾಜ್ಯದ ಜನಸಂಖ್ಯೆಯಲ್ಲಿ ಶೇ.83ರಷ್ಟು ಬಡವರು ಎಂದ ಹಾಗಾಯಿತು ಎಂಬುದಾಗಿ ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾಗಿದ್ದ ದಿನೇಶ ಗುಂಡುರಾವ್ ಕಳವಳ ವ್ಯಕ್ತಗೊಳಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಅವರು ನಕಲಿ ಕಾರ್ಡುದಾರರಿಗೆ ಕಡಿವಾಣ ಹಾಕಲೂ ಮುಂದಾಗಿದ್ದರು. ದೊಡ್ಡ ದೊಡ್ಡ ತಿಮಿಂಗಿಲಗಳು ಬಹಳಷ್ಟು ನುಂಗುವಾಗ ಇದೇನೂ ದೊಡ್ಡದಲ್ಲ ಬಿಡಿ. ಬಿಪಿಎಲ್ ಕಾರ್ಡು ಪಡೆಯಲು ಆದಾಯ ಪ್ರಮಾಣ ಪತ್ರವೇ ಆಧಾರ. ಆದರೆ ಆದಾಯ ಪತ್ರಕ್ಕೂ ಆದಾಯಕ್ಕೂ ಸಂಬಂಧವೇ ಇಲ್ಲದೆ ಹೋದಲ್ಲಿ ಆರ್ಥಿಕತೆಯಲ್ಲಿ ಪಾರದರ್ಶಕತೆಯನ್ನು ನಿರೀಕ್ಷಿಸುವುದಾದರೂ ಹೇಗೆ? ಇಲ್ಲಿ ಇನ್ನೂ ಒಂದು ವಿಶೇಷವೆಂದರೆ, ಒಮ್ಮೆ ಆದಾಯ ಪ್ರಮಾಣ ಪತ್ರ ಮಾಡಿಸಿದರೆ ಅದು ಐದು ವರ್ಷಗಳ ಮಟ್ಟಿಗೆ ಸಿಂಧುವೆನಿಸುತ್ತದೆ. ಅಂದರೆ ಐದು ವರ್ಷ ಕಾಲ ಆದಾಯದಲ್ಲಿ ಏರುಪೇರು ಆಗುವುದಿಲ್ಲ ಎಂದರ್ಥವೆ?
ಲೆಕ್ಕಕ್ಕೆ ಸಿಗದ ರೊಕ್ಕವೇ ಹೆಚ್ಚು
ಸರಕಾರಿ ನೌಕರರಾಗಿದ್ದಲ್ಲಿ ಅವರ ಆದಾಯ ಲೆಕ್ಕಕ್ಕೆ ಸಿಗುತ್ತದೆ. ಆದರೆ ನಮ್ಮಲ್ಲಿ ಬಹುತೇಕ ಜನರು ಕೂಲಿ-ನಾಲಿ ಮಾಡುವವರು. ಇಲ್ಲವೇ ಗೂಡಂಗಡಿ ಅಥವಾ ರಸ್ತೆ ಬದಿ ವ್ಯಾಪಾರದಲ್ಲಿ ಬದುಕು ಕಟ್ಟಿಕೊಳ್ಳುವವರು. ಲಕ್ಷ ಗಳಿಸಿದರೂ ಲೆಕ್ಕವಿಲ್ಲ. ಕೋಟಿ ಗಳಿಸುವ ಉದ್ಯಮಿಗಳ ಸಂಪಾದನೆಯೂ ಅಷ್ಟೆ. ಎಲ್ಲವೂ ದಾಖಲಾಗುವುದಿಲ್ಲ. ಏನಿದ್ದರೂ ಅವರದ್ದು ಹರಿದಾಸರ ಹರಿಕಥೆಯ ಉಪಕತೆಯಲ್ಲಿ ಪ್ರಾಸಂಗಿಕವಾಗಿ ಬರುವ ರಾಮನ ಲೆಕ್ಕ-ಕೃಷ್ಣನ ಲೆಕ್ಕ! ಒಂದು ಸರಕಾರಕ್ಕೆ. ಒಂದು ಸ್ವಂತಕ್ಕೆ. ಅಂಥವರ ವ್ಯವಹಾರದಲ್ಲಿ ಪಾರದರ್ಶಕತೆ ನಿರೀಕ್ಷಿಸುವುದು ಕಷ್ಟ. ಅವರು ಸರಕಾರದ ಕಣ್ಣು ತಪ್ಪಿಸಿ ಕೂಡಿಡುತ್ತಾರೆ. ಅಲ್ಲೋ ಇಲ್ಲೋ ಕೆಲವು ಕುಳಗಳ ಮೇಲಷ್ಟೇ ತೆರಿಗೆ ಅಧಿಕಾರಿಗಳ ದಾಳಿ ನಡೆಯುತ್ತದೆ. ಇಂತಹ ಲೆಕ್ಕಕ್ಕೆ ಸಿಗದ ರೊಕ್ಕವೇ ನಮ್ಮ ಆರ್ಥಿಕ ಪಾರದರ್ಶಕತೆಗಿರುವ ದೊಡ್ಡ ಸವಾಲು.
ಡಿಜಿಟಲೀಕರಣ ಇಂದಿನ ಅಗತ್ಯ
ಹಣಕಾಸಿನ ವ್ಯವಹಾರದಲ್ಲಿ ಪಾರದರ್ಶತೆ ಕಾಯ್ದುಕೊಳ್ಳಬೇಕಾದರೆ ಕೊಡು-ಕೊಳ್ಳುವಿಕೆಗಳೆಲ್ಲವೂ ಬ್ಯಾಂಕ್ ಮೂಲಕ ನಡೆಯಬೇಕಿದೆ. ಆ ನಿಟ್ಟಿನಲ್ಲಿ ಡಿಜಿಟಲೀಕರಣ ಇಂದಿನ ಅಗತ್ಯವಾಗಿದೆ. ಡಿಜಿಟಲ್ ಇಂಡಿಯಾದ ಕನಸು ಹೊತ್ತು ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿಯವರು ನಿನ್ನೆ-ಮೊನ್ನೆ ಮಾಡಿದ ಭಾಷಣದಲ್ಲೂ ಡಿಜಿಟಲೀಕರಣದ ಬಗ್ಗೆ ಮಾತನಾಡಿದ್ದಾರೆ. ಡಿಜಿಟಲ್ ಸಾಕ್ಷರತೆ ಬಗ್ಗೆ ಒತ್ತಿ ಹೇಳಿದ್ದಾರೆ. ಇಷ್ಟರಲ್ಲೇ ನಗದು ರಹಿತ ವಹಿವಾಟಿಗೆ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜನ ಧನ ಯೋಜನೆಯಡಿ ಗ್ರಾಮೀಣ ಪ್ರದೇಶದವರಿಗೂ ಬ್ಯಾಂಕ್ ಖಾತೆ ತೆರೆಯಲು ಪ್ರೇರೇಪಿಸಲಾಗಿದೆ. ಇ-ಬ್ಯಾಂಕಿಂಗ್, ನೆಫ್ಟ್ ಬ್ಯಾಂಕ್ ಖಾತೆಗೆ ಜೋಡಿಸಲಾಗಿದೆ. ಆರ್ಥಿಕ ಪಾರದರ್ಶಕತೆಯನ್ನು ನಿರೀಕ್ಷಿಸಲಾಗಿದೆ. ಆದರೆ ಹಣಕಾಸಿನ ವ್ಯವಹಾರವು ಬ್ಯಾಂಕ್ ಮೂಲಕ ನಡೆಯದ ಹೊರತು ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿ ಪ್ರಯೋಜವಿಲ್ಲವಷ್ಟೆ.
ಜನ ಬದಲಾಗಬೇಕಿದೆ
ದೇಶದ ಹಣಕಾಸಿನ ಸ್ಥಿತಿಗತಿ ದೇಶದ ಜನತೆಯ ಹಣಕಾಸಿನ ಅಂಕಿ-ಅಂಶಗಳನ್ನು ಅವಲಂಬಿಸಿದೆ. ಅದು ಆರ್ಥಿಕತೆಯಲ್ಲಿನ ಪಾರದರ್ಶಕತೆಯನ್ನು ಅವಲಂಬಿಸಿದೆ. ಹಣಕಾಸಿನ ವಿಚಾರದಲ್ಲಿ ಪಾರದರ್ಶಕತೆ ಕಾಯ್ದುಕೊಂಡು ಬರಬೇಕಾದರೆ ಜನ ಬದಲಾಗಬೇಕಿದೆ. ಜನರ ಧೋರಣೆಯಲ್ಲಿ ಸುಧಾರಣೆಯಾಗಬೇಕಿದೆ. ಸರಕಾರದಿಂದ ಸಿಗುವ ಸವಲತ್ತುಗಳನ್ನು ನಮ್ಮದಾಗಿಸಿಕೊಳ್ಳಬೇಕು, ಅದಕ್ಕಾಗಿ ಏನಕೇನ ಪ್ರಕಾರೇಣ ಬಿಪಿಎಲ್ ಕಾರ್ಡ್ ಉಳಿಸಿಕೊಳ್ಳಬೇಕು, ಅದನ್ನು ಹೊಂದಿರುವುದೇ ಒಂದು ಪ್ರತಿಷ್ಠೆ ಎಂಬ ನಿಲುವು ಬದಲಾಗಬೇಕಿದೆ. ಆದಾಯ ವಿಚಾರದಲ್ಲಿ ಆದಷ್ಟು ಪಾರದರ್ಶಕವಾಗಿದ್ದುಕೊಂಡು ಸಕಾಲಕ್ಕೆ ತೆರಿಗೆ ಪಾವತಿಸಬೇಕಿದೆ. ಜತೆಜತೆಗೆ ಕ್ಷಣಕ್ಷಣಕ್ಕೂ ಬದಲಾಗುವ ಹೊಸ ವ್ಯವಸ್ಥೆಗೆ ನಮ್ಮನ್ನು ನಾವು ಒಗ್ಗಿಸಿಕೊಳ್ಳಬೇಕಿದೆ. ಡಿಜಿಟಲೀಕರಣಕ್ಕೂ ನಮ್ಮನ್ನು ಹೊಂದಿಸಿಕೊಳ್ಳಬೇಕಿದೆ. ವಾಟ್ಸಪ್, ಫೇಸ್‌ಬುಕ್‌ಗಳಿಗಷ್ಟೇ ಸೀಮಿತಗೊಳ್ಳುವ ನಮ್ಮ ತಾಂತ್ರಿಕ ತಿಳುವಳಿಕೆಯನ್ನು ವಿಸ್ತರಿಸಬೇಕಿದೆ. ದೇಶದ ಹಿತದೃಷ್ಟಿಯಿಂದಲಾದರೂ ಡಿಜಿಟಲ್ ಸಾಕ್ಷರರಾಗಬೇಕಿದೆ.
ರಾಂ ಎಲ್ಲಂಗಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.