“ಕಾಡು’ವವರ ನಡುವೆ ಕಾಡ್ಗಿಚ್ಚು


Team Udayavani, Apr 2, 2018, 6:15 AM IST

Wildfire-karnataka.jpg

ಜಗತ್ತಿನಲ್ಲೇ ಈವರೆಗೆ ಮರಕ್ಕೆ ಮರ ಉಜ್ಜಿ, ಕಲ್ಲಿಗೆ ಕಲ್ಲು ಬಡಿದು ಕಾಡ್ಗಿಚ್ಚು ಆದಂತಹ ನಿದರ್ಶನಗಳು ಎಲ್ಲೂ ಇಲ್ಲ. ಅನಾದಿ ಕಾಲದಿಂದಲೂ ಈ ಕಪೋಲ ಕಲ್ಪಿತ ಕಥೆಯನ್ನು ಸಾಗಿಸುತ್ತಾ ಬಂದಿರುವುದರಿಂದ ಕಾಡ್ಗಿಚ್ಚು ಸಹಜ ಎಂಬ ಅರಿವಿನಲ್ಲಿದ್ದಾರೆ. ಈವರೆಗಿನ ಎಲ್ಲ ಕಾಡ್ಗಿಚ್ಚುಗಳ ಹಿಂದೆ ಅಗೋಚರವಾಗಿ ಮಾನವ ಇದ್ದಾನೆ. ಕಾಡಿನಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನು ಮರೆಮಾಡಲು ಬೆಂಕಿಹಾಕಿ ಕಾಡ್ಗಿಚ್ಚು ಎಂದು ಹೇಳುತ್ತಾರೆ. 

ಸಾಮಾನ್ಯವಾಗಿ ಬಹುತೇಕ ಜನರಲ್ಲಿ ಅದರಲ್ಲೂ ಹೆಚ್ಚಾಗಿ ವಿದ್ಯಾರ್ಥಿಗಳಲ್ಲಿ ಕಾಡ್ಗಿಚ್ಚು ಹೇಗೆ ಉದ್ಭವಿಸುತ್ತದೆ ಎಂದು ಪ್ರಶ್ನಿಸಿದರೆ ಅವರ ಉತ್ತರ ಹೀಗಿರುತ್ತದೆ-“ಮರ ಮರಗಳು ಉಜ್ಜಿ ಘರ್ಷಣೆಯಾದಾಗ ಮತ್ತು ಜಿಂಕೆ ಓಡುವಾಗ ಕಲ್ಲಿಗೆ ಕಲ್ಲು ತಾಗಿ ಬೆಂಕಿ ಉದ್ಭವಿಸಿ ಕಾಡ್ಗಿಚ್ಚು ಉಂಟಾಗುತ್ತದೆ’ ಎಂದು. 

“ಮರಗಳಿಗೆ ಮತ್ತು ಜಿಂಕೆಗಳಿಗೆ ಕಾಡಿಗೆ ಬೆಂಕಿ ಹಾಕುವುದು ಬಿಟ್ಟು ಬೇರೆ ಕೆಲಸ ಇಲ್ಲವಾ?’ ಎಂದು ಮೂರನೆಯವರು ಪ್ರಶ್ನಿಸಬೇಕಾಗುತ್ತದೆ. ಕಾಡ್ಗಿಚ್ಚು ಬಗ್ಗೆ ಈ ರೀತಿಯ ಉತ್ತರ ಬಹಳಷ್ಟು ಸಮಯಗಳಿಂದ ಬಂದಿರುವುದರಿಂದ ಇಂದಿಗೂ ಬಹಳಷ್ಟು ಜನರು ಇದು ಸತ್ಯವೆಂದೇ ನಂಬಿಕೊಂಡು ಬಂದಿರುತ್ತಾರೆ. ಜಗತ್ತಿನಲ್ಲೇ ಈವರೆಗೆ ಮರಕ್ಕೆ ಮರ ಉಜ್ಜಿ, ಕಲ್ಲಿಗೆ ಕಲ್ಲು ಬಡಿದು ಕಾಡ್ಗಿಚ್ಚು ಆದಂತಹ ನಿದರ್ಶನಗಳು ಎಲ್ಲೂ ಇಲ್ಲ. ಯಾರೋ ಅನಾದಿ ಕಾಲದಿಂದಲೂ ಈ ಕಪೋಲ ಕಲ್ಪಿತ ಕಥೆಯನ್ನು ಸಾಗಿಸುತ್ತಾ ಬಂದಿರುವುದರಿಂದ ಕಾಡ್ಗಿಚ್ಚು ಸಹಜ ಎಂಬ ಅರಿವಿನಲ್ಲಿದ್ದಾರೆ. ಆದರೆ ಈವರೆಗೆ ಆದಂತಹ ಎಲ್ಲಾ ಕಾಡ್ಗಿಚ್ಚುಗಳ ಹಿಂದೆ ಅಗೋಚರವಾಗಿ ಒಬ್ಬ ಮಾನವ ಇದ್ದಾನೆ ಮತ್ತು ಆತನ ಅಕ್ರಮ ಚಟುವಟಿಕೆಗಳಿರುತ್ತವೆ. 

ಅರಣ್ಯ ಅತಿಕ್ರಮಣದಿಂದಾಗಿ ಕಾಡಿನ ಒಳಹೊಕ್ಕುವವರು ಹೆಚ್ಚಾಗುತ್ತಿದ್ದು ಅಡವಿಯೊಳಗಿನ ಅವರ ಕಾನೂನುಬಾಹಿರ ಚಟುವಟಿಕೆಗಳನ್ನು ಮರೆಮಾಡಲು ಕಾಡಿಗೆ ಬೆಂಕಿಹಾಕಿ ಕಾಡ್ಗಿಚ್ಚು ಬಿದ್ದಿದೆ ಎಂದು ಹೇಳುತ್ತಾರೆ. ಕಾಡ್ಗಿಚ್ಚು ಬಿದ್ದಿದೆ ಎಂದರೆ ಅದೇನು ಆಕಾಶದಿಂದ ಬೀಳುವುದೇ? ಆದುದರಿಂದ ಕಾಡ್ಗಿಚ್ಚು ಬಿದ್ದಿದೆ ಎಂದು ಹೇಳದೇ ಕಾಡ್ಗಿಚ್ಚು ಹಾಕಿದ್ದಾರೆ ಎಂದು ವಾದಿಸಿ. ಕಾಡ್ಗಿಚ್ಚು ಸಹಜ ಅಲ್ಲ ಅದು ಕೃತಕವಾಗಿದ್ದು ಯಾರೋ ಎಲ್ಲೋ ಕಾಡೊಳಗೆ ನುಗ್ಗಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಕಾಡ್ಗಿಚ್ಚು ಹಬ್ಬಿಸಿ ಯಾವುದೋ ಮರ ಮತ್ತು ಜಿಂಕೆಯ ಮೇಲೆ ಅಪವಾದ ಹಾಕುವುದೆಂದರೆ? ಇದನ್ನು ನಂಬುವುದು ಎಲ್ಲಕ್ಕಿಂತ ದೊಡ್ಡ ಅಪರಾಧವಾಗಿರುತ್ತದೆ.

ಪಶ್ಚಿಮಘಟ್ಟದ ಅಡವಿ, ಗಿರಿ ಶಿಖರಗಳು ಇಂದು ಯಾವ ರೀತಿಯಲ್ಲಿ ನೆಮ್ಮದಿಯನ್ನು ಕಳೆದುಕೊಳ್ಳುತ್ತಿವೆ ಎಂದರೆ ಇನ್ನು ಕೆಲವೇ ಕೆಲವು ವರ್ಷಗಳಲ್ಲಿ ಪಶ್ಚಿಮಘಟ್ಟದ ಮಳೆಕಾಡುಗಳು ಕ್ಷೀಣಿಸಿ, ನದಿ ಮೂಲಗಳು ಮಾಯವಾಗಿ ಹಿಂದೆ ಇಲ್ಲಿ ಎಷ್ಟೊಂದು ದಟ್ಟ ಕಾಡಿದ್ದವಂತೆ, ಇಲ್ಲಿ ನದಿ ಮೂಲಗಳು ಹುಟ್ಟುತ್ತಿದ್ದವಂತೆ, ಇದರಿಂದಾಗಿ ಧಾರಾಳ ಮಳೆ ಸುರಿಯುತ್ತಿತ್ತಂತೆ… ಎಂಬ ಅಂತೆ ಕಂತೆಗಳ ಸಂತೆ ಮಾತ್ರ ಉಳಿಯಬಲ್ಲವು. ಒಂದೆಡೆ ನಮ್ಮ ಸರಕಾರವು ಪಶ್ಚಿಮಘಟ್ಟ ಉಳಿಸಿ, ನೀರಿಗಾಗಿ ಅರಣ್ಯ, ಕೋಟಿವೃಕ್ಷ ಆಂದೋಲನ, ಹಸಿರು ಉಳಿಸಿ ಕಾಡು ಬೆಳೆಸಿ ಎಂಬ ಭಾಷಣ ಫೋಷಣೆಗಳೊಂದಿಗೆ ಒಂದಷ್ಟು ಯೋಜನೆಗಳನ್ನು ಹಮ್ಮಿಕೊಳ್ಳುತ್ತದೆ. 

ಇನ್ನೊಂದೆಡೆ ಇದೇ ಸರಕಾರದ ಪ್ರತಿನಿಧಿಗಳು ಅಗೋಚರವಾಗಿ ಪಶ್ಚಿಮಘಟ್ಟವನ್ನು ಭಕ್ಷಣೆ ಮಾಡುವವರಿಗೆ ರಕ್ಷಣೆ ನೀಡಿ ಪರಿಸರ ವಿನಾಶಕ ಯೋಜನೆಗಳಿಗೆ ಅನುಮತಿ ನೀಡಿ ಇಬ್ಬಗೆಯ ನೀತಿಯನ್ನು ಅನುಸರಿಸುತ್ತಿದ್ದಾರೆ. ರೆಸಾರ್ಟ್‌ ಮಾಫಿಯಾ, ಎಸ್ಟೇಟ್‌ ಮಾಫಿಯಾ, ಟಿಂಬರ್‌ ಮಾಫಿಯಾ, ಗಾಂಜಾ ಮಾಫಿಯಾ, ಅಕ್ರಮ ಬೇಟೆ ಮುಂತಾದವುಗಳಿಂದ ಪಶ್ಚಿಮಘಟ್ಟವು ಇಂದು ಯಾವ ರೀತಿ ತನ್ನ ತನುವನ್ನು ಕಳೆದುಕೊಂಡಿದೆ ಎಂದರೆ ವರ್ಷದಿಂದ ವರ್ಷಕ್ಕೆ ಮಳೆ ಕಡಿಮೆಯಾಗುತ್ತಾ ನದಿ ಮೂಲಗಳು ಬಡಕಲಾಗುತ್ತಾ ವನ್ಯ ಜೀವಿಗಳು ನಾಶವಾಗುತ್ತಾ, ನೀರಿನ ಸಮಸ್ಯೆ ಹೆಚ್ಚಾಗುತ್ತಾ ಬರಗಾಲದ ಛಾಯೆ ನಮ್ಮನ್ನಾ ವರಿಸುತ್ತಿದೆ. ಹಾಗಾದರೆ ಈ ರೀತಿ ಅರಣ್ಯ ಅತಿಕ್ರಮಣ, ಒತ್ತುವರಿಗೆ ಕಾನೂನು ನಿಯಮ, ನಿಬಂಧನೆಗಳಿಲ್ಲವೇ? ಅರಣ್ಯ ಇಲಾಖೆ, ಸರಕಾರ ಸುಮ್ಮನಿದೆಯೇ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಕೆಲವು ಪ್ರಶ್ನೆಗಳಿಗೆ ಉತ್ತರಗಳೇ ಇರುವುದಿಲ್ಲ.. ಕೆಲವು ಉತ್ತರಗಳಿಗೆ ಪ್ರಶ್ನೆಗಳೇ ಸರಿ ಹೊಂದುವುದಿಲ್ಲ ಎಂಬಂತೆ ಈ ಅರಣ್ಯ ಇಲಾಖೆ ಮತ್ತು ಅರಣ್ಯ ಮಾಫಿಯಾಗಳ ನಡುವಿನ ಸಂಬಂಧ. 

ಅರಣ್ಯ ಇಲಾಖೆಗೆ ಗೊತ್ತಿಧ್ದೋ, ಗೊತ್ತಿಲ್ಲದೆಯೋ ಒಟ್ಟಾರೆ ಅರಣ್ಯದೊಳಗೆ ಮಾಫಿಯಾಗಳ ಅಕ್ರಮ ಚಟುವಟಿಕೆಗಳು ನಿರಂತರವಾಗಿ ಸಾಗುತ್ತಲೇ ಇವೆ. ಈ ಬಗ್ಗೆ ಇಲಾಖೆ ಅಂಥವರನ್ನು ಪ್ರಶ್ನಿಸಿದರೆ ಅಥವಾ ಕಾನೂನು ಕ್ರಮ ಕೈಗೊಂಡರೆ ಅಂತಹ ಅಧಿಕಾರಿಗೆ ಯಾವನೋ ಒಬ್ಬ ಸಚಿವ ಕರೆ ಮಾಡಿ ಕೇಸು ವಾಪಾಸು ಪಡೆಯಲು ಬೆದರಿಕೆ ಹಾಕುತ್ತಾನೆ, ಅಧಿಕಾರಿ ತನ್ನ ಉದ್ಯೋಗ ಮತ್ತು ಸಂಸಾರದ ಕಡೆಗೆ ಗಮನ ಹರಿಸಿ ಮಾಫಿಯಾಗಳಿಗೆ ಬಾಗಿ ಸುಮ್ಮನಾಗುತ್ತಾನೆ. ಅರಣ್ಯ ಕಾಯಿದೆ, ವನ್ಯಜೀವಿ ಕಾಯಿದೆ, ಅರಣ್ಯ ಸಂರಕ್ಷಣಾ ಕಾಯಿದೆ, ಮೀಸಲು ಅರಣ್ಯ ಕಾಯಿದೆ ಎಲ್ಲವೂ ಕೇವಲ ಕಡತಗಳಲ್ಲಿ ಬೆಚ್ಚನೆ ಮಲಗಿರುತ್ತವೆ. ಸರಕಾರ ಮತ್ತು ಅರಣ್ಯ ಇಲಾಖೆಗೆ ಅಡವಿ ಮಾಫಿಯಾವನ್ನು ತಡೆಗಟ್ಟಲು ಆಗದೇ ಅಸಹಾಯಕರಾಗಿದ್ದು ಇಂದು ಮಾಫಿಯಾ ಎಷ್ಟು ಬಲಿಷ್ಠವಾಗಿದೆ ಎಂದರೆ ಇಡೀ ಪಶ್ಚಿಮಘಟ್ಟವನ್ನು ಮತ್ತು ಅರಣ್ಯ ಇಲಾಖೆಯನ್ನು ತನ್ನ ರಿಮೋಟ್‌ನಲ್ಲಿ ನಿಯಂತ್ರಿಸುವಷ್ಟು ಬೆಳೆದಿದೆ. 

ಪಶ್ಚಿಮಘಟ್ಟದ ಕಣಿವೆ ಕಂದರಗಳಲ್ಲಿ ಗಾಂಜಾ ಬೆಳೆಗಾರರು ತಮ್ಮ ಬೆಳೆಗೆ ವಿರುದ್ಧವಾಗಿ ಬೆಳೆಯುವ ಹುಲ್ಲುಗಳಿಗೆ ಬೆಂಕಿ ಹಾಕಿ ತಮ್ಮ ಸ್ವಾರ್ಥ ಸಾಧಿಸುತ್ತಾರೆ. ಕೆಲವು ಅಕ್ರಮ ಎಸ್ಟೇಟ್‌ನವರು ತಮ್ಮ ಎಸ್ಟೇಟ್‌ನ ಸುತ್ತ ಮುತ್ತ ಹುಲ್ಲು ಬೆಳೆಯಬಾರದು, ಅವು ತಮ್ಮ ಎಸ್ಟೇಟ್‌ ಒಳಗೆ ಬೆಳೆಯುವ ಕೃಷಿಗೆ ಅಡ್ಡಿಯಾಗುತ್ತವೆ ಎಂದು ಹುಲ್ಲುಗಾವಲಿಗೆ ಬೆಂಕಿ ಹಾಕುತ್ತಾರೆ. ಆದರೆ ಒಣಗಿದ ಹುಲ್ಲು ಮತ್ತು ಗಾಳಿಗೆ ಈ ಬೆಂಕಿ ಬೆಟ್ಟದಿಂದ ಬೆಟ್ಟಕ್ಕೆ ಹಬ್ಬಿ ಕಾಡ್ಗಿಚ್ಚು ಸಂಚಲನವಾಗುತ್ತದೆ. ಅಕ್ರಮ ಬೇಟೆಗಾರರು ಕಾಡಲ್ಲಿ ಬೆಂಕಿ ಹಾಕಿ ಅಡುಗೆ ಮಾಡಿ ಮರುದಿನ ಈ ಬೆಂಕಿಗೆ ತಮ್ಮ ಹತ್ತಿರವಿದ್ದ ಸ್ವಲ್ಪ$ನೀರನ್ನು ಹಾಕಿ ಬೆಂಕಿ ನಂದಿತೆಂದು ಅಲ್ಲಿಂದ ಹೋಗುತ್ತಾರೆ. ಬೂದಿಯೊಳಗಿದ್ದ ಕೆಂಡದ ಕಿಡಿ ಗಾಳಿಗೆ ಹಾರಿ ಕಾಡ್ಗಿಚ್ಚು  ಹರಡಲು ಕಾರಣವಾಗುತ್ತದೆ. 

ರೆಸಾರ್ಟ್‌ಗಳ ಕ್ಯಾಂಪ್‌ ಫೈರ್‌, ದನಮೇಯಿಸುವವರ, ಕಾಡುತ್ಪತ್ತಿಗೆ ಹೋಗುವವರ ಬೀಡಿ, ಕೆಲವು ಚಾರಣಿಗರ ಸಿಗರೇಟು ಹೀಗೆ ಹಲವಾರು ಕಾರಣಗಳಿಂದ ಕಾಡ್ಗಿಚ್ಚು ಉದ್ಭವಿ ಸುತ್ತಿವೆ. ಮೊದಲಿಗೆ ಪಶ್ಚಿಮಘಟ್ಟವನ್ನು ನಿಯಂತ್ರಿಸುವ ಮಾಫಿ ಯಾಗಳನ್ನು ಕಾಡಿನಿಂದ ಹೊರದಬ್ಬುವ ಪ್ರಯತ್ನವನ್ನು ಅರಣ್ಯ ಇಲಾಖೆ ಮಾಡಲಿ. ಆಗ ಎಲ್ಲಾ ಕಾಡ್ಗಿಚ್ಚು ಮಾಯವಾಗುತ್ತದೆ. ಕಳೆದ ವರುಷ ಬಂಡೀಪುರದಲ್ಲಿ ಕಾಡ್ಗಿಚ್ಚು ನಂದಿಸಲು ಹೋದ ಫಾರೆಸ್ಟ್‌ಗಾರ್ಡ್‌ ಮುರುಗಪ್ಪ ಮತ್ತು ಮೊನ್ನೆ ನಾಗರಹೊಳೆ ಅರಣ್ಯದಲ್ಲಿ ಬೆಂಕಿ ನಿಯಂತ್ರಿಸಲು ಕಾಡಿಗೆ ಹೋದ ಅರಣ್ಯ ಅಧಿಕಾರಿ ಮಣಿಕಂದನ್‌ನವರನ್ನು ಆನೆ ದಾಳಿ ಮಾಡಿ ಕೊಂದಿತ್ತು. ಕಾಡಿನಲ್ಲಿ ಅರಣ್ಯ ಅಧಿಕಾರಿಗಳಿಗೆ, ರಕ್ಷಕರಿಗೆ, ಪಾಲಕರ ಜೀವಕ್ಕೇ ರಕ್ಷಣೆ ಇಲ್ಲವೆಂದಾದಲ್ಲಿ ಮುಂದೊಂದು ದಿನ ಅರಣ್ಯ ಇಲಾಖೆಯ ಹುದ್ದೆಗಳಿಗೆ ಬರುವವರ ಸಂಖ್ಯೆಯೂ ಕಡಿಮೆಯಾಗಬಹುದು. ಆಗ ಈ ಕಾಡು ಮಾಫಿಯಾಗಳು ಇನ್ನಷ್ಟು ಬೆಳೆದು ಯಾವ ರೀತಿ ಸಮಸ್ಯೆಯಾಗಬಹುದು ಎಂಬುದನ್ನು ಊಹಿಸಬಹುದು. 

ಸಾಮಾನ್ಯವಾಗಿ ಕಾಡ್ಗಿಚ್ಚು ಹರಡುವುದು 45 ಡಿಗ್ರಿಯಿಂದ 85 ಡಿಗ್ರಿವರೆಗಿನ ಕಣಿವೆ ಪ್ರಪಾತಗಳ ಕಾಡುಗಳಲ್ಲಿ. ಕಣಿವೆಯ ಕೆಳಗಿನಿಂದ ಹರಿದುಕೊಂಡು ಮೇಲ್ಭಾಗಕ್ಕೆ ಬರುವ ಬೆಂಕಿ, ಗಾಳಿಯ ರಭಸಕ್ಕೆ ವೇಗವಾಗುತ್ತಾ ಶಿಖರದ ತುದಿ ಭಾಗಕ್ಕೆ ಬಂದಾಗ ಬೆಂಕಿಯ ವ್ಯಾಪ್ತಿ ಹೆಚ್ಚಾಗುತ್ತಾ ಕೆನ್ನಾಲಿಗೆ ನಾಲ್ಕು ದಿಕ್ಕುಗಳ ಬೆಟ್ಟಗಳ ಕಣಿವೆಗಳಿಗೆ ಹರಡುತ್ತವೆ. ಇಂತಹ ಕಣಿವೆ ಪ್ರದೇಶಗಳಲ್ಲಿ ವಾಹನ ಹೋಗುವುದು ಬಿಡಿ, ಮನುಷ್ಯರಿಗೂ ಹೋಗಲಾರದಷ್ಟು ಕಂದರ ಪ್ರಪಾತಗಳಿರುತ್ತವೆ. ಇಂತಹ ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಹೆಲಿಕಾಪ್ಟರ್‌ನಲ್ಲಿ ನೀರನ್ನು ಸಿಂಪಡಿಸುವ ವ್ಯವಸ್ಥೆ ಅತ್ಯಗತ್ಯ. ವಿದೇಶಗಳಲ್ಲಿ ಮಿನಿವಿಮಾನ, ಹೆಲಿಕಾಪ್ಟರ್‌ಗಳಲ್ಲಿ ನೀರು ಸಿಂಪಡಿಸಿ ಕಾಡ್ಗಿಚ್ಚು ನಂದಿಸುವ ವ್ಯವಸ್ಥೆ ಇದೆ. ಆದರೆ ನಮ್ಮಲ್ಲಿ ಹೆಲಿಕಾಪ್ಟರ್‌ ಬಳಕೆ ಬಿಡಿ, ಅರಣ್ಯ ಇಲಾಖೆಗಳಲ್ಲಿ ಇರುವ ಜೀಪುಗಳಿಗೇ 30 ರಿಂದ 40 ವರ್ಷಗಳಾಗಿರಬಹುದು. ಆ ಜೀಪುಗಳು ಸ್ಟಾರ್ಟ್‌ ಆಗಲು ಅರ್ಧ ದಿನ ಬೇಕು. ಸಹ್ಯಾದ್ರಿ ಸಂಚಯ ಮತ್ತು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದಂತಹ ಪರಿಸರ ಸಂಘಟನೆಗಳು ಹೆಲಿಕಾಪ್ಟರ್‌ ಬಳಕೆಗೆ ರಾಜ್ಯ ಸರ‌ಕಾರಕ್ಕೆ 3 ಬಾರಿ ಮನವಿ ನೀಡಿದ್ದರೂ ಅದು ಈವರೆಗೆ ಸ್ಪಂದಿಸಿಲ್ಲ. 

ರಾಜ್ಯದಲ್ಲಿ ಅತಿ ಹೆಚ್ಚು ಕಾಡ್ಗಿಚ್ಚು ಸಂಭವಿಸುವ ಪ್ರದೇಶಗಳಾದ ದಾಂಡೇಲಿ, ಮುತ್ತೋಡಿ, ಕುದುರೆಮುಖ, ಚಾರ್ಮಾಡಿ, ಶಿರಾಡಿ, ಬಿಸಿಲೆ, ಬಂಡೀಪುರ, ಬಿಳಿಗಿರಿ ರಂಗನಬೆಟ್ಟ ಮುಂತಾದ ಕಡೆ ಕೊನೇ ಪಕ್ಷ ಜನವರಿಯಿಂದ ಜೂನ್‌ವರೆಗೆ ಬಾಡಿಗೆ ಹೆಲಿಕಾಪ್ಟರ್‌ ಬಳಸಿಯಾದರೂ ಕಾಡ್ಗಿಚ್ಚು ನಿಯಂತ್ರಣ ಮಾಡುವ ಅಗತ್ಯವಿದೆ. ಸಾಮಾನ್ಯವಾಗಿ ಹಿಂದೆಲ್ಲ ಏಪ್ರಿಲ್‌ ತಿಂಗಳಿನಲ್ಲಿ ಕಾಡ್ಗಿಚ್ಚು ಉದ್ಭವಿಸಿದಾಗ ಕಾಡ್ಗಿಚ್ಚಿನ ಬೂದಿಗೆ ಜೂನ್‌ ತಿಂಗಳ ಮಳೆ ಬಿದ್ದು ಮಣ್ಣಿನ ಫ‌ಲವತ್ತತೆಯಿಂದ ಬೆಟ್ಟದ ಹುಲ್ಲುಗಾವಲು ಬೇಗನೇ ಬೆಳೆದು ಬರುತ್ತಿತ್ತು. ಆದರೆ ಇತ್ತೀಚೆಗಿನ 3 ವರ್ಷಗಳಲ್ಲಿ ಡಿಸೆಂಬರ್‌ ತಿಂಗಳಿನಲ್ಲೇ ಕಾಡ್ಗಿಚ್ಚು ಆರಂಭವಾಗಿ ಜೂನ್‌ವರೆಗೆ 4 ಸಲ ಕಾಡ್ಗಿಚ್ಚು ಸಂಭವಿಸುತ್ತಿರುವ ಕಾರಣ ಇದು ನದಿ ಮೂಲದ ನೀರಿನ ಶೇಖರಣೆಗೆ ಸಾಕಷ್ಟು ಹೊಡೆತ ಬೀಳುವ ಸಾಧ್ಯತೆ ಇದೆ. ನಾಲ್ಕು ಸಲ ಕಾಡ್ಗಿಚ್ಚು ಬಿದ್ದಾಗ ಹುಲ್ಲುಗಾವಲಿನ ಬೇರು ಸಹಿತ ಹೊತ್ತಿ ಹೋಗಿ ವಾಪಾಸು ಅಲ್ಲಿ ಹುಲ್ಲು ಬೆಳೆಯುವುದಕ್ಕೇ ಅವಕಾಶಗಳಿರುವುದಿಲ್ಲ. ಆಗ ಮಳೆ ನೀರು ಬೆಟ್ಟದ ಮೇಲೆ ಬಿದ್ದಾಗ ಮಣ್ಣಿನ ಸವಕಳಿ ಆಗಿ ಭೂಕುಸಿತ ಆಗಿ ಆ ಮಣ್ಣು ನದಿ ಮೂಲದ ಸೂಕ್ಷ್ಮ ಒರತೆಗಳನ್ನು ಶಾಶ್ವತವಾಗಿ ಮುಚ್ಚಿ ಬಿಡುವ ಅಪಾಯವಿದೆ.

ಬೆಟ್ಟಗಳ ಮೇಲೆ ಹುಲ್ಲು ಗಾವಲು ಇದ್ದ ಕಾರಣ ಮಳೆ ನೀರು ಗಿರಿಕಂದರಗಳ ಕೆಳಗಿನ ಶೋಲಾರಣ್ಯದಲ್ಲಿ ಬಂದು ಶೇಖರಣೆಯಾಗುವುದು. ಈ ಮಳೆ ನೀರು ಒಂದು ಮಳೆಗಾಲದಿಂದ ಇನ್ನೊಂದು ಮಳೆಗಾಲ ದವರೆಗೆ ಹೊಳೆಗೆ ಹರಿಯುತ್ತಾ ಹೊಳೆ ಜೀವಂತವಾಗಿರಲು ಕಾರಣವಾಗಿರುತ್ತದೆ. ಮೇಲ್ಪದರದ ಹುಲ್ಲು ಗಾವಲು ಮತ್ತು ಕೆಳಪದರದ ಶೋಲಾರಣ್ಯವು ನೀರನ್ನು ಇಂಗಿಸಿ ಕೊಳ್ಳುವಂತಹ ಜಲಬಟ್ಟಲುಗಳಾಗಿರುತ್ತವೆ. ಹಾಗಿರುವ ಕಾರಣ ನಿರಂತರವಾಗಿ ಈ ಜಲಬಟ್ಟಲಿನ ಪದರವು ಬೆಂಕಿಯಿಂದ ಕರಟಿಹೋದರೆ ಪಶ್ಚಿಮ ಘಟ್ಟದ ನದಿ ಮೂಲಗಳ ನೀರಿನ ಒರತೆ ಕಡಿಮೆಯಾಗುತ್ತಾ ನದಿಗಳು ಬಡಕಲಾಗುವುದಕ್ಕೂ ಕಾಡ್ಗಿಚ್ಚು ಕಾರಣವಾಗುತ್ತದೆ. ನದಿ ಮೂಲಗಳು ಬಹಳ ಸೂಕ್ಷ್ಮ ಜೀವ ವೈವಿಧ್ಯತೆ ಇರುವ ತಾಣಗಳಾಗಿದ್ದು ಅಂತಹ ಪ್ರದೇಶಗಳಲ್ಲಿ ಮಾನವನ ಯಾವುದೇ ಚಟುವಟಿಕೆಗಳಿಗೆ ಅವಕಾಶಗಳಿರುವುದಿಲ್ಲ. 1974ರ ಮೀಸಲು ಅರಣ್ಯ ಕಾಯಿದೆ ಪ್ರಕಾರ ಮೀಸಲು ಅರಣ್ಯದಲ್ಲಿ ಬಿದ್ದ ತರಗೆಲೆ, ಒಣ ಕಟ್ಟಿಗೆಯನ್ನು ಕೂಡಾ ನಾವು ಬಳಸುವಂತಿಲ್ಲ. ನೀರಿನ ಒರತೆ ಇರುವ ಪ್ರದೇಶದಲ್ಲಿ ಅದು ಬೀಳುವ ಕಾರಣ ಮಣ್ಣಲ್ಲಿ ಮಣ್ಣಾಗಿ ಆ ಮಣ್ಣು ಅಲ್ಲಿನ ಹುಲ್ಲು ಮತ್ತು ಅರಣ್ಯ ಬೆಳವಣಿಗೆಗೆ ಫ‌ಲವತ್ತತೆಯಾಗಲು ಕಾರಣ. ಆದರೆ ಇಂದು ಇಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಅರಣ್ಯ ಒತ್ತುವರಿಯಾಗಿದ್ದು ಎಸ್ಟೇಟ್‌, ರೆಸಾರ್ಟ್‌ ಗಳ ನಿರ್ಮಾಣವಾಗಿದ್ದು ಬೆಂಕಿಯ ಮೂಲಕ್ಕೆ ಕಾರಣಕರ್ತರಾಗಿರುತ್ತಾರೆ.

ಇಡೀ ಪಶ್ಚಿಮಘಟ್ಟದಲ್ಲಿ ಬೆಟ್ಟಗಳ ಸರದಿ ಸಾಲೇ ಇದ್ದು ಈ ಬೆಟ್ಟಗಳ ನಡುವೆ ಶೋಲಾಕಾಡು ಮತ್ತು ಹುಲ್ಲುಗಾವಲು ಇರುವ ಕಾರಣ ಬೆಟ್ಟದ ಒಂದು ಕಡೆ ಬೆಂಕಿ ಬಿದ್ದರೆ ನಿರಂತರ ಈ ಬೆಂಕಿ ಕೆಳ ಹಾಗೂ ಮೇಲ್ಪದರಗಳಲ್ಲಿ ಗಾಳಿಯ ವೇಗಕ್ಕನುಗುಣವಾಗಿ ತೀವ್ರವಾಗಿ ಹಬ್ಬುತ್ತದೆ. ಉದಾಹರಣೆಗೆ ಚಾರ್ಮಾಡಿಘಾಟಿಯ ಆರಂಭದ ಏರಿಕಲ್ಲಿನಲ್ಲಿ ಬೆಂಕಿಯಾದರೆ ಅದು ಅದರ ಹತ್ತಿರದ ಬೆಟ್ಟಗಳಾದ ಕುಂಬಕಲ್ಲು, ಬಾಂಜಾರುಮಲೆ, ಅಂಬಟ್ಟಿಮಲೆ, ಸೋಮನಕಾಡು, ದೇವಗಿರಿಕಣಿವೆ, ಬಾಳೆಗುಡ್ಡ, ಬಾರಿಮಲೆ, ದೊಡ್ಡೇರಿಬೆಟ್ಟ, ಹೊಸ್ಮನೆಗುಡ್ಡ, ಸೊಪ್ಪಿನ ಗುಡ್ಡ, ರಾಮನಗುಡ್ಡ, ಬಾಳೂರು, ಕೆಳಗೂರು, ಮಧುಗುಂಡಿ ಕಣಿವೆಯವರೆಗೆ, ಅಂದರೆ ಸುಮಾರು 36 ಕಿಮೀ.ಗಳ ಉದ್ದಕ್ಕೂ ಹರಡಿ ಮಳೆಕಾಡು, ಹುಲ್ಲುಗಾವಲು, ನೀರಿನ ಒರತೆ ಪ್ರದೇಶವೆಲ್ಲಾ ನಾಶವಾಗಿ ಈ ವ್ಯಾಪ್ತಿಯಲ್ಲಿ ಹರಿಯುವ ನೇತ್ರಾವತಿ ನದಿಯ ಪ್ರಮುಖ ಉಪನದಿಗಳಾದ ಮೃತ್ಯುಂಜಯ, ಬಂಡಾಜೆ ಹೊಳೆ, ನೆರಿಯಾ ಹೊಳೆ, ಸುನಾಲ ಹೊಳೆ, ಅಣಿಯೂರು ಹೊಳೆಗಳ ನೀರಿನ ಹರಿವಿಗೂ ಸಮಸ್ಯೆಯಾಗುತ್ತವೆ. ಚಾರ್ಮಾಡಿ ಘಾಟಿ ಅರಣ್ಯಕ್ಕೆ ಬಿದ್ದ ಬೆಂಕಿ ಅದರ ಅಕ್ಕಪಕ್ಕದಲ್ಲೆ ಇರುವ ಶಿರಾಡಿ, ಬಿಸಿಲೆ, ಕಡ್ತಕಲ್‌, ಎಳೆನೀರು, ಕುದುರೆಮುಖ ಘಾಟಿ ಅರಣ್ಯ ಪ್ರದೇಶಕ್ಕೂ ಹರಡುವ ಸಾಧ್ಯತೆ ಇದೆ. ಇಲ್ಲಿ ನೇತ್ರಾವತಿ, ಚಾರ್ಮಾಡಿ ಒಂದು ಉದಾಹರಣೆ ಅಷ್ಟೆ. ರಾಜ್ಯದ ಎಲ್ಲಾ ನದಿಗಳು ಪಶ್ಚಿಮಘಟ್ಟದಲ್ಲೇ ಉಗಮವಾಗುವ ಕಾರಣ ಕಾಡ್ಗಿಚ್ಚಿನಿಂದಾಗಿ ನದಿಮೂಲಕ್ಕೆ ಸಮಸ್ಯೆಯಾಗಿ ಕುಡಿಯುವ ನೀರಿಗೂ ತೊಂದರೆಯಾಗಬಹುದು. ವರ್ಷದಿಂದ ವರ್ಷಕ್ಕೆ ಪಶ್ಚಿಮಘಟ್ಟದಲ್ಲಿ ನೀರಿನ ಮೂಲ ಸೆಲೆಗಳ ಒರತೆ ಕಡಿಮೆಯಾಗುತ್ತಾ ಬರುತ್ತಿರುವಾಗ ನಿರಂತರ ಕಾಡ್ಗಿಚ್ಚು ಕೂಡಾ ಬಿದ್ದಲ್ಲಿ ಈಗಾಗಲೇ ಸಾಕಷ್ಟು ಹೊಡೆತ ತಿಂದಿರುವ ಪಶ್ಚಿಮಘಟ್ಟಕ್ಕೆ ಇನ್ನು ಮುಂದಿನ ದಿನಗಳಲ್ಲಿ ಯಾವ ರೀತಿ ಸಮಸ್ಯೆಗಳಾಗಬಹುದು ಎಂಬುವುದನ್ನು ಚಿಂತಿಸಬೇಕಾದ ವಿಚಾರ.

ಸರಕಾರಗಳ ಅಸಂಬದ್ಧ ಯೋಜನೆಗಳು, ಜನಸಾಮಾನ್ಯರಿಗೆ ಪಶ್ಚಿಮಘಟ್ಟದ ಕಾಡು ನದಿಗಳ ಮೇಲೆ ಇರುವ ಅಸಡ್ಡೆತನ ಇವೆಲ್ಲವೂ ಮುಂದೊಂದು ದಿನ ಆಗಲಿರುವ ಪ್ರಾಕೃತಿಕ ದುರಂತಕ್ಕೆ ನಾವೇ ಆಮಂತ್ರಣ ಕೊಟ್ಟಂತಾಗಬಹುದು. ಆದುದರಿಂದ ಪಶ್ಚಿಮಘಟ್ಟದ ಕಾಡನ್ನು ಕಾಡ್ಗಿಚ್ಚಿನಿಂದ ಸಂರಕ್ಷಸಬೇಕಾದ ನೈತಿಕ ಹೊಣೆಗಾರಿಕೆ ನಮ್ಮ ನಿಮ್ಮೆಲ್ಲರದ್ದು. ನೀರು ಈ ಭೂಮಿಯ ಸಕಲ ಜೀವ ಸಂಕುಲಗಳ ಬದುಕಿನ ಚೇತನಾಶಕ್ತಿ. ಈ ನೀರು ಹರಿದು ಬರುವುದೇ ಪಶ್ಚಿಮಘಟ್ಟದ ಶೋಲಾಕಾಡು ಮತ್ತು ನದೀ ಮೂಲಗಳಿಂದ. ನಾವೆಲ್ಲರೂ ಈ ನೀರಿನ ಫ‌ಲಾನುಭವಿಗಳಾಗಿರು ವುದರಿಂದ ಪಶ್ಚಿಮಘಟ್ಟವನ್ನು ರಕ್ಷಣೆ ಮಾಡುವ ಜವಾಬ್ದಾರಿ ನಮ್ಮೆಲ್ಲರದ್ದು. ರಾಜಕಾರಣಿಗಳು, ಅಧಿಕಾರಿಗಳು ಪಶ್ಚಿಮಘಟ್ಟದ ಮೇಲೆ ದೌರ್ಜನ್ಯ ಮಾಡುತ್ತಿರುವ ಮಾಫಿಯಾಗಳನ್ನು ಹೊರದಬ್ಬುವಂತೆ ನಮ್ಮೆಲ್ಲರ ಸಾಮೂಹಿಕ ಹೋರಾಟ ತೀವ್ರವಾಗಬೇಕು. ಆಗ ಕಾಡ್ಗಿಚ್ಚು ಮಾಯವಾಗಬಹುದು, ಪಶ್ಚಿಮಘಟ್ಟ ನೆಮ್ಮದಿಯ ತಳಪಾಯವಾಗಬಹುದು.

ದಿನೇಶ್‌ ಹೊಳ್ಳ

ಟಾಪ್ ನ್ಯೂಸ್

Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್‌ ಭರಾಟೆ ಬಲು ಜೋರು

Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್‌ ಭರಾಟೆ ಬಲು ಜೋರು

Jammu Kashmir: Big plan fails; Army destroys terrorist hideout

Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ

BGT 2024: Good news for Team India; A key player back in the team

BGT 2024: ಟೀಂ ಇಂಡಿಯಾಗೆ ಶುಭ ಸುದ್ದಿ; ತಂಡಕ್ಕೆ ಮರಳಿದ ಪ್ರಮುಖ ಆಟಗಾರ

ED Raids: ಬೆಳ್ಳಂಬೆಳಗ್ಗೆ ಉದ್ಯಮಿ ರಾಜ್ ಕುಂದ್ರಾ ಮನೆ, ಕಚೇರಿ ಮೇಲೆ ಇಡಿ ದಾಳಿ…

ED Raids: ಬೆಳ್ಳಂಬೆಳಗ್ಗೆ ಉದ್ಯಮಿ ರಾಜ್ ಕುಂದ್ರಾ ಮನೆ, ಕಚೇರಿ ಮೇಲೆ ಇಡಿ ದಾಳಿ…

Protest: ಬಾಂಗ್ಲಾದಲ್ಲಿ ಚಿನ್ಮಯ ಕೃಷ್ಣದಾಸ ಪ್ರಭು ಬಂಧನ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ

Protest: ಬಾಂಗ್ಲಾದಲ್ಲಿ ಚಿನ್ಮಯ ಕೃಷ್ಣದಾಸ ಪ್ರಭು ಬಂಧನ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ

Pune: Batter collapses on the field!; Video goes viral

Pune: ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಬ್ಯಾಟರ್!;‌ ವಿಡಿಯೋ ವೈರಲ್

Photo of female commando with Modi goes viral: Was it real?

Commando: ಮೋದಿ ರಕ್ಷಣೆಯ ಮಹಿಳಾ ಕಮಾಂಡೋ ಫೋಟೊ ವೈರಲ್:‌ ಏನಿದರ ಅಸಲೀಯತ್ತು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

ರಾಜ್ಯದಲ್ಲಿ ಇನ್ನೊಂದು ಪಕ್ಷದ ಸರ್ಕಾರವಿದ್ದಾಗ ಈ ರಾಜ್ಯಪಾಲರುಗಳು‎ ತುಂಬಾ ಆತಂತ್ರ ಸ್ಥಿತಿ

ಮುಡಾ: ಸಿದ್ದು ವಿರುದ್ಧ ರಾಜ್ಯಪಾಲರ prosecution ಅನುಮತಿ ಸಿಎಂ ಸ್ಥಾನಕ್ಕೆ ಮುಳುವಾಗಬಹುದೇ?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್‌ ಭರಾಟೆ ಬಲು ಜೋರು

Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್‌ ಭರಾಟೆ ಬಲು ಜೋರು

Jammu Kashmir: Big plan fails; Army destroys terrorist hideout

Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ

7-shahapur

Shahapur: ಕಾರು-ಬೈಕ್ ಮುಖಾಮುಖಿ ಡಿಕ್ಕಿ- ಇಬ್ಬರ ಸಾವು

6-dandeli

Dandeli: ಕೆನರಾ ಬ್ಯಾಂಕ್ ಎಟಿಎಂ ಕೇಂದ್ರದೊಳಗೆ ಹಾವು ಪ್ರತ್ಯಕ್ಷ

BGT 2024: Good news for Team India; A key player back in the team

BGT 2024: ಟೀಂ ಇಂಡಿಯಾಗೆ ಶುಭ ಸುದ್ದಿ; ತಂಡಕ್ಕೆ ಮರಳಿದ ಪ್ರಮುಖ ಆಟಗಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.