ಅತಂತ್ರ ಜನಾದೇಶ -ಅವರವರ ಮೂಗಿನ ನೇರಕ್ಕೆ


Team Udayavani, May 25, 2018, 10:15 AM IST

karnataka-news.jpg

ವಿಧಾನಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಮೈಸೂರಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮಗೆ ಚಿರಪರಿಚಿತವಿರುವ ಸ್ಥಳೀಯ ಕಾರ್ಯಕರ್ತರೊಬ್ಬ ರನ್ನು ಸಲುಗೆಯಿಂದ ಹೆಸರು ಹೇಳಿ ಕರೆದು ಮತಯಾಚನೆ ಮಾಡಿದಾಗ ಆತ ಮುಖ್ಯಮಂತ್ರಿ ಎನ್ನುವ ಆದರ ತೋರದೇ ಅಷ್ಟೇ ಸಲುಗೆಯಿಂದ ಹೋಗಯ್ನಾ ನಾನು ನಿನಗೆ ಮತ ಹಾಕೋದಿಲ್ಲ. ನಾನು ಜೆಡಿಎಸ್‌ಗೆ ಮತ ಹಾಕೋದು ಎಂದ. ರಾಜ್ಯದ ಮುಖ್ಯಮಂತ್ರಿಗೆ ನೇರ, ನಿಷ್ಠುರತೆಯಿಂದ ಮತ್ತು ಸಾರ್ವಜನಿಕವಾಗಿ ಉತ್ತರಿಸಿದ್ದಕ್ಕೆ ಕುಮಾರಸ್ವಾಮಿ ಆತನನ್ನು ಕರೆದು ಶಾಲು ಹೊದಿಸಿ, ಪೇಟಾ ತೊಡಿಸಿ ಸನ್ಮಾನಿಸಿದ್ದನ್ನು ರಾಜ್ಯದ ಜನತೆ ಮಾಧ್ಯಮಗಳಲ್ಲಿ ನೋಡಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳ ಉನ್ನತ ನಾಯಕರುಗಳು ಬದ್ಧ ಸೈದ್ಧಾಂತಿಕ ವೈರಿಗಳಂತೆ ಬಯ್ದಾಡಿ ಕೊಂಡಿದ್ದು ಇಷ್ಟು ಶೀಘ್ರದಲ್ಲಿ ರಾಜ್ಯದ ಜನತೆ ಮರೆತಿದ್ದಾರೆಂದು ಯಾರೂ ಭಾವಿಸುವಂತಿಲ್ಲ. 

ಆದರೆ ಒಂದಂತೂ ನಿಜ ರಾಜಕೀಯ ನಾಯಕರುಗಳು ಸುಲಭವಾಗಿ ಮರೆಯುವ ಕಲೆಯನ್ನು ಸಿದ್ಧಿಸಿಕೊಂಡಿದ್ದಾರೆ. ಚುನಾವಣೆಗೆ ಮೊದಲು ಪರಸ್ಪರರನ್ನು ನಿಂದಿಸಿಕೊಂಡಿದ್ದವರು ಈಗ ತೆರೆದ ತೋಳುಗಳಿಂದ ಬಿಗಿದಪ್ಪಿ ಕೊಳ್ಳುತ್ತಿದ್ದಾರೆ. ಸಭ್ಯತೆಯ ಸೀಮೋಲ್ಲಂಘನೆಗೈದು ಅಶಿಷ್ಟತೆಯಿಂದ ದೂಷಿಸಿಕೊಂಡವರು, ನಟನೆ ಮುಗಿಸಿ ಅದಾಗಷ್ಟೇ ಬಣ್ಣ ತೊಳೆದುಕೊಂಡು ಹೊರ ಬರುತ್ತಿರುವ ಕಲಾವಿದರಂತೆ ಕುಲು ಕುಲು ನಗುತ್ತಾ ವಿಜಯದ ಸಂಕೇತ ತೋರುತ್ತಾ ಮಾಧ್ಯಮಗಳಿಗೆ ಪೋಸು ಕೊಡುವ ದೃಶ್ಯ ಕಂಡ ಮತದಾರರ ಪಾಡು ಇಂಗು ತಿಂದ ಮಂಗನಂತಾಗಿದೆ. ತಾವು ಮೋಸಗೊಂಡೆ  ವೆಂಬ ಹತಾಶ ಭಾವ ಅವರಲ್ಲಿ ಆವರಿಸಿಕೊಂಡಿದೆ.

ಸೋಲು-ಗೆಲುವಿನ ಕಾರಣ
ಯಾವುದು ಆದ್ಯತೆಯಾಗಬೇಕು? ಪಕ್ಷವೋ, ವ್ಯಕ್ತಿಯೋ, ಸಾಧನೆಯೋ, ಸಿದ್ಧಾಂತವೋ ಎಂದು ಚುನಾವಣೆಗೆ ಮೊದಲು ಅನೇಕ ಮತದಾರರು ಮಾನಸಿಕ ಹೊಯ್ದಾಟಕ್ಕೆ ಸಿಲುಕಿದ್ದರು. ಕೊನೆಗೂ ಚಿಂತಿಸಿ ಯಾವುದೋ ಒಂದು ನಿರ್ಧಾರಕ್ಕೆ ಬಂದು ಮತ ನೀಡುವುದು ಅನಿವಾರ್ಯ ಆಗಿತ್ತು. ಮತದಾರರ ತೀರ್ಮಾನಕ್ಕೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕವಡೆ ಕಾಸಿನ ಕಿಮ್ಮತ್ತೂ ಸಿಗುತ್ತಿಲ್ಲವಲ್ಲ! ಎಲ್ಲಾ ಬಸ್ಸುಗಳಲ್ಲಿ ಶಾಸಕರ ಮೀಸಲು ಸೀಟು ಇದ್ದರೂ ಅದರಲ್ಲಿ ಪ್ರಯಾಣ ಬೆಳೆಸುವ ಶಾಸಕರು ಈಗಂತೂ ಅಪರೂಪ. ಎಲ್ಲಾ ಪಕ್ಷಗಳಲ್ಲೂ ಬೆರಳೆಣಿಕೆಯ ಸರಳ ವ್ಯಕ್ತಿಗಳು, ಕೆಲಸ ಮಾಡುವ ಸಾಧಕರು ಇದ್ದಾರೆ. ಬಸ್‌ಸ್ಟಾಂಡಿ ನಲ್ಲಿ ಮಡದಿಯೊಂದಿಗೆ ಬಸ್ಸಿಗಾಗಿ ಕುಳಿತಿದ್ದ ಶಾಸಕರೊಬ್ಬರ ಫೋಟೊವೊಂದನ್ನು ಫೇಸ್‌ಬುಕ್‌ನಲ್ಲಿ ಶೇರ್‌ ಮಾಡಿದ್ದ ವ್ಯಕ್ತಿಯೊಬ್ಬರು ಇಂತಹ ಸರಳ ವ್ಯಕ್ತಿಯನ್ನು ನಾವು ಸೋಲಿಸಿದೆವೆಲ್ಲಾ ಎಂದು ನೋವು ತೆರೆದಿಟ್ಟಿದ್ದರು. 25 ವರ್ಷ ರಾಜ್ಯ  ವೊಂದರ ಮುಖ್ಯಮಂತ್ರಿಯಾಗಿದ್ದು ಮಾಜಿಯಾಗಿರುವ ಇನ್ನೋರ್ವ ಪ್ರಾಮಾಣಿಕ ರಾಜಕಾರಣಿಗೆ ಇನ್ನೊಂದು ಅವಕಾಶ ನಮ್ಮ ಮತದಾರ ಕೊಡಲಿಲ್ಲವಲ್ಲ ಎಂಬ ರೋಷವನ್ನು ಮಗದೊಬ್ಬ ಸಾಮಾಜಿಕ ಜಾಲತಾಣದಲ್ಲಿ ತೋಡಿಕೊಂಡಿದ್ದರು.

ಹೌದು ರಾಜ್ಯದಲ್ಲೂ ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದವರು ಸೋತಿದ್ದಾರೆ. ಮತದಾರನ ಬಳಿ ಇರುವುದು ಒಂದೇ ಒಂದು ಅಸ್ತ್ರ ತಾನೇ? ತನ್ನಲ್ಲಿರುವ ಅಸ್ತ್ರ ಒಮ್ಮೆ ಬಿಟ್ಟನೋ ಮುಗಿಯಿತಲ್ಲ ಅದರ ಕತೆ. ಇವಾವುದರ ಹಂಗಿಲ್ಲದ ಚುನಾಯಿತ ಪ್ರತಿನಿಧಿಗಳಿಗೆ ಇರುವ ಅಧಿಕಾರ ಅಪರಿಮಿತ. ಕೊಟ್ಟವ ಕೋಡಂಗಿ ಇಸಗೊಂಡವ ವೀರಭದ್ರ ಎನ್ನುವಂತೆ ಮತ ನೀಡಿದ ನಂತರ ಮತದಾರನನ್ನು ಕಾಡುತ್ತಿದೆ ಅನಾಥ ಭಾವ. ಜನರಿಂದ, ಜನರಿಗಾಗಿ, ಜನರಿಗೋಸ್ಕರ ಇರುವ ಜನಪ್ರತಿನಿಧಿ ಜನ ಭಾವನೆಗೆ ಎಷ್ಟು ಬೆಲೆ ಕೊಡುತ್ತಾನೆ? ಛೇ! ಉಂಡ ಎಲೆಯಂತೆ ಎಸೆದುಬಿಡುತ್ತಾನೆ.

ಅತಂತ್ರ ಜನಾದೇಶವನ್ನು ಹೇಗೆ ಅರ್ಥೈಸಬೇಕು? 104 ಸ್ಥಾನ ಪಡೆದು ಮೊದಲ ಸ್ಥಾನ ಪಡೆದವರು ಪೂರ್ಣವಾಗಿ ಜನಮನ ಗೆಲ್ಲಲಿಲ್ಲ ಎನ್ನುವುದು ವಾಸ್ತವ. ಅಧಿಕಾರದಲ್ಲಿರುವ ಪಕ್ಷವನ್ನು ಅದರ ನೀತಿಯನ್ನು ಜನ ತಿರಸ್ಕರಿಸಿದ್ದಾರೆ ಎನ್ನುವುದೂ ಅಷ್ಟೇ ಸತ್ಯ. ಸೋತ ಪಕ್ಷದವರು ಪುನಹ ಹಿಂಬಾಗಿಲ ಮೂಲಕ ಮತ್ತೆ ಮಂತ್ರಿಗಳಾಗಿ ಅಧಿಕಾರ ಚಲಾಯಿಸುವುದು ನೈತಿಕವಾಗಿ ಯಂತೂ ಸರಿಯಲ್ಲ. ಇಲ್ಲಿ ಜನರ ತಿರಸ್ಕಾರ, ಪುರಸ್ಕಾರಗಳ ಮೇಲೆ ಹಲವಾರು ಅಂಶಗಳು ಪ್ರಭಾವ ಬೀರುತ್ತದೆ. ಚುನಾಯಿತ ಶಾಸಕರೆಲ್ಲರೂ ತಮಗೆ ಜನತೆಯ ಭಾರೀ ಬೆಂಬಲ ದೊರೆತಿದೆಯೆಂದು ಭ್ರಮಿಸಿದರೆ ಅದು ಅವರ ಮೂರ್ಖತನವೇ ಸರಿ. ಐದು ವರ್ಷ ಉತ್ತಮ ಕೆಲಸ ಮಾಡಿದ ಗೆಲ್ಲುವ ಕುದುರೆ ಎಂದು ಪರಿಗಣಿಸಲ್ಪಟ್ಟವರೂ ಸೋತಿದ್ದಾರೆ ಎಂದರೆ ಅಚ್ಚರಿಯೂ ಆಗಬಹುದು. ಸರಕಾರದ ನೇತೃತ್ವ ವಹಿಸಿದ ಮುಖ್ಯಮಂತ್ರಿಯ ವಿರುದ್ಧ ಇರುವ ವ್ಯಾಪಕ ಅಸಂತೋಷಆಳುವ ಪಕ್ಷದ ಗೆಲ್ಲುವ ಕುದುರೆಯನ್ನೂ ಕಟ್ಟಿ ಹಾಕಬಹುದು.

ಸಾಕಷ್ಟು ಕೆಲಸ ಮಾಡಿ ಜನಪ್ರಿಯರಾದ ಜನಪ್ರತಿನಿಧಿಯೂ ಸೋಲುಣ್ಣ ಬೇಕಾಗಬಹುದು. ಅಂತೆಯೇ ವಿಪಕ್ಷದ ರಾಜ್ಯ-ರಾಷ್ಟ್ರ ಸ್ತರದ ನೇತೃತ್ವದ ಪ್ರಬಲ ಅಲೆಯೂ ಕೆಲವೊಮ್ಮೆ ಆಡಳಿತರೂಢ ಪಕ್ಷದ ಉತ್ತಮ ಕಾರ್ಯನಿರ್ವಹಿಸಿದ ಶಾಸಕನ ಸೋಲಿಗೆ ಹಾಗೂ ವಿಪಕ್ಷದ ಅಯೋಗ್ಯ ಅಭ್ಯರ್ಥಿಯ ಗೆಲುವಿಗೆ ಕಾರಣವಾಗಬಹುದು.

ವರ್ಚಸ್ವಿ ನಾಯಕತ್ವ 
ದೇಶದಲ್ಲಿ ಪ್ರಬಲ ನಾಯಕತ್ವ ಇದ್ದಾಗೆಲ್ಲಾ ಇಂತಹ ವಿದ್ಯಮಾನ ಸಾಮಾನ್ಯ. ಉದಾಹರಣೆಗಾಗಿ ನೆಹರೂ, ಇಂದಿರಾ ಗಾಂಧಿ, ಪ್ರಸ್ತುತದಲ್ಲಿ ನರೇಂದ್ರ ಮೋದಿಯಂತಹ ಮೇರು ವರ್ಚಸ್ಸಿನ ನಾಯಕರ ನೇತೃತ್ವದಲ್ಲಿ ಜನಪ್ರತಿನಿಧಿಗಳ ವೈಯ್ಯಕ್ತಿಕ ಸಾಧನೆಗಿಂತ ಪಕ್ಷದ ಪ್ರಭಾವವೇ ಸೋಲು-ಗೆಲುವಿಗೆ ಅಧಿಕ ಕಾರಣವಾಗಿರುತ್ತದೆ. ಇಂದಿರಾ ಗಾಂಧಿಯವರು ಜನಪ್ರಿಯತೆಯ ತುತ್ತ ತುದಿಯಲ್ಲಿರುವಾಗ ರಾಜ್ಯ ವಿಧಾನ ಸಭಾ ಚುನಾವಣೆ ಇರಲಿ ಅಥವಾ ಲೋಕಸಭಾ ಚುನಾವಣೆ ಯಿರಲಿ ಅವರ ಭಾವ ಚಿತ್ರವೊಂದೇ ಕಾಂಗ್ರೆಸ್ಸಿನ ಅಭ್ಯರ್ಥಿ ಗಳಿಗೆ ಶ್ರೀರಕ್ಷೆಯಾಗಿತ್ತು. ಕೇಂದ್ರದಲ್ಲಿ ರೈಲ್ವೆಯಂತಹ ಪ್ರಭಾವಶಾಲಿ ಖಾತೆಯನ್ನು ನಿರ್ವಹಿಸಿದ ರಾಜ್ಯದ ಮುತ್ಸದ್ದಿಯೋರ್ವರನ್ನು ಅದುವರೆಗೆ ಯಾರೂ ಕೇಳದ ತೀರಾ
ಸಾಮಾನ್ಯ ವ್ಯಕ್ತಿಯೋರ್ವರು 1977ರ ಲೋಕಸಭಾ ಚುನಾವಣೆಯಲ್ಲಿ ಭಾರೀ ಮತಗಳಿಂದ ಸೋಲಿಸಿದ್ದು ಸುದ್ದಿಯಾಗಿತ್ತು. ಅಂದು ಇಂದಿರಾ ಗಾಂಧಿಯವರ ಹೆಸರಿನ ಮಹಿಮೆಯೇ ಅಷ್ಟು ಪ್ರಬಲವಾಗಿತ್ತು. ಹೆಚ್ಚು ಕಡಿಮೆ ಪ್ರಧಾನಿ ನರೇಂದ್ರ ಮೋದಿಯವರ ಪ್ರಭಾವವೂ ಇಂದು ಅದೇ
ಪ್ರಮಾಣದಲ್ಲಿ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳಿಗೆ ಶ್ರೀರಕ್ಷೆಯಾಗಿ ಕಾಣುತ್ತಿದೆ.

ಪ್ರಸ್ತುತ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆಯಾದ ಎಲ್ಲಾ ಪ್ರತಿನಿಧಿಗಳೂ ಉತ್ತಮರೆಂದು ಮತದಾರರು ಹರಸಿದ್ದಾರೆಂದು ಭಾವಿಸಬೇಕಿಲ್ಲ. ಸರಕಾರದ ಕಾರ್ಯ ವೈಖರಿಯಿಂದ ಬೇಸತ್ತಿದ್ದವರಿಗೆ ತಮ್ಮ ರೋಷವನ್ನು ವ್ಯಕ್ತಪಡಿಸಲು ಆಡಳಿತರೂಢ ಪಕ್ಷದ ಉತ್ತಮ ಅಭ್ಯರ್ಥಿಗಳನ್ನು ಸೋಲಿಸದೇ ಹಾಗೂ ವಿರೋಧಿ ಪಾಳಯದ ಅಯೋಗ್ಯ ಅಭ್ಯರ್ಥಿಗಳನ್ನು ಗೆಲ್ಲಿಸದೇ ಬೇರೆ ದಾರಿಯಿರಲಿಲ್ಲ. ಅರ್ಥಹೀನ, ಫ‌ಲಿತಾಂಶದ ಮೇಲೆ ಯಾವ ಪ್ರಭಾವ ಬೀರದ ನೋಟಾವಂತೂ ಅವರ ಆಯ್ಕೆಯಾಗುವುದು ಸಾಧ್ಯವಿರಲಿಲ್ಲ ಎಂದ ಮೇಲೆ ಈ ಖಂಡಿತ ಜನಾದೇಶವನ್ನು ಹೇಗೆ ಅರ್ಥೈಸಬೇಕು? ಸೋತವರು ಕುಗ್ಗಬೇಕಾಗಿಲ್ಲ, ಗೆದ್ದವರು ಬೀಗಬೇಕಾಗಿಲ್ಲ. ಇದು ಅಸಹಾಯಕ ಮತದಾರರ ಸೀಮಿತ ಅಧಿಕಾರದ ಪ್ರಯೋಗ ಅಷ್ಟೆ. ಕೆಲವರು ನಮ್ಮ ಸೀಟುಗಳು ಕಡಿಮೆಯಾಗಿರಬಹುದು ಮತಗಳಿಕೆ ಜಾಸ್ತಿ ಆಗಿದೆ ಎನ್ನಬಹುದು. ಇನ್ನು ಕೆಲವರು ಕಳೆದ ಬಾರಿ ನಮ್ಮ ಸೀಟಿನ ಸಂಖ್ಯೆ ಅಷ್ಟಿದ್ದದ್ದು ಈಗ ಇಷ್ಟು ಹೆಚ್ಚಾಗಿದೆ ಎಂದು ತಾವೇ ನಿಜವಾಗಿ ಗೆದ್ದವರು ಎಂದು ತಮ್ಮ ಬೆನ್ನು ತಾವೇ
ತಟ್ಟಿಕೊಂಡು ಬೀಗಬಹುದು.

ಒಂದಂತೂ ನಿಜ ಯಾವ ಸರಕಾರದ ಅರ್ಧದಷ್ಟು ಮಂತ್ರಿಗಳು ಚುನಾವಣಾ ಕಣದಲ್ಲಿ ಪರಾಭವ ಕಂಡರೋ, ಯಾವ ಮುಖ್ಯಮಂತ್ರಿ ಒಂದು ಕ್ಷೇತ್ರದಲ್ಲಿ ಭಾರೀ ಪರಾಜಯ ಕಂಡು ಇನ್ನೊಂದು ಕ್ಷೇತ್ರದಲ್ಲಿ ಪ್ರಯಾಸದ ಗೆಲುವು ಕಂಡರೋ ಆ ಪಕ್ಷದ ಅದೇ ಹಳೆಯ ಮುಖಗಳು ಪುನಹ ಶಕ್ತಿ ಸೌಧದಲ್ಲಿ ಕುಳಿತುಕೊಂಡು ಅಧಿಕಾರ ಚಲಾಯಿಸುವುದು ನಮ್ಮ ಪ್ರಜಾಪ್ರಭುತ್ವದ ಮತ್ತು ಜನಭಾವನೆಯ ಅಣಕವೇ ಸರಿ.

* ಬೈಂದೂರು ಚಂದ್ರಶೇಖರ ನಾವಡ

ಟಾಪ್ ನ್ಯೂಸ್

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

police crime

Belgavi:ಸಚಿವೆ ಲಕ್ಷ್ಮೀ ಹೆಬ್ಬಾಳಕ‌ರ್ ಆಪ್ತನ ಮೇಲೆ ದುಷ್ಕರ್ಮಿಗಳ ತಂಡದಿಂದ ದಾಳಿ

PM Modi: ಜಗತ್ತಿನಲ್ಲಿ ಎಲ್ಲೇ ಸಮಸ್ಯೆಯಾದರೂ ಭಾರತದಿಂದ ಸ್ಪಂದನೆ

PM Modi: ಜಗತ್ತಿನಲ್ಲಿ ಎಲ್ಲೇ ಸಮಸ್ಯೆಯಾದರೂ ಭಾರತದಿಂದ ಸ್ಪಂದನೆ

J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ

J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

ರಾಜ್ಯದಲ್ಲಿ ಇನ್ನೊಂದು ಪಕ್ಷದ ಸರ್ಕಾರವಿದ್ದಾಗ ಈ ರಾಜ್ಯಪಾಲರುಗಳು‎ ತುಂಬಾ ಆತಂತ್ರ ಸ್ಥಿತಿ

ಮುಡಾ: ಸಿದ್ದು ವಿರುದ್ಧ ರಾಜ್ಯಪಾಲರ prosecution ಅನುಮತಿ ಸಿಎಂ ಸ್ಥಾನಕ್ಕೆ ಮುಳುವಾಗಬಹುದೇ?

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

police crime

Belgavi:ಸಚಿವೆ ಲಕ್ಷ್ಮೀ ಹೆಬ್ಬಾಳಕ‌ರ್ ಆಪ್ತನ ಮೇಲೆ ದುಷ್ಕರ್ಮಿಗಳ ತಂಡದಿಂದ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.