ಹೆಚ್ಚಲಿ ಸ್ವತಂತ್ರ ಚಿಂತಕರ ಸಂಖ್ಯೆ
Team Udayavani, Mar 20, 2018, 7:30 AM IST
ಭಾರತದಲ್ಲಿ ಪಕ್ಷ ಹಾಗೂ ವ್ಯಕ್ತಿಯ ಮೇಲಿನ ಮತದಾರರ ನಿಷ್ಠೆ ನಿರಂತರ ಹಾಗೂ ಅಭಾದಿತ. ಅನೇಕ ಮಂದಿ ವಿದ್ಯಾವಂತರು ಕೂಡಾ ಈ ಅಚಲ ನಿಷ್ಠೆಯ ಗುಂಗಿನಲ್ಲಿಯೇ ಸದಾ ಕಾಲ ಇರುತ್ತಾರೆ. ಮತದಾರರ ಈ ಮನೋವೃತ್ತಿಯನ್ನು ನಮ್ಮ ರಾಜಕಾರಣಿಗಳು ತಮಗೆ ಬೇಕಾದ ಹಾಗೆ ಬಳಸಿಕೊಳ್ಳುವಲ್ಲಿ ನಿಸ್ಸೀಮರು. ಯಾವ ರಾಜಕೀಯ ಪಕ್ಷದ ಸರಕಾರ ಬಂದರೂ ಭ್ರಷ್ಟಾಚಾರ ನಿರ್ಮೂಲನ ಮಾಡುವ ಮಾತಂತಿರಲಿ ಕಡೇ ಪಕ್ಷ ನಿಯಂತ್ರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಿಲ್ಲ.
ಚುನಾವಣೆ ಪ್ರಜಾಸತ್ತೆಯ ಒಂದು ಮುಖ್ಯ ಲಕ್ಷಣ. ಅದರ ಫಲಿತಾಂಶ ಆಡಳಿತ ದಕ್ಷತೆಯ ಮೇಲೆ ನೇರ ಪ್ರಭಾವ ಬೀರುತ್ತದೆ. ವೈಶಿಷ್ಟ್ಯ ಇರುವುದೇ ಇಲ್ಲಿ. ನಮ್ಮ ಆಡಳಿತಕ್ಕೆ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಲು ಸಂವಿಧಾನದಲ್ಲಿ ಅವಕಾಶ ಕಲ್ಪಿಸಿಕೊಳ್ಳಲಾಗಿದೆ. ಅದು ಚುನಾವಣೆಯ ಮೂಲಕ. ಹಾಗಾಗಿ ನಮ್ಮದು ಪ್ರಜಾ ಪ್ರತಿನಿಧೀಕರಣ ಸ್ವರೂಪದ ಪ್ರಜಾಸತ್ತೆ. ಈ ಪ್ರತಿನಿಧಿಗಳು ಉತ್ತಮರಾಗಿದ್ದರೆ ಆಡಳಿತದ ದಕ್ಷತೆಯೂ ಉತ್ತಮ ಮಟ್ಟದಲ್ಲಿರುತ್ತದೆ. ಅದಕ್ಷರಾದರೆ ದುಷ್ಟ ನಿರಂಕುಶ ಪ್ರಭುವಿನ ಆಳ್ವಿಕೆಗಿಂತಲೂ ಕಡೆಯಾದೀತು. ಆದರೆ ವಿಶ್ವ ಕಂಡ ಅನೇಕ ಆಡಳಿತ ಪದ್ಧತಿಯಲ್ಲಿ ಪ್ರಜಾಸತ್ತಾತ್ಮಕ ಆಡಳಿತವೇ ಸರ್ವಶ್ರೇಷ್ಠವಾದುದು ಎಂಬುದು ಬುದ್ಧಿಜೀವಿಗಳ ಅಭಿಮತ. ಭಾರತ ಕಳೆದ ಎಪ್ಪತ್ತು ವರ್ಷದಿಂದ ಪ್ರಜಾಸತ್ತಾತ್ಮಕ ಆಡಳಿತದಲ್ಲಿ ನಡೆದು ಬರುತ್ತಿದೆ. ಹಾಗಾದರೆ ಭಾರತ ನೈಜ ಪ್ರಜಾಸತ್ತೆಯ ಸವಿಯನ್ನು ಅನುಭವಿಸುತ್ತಿದೆಯೇ? ಈ ಪ್ರಶ್ನೆಗೆ ಉತ್ತರಿಸುವುದು ಅಷ್ಟು ಸುಲಭವಲ್ಲ.
ಸ್ವಾತಂತ್ರ್ಯಾನಂತರ ಎದ್ದು ಕಾಣುವ ಬದಲಾವಣೆ ಎಂದರೆ ಸಾಕ್ಷರತೆ. ಜನ ಓದಲು ಬರೆಯಲು ಬಲ್ಲವರಾಗಿದ್ದಾರೆ. ಪತ್ರಿಕೆ ಓದುತ್ತಾರೆ, ವಿದ್ಯುನ್ಮಾನ ಮಾಧ್ಯಮಗಳ ವೀಕ್ಷಣೆ ಮಾಡುತ್ತಾರೆ. ಇವುಗಳಿಂದ ಪ್ರಸಾರಗೊಂಡ ಮಾಹಿತಿ ಸಂಗ್ರಹ ಮಾಡುತ್ತಾರೆ. ಸಮಾಜದ ಆಗು ಹೋಗುಗಳನ್ನು ತಿಳಿಯಲು ಶಕ್ತರಾಗಿದ್ದಾರೆ . ಏಳು ದಶಕಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ನಿರಕ್ಷರರ ಸಂಖ್ಯೆ ಅಧಿಕವಿತ್ತು. ಆರ್ಥಿಕವಾಗಿ ದುರ್ಬಲರೂ ಆಗಿದ್ದರು. ಆದರೆ ಪ್ರಾಯ ಪ್ರಬುದ್ಧರೆಲ್ಲರೂ ಮತದಾರರಾಗಿದ್ದರು. ಭಾರತದಲ್ಲಿ ಪ್ರೌಢ ಮತದಾನ ಪದ್ಧತಿ (ಅಛulಠಿ ಖuffrಚಜಛಿ) ಸಂವಿಧಾನದ ರಚನೆಯಲ್ಲಿಯೇ ಒಳಗೊಂಡಿದೆ. ಮೊದಲು 21 ವರ್ಷಕ್ಕಿದ್ದ ವಯೋಮಿತಿಯನ್ನು ಅನಂತರ 18ಕ್ಕಿಳಿಸಲಾಯಿತು. ಖೇದದ ವಿಚಾರವೆಂದರೆ ಮತದಾನದ ಹಕ್ಕಿರುವ ಬಹುಪಾಲು ಜನರು ಸ್ವಯಂ ವಿವೇಚನೆಯಿಂದ ಮತ ಚಲಾಯಿಸುವ ಸಾಧ್ಯತೆ ತೀರಾ ಕಡಿಮೆ ಇತ್ತು. ಮುಗ್ಧರಾದ ಈ ಮತದಾರರು ಮೊದಮೊದಲು ಮತ ಚಲಾಯಿಸುವ ಗೋಜಿಗೆ ಹೋಗುತ್ತಿರಲಿಲ್ಲ. ಮತದಾನದ ಮಹತ್ವದ ಅರಿವು ಅವರಲ್ಲಿ ತೀರಾ ಕಡಿಮೆ ಇತ್ತು.
ಬಡತನ ಹಾಗೂ ಶಿಕ್ಷಣದ ಕೊರತೆಯಿಂದಾಗಿ ಮತದಾನದ ಪ್ರಮಾಣ ಸ್ವಾತಂತ್ರ್ಯದೊರೆತ ತಕ್ಷಣದ ಸಾರ್ವತ್ರಿಕ ಚುನಾವಣೆ ಯಲ್ಲಿ ತೀರಾ ಕಡಿಮೆ ಇತ್ತು. 1952ರ ಮೊದಲ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಕೇವಲ ಶೇ. 47.5ರಷ್ಟು ಮತದಾನ ಆಗಿದೆ. ಈ ಪ್ರಮಾಣ ಅನಂತರದ 1957ರಲ್ಲಿ ತುಸು ಹೆಚ್ಚಿ ಶೇ.55 ರಷ್ಟಾಯಿತು. ಆದರೆ 1962ರ ಚುನಾವಣೆಯಲ್ಲಿ ಪ್ರಮಾಣ ಏರಿಕೆಯಾಗಲಿಲ್ಲ. ಆ ನಂತರದ ಚುನಾವಣೆಗಳಲ್ಲಿ ಪ್ರಮಾಣದಲ್ಲಿ ತುಸು ಏರಿಕೆ ಕಂಡರೂ ಜನಸಂಖ್ಯೆ ಹಾಗೂ ಮತದಾರರ ಸಂಖ್ಯೆಗನುಗುಣವಾಗಿ ಮತದಾನದ ಪ್ರಮಾಣ ಏರಿಕೆಯಾಗಲಿಲ್ಲ. 2008-09ರ ಸಾಲಿನಲ್ಲಿ ಜರಗಿದ ಲೋಕಸಭಾ ಚುನಾವಣೆಯಲ್ಲಿ ಚಲಾವಣೆಯಾದ ಪ್ರಮಾಣ ಶೇ. 59.7ಎಂದು ಅಂಕಿ ಅಂಶಗಳು ಸಾರುತ್ತವೆ. ಆದರೆ 2014ರ ಲೋಕಸಭಾ ಚುನಾವಣೆಯಲ್ಲಿ ದಾಖಲೆಯ ಶೇ.66.4ರಷ್ಟಾಗಿದೆ. ಇದಕ್ಕೆ ಸರಕಾರ 2011ರಲ್ಲಿ ಚಾಲನೆ ನೀಡಿದ ಮತದಾರರ ಅರಿವು ಆಂದೋಲನ ಯೋಜನೆಯೂ ಕಾರಣವಾಗಿರಬ ಹುದು. ಜನವರಿ 25ನ್ನು “ರಾಷ್ಟ್ರೀಯ ಮತದಾರರ ದಿನ’ ಎಂದು ಘೋಷಿಸಿರುವುದಲ್ಲದೆ ವಿವಿಧ ಮಾಧ್ಯಮಗಳ ಮೂಲಕ ಮಾಹಿತಿ ನೀಡಲಾಗುತ್ತಿದೆ.
ಈ ಎಲ್ಲ ಪ್ರಯತ್ನ ಹಾಗೂ ಬದಲಾವಣೆಯ ಹೊರತಾಗಿಯೂ ದೇಶದಲ್ಲಿ ಮತದಾನದ ಪ್ರಮಾಣ ಮತದಾರರ ಸಂಖ್ಯೆಗನು ಗುಣವಾಗಿಲ್ಲ. ಮತದಾನದ ಪ್ರಮಾಣ ಹೆಚ್ಚಾದಂತೆ ಜನಪ್ರತಿ ನಿಧಿಗಳ ಆಯ್ಕೆ ಹೆಚ್ಚು ನ್ಯಾಯಯುತವಾಗಿರುತ್ತದೆ ಎಂಬ ನಂಬಿಕೆ ಇದೆ. ಇದರ ಜೊತೆ ಮುಕ್ತ ಹಾಗೂ ನ್ಯಾಯಯುತ (free and fair) ಚುನಾವಣಾ ನಿರ್ವಹಣೆಯೂ ಅಗತ್ಯ. ಸುಮಾರು ಎಂಭತ್ತರ ದಶಕದ ತನಕವೂ ಅವ್ಯಾಹತವಾಗಿ ಚುನಾವಣಾ ಅಕ್ರಮಗಳು ನಡೆಯುತ್ತಿದ್ದವು. ಮತಗಟ್ಟೆ ವಶೀಕರಣ ಹಾಗೂ ನಕಲಿ ಮತದಾನ ಅಕ್ರಮಗಳು ನಿರಾತಂಕವಾಗಿ ನಡೆಯುತ್ತಿತ್ತು. ಆದರೆ ಟಿ.ಎನ್. ಶೇಷನ್ ಎಂಬ ದಿಟ್ಟ ವ್ಯಕ್ತಿ ಚುನಾವಣಾ ಆಯೋಗದ ಆಯುಕ್ತರಾದ ಬಳಿಕ ಇಂಥ ಅನುಚಿತ ಕ್ರಮಗಳಿಗೆ ಕಡಿವಾಣ ಬಿತ್ತು. ಆದರೂ ಪೂರ್ಣ ಪ್ರಮಾಣದಲ್ಲಿ ನಿಯಂತ್ರಣ ಸಾಧ್ಯವಾಗಲಿಲ್ಲ. ಈಗಲೂ ರಾಜಕೀಯ ಪಕ್ಷಗಳ ಆಮಿಷ ಒಡ್ಡುವ ಹಾಗೂ ಮರುಳುಗೊಳಿಸುವ ತಂತ್ರಗಳು ನಿರಾತಂಕವಾಗಿ ಮುಂದುವರೆಯುತ್ತಿದೆ. ಪರಿಣಾಮವಾಗಿ ಶುದ್ಧ ಪ್ರಜಾ ಸತ್ತಾತ್ಮಕವಾಗಿ ಆಡಳಿತ ನಡೆಸುವ ಸರಕಾರಗಳು ಅಸ್ತಿತ್ವಕ್ಕೆ ಬರಲೇ ಇಲ್ಲ ಅಥವಾ ಅಂಥ ಅಪ್ಪಟ ಸಮಾನತೆಯನ್ನು ಪ್ರತಿಪಾದಿಸತಕ್ಕ ರಾಜಕೀಯ ಪಕ್ಷ ಹಾಗೂ ಪ್ರತಿನಿಧಿಗಳನ್ನು ಆಯ್ಕೆ ಮಾಡುವಲ್ಲಿ ಜನ ಎಡವಿದ್ದಾರೆ ಎಂದು ಹೇಳಿದರೂ ತಪ್ಪಲ್ಲ.
ಇಲ್ಲಿ ಮತದಾರರ ಜವಾಬ್ದಾರಿ ಗುರುತರವಾದದ್ದು. ಚುನಾ ಯಿತ ಪ್ರತಿನಿಧಿ ತನ್ನ ಕರ್ತವ್ಯವನ್ನು ಹೇಗೆ ನಿಭಾಯಿಸುತ್ತಿದ್ದಾನೆ ಎಂಬ ಅವಲೋಕನ ನಡೆಸುತ್ತಲೇ ಇರಬೇಕು. ಮುಖ್ಯವಾಗಿ ಸದನದಲ್ಲಿ ಆತನ ಹಾಜರಾತಿ. ಆತನ ಪದನಾಮವೇ ಸೂಚಿಸು ವಂತೆ ಆತ ಆ ಸದನದ ಸದಸ್ಯ. ಸದನದ ಸಕಲ ಕಲಾಪಗಳಲ್ಲಿ ಸಕ್ರಿಯ ವಾಗಿ ಪಾಲ್ಗೊಳ್ಳುವುದೇ ಆತನ ಪ್ರಥಮ ಕರ್ತವ್ಯ. ದುರ ದೃಷ್ಟವೆಂದರೆ ಸರಾಸರಿಯಾಗಿ ನಮ್ಮ ಪ್ರತಿನಿಧಿಗಳ ಹಾಜರಾತಿ ಯಾವ ಸಂದರ್ಭಗಳಲ್ಲಿಯೂ ಶೇಕಡಾ 50ಕ್ಕಿಂತ ಕಡಿಮೆ ಇರುತ್ತದೆ. ಇದರಿಂದಾಗಿ ಗಹನವಾದ ವಿಷಯಗಳೂ ಕೂಡಾ ವಿಸ್ತೃತವಾದ ಚರ್ಚೆಗೆ ಒಳಗಾಗದೆ ಕೇವಲ ಉಪಸ್ಥಿತ ಸದಸ್ಯರ ಬಹುಮತ ನೆಲೆಯಲ್ಲಿ ತೀರ್ಮಾನ ಗೊಂಡು ಮಸೂದೆ ಕಾನೂನಾಗಿ ಜಾರಿಗೆ ಬರುತ್ತಿರುವುದನ್ನು ನಾವು ನೋಡುತ್ತಿದ್ದೇವೆ.
ಇದು ಚುನಾಯಿತ ಪ್ರತಿನಿಧಿಗಳ ಕರ್ತವ್ಯಲೋಪ ಎಂದು ಮತದಾರರು ಪರಿಗಣಿಸುವ ಸ್ಥಿತಿ ಉಂಟಾಗಬೇಕು. ಅದು ಮತದಾನದ ಜಾಗೃತಿಯ ಲಕ್ಷಣ. ಹಾಗೆ ಸದನದ ಹೊರಗೂ ಚುನಾಯಿತ ಪ್ರತಿನಿಧಿಗಳ ನಡವಳಿಕೆಯನ್ನು ಗಮನಿಸುವ ಪರಿಪಾಠ ಮಾಡಿಕೊಳ್ಳಬೇಕು. ಈ ಅಂಶಗಳು ಸರಕಾರದ ನಿರ್ವಹಣೆಯ ಮೇಲೆ ಬೆಳಕು ಚೆಲ್ಲುತ್ತದೆ.
ಸರಕಾರದ ಹಾಗೂ ಅಭ್ಯರ್ಥಿಯ ಕಾರ್ಯನಿರ್ವಹಣೆಯನ್ನು ಗಮನಿಸಿ ಮತದಾನ ಮಾಡುವ ಮತದಾರರಿಗೆ “ಅನಿಶ್ಚಿತ ಮತದಾರರು’ (floating voters) ಎಂದು ಕರೆಯುತ್ತಾರೆ. ಇದು ಅಮೇರಿಕಾದ ಪರಿಕಲ್ಪನೆ. ಅವರು ಯಾವ ಪಕ್ಷಕ್ಕೂ ಯಾವ ವ್ಯಕ್ತಿಗೂ ಅಂಟಿಕೊಳ್ಳುವವರಲ್ಲ. ಈ ಸ್ವತಂತ್ರ ಚಿಂತಕರ ಸಂಖ್ಯೆ ಭಾರತದಲ್ಲಿ ಅತ್ಯಲ್ಪ (insignificant). ಅದು ಕೇವಲ ಶೇಕಡಾ 3-5ರಷ್ಟು. ಆದರೆ ಅಮೇರಿಕಾದಲ್ಲಿ ಇವರ ಪ್ರಮಾಣ ಶೇಕಡಾ 30-35ರಷ್ಟಿದೆ. ಹಾಗಾಗಿ ಅಲ್ಲಿನ ಸರಕಾರಗಳು ಬಹು ಎಚ್ಚರದಿಂದ ಕಾರ್ಯ ನಿರ್ವಹಿಸುತ್ತವೆ. ಆದರೆ ಭಾರತದಲ್ಲಿ ಪಕ್ಷ ಹಾಗೂ ವ್ಯಕ್ತಿಯ ಮೇಲಿನ ಮತದಾರರ ನಿಷ್ಠೆ ನಿರಂತರ ಹಾಗೂ ಅಭಾದಿತ. ಅನೇಕ ಮಂದಿ ವಿದ್ಯಾವಂತರು ಕೂಡಾ ಈ ಅಚಲ ನಿಷ್ಠೆಯ ಗುಂಗಿನಲ್ಲಿಯೇ ಸದಾ ಕಾಲ ಇರುತ್ತಾರೆ. ಮತದಾರರ ಈ ಮನೋವೃತ್ತಿಯನ್ನು ನಮ್ಮ ರಾಜಕಾರಣಿಗಳು ತಮಗೆ ಬೇಕಾದ ಹಾಗೆ ಬಳಸಿಕೊಳ್ಳುವಲ್ಲಿ ನಿಸ್ಸೀಮರು. ಯಾವ ರಾಜಕೀಯ ಪಕ್ಷದ ಸರಕಾರ ಬಂದರೂ ಭ್ರಷ್ಟಾಚಾರ ನಿರ್ಮೂಲನ ಮಾಡುವ ಮಾತಂತಿರಲಿ ಕಡೇ ಪಕ್ಷ ನಿಯಂತ್ರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಿಲ್ಲ. ಬದಲು ಆಯಾ ಪಕ್ಷದ ಮೂಲ ಸಿದ್ಧಾಂತಗಳನ್ನು ಸಂವಿಧಾನದ ಆಶಯದ ಸೋಗಿನಲ್ಲಿ ವಿವಿಧ ಜನ ಮರಳು ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಮರಳಿ ಅಧಿಕಾರಕ್ಕೆ ಬರುವ ಕಸರತ್ತು ನಡೆಸುತ್ತಿರುತ್ತಾರೆ. ಇವರ ಮನೋಭಿಷ್ಟವನ್ನು ಈಡೇರಿಸಲು ಇದ್ದಾರಲ್ಲಾ ಪಕ್ಷ ಹಾಗೂ ವ್ಯಕ್ತಿನಿಷ್ಠೆ ಇರುವ ಮತದಾರರು.
ಈಗ ಭಾರತದ ಬೃಹತ್ ಮತದಾರ ಸ್ತೋಮದಲ್ಲಿ ಸ್ವತಂತ್ರವಾಗಿ ಚಿಂತಿಸಿ ವಿವೇಚನಾಯುಕ್ತವಾಗಿ ಮತದಾನ ಮಾಡುವವರ ಅರ್ಥಾತ್ ಅನಿಶ್ಚಿತ ಮತದಾರರ ಸಂಖ್ಯೆ ಅಧಿಕಗೊಳ್ಳಬೇಕು. ಬಹುಪಕ್ಷೀಯ ವ್ಯವಸ್ಥೆಯಿಂದ ಸೋಲು-ಗೆಲುವಿನ ಅಂತರ ಕಡಿಮೆ ಇರುವ ಭಾರತದಲ್ಲಿ ಅನಿಶ್ಚಿತ ಮತದಾರರ ಸಂಖ್ಯೆ ಹೆಚ್ಚಳದಿಂದ ಚುನಾವಣಾ ಫಲಿತಾಂಶದ ಮೇಲೆ ತೀವ್ರ ಪರಿಣಾಮ ಉಂಟಾಗುವುದರಲ್ಲಿ ಸಂದೇಹವಿಲ್ಲ. ಇದರಿಂದ ಉತ್ತಮ ವ್ಯಕ್ತಿಯ ಆಯ್ಕೆಗೆ ಸಹಕಾರಿ ಹಾಗೂ ಅಧಿಕಾರದಲ್ಲಿರುವ ಚುನಾಯಿತ ಪ್ರತಿನಿಧಿಗೆ ಎಚ್ಚರಿಕೆಯ ಸಂದೇಶವೂ ಆದೀತು.
ಬೇಳೂರು ರಾಘವ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
ಜೈಲಲ್ಲಿ ತಾರತಮ್ಯ ತಪ್ಪಿಸಲು ಕೇಂದ್ರದಿಂದ ಕೈಪಿಡಿ ತಿದ್ದುಪಡಿ
Lalu Prasad Yadav: “ಐಎನ್‌ಡಿಐಎ’ಗೆ ಬರೋದಿದ್ದರೆ ನಿತೀಶ್‌ಗೆ ಸ್ವಾಗತ
Dawood Ibrahim: 23 ವರ್ಷಗಳ ಹಿಂದೆ ಖರೀದಿಸಿದ್ದ ದಾವೂದ್ ಆಸ್ತಿ ಈಗ ವರ್ಗಾವಣೆ
Udupi; ಗೀತಾರ್ಥ ಚಿಂತನೆ 144: ವೇದಗಳಿಗೆ ಇನ್ನೊಂದು ಅಪೌರುಷೇಯವಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.