ಅಪಾಯವಿರುವುದು ಮಮತಾರ ಓಲೈಕೆ ನೀತಿಗಳಲ್ಲಿ
Team Udayavani, Jul 11, 2017, 7:28 AM IST
ತಮ್ಮ ರಾಜ್ಯದಲ್ಲಿ ಕೋಮುವಾದಿ ಶಕ್ತಿಗಳು ಬೆಳೆಯುತ್ತಿರುವ ಸಂಗತಿಯನ್ನು ಪಶ್ಚಿಮ ಬಂಗಾಳ ಸರ್ಕಾರ ಬಹಳ ಸಮಯದಿಂದ ಕಡೆಗಣಿಸುತ್ತಾ ಬಂದಿದೆ. ಬಾಂಗ್ಲಾದೇಶದ ಹೂಜಿಯಂಥ ಉಗ್ರಸಂಘಟನೆಗಳು ಪಶ್ಚಿಮ ಬಂಗಾಳ ಪ್ರವೇಶಿಸಿವೆ. ಸತ್ಯವೇನೆಂದರೆ ಶೇಖ್ ಹಸೀನಾ ಸರ್ಕಾರ ಬಾಂಗ್ಲಾದೇಶದ ತೀವ್ರವಾದಿ ಸಂಘಟನೆಗಳ ಹೆಡೆಮುರಿ ಕಟ್ಟಲು ಆರಂಭಿಸಿದ ನಂತರ ಅನೇಕ ಉಗ್ರ ಸಂಘಟನೆಗಳು ಪಶ್ಚಿಮ ಬಂಗಾಳದಲ್ಲಿ ನೆಲೆ ಕಂಡುಕೊಂಡಿವೆ. ಸಮಸ್ಯೆಗಳ ಬೆಟ್ಟವೇ ಸೃಷ್ಟಿಯಾಗಿರುವಾಗ ಮಮತಾ ಚಿತ್ತ ಮಾತ್ರ ವೋಟ್‌ಬ್ಯಾಂಕ್ ಗಿಮಿಕ್‌ಗಳತ್ತ ನೆಟ್ಟಿದೆ.
ಪಶ್ಚಿಮ ಬಂಗಾಳದಿಂದ ಬರುತ್ತಿರುವ ಸುದ್ದಿಯನ್ನು ಗಮನಿಸಿದವರಿಗೆ, ಆ ರಾಜ್ಯ ದೊಡ್ಡ ಕೋಮುಗಲಭೆಗೆ ಈಡಾಗುವ ಹಾದಿಯಲ್ಲಿದೆ ಎಂದು ಅನಿಸದೇ ಇರದು. ಸಾಮಾಜಿಕ ಮಾಧ್ಯಮದಲ್ಲಿನ ಕಮೆಂಟ್‌ಗಳಂತೂ 1946ರಲ್ಲಿ ಪ್ರತ್ಯೇಕ ಪಾಕಿಸ್ತಾನಕ್ಕಾಗಿ ಆಗ್ರಹಿಸಿ ಮುಸ್ಲಿಂ ಲೀಗ್ ನಾಯಕ ಜಿನ್ನಾ ಕರೆಕೊಟ್ಟ “ಡೈರೆಕ್ಟ್ ಆ್ಯಕ್ಷನ್ ಡೇ’ ಅನ್ನು ನೆನಪಿಸಿಕೊಳ್ಳುತ್ತಿವೆ. ಡೈರೆಕ್ಟ್ ಆ್ಯಕ್ಷನ್ ಡೇ ಕೋಮು ಗಲಭೆಯ ರೂಪ ಪಡೆದು ಸಾವಿರಾರು ಜನರ ಮಾರಣಹೋಮಕ್ಕೆ ಕಾರಣವಾಯಿತು. ಈ ಹಿಂಸಾಚಾರ ಕಲ್ಕತ್ತಾದಿಂದ ಹಿಡಿದು ಅವಿಭಜಿತ ಬಂಗಾಳ ಪ್ರಾಂತ್ಯವನ್ನು, ಅದರಲ್ಲೂ ನೌಖಲಿ ಪ್ರದೇಶವನ್ನು ವೇಗವಾಗಿ ಆಕ್ರಮಿಸಿಕೊಂಡಿತು. ಮಹಾತ್ಮಾ ಗಾಂಧಿಯವರು ಮಧ್ಯೆ ಪ್ರವೇಶಿಸಿದರೂ ನೌಖಲಿ(ಈಗ ಬಾಂಗ್ಲಾದೇಶದಲ್ಲಿದೆ)ಯಲ್ಲಿನ ಕೋಮುಗಲಭೆಯ ದಳ್ಳುರಿಯನ್ನು ತಪ್ಪಿಸಲು ಅವರಿಂದ ಸಾಧ್ಯವಾಗಲಿಲ್ಲ.
ಸಾಮಾಜಿಕ ಮಾಧ್ಯಮದಲ್ಲಿ 70 ವರ್ಷಗಳ ಹಿಂದೆ ನಡೆದ ಈ ಹತ್ಯಾಕಾಂಡದ ಕಠೊರ ನೆನಪನ್ನು ಈಗೇಕೆ ಮಾಡಿಕೊಳ್ಳುತ್ತಿದೆ? ಕೆಲ ವರ್ಷಗಳಿಂದ ಬಂಗಾಳದಲ್ಲಿ, ಅದರಲ್ಲೂ ಆ ರಾಜ್ಯದ ದಕ್ಷಿಣ ಭಾಗದ ಪಟ್ಟಣಗಳು ಮತ್ತು ನಗರಗಳಲ್ಲಿ ನಿಯಮಿತವಾಗಿ ಕೋಮು ಘರ್ಷಣೆಗಳು ಎದುರಾಗುತ್ತಲೇ ಇರುತ್ತವೆ. 24 ಪರ್ಗನಾಸ್, ಹೌರಾ ಮತ್ತು ಹೂಗ್ಲಿಯಂಥ ಜಿಲ್ಲೆಗಳಿಂದ ಇಂಥ ಘಟನೆಗಳು ಅಜಮಾಸು ಪ್ರತಿವಾರವೂ ಸುದ್ದಿಯಾಗುತ್ತಲೇ ಇವೆ. ಗಮನಾರ್ಹ ಅಂಶವೆಂದರೆ, ಈ ಜಿಲ್ಲೆಗಳೆಲ್ಲ ಬಾಂಗ್ಲಾದೇಶದ ಗಡಿ ಭಾಗದ ಸನಿಹದಲ್ಲೇ ಇವೆ ಎನ್ನುವುದು. ಕಳೆದ ಕೆಲವು ವರ್ಷಗಳಲ್ಲಿ ಸಾಗರೋಪಾದಿಯಲ್ಲಿ ಬಾಂಗ್ಲಾದೇಶಿ ನಿರಾಶ್ರಿತರನ್ನು ಪಶ್ಚಿಮ ಬಂಗಾಳಕ್ಕೆ ತಳ್ಳಲಾಗುತ್ತಿದೆ. ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ವ್ಯವಸ್ಥಿತ ಗಲಭೆಗಳಿಂದಾಗಿ ಅವರ ಸಂಖ್ಯೆ ಇಂದು ಆ ರಾಷ್ಟ್ರದಲ್ಲಿ 8 ಪ್ರತಿಶತಕ್ಕಿಳಿದಿದೆ(ಸ್ವಾತಂತ್ರದ ಸಮಯದಲ್ಲಿ ಈ ಪ್ರಮಾಣ 37 ಪ್ರತಿಶತವಿತ್ತು)
ಮಮತಾ ಬ್ಯಾನರ್ಜಿ ಅಲ್ಪಸಂಖ್ಯಾತರ ಬಹಿರಂಗ ಓಲೈಕೆ ಮಾಡುತ್ತಿರುವುದರಿಂದ ಆ ಗುಂಪಿನಲ್ಲಿರುವ ಕಟ್ಟರ್ ಸಂಪ್ರದಾಯ ವಾದಿಗಳು ಇನ್ನಷ್ಟು ಬಲಿಷ್ಠರಾಗುತ್ತಿದ್ದಾರೆ ಎಂಬುದೇ ಎಲ್ಲರ ಭಾವನೆ. ಭೂ ಒತ್ತುವರಿ ಮತ್ತು ದೇವಾಲಯ ಪ್ರಾಪರ್ಟಿಗಳ ಮೇಲಿನ ದಾಳಿಗಳು ವಿಪರೀತವಾಗಿವೆ. ಇತ್ತೀಚೆಗೆ ಕೋಲ್ಕತ್ತಾದ ಟಿಪು ಸುಲ್ತಾನ್ ಮಸೀದಿಯ ವಿವಾದಾತ್ಮಕ ಇಮಾಮ ಅಬ್ದುಲ್ ಬರ್ಕಾತಿ ತಾವು ಭಾರತೀಯ ಕಾನೂನುಗಳನ್ನು ಪಾಲಿಸುವುದಿಲ್ಲ ಎಂದು ಹೇಳಿ ಜನರ ಕಣ್ಣು ಕೆಂಪಾಗಿಸಿದರು. ಇವರು ತಮ್ಮ ಕಾರಿನ ಮೇಲಿದ್ದ ಕೆಂಪು ದೀಪವನ್ನು ತೆಗೆದು ಹಾಕಲು ನಿರಾಕರಿಸಿದರು(ಇದನ್ನು ಬಳಸಲು ಅನುಮತಿ ನೀಡಿದ್ದು ಪಶ್ಚಿಮ ಬಂಗಾಳದ ಸರ್ಕಾರ). ಇನ್ನು ಮಮತಾ ಬ್ಯಾನರ್ಜಿಗೆ ಆಪ್ತರಾಗಿರುವ ಮುಸ್ಲಿಂ ಧಾರ್ಮಿಕ ಮುಖಂಡರ ಇದೇ ರೀತಿಯ ಹೇಳಿಕೆಗಳು ಬೆಂಕಿಗೆ ತುಪ್ಪು ಸುರಿಯುತ್ತಿವೆ.
ವಿಭಜನೆಯ ನೋವಿನ ಹೊರತಾಗಿಯೂ ಕೋಮು ಸೌಹಾರ್ದಕ್ಕೆ ಹೆಸರಾಗಿದ್ದ ಬಂಗಾಳದಲ್ಲಿ ಈಗ ಇಂಥ ಪರಿಸ್ಥಿತಿ ಎದುರಾಗಿರುವುದು ದುರಂತ. ಆದಾಗ್ಯೂ ಪಶ್ಚಿಮ ಬಂಗಾಳದಲ್ಲಿ, ಅದರಲ್ಲೂ ಮುಖ್ಯವಾಗಿ ಗಡಿ ಭಾಗದ ಜಿಲ್ಲೆಗಳಾದ ಮುರ್ಶಿದಾಬಾದ್, ಮಾಲ್ಡಾ, ಉತ್ತರ ಮತ್ತು ದಕ್ಷಿಣ ದಿನಾಜು³ರ್, ನಾದಿಯಾದಲ್ಲಿ ಮುಸಲ್ಮಾನರ ಜನಸಂಖ್ಯೆ ಅಭೂತಪೂರ್ವವಾಗಿ ಹೆಚ್ಚಾಗಿದೆ(ಒಟ್ಟು ಜನಸಂಖ್ಯೆಯಲ್ಲಿ 27 ಪ್ರತಿಶತ). ಆದರೂ ಇಲ್ಲಿಯವರೆಗೂ ಆ ಭಾಗಗಳಲ್ಲಿ ಸಾಮಾಜಿಕ ಸಾಮರಸ್ಯ ಹದಗೆಟ್ಟ ಉದಾಹರಣೆಗಳು ಕಡಿಮೆಯೇ. ಆದರೆ ಮಮತಾ ಬ್ಯಾನರ್ಜಿಯವರ ಇತ್ತೀಚಿನ ನಡೆನುಡಿಗಳು ಪರಿಸ್ಥಿತಿಯನ್ನು ಬದಲಿಸಿಬಿಟ್ಟಿವೆ. ಮುಸಲ್ಮಾನ ಮತದಾರರ ಬೆಂಬಲವನ್ನು ಗಟ್ಟಿಯಾಗಿಸಿ ಸಿಪಿಐಎಂ ಅನ್ನು ಬುಡಸಮೇತ ಕಿತ್ತೆಸೆಯಬೇಕೆಂಬ ಭರದಲ್ಲಿ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಇಮಾಮರಿಗೆ ಮಾಸಿಕ ಭತ್ಯೆ ನೀಡುವುದೂ ಸೇರಿದಂತೆ ಹಲವಾರು ಗಿಮಿಕ್‌ಗಳಿಗೆ ಅಂಟಿಕೊಂಡಿದೆ. ಈದ್‌ಗೆ ಅವಕಾಶ ಮಾಡಿಕೊಡುವುದಕ್ಕಾಗಿ ಕಳೆದ ವರ್ಷ ರಾಜ್ಯ ಸರ್ಕಾರ ಸಾಂಪ್ರದಾಯಿಕ ದುರ್ಗಾ ಪ್ರತಿಮೆಗಳ ವಿಸರ್ಜನೆಯ ಅವಧಿಯನ್ನು ಕಡಿತಗೊಳಿಸಿತ್ತು. ಆದಾಗ್ಯೂ ಮಮತಾ ಸರ್ಕಾರದ ಈ ತೀರ್ಮಾನದಿಂದ ಪ್ರತಿಪಕ್ಷಗಳೆಲ್ಲ ಅಸಮಾಧಾನಗೊಂಡವಾದರೂ ಮುಸಲ್ಮಾನ ಸಮುದಾಯದ ಬೆಂಬಲ ಉಳಿಸಿಕೊಳ್ಳುವುದಕ್ಕಾಗಿ ಅವು ಪ್ರತಿಭಟಿಸುವ ಧೈರ್ಯ ತೋರಲಿಲ್ಲ.
ಮಮತಾರ ಈ ರೀತಿಯ ಮುಚ್ಚುಮರೆಯಿಲ್ಲದ ನೀತಿಗಳಿಗೆ ಪ್ರತಿಕ್ರಿಯೆಯೇನೋ ಎಂಬಂತೆ ಕಳೆದ ಎರಡು ವರ್ಷಗಳಲ್ಲಿ ಆ ರಾಜ್ಯದಲ್ಲಿ ಬಿಜೆಪಿ ಬೃಹತ್ ಆಗಿ ಬೆಳೆಯುತ್ತಾ ಸಾಗಿದೆ. 2016ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಮತಪ್ರಮಾಣ 17 ಪ್ರತಿಶತಕ್ಕೇರಿತು. ಅಲ್ಲದೇ ಉಪಚುನಾವಣೆಯಲ್ಲಿ ಅದು ತೃಣಮೂಲ ಕಾಂಗ್ರೆಸ್‌ನ ಸಾಂಪ್ರದಾಯಿಕ ಎದುರಾಳಿಯಾದ ಸಿಪಿಐಎಂ ಅನ್ನು ಹಿಂದಿಕ್ಕಿ ಎರಡನೇ ಸ್ಥಾನ ಪಡೆಯಲು ಸಫಲವಾಯಿತು. ಈ ವರ್ಷ ಆರ್‌ಎಸ್‌ಎಸ್ ಮತ್ತು ಸಂಬಂಧಿತ ಸಂಘಟನೆಗಳು ನಡೆಸಿದ ರಾಮನವಮಿ ಉತ್ಸವ ಜನರನ್ನು ಸೆಳೆದ ರೀತಿ ಇದೆಯಲ್ಲ, ಅದು ಮಮತಾ ಸರ್ಕಾರದ ಕಣ್ಣು ತೆರೆಸಬೇಕಿತ್ತು. ಬಹುತೇಕ ಎಲ್ಲಾ ಜಿಲ್ಲೆಗಳು ಮತ್ತು ಪಟ್ಟಣಗಳಲ್ಲಿ ಜನ ಸಾಗರೋಪಾದಿಯಲ್ಲಿ ರಾಮನವಮಿ ಮೆರವಣಿಗೆಯಲ್ಲಿ ಭಾಗವಹಿಸಿದರು. ಹಾಗೆ ನೋಡಿದರೆ ಪಶ್ಚಿಮ ಬಂಗಾಳದಲ್ಲಿ ರಾಮನವಮಿ ಎಂದಿಗೂ ಪ್ರಮುಖ ಆಚರಣೆಯಾಗಿರಲಿಲ್ಲ. ಅಲ್ಲಿ ದುರ್ಗಾ, ಕಾಳಿ ಮತ್ತು ಸರಸ್ವತಿ ಪೂಜೆಗಳೇ ಸದ್ದು ಮಾಡುತ್ತಿ ದ್ದವು. ಆದರೆ ಮಮತಾ ಸರ್ಕಾರದ ಓಲೈಕೆ ರಾಜಕಾರಣಕ್ಕೆ ಪ್ರತಿಭಟನಾರ್ಥವಾಗಿಯೋ ಏನೋ, ಅನೇಕ ಸಾರ್ವಜನಿಕರು ರಾಮನವಮಿ ಮೆರವಣಿಗೆಯಲ್ಲಿ ಪಾಲ್ಗೊಂಡರು.
ಪಶ್ಚಿಮ ಬಂಗಾಳದ ರಾಜಕೀಯವೀಗ ಪ್ರಮುಖ ಘಟ್ಟಕ್ಕೆ ಬಂದು ನಿಂತಿದೆ. ಈಗ ಆ ರಾಜ್ಯದಲ್ಲಿ ಜನರ ಹೃದಯ ಮತ್ತು ಮತಗಳನ್ನು ಗೆಲ್ಲುವ ಹೋರಾಟದಲ್ಲಿ ತೃಣಮೂಲ ಕಾಂಗ್ರೆಸ್ ವರ್ಸಸ್ ಬಿಜೆಪಿಯ ನಡುವೆಯೇ ಪ್ರಮುಖ ಪೈಪೋಟಿ ಎದುರಾಗುವ ಸಾಧ್ಯತೆಗಳು ಹೆಚ್ಚಾಗುತ್ತಿವೆ. ಪಶ್ಚಿಮ ಬಂಗಾಳದ ರಾಜ್ಯಪಾಲ ಕೇಸರಿ ನಾಥ್ ತ್ರಿಪಾಠಿ ಮತ್ತು ಮಮತಾ ನಡುವಿನ ಇತ್ತೀಚಿನ ವಿವಾದವನ್ನು ನಾವು ಈ ಹಿನ್ನೆಲೆಯಲ್ಲಿ ವಿಶ್ಲೇಷಿಸಬೇಕಾಗುತ್ತದೆ. ಬಿಜೆಪಿ ನಿಯೋಗದ ಮಾತು ಕೇಳಿ ತ್ರಿಪಾಠಿ ತಮ್ಮನ್ನು ಕರೆಸಿಕೊಂಡು ಅವಮಾನಿಸಿದರು ಎಂದು ಮಮತಾ ಇತ್ತೀಚೆಗೆ ಆರೋಪಿಸಿದ್ದರು. ಆದರೆ ಮಮತಾ ಮಾತು ಸತ್ಯ ಎಂದು ಒಪ್ಪಿಕೊಳ್ಳುವುದು ಕಷ್ಟಸಾಧ್ಯ. ಏಕೆಂದರೆ ತ್ರಿಪಾಠಿಯವರು ಮೊದಲಿನಿಂದಲೂ ತಮ್ಮ ಸೌಮ್ಯ ಸ್ವಭಾವದಿಂದ ಗುರುತಿಸಿಕೊಂಡವರು. ಅಲ್ಲದೆ ಅವರೊಬ್ಬ ಅನುಭವಿ ರಾಜಕಾರಣಿ. ಅವರು ಸಹನೆ ಕಳೆದುಕೊಳ್ಳುವವರಲ್ಲ, ಅದರಲ್ಲೂ ಮಹಿಳೆಯೊಬ್ಬರ ಜೊತೆ ಮಾತನಾಡುವಾಗ…
ಆದರೆ ಕೋಲ್ಕತ್ತಾದ ಹೊರವಲಯದಲ್ಲಿರುವ ಬಸೀರ್‌ಹಾಟ್‌ನಲ್ಲಿ ಗಂಭೀರ ಗಲಭೆಗಳಾಗುತ್ತಿದ್ದರೂ ಮಮತಾ ಬ್ಯಾನರ್ಜಿ ಅದನ್ನೆಲ್ಲ ನಿರಾಕರಿಸುತ್ತಿರುವುದನ್ನು ಕಂಡು ತ್ರಿಪಾಠಿ ಅವರಿಗೆ ಕಿರಿಕಿರಿಯಾಗಿರುವ ಸಾಧ್ಯತೆ ಇದೆ. ಈ ಕಾರಣಕ್ಕಾಗಿಯೇ ಅವರು ಬಸೀರ್‌ಹಾಟ್‌ಗೆ ಕೇಂದ್ರ ಪಡೆಗಳನ್ನು ಯಾಕೆ ಕರೆಸುತ್ತಿಲ್ಲ ಎಂದು ಮಮತಾರನ್ನು ಪ್ರಶ್ನಿಸಿದ್ದಾರೆ. ಬಸೀರ್‌ಹಾಟ್‌ನ ವಿಚಾರಕ್ಕೆ ಬರುವುದಾದರೆ, ಈ ಪ್ರದೇಶ ಮೊದಲಿನಿಂದಲೂ ಗೋ ಕಳ್ಳಸಾಗಣೆಗೆ (ಬಾಂಗ್ಲಾದೇಶಕ್ಕೆ) ಹೆಸರಾಗಿದೆ. ಇನ್ನು ಬಸೀರ್‌ಹಾಟ್‌ನ ಗಲಭೆಕೋರರಿಗೆ ಸ್ಥಳೀಯ ಆಡಳಿತ ರಕ್ಷಣೆ ನೀಡುತ್ತಿದೆ ಎನ್ನುವ ಸಂಗತಿಯೂ ಅಲ್ಲಿ ಪರಿಸ್ಥಿತಿ ಕೈ ಜಾರುವಂತೆ ಮಾಡಿತು.
ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ, ಇಂಥ ಘಟನೆಗಳೆಲ್ಲ ಅಪಾಯಕಾರಿ ಕೋಮು ಘರ್ಷಣೆಯ ಸಾಧ್ಯತೆಯನ್ನು ನಿಜವಾ ಗಿಸುವತ್ತ ಸಾಗಿವೆ. ಸತ್ಯವೇನೆಂದರೆ ಮಮತಾ ಬ್ಯಾನರ್ಜಿಯವರ ಚಾಲೂ ರಾಜಕಾರಣ ಮೊದಲಿನಂತೆ ರಾಜಕೀಯ ಲಾಭವನ್ನಂತೂ ತಂದುಕೊಡುತ್ತಿಲ್ಲ. ಒಂದು ವೇಳೆ ಮಮತಾ ಈ ಇದೇ ಹಾದಿಯಲ್ಲಿ ಮುಂದುವರಿಯುತ್ತಾರಾದರೆ ಇದರಿಂದ ಲಾಭವಾಗುವುದು ಬಿಜೆಪಿಗೇ. ಇದೆಲ್ಲದರಿಂದಾಗಿ ಮುಂದಿನ ಬಾರಿ ಬಿಜೆಪಿಯೇ ಸರ್ಕಾರ ರಚಿಸುವಷ್ಟು ಶಕ್ತವಾಗಿಬಿಟ್ಟರೂ ಆಶ್ಚರ್ಯವಿಲ್ಲ.
ತಮ್ಮ ರಾಜ್ಯದಲ್ಲಿ ಕೋಮುವಾದಿ ಶಕ್ತಿಗಳು ಬೆಳೆಯುತ್ತಿರುವ ಸಂಗತಿಯನ್ನು ಪಶ್ಚಿಮ ಬಂಗಾಳ ಸರ್ಕಾರ ಬಹಳ ಸಮಯದಿಂದ ಕಡೆಗಣಿಸುತ್ತಾ ಬಂದಿದೆ. ಬಾಂಗ್ಲಾದೇಶದ ಹೂಜಿಯಂಥ ಉಗ್ರಸಂಘಟನೆಗಳು ತಮ್ಮ ಕಂಬಂಧಬಾಹುಗಳನ್ನು ಪಶ್ಚಿಮ ಬಂಗಾಳದಲ್ಲಿ ಚಾಚುತ್ತಿವೆ. ಸತ್ಯವೇನೆಂದರೆ ಶೇಖ್ ಹಸೀನಾ ಸರ್ಕಾರ ಬಾಂಗ್ಲಾದೇಶದ ತೀವ್ರವಾದಿ ಸಂಘಟನೆಗಳ ಹೆಡೆಮುರಿ ಕಟ್ಟಲು ಆರಂಭಿಸಿದ ನಂತರ ಅನೇಕ ಸಂಘಟನೆಗಳು ಪಶ್ಚಿಮ ಬಂಗಾಳದಲ್ಲಿ ನೆಲೆ ಕಂಡುಕೊಂಡಿವೆ. ಮಮತಾರ ರಾಜ್ಯದಲ್ಲಿ ನಿರುದ್ಯೋಗ ಪ್ರಮಾಣ ವಿಪರೀತವಾಗುತ್ತಿದೆ. ಇದರಿಂದಾಗಿ ಅನೇಕ ನಿರುದ್ಯೋಗಿ ಮತ್ತು ಅಮಾಯಕ ಯುವಕರಿಗೆ ಜಿಹಾದಿ ಮಿಲಿಟೆನ್ಸಿಯೇ ಆಕರ್ಷಕವಾಗಿ ಕಾಣಿಸುತ್ತಿದೆ. ಒಂದು ವೇಳೆ ಮಮತಾ ಬ್ಯಾನರ್ಜಿ ಈಗಲಾದರೂ ಎಚ್ಚೆತ್ತುಕೊಂಡು ಅಭಿವೃದ್ಧಿಯತ್ತ ಗಮನ ಹರಿಸದೇ ಹೋದರೆ, ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆಯು ಹಿಡಿತಕ್ಕೆ ಸಿಗದಷ್ಟು ಹದಗೆಡಲಿದೆ. ಅದಾಗಲೇ, ಡಾರ್ಜಲಿಂಗ್ ಮತ್ತು ಅದಕ್ಕೆ ಹೊಂದಿಕೊಂಡ ಪರ್ವತ ಪ್ರದೇಶಗಳು ಪ್ರತ್ಯೇಕ ಗೋರ್ಖಾಲ್ಯಾಂಡ್ ಪ್ರತಿಭಟನೆ ಗಳಿಂದಾಗಿ ಹೊತ್ತಿ ಉರಿಯತೊಡಗಿವೆ. ಸಮಸ್ಯೆಗಳ ಬೆಟ್ಟವೇ ಸೃಷ್ಟಿಯಾಗುತ್ತಿರುವ ಈ ಹೊತ್ತಿನಲ್ಲಿ, ಮಮತಾ ಬ್ಯಾನರ್ಜಿ ತಮ್ಮ ಪೂರ್ಣ ಗಮನವನ್ನು ಆಡಳಿತದತ್ತ ಹರಿಸಬೇಕೇ ಹೊರತು, ವೋಟ್‌ಬ್ಯಾಂಕ್ ಗಿಮಿಕ್‌ಗಳತ್ತ ಅಲ್ಲ.
(ಲೇಖಕರು ಹಿರಿಯ ಪತ್ರಕರ್ತರು)
ಡಾ. ಚಂದನ್ ಮಿತ್ರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.