ಹಕ್ಕಿನೊಳಗೊಂದು ಕರ್ತವ್ಯವೂ ಅಡಗಿದೆ
Team Udayavani, Jan 11, 2020, 6:05 AM IST
ಪ್ರಜಾಪ್ರಭುತ್ವ ವ್ಯವಸ್ಥೆ ಅಂದಾಗ ನಮಗೆ ಮೊದಲು ನೆನಪಾಗುವುದು ಹಕ್ಕುಗಳೇ ಹೊರತು; ಕರ್ತವ್ಯಗಳಲ್ಲ. ಇದು ಮನುಷ್ಯ ಸಹಜ ಗುಣವಾದ ಸ್ವಾರ್ಥದ ಲಕ್ಷಣವೂ ಹೌದು. ಮನುಷ್ಯ ಸಮಾಜ ಜೀವಿಯಾದ ಕಾರಣ ಪೂರ್ತಿಯಾಗಿ ಸ್ವಾರ್ಥದ ನೆಲಗಟ್ಟಿನಲ್ಲಿಯೇ ಬದುಕುತ್ತೇನೆ ಅನ್ನುವುದು ಅವನ ಬೆಳವಣಿಗೆಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸುವುದಿಲ್ಲ ಅನ್ನುವ ಸತ್ಯದ ಅನುಭವವೂ ನಮಗಿರಬೇಕು.
ಹಕ್ಕನ್ನು ಅನುಭವಿಸುವವರು ತಮ್ಮ ಕರ್ತವ್ಯವನ್ನು ಮಾಡಿಯೇ ಮಾಡುತ್ತಾರೆ ಅನ್ನುವುದು ನಾವು ತಿಳಿದುಕೊಂಡ ಉದಾತ್ತ ಭಾವನೆಯೂ ಹೌದು. ಆದರೆ ಇದು ಪೂರ್ತಿ ಸತ್ಯವಾಗದು ಎಂಬ ಅರಿವು ನಮ್ಮಗಾಗಿದ್ದು 1976ರಲ್ಲಿ. ಭಾರತ ಸಂವಿಧಾನ ಜಾರಿಗೊಂಡದ್ದು 1950 ಜನವರಿ 26ರಂದು. ಈ ಮೂಲ ಸಂವಿಧಾನದಲ್ಲಿ ಭಾಗ ಐಐಐರಲ್ಲಿ ವಿಧಿ 12 ರಿಂದ 35ರವರೆಗೆ ಭಾರತದ ಪ್ರಜೆಗಳಿಗೆ ನೀಡಿದ ಪ್ರಧಾನ ಮೂಲಭೂತ ಹಕ್ಕುಗಳ ಬಗ್ಗೆ ಸವಿಸ್ತಾರವಾದ ನಿರೂಪಣೆ; ಭದ್ರತೆ ಬಗ್ಗೆ ಸ್ಪಷ್ಟವಾದ ಲಿಖೀತ ಉಲ್ಲೇಖವಿದೆ. ಅಂದು ಸಂವಿಧಾನದ ನಿರ್ಮಾತೃಗಳ ನಂಬುಗೆ ಏನಿತ್ತು ಅಂದರೆ ಹಕ್ಕುಗಳನ್ನು ಚೆನ್ನಾಗಿ ಅನುಭವಿಸುವ ಭಾರತೀಯರು ಖಂಡಿತವಾಗಿ ತಮ್ಮ ಕರ್ತವ್ಯಗಳನ್ನು ಮಾಡಿಯೇ ಮಾಡುತ್ತಾರೆ ಎನ್ನುವು ದು. ಅದರೆ ಕಾಲ ಕಳೆದಂತೆ ನಮಗೆ ಇದರ ವಾಸ್ತವಿಕತೆಯ ಅರಿವಾಗಲು ಪ್ರಾರಂಭವಾಯಿತು. ಅದೇನೆಂದರೆ ನಮ್ಮ ಜನರು ಹಕ್ಕುಗಳನ್ನು ಚೆನ್ನಾಗಿ ಅನುಭವಿಸುತ್ತಾರೆ; ಮಾತ್ರವಲ್ಲ ಅದಕ್ಕೆ ಸ್ವಲ್ಪ ಚ್ಯುತಿ ಬಂದಾಗಲು ಕೂಡಾ ರಸ್ತೆಗೂ ಇಳಿಯುತ್ತಾರೆ; ಪ್ರತಿಭಟಿಸುತ್ತಾರೆ. ಕೊನೆಗೆ ನ್ಯಾಯಾಲಯಕ್ಕೂ ಹೋಗುವ ಮಟ್ಟಿಗೆ ಹಕ್ಕುಗಳ ಸಂರಕ್ಷಣೆಯ ಕರ್ತವ್ಯಗಳನ್ನು ಚೆನ್ನಾಗಿ ಕರಗತ ಮಾಡಿಕೊಂಡಿದ್ದಾರೆ. ಆದರೆ ಸಾರ್ವಜನಿಕ ಜೀವನದಲ್ಲಿ ತಾವು ಮಾಡಬೇಕಾದ ಆದ್ಯ ಕರ್ತವ್ಯಗಳಿಗೆ ಎಳ್ಳಷ್ಟು ಗೌರವ ಕೊಡುವುದಿಲ್ಲ ಅನ್ನುವ ನೈಜತೆ ನಮ್ಮನಾಳುವ ಸರಕಾರಕ್ಕೆ ಅರ್ಥವಾಗಲು ಪ್ರಾರಂಭವಾಯಿತು.
ಇಂದಿರಾಗಾಂಧಿಯವರು ಪ್ರಧಾನಮಂತ್ರಿಯಾಗಿದ್ದ ಕಾಲ; ಅವರಿಗೂ ನಿಚ್ಚಳವಾದ ಬಹುಮತ ಸಂಸತ್ತಿನಲ್ಲಿ ಇದ್ದ ಸಂದರ್ಭದಲ್ಲಿ 1976ರಲ್ಲಿ ಭಾರತ ಸಂವಿಧಾನಕ್ಕೆ 42ನೇ ತಿದ್ದುಪಡಿ ತರುವ ಮೂಲಕ ಮೂಲಭೂತ ಕರ್ತವ್ಯಗಳನ್ನು ಸಂವಿಧಾನದ ಭಾಗ ಐV(ಎ) 51(ಎ)ರಲ್ಲಿ ಸೇರ್ಪಡೆಗೊಳಿಸಿ; ಈ ಕರ್ತವ್ಯಗಳನ್ನು ಕೂಡಾ ಪ್ರತಿಯೊಬ್ಬ ಪ್ರಜೆಯೂ ಪಾಲಿಸಬೇಕೆಂದು ಘೋಷಿಸಿ ಬಿಟ್ಟರು; ಮಾತ್ರವಲ್ಲ ಯಾರು ಈ ಕರ್ತವ್ಯಗಳನ್ನು ಉಲ್ಲಂ ಸುತ್ತಾರೋ ಅವರು ಕಾನೂನುಬದ್ಧವಾಗಿ ಶಿಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಕೆಯ ಧ್ವನಿ ಭಾರತೀಯ ಸಂವಿಧಾನದಲ್ಲಿ ಮೂಡಿ ಬಂತು.
ಒಂದು ವೇಳೆ ಇಂತಹ ಒಂದು ಉತ್ತಮವಾದ ಸುಧಾರಣೆಯನ್ನು ಇಂದಿನ ಸರಕಾರ ಅನುಷ್ಠಾನಗೊಳಿಸಿದ್ದೆ ಆದರೆ ಅದೆಷ್ಟೋ ಮಂದಿ ಈ ಕಾನೂನು ಪ್ರಜಾಪ್ರಭುತ್ವ ವಿರೋಧಿ; ಮೂಲಭೂತ ಹಕ್ಕುಗಳಿಗೆ ಚ್ಯುತಿ ತರುವ ಕಾಯಿದೆ; ವಾಕ್ ಸ್ವಾತಂತ್ರ್ಯ; ಮುಷ್ಕರದ ಹಕ್ಕು; ಸಂಘಟನೆಯ ಶಕ್ತಿಗಳಿಗೆ ಧಕ್ಕೆ ತರುವ ಕಾನೂನು ಮಾತ್ರವಲ್ಲ; ಸರಕಾರ ಬಲವಂತವಾಗಿ ಜನರಿಂದ ಕರ್ತವ್ಯಗಳನ್ನು ಮಾಡಿಸಿಕೊಳ್ಳಲು ಹೊರಟಿದೆ ಎಂಬ ಕೂಗು ಹೋರಾಟ ದೇಶವ್ಯಾಪಿಯಾಗಿ ನಡೆಸುತ್ತಿದ್ದಾರೋ ಏನೋ?
ಆದರೆ ಈ ಮಹಾ ಸುಧಾರಣೆಗೆ ಅಂದು ಯಾರು ಕೂಡಾ ಚಕಾರವೆತ್ತದೆ ಇದೊಂದು ಅಗತ್ಯವಾಗಿ ಆಗಬೇಕಾದ ಸಂವಿಧಾನದ ತಿದ್ದುಪಡಿ ಅನ್ನುವ ಮಟ್ಟಿಗೆ ಜನ ಬೆಂಬಲ ನೀಡಿದರು. ಬಹುಶಃ ಅಂದು ಪ್ರಗತಿಪರರ ಚಿಂತನೆ ಅಷ್ಟೊಂದು ಪ್ರಗತಿ ಪರವಾಗಿರಲಿಲ್ಲ. ಇಂದು ಈ ಸಂವಿಧಾನ ನೀಡಿದ ಹಕ್ಕುಗಳು ಮತ್ತು ಕರ್ತವ್ಯಗಳ ನಡುವೆ ಸಾಕಷ್ಟು ಸಂಘರ್ಷಗಳು; ಪರ ವಿರೋಧ ಧ್ವನಿಗಳು; ನಮಗೆ ಅರ್ಥವಾಗದ ತರದಲ್ಲಿ ಮೂಡಿ ಬರುತ್ತಿವೆ.
ಯಾವುದೇ ಪ್ರಜಾಪ್ರಭುತ್ವದ ಮೌಲ್ಯವನ್ನು ಅಳೆಯುವುದು ಅಲ್ಲಿನ ಅಭಿವ್ಯಕ್ತಿ ಹಕ್ಕಿನ ಮೂಲಕ. ಸರಕಾರ ಮಾಡಿದ ಯಾವುದೇ ಕಾನೂನು; ನಿಯಮ ನಮಗೆ ಸರಿಯಾಗಿಲ್ಲ; ಅಂದಾಗ ಅದನ್ನು ಪ್ರಶ್ನಿಸುವ, ಪ್ರತಿಭಟಿಸುವ ಹಕ್ಕು ನಮಗಿದೆ. ಇದನ್ನು ನಮ್ಮ ಸಂವಿಧಾನದಲ್ಲಿಯೂ ಖಾತ್ರಿ ಪಡಿಸಲಾಗಿದೆ. ಆದರೆ ಈ ಪ್ರತಿಭಟನೆಗೂ ಒಂದು ಸಭ್ಯತೆ; ನ್ಯಾಯಯುತವಾದ ದಾರಿಯೂ ಇದೆ. ನಮ್ಮ ಪ್ರತಿಭಟನೆ ಹೋರಾಟಗಳು ಯಾವ ತರದಲ್ಲಿ ನಡೆದಿದೆ; ನಡೆಯುತ್ತವೆ, ಅಂದರೆ ಸಾರ್ವಜನಿಕ ಆಸ್ತಿ; ಸ್ವತ್ತು; ಜೀವಹಾನಿಯಾಗುವ ತರದಲ್ಲಿ ಪ್ರತಿಭಟನೆಗಳನ್ನು ಅತ್ಯಂತ ಅನಾಗರಿಕ ರೀತಿಯಲ್ಲಿ ನಡೆಯುತ್ತಿದೆ. ಅಂದರೆ ಈ ದೇಶದಲ್ಲಿ ಸಂವಿಧಾನವಿಲ್ಲವೆ, ನ್ಯಾಯಾಂಗವಿಲ್ಲವೆ ಎಂಬ ಪ್ರಶ್ನೆ ಮೂಡುವುದು ಸಹಜ ತಾನೆ?
ಭಾರತ ಸಂವಿಧಾನದ ಮೂಲಭೂತ ಕರ್ತವ್ಯದ ಅಡಿಯಲ್ಲಿ ಸ್ಪಷ್ಟವಾಗಿ ಉಲ್ಲೇಖೀಸಿರುವುದೆಂದರೆ ಯಾವುದೇ ವ್ಯಕ್ತಿ ಸಾರ್ವಜನಿಕ ಆಸ್ತಿ ನಾಶ ಮಾಡಿದರೆ ಆತ ಕಾನೂನುಬದ್ಧವಾಗಿ ಶಿಕ್ಷೆಗೆ ಒಳಗಾಗುತ್ತಾನೆ; ಮಾತ್ರವಲ್ಲ ಇದಕ್ಕೆ ಪ್ರಚೋದನೆ ನೀಡಿದವರು ಕೂಡಾ ಶಿಕ್ಷೆಗೆ ಒಳಗಾಗುತ್ತಾರೆ. ಈ ಕಾನೂನು ಎಲ್ಲ ಪಕ್ಷದವರಿಗೂ ಎಲ್ಲಾ ಮತೀಯರಿಗೂ; ಜಾತಿಯವರಿಗೂ, ಎಲ್ಲಾ ಪ್ರದೇಶದವರಿಗೂ ಸಮಾನವಾಗಿ ಅನ್ವಯಿಸುವ ಮೂಲಭೂತ ಕರ್ತವ್ಯದ ಕಾನೂನು. ಇದನ್ನು ಬಿಟ್ಟು ಈ ಅಸಭ್ಯ; ಅನಾಗರಿಕ ರಾಷ್ಟ್ರ ವಿರೋಧಿ ದೊಂಬಿಯನ್ನು ಆಡಳಿತರೂಢ ಪಕ್ಷವೋ; ವಿರೋಧ ಪಕ್ಷಗಳ ಆಶ್ರಯದಲ್ಲಿ ನಡೆದಿದೆ ಅನ್ನುವ ಕಾರಣಕ್ಕೆ ಕ್ಷಮೆ ನೀಡುವುದು. ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಆರಕ್ಷಕರ ಹೊಡೆತಕ್ಕೆ ಗಾಯಗೊಂಡಿದ್ದಾರೆ ಅಥವಾ ಸಾವನಪ್ಪಿದ್ದಾರೆ ಅಂದ ಮಾತ್ರಕ್ಕೆ ಅವರಿಗೆ ಲಕ್ಷ ಲಕ್ಷ ಪರಿಹಾರ ನೀಡುವುದು ಕೂಡಾ ಈ ಮೂಲಭೂತ ಕರ್ತವ್ಯದ ಕಾನೂನಿಗೆ ಮಾಡಿದ ಅಪಚಾರವೇ ಸರಿ. ಇದನ್ನು ಕೂಡಾ ನ್ಯಾಯಾಂಗದಲ್ಲಿ ಪ್ರಶ್ನಿಸಬೇಕಾದ ಸಂದರ್ಭ ಬಂದಿದೆ.
1997ರಲ್ಲಿ ಕೇರಳ ಹೈಕೋರ್ಟ್ ಬಂದ್ ನಡೆಸುವುದನ್ನು ಅಸಂವಿಧಾನಿಕವೆಂದು ತೀರ್ಪು ನೀಡಿದ ಸಂದರ್ಭವೂ ನಮ್ಮ ಮುಂದಿದೆ. ಈ ತೀರ್ಪನ್ನು ದೇಶದ ಸರ್ವೋಚ್ಚ ನ್ಯಾಯಾಲಯ ಕೂಡಾ ಎತ್ತಿಹಿಡಿದು ಬಂದ್ ಸಂದರ್ಭದಲ್ಲಿ ಆದ ತೊಂದರೆಗಾಗಿ ರಾಜಕೀಯ ಪಕ್ಷಗಳಿಗೆ ಛಡಿ ಏಟು ಬೀಸಿದೆ. 2004ರಲ್ಲಿ ಮುಂಬೈ ಬಾಂಬ್ ನ್ಪೋಟವನ್ನು ವಿರೋಧಿಸಿ ಬಂದ್‌ಗೆ ಕರೆ ನೀಡಿದ್ದಕ್ಕೆ ಭಾರತೀಯ ಜನತಾ ಪಾರ್ಟಿ ಮತ್ತು ಶಿವಸೇನೆಗೆ ಸರ್ವೋಚ್ಚ ನ್ಯಾಯಾಲಯ 20ಲಕ್ಷ ರೂಪಾಯಿ ದಂಡ ವಿಧಿಸಿತ್ತು. 2009ರಲ್ಲಿ ಸರ್ವೋಚ್ಚ ನ್ಯಾಯಾಲಯದ ದ್ವಿಸದಸ್ಯ ಪೀಠ ಪ್ರಜಾಪ್ರಭುತ್ವ ದೇಶದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಹಕ್ಕಿದೆ, ಆದರೆ ಇಂತಹ ಬಂದ್ ಪ್ರತಿಭಟನೆಗಳ ಸ್ವರೂಪ; ವಿಧಾನ ಹೇಗಿರಬೇಕೆಂಬ ನಿರ್ದೇಶನವೂ ನೀಡಿತ್ತು. 2013ರಲ್ಲಿ ಕಲ್ಕತ್ತ ಹೈಕೋರ್ಟ್ ಬಂದ್‌ಗೆ ಕರೆನೀಡಿದ ಕಾರ್ಮಿಕ ಸಂಘಗಳಿಗೆ ಎಚ್ಚರಿಕೆ ನೀಡಿ ಒಂದು ವೇಳೆ ಸಾರ್ವಜನಿಕ ಆಸ್ತಿಗೆ ಹಾನಿಯಾದರೆ ಬಂದ್‌ಗರ ಕಾರಣರಾದವರು ನಷ್ಟ ತುಂಬಿಕೊಡಬೇಕು ಎಂದು ತೀರ್ಪು ನೀಡಿದೆ.
ಇಷ್ಟೆಲ್ಲ ತೀರ್ಪುಗಳು, ಆದೇಶಗಳು ವಿಧಿವಿಧಾನಗಳನ್ನು ನ್ಯಾಯಾಲಯ ಆಗಿಂದಾಗ್ಗೆ ನೀಡುತ್ತಾ ಬಂದಿದ್ದರೂ ಕೂಡಾ ಸಂವಿಧಾನವೇ ಶ್ರೇಷ್ಠ ಅನ್ನುವ ನಮಗೆ ಇದರ ಮಹತ್ವ ಅರ್ಥೈಸಲು ಸಾಧ್ಯವಾಗಿಲ್ಲ. ನಮ್ಮ ದೈನಂದಿನ ಬದುಕಿನಲ್ಲಿ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತಿಲ್ಲ ಅನ್ನುವುದೇ ಆಶ್ಚರ್ಯದ ಸಂಗತಿ. ಈಗ ಕಾಲ ಕೂಡಿ ಬಂದಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಈ ಎಲ್ಲಾ ನ್ಯಾಯಾಂಗ ತೀರ್ಪುಗಳಿಗೆ ಅರ್ಥ ಕೊಡುವ, ಜೀವ ನೀಡುವ ನಿಟ್ಟಿನಲ್ಲಿ ಕಾನೂನು ರೂಪಿಸಬೇಕಾಗ ಅಗತ್ಯ ಇದೆ. ಹಕ್ಕುಗಳು ಮತ್ತು ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖಗಳು ಎಂಬ ಉಕ್ತಿಗೂ ಬೆಲೆ ಬಂದೀತು. ಮೂಲಭೂತ ಕರ್ತವ್ಯದ ವಿಧಿಗಳಿಗೂ ಗೌರವ ಪ್ರಾಪ್ತವಾದೀತು.
– ಪ್ರೊ| ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.