ಸಕಾಲವೆಂಬ ಅಕಾಲ ಸೇವೆ


Team Udayavani, Dec 12, 2017, 9:10 AM IST

12-2.jpg

ದೇಶದ ಆಡಳಿತ ವ್ಯವಸ್ಥೆಯಲ್ಲಿ ಸರಕಾರಿ ಸೇವೆ ಪಡೆಯುವ ಶ್ರೀಸಾಮಾನ್ಯನೊಬ್ಬನಿಗೆ ಅರ್ಜಿ ನೀಡಿದ ನಿರ್ದಿಷ್ಟ ದಿನದೊಳಗೆ ಆತನ ಕಡತ ವಿಲೇವಾರಿಯಾಗಿ ಸೌಲಭ್ಯ ನೀಡಬೇಕೆಂಬ ಯೋಚನೆಯೇ ಒಂದು ಅದ್ಭುತ ಕಲ್ಪನೆ. ಪ್ರಸ್ತುತ ನಮ್ಮ ರಾಜ್ಯದಲ್ಲಿ ಕಾನೂನು ಬದ್ಧವಾಗಿ ಜಾರಿಯಲ್ಲಿರುವ “”ಸಕಾಲ” ಯೋಜನೆ ಒಂದರ್ಥದಲ್ಲಿ ಸರಕಾರಿ ಸೇವೆ ಖಾತರಿಗೊಳಿಸುವ ಕಾಯಿದೆ. ಈ ವ್ಯವಸ್ಥೆಯನ್ನು ಕರ್ನಾಟಕ ಸಕಾಲ ಸೇವೆ ತಿದ್ದುಪಡಿ 2011ರಂತೆ ಕಾಯಿದೆ ರೂಪದಲ್ಲಿ ತಂದು ರಾಜ್ಯದ ಎರಡು ಸದನದಲ್ಲಿ ಮಂಡಿಸಿ ಕಾನೂನಾಗಿ ಘೋಷಣೆ ಮಾಡಿದವರು ಅಂದು ಮುಖ್ಯಮಂತ್ರಿ ಆಗಿದ್ದ ಸದಾನಂದಗೌಡರು.

ಬಡವನೊಬ್ಬ ತನ್ನ ಮಕ್ಕಳನ್ನು ಶಾಲೆಗೆ ಸೇರಿಸುವ ಸಲುವಾಗಿ ಕನಿಷ್ಠ ಜಾತಿ, ಆದಾಯ ಸರ್ಟಿಫಿಕೆಟಿಗೂ ತಾಲೂಕು ಕಚೇರಿಗೆ ತಿಂಗಳುಗಟ್ಟಲೆ ಅಲೆದಾಡುವುದು ಮಾತ್ರವಲ್ಲ, ಎರಡು ಮೂರು ಬಾರಿ ತಿರುಗಾಟದ ನಂತರ ಕೆಲಸದ ಒತ್ತಡ ಮತ್ತು ಗಡಿಬಿಡಿಯಲ್ಲಿರುವಂತೆ ವರ್ತಿಸುವ ಗುಮಾಸ್ತ, ನಿಮ್ಮ ಅರ್ಜಿ ಕಳೆದುಹೋಗಿದೆ ಹೊಸ ಅರ್ಜಿ ಕೊಡಿ ಎನ್ನುತ್ತಾರೆ. ಅಷ್ಟರೊಳಗೆ ಬಡವ ಪಡೆಯುವ ಸವಲತ್ತಿಗೆ ಅರ್ಜಿ ಕೊಡುವ ಅವಧಿ ಮುಗಿದು ಹೋಗಿರುತ್ತದೆ. ಕೃಷಿ ಕುಟುಂಬವೆಂದು ಪರಿಗಣಿಸಲು ಬಡವ ಕೊಟ್ಟ ಅರ್ಜಿ ಕೊಟ್ಟಷ್ಟೇ ವೇಗದಲ್ಲಿ ಮಾಯವಾಗುತ್ತಿದ್ದುದು ನಿತ್ಯ ಸತ್ಯ. ದೂರದ ಹಳ್ಳಿಯಿಂದ ತಿರುಗಾಡಿ ಬರುವ ಬಡವರ ಮಕ್ಕಳ ಭವಿಷ್ಯ, ಈ ತಾಲೂಕು ಕಛೇರಿಯ ಸಾಮಾನ್ಯ ಗುಮಾಸ್ತ ಬರೆಯುತ್ತಾನೆ. ನೋಡಿ, ಇಂತಹ ಎಲ್ಲಾ ಸಮಸ್ಯೆಗಳ ಗೊಂದಲ ಎಂದರೆ ಅರ್ಜಿಯೊಂದಿಗೆ ಹಣಕೊಟ್ಟವರಿಗೆ ಒಂದೇ ದಿನದಲ್ಲಿ ಸಿಗುವ ಸವಲತ್ತು, ಬರೀ ಅರ್ಜಿ ಕೊಟ್ಟವರಿಗೆ ತಿಂಗಳುಗಟ್ಟಲೆ ಅಲೆದರೂ ಸಿಗದೆ ಕಡತ ಜಪ್ಪೆನ್ನದೆ ಕುಳಿತ ಪರಿಸ್ಥಿತಿ ಅನುಭವಿಸಿದವರಿಗಷ್ಟೆ ಅರ್ಥವಾಗುತ್ತದೆ. ಸರ್ಕಾರ ಬಡವರ ಕಲ್ಯಾಣ ಯೋಜನೆಯಡಿ 65 ವರ್ಷ ಮೀರಿದ ವಯೋವೃದ್ಧರಿಗೆ ಸಂಧ್ಯಾ ಸುರûಾ ಎಂಬ ಹೆಸರಿನಲ್ಲಿ ಪಿಂಚಣಿ ಕೊಡುತ್ತದೆ. ಸಂಕಟದ ವಿಷಯವೆಂದರೆ 65 ವರ್ಷ ಮೀರಿದ ವೃದ್ಧರು ಮುಂದೆಷ್ಟು ವರ್ಷ ಬದುಕಬಹುದು? ಯಾರನ್ನೋ ಹಿಡಿದು ಅರ್ಜಿ ಹಾಕಿದರೆ, ಕೆಲವೊಮ್ಮೆ ಅರ್ಜಿ ಹಾಕಿದವನೇ ಸತ್ತ ಮೇಲೆ ಮಂಜೂರಾದ ಉದಾಹರಣೆಗಳು ನಮ್ಮ ಕಣ್ಮುಂದೆ ನೂರಾರಿವೆ.

ಇಂತಹ ಅನೇಕ ಸಮಸ್ಯೆಗಳನ್ನು ಪರಿಹರಿಸಲು ನಾಗರಿಕರಿಗೆ ಕಾಲಮಿತಿಯಲ್ಲಿ ಸರಕಾರಿ ಸೇವೆ ಖಾತರಿ ಪಡಿಸಲು ನಮ್ಮ ರಾಜ್ಯದಲ್ಲಿ 2011ರಲ್ಲಿ ಸಕಾಲ ಕಾನೂನು ಅಂದಿನ ಸರಕಾರ ತಂದಿದ್ದು, 61 ಇಲಾಖೆಗಳ 765 ವಿವಿಧ ಸೇವೆಗಳನ್ನು ಇದರ ವ್ಯಾಪ್ತಿಗೆ ತರಲಾಯಿತು. ಗೌಡರ ಸರಕಾರದ ಅವಧಿ ಮುಗಿದು ಹಿಂದಿನ ಸರಕಾರದ ಆಡಳಿತದ ಅನಂತರ ಬಂದ ಸಿದ್ದರಾಮಯ್ಯ ಸರಕಾರದ ಕಾನೂನು ಮಂತ್ರಿ ಟಿ.ಬಿ ಜಯಚಂದ್ರರವರು ಸಕಾಲ ಸೇವೆಗಳ ಕಾಯಿದೆಗೆ ಮತ್ತಷ್ಟು ಹೊಸ ಸೇವೆಗಳನ್ನು ತಿದ್ದು ಪಡಿ ಮೂಲಕ ವಿಸ್ತರಿಸಿ 2014ರಲ್ಲಿ ಅಧಿಸೂಚನೆ ಹೊರಡಿಸಿದರು. ಅದೊಂದು ಒಳ್ಳೆಯ ಸೂಚನೆ ಎಂದು ನಾವೆಲ್ಲಾ ನಂಬಿದ್ದೆವು. ಸಾಕಷ್ಟು ಚರ್ಚೆಯ ಅನಂತರ ಪೂರಕ ತಿದ್ದುಪಡಿಗೆ ಅನುಮೋದನೆ ನೀಡಿದ್ದೆವು. 2014ರ ತಿದ್ದುಪಡಿಯಂತೆ ಸಕಾಲ ವ್ಯಾಪ್ತಿಗೆ ಒಟ್ಟು 852 ಸೇವೆಗಳು ಸೇರಿಕೊಂಡವು ಮತ್ತು 61 ಇಲಾಖೆಗಳ ಜೊತೆ 12 ಇತರ ಇಲಾಖೆಗಳು ಅಂದರೆ, 73 ಇಲಾಖೆಗಳು ಒಳಗೊಂಡವು. ಇದರಿಂದ ಬಹುತೇಕ ಸರಕಾರಿ ಸವಲತ್ತುಗಳು ಸಕಾಲದಲ್ಲಿ ಜನರಿಗೆ ತಲುಪುತ್ತದೆ ಎಂದುಕೊಂಡರೆ ಯಡವಟ್ಟಾಗಿದ್ದು ಅಲ್ಲೇ. ಒಂದೆಡೆ ರಾಜ್ಯ ಸರಕಾರ ಕಾನೂನು ಮಂತ್ರಿಗಳ ಮೂಲಕ ಕಾಯಿದೆಗೆ ತಿದ್ದುಪಡಿ ತಂದು ಸಕಾಲಕ್ಕೆ ಶಕ್ತಿ ಕೊಡುವ ಪ್ರಸ್ತಾಪನೆ ಮಂಡಿಸುತ್ತಲೇ ಮತ್ತೂಂದೆಡೆ ಸಕಾಲ ಯೋಜನೆಯೆಂಬ ಜನಸಾಮಾನ್ಯರ ಅಸ್ತ್ರದ ಕೈಗಳನ್ನು ಆಳುವ ಸರ್ಕಾರ ಕಾರ್‍ಯಾಂಗದ ಹೆಸರಿನಲ್ಲಿ ಕಟ್ಟಿ ಹಾಕಿದೆ.

ರಾಜ್ಯ ಸರ್ಕಾರ ಬಹುದೊಡ್ಡ ಮಟ್ಟದಲ್ಲಿ ಪ್ರಚಾರ ಫ‌ಲಕ ಹಾಗೂ ಜಾಹಿರಾತುಗಳ ಮೂಲಕ ಸಕಾಲ ಯೋಜನೆಯಿಂದ ಇನ್ನು ಮುಂದೆ ಜನಸಾಮಾನ್ಯರಿಗೆ ಸರಕಾರಿ ಇಲಾಖೆಗಳಲ್ಲಿ ಲಂಚ ಕ್ಕೋಸ್ಕರ ಕಡತ ಮರೆಮಾಚುವ, ವಿಳಂಬ ನೀತಿ ಅನುಸರಿಸುವ, ನಿಧಾನ ಕಾರ್ಯ ವೈಖರಿ ಹಾಗೂ ನಿರುತ್ತರದ ಮೂಲಕ ಅರ್ಜಿ ದಾರರು ತಾವಾಗಿಯೇ ಲಂಚ ಕೊಡುತ್ತಾರೆನ್ನುವವರೆಗೆ ಸತಾಯಿ ಸುವ ಪರಿಸ್ಥಿತಿಯನ್ನು ಮುಕ್ತಗೊಳಿಸಿ ಯಾವ ದಿನಾಂಕ, ಯಾವ ಸವಲತ್ತಿಗೆ ಅರ್ಜಿ ನೀಡಲಾಗಿತ್ತೋ, ಅದೇ ದಿನ ಯೋಜನೆಯ ಮಂಜೂರಾತಿಯ ದಿನವನ್ನು ನಿಗದಿಪಡಿಸಿ ಕಾಲಮಿತಿಯಲ್ಲಿ ಸರಕಾರಿ ಸೇವೆ ನೀಡುವುದಾಗಿ ಅಬ್ಬರದ ಪ್ರಚಾರದ ಮೂಲಕ ಘೋಷಿಸಿತು. ನಿಗದಿತ ಕಾಲಮಿತಿಯೊಳಗೆ ಸ್ವೀಕರಿಸಿದ ಅರ್ಜಿಗೆ ಸೇವೆ ನೀಡಲು ವಿಫ‌ಲವಾದ ತತ್ಸಂಬಂಧಿತ ಅಧಿಕಾರಿಯ ಮೇಲೆ ಅರ್ಜಿದಾರ ದೂರು ನೀಡಿದಲ್ಲಿ, ದಿನಕ್ಕೆ ರೂ.20 ರಂತೆ ಒಟ್ಟು 500 ರೂಪಾಯಿ ವರಗೆ ದಂಡವನ್ನು ವಿಧಿಸಬಹುದಾಗಿದೆ. ವಸೂಲಾದ ದಂಡದ ಮೊತ್ತವನ್ನು ನಿಗದಿತ ಕಾಲಮಿತಿಯ ಸರಕಾರಿ ಸೇವೆ ಪಡೆಯುವಲ್ಲಿ ವಿಫ‌ಲವಾದ ಅರ್ಜಿದಾರನಿಗೆ ಪರಿಹಾರವಾಗಿ ನೀಡಬೇಕು. ಇಂತಹ ಅರ್ಥಪೂರ್ಣ ಕಾಯಿದೆ ಬಂದ ನಂತರ ತಾಲೂಕು ಕಚೇರಿಗಳ ಸಹಿತ ಎಲ್ಲಾ ಇಲಾಖೆಗಳು ಚಳಿ ಬಿಟ್ಟು ಕೆಲಸ ಮಾಡಲಾರಂಭಿಸಿದವು. ಸಕಾಲ ಯೋಜನೆ ಕ್ರಾಂತಿಕಾರಿಯಾಗಿ ಕೆಲಸ ಮಾಡುತ್ತದೆ ಎನ್ನುವಾಗಲೆಲ್ಲಾ ಸರಕಾರ ಕೊಡುವ ಅಂಕಿಅಂಶಗಳಿಗೂ ವಾಸ್ತವಿಕ ಯೋಚನೆಯ ಅನುಷ್ಠಾನಕ್ಕೂ ಹೊಂದಾಣಿಕೆಯೇ ಆಗುತ್ತಿಲ್ಲ. ಮಾತ್ರವಲ್ಲ ಯಾವ ಪಕ್ಷದ ಯಾವ ಸರಕಾರ ಅನ್ನುವುದಕ್ಕಿಂತ ಪ್ರಸ್ತುತ ದಿನಗಳಲ್ಲಿ ಸಕಾಲಯೋಜನೆಯು ಅಕಾಲ ಯೋಜನೆಯಾಗಿ ಮಾರ್ಪಟ್ಟಿದೆ. “”ಇಂದು ನಾಳೆ ಇನ್ನಿಲ್ಲ, ಹೇಳಿದ ದಿನ ತಪ್ಪೊಲ್ಲ” ಎಂಬ ಆಕರ್ಷಕ ಘೋಷವಾಕ್ಯ ಸವಕಲಾಗಿ, “”ಆಡಿದ ಮಾತು ನಡೆಯಲ್ಲ, ಹೇಳಿದಂತೆ ಮಾಡೊಲ್ಲ” ಎಂಬ ಘೋಷಣೆ ಬರೆಸಲು ಸಕಾಲ ಸನ್ನದ್ಧವಾಗಿದೆ ಎಂದೆನಿಸುತ್ತಿದೆ.

ಸಾಲದ್ದಕ್ಕೆ ಸಕಾಲ ಮಿಷನ್‌ನ ಆಡಳಿತಾಧಿಕಾರಿ ಕೆ.ಮಥಾಯ್‌ ಸರಿ ಸುಮಾರು ಒಂದು ವರ್ಷದಿಂದ ಈ ಯೋಜನೆಯ ಲ್ಲಾದ ಲೋಪದೋಷಗಳ ಬಗ್ಗೆ ತನಿಖೆ ನಡೆಸಿರೆಂದು ಸಿದ್ದರಾಮಯ್ಯ ಅವರಿಗೆ ದುಂಬಾಲು ಬಿದ್ದಿದ್ದಾರೆ. ಸಕಾಲ ಯೋಜ ನೆಯ ನಿರ್ದೇಶಕರ ಸಹಿತ ಹಲವು ಐ.ಎ.ಎಸ್‌ ಅಧಿಕಾರಿಗಳ ಮೇಲೆ ಭ್ರಷ್ಟಾಚಾರ ಸೇರಿದಂತೆ ಕೆಲವು ಗುರುತರ ಆರೋಪಗಳನ್ನು ಹೊರಿಸಿ ಮುಖ್ಯಮಂತ್ರಿಗಳು ಮಾತ್ರವಲ್ಲ, ಲೋಕಾಯುಕ್ತ ಹಾಗೂ ರಾಜ್ಯ ಮುಖ್ಯ ಕಾರ್ಯದರ್ಶಿಯವರಿಗೆ ತನಿಖೆ ಮಾಡಿರೆಂದು ಆಗ್ರಹಿಸಿದ್ದಾರೆ. ವಿಧಾನಸೌಧ, ವಿಕಾಸಸೌಧವೆಂಬ ಬಿಳಿಯಾನೆಗಳ ಜೊತೆ ಮೈಚಾಚಿ ನಿಂತ ಎಮ್‌.ಎಸ್‌ ಬಿಲ್ಡಿಂಗ್‌ ಎಂದು ಕರೆಯುವ ಬಹುಮಹಡಿ ಕಟ್ಟಡದಲ್ಲಿ ಮುಟ್ಟಿದರೆ ಮುನಿಯುವ ಅಧಿಕಾರಿ ಗಳಿಗೆ ಇಷ್ಟೆ ಸಾಕಿತ್ತು. ಈ ಮೂರು ಸ್ಥಳದಲ್ಲಿರುವ ಯಾವ ಸಿಬ್ಬಂದಿಗಳಿಗೂ ಹೊರ ಪ್ರಪಂಚಕ್ಕೆ ವರ್ಗಾವಣೆ ಇಲ್ಲ ಎಂಬ ಸುತ್ತೋಲೆ ಇರುವುದು ಜನಸಾಮಾನ್ಯರಿಗೆ ಗೊತಿಲ್ಲ.

ಐ.ಎ.ಎಸ್‌ ಮತ್ತು ಕೆ.ಎ.ಎಸ್‌ ಮಟ್ಟದ ಅಧಿಕಾರಿಗಳ ನಡುವೆ “”ಸಕಾಲ”ದಲ್ಲೇ ಜಗಳ ಪ್ರಾರಂಭವಾಯ್ತು. ಅಪ್ಪ ಅಮ್ಮನ ಜಗಳ‌ ದಲ್ಲಿ ಕೂಸು ಬಡವಾದಂತೆ, ಸಕಾಲ ಗೊಂದಲದ ಗೂಡಾಯಿತು. ಒಂದೆಡೆ ಕರ್ನಾಟಕ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಅಧೀನದಲ್ಲೇ ಬರುವ ಸಕಾಲ ಸೇವೆ ಆಡಳಿತ ವ್ಯವಸ್ಥೆಯ ವೈಫ‌ಲ್ಯದಿಂದ ನಿಷ್ಕ್ರಿಯವಾಗಿದ್ದರೆ ಸಿಬ್ಬಂದಿ ಹೊಂದಾಣಿಕೆ ಇಲ್ಲದೆ ಎಲ್ಲಾ ಇಲಾಖೆಗಳಲ್ಲಿ ಜನಸಾಮಾನ್ಯರ ಪಾಲಿಗೆ ಅಕಾಲ ಸೇವೆಯಾಗುತ್ತಿದೆ. ದುರಂತವೆಂದರೆ ಸಕಾಲದ ಮೂಲಕ ಕಾಲಮಿತಿಯಲ್ಲಿ ಸವಲತ್ತು ನೀಡುತ್ತಿದ್ದ, ಬಹು ತೇಕ ಇಲಾಖೆಗಳು ಸಕಾಲದ ಕಲ್ಪನೆಯನ್ನು ಮರೆತು ಸ್ವೇಚ್ಛಾಚಾರಿ ಯಾಗಿ ಕೆಲಸ ಮಾಡುತ್ತಿವೆ. ಸಕಾಲದ ಈಗಿನ ಆಡಳಿತಾಧಿಕಾರಿ ಕೆ. ಮಥಾಯ್‌ ಇತ್ತೀಚೆಗೆ ಈ ಯೋಜನೆ ಹಳ್ಳ ಹಿಡಿಯುತ್ತಿರುವ ಬಗ್ಗೆ ಮಾತ್ರವಲ್ಲ ಸಕಾಲ ಮುಗಿಸಲು ಇಲಾಖೆಯಲ್ಲಿ ನಡೆಯುತ್ತಿರುವ ವ್ಯವಸ್ಥಿತ ಸಂಚಿನ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವುದೂ ಅಲ್ಲದೆ ಸಮಗ್ರ ವರದಿಯನ್ನು ಸಲ್ಲಿಸಿದ್ದಾರೆ. ಅವರ ವರದಿಯಲ್ಲಿರುವ ಮುಖ್ಯ ಅಂಶಗಳೆಂದರೆ ಸಕಾಲ ಶಬ್ದಾರ್ಥವನ್ನು ಸೇವೆ ಪಡೆಯುವ ಹಕ್ಕು ಎಂದು ಪರಿಗಣಿಸಿ ಹೆಚ್ಚು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸುವ ಅಗತ್ಯವಿದೆ ಎಂದು ಬೊಟ್ಟು ಮಾಡಲಾಗಿದೆ. ಸಕಾಲ ಮಂಡಳಿಗಿರುವ ಎಲ್ಲಾ ಅಧಿಕಾರಗಳು ಹಲ್ಲಿಲ್ಲದ ಹಾವಿನಂತಾ ಗಿದ್ದು, ಕಳೆದ 5 ವರ್ಷಗಳಲ್ಲಿ ಸಕಾಲದ ನಿಯಮ ಮೀರಿ ಕರ್ತವ್ಯ ಲೋಪ ಮಾಡಿದ ಅಧಿಕಾರಿಗಳಿಗೆ ದಂಡ ಹಾಕಿ ಸಂತ್ರಸ್ತ ಬಳಕೆದಾರರಿಗೆ ಪರಿಹಾರ ನೀಡಿದ್ದರೆ ಸರಿ ಸುಮಾರು 60 ಲಕ್ಷ ಅವಧಿ ಮೀರಿದ ಅರ್ಜಿಗಳಿಗೆ 50 ಕೋ. ರೂ. ಕೊಡಬೇಕಾಗುತ್ತಿತ್ತು. ಆದರೆ ಇಪ್ಪತ್ತು ರೂಪಾಯಿ ಪರಿಹಾರಕ್ಕಾಗಿ ನೊಂದ ಬಳಕೆದಾರರು ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಿಗೆ ಅಲೆದಾಟ ಮಾಡಬೇಕಾಗಿ ರುವುದರಿಂದ ಪರಿಹಾರ ಪಡೆಯಲು ಮುಂಬ ರುತ್ತಿಲ್ಲ. ಹಾಗಾಗಿ ಕಳೆದ 5 ವರ್ಷಗಳಲ್ಲಿ ಕೇವಲ 7,300 ಪ್ರಕರಣ ದಲ್ಲಿ 77ಸಾವಿರ ರೂ.ಮಾತ್ರ ಅರ್ಜಿದಾರರಿಗೆ ಪರಿಹಾರ ನೀಡಲಾಗಿದೆ. ಇಪ್ಪತ್ತು ರೂಪಾಯಿ ದಂಡ ತೆರುವುದು ಬಿಟ್ಟರೆ ಅರ್ಜಿಗಳನ್ನು ಕಡೆಗಣಿಸುವ ಅಧಿಕಾರಿಗಳಿಗೆ ಬೇರಾವುದೇ ಶಿಕ್ಷೆ ಇಲ್ಲದಿರುವುದರಿಂದ ಸರಕಾರಿ ಕಚೇರಿಗಳು ಸಕಾಲವನ್ನು ಗಂಭೀರವಾಗಿ ಪರಿಗಣಿಸದೆ ಅಪಹಾಸ್ಯ ಕ್ಕೊಳಗಾಗುವಂತಿದೆ. ಆದ್ದರಿಂದ ಅವಧಿ ಮೀರಿ ಬಾಕಿ ಉಳಿಸಿ ಕೊಂಡು ನಿರ್ಲಕ್ಷ್ಯ ಮಾಡುವ ಸಿಬ್ಬಂದಿಗಳಿಗೆ ದಂಡದ ಮೊತ್ತ 20 ರೂಪಾಯಿಗಳಿಂದ ಕನಿಷ್ಟ 250 ರೂಪಾಯಿಗೇರಿಸಬೇಕೆಂಬ ಸ್ಪಷ್ಟ ಸಲಹೆ ನೀಡಲಾಗಿದೆ. ಕೆಲವು ಕಚೇರಿಗಳಲ್ಲಿ “”ಸಕಾಲ” ಯೋಜನೆಯ ನಾಮಫ‌ಲಕ ಗಳನ್ನು ಮುಖ್ಯ ದ್ವಾರದಲ್ಲಿ ಪ್ರದರ್ಶಿಸಿ ತಮ್ಮ ಕಚೇರಿಯಲ್ಲಿ ಯಾವ ಯಾವ ಸೇವೆಗಳು ಅದರಲ್ಲಿ ಬರುತ್ತವೆ, ಅವುಗಳ ನಿಯಮಗಳೇನು ಎಂಬುದನ್ನು ಪ್ರದರ್ಶಿಸಬೇಕೆಂಬ ಸರಕಾರಿ ಆದೇಶಗಳಿದ್ದರೂ ಅನುಷ್ಠಾನ ಮಾಡುತ್ತಿಲ್ಲ. ಉದಾಹರಣೆಗೆ ಹಾಸನದ ಜಿಲ್ಲಾ ಆಸ್ಪತ್ರೆಯಲ್ಲಿ “”ಸಕಾಲ” ಬೋರ್ಡ್‌ ಹಾಕಿಲ್ಲ, ಅಲ್ಲದೇ ಕೌಂಟರನ್ನೇ ಮುಚ್ಚಲಾಗಿದೆ. ಅಂತಹ ನೂರಾರು ಪ್ರಕರಣಗಳು ಪತ್ತೆಯಾಗಿವೆ. ಕೆಲ ಕಚೇರಿಗಳಲ್ಲಿ ಫ‌ಲಕ ಹಾಕಿ ಸೇವೆಯ ದಿನದ ಗುರುತನ್ನೇ ಅಳಿಸಿ ಹಾಕಿದ್ದಾರೆ ಎಂದು ವರದಿಯಲ್ಲಿ ಮಥಾಯ್‌ ದಾಖಲೆ ಸಮೇತ ತಿಳಿಸಿದ್ದಾರೆ. ಬೆಂಗಳೂರು ಪೋಲಿಸ್‌ ಮುಖ್ಯ ಕಚೇರಿಯಲ್ಲಿ 200ಕ್ಕೂ ಹೆಚ್ಚು ಬಂದೂಕು ಪರವಾನಿಗೆಯ ಕಡತಗಳು ಕೊಳೆಯುತ್ತಿದ್ದು, ಸಕಾ ಲದ ವ್ಯಾಪ್ತಿಯಲ್ಲಿದ್ದರೂ ಕೂಡ ವಿಲೇವಾರಿಯಾಗಿರಲಿಲ್ಲ. “ಸಕಾಲ’ ಅಧಿಕಾರಿಗಳು ತಪಾಸಣೆಗೆ ಬಂದ ಎರಡೇ ದಿನಗಳಲ್ಲಿ 150 ಕಡತಗಳು ದಡ ತಲುಪಿದ್ದವು. ಬಿ.ಬಿ.ಎಂ.ಪಿಯ ಉಪ ಕಚೇರಿಗಳಲ್ಲಂತೂ ಸಕಾಲದ ಸುದ್ದಿಯೇ ಇರಲಿಲ್ಲ.

ಸರಕಾರದ ಪ್ರತಿಷ್ಟಿತ ಸಂಸ್ಥೆಯಾದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಭೂ ಪರಿಹಾರ, ಭೂ ಸ್ವಾಧೀನವೂ ಸೇರಿದಂತೆ ಸಕಾಲ ಸೇವೆಗಳೆಲ್ಲ ಅಕಾಲವಾಗಿ ವರ್ಷಗಳೇ ಸಂದಿವೆ. ಕೆಲ ಸರಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಮತ್ತು ಮಧ್ಯವರ್ತಿಗಳು ಸೇರಿಕೊಂಡು ಅರ್ಜಿದಾರ ರಿಗೆ ಸಕಾಲದಲ್ಲಿ ಅರ್ಜಿ ಕೊಡಬೇಡಿ, ಮಾಮೂಲಿ ಅರ್ಜಿ ಕೊಟ್ಟರೆ ಸಕಾಲಕ್ಕಿಂತ ಬೇಗ ಕೊಡುವುದಾಗಿ ಆಮಿಷವೊಡ್ಡಿ ಹಣ ಪಡೆದು, ನಂತರ ಕಣ್ಮರೆಯಾಗಿ ಬಡಪಾಯಿಗಳನ್ನು ಅಲೆದಾಡಿಸಿದ ಘಟನೆಗಳು ದಾಖಲಾಗಿವೆ. ಸಕಾಲ ಮುಗಿಸುವ ಈ ಎಲ್ಲಾ ತಂತ್ರಗಳೊಂದಿಗೆ ಇಲಾಖೆಯಿಂದ 200ಕ್ಕೂ ಮಿಕ್ಕಿ ಮೋಜಣಿ ಸಿಬ್ಬಂದಿಗಳಿಗೆ ಕಳೆದ ಏಪ್ರಿಲ್‌ನಿಂದ ಆರಂಭವಾಗಿ 7 ತಿಂಗಳಿಂದ ಸಂಬಳವನ್ನೇ ಕೊಟ್ಟಿಲ್ಲ. ಸಂಬಳದ ಕಡತಕ್ಕೆ ಈಗಿರುವ ಆಡಳಿತಾಧಿ ಕಾರಿ ಸಹಿ ಹಾಕಬೇಕೋ ಅಥವಾ ಮೇಲ್‌ಸ್ತರದ ಎಡಿಶನಲ್‌ ಚೀಫ್ ಸೆಕ್ರೆಟರಿ ಸಹಿ ಹಾಕಬೇಕೋ ಎಂಬ ತರ್ಕ ಮಾಡಿಕೊಂಡು 200 ಜನ ಬಡಪಾಯಿ ಸಿಬ್ಬಂದಿಗಳ ಸಂಬಳ ತಡೆಹಿಡಿಯಲಾಗಿದೆ ಎಂದರೆ ಸಕಾಲ ಪ್ರಧಾನ ಕಚೇರಿಗೆ ಅದ್ಯಾವ ಪರಿ ತುಕ್ಕು ಹಿಡಿದಿರಬಹುದು ಯೋಚಿಸಿ. ಆಡಳಿತದ ವತಿಯಿಂದ ಈ ಮಧ್ಯೆ ಪ್ರತಿ ತಿಂಗಳು ಸಕಾಲ ಮಾಸಿಕ ಪ್ರಗತಿ ವರದಿಯ ಪತ್ರಿಕೆಯೊಂದು ಪ್ರಕಟವಾಗಿ ಪ್ರತಿ ಜಿಲ್ಲಾ ಮತ್ತು ತಾಲ್ಲೂಕುಗಳು ಸಕಾಲ ಅರ್ಜಿಗಳ ಪ್ರಗತಿಯ ಅಂಕಿ ಅಂಶಗಳನ್ನು ಹೇಳುತ್ತದಲ್ಲದೆ ಸಕಾಲದ ಬಗ್ಗೆ ಜನಜಾಗೃತಿ ಮೂಡಿಸುತ್ತಿತ್ತು. ದುರಾದೃಷ್ಟಕ್ಕೆ ಇಲಾಖೆಯ ಆಂತರಿಕ ಜಗಳದಿಂದ ಅದರ ಪ್ರಕಟನೆಯು ನಿಂತು 2 ವರ್ಷವಾಯಿತು.

ಸಕಾಲ ವೆಬ್‌ಸೈಟಿನಲ್ಲಿ ವಿಲೇವಾರಿ ಮಾಹಿತಿಗಳು ತಾಲ್ಲೂಕುವಾರು ಹಾಗೂ ಜಿಲ್ಲಾವಾರು ಪ್ರಕಟವಾಗುವುದರ ಮೂಲಕ ವಿವಿಧ ಇಲಾಖೆಗಳಲ್ಲಿನ ಕಚೇರಿಗಳಲ್ಲಿ ಆರೋಗ್ಯಕರ ಸ್ಪರ್ಧೆಯ ಅವಕಾಶವಿತ್ತಾದರೂ ಇಂದಿಗೆ ವೆಬ್‌ಸೈಟ್‌ಗಳ ದಾಖಲಾತಿಯೇ ನಿಂತು ಹೋಗಿದೆ. ಸಾಲದ್ದಕ್ಕೆ ಇದೀಗ ವರ್ಗಾವಣೆಯಾದ ಹಿರಿಯ ಅಧಿಕಾರಿಣಿಯೊಬ್ಬರು ತುರ್ತು ಕೆಲಸಗಳಿಗಾಗಿ ಸಕಾಲ ಮಂಡಳಿ ಖಾತೆಯಿಂದ ಸಾವಿರಾರು ರೂಪಾಯಿಯನ್ನು ವೈಯಕ್ತಿಕ ಆಸಕ್ತಿಯ ಅನ್ಯ ಕಾರ್ಯಗಳಿಗಾಗಿ ಬಳಸಿದ್ದಾರೆ ಎಂಬ ಸುದ್ದಿ ಹರಡಿದೆ. “”ಸಕಾಲ” ಸಮರ್ಪಕ ಕಾರ್ಯಾನುಷ್ಠಾನದ ಬಗ್ಗೆ ಪ್ರಗತಿ ಪರಿಶೀಲನೆಗಾಗಿ ಇರುವ ಏಕೈಕ ವಾಹನದ ಬಾಡಿಗೆ ತಡೆಹಿಡಿದು ಪರೋಕ್ಷವಾಗಿ ಅನುಷ್ಠಾನವಾಗದಂತೆ ತಡೆಯುವ ವ್ಯವಸ್ಥಿತ ಸಂಚು ನಡೆಯುತ್ತಿದೆ. ಅಲ್ಲದೇ ವಿಳಂಬ ನೀತಿ ಅನುಸರಿಸಿದ ಪ್ರಕರಣದ ಪತ್ತೆಗಾಗಿ ನೇಮಿಸಿದ್ದ ಮಾಹಿತಿ ತಂತ್ರಜ್ಞಾನ ಸಲಹೆ ಗಾರನ ಹುದ್ದೆಯನ್ನೇ ಸ್ಥಗಿತಗೊಳಿಸಲಾಗಿದೆ. ಮುಖ್ಯ ಕಚೇರಿ ಗಳಲ್ಲಿರುವ 4 ಡಾಟಾ ಎಂಟ್ರಿ ಹುದ್ದೆಗಳ ಪೈಕಿ ಮೂರನ್ನು ಹಿಂಪಡೆಯಲಾಗಿದೆ ಎಂಬ ಸುದ್ದಿ ಖಚಿತವಾಗಿದೆ.

ಒಟ್ಟಾರೆ ಸದಾನಂದ ಗೌಡರ ಕಾಲದ ಸಕಾಲ ಯೋಜನೆಗೆ ಪ್ರಸ್ತುತ ಸಿದ್ದರಾಮಯ್ಯನವರ ಸರಕಾರ ಉತ್ತಮ ಯೋಜನೆ ಎಂಬ ಬಗ್ಗೆ ಪ್ರಶಸ್ತಿ ಪಡೆದದ್ದು ಬಿಟ್ಟರೆ ಅದರ ಪ್ರಗತಿ ಶೇ.50% ಕುಂಠಿತವಾಗಿದೆ. ಸರಕಾರದ ಅನೇಕ ಕಚೇರಿಗಳಲ್ಲಿ ಸಕಾಲದ ಫ‌ಲಕ ಸೇವೆಗಳನ್ನು ತೂಗು ಹಾಕಿದ್ದರೂ ಸೇವೆಗಳನ್ನು ಎಷ್ಟು ದಿನಗಳೊಳಗೆ ಕೊಡಲಾಗುವುದು ಎಂದು ಬರೆದಲ್ಲಿಗೆ ಬೋರ್ಡನ್ನೇ ತುಂಡರಿಸಿ ಇಡಲಾಗಿದೆ. “”ಸಕಾಲ” ಯೋಜನೆ ನೇರವಾಗಿ ಮುಖ್ಯಮಂತ್ರಿಗಳ ಅಧೀನ ಬರುವುದರಿಂದ ಮುಖ್ಯಮಂತ್ರಿಗಳು ಹಲವು ಬಾರಿ ಅದರ ಸ್ಥಿತಿ ಸುಧಾರಿಸುವುದಾಗಿ ಸದನದಲ್ಲಿ ನನಗೆ ಕೊಟ್ಟ ಭರವಸೆ ಹುಸಿಯಾಗಿದೆ. “”ಸಕಾಲ”ಕ್ಕೆ ಶಕ್ತಿ ಕೊಡಲು ಈಗಿನ ಆಡಳಿತಾಧಿ ಕಾರಿಗಳ ಬದಲಿಗೆ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಆಯೋಗ ರಚನೆ ಮಾಡಿ ಎಂಬ ಮನವಿಗೆ ಮುಖ್ಯಮಂತ್ರಿಗಳು ಖಂಡಿತ ಪರೀಶಿಲನೆ ಮಾಡಲಾಗುವುದು ಎಂಬ ಉತ್ತರವನ್ನಷ್ಟೇ ಕೊಟ್ಟಿದ್ದಾರೆ. ಜನಪರವಾದ ಯೋಚನೆಯೊಂದನ್ನು ಹಳ್ಳ ಹಿಡಿಸ ಬೇಕೆಂದು ಆಳುವವರೇ ನಿರ್ಧರಿಸಿದರೆ ತಡೆಯುವವರಾರು?

ಮಥಾಯ್‌ ಎಂಬ ಖಡಕ್‌ ಅಧಿಕಾರಿ ಕಂಗಾಲು
ವಿಧಾನಸೌಧ ಮತ್ತು ವಿಕಾಸಸೌಧದ ಕೂಗಳತೆಯ ದೂರದ ಲ್ಲಿರುವ ಬಹುಮಹಡಿ ಕಟ್ಟಡದಲ್ಲಿರುವ ಸಕಾಲ ಮಂಡಳಿಯಲ್ಲಿ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ, ಸಕಾಲವನ್ನು ದಡ ಮುಟ್ಟಿಸಲಾಗದೇ ಚಡಪಡಿಸಿ, ಉಸಿರುಗಟ್ಟುವ ವಾತಾವರಣದ ನಡುವೆಯೂ ಸಕಾಲ ಉಳಿಸಲು ಹೆಣಗಾಡುತ್ತಿರುವ ಆಡಳಿತಾಧಿ ಕಾರಿಯ ಹೆಸರು ಕೆ. ಮಥಾಯ್‌. ಈ ಮಥಾಯ್‌ ಎಂಬ ಕೆ.ಎ.ಎಸ್‌ ಅಧಿಕಾರಿ ಸುತ್ತಲಿನ ಭ್ರಷ್ಟಾಚಾರ, ವಿಳಂಬ ನೀತಿ, ಲಂಚ ಗುಳಿತನ ವಿರುದ್ಧ ಏಕಾಂಗಿಯಾಗಿ ಹೋರಾಟ ಮಾಡುವ ಮೂಲಕ ಸರಕಾರಕ್ಕೆ ಮಗ್ಗುಲ ಮುಳ್ಳಾಗಿದ್ದಾರೆ. ಮಥಾಯ್‌ ಎಂಬ ಮಿಲಿಟರಿ ಅಧಿಕಾರಿ ಸಕಾಲವನ್ನು ದಡ ಸೇರಿಸುತ್ತಾರೋ ಅಥವಾ ಸರಕಾರಿ ಯಂತ್ರದ ಅಡಕತ್ತರಿಯಲ್ಲಿ ಸಿಲುಕಿ ಇನ್ನೆರಡು ವರ್ಷದಲ್ಲಿ ನಿವೃತ್ತಿ ಪೂರೈಸುತ್ತಾರೋ? ಎಂಬ ಪ್ರಶ್ನೆಗೆ ಕಾಲವಲ್ಲ ವಿಧಾನಸೌಧದ 3ನೇ ಮಹಡಿಯಲ್ಲಿ ಕುಳಿತ ಸಿಎಂ ಕುರ್ಚಿ ಉತ್ತರಿಸಬೇಕು.

ಶ್ರೀನಿವಾಸ ಪೂಜಾರಿ, ಎಂಎಲ್‌ಸಿ

ಟಾಪ್ ನ್ಯೂಸ್

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

‌UP: ಫಸ್ಟ್‌ ನೈಟ್‌ ದಿನ ಬಿಯರ್‌, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!

‌UP: ಫಸ್ಟ್‌ ನೈಟ್‌ ದಿನ ಬಿಯರ್‌, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!

ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

3-

Investigative Authorities: ಕುಸಿಯುತ್ತಿದೆ ತನಿಖಾ ಪ್ರಾಧಿಕಾರಗಳ ವಿಶ್ವಾಸಾರ್ಹತೆ !

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

8

Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

7(1

Udupi: ಉದ್ಘಾಟನೆ ಕಾಣದ ಸರಕಾರಿ ಕಟ್ಟಡಗಳು

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.