ವಿವಿ ಚಿಕಿತ್ಸೆಗೆ ವಿಷಕಾರಿ ಔಷಧ
Team Udayavani, Feb 25, 2018, 9:25 AM IST
“ರೋಗಿಗೆ ಸರಿಯಾದ ಔಷಧ ನೀಡದಿದ್ದರೆ ಅದು ರೋಗಕ್ಕಿಂತಲೂ ಅಪಾಯಕಾರಿ’ ಎಂಬಂತೆ ರಾಜ್ಯದಲ್ಲಿ ಹದಗೆಡುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವ ನೆಪದಲ್ಲಿ ರಾಜ್ಯ ಸರ್ಕಾರವು ವಿವಿ ಕಾಯ್ದೆಗೆ ತಿದ್ದುಪಡಿ ತಂದು ನೀಡುತ್ತಿರುವ ಮದ್ದೂ ಅಷ್ಟೇ ಅಪಾಯಕಾರಿ.
ರಾಜ್ಯ ವಿಶ್ವವಿದ್ಯಾಲಯಗಳಿಗೆ ರಾಜ್ಯಪಾಲರು ಕುಲಾಧಿಪತಿ ಹಾಗೂ ಉನ್ನತ ಶಿಕ್ಷಣ ಸಚಿವರು ಸಹ ಕುಲಾಧಿಪತಿಗಳಾಗಿರುತ್ತಾರೆ. ಕುಲಪತಿಗಳ ನೇಮಕದಲ್ಲಿ ಕುಲಾಧಿಪತಿಗಳಿಗೇ ಸುಪ್ರೀಂ ಪವರ್ ನೀಡಲಾಗಿತ್ತು. ಅವರ ಅಂಕಿತ ಇಲ್ಲದೇ ಕುಲಪತಿಗಳ ನೇಮಕ ಸಾಧ್ಯವೇ ಇರಲಿಲ್ಲ. ಶೋಧನಾ ಸಮಿತಿ ನೀಡುವ ಶಿಫಾರಸಿನ ಪಟ್ಟಿಯನ್ನು ರಾಜ್ಯಪಾಲರು ತಿರಸ್ಕರಿಸಿದರೂ ಸರ್ಕಾರ ಮರು ಪ್ರಶ್ನಿಸುವಂತಿರಲಿಲ್ಲ.
ರಾಜ್ಯ ವಿಶ್ವವಿದ್ಯಾಲಯಕ್ಕೆ ಕುಲಪತಿಗಳ ನೇಮಕದಲ್ಲಿ ಇನ್ಮುಂದೆ ಮುಖ್ಯಮಂತ್ರಿ ಅಥವಾ ಸಹ ಕುಲಾಧಿಪತಿಗಳೇ ಸುಪ್ರೀಂ ಆಗಿರುತ್ತಾರೆ. ಶೋಧನಾ ಸಮಿತಿ ಶಿಫಾರಸು ಮಾಡುವ ಮೂವರು ತಜ್ಞರ ಹೆಸರುಗಳಲ್ಲಿ ಒಬ್ಬರದ್ದು ಮಾತ್ರ ಸರ್ಕಾರದಿಂದ ರಾಜ್ಯಪಾಲರಿಗೆ ಹೋಗಲಿದೆ. ರಾಜ್ಯಪಾಲರಿಗೆ ಆ ಹೆಸರನ್ನು ಅಂಗೀಕರಿಸಲು ಇಷ್ಟ ಇಲ್ಲ ಎಂದಾದರೆ, ಅದಕ್ಕೂ ಕಾರಣ ತಿಳಿಸಿಯೇ ವಾಪಾಸ್ ಕಳುಹಿಸಬೇಕು. ರಾಜ್ಯ ಸರ್ಕಾರ ಎರಡನೇ ಸಲ ಇನ್ನೊಬ್ಬರ ಅಥವಾ ಈ ಹಿಂದೆ ಕಳುಹಿಸಿದ ಹೆಸರನ್ನೇ ರಾಜ್ಯಪಾಲರಿಗೆ ನೀಡಿದರೆ ರಾಜ್ಯಪಾಲರು ಅಂಕಿತ ಹಾಕಲೇಬೇಕು. ಈ ಬಗ್ಗೆ ಚಕಾರ ಎತ್ತುವಂತಿಲ್ಲ. ಅಂಕಿತ ಹಾಕದೇ ಇದ್ದರೂ, ಎರಡನೇ ಸಲ ಕಳುಹಿಸಿದ ವ್ಯಕ್ತಿಯೇ ತಿಂಗಳೊಳಗೆ ಕುಲಪತಿಯಾಗಲಿದ್ದಾರೆ ಎಂಬುದು ರಾಜ್ಯ ವಿಧಾನಮಂಡಲದ ಉಭಯ ಸದನಗಳಲ್ಲಿ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ ಸಚಿವರು ಮಂಡಿಸಿ, ಅಂಗೀಕಾರಗೊಂಡಿರುವ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ(ತಿದ್ದುಪಡಿ) ವಿಧೇಯಕ -2017ರಲ್ಲಿ ಸ್ಪಷ್ಟವಾಗಿದೆ. ವಿಶ್ವವಿದ್ಯಾಲಯಕ್ಕೆ ಕುಲಪತಿಗಳ ನೇಮಕ ವಿಚಾರ ರಾಜ್ಯಪಾಲರು ಮತ್ತು ಸರ್ಕಾರದ ನಡುವಿನ ಪ್ರತಿಷ್ಠೆಯ ಸಮರ ಕಣವಾಗಿದೆ. ಇದು ಇಂದು ನಿನ್ನೆಯ ಕಿತ್ತಾಟವಲ್ಲ. ಶೀಥಲ ಸಮರದಂತೆ ವರ್ಷಗಳಿಂದಲೂ ನಡೆದುಕೊಂಡು ಬರುತ್ತಿದೆ. ರಾಜ್ಯಪಾಲರು ತಮ್ಮ ಇಚ್ಛೆಯಂತೆ ಕುಲಪತಿಗಳ ನೇಮಕ ಮಾಡುತ್ತಾರೆ, ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬ ಆರೋಪವೂ ಸರ್ಕಾರದ ಕಡೆಯಿಂದ ಆಗಾಗ ಕೇಳಿಬರುತ್ತಲೇ ಇರುತ್ತದೆ. ಹಾಗೆಯೇ ಸರ್ಕಾರ ಕೂಡ ಸೂಕ್ತ ಹೆಸರು ನೀಡಿಲ್ಲ ಎಂದು ರಾಜ್ಯಪಾಲರು ಕುಲಪತಿ ನೇಮಕದ ಶಿಫಾರಸಿನ ಪಟ್ಟಿಯನ್ನು ತಿರಸ್ಕರಿಸಿರುವ ಅದೆಷ್ಟೋ ಉದಾಹರಣೆಗಳು ಕಣ್ಣಮುಂದೆಯೇ ಇದೆ.
ತಾನೇ ಸೂಚಿಸಿದ ವ್ಯಕ್ತಿಯೇ ಕುಲಪತಿಯಾಗಬೇಕು ಎಂಬ ಹಠ ಸರ್ಕಾರ ಹಾಗೂ ರಾಜ್ಯಪಾಲರಲ್ಲಿ ಇರುವುದು ಸಹಜ. ಹೀಗಾಗಿಯೇ ರಾಜ್ಯದ ಹಲವು ವಿಶ್ವವಿದ್ಯಾಲಯಗಳಲ್ಲಿ ಕಾಯಂ ಕುಲಪತಿಯ ನೇಮಕ ಆಗಿಲ್ಲ. ಕುಲಪತಿ ಹುದ್ದೆ ಖಾಲಿ ಇರುವ ವಿಶ್ವವಿದ್ಯಾಲಯಗಳಿಗೆ ಕುಲಪತಿ ನೇಮಕಕ್ಕೆ ಶೋಧನಾ ಸಮಿತಿ ರಚನೆ ಮಾಡಲಾಗಿದೆ. ಶೋಧನಾ ಸಮಿತಿ ಸಭೆ ನಡೆಸಿ, ಅರ್ಹರ ಪಟ್ಟಿಯನ್ನು ಸರ್ಕಾರಕ್ಕೆ ಶಿಫಾರಸು ಮಾಡಿದೆ. ಆದರೆ, ಸರ್ಕಾರ ಸೂಚಿಸಿದ ಹೆಸರನ್ನು ರಾಜ್ಯಪಾಲರು ಒಪ್ಪುತ್ತಿಲ್ಲ. ರಾಜ್ಯಪಾಲರ ಆಯ್ಕೆ ಸರ್ಕಾರಕ್ಕೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಶೈಕ್ಷಣಿಕ ವಿಚಾರವಾಗಿ ಇಬ್ಬರ ನಡುವಿನ ಸಮನ್ವಯದ ಕಂದಕ ಜಗಜ್ಜಾಹೀರಾಗಿದೆ.
ಹೀಗಾಗಿಯೇ, ರಾಜ್ಯಪಾಲರ ಅಧಿಕಾರವನ್ನು ಮೊಟಕುಗೊಳಿಸಿ, ಸರ್ಕಾರವೇ ತನ್ನ ಅಧೀನಕ್ಕೆ ಪಡೆಯಲು ಬೇಕಾದ ತಿದ್ದುಪಡಿಯನ್ನು ಕಾಯ್ದೆ ಮೂಲಕ ತಂದಿದೆ. ಬೆಂಗಳೂರು ಮತ್ತು ಮೈಸೂರು ವಿಶ್ವವಿದ್ಯಾಲಯದಲ್ಲಿ ಕಾಯಂ ಕುಲಪತಿಗಳಿಲ್ಲದೇ ವರ್ಷ ಕಳೆದಿದೆ. ಶೋಧನಾ ಸಮಿತಿ ನೀಡಿರುವ ಶಿಫಾರಸಿನಂತೆ ರಾಜ್ಯ ಸರ್ಕಾರ ನೀಡಿದ ಪಟ್ಟಿಯನ್ನು ರಾಜ್ಯಪಾಲರು ಸಾರಾಸಗಟಾಗಿ ತಿರಸ್ಕರಿಸಿದ್ದರು. ಹಾಗೆಯೇ ರಾಜ್ಯಪಾಲರು ಒಪ್ಪಿದ ಹೆಸರಿಗೆ ಸರ್ಕಾರ ಒಪ್ಪಿಕೊಂಡಿಲ್ಲ. ಈ ಮಧ್ಯೆ ರಾಜ್ಯಪಾಲರೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೇರವಾಗಿ ಪತ್ರ ಕೂಡ ಬರೆದಿದ್ದರು. 2017ರ ಫೆ.6 ರಿಂದ ಬೆಂಗಳೂರು ವಿವಿ ಕುಲಪತಿ ಹುದ್ದೆ ಖಾಲಿ ಇದೆ.
2017ರ ಜ.10ರಂದು ಖಾಲಿಯಾಗಿದ್ದ ಮೈಸೂರು ವಿವಿ ಕುಲಪತಿ ಹುದ್ದೆಗೆ ಕಾಯಂ ಕುಲಪತಿ ಬಂದಿಲ್ಲ. 2017ರ ಜುಲೈ 25ರಿಂದ ತುಮಕೂರು ವಿವಿಯ ಆಡಳಿತವನ್ನು ಹಂಗಾಮಿ ಕುಲಪತಿಗಳೇ ನೋಡಿಕೊಳ್ಳುತ್ತಿದ್ದಾರೆ. 2017ರ ಜುಲೈ 13ರಂದು ಖಾಲಿಯಾಗಿದ್ದ ರಾಜೀವ್‌ಗಾಂಧಿ ಆರೊಗ್ಯ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಕಾಯಂ ವಿಸಿ ನೇಮಿಸಲು ಸರ್ಕಾರ ಹಾಗೂ ರಾಜ್ಯಪಾಲರಿಗೆ ಇನ್ನೂ ಸಾಧ್ಯವಾಗಿಲ್ಲ. 2017ರ ಡಿ.31ರಂದು ಖಾಲಿಯಾಗಿದ್ದ ದಾವಣಗೆರೆ ವಿವಿ ಕುಲಪತಿ ಹುದ್ದೆಗೆ ಕಾಯಂ ವಿಸಿ ಬಂದಿಲ್ಲ. ಹುಬ್ಬಳ್ಳಿಯ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲೂ ಕಾಯಂ ಕುಲಪತಿ ಇಲ್ಲ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಹುದ್ದೆ ಇತ್ತೀಚೆಗಷ್ಟೆ ತೆರವಾಗಿದೆ. ಜಾನಪದ ವಿವಿಯ ಕುಲಪತಿಗಳು ರಾಜೀನಾಮೆ ನೀಡಿ ತೆರವಾಗಿದ್ದ ಹುದ್ದೆಗೆ ವಾರದಿಂದೀಚೆಗಷ್ಟೇ ಭರ್ತಿ ಮಾಡಿದ್ದಾರೆ.
ಕಾಯಂ ಕುಲಪತಿ ಇಲ್ಲದೇ ವಿವಿಯ ಆಡಳಿತ ಮತ್ತು ಶೈಕ್ಷಣಿಕ ಗುಣಮಟ್ಟ ನಿರೀಕ್ಷೆ ಸಾಧ್ಯವಿದೆಯೇ? ರಾಜ್ಯದಲ್ಲಿ ಸರ್ಕಾರಿ, ಖಾಸಗಿ ಹಾಗೂ ಡೀಮ್ಡ್ ವಿಶ್ವವಿದ್ಯಾಲಯ ಸೇರಿ 54 ವಿಶ್ವವಿದ್ಯಾಲಯಗಳಿವೆ. ಖಾಸಗಿ ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ವಿಶ್ವದರ್ಜೆಯ ಬೋಧನ ವಿಧಾನ ಮತ್ತು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಉನ್ನತ ವ್ಯಾಸಂಗಕ್ಕೆ ಸಾಕಷ್ಟು ಒತ್ತು ನೀಡಲಾಗುತ್ತಿದೆ. ದೇಶ ವಿದೇಶಗಳಿಂದಲೂ ವಿದ್ಯಾರ್ಥಿಗಳು ಜ್ಞಾನಾರ್ಜನೆಗಾಗಿ ಈ ವಿಶ್ವವಿದ್ಯಾಲಯಕ್ಕೆ ಬರುತ್ತಾರೆ. ರಾಜ್ಯ ಸರ್ಕಾರದ ವಿಶ್ವವಿದ್ಯಾಲಯದಲ್ಲಿ ಕುಲಪತಿ ನೇಮಕ ವಿಳಂಬದ ಜತೆಗೆ ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ಶೇ.50ರಷ್ಟು ಖಾಯಂ ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕರ ಹುದ್ದೆ ಖಾಲಿಯಾಗಿದೆ. ವಿಶ್ವವಿದ್ಯಾಲಯಕ್ಕೆ ಕುಲಪತಿ ನೇಮಿಸುವ ಪರಮಾಧಿಕಾರವನ್ನು ರಾಜ್ಯಪಾಲರಿಂದ ವ್ಯವಸ್ಥಿತವಾಗಿ ತನ್ನ ತೆಕ್ಕೆಗೆ ಪಡೆದ ರಾಜ್ಯ ಸರ್ಕಾರ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಪೂರಕವಾಗಿ ಬೋಧನೆಗೆ ಬೇಕಾದ ಪ್ರಾಧ್ಯಾಪಕ ಮತ್ತು ಸಹ ಪ್ರಾಧ್ಯಾಪಕರ ನೇಮಕಾತಿಯನ್ನು ಮರೆತೇಬಿಟ್ಟಿದೆ.
ಸಾರ್ವತ್ರಿಕ ಶಿಕ್ಷಣ ಹಾಗೂ ಸ್ವತಂತ್ರ ಆಡಳಿತದ ಸದುದ್ದೇಶದಿಂದಲೇ ವಿವಿಗಳು ಆರಂಭ ವಾಗಿದ್ದು. ಅಲ್ಲಿನ ಆಡಳಿತ ವ್ಯವಸ್ಥೆ, ಶೈಕ್ಷಣಿಕ ಜವಾಬ್ದಾರಿ ಎಲ್ಲವನ್ನು ಕುಲಪತಿಗಳೇ ನಿರ್ವಹಣೆ ಮಾಡುತ್ತಿದ್ದರು. ಕುಲಸಚಿವರು, ಸಿಂಡಿಕೇಟ್ ಸದಸ್ಯರು, ವಿದ್ಯಾವಿಷಯಕ ಪರಿಷತ್ತಿನ ಸದಸ್ಯರು ಇದಕ್ಕೆ ಬೆನ್ನೆಲುಬಾಗಿ ನಿಲ್ಲುತ್ತಿದ್ದರು. ಇಂದು ರಾಜ್ಯ ವಿಶ್ವವಿದ್ಯಾಲಯಗಳ ಚಿತ್ರಣವೇ ಸಂಪೂರ್ಣ ಬದಲಾಗಿದೆ. ತಾಂತ್ರಿಕ ವಿಶ್ವವಿದ್ಯಾಲಯವೂ ಇದಕ್ಕೆ ಹೊರತಾಗಿಲ್ಲ. ಶಿಕ್ಷಣ, ಜ್ಞಾನ, ವಿಜ್ಞಾನ, ಹೊಸ ಸಂಶೋಧನೆಯ ಕೇಂದ್ರವಾಗಬೇಕಿದ್ದ ವಿಶ್ವವಿದ್ಯಾಲಯಗಳು ಜಾತಿ ಮೇಲಾಟ, ರಾಜಕೀಯದ ಕೆಸರೆರಚಾಟ ಮತ್ತು ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿ ಹೋಗಿವೆ.
ರಾಜ್ಯದ ಪ್ರಮುಖ ಮೂರು ವಿಶ್ವವಿದ್ಯಾಲಯದ ಕುಲಪತಿಗಳ ವಿರುದ್ಧ ಗಂಭೀರ ಆರೋಪ ಬಂದಿತ್ತು. ಇದರ ತನಿಖೆಗೆ ನಿವೃತ್ತ ನ್ಯಾಯಾಧೀಶರ ಸಮಿತಿಯನ್ನು ರಚನೆ ಮಾಡಲಾಗಿತ್ತು. ನಿವೃತ್ತ ನ್ಯಾಯಾಧೀಶರು ವರದಿಯನ್ನು ಸರ್ಕಾರಕ್ಕೆ ಒಪ್ಪಿಸಿದ್ದಾರೆ. ಸರ್ಕಾರದಿಂದ ಕ್ರಮ ಮಾತ್ರ ಆಗಿಲ್ಲ.
ನೇಮಕಾತಿ ಅಧಿಕಾರಕ್ಕೂ ಕೊಕ್ಕೆ: ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ, ಗ್ರಂಥಪಾಲಕ, ತತ್ಸಮಾನ ಹುದ್ದೆಗಳ ನೇಮಕಾತಿಯನ್ನು ಕುಲಪತಿಗಳೇ ಮಾಡಬಹುದಾದ ಅಧಿಕಾರದಲ್ಲಿ ತಿದ್ದುಪಡಿ ತರಲಾಗಿದೆ. ಇದನ್ನು ರಾಜ್ಯ ಉನ್ನತ ಶಿಕ್ಷಣ ಪರಿಷತ್ ವ್ಯಾಪ್ತಿಗೆ ತರಲಾಗಿದೆ. ನೇಮಕಾತಿ ಮಂಡಳಿಯಲ್ಲಿ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಸಿದ್ಧಪಡಿಸುವ ವಿಷಯವಾರು ತಜ್ಞರು ಇರುತ್ತಾರೆ. ರಾಜ್ಯ ಸರ್ಕಾರದ ಶಿಫಾರಸ್ಸಿನಂತೆ ರಾಜ್ಯಪಾಲರು ನಾಲ್ವರು ವಿಷಯ ತಜ್ಞರ ನಾಮನಿರ್ದೇಶನ ಮಾಡಬೇಕು. ನಿಯಮಾನುಸಾರವಾಗಿ ಮಂಡಳಿಯ ಆಯ್ಕೆ ಮಾಡಿದ ಅಭ್ಯರ್ಥಿಗಳ ಪಟ್ಟಿಯನ್ನು ಕಾರ್ಯನಿರ್ವಾಹಕ ಪರಿಷತ್ತಿಗೆ ಕಳುಹಿಸಬೇಕು.
ಪರಿಷತ್ತು ಆ ಪಟ್ಟಿಯನ್ನು ಪರಿಶೀಲಿಸಿ ಅನುಮೋದನೆ ಮಾಡಿದ ನಂತರವೇ ನೇಮಕಾತಿ ನಡೆಯುತ್ತದೆ. ಒಂದು ವೇಳೆ ಮಂಡಳಿ ಮತ್ತು ಪರಿಷತ್ತಿನ ನಡುವೆ ಅಭಿಪ್ರಾಯ ಬೇಧ ವ್ಯಕ್ತವಾದರೆ, ಸರ್ಕಾರ ತಾನಾಗಿಯೇ ಅದನ್ನು ತಿಳಿದುಕೊಂಡು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಮತ್ತು ಇದೇ ಅಂತಿಮವಾಗಿರುತ್ತದೆ. ಇಲ್ಲಿ ಕುಲಪತಿ ಅಧಿಕಾರವನ್ನು ಸಂಪೂರ್ಣವಾಗಿ ಮೊಟಕುಗೊಳಿಸಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ. ಕುಲಪತಿ ನೇಮಕ, ಪ್ರಾಧ್ಯಾಪಕ, ಸಹಪ್ರಾಧ್ಯಾಪಕ ನೇಮಕ ಎಲ್ಲವೂ ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಬರಲಿದೆ. ಬೆಳಗಾವಿ ಅಧಿವೇಶನದಲ್ಲಿ ರಾಜ್ಯ ಉನ್ನತ ಶಿಕ್ಷಣ ಸಚಿವರು ಮಂಡಿಸಿದ ಈ ತಿದ್ದುಪಡಿ ಮಸೂದೆಯನ್ನು ವಿಧಾನಸಭೆ ಅಂಗೀಕರಿಸಿತ್ತು. ವಿಧಾನ ಪರಿಷತ್ತನಲ್ಲಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲೇ ತಿದ್ದುಪಡಿ ವಿಧೇಯಕದ ಪರಿಶೀಲನಾ ಸಮಿತಿ ರಚನೆ ಮಾಡಲಾಗಿತ್ತು. ಆಡಳಿತಾರೂಢ ಕಾಂಗ್ರೆಸ್, ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ನ ಮೇಲ್ಮನೆ ಸದಸ್ಯರು ಈ ಸಮಿತಿಯಲ್ಲಿ ಸದಸ್ಯರಾಗಿದ್ದರು. ಮೂರು ಪಕ್ಷದವರು ಸೇರಿಕೊಂಡು ತಿದ್ದುಪಡಿಗೆ ಬೇಕಾದ ಶಿಫಾರಸ್ಸು ಮಾಡಿದ್ದಾರೆ. ಅದರಂತೆ, ಮೇಲ್ಮನೆಯಲ್ಲೂ ಅಂಗೀಕಾರಗೊಂಡಿದೆ. ತಿದ್ದುಪಡಿ ಮಸೂದೆಯ ಬಗ್ಗೆ ಸಾರ್ವಜನಿಕ ಚರ್ಚೆಯೇ ಆಗಿಲ್ಲ. ವಿಶ್ರಾಂತ ಕುಲಪತಿಗಳಲ್ಲಿ ಕೆಲವರ ಸಲಹೆ ಪಡೆದುಕೊಂಡಿದೆ. ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ.
ಇಷ್ಟೆಲ್ಲದರ ನಡುವೆಯೂ ರಾಜ್ಯ ಸರ್ಕಾರ ವಿಶ್ವವಿದ್ಯಾಲಯಗಳಲ್ಲಿ ಕುಲಪತಿ ಸೇರಿ ಬೋಧಕ, ಬೋಧಕೇತರ ಸಿಬ್ಬಂದಿ ನೇಮಕವನ್ನು ತನ್ನ ಸುಪರ್ದಿಗೆ ಪಡೆಯುವ ಯತ್ನದಲ್ಲಿ ಭಾಗಶಃ ಯಶಸ್ವಿಯಾಗಿದೆ. ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ(ತಿದ್ದುಪಡಿ) ವಿಧೇಯಕಕ್ಕೆ ಉಭಯ ಸದನಗಳಲ್ಲಿ ಒಪ್ಪಿಗೆ ಸಿಕ್ಕಿದೆಯಾದರೂ, ರಾಜ್ಯಪಾಲರು ಇನ್ನೂ ಅಂಕಿತ ಹಾಕಿಲ್ಲ. ರಾಜ್ಯಪಾಲರು ಕಾಯ್ದೆಯನ್ನು ಒಪ್ಪಿಕೊಳ್ಳುತ್ತಾರೋ ಅಥವಾ ತಿರಸ್ಕಾರಿಸುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.
– ರಾಜು ಖಾರ್ವಿ ಕೊಡೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Mangaluru: ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.