ತ್ರಿವಳಿ ತಲಾಖ್: ಹಸ್ತಕ್ಷೇಪವಲ್ಲ ಸ್ತ್ರೀ ಶೋಷಣೆ ತಡೆಯುವ ಕಾನೂನಾಗಲಿ
Team Udayavani, Dec 22, 2017, 7:41 AM IST
ಯಾವ ಸಂವಿಧಾನ ಪರ್ಸನಲ್ ಲಾ ಅಧಿಕಾರ ನೀಡಿದೆಯೋ, ಅದೇ ಸಂವಿಧಾನ ಮುಸಲ್ಮಾನ ಮಹಿಳೆಯರೂ ಸೇರಿದಂತೆ
ಎಲ್ಲಾ ನಾಗರಿಕರಿಗೆ ಸಮಾನತೆಯ ಹಕ್ಕು ನೀಡಿದೆ. ಶೋಷಣೆಯ ವಿರುದ್ಧ ಹೋರಾಡುವ ಅಧಿಕಾರ ನೀಡಿದೆ. ಈ ಹಿಂದೆಯೂ ಸುಪ್ರಿಂ ಕೋರ್ಟ್ ತನ್ನ ಆದೇಶಗಳಲ್ಲಿ ಸಂವಿಧಾನದತ್ತ ಮೂಲಭೂತ ಅಧಿಕಾರಕ್ಕೆ ಧಕ್ಕೆ ತರುವ ಯಾವುದೇ ಅಂಶ ಧಾರ್ಮಿಕ ಕಾನೂನಿನಲ್ಲಿ ಇದ್ದರೆ ಅದು ಮಾನ್ಯವಲ್ಲ ಎಂದು ಸ್ಪಷ್ಟಪಡಿಸಿದೆ.
ತ್ರಿವಳಿ ತಲಾಖ್ ವಿರುದ್ಧ ಕೊನೆಗೂ ಕೇಂದ್ರ ಸರ್ಕಾರ ಕಾನೂನು ಜಾರಿಗೆ ತರುವ ಇಚ್ಛಾಶಕ್ತಿ ತೊರಿಸಿದೆ. ಅಕಾರಣವಾಗಿ ಮುಸ್ಲಿಂ ಸ್ತ್ರೀಯರ ಬದುಕನ್ನು ಅತಂತ್ರಗೊಳಿಸುವ ಈ ಪಿಡುಗನ್ನು ಧಾರ್ಮಿಕ ವಿಷಯದಲ್ಲಿ ಹಸ್ತಕ್ಷೇಪಕ್ಕಿಂತ ಸ್ತ್ರೀ ಶೋಷಣೆಯ ಚೌಕಟ್ಟಿನಲ್ಲಿ ನೋಡಬೇಕಾಗಿದೆ. ಸುಧಾರಣೆಗಳು ಎಲ್ಲಾ ಸಮಾಜ, ದೇಶ ಅಷ್ಟೇಕೆ ನಮ್ಮ ಜೀವನದ ಅವಿಭಾಜ್ಯ ಅಂಗ. ಜೀವನ ನಿತ್ಯ ನಿರಂತರ ವಾಗಿರಬೇಕು, ಅದು ನಿಂತ ನೀರಾಗಬಾರದು. ಒಳ್ಳೆಯದನ್ನು ಪಡೆದುಕೊಳ್ಳುವುದು, ಅಪ್ರಾಸಂಗಿಕವೆನ್ನಿಸಿದ್ದನ್ನು ಕೈ ಬಿಡುವುದು ಪ್ರಗತಿಯ ಲಕ್ಷಣ. ನೂರಾರು ವರ್ಷಗಳ ಹಿಂದೆ ಮಕ್ಕಳು ವಯಸ್ಕ ರಾಗುವ ಮೊದಲೇ ಮದುವೆ ಮಾಡಲಾಗುತ್ತಿತ್ತು ಎಂದು ಇಪ್ಪತ್ತೂಂದನೇ ಶತಮಾನದಲ್ಲಿ ಅದನ್ನು ಅನುಸರಿಸುವುದು ಸಾಧ್ಯವೇ? ಹಿಂದೂ ಸಮಾಜದಲ್ಲಿ ವರದಕ್ಷಿಣೆ, ವಿಧವಾ ವಿವಾಹ, ಸತಿ ಪದ್ಧತಿಯಂತಹ ಅನೇಕ ರೀತಿ ರಿವಾಜುಗಳ ವಿಷಯದಲ್ಲಿ ಬದಲಾವಣೆ ಕಂಡಿಲ್ಲವೇ? ಮುಸ್ಲಿಂ ಸಮಾಜದಲ್ಲಿ ಟ್ರಿಪಲ್ ತಲಾಖ್‌ನಿಂದ ಮಹಿಳೆಯರ ಮೇಲೆ ಆಗುವ ಸಾಮಾಜಿಕ ಅನ್ಯಾಯದ ಕುರಿತು ಕೆಲವು ಮಹಿಳೆಯರು ಮತ್ತು ಮಹಿಳಾ ಸಂಘಟನೆಗಳು ನ್ಯಾಯಾಲಯಗಳಲ್ಲಿ, ಇತರ ಸಾಮಾಜಿಕ ವೇದಿಕೆಗಳಲ್ಲಿ ತಮ್ಮ ಅಳಲನ್ನು ತೋಡಿಕೊಳ್ಳುತ್ತಲೇ ಬಂದಿದ್ದಾರೆ. ಆದರೆ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ತುಳಿತಕ್ಕೊಳಗಾದ ಮಹಿಳೆಯರ ದನಿಯಾಗುವ ಬದಲು ಪುರುಷ ಪಕ್ಷಪಾತಿಯಂತೆ ನಡೆದುಕೊಳ್ಳುತ್ತಿರುವುದು ವಿಷಾದಕರ.
ರಾಜಕೀಯ ಲಾಭ ನಷ್ಟದ ಲೆಕ್ಕಾಚಾರ
ಮುಸ್ಲಿಂ ಮಹಿಳೆಯರಲ್ಲಿ ವಿವಾಹ, ತಲಾಖ್, ಮತ್ತಿತರ ವಿಚಾರಗಳಲ್ಲಿ ಹಕ್ಕುಗಳಿಂದ ವಂಚಿತರಾಗಿಸುವ ಪುರುಷ ಪಕ್ಷಪಾತ ಧೋರಣೆಯ ಕುರಿತು ತೀವ್ರ ಅಸಮಾಧಾನವಿದೆ ಎನ್ನುವುದು ಆಗಾಗ್ಗೆ ಮುನ್ನಲೆಗೆ ಬರುತ್ತಿದೆ. ಶಿಕ್ಷಿತ ಮುಸ್ಲಿಂ ಮಹಿಳೆಯರು ಆಗಾಗ್ಗೆ ಅನ್ಯಾಯದ ವಿರುದ್ಧ ದನಿ ಎತ್ತಿದರೂ ಧಾರ್ಮಿಕ ನಾಯ ಕರ ಬಿಗಿ ಹಿಡಿತದಿಂದಾಗಿ ಹೆಚ್ಚೇನೂ ಸುಧಾರಣೆ ಸಾಧ್ಯವಾಗಿಲ್ಲ. ರಾಜಕೀಯ ನಾಯಕರು, ಮುಸ್ಲಿಂ ಧಾರ್ಮಿಕ ನಾಯಕರ ಕೆಂಗಣ್ಣಿಗೆ ಗುರಿಯಾಗುವ ಭಯದಿಂದ, ರಾಜಕೀಯ ಲಾಭ ನಷ್ಟಗಳ ಲೆಕ್ಕಾಚಾರ ಹಾಕುತ್ತಾ ಮೌನವಾಗಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಪಾಕಿಸ್ಥಾನ ಸಹಿತ ವಿಶ್ವದ ಮುಸ್ಲಿಂ ರಾಷ್ಟ್ರಗಳಲ್ಲೂ ತ್ರಿವಳಿ ತಲಾಖ್ ನಿಷೇಧಿಸಲ್ಪಟ್ಟಿರುವಾಗ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಸುಧಾರಣೆಯನ್ನು ವಿರೋಧಿಸುತ್ತಾ ಮುಸ್ಲಿಂ ಸಮಾಜದ ವಿಷಯದಲ್ಲಿ ಅನಗತ್ಯ ಹಸ್ತಕ್ಷೇಪ ಎಂದು ಆರೋಪಿಸುತ್ತಿರುವುದು ಸರಿಯಲ್ಲ.
ನ್ಯಾಯಾಲಯಗಳು ಮತ್ತು ಸರ್ಕಾರ ತಮ್ಮ ಧಾರ್ಮಿಕ ವಿಷಯದಲ್ಲಿ ಹಸ್ತಕ್ಷೇಪ ನಡೆಸುವುದು ತಮ್ಮ ಸಂವಿಧಾನದತ್ತ
ಹಕ್ಕಿನ ಉಲ್ಲಂಘನೆ ಎನ್ನುವಂತೆ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಮತ್ತು ಮುಸ್ಲಿಂ ಧಾರ್ಮಿಕ ನಾಯಕರು ವಾದಿಸುತ್ತಾ ಬಂದಿದ್ದಾರೆ. ಶಿಕ್ಷಿತ ಮುಸ್ಲಿಮರು ಈ ಕುರಿತು ಚಿಂತನ-ಮಂಥನ ನಡೆಸಲಿ. ತಮ್ಮ ಸಹೋದರಿಯರು. ಮಕ್ಕಳು ಹಲವಾರು ವರ್ಷ ಕಾಲ ಸಂಸಾರ ನಡೆಸಿದ ನಂತರ ಯಾವುದೋ ಒಂದು ದಿನ ಆಕೆಯನ್ನು ಮನೆಯಿಂದ ಹೊರಗಟ್ಟಿ ನಿನಗೆ ನಾನು ತಲಾಖ್ ನೀಡಿರುವೆ, ನಿನ್ನ ಮೇಲೆ ನನ್ನ ಯಾವುದೇ ಜವಾಬ್ದಾರಿ ಇಲ್ಲ ಎಂದರೆ ಹೇಗಾಗುತ್ತದೆ? ಆತನಿಂದ ಆಕೆ ಪಡೆದ ಸಂತಾನದ ಮುಂದಿನ ಭವಿಷ್ಯ ಹೇಗೆ? ಇದು ಅನೇಕ ಸಾಮಾಜಿಕ ಸಮಸ್ಯೆಗಳಿಗೆ ದಾರಿ ಯಾಗುವುದಿಲ್ಲವೇ? ಸರಿಯಾದ ಶಿಕ್ಷಣ, ಮಾರ್ಗದರ್ಶನವಿಲ್ಲದ ಮಕ್ಕಳು ಸಮಾಜ ಕಂಟಕರಾದರೆ ಅದಕ್ಕೆ ಯಾರು ಜವಾಬ್ದಾರರು?
ದೇಶದ ಎಲ್ಲಾ ಪ್ರಜೆಗಳಿಗೂ ಗೌರವಯುತವಾದ ಜೀವನ ನಡೆಸುವ ಹಕ್ಕಿದೆ. ಅದನ್ನು ದೊರಕಿಸಿಕೊಡಬೇಕಾದ ಜವಾಬ್ದಾರಿ ಸರ್ಕಾರದ ಮೇಲಿದೆ. ಧಾರ್ಮಿಕ ಕಾನೂನುಗಳು ಅವರ ಧಾರ್ಮಿಕ ನಂಬಿಕೆಗನುಗುಣವಾಗಿ ನ್ಯಾಯಯುತ ಜೀವನ ನಡೆಸಲು ಕೊಟ್ಟ ಅಧಿಕಾರ. ಅದು ಇತರರ ಶೋಷಣೆಗೆ ಕಾರಣ ವಾಗುತ್ತದೆಯಾದರೆ ಸರ್ಕಾರ ಮೂಕಪ್ರೇಕ್ಷಕನಾಗಿ ಇರುವಂತಿಲ್ಲ. ಅನೇಕ ಸ್ತ್ರೀಯರೊಂದಿಗೆ ಮದುವೆ, ಇಳಿವಯಸ್ಸಿನ ಪತ್ನಿಗೆ ತಲಾಖ್ ಕೊಟ್ಟು ಅವರನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅಸಹಾಯರನ್ನಾಗಿಸುವುದನ್ನು ಯಾವುದೇ ಧರ್ಮ ಒಪ್ಪದು. ಅದು ಕೇವಲ ಧಾರ್ಮಿಕ ಗ್ರಂಥಗಳ ತಪ್ಪು ವ್ಯಾಖ್ಯಾನ ಮತ್ತು ದುರುಪಯೋಗವಷ್ಟೆ. ಕಾನೂನಿನ ದೃಷ್ಟಿಯಲ್ಲಿ ಮಾತ್ರವಲ್ಲದೆ ಸಾಮಾಜಿಕ ದೃಷ್ಟಿಯಲ್ಲೂ ಒಂದು ಅಪರಾಧ.
ಧಾರ್ಮಿಕ ಅಧಿಕಾರವಲ್ಲ
ಧಾರ್ಮಿಕ ಕಾನೂನಿನ ನೆಪವೊಡ್ಡಿ ಸ್ತ್ರೀಯರ ಮೇಲೆ ನಡೆಸು ತ್ತಿರುವ ದೌರ್ಜನ್ಯ ನಿಲ್ಲಿಸಬೇಕಾದ ಜವಾಬ್ದಾರಿ ಸಂವಿಧಾನ ಮತ್ತು ಸಂವಿಧಾನದ ಆಶಯಕ್ಕನುಗುಣವಾಗಿ ಕರ್ತವ್ಯ ನಿರ್ವಹಿಸುವ ಸರ್ಕಾರಗಳ ಮೇಲಿದೆ. ದೇಶದ ಒಂದು ದೊಡ್ಡ ವರ್ಗವನ್ನು ಹಿಂದುಳಿಯಲು ಬಿಟ್ಟು ಮಿಕ್ಕುಳಿದ ದೇಶ ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ನಮ್ಮನ್ನು ನಮ್ಮಷ್ಟಕ್ಕೇ ಬಿಡಿ ಎಂದು ಆಧುನಿಕ ಜಗತ್ತಿನಲ್ಲಿ ಯಾರೂ ಹೇಳುವಂತಿಲ್ಲ. ಮುಸ್ಲಿಂ ಧಾರ್ಮಿಕ ಕಾನೂನಿನಲ್ಲಿ ಹೇಳಿರುವಂತೆ ಕಳ್ಳತನ ಮಾಡಿದವನ ಕೈ ಕತ್ತರಿಸುವ, ಅತ್ಯಾಚಾರಿಗೆ ಕಲ್ಲು ಹೊಡೆದು ಸಾಯಿಸುವ ಕ್ರೂರ ಶಿಕ್ಷೆಗಳಿಗೆ ಆಧುನಿಕ ಪ್ರಜಾತಾಂತ್ರಿಕ ಕಾನೂನಿನಲ್ಲಿ ಹೇಗೆ ಅವಕಾಶವಿಲ್ಲವೋ, ಮಹಿಳೆಯರನ್ನು ಶೋಷಿಸುವ ತ್ರಿವಳಿ ತಲಾಖ್‌ಗೂ ಅವಕಾಶ ನೀಡುವುದು ಸರಿಯಲ್ಲ. ಮುಸ್ಲಿಂ ಮಹಿಳೆಯರು ಸ್ವತಃ ತಮ್ಮ ಹಕ್ಕಿಗಾಗಿ ಮುಂದೆ ಬರಲಿ.
ಯಾವ ಸಂವಿಧಾನ ಮುಸ್ಲಿಂ ಮತಾವಲಂಬಿಗಳಿಗೆ ಪರ್ಸನಲ್ ಲಾ ಅಧಿಕಾರ ನೀಡಿದೆಯೋ, ಅದೇ ಸಂವಿಧಾನ ಮುಸ್ಲಿಂ ಮಹಿಳೆಯರೂ ಸೇರಿದಂತೆ ಎಲ್ಲಾ ನಾಗರಿಕರಿಗೆ ಸಮಾನತೆಯ ಹಕ್ಕು ನೀಡಿದೆ. ಶೋಷಣೆಯ ವಿರುದ್ಧ ಹೋರಾಡುವ ಅಧಿಕಾರ ನೀಡಿದೆ. ಈ ಹಿಂದೆಯೂ ಸುಪ್ರಿಂ ಕೋರ್ಟ್ ತನ್ನ ಆದೇಶಗಳಲ್ಲಿ ಸಂವಿಧಾನದತ್ತ ಮೂಲಭೂತ ಅಧಿಕಾರಕ್ಕೆ ಧಕ್ಕೆ ತರುವ ಯಾವುದೇ ಅಂಶ ಧಾರ್ಮಿಕ ಕಾನೂನಿನಲ್ಲಿ ಇದ್ದರೆ ಅದು ಮಾನ್ಯವಲ್ಲ ಎಂದು ಸ್ಪಷ್ಟಪಡಿಸಿದೆ. ಯಾವುದೇ ಸ್ತ್ರೀ ಹಿತಾಸಕ್ತಿಗಳಿಗೆ ಧಕ್ಕೆ ತರುವ ಅಥವಾ ಆಕೆಯನ್ನು ಸಾಮಾಜಿಕ ನ್ಯಾಯದಿಂದ ವಂಚಿತಳಾಗಿಸುವ ಅಂಶ ವನ್ನು ಇನ್ನೊಬ್ಬರ ಧಾರ್ಮಿಕ ಕಾಯಿದೆಯ ಅಡಿಯಲ್ಲಿ ನೀಡಿರುವ ಅಧಿಕಾರ ಎಂದು ತಿಳಿಯು ವಂತಿಲ್ಲ. ಮುಸ್ಲಿಂ ಸಮಾಜದ ಸ್ಥಿತಿ ಗತಿಗಳನ್ನು ಅಧ್ಯಯನ ಮಾಡಲು ನೇಮಕವಾಗಿದ್ದ ಸರ್ಚಾ ಕಮಿಟಿ ಮುಸ್ಲಿಂ ಸಮಾಜದಲ್ಲಿ ಇರುವ ಬಡತನ, ಶಿಕ್ಷಣದಲ್ಲಿ ಹಿಂದುಳಿದಿ ರುವಿಕೆಯನ್ನು ಗುರುತಿಸಿದೆ. ಈ ಹಿಂದುಳಿದಿರುವಿಕೆಗೆ ಮುಖ್ಯ ಕಾರಣ ಅದು ಹೊದ್ದಿರುವ ಸುಧಾರಣಾ ವಿರೋಧಿ ಕಂಬಳಿ. ಮೊದಲು ಆ ಕಂಬಳಿಯನ್ನು ಕಿತ್ತೆಸೆಯುವಂತಾಗಲಿ.
ಬೈಂದೂರು ಚಂದ್ರಶೇಖರ ನಾವಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.