ಟರ್ಕಿ ಅಧ್ಯಕ್ಷ ರೆಸಿಪ್ ತಯ್ಯಿಪ್ ಎರ್ಡೋಗನ್ ಮುಸ್ಲಿಂ ಜಗತ್ತಿನ ಅಧಿಪತಿಯಾಗುವ ಕನಸು
ಅಭಿಮತ: ಸೌದಿ ವಿರುದ್ಧ ಟರ್ಕಿಯ ಮಸಲತ್ತು
Team Udayavani, Aug 24, 2020, 12:01 PM IST
ಇಸ್ಲಾಮಿಕ್ ಜಗತ್ತಿನ ಅನಭಿಷಿಕ್ತ ದೊರೆಯಾಗಿರುವ ಸೌದಿ ಅರೇಬಿಯಾಗೆ ಕಳೆದ ಕೆಲವು ಸಮಯದಿಂದ ಸವಾಲೊಡ್ಡಲು ಹಲವು ವಿಧದ ತಂತ್ರ ರಚಿಸುತ್ತಲೇ ಇದೆ ಟರ್ಕಿ.
‘ಟರ್ಕಿ ಕೋಳಿ’ ಕೂಗಿದರೆ ಇಸ್ಲಾಮಿಕ್ ಜಗತ್ತಿನಲ್ಲಿ ಸೂರ್ಯ ಹುಟ್ಟುತ್ತಾನೆ ಎಂದು ನಂಬಿರುವ ಪಾಕಿಸ್ಥಾನ, ಮಲೇಷ್ಯಾದಂಥ ಕೆಲವು ರಾಷ್ಟ್ರಗಳು ಸಹ ಈಗ ಟರ್ಕಿ ಅಧ್ಯಕ್ಷ ಎರ್ಡೋಗನ್‌ರ ತಾಳಕ್ಕೆ ತಕ್ಕಂತೆ ಕುಣಿಯಲಾರಂಭಿಸಿವೆ.
ಹೌದು. ಟರ್ಕಿ ಅಧ್ಯಕ್ಷ ರೆಸಿಪ್ ತಯ್ಯಿಪ್ ಎರ್ಡೋಗನ್ ಮುಸ್ಲಿಂ ಜಗತ್ತಿನ ಅಧಿಪತಿಯಾಗುವ ಕನಸು ಕಾಣುತ್ತಿದ್ದಾರೆ. ಮುಸ್ಲಿಂ ಉಮ್ಮಾದ (ಸಮುದಾಯ) ಖಲೀಫನಾಗಿ ಮೆರೆಯಬೇಕು, ಅರಬ್ಬರ ಹೊರತಾದ ಸಾಮ್ರಾಜ್ಯ ಕಟ್ಟಬೇಕು ಎಂಬ ದುರುದ್ದೇಶವನ್ನು ಈಡೇರಿಸಿಕೊಳ್ಳಲು ಎರ್ಡೋಗನ್ ಹರಸಾಹಸಪಡುತ್ತಿದ್ದಾರೆ.
ಇಲ್ಲಿಯವರೆಗೆ ಸೌದಿ ಅರೇಬಿಯಾವು ಇಸ್ಲಾಮಿಕ್ ದೇಶಗಳಿಗೆ ಅಪರಿಮಿತ ಧನಸಹಾಯ, ಅವುಗಳ ಹಿತಾಸಕ್ತಿಗಾಗಿ ಜಾಗತಿಕ ವೇದಿಕೆಯಲ್ಲಿ ಹೋರಾಟ ಮುಂತಾದ ಕ್ರಮಗಳ ಮೂಲಕ ತನ್ನ ನಾಯಕತ್ವವನ್ನು ಸಾಬೀತುಪಡಿಸಿದೆ.
ಮಧ್ಯ ಪ್ರಾಚ್ಯದಲ್ಲಿ ಶಾಂತಿ, ಸಾಮರಸ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲೂ ಅಪಾರ ಕೊಡುಗೆ ನೀಡಿದೆ. ಆದರೆ, ಈಗ ಸೌದಿ ಅರೇಬಿಯಾದ ಹಿಡಿತದಲ್ಲಿರುವ ಇಸ್ಲಾಮಿಕ್ ದೇಶಗಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳಲು ಟರ್ಕಿ ಶತಾಯಗತಾಯ ಪ್ರಯತ್ನ ನಡೆಸುತ್ತಿದೆ.
ತನ್ನ ಅಜೆಂಡಾ ಸಾಧನೆಗಾಗಿ ಸೌದಿ ಅರೇಬಿಯಾವನ್ನು ದೂರ ತಳ್ಳಿ ಉಳಿದ ಇಸ್ಲಾಮಿಕ್ ರಾಷ್ಟ್ರಗಳನ್ನು ಒಂದುಗೂಡಿಸುವ ಕೆಲಸಕ್ಕೆ ಎರ್ಡೋಗನ್ ಕೈಹಾಕಿದ್ದಾರೆ. ಇದಕ್ಕೆ ಕುತಂತ್ರಿ ಚೀನ ಕೂಡ ಸದ್ದಿಲ್ಲದೇ ಸಾಥ್ ನೀಡುತ್ತಿದೆ. ಕತಾರ್ ಅನ್ನು ತನ್ನ ಜಾಲಕ್ಕೆ ಸೇರಿಸಿಕೊಳ್ಳುವಲ್ಲಿ ಟರ್ಕಿ ಈಗಾಗಲೇ ಬಹುತೇಕ ಯಶಸ್ವಿಯಾಗಿದೆ.
ಸಿರಿಯಾ ಮತ್ತು ಲಿಬಿಯಾಗಳಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರು ನಡೆಸುತ್ತಿರುವ ಹಿಂಸಾಚಾರ ಮತ್ತು ಅಸ್ಥಿರತೆಗೂ ಟರ್ಕಿಯದ್ದೇ ಪ್ರಾಯೋಜಕತ್ವವಿದೆ. ಪಾಶ್ಚಿಮಾತ್ಯ ದೇಶಗಳ ಸೇನೆ ದಾಳಿ ನಡೆಸಿದಾಗ ಸಿರಿಯಾ ಮತ್ತು ಇರಾಕ್‌ನಿಂದ ತಪ್ಪಿಸಿಕೊಂಡು ಓಡಿ ಹೋದ ಸಾವಿರಾರು ಐಸಿಸ್ ಉಗ್ರರಿಗೆ ಟರ್ಕಿಯೇ ಆಶ್ರಯ ನೀಡಿ ಸಲಹುತ್ತಿದೆ! ಈಜಿಪ್ಟ್ ನ ಮುಸ್ಲಿಂ ಬ್ರದರ್‌ಹುಡ್‌ಗೆ ಸೇರಿದ 20 ಸಾವಿರ ಮಂದಿಗೂ ಇದೇ ಟರ್ಕಿಯೇ ನೆಲೆ ಕಲ್ಪಿಸಿದೆ ಎನ್ನುವುದು ತಿಳಿದಿರಲಿ. ತನ್ನ ಭೌಗೋಳಿಕ ರಾಜಕೀಯ, ಧಾರ್ಮಿಕ ಅಜೆಂಡಾ ಪೂರ್ಣಗೊಳಿಸುವ ಪ್ರಬಲ ಅಸ್ತ್ರವೇ ಈ ಉಗ್ರರು ಎಂದು ಎರ್ಡೋಗನ್ ನಂಬಿದ್ದಾರೆ.
ಆದರೆ, ಇತಿಹಾಸವನ್ನೊಮ್ಮೆ ಗಮನಿಸಿ ನೋಡಿ. ತಮ್ಮ ಸ್ವಾರ್ಥ ಸಾಧನೆಗಾಗಿ ಹಲವು ದೇಶಗಳು ಉಗ್ರರನ್ನು ಪೋಷಿಸುತ್ತಾ ಬಂದಿವೆ. ಇನ್ನೂ ಕೆಲವು ದೇಶಗಳು ಉಗ್ರರಿಗೆ ನೆಲೆ ಕಲ್ಪಿಸಿ, ಅವರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತಾ, ತಮ್ಮದೇ ಮಣ್ಣಿನಲ್ಲಿ ಕುಳಿತು ಇತರೆ ದೇಶಗಳ ಮೇಲೆ ಯುದ್ಧ ಸಾರುವ ಕೆಲಸಕ್ಕೂ ಬೆಂಬಲವಾಗಿ ನಿಂತಿವೆ.
ಆದರೆ, ಈ ರೀತಿಯಾಗಿ ಭಯೋತ್ಪಾದನೆಗೆ ಮೂಲ ಕಲ್ಪಿಸಿದ ಪ್ರತಿಯೊಂದು ದೇಶವೂ ಸಹ ಈಗ ತಾವು ಹೆಣೆದ ಬಲೆಗೆ ತಾವೇ ಬೀಳುವಂತೆ, ಅದೇ ಧಾರ್ಮಿಕ ತೀವ್ರಗಾಮಿತ್ವದ ಬೆಂಕಿಯಲ್ಲಿ ಬೆಂದು ಬೆಂಡಾಗಿ ಹೋಗಿವೆ. ಶಾಂತಿ-ಸಮೃದ್ಧಿ ತುಂಬಿದ್ದ, ಸುಂದರ ನಾಡುಗಳು ರಕ್ತದೋಕುಳಿಯಲ್ಲಿ ಮಿಂದಿವೆ.
ಇತಿಹಾಸದ ಈ ಪಾಠಗಳು ಇನ್ನೂ ಜೀವಂತವಾಗಿದ್ದರೂ, ಸಿರಿಯಾ, ಇರಾಕ್, ಲಿಬಿಯಾ, ಯೆಮೆನ್‌ನ ಹಾದಿಯಲ್ಲೇ ಟರ್ಕಿಯೂ ಸಾಗುತ್ತಿದೆ. ಪ್ರಜಾಸತ್ತಾತ್ಮಕ ಹಾಗೂ ಆರ್ಥಿಕ ಸುಧಾರಣೆಯ ಕನಸು ಬಿತ್ತಿ ಅಧಿಕಾರಕ್ಕೆ ಬಂದ ಎರ್ಡೋಗನ್ ಈಗ, ದೇಶವನ್ನು ಧಾರ್ಮಿಕ ತೀವ್ರಗಾಮಿತ್ವದ ಕಡೆಗೆ ಕೊಂಡೊಯ್ಯುವ ಮೂಲಕ ಟರ್ಕಿಯನ್ನು ನಾಶ ಮಾಡಲು ಹೊರಟಿದ್ದಾರೆ. ಮುಸ್ತಫಾ ಕೆಮಲ್ ಅಟಾಟುರ್ಕ್ ಸ್ಥಾಪಿಸಿದ ಆಧುನಿಕ ಟರ್ಕಿಯ ಚಿತ್ರಣವನ್ನೇ ಎರ್ಡೋಗನ್ ಬದಲಾಯಿಸುತ್ತಿದ್ದಾರೆ. “ಶೂನ್ಯ ಸಮಸ್ಯೆಯ ದೇಶ’ವಾಗಿದ್ದ ಟರ್ಕಿಯನ್ನು ಕಗ್ಗತ್ತಲ ಕಡೆಗೆ ಕೊಂಡೊಯ್ಯುತ್ತಿದ್ದಾರೆ.
ಇಸ್ಲಾಮಿಕ್ ಜಗತ್ತನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಎರ್ಡೋಗನ್ ಭಯೋತ್ಪಾದನೆ ಮತ್ತು ಧಾರ್ಮಿಕ ತೀವ್ರಗಾಮಿತ್ವದ ಅಸ್ತ್ರಗಳನ್ನು ಬಳಸುತ್ತಿದ್ದಾರೆ. ಇದಕ್ಕಾಗಿ ಅವರು ಧಾರ್ಮಿಕ ನಿರ್ದೇಶನಾಲಯ “ದಿಯಾನೆತ್’ ಅನ್ನು ಮರು ಸಂಘಟಿಸಿದ್ದಾರೆ. ಕಟ್ಟರ್ ಇಸ್ಲಾಂ ಅಪ್ಪಿಕೊಳ್ಳುವ ದೇಶಗಳೊಂದಿಗೆ ಸಂಬಂಧವನ್ನು ವೃದ್ಧಿಸಿಕೊಂಡರೆ ತಮ್ಮ ಅಜೆಂಡಾ ಸಾಧಿಸಲು ಸಾಧ್ಯ ಎನ್ನುವುದು ಎರ್ಡೋಗನ್‌ಗೆ ಗೊತ್ತು.
ಈ ಸಂಚಿನ ಭಾಗವೆಂಬಂತೆ, ಎರ್ಡೋಗನ್ ಇಸ್ಲಾಮಿಕ್ ದೇಶಗಳ ನಡುವೆಯೇ ಬಿರುಕು ಮೂಡಿಸಲು ಯತ್ನಿಸುತ್ತಿದ್ದಾರೆ. ಸೌದಿ ಅರೇಬಿಯಾ ನೇತೃತ್ವದ ಇಸ್ಲಾಮಿಕ್ ದೇಶಗಳ ಒಕ್ಕೂಟ (ಒಐಸಿ)ದ ಸಂಬಂಧಕ್ಕೆ ಹುಳಿ ಹಿಂಡುವ ಕೆಲಸವನ್ನು ಎರ್ಡೋಗನ್ ಮಾಡಿದ್ದಾರೆ. ಪಾಕಿಸ್ಥಾನ, ಮಲೇಷ್ಯಾ ಸಹಿತ ಕೆಲವು ದೇಶಗಳನ್ನು ಸೌದಿ ವಿರುದ್ಧ ಎತ್ತಿಕಟ್ಟಿ, ತನ್ನ ಬಣಕ್ಕೆ ಸೇರಿಸಿ ಕೊಂಡಿದ್ದಾರೆ.
ಇದರ ಫಲವೆಂಬಂತೆ, ಮುಸ್ಲಿಂ ಜಗತ್ತಿನ ಪ್ರತ್ಯೇಕ ಒಕ್ಕೂಟ ರಚನೆಗಾಗಿ ಕಳೆದ ವರ್ಷ ಕೌಲಾಲಂಪುರದಲ್ಲಿ ಮಲೇಷ್ಯಾ ಶೃಂಗವೊಂದನ್ನು ಆಯೋಜಿಸಿತ್ತು. ಇಸ್ಲಾಮಿಕ್ ರಾಷ್ಟ್ರಗಳ ಒಕ್ಕೂಟಕ್ಕೆ ಪರ್ಯಾಯವಾಗಿ ಹೊಸದೊಂದು ಒಕ್ಕೂಟ ರಚಿಸಿ, ಅದರ ನೇತೃತ್ವವನ್ನು ತಾನೇ ವಹಿಸಬೇಕು ಎನ್ನುವುದು ಎಡೋìಗನ್ ಪ್ಲ್ರಾನ್.
ಈಗಾಗಲೇ ಪಾಕಿಸ್ಥಾನ, ಮಲೇಷ್ಯಾವು ಟರ್ಕಿಯ ಬಲೆಗೆ ಬಿದ್ದಾಗಿದೆ. ಕಳೆದ ವರ್ಷವಷ್ಟೇ ಟರ್ಕಿಯು ಇರಾನ್, ಮಲೇಷ್ಯಾ ಸೇರಿದಂತೆ ಹಲವು ರಾಷ್ಟ್ರಗಳನ್ನು ಸಂಪರ್ಕಿಸಿ, ಇಸ್ಲಾಮಿಕ್ ಕರೆನ್ಸಿ ಮತ್ತು ಇಸ್ಲಾಮಿಕ್ ಟೆಲಿವಿಷನ್ ಸ್ಟೇಷನ್ ಸ್ಥಾಪಿಸುವ ಕುರಿತು ಚರ್ಚೆಯನ್ನೂ ನಡೆಸಿದೆ.
ಯಾವಾಗ ಟರ್ಕಿಯು ಇತಿಹಾಸ ಪ್ರಸಿದ್ಧ ‘ಹಗಿಯಾ ಸೋಫಿಯಾ’ ಮ್ಯೂಸಿಯಂ ಅನ್ನು ಮಸೀದಿಯಾಗಿ ಪರಿವರ್ತಿಸಿತೋ, ಐರೋಪ್ಯ ಒಕ್ಕೂಟದೊಂದಿಗೆ ಆ ದೇಶ ಕೈಜೋಡಿಸಲಿದೆ ಎಂಬ ಭರವಸೆಯೆಲ್ಲ ನುಚ್ಚು ನೂರಾಯಿತು.
ಇನ್ನು, ಟರ್ಕಿಗೆ ಮುಸ್ಲಿಂ ಜಗತ್ತನ್ನು ಆಳುವ ಮಹತ್ವಾಕಾಂಕ್ಷೆ ಯಾದರೆ, ಇತ್ತ ಪಾಕಿಸ್ಥಾನಕ್ಕೆ ಕಾಶ್ಮೀರದ ಕನಸು. ಪಾಕಿಸ್ಥಾನದ ದೌರ್ಬಲ್ಯವನ್ನು ಅರಿತಿರುವ ಟರ್ಕಿ, ಇಮ್ರಾನ್ ಖಾನ್‌ರ ಬೆನ್ನಿಗೆ ನಿಲ್ಲುವ ಮೂಲಕ ತನ್ನ ಅಜೆಂಡಾವನ್ನು ಪೂರ್ಣಗೊಳಿಸುತ್ತಿದೆ. ಟರ್ಕಿಯ ಭಾರತ ವಿರೋಧಿ ನಿಲುವುಗಳೇ ಇದಕ್ಕೆ ಸಾಕ್ಷಿ.
ಇದೇ ಆಗಸ್ಟ್ 5ರಿಂದ ಅಂದರೆ ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದ ವರ್ಷಾಚರಣೆಯ ದಿನದಿಂದ ಟರ್ಕಿ ಮಾಧ್ಯಮಗಳು ಜಮ್ಮು ಮತ್ತು ಕಾಶ್ಮೀರವನ್ನು “ಭಾರತ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಜಮ್ಮು ಮತ್ತು ಕಾಶ್ಮೀರ’ ಎಂಬ ಹೊಸ ಪದ ಪ್ರಯೋಗದಿಂದ ಸಂಬೋಧಿಸುತ್ತಿವೆ.
ಈ ಪದಪ್ರಯೋಗವನ್ನು ಮೊದಲು ಬಳಸಿದ್ದೇ ಪಾಕಿಸ್ಥಾನ. ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿಗೆ ಸಂಬಂಧಿಸಿ ಪ್ರತಿಕ್ರಿಯಿಸಲು ಬಹುತೇಕ ಇಸ್ಲಾಮಿಕ್ ರಾಷ್ಟ್ರಗಳು ಹಿಂದೇಟು ಹಾಕಿದ್ದವು. ಆದರೆ, ಟರ್ಕಿ ಮಾತ್ರ ಮುಕ್ತವಾಗಿ ಪಾಕಿಸ್ಥಾನದ ಬೆಂಬಲಕ್ಕೆ ನಿಂತು ಭಾರತದ ನಿರ್ಧಾರವನ್ನು ಖಂಡಿಸಿದೆ. ಟರ್ಕಿಯ ವಿವಿಗಳಲ್ಲಿ ಭಾರತ ವಿರೋಧಿ, ಹಿಂದುತ್ವ ವಿರೋಧಿ, ಕಾಶ್ಮೀರ ವಿಶೇಷ ಸ್ಥಾನಮಾನ ರದ್ದತಿ ಕುರಿತ ವಿಚಾರಗಳ ಬಗ್ಗೆಯೇ ಸೆಮಿನಾರ್‌ಗಳನ್ನು ಆಯೋಜಿಸಲಾಗುತ್ತಿದೆ. ಪಾಕಿಸ್ಥಾನದಿಂದ ಉಪನ್ಯಾಸಕರನ್ನು ಕರೆಸಿಕೊಂಡು ಟರ್ಕಿ ವಿವಿಗಳಲ್ಲಿ ಉಪನ್ಯಾಸ ಕೊಡಿಸಲಾಗುತ್ತಿದೆ.
ಅತ್ತ ಸೌದಿ ಅರೇಬಿಯಾವು ಇಸ್ರೇಲ್‌ನಂಥ ರಾಷ್ಟ್ರದೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಾ ಮಧ್ಯಪ್ರಾಚ್ಯ ಮತ್ತು ಅರಬ್ ಜಗತ್ತಿನಲ್ಲಿ ಶಾಂತಿ ಸ್ಥಾಪಿಸಲು ಯತ್ನಿಸುತ್ತಿದ್ದರೆ, ಸೌದಿಯನ್ನು ಮಟ್ಟಹಾಕಲು ಟರ್ಕಿ ಶತಾಯಗತಾಯ ಯತ್ನಿಸುತ್ತಿದೆ. ಸೌದಿಯನ್ನು ಅಷ್ಟು ಸುಲಭವಾಗಿ ಬಗ್ಗುಬಡಿಯಲು ಸಾಧ್ಯವಿಲ್ಲ ಎಂಬುದು ಟರ್ಕಿಗೂ ಗೊತ್ತು.
ಇದೇ ಕಾರಣಕ್ಕಾಗಿ ಟರ್ಕಿಯು ಮುಸ್ಲಿಂ ಜನಸಂಖ್ಯೆ ಅಧಿಕವಾಗಿರುವ ದಕ್ಷಿಣ ಏಷ್ಯಾ ದೇಶಗಳತ್ತ ಕಣ್ಣು ಹಾಯಿಸಿದೆ. ತನ್ನ ಇಸ್ಲಾಮಿಕ್ ಕ್ಯಾಲಿಫೇಟ್‌ನ ನಕ್ಷೆಯಲ್ಲಿ ಟರ್ಕಿಯು ಭಾರತ ಸೇರಿದಂತೆ ದಕ್ಷಿಣ ಏಷ್ಯಾದ ದೇಶಗಳನ್ನೂ ಸೇರಿಸಿಕೊಂಡಿದೆ. ಇಲ್ಲಿ ಹಿಂಸಾಚಾರ, ತೀವ್ರಗಾಮಿತ್ವಕ್ಕೆ ಉತ್ತೇಜನ ನೀಡುವ ಮೂಲಕ ಈ ದೇಶಗಳ ಮೇಲೂ ಪ್ರಾಬಲ್ಯ ಸಾಧಿಸುವುದು ಟರ್ಕಿಯ ಯೋಜನೆಯಾಗಿದೆ.
ತೀವ್ರಗಾಮಿ ಇಸ್ಲಾಮಿಕ್ ಸಿದ್ಧಾಂತದ ಮೂಲಕ ತನ್ನ ಬೇಳೆ ಬೇಯಿಸಿಕೊಳ್ಳುತ್ತಿರುವ ಟರ್ಕಿ, ವಾಸ್ತವದಲ್ಲಿ ಇಸ್ಲಾಂಗೆ ಅತಿದೊಡ್ಡ ಹಾನಿಯನ್ನು ಉಂಟುಮಾಡುತ್ತಿದೆ. ಎರ್ಡೋಗನ್‌ರ ಬೂಟಾಟಿಕೆಯು ಇಸ್ಲಾಮಿಕ್ ಜಗತ್ತಿಗೆ ಮುಂದೊಂದು ದಿನ ವಿಷಕಾರಿಯಾಗಿ ಪರಿಣಮಿಸಲೂಬಹುದು. ಇಸ್ಲಾಮಿಕ್ ರಾಷ್ಟ್ರಗಳು ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಅಪಾಯ ಕಟ್ಟಿಟ್ಟ ಬುತ್ತಿ.
– ಹಲೀಮತ್ ಸಅದಿಯಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.