ಪ್ರೀತಿಯ ಕಾರಣಕ್ಕಾಗಿ ನಡೆಯುವ ಹಿಂಸೆಯಲ್ಲಿ ನಮ್ಮ ಹೊಣೆಗೇಡಿತನವೂ ಇದೆ
Team Udayavani, Jul 8, 2019, 5:00 AM IST
ಒಂದೂವರೆ ವರ್ಷದ ಅವಧಿಯಲ್ಲಿ ಪ್ರೀತಿಯನ್ನು ನಿರಾಕರಿಸಿದ ನೆಪದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ ಮೂವರು ಯುವತಿಯರ ಕೊಲೆಗಳು ನಡೆದಿವೆ (ಸುಳ್ಯ – 2018 ಫೆಬ್ರವರಿ 20, ಮೂಡಬಿದ್ರಿ 2018 ಸಪ್ಟೆಂಬರ್ 28, ಅತ್ತಾವರ, ಮಂಗಳೂರು 2019 ಜೂನ್ 7). ಪ್ರೀತಿ ನಿರಾಕರಣೆ ಕಾರಣಕ್ಕಾಗಿಯೇ ಕಳೆದ ಜೂನ್ 28ರಂದು ದೇರಳಕಟ್ಟೆಯಲ್ಲಿ ಯುವಕನೊಬ್ಬನಿಂದ ಯದ್ವಾತದ್ವಾ ಚೂರಿ ಇರಿತಕ್ಕೊಳಗಾಗಿರುವ ಯುವತಿ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಏಕಮುಖ ಪ್ರೀತಿಯ ದೆಸೆಯಿಂದ, ಆರಂಭದಲ್ಲಿ ಪ್ರೀತಿಸಿದ್ದರೂ ಬಳಿಕದ ನಿರಾಕರಣೆ ಮತ್ತಿತರ ಕಾರಣಗಳಿಗಾಗಿ ಇಂತಹ ಕೊಲೆಗಳು ನಡೆದಿರುವುದು ದುರ್ದೈವ. ಕೊಲೆಗಳು ಮಾತ್ರವಲ್ಲದೆ ಪ್ರೀತಿಯ ನೆಪದಲ್ಲಿ ಅತ್ಯಾಚಾರ, ಗ್ಯಾಂಗ್‌ರೇಪ್ ಮತ್ತಿತರ ಪ್ರಕರಣಗಳು ಅಲ್ಲಲ್ಲಿ ನಡೆಯುತ್ತಿರುವುದೂ ತುಂಬಾ ಖೇದಕರ. ಇಂತಹ ಬರ್ಬರ ಮತ್ತು ಕೀಳು ಕೃತ್ಯಗಳಿಂದಾಗಿ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ.
ಹಿಂದಿನ ಕಾಲದಲ್ಲಿ ಮನೆ ತುಂಬಾ ಮಕ್ಕಳಿದ್ದು, ಮಕ್ಕಳು ತುಂಬು ಕುಟುಂಬದಲ್ಲಿ ಅಣ್ಣ-ತಮ್ಮಂದಿರು, ಅಕ್ಕ ತಂಗಿಯರೊಡಗೂಡಿ ಬಾಳುತ್ತಿದ್ದರು. ತರುಣಾವಸ್ಥೆಗೆ ಬಂದ ಗಂಡು – ಹೆಣ್ಣಿನ ನಡುವೆ ಪ್ರೇಮಾಂಕುರವಾಗುವ ಪ್ರಕರಣಗಳು ಅಲ್ಲಲ್ಲಿ ಇರುತ್ತಿದ್ದವಾದರೂ ಕುಟುಂಬದಿಂದ ವಿರೋಧ ಬಂದಾಗ ಮನೆ ಬಿಟ್ಟು ಓಡಿ ಹೋಗುವ, ಪ್ರೇಮದಲ್ಲಿರುವ ಜೋಡಿ ಹೆತ್ತವರ ಸಮ್ಮತಿಗೆ ವಿರೋಧವಾಗಿ ಮದುವೆಯಾಗಿ ಜೀವನ ಸಾಗಿಸುವಂತಹ ಪ್ರಕರಣಗಳು ಇಂದಿನಷ್ಟಿರಲಿಲ್ಲ. ಯುವತಿಯರ ಕೊಲೆಯಂತಹ ಘೋರ ಕ್ರಿಮಿನಲ್ ಪ್ರಕರಣಗಳು ಇಲ್ಲವೇ ಇಲ್ಲ ಎನ್ನುವಂತಿದ್ದವು.
ಆದರೆ ಮಿತ ಕುಟುಂಬ ವ್ಯವಸ್ಥೆಯ ಇಂದಿನ ಕಾಲದಲ್ಲೇನಾಗಿದೆ? ಹೆಚ್ಚಿನ ದಂಪತಿಗಳಿಗೆ ಒಂದು ಅಥವಾ ಇಬ್ಬರು ಮಕ್ಕಳು. ಇವರಲ್ಲಿ ಗಂಡು, ಹೆಣ್ಣು ಅಥವಾ ಎರಡೂ ಇರಬಹುದು. ಈಗಿನ ಕಾಲದಲ್ಲಿ ಗಂಡು-ಹೆಣ್ಣು ಎಂಬ ಭೇದವಿಲ್ಲದೆ ಮಕ್ಕಳನ್ನು ಮಮತೆಯಿಂದ ಪಾಲಿಸಲಾಗುತ್ತದೆ. ಪಾಲಕರ ಮಮತೆ ಸ್ವಾಭಾವಿಕವಾಗಿ ಹೆಣ್ಣು ಮಕ್ಕಳಿಗೇ ಸ್ವಲ್ಪ ಜಾಸ್ತಿ ಸಲ್ಲುತ್ತದೆ ಎಂದರೂ ತಪ್ಪಲ್ಲ. ನಮ್ಮ ದೇಶದ ಸಂವಿಧಾನವೂ ಗಂಡು-ಹೆಣ್ಣು ಎನ್ನುವ ಭೇದವಿಲ್ಲದೆ ಎಲ್ಲರಿಗೂ ಸಮಾನ ಹಕ್ಕುಗಳನ್ನು ದಯಪಾಲಿಸಿದೆ. ಸರಕಾರಗಳೂ ಹೆಣ್ಣು ಮಕ್ಕಳ, ಸ್ತ್ರೀಯರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿವೆ. ಶಿಕ್ಷಣ, ಉದ್ಯೋಗದಂತಹ ಹೆಚ್ಚಿನ ಕ್ಷೇತ್ರಗಳಲ್ಲಿಯೂ ಇಂದು ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದನ್ನು ಕಾಣಬಹುದು.
ಕುಟುಂಬದಲ್ಲಿನ ಈಗಿನ ಒಂದಿಬ್ಬರು ಮಕ್ಕಳು ಹೆತ್ತವರಿಂದ ತಮ್ಮ ಬೇಕು – ಬೇಡಗಳನ್ನು ಹೇಗಾದರೂ ಪಡೆದುಕೊಳ್ಳಲು ಶಕ್ತರಾಗುತ್ತಾರೆ. ಇದೇ ಅಭ್ಯಾಸವನ್ನು ಅವರು ಕುಟುಂಬದ ಹೊರಗಡೆಯೂ ಅಪೇಕ್ಷಿಸುವುದು ಸಹಜ. ಮಕ್ಕಳು ಬೆಳೆದು ತರುಣಾವಸ್ಥೆಗೆ ಬಂದಾಗ ವಿರುದ್ಧ ಲಿಂಗದವರಲ್ಲಿ ಆಕರ್ಷಿತರಾಗುವುದು ಪ್ರಕೃತಿ ನಿಯಮ. ಅಕ್ಕ-ತಂಗಿ ಅಥವಾ ಅಣ್ಣ-ತಮ್ಮ ಇಲ್ಲದ ವಾತಾವರಣದಲ್ಲಿ ಬೆಳೆದ ಮಕ್ಕಳು ಈ ರೀತಿಯ ಪ್ರೀತಿಗಾಗಿ ಹಂಬಲಿಸುತ್ತಿರುವುದನ್ನು ಹೆಚ್ಚಾಗಿಯೇ ಕಾಣಬಹುದು. ಮನೆಯೊಳಗಡೆ ತನ್ನಿಚ್ಛೆಯಂತೆ ಎಲ್ಲವನ್ನೂ ದಕ್ಕಿಸಿಕೊಂಡಿರುವ ಅವರು ಹೊರಗಡೆಯೂ ಅದೇ ರೀತಿಯ ಅಪೇಕ್ಷೆಯಲ್ಲಿರುವಾಗ, ಯುವಕನೊಬ್ಬ ತನಗೆ ಆಕರ್ಷಿತಳಾದ ಯುವತಿಯನ್ನು ಪ್ರೀತಿಯ ಬಲೆಯಲ್ಲಿ ಕೆಡಹುತ್ತಾನೆೆ. ಅಂತಹ ಯುವತಿ ಆತನ ಪ್ರೀತಿಯನ್ನು ಆರಂಭದಲ್ಲೇ ನಿರಾಕರಿಸಿದರೆ ಹೆಚ್ಚಿನ ಅಪಾಯವಿಲ್ಲ.
ವಯೋಸಹಜ ಕಾಮನೆಗಳಿಂದಾಗಿ ಯುವಕನ ಪ್ರೀತಿಯ ಅಪೇಕ್ಷೆಗೆ ಯುವತಿ ಸ್ಪಂದಿಸಿ ಒಬ್ಬರನ್ನೊಬ್ಬರು ಪ್ರೀತಿಸಲು ತೊಡಗಿದರೆನ್ನಿ. ಕ್ರಮೇಣ ನಿಜಗುಣಗಳು ತಿಳಿದು ಬಂದಂತೆ ಅವರಲ್ಲೊಬ್ಬರು, ಇಂತಹ ಪ್ರೀತಿಯಲ್ಲಿ ಆಸಕ್ತಿ ಕಳೆದುಕೊಳ್ಳಬಹುದು. ಬರಬರುತ್ತಾ ಅಂತಹ ಜೋಡಿ ಹಕ್ಕಿಗಳ ಪೈಕಿ ಒಬ್ಬರಿಗೆ ಬೇರ್ಪಡುವಿಕೆಯ ಅಪೇಕ್ಷೆ ಸಹಜವಾಗಿ ಬರಬಹುದು. ಅದು ಸ್ವಾಭಾವಿಕ ಕೂಡಾ. ಒಂದುವೇಳೆ, ಯುವಕ ತಾನಾಗಿ ಬೇರ್ಪಡಲು ಅಪೇಕ್ಷೆಪಟ್ಟರೆ ಅಷ್ಟೊಂದು ರಾದ್ಧಾಂತವಾಗದು. ಹೆಚ್ಚೆಂದರೆ ಅಪರೂಪಕ್ಕೆಂಬಂತೆ ಯುವತಿ ಯುವಕನ ಮನೆ ಮುಂದೆ ಮುಷ್ಕರ ಹೂಡಿಯಾಳು ಅಥವಾ ಪ್ರಕರಣ ಪೋಲಿಸ್ ಸ್ಟೇಷನ್ ಮೆಟ್ಟಲೇರಬಹುದು. ಆದರೆ ಯುವತಿ ಬೇರ್ಪಡಲು ತವಕಿಸಿದರೆ ಅವಳು ಘೋರ ಪರಿಣಾಮಗಳಿಗೆ ಒಳಗಾಗಬೇಕಾಗಬಹುದು. ಅವಳ ಮೇಲೆ ಆ್ಯಸಿಡ್ ಬಿದ್ದ ಪ್ರಕರಣಗಳು ಹಿಂದೆ ನಡೆದಿವೆ.ಅವಳ ಜೀವಕ್ಕೆ ಅಪಾಯ ಬರಬಹುದು ಅಥವಾ ಜೀವ ನಾಶವೇ ಆಗಬಹುದು. ಗಂಡು-ಹೆಣ್ಣಿಗೆ ಸಮಾನ ಹಕ್ಕುಗಳು ನೀಡಲ್ಪಟ್ಟ ನಮ್ಮ ದೇಶದಲ್ಲಿ ಯುವತಿಯರ ಮೇಲೆ ಈ ರೀತಿಯ ಅನ್ಯಾಯ ನಡೆಯುವುದು ಸರಿಯೇ? ಯುವಕ ಅಪೇಕ್ಷೆಪಟ್ಟಾಗ ಯುವತಿಗೆ ಬೇಡವೆನಿಸಿದರೂ ಅವನನ್ನೇ ಪ್ರೀತಿಸಬೇಕೆನ್ನುವುದು, ಅವನನ್ನೇ ಮದುವೆಯಾಗಬೇಕೆನ್ನುವುದು ಯಾವ ನ್ಯಾಯ? ಯುವತಿ ಇಂತಹ ಒತ್ತಡಕ್ಕೊಳಪಟ್ಟು ಜೀವನಪೂರ್ತಿ ಒಲ್ಲದ ಸಂಬಂಧದಲ್ಲಿರಬೇಕೇನು? ವಿವಿಧ ಕಟ್ಟಲೆಗಳನ್ವಯ ಮದುವೆಯಾದವರೂ ವಿಚ್ಛೇದನಕ್ಕೊಳಪಡುವಾಗ ಯಾವುದೇ ಕಟ್ಟಲೆಗಳಿಲ್ಲದ ಪ್ರೀತಿಯ ಬಂಧನವನ್ನು ತೊರೆಯುವುದು ತಪ್ಪೇನು? ಯುವತಿ ಪ್ರೀತಿಯ ಕೋರಿಕೆಯನ್ನು ನಿರಾಕರಣೆ ಮಾಡಿದಳೆಂಬ ಕಾರಣಕ್ಕೆ ಆಕೆಯ ಮಾನಕ್ಕೆ , ಜೀವಕ್ಕೆ ಹಾನಿ ಎಸಗುವುದು, ಜೀವನ ಪರ್ಯಂತ ಅವಳು ನರಳುವಂತೆ ಮಾಡುವುದು ಅಥವಾ ಆಕೆಯ ಜೀವ ತೆಗೆಯುವುದು ಘೋರ ತಪ್ಪಲ್ಲವೇ? ಅಂತಹ ಯುವತಿಯನ್ನು ಹೊತ್ತು, ಹೆತ್ತ ತಾಯಿ, ಸಾಕಿ ಸಲಹಿದ ತಂದೆ, ಕುಟುಂಬದವರು ಮತ್ತಿತರರ ನಷ್ಟಕ್ಕೆ ಬೆಲೆ ಕಟ್ಟಲಾದೀತೇ? ಇಂದಿನ ಸುಶಿಕ್ಷಿತ – ಸುಧಾರಿತ ಸಮಾಜ ಮತ್ತು ಆಡಳಿತ ವ್ಯವಸ್ಥೆ ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕಿದೆ.
ಹಿಂದೆಯೂ ಯುವಕ ಯುವತಿಯರೊಳಗೆ ಪ್ರೀತಿ – ಪ್ರೇಮದ ವ್ಯವಹಾರ ನಡೆದಿಲ್ಲ ಎಂದಲ್ಲ. ಯುವತಿಯ ಮೇಲೆ ಯುವಕನಿಗೆ ಪ್ರೇಮಾಂಕುರವಾಗುವುದು, ಸಮಾಜದಲ್ಲಿ ಜನಮೆಚ್ಚುಗೆಯ ಕಾರ್ಯಗಳಲ್ಲಿ ತೊಡಗಿದ ಯುವಕನ ಮೇಲೆ ಒಂದೇಕೆ, ಹತ್ತಾರು ಯುವತಿಯರ ಕಣ್ಣು ಬೀಳುವುದು ಇದ್ದೇ ಇತ್ತು. ಆಗೆಲ್ಲಾ ಸಮಾಜ ಇಂದಿನ ಪರಿ ಮುಂದುವರಿದಿರಲಿಲ್ಲ. ಮೊಬೈಲ್, ವಾಟ್ಸಪ್, ಸಾಮಾಜಿಕ ಜಾಲತಾಣಗಳು ಮತ್ತಿತರ ಸಂಪರ್ಕ ಸಾಧನಗಳೂ ಇರಲಿಲ್ಲ. ಹೆಚ್ಚೆಂದರೆ ಮುಖಾಮುಖೀ ಅಥವಾ ಪತ್ರದ ಮೂಲಕ ವ್ಯವಹಾರ. ಹೆಚ್ಚಿನ ಪ್ರಕರಣಗಳಲ್ಲಿ ಇಬ್ಬರೊಳಗಿನ ವರ್ಷಗಟ್ಟಲೆಯ ಪ್ರೇಮದ ಗುಟ್ಟು ಮದುವೆಯಲ್ಲಿ ಪರ್ಯಾವಸನವಾಗುವ ಹೊತ್ತಿಗೆ ಮಾತ್ರ ಹೊರಜಗತ್ತಿಗೆ ತಿಳಿಯುತ್ತಿತ್ತು. ಇಂದಿನ ಪರಿಯ ಕ್ರೂರ ಮತ್ತು ಘೋರ ಪ್ರಕರಣಗಳು ಅಪರೂಪದಲ್ಲಿ ಅಪರೂಪವಾಗಿದ್ದವು.
ಇಂದಿನ ಕಾಲದಲ್ಲಿ ಪ್ರೀತಿ ನಿರಾಕರಣೆಗಾಗಿ ಯುವತಿಯರ ಕೊಲೆ ಅಥವಾ ಕೊಲೆ ಯತ್ನದಂತಹ ಕ್ರಿಮಿನಲ್ ಪ್ರಕರಣಗಳು ನಡೆಯುತ್ತಿರುವುದಕ್ಕೆ ಕೇವಲ ಯುವಕ ಯುವತಿಯರನ್ನು ಹೊಣೆ ಮಾಡಿದರೆ ಸಾಕೇ? ಇಂದಿನ ಮಾತಾಪಿತರು, ಶಿಕ್ಷಣ, ಸಮಾಜ, ಧಾರ್ಮಿಕ, ಮಾಧ್ಯಮ, ಸಾಮಾಜಿಕ ಜಾಲತಾಣ ಮತ್ತಿತರ ಸ್ತರ (ವ್ಯವಸ್ಥೆ)ಗಳ ಹೊಣೆಗೇಡಿತನವೂ ಇದರಲ್ಲಿ ಅಡಕವಾಗಿದೆ. ಮಕ್ಕಳು ಕೇಳಿದ್ದನ್ನು ಕೊಡುವುದು ಮಾತ್ರ ಕರ್ತವ್ಯವಲ್ಲ ಎಂಬುದನ್ನು ಹೆತ್ತವರು ಮೊದಲಾಗಿ ತಿಳಿದುಕೊಳ್ಳಬೇಕು. ಮಕ್ಕಳಲ್ಲಿ ಎಳವೆಯಿಂದಲೇ ಸಚ್ಚಾರಿತ್ರ್ಯ ಮತ್ತು ಜೀವನ ಮೌಲ್ಯಗಳನ್ನು ತುಂಬುವಂತಹ ಜವಾಬ್ದಾರಿಯನ್ನೂ ಹೆತ್ತವರು ಪಾಲಿಸಬೇಕು. ಮಕ್ಕಳ ಬೆಳವಣಿಗೆಯ ಪ್ರತಿ ಹಂತದಲ್ಲಿಯೂ ಅವರಿಗೆ ಬೇಕಾದ ಮಾರ್ಗದರ್ಶನ ನೀಡಬೇಕು. ಮಕ್ಕಳು ಬೆಳೆದು ಯುವವಾಸ್ಥೆಗೆ ತಲಪಿದಾಗ ಅವರ ಗೆಳೆಯ ಗೆಳತಿಯಂತಿದ್ದು ಅವರ ಚಲನವಲನಗಳಲ್ಲಿ ಕಣ್ಣಿಟ್ಟಿದ್ದಿರಬೇಕು. ಉತ್ತಮ ಜೀವನ ಸಾಗಿಸಲು ಅವರನ್ನು ಪ್ರೇರೇಪಿಸಬೇಕಾದುದು ಬಹಳ ಅಗತ್ಯ. ಕ್ರಿಮಿನಲ್ ಕಾರ್ಯಗಳಲ್ಲಿ ತೊಡಗದಂತೆ, ಹಾಗೆ ತೊಡಗಿದರೆ ಅದರಿಂದಾಗಿ ವ್ಯಕ್ತಿ, ಕುಟುಂಬ ಮತ್ತು ಸಮಾಜದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಮಕ್ಕಳಿಗೆ ಅದರಲ್ಲಿಯೂ ವಿಶೇಷವಾಗಿ ಗಂಡು ಮಕ್ಕಳಿಗೆ ಹೆತ್ತವರು ಮಮತೆಯಿಂದಲೇ ವಿವರಿಸಬೇಕು. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿಯೂ ಈ ಬಗೆಗಿನ ವಿಚಾರಗಳಿರಬೇಕು. ಶಾಲೆ ಕಾಲೇಜುಗಳಲ್ಲಿ ಇವುಗಳ ಬಗ್ಗೆ ತಿಳಿ ಹೇಳಬೇಕು. ಸಾಮಾಜಿಕ , ಧಾರ್ಮಿಕ ಸಂಘ-ಸಂಸ್ಥೆಗಳು, ಮುಖಂಡರು ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಮಾಧ್ಯಮಗಳು ಅದರಲ್ಲಿಯೂ ದೃಶ್ಯಮಾಧ್ಯಮಗಳು ಇಂತಹ ಅನಿಷ್ಟಗಳ ನಿವಾರಣೆಗಾಗಿ ಶ್ರಮಿಸಬೇಕಲ್ಲದೆ ತಮ್ಮ ಲಾಭಕ್ಕಾಗಿ ಅವುಗಳನ್ನು ವೈಭವೀಕೃತಗೊಳಿಸಬಾರದು. ಜಾಲತಾಣಗಳಿಂದ ಬೆಂಕಿಗೆ ತುಪ್ಪ ಸುರಿಯುವ ಕೆಲಸವಾಗಬಾರದು. ಸರಕಾರಗಳೂ ಕ್ರಿಮಿನಲ್ ಕೃತ್ಯಗಳನ್ನು ಮಟ್ಟ ಹಾಕಲು ಕಠಿನ ಕ್ರಮಗಳನ್ನು ಕೈಗೊಳ್ಳಬೇಕಲ್ಲದೆ, ನ್ಯಾಯದಾನ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು. ಆಗ ಏಕಮುಖ ಪ್ರೀತಿ ಅಥವಾ ಪ್ರೀತಿ ನಿರಾಕರಣೆಗಳಂತಹ ಕಾರಣಗಳಿಂದಾಗುವ ಯುವತಿಯರ ಮಾನಹರಣ, ಅಂಗಾಂಗಗಳಿಗೆ ಹಾನಿ ಅಥವಾ ಕೊಲೆಯಂತಹ ಅನಿಷ್ಟ ಕಾರ್ಯಗಳಿಗೆ ಕಡಿವಾಣ ಬೀಳಬಹುದೇನೋ.
ಎಚ್. ಆರ್. ಆಳ್ವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ
Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ
Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್ ತರಾಟೆ
England; ಬೆನ್ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್ ಟ್ರೋಫಿಗೆ ಅಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.